ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ.
“ದೂರದ ಹಸಿರು” ಸರಣಿಯಲ್ಲಿ ನೆದರ್ಲ್ಯಾಂಡ್ಸ್‌ ಪ್ರವಾಸದ ಕುರಿತು ಮತ್ತಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ

ಹಿಂದಿನ ಸಂಚಿಕೆಯಲ್ಲಿ ಕಂದ ಪುಷ್ಪದ ಬಗ್ಗೆ ಬರೆದಿದ್ದೆ. ಒಂದು ಹೂವಿನ ಕಥೆ ಹೇಗೆ ರಾಷ್ಟ್ರದ ಆರ್ಥಿಕ ದಿಕ್ಕನ್ನು ಬದಲಿಸಿತು ಎನ್ನುವುದು ಕುತೂಹಲಕಾರಿ ಸಂಗತಿ. ಇದೇ ರೀತಿಯಾದ ಇನ್ನೊಂದು ಕುತೂಹಲಕಾರ ಸಂಗತಿ ಡಚ್ ಜನರ ಸೈಕಲ್ ಪ್ರೀತಿ! ಅಲ್ಲಿಯ ಪ್ರಧಾನಿ ಸಹ ಸೈಕಲ್ ಸವಾರಿಯ ಮುಖಾಂತರ ಸಂಸತ್ ಭವನಕ್ಕೆ ತೆರಳುವುದು ಇದಕ್ಕೊಂದು ನಿದರ್ಶನ. ಪ್ರಪಂಚದಾದ್ಯಂತ ಪಾದಚಾರಿಗಳಿಗಿಂತ ಹೆಚ್ಚು ಪ್ರಾಶಸ್ತ್ಯ ಸೈಕಲ್ ಸವಾರರಿಗಿರುವುದು ನೆದರ್ಲ್ಯಾಂಡ್ಸ್‌ನಲ್ಲಿ ಮಾತ್ರ! ಅಂದರೆ ಪ್ರಪಂಚದ ಉಳಿದೆಲ್ಲ ಕಡೆ ಪಾದಚಾರಿಗಳು ಹೋಗುವಾಗ ಸೈಕಲ್ ಸಹಿತ ಬೇರೆ ವಾಹಗಳು ನಿಲ್ಲುತ್ತವೆ. ಆದರೆ ಇಲ್ಲಿ ಹಾಗಲ್ಲ. ನಡೆದಾಡುವವರು ಸೈಕಲ್ ಹೋಗುವವರಿಗೆ ಮೊದಲು ದಾರಿ ಬಿಡಬೇಕು. ಪ್ರಪಂಚದ ಅತ್ಯಂತ ಹೆಚ್ಚು ಸೈಕಲ್ ಸವಾರಿ ಮಾಡುವ ಜನರಿರುವುದು ನೆದರ್ಲ್ಯಾಂಡ್ಸ್‌ನಲ್ಲಿ!

ಈ ಸೈಕಲ್ ಹುಚ್ಚಿಗೆ ಒಂದು ಬಲವಾದ ಆಸರೆ ಎಂದರೆ ಹಾಲೆಂಡಿನ ಸಮತಟ್ಟಾದ ಭೂ ವಲಯ. ದೇಶದ ರಾಜಧಾನಿಯಾದ ಆಮ್ಸ್ಟರ್ಡ್ಯಾಮ್‌ ಸೇರಿದಂತೆ ಹಲವಾರು ನಗರಗಳು ಸಮುದ್ರ ಮಟ್ಟದಿಂದ ಕೆಳಗಿವೆ. ಸಮತಟ್ಟಾದ ಭೂ ವಲಯವಿರುವ ಕಾರಣದಿಂದ ಸೈಕಲ್ ಸವಾರಿ ಸುಲಭ ಮತ್ತು ಆರಾಮದಾಯಕ. ಕಾರಿನ ಮೇಲಿನ ಹೆಚ್ಚು ತೆರಿಗೆ, ಪಾರ್ಕಿಂಗ್ ಸಮಸ್ಯೆಗಳು ಜನರನ್ನು ಸೈಕಲ್ ನತ್ತ ಹೆಚ್ಚು ವಾಲಿಸಿವೆ. ಆಮ್ಸ್ಟರ್ಡ್ಯಾಮ್‌ ನಗರದ ಹೃದಯ ಭಾಗದಲ್ಲಿ ಪಾರ್ಕಿಂಗ್ ಬೆಲೆ ಗಗನಕ್ಕೇರಿದೆ. ಪ್ರಪಂಚದ ಬೆರೆಡೆಯಲ್ಲ ಪ್ರತಿ ಘಂಟೆಯ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವಿದ್ದರೆ, ಇಲ್ಲಿ ನಿಮಿಷದ ಲೆಕ್ಕದಲ್ಲಿ ಶುಲ್ಕ. ಎರಡು ತಾಸು ಕಾರು ನಿಲ್ಲಿಸಿದರೆ ಬರೋಬ್ಬರಿ 20 – 30 ಯುರೋ (ಸುಮಾರು 2500 ರೂಪಾಯಿಗಳು) ತೆತ್ತಬೇಕು. ಇಷ್ಟು ದುಡ್ಡು ಕೊಡುವುದಕ್ಕೆ ತಯಾರಿದ್ದರೂ ಪಾರ್ಕಿಂಗ್ ಸಿಗುವುದು ಕಷ್ಟ ಸಾಧ್ಯ! ಇದರ ತದ್ವಿರುದ್ಧವಾಗಿ ದೇಶದ ಉದ್ದಗಲಕ್ಕೂ ಸೈಕಲ್ ಸವಾರರಿಗೆ ಪ್ರತ್ಯೇಕ ಸೈಕಲ್ ಪಥಗಳಿವೆ. ಹಾಗಾಗಿ ಸೈಕಲ್ ಓಡಿಸುವುದು ಸುರಕ್ಷಿತ, ಪರಿಸರ ಸ್ನೇಹಿ ಮತ್ತು ಅವಶ್ಯಕತೆ.

ನಾವು-ನೀವು ಕೇಳಿರದ ವಿಚಿತ್ರ “ವಿಶ್ವ ದಿನ”ಗಳು ಹಲವಾರಿವೆ. ಅದರಲ್ಲಿ ಸೆಪ್ಟೆಂಬರ್ ೧೭ ನ್ನು “World Cleanup Day” ಎಂದು ಆಚರಿಸಲಾಗುತ್ತದೆ. ಇದರ ಅಂಗವಾಗಿ ಆಮ್ಸ್ಟರ್ಡ್ಯಾಮ್‌ ನಗರಸಭೆಯ ವತಿಯಿಂದ ಊರಿನ ಎಲ್ಲ ನೀರಿನ ಕನಾಲ್‌ಗಳನ್ನೂ ಶುಚಿಗೊಳಿಸುವಾಗ, ಬಿಸಾಡಲಾದ ಸಾವಿರಾರು ಸೈಕಲ್‌ಗಳು ಸಿಗುತ್ತವೆ. ಕ್ರೇನ್ ಮುಖಾಂತರ ಇವುಗಳನ್ನು ಎತ್ತುವುದು ಒಂದು ಸಹಜ ಪ್ರಕ್ರಿಯೆ.

(ಕೃಪೆ: ಅಂತರ್ಜಾಲ)

ವಿಂಡ್ ಮಿಲ್ (ಗಾಳಿಯ ಸಹಾಯದಿಂದ ಚಲಿಸುವ ಗಿರಣಿ)

ಯೂರೋಪಿನ ವಸಾಹತುಗಳ ಕಾಲದಲ್ಲಿ ಪ್ರಪಂಚವನ್ನು ಕೊಳ್ಳೆ ಹೊಡೆಯಲು ಇದ್ದಿದ್ದ ಏಕೈಕ ಮಾರ್ಗವೆಂದರೆ – ಜಲ ಮಾರ್ಗ. ಅದರಲ್ಲಿಯೂ “ಭಾರತದ ಮೇಲೆ ಹಿಡಿತ ಸಾಧಿಸಿದವರು ಪ್ರಪಂಚವನ್ನು ಆಳಿದ ಹಾಗೆ” ಎನ್ನುವ ಪ್ರತೀತಿ ಇದ್ದುದು ಸುಳ್ಳಲ್ಲ. ಭಾರತದ ಮೇಲೆ ಮೊದಲು ಇವರೆಲ್ಲ ಬಂದಿದ್ದು “ಸಾಂಬಾರು ಪದಾರ್ಥ”ಗಳ ಹೆಸರು ಹೇಳಿಕೊಂಡು. ಹೀಗೆ ಭಾರದಿಂದ ತಂದ ಸಾಂಬಾರು ಪದಾರ್ಥಗಳನ್ನು ಇಲ್ಲಿ ಏನು ಮಾಡಲಾಗುತ್ತಿತ್ತು ಎನ್ನುವುದು ವಿಶೇಷ ಮತ್ತು ಕುತೂಹಲಕಾರಿ.

ಹಿಡಿಯಾಗಿ ತರುತ್ತಿದ್ದ ಸಾಂಬಾರು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಲು ಗಿರಣಿ ಸಾಧನಗಳು ಬೇಕು. ವಿದ್ಯುತ್ ಚಾಲಿತ ಮೋಟಾರ್ ಕಂಡು ಹಿಡಿಯುವ ಮೊದಲು ಇದ್ದದ್ದು ಎರಡೇ ಬದಲಿ ಮಾರ್ಗಗಳು: ನೀರಿನಿಂದ ಚಾಲಿತ ಗಿರಣಿ ಮತ್ತು ಗಾಳಿಯಿಂದ ಚಾಲಿತ ಗಿರಣಿ. ಆಗಲೇ ಹೇಳಿದಂತೆ ಹಾಲೆಂಡ್ ದೇಶವು ಸಮತಟ್ಟಾಗಿದ್ದು, ಬಹುತೇಕ ಸಮುದ್ರ ಮಟ್ಟದಲ್ಲಿ ಇರುವುದರಿಂದ ನೀರಿನ ಹರಿವನ್ನು ಹೆಚ್ಚಾಗಿ ಉಪಯೋಗಿಸಲು ಸಾಧ್ಯವಿಲ್ಲ. ಆದರೆ ವಾಯುವ್ಯ ದಿಕ್ಕಿನಲ್ಲಿ ಸಾಗರವಿರುವುದರಿಂದ ಗಾಳಿ ಯಥೇಚ್ಛವಾಗಿ ಬಿಸುತ್ತದೆ. ಹಾಗಾಗಿ ಸ್ವಾಭಾವಿಕವಾಗಿ ಗಾಳಿಯಿಂದ ಚಲಿಸುವ ಗಿರಣಿ ಯಂತ್ರಗಳನ್ನು ಸ್ಥಾಪಿಸಲಾಯಿತು. ದೇಶದ ಉದ್ದಗಲಕ್ಕೂ ಇದ್ದ, ಗಾಳಿಯ ಸಹಾಯದಿಂದ ಚಲಿಸುವ ಗಿರಣಿ ಯಂತ್ರಗಳು ಈಗ ಉಳಿದಿರುವುದು ಬೆರಳೆಣಿಕೆಯಷ್ಟು ಮಾತ್ರ. ಈಗ ಉಳಿದಿರುವ ಇವೆಲ್ಲವೂ ಪ್ರವಾಸಿ ಆಕರ್ಷಣೆಯ ಕೇಂದ್ರ ಬಿಂದುಗಳು.

ದೇಶದ ರಾಜಧಾನಿಯಾದ ಆಮ್ಸ್ಟರ್ಡ್ಯಾಮ್‌ ಸೇರಿದಂತೆ ಹಲವಾರು ನಗರಗಳು ಸಮುದ್ರ ಮಟ್ಟದಿಂದ ಕೆಳಗಿವೆ. ಸಮತಟ್ಟಾದ ಭೂ ವಲಯವಿರುವ ಕಾರಣದಿಂದ ಸೈಕಲ್ ಸವಾರಿ ಸುಲಭ ಮತ್ತು ಆರಾಮದಾಯಕ. ಕಾರಿನ ಮೇಲಿನ ಹೆಚ್ಚು ತೆರಿಗೆ, ಪಾರ್ಕಿಂಗ್ ಸಮಸ್ಯೆಗಳು ಜನರನ್ನು ಸೈಕಲ್ ನತ್ತ ಹೆಚ್ಚು ವಾಲಿಸಿವೆ. ಆಮ್ಸ್ಟರ್ಡ್ಯಾಮ್‌ ನಗರದ ಹೃದಯ ಭಾಗದಲ್ಲಿ ಪಾರ್ಕಿಂಗ್ ಬೆಲೆ ಗಗನಕ್ಕೇರಿದೆ.

ಆಮ್ಸ್ಟರ್ಡ್ಯಾಮ್‌ ನಗರದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಇರುವ ಒಂದು ಪುಟ್ಟ ಹಳ್ಳಿ – Zanse Schans. ಈ ಹಳ್ಳಿಯಲ್ಲಿ ಹದಿನೆಂಟನೇ ಶತಮಾನದ ಗಾಳಿಯ ಗಿರಣಿಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ. ಒಳಗೆ ಹೋಗಲು ಪ್ರವೇಶ ಶುಲ್ಕವಿದೆ. ಒಮ್ಮೆ ಒಳ ಹೊಕ್ಕರೆ ಮೂರಂತಸ್ತಿನ ಗಾಳಿಯ ಗಿರಣಿ ನಮ್ಮನ್ನು ನೂರಾರು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ಇಲ್ಲಿ ಗಾಳಿಯಿಂದ ತಿರುಗುವ ರೆಕ್ಕೆಗಳು ಹೇಗೆ ಶಕ್ತಿಯನ್ನು ರೂಪಾಂತರಿಸಿ ರುಬ್ಬುವ ಕಲ್ಲನ್ನು ತಿರುಗಿಸುತ್ತಿದ್ದವು ಎನ್ನುವುದು ನೋಡಲು ನಿಜವಾಗಲೂ ಆಶ್ಚರ್ಯಕರ ಸಂಗತಿ. ಬೀಸುವ ಗಾಳಿಗೆ ದೈತ್ಯಾಕಾರದ ರುಬ್ಬುವ ಕಲ್ಲನ್ನು ತಿರುಗಿಸುವ ಶಕ್ತಿ ಇದೆ ಎಂದರೆ ನಂಬಲು ಸ್ವಲ್ಪ ಕಷ್ಟ. ಆದರೆ ಇಲ್ಲಿ ಇದನ್ನು ಪ್ರತ್ಯಕ್ಷ ನೋಡಿ ತಿಳಿಯಬಹುದು! ನಾವು ಭೇಟಿ ನೀಡಿದ ಗಾಳಿಯ ಗಿರಣಿಯಲ್ಲಿ ಭಾರತದಿಂದ ಆಮದಿಸಲ್ಪಟ್ಟ “ಚಕ್ಕೆ”ಯನ್ನು ಪುಡಿ ಮಾಡಲಾಗುತ್ತಿತ್ತು. ಮಸಾಲೆ ಪದಾರ್ಥವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿದರೆ ಮನೆಯಲ್ಲ ಘಮ್ ಎನ್ನುತ್ತದೆ. ಇನ್ನು ದೈತ್ಯಾಕಾರದ ರುಬ್ಬುವ ಕಲ್ಲಿನಲ್ಲಿ ಪುಡಿ ಮಾಡಿದರೆ? ಆ ತೀವ್ರವಾದ ಚಕ್ಕೆಯ ವಾಸನೆ ಇಂದಿಗೂ ನೆನಪಿದೆ. ಹೊರ ಬಂದ ಮೇಲೆ, ಪುಡಿ ಮಾಡಿದ ಪದಾರ್ಥಗಳನ್ನು ಮಾರಲಾಗುತ್ತದೆ. ಭಾರತದಿಂದ ಬಂದಿದೆ ಎನ್ನುವ ಕಾರಣಕ್ಕೆ, ಒಂದು ಸಣ್ಣ ಚಕ್ಕೆ ಪುಡಿಯ ಪೊಟ್ಟಣವನ್ನು ಖರೀದಿಸಿದೆ. ಅದೇ ರೀತಿಯಲ್ಲಿ ಆಫ್ರಿಕಾದ ಕೋಕಾ ಪುಡಿಯನ್ನು ಸಹ ಮಾರಲಾಗುತ್ತಿತ್ತು. ಒಟ್ಟಿನಲ್ಲಿ ಪ್ರಸ್ತುತ ಬಡ ದೇಶಗಳು “ಏಕೆ ಬಡವಾಗಿವೆ?” ಎಂದು ತಿಳಿಯಬೇಕಾದರೆ ಯೂರೋಪಿನ ವಸಾಹತು ದೇಶಗಳಿಗೆ ಭೇಟಿ ನೀಡಬೆಕು. ಹಲವಾರು ದೇಶಗಳನ್ನು ಸರ್ವನಾಶ ಮಾಡಿ, ಈಗ ಸಹಜತೆಗೆ ಹಿಂದಿರುಗಲಾಗದ ಪರಿಸ್ಥಿತಿಯ ಕೂಪದೊಳಗೆ ನೂಕಿಬಿಟ್ಟಿದ್ದಾರೆ.

(ಗಾಳಿಯ ಗಿರಣಿಯೊಳಗಿನ ರುಬ್ಬುಗಲ್ಲು)

ಈ ಗಾಳಿಯ ಗಿರಣಿಗಳ ಫೋಟೋ ತೆಗೆಯುವುದು ಬಹಳ ಸಂತೋಷ ಕೊಡುವ ಕಾಯಕ. ಗ್ರೀಸ್‌ನ ಕೆಲವು ದ್ವೀಪಗಳನ್ನು ಹೊರತುಪಡಿಸಿದರೆ ಇಂದಿಗೂ ಕಾರ್ಯ ನಿರ್ವವಿಸುತ್ತಿರುವ, ಬಣ್ಣಗಳನ್ನು ಲೇಪಿಸಿಕೊಂಡು ಸಿಂಗಾರಗೊಂಡಿರುವ ಗಿರಣಿಗಳಿರುವುದು ಇಲ್ಲಿ ಮಾತ್ರ. ಹಾಗಾಗಿ ಈ ಅವಕಾಶವನ್ನು ತೊರೆಯಲು ಸಾಧ್ಯವೇ? ಇತಿಹಾಸದ ನೆನಪುಗಳ ಜೊತೆಗೆ ಕಹಿ ಸತ್ಯವನ್ನು ಹುದುಗಿಸಿಕೊಂಡಿರುವ “ಗಾಳಿಯ ಗಿರಣಿ”ಗಳಿಗೆ ಭೇಟಿ ನೀಡುವುದು ನೆದರ್ಲ್ಯಾಂಡ್ಸ್ ಪ್ರವಾಸದ ಪ್ರಮುಖ ಆಕರ್ಷಣೆಗಳಲ್ಲಿ ಒಂದು!

ನೀರಿನ ಕಾಲುವೆಗಳು

ನೆದರ್ಲ್ಯಾಂಡ್ಸ್ ಎಂದಾಕ್ಷಣ ನೆನಪಾಗುವುದು ಮೂರು ಸಂಗತಿಗಳು – ಟುಲಿಪ್, ಸೈಕಲ್ ಮತ್ತು ನೀರಿನ ಕಾಲುವೆಗಳು. ಮೊದಲೆರಡರ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದೀನಿ. ಈಗ ಆ ನೀರಿನ ಕಾಲುವೆಗಳ ವೈಶಿಷ್ಟ್ಯವನ್ನು ನೋಡುವ. ನಾವು ಭಾರತದಲ್ಲಿದ್ದುಕೊಂಡು ಅಥವಾ ಭಾರತದ ದೃಷ್ಟಿಕೋನದಿಂದ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಸಂಗತಿ. “ನೆದರ್” ಎಂದರೆ ತಳಮಟ್ಟದ ಮತ್ತು “ಲ್ಯಾಂಡ್” ಎಂದರೆ ಭೂಮಿ. ಹೆಸರೇ ಸೂಚಿಸುವಂತೆ ಈ ದೇಶದ ಬಹುಪಾಲು ಭೂಭಾಗ ಸಮುದ್ರಮಟ್ಟಕ್ಕಿಂತಲೂ ಕೆಳಗಿದೆ. ಇದರಿಂದ ಆಗುವ ಅನಾನುಕೂಲಗಳು ಹಲವು. ಅದರಲ್ಲಿ ಪ್ರಮುಖವಾದುದು ಕೃಷಿ ಯೋಗ್ಯವಲ್ಲದ ಭೂಮಿ! ಈ ಭೂಮಿಯನ್ನು ಕೃಷಿ ಯೋಗ್ಯವಾಗಿ ಪರಿವರ್ತಿಸುವುದು ಹೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಿದರೆ ಒಂದೇ ಏಟಿನಲ್ಲಿ ಎರಡು ಹಕ್ಕಿ ಹೊಡೆದದ್ದಕ್ಕೆ ಒಂದು ಉದಾಹರಣೆಯಾಗಬಹುದು. ಈ ಸಮಸ್ಯೆಗೆ ಪರಿಹಾರವೆಂದರೆ: ನೆಲದಲ್ಲಿ ಇರುವ ಹೆಚ್ಚಿನ ನೀರಿನಂಶವನ್ನು ತೆಗೆಯಬೇಕು. ಹೆಚ್ಚಿನ ನೀರನ್ನು ತೆಗೆಯಲು ಡಚ್ ಜನರು ಕಂಡು ಹಿಡಿದುಕೊಂಡಿದ್ದು “ಕಾಲುವೆ”ಗಳನ್ನು ನಿರ್ಮಿಸುವ ಮೂಲಕ. ದೇಶದ ಪ್ರಮುಖ, ದೊಡ್ಡ ನಗರಗಳನ್ನಷ್ಟೇ ಅಲ್ಲದೆ ಹಳ್ಳಿ-ಹಳ್ಳಿಗಳನ್ನು ಭೇಟಿ ನೀಡಿದರೂ, ನಿಮಗೆ ಎಲ್ಲೆಡೆ ನೀರಿನ ಕಾಲುವೆಗಳು ಕಾಣಸಿಗುತ್ತವೆ. ಇದರಿಂದ ಅವರಿಗೆ ಆದ ಹೆಚ್ಚುವರಿ ಉಪಯೋಗವೆಂದರೆ: ಸರಾಗವಾದ, ಹೆಚ್ಚು ಖರ್ಚಿಲ್ಲದ ನೀರಿನ ಸಾರಿಗೆ ವ್ಯವಸ್ಥೆ! ಒಮ್ಮೆ ಆಮ್ಸ್ಟರ್ಡ್ಯಾಮ್‌ ನಗರದ ಹೊರ ವಲಯದಲ್ಲಿ ಕಾರು ಓಡಿಸುವಾಗ ರಸ್ತೆ ಮಧ್ಯದಲ್ಲಿ ರೈಲ್ವೆ ಗೇಟ್ ಕೆಳಗಿಳಿಯಿತು. ಎಲ್ಲ ಕಡೆಯಂತೆ ಇಲ್ಲಿಯೂ ಸಹ ವಾಹನಗಳು ಒಂದರ ಹಿಂದೆ ಒಂದರಂತೆ ನಿಂತವು. ಕೆಲವು ಕ್ಷಣಗಳ ನಂತರ ಹಾಕಿದ್ದ ಗೇಟಿನ ಒಳಗಿನ ರಸ್ತೆ ಎರಡು ಭಾಗಗಳಾಗಿ ಮೇಲೆದ್ದವು. ಏನಾಗುತ್ತಿದೆ ಎಂದು ತಿಳಿಯುವ ಹೊತ್ತಿಗೆ, ರಸ್ತೆಗಳ ಮಧ್ಯ ಒಂದು ದೊಡ್ಡ ದೋಣಿ ನಮ್ಮನ್ನು ದಾಟಿ ಹೋಯಿತು. ಆಗಲೇ ತಿಳಿದದ್ದು ಅದು ರೈಲ್ವೆ ಗೇಟಲ್ಲ, ಕಾಲುವೆಯಲ್ಲಿ ದೋಣಿಗಾಗಿ ನಿರ್ಮಿಸಿದ್ದ ಗೇಟು ಎಂದು! ಇದೇ ರೀತಿಯಾದ, ಆದರೆ ಇನ್ನೂ ದೊಡ್ಡ ಗಾತ್ರದ ನಿರ್ಮಾಣವನ್ನು ನಮ್ಮ ರಾಮೇಶ್ವರಂನಲ್ಲಿ ರೈಲ್ವೆ ಹಳಿಗೆ ನಿರ್ಮಿಸಲಾಗಿದೆ. ದೊಡ್ಡ ಹಡಗುಗಳು ಬಂದಾಗ, ರೈಲ್ವೆ ಸೇತುವೆ ಎರಡು ಭಾಗವಾಗಿ ಮೇಲಕ್ಕೆ ಹೋಗುತ್ತದೆ. ಪ್ರಪಂಚ ಸುತ್ತುವುದರಿಂದ ನಿರೀಕ್ಷೆಗೂ ಮಿಗಿಲಾದ ಅನುಭವಗಳು ಆಗುವುದು ಖಚಿತ!

ಈ ದೇಶದ ಒಂದು ಪಟ್ಟಣದಲ್ಲಿ ಮಾತ್ರ ಕಾಲುವೆಗಳನ್ನು ಬಿಟ್ಟರೆ ಬೇರೆ ಸಂಪರ್ಕ ಮಾರ್ಗವಿಲ್ಲ. ಇದನ್ನು “Venice of Netherlands” ಎಂದು ಸಾಂಕೇತಿಕವಾಗಿ ಕರೆಯಲಾಗುತ್ತದೆ. ಈ ಪಟ್ಟಣದ ಹೆಸರು ಗಿತೋರ್ನ್(Giethoorn). ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ. ವಾಹನಗಳ ಕರ್ಕಶ ಧ್ವನಿ, ಹೊಗೆ ಇಲ್ಲದೆ ಇಲ್ಲಿ ನಡೆದಾಡುವುದು ಆಹ್ಲಾದಕರ ಅನುಭವ. ಬೇಕಿದ್ದಲ್ಲಿ ನಾವು ದೋಣಿಯನ್ನು ಬಾಡಿಗೆಗೆ ಪಡೆದು ಚಲಾಯಿಸಬಹುದು. ಇಲ್ಲದಿದ್ದರೆ ಪ್ರವಾಸಿಗರಿಗೆಂದು ಒಂದು ಘಂಟೆಯ ಅಂಬಿಗರ ದೋಣಿಯ ಪ್ರಯಾಣದ ಸೌಲಭ್ಯ ಕೂಡ ಇದೆ.

ನಾವಾಗಿಯೇ ದೋಣಿ ಬಾಡಿಗೆ ಪಡೆದು ಓಡಿಸುವುದು ಇಲ್ಲಿ ನಿಜವಾಗಿಯೂ ತಲೆಬಿಸಿಯ ಸಂಗತಿ. ಏಕೆಂದರೆ ರಸ್ತೆಯ ಮೇಲೆ ವಾಹನಗಳಿಗೆ ನಿಯಮಗಳಿದ್ದಂತೆ, ಇಲ್ಲಿ ಕಾಲುವೆಗಳಲ್ಲಿ ದೋಣಿಗಳಿಗೆ ನಿಯಮಗಳಿವೆ. ಯಾವ ದಿಕ್ಕಿನಿಂದ ಬರುವವರಿಗೆ ಮೊದಲ ಪ್ರಾಶಸ್ತ್ಯ ಎನ್ನುವುದು ಅರ್ಥವಾಗದ ವಿಷಯ. ಪ್ರವಾಸದ ಸಮಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನಾವು ಅಂಬಿಗರ ದೋಣಿಯಲ್ಲಿ ಗಿತೋರ್ನ್ ಪಟ್ಟಣದ ಸುತ್ತ ಒಂದು ಸುತ್ತು ಹಾಕಿ ಬಂದೆವು. ನೋಡಲು ಬಹಳ ಸುಂದರವಾಗಿರುವ ಈ ಪಟ್ಟಣದ ಪ್ರವಾಸ ಫೋಟೋ ತೆಗೆಯುವ ಹವ್ಯಾಸ ಇರುವವರಿಗೆ ಒಳ್ಳೆಯ ಅವಕಾಶಗಳನ್ನು ಕೊಡುತ್ತದೆ.

ನೆದರ್ಲ್ಯಾಂಡ್ಸ್ ಒಂದು ಪುಟ್ಟ ದೇಶವಾದರೂ, ಪ್ರಪಂಚದಲ್ಲಿ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸಿದೆ. ಟುಲಿಪ್ ಹೂವಿನ ಆರ್ಥಿಕ ಸ್ಥಿತಿ-ಗತಿ ಎಲ್ಲರ ಹುಬ್ಬೇರಿಸಿದರೆ, ದೇಶದ ದೈನಂದಿನ ಸೈಕಲ್ ಸವಾರಿಯ ಅಭ್ಯಾಸ ಪ್ರಪಂಚಕ್ಕೆ ಮಾದರಿಯಾಗಿದೆ. ಪ್ರವಾಸಿಗರಿಗೆ ವಿಶೇಷ ಎನಿಸುವ ಗಾಳಿಯ ಗಿರಣಿಗಳು ನಮ್ಮನ್ನು ಶತಮಾನಗಳ ಕಾಲ ಹಿಂದೆ ಕರೆದೊಯ್ಯುತ್ತವೆ. ದೇಶದ ಉದ್ದಗಲಕ್ಕೂ ಇರುವ ನೀರಿನ ಕಾಲುವೆಗಳ ಪಕ್ಕದಲ್ಲಿ ನಡೆದಾಡುವ ಆಹ್ಲಾದಕರ ಅನುಭವ ಮತ್ತೆಲ್ಲೂ ಸಿಗದು!

ಮುಂದಿನ ಸಂಚಿಕೆಯಲ್ಲಿ ಮತ್ತೊಂದು ದೇಶದ ವಿಸ್ಮಯಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ.