”ಸೂಟ್ ಧರಿಸಿ ಬಂದ ಮಾಥೂರ್, ಬೀರ್ ಕುಡೀತಾ, ದೆಹಲಿಯಲ್ಲಿ ಅದರ ಸುತ್ತಮುತ್ತ ಇರುವ ಪ್ರಾಚೀನ ಕಟ್ಟಡಗಳ ಆರ್ಕಿಟೆಕ್ಚರ್ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿ, ವ್ಯಾಖ್ಯಾನವನ್ನೇ ಕೊಟ್ಟರು. ಮತ್ತೆ ಮತ್ತೆ ಬಿಸಿಬೇಳೆ ಅನ್ನ, ಸೌತೇಕಾಯಿ ಪಳಿದ್ಯ ಹಾಕಿಸಿಕೊಂಡು ಊಟ ಮಾಡಿದರು. ಸಿಹಿ ತಿನ್ನಬಾರದೆಂದು ಅವರ ಪತ್ನಿ ಆಕ್ಷೇಪಣೆ ಮಾಡಿದಾಗ, ಊಟಕ್ಕೆ ಕರೆದವರ ಮನೆಗೆ ಹೋಗಿ ಸ್ವೀಟ್ಸ್ ಎರಡು ಸರ್ತಿ ತಿನ್ನಬಹುದೆಂದು ರವಾ ಕೇಸರಿಯನ್ನು ಎರಡು ಬಾರಿ ಹಾಕಿಸಿಕೊಂಡರು”
ಹಿರಿಯ ಬರಹಗಾರ, ಬ್ಲಾಗರ್ ಇ.ಆರ್. ರಾಮಚಂದ್ರನ್ ಬರೆಯುವ ನೆನಪು ವ್ಯಕ್ತಿಚಿತ್ರಗಳು ಇಂದಿನಿಂದ ಆರಂಭ.

 

ನಾನು ಎಪ್ಪತರ ದಶಕದಲ್ಲಿ ಆಗ ತಾನೆ ಬೊಂಬಾಯಿಯಲ್ಲಿ ಮದುವೆ ಆಗಿ ಕೆಲಸ ಮಾಡುವ ಜಾಗ ದೆಹಲಿಗೆ ಬಂದಿದ್ದೆ. ಸ್ವಲ್ಪ ದಿವಸಗಳಾದ ಮೇಲೆ ಹೆಂಡತಿಗೆ ಮೈಲಿ ಹುಶಾರಿರಲ್ಲ. ಸುಡುವ ಜ್ವರ, ಚಳಿ ನಡುಕ ಬೇರೆ. ಹೊಸ ಜಾಗವಾದುದ್ದರಿಂದ ಇನ್ನೂ ಯಾರೂ ಪರಿಚಯವಾಗಿರಲಿಲ್ಲ. ಮನೆ ಎದುರುಗೇ ಬೋರ್ಡು ಕಾಣಿಸಿತು. ಡಾ. ಇಂದು ಜೈನ್ ( ಗೋಲ್ಡ್ ಮೆಡಲಿಸ್ಟ್ ). ಅಲ್ಲಿಗೆ ಓಡಿ ಮನೆಗೆ ಡಾಕ್ಟರನ್ನು ಕರೆದುಕೊಂಡು ಬಂದೆ. ಒಂದು ವಾರವಾದರೂ ಜ್ವರ ಕಡಿಮೆಯಾಗುವ ಲಕ್ಷಣ ಕಂಡು ಬರಲಿಲ್ಲ. ಮಲೇರಿಯ, ಟೈಫಾಯ್ಡ್, ಫ್ಲು ಎಲ್ಲಾದಕ್ಕೂ ಒಂದಾದ ಮೇಲೆ ಔಷಧ ಕೊಟ್ಟಿದ್ದಾಯಿತು. ಮನೆ ತುಂಬ ಗುಳಿಗೆ, ಸಿರಪ್ಪುಗಳ ಬಾಟ್ಲುಗಳು. ಜ್ವರ ಮಾತ್ರ ಹಾಗೇ ಇತ್ತು. ಆಫೀಸಿನಲ್ಲಿ ಯಾರೋ ಹೇಳಿದರು. ಡಾ. ಮಾಥೂರ್ ಹತ್ರ ಹೋಗಿ; ಅವರು ಒಳ್ಳೆ ಡಾಕ್ಟರ್ ಅಂತ. ಕೊಂಚ ದೂರದಲ್ಲಿದ್ದರೂ ಪರವಾಗಿಲ್ಲ ಅವರ್ನೇ ನೋಡೋಣ ಅಂತ ಹೋದೆವು. ಸುಮಾರು ಚಿಕ್ಕವರೇ, 35 /40 ವಯಸ್ಸಿರಬಹುದು. ಹಸನ್ಮುಖಿ. ನಾನ್-ಸ್ಟಾಪ್ ಸಿಗರೇಟ್ ಜೊತೆಗೆ ಯಾಲಕ್ಕಿ ತಿನ್ನುವ ಅಭ್ಯಾಸ. ಯಾಲಕ್ಕಿಗೋಸ್ಕರ ಸಿಗರೇಟೋ, ಸಿಗರೇಟಿಗೋಸ್ಕರ ಯಾಲಕ್ಕಿಯೋ ಗೊತ್ತಿಲ್ಲ. ನನ್ನವಳನ್ನು ಪರೀಕ್ಷಿಸಿ ‘ಓವರ್ ಮೆಡಿಕೇಷನ್; ಸ್ಟಾಪ್ ಆಲ್ ಮೆಡಿಕೇಷನ್; ನಾರ್ಮಲ್ ಡೈಎಟ್’ ಅಂದ್ರು. ಎರಡು ದಿವಸಕ್ಕೆ ಜ್ವರ ಬಿಟ್ಟು ನಾರ್ಮಲ್ ಗೆ ಬಂತು.

ನನಗೆ ಒಂದು ಸಲ ಲೋ ಫೀವರ್, ಸುಸ್ತು ಆಗಿ ಮನೆ ಹತ್ತಿರದ ಡಾಕ್ಟರ್ ಗುಪ್ತ ಅವರ ಹತ್ತಿರ ಹೋಗಿ, ಔಷಧಿ ಪ್ರಯೋಜನೆ ಆಗಲಿಲ್ಲ. ಮತ್ತೆ ಡಾ. ಮಾಥೂರ್ ಹತ್ರ ಹೋದೆ. ಅವರು ಕ್ಲಿನಿಕ್ ನಿಂದ ನನ್ನನ್ನು ಪೇಷೆಂಟುಗಳ ಮಧ್ಯೆ ಹೊರಗೆ ಕರೆದುಕೊಂಡು ಹೋಗಿ, ಸೂರ್ಯನನ್ನು ನೋಡಲು ಹೇಳಿದರು. ನನ್ನ ಕಣ್ಣನ್ನು ಪರೀಕ್ಷಿಸಿ ತಕ್ಷಣವೇ ಅವರು ಒಳಗೆ ಹೋಗುತ್ತಾ, ‘ಜಾಂಡಿಸ್. 15 ಡೇಸ್ ಬೆಡ್ ರೆಸ್ಟ್. ಪತಲಾ ದಾಲ್; ಡಬಲ್ ಕುಕ್ಡ್ ಚಾವಲ್. ನೆಕ್ಸ್ಟ್’.
ಆವಾಗಿನಿಂದ ಮಾಥೂರ್ ಅವರ ಹತ್ತಿರವೇ ಹೋಗ್ತಿದ್ವಿ. ಅವರಲ್ಲಿ ಆತ್ಮೀಯತೆ ಬೆಳೆಯುತ್ತಾ ಹೋಯಿತು.

ಒಂದು ಸಲ ನಾನು ಅವರ ಹತ್ತಿರ ಕೂತಿದ್ದಾಗ ಒಬ್ಬರ ಫೋನ್ ಕುಯ್ಗುಟ್ಟಿತು. ಆತ ಎಂಪಿ, ಈ ಕ್ಷಣ ಮನೆಗೆ ಬಂದು ನನ್ನ ನೋಡು, ನನಗೆ ಮೈ ಹುಶಾರಿಲ್ಲ ಎಂದ. ನನಗೆ ಪರಿಕ್ಷೆ ಮಾಡಿ ಮಾಥೂರ್ ಔಷಧ ಬರೆಯುವರಿದ್ದರು. ಬಹಳ ಪೇಷೆಂಟುಗಳು ಅವರ ಸರದಿಗಾಗಿ ಕಾಯುತ್ತಿದ್ದರು. ಮಾಥೂರ್ ಪುಡಾರಿಗೆ, ನೀನೇ ಇಲ್ಲಿಗೆ ಬಾ. ನಾನು ಎಲ್ಲಾರನ್ನೂ ಬಿಟ್ಟು ಅಷ್ಟು ದೂರ ಈಗ ಬರುವುದಕ್ಕೆ ಆಗಲ್ಲ. ಆತ ಮತ್ತೆ ಮತ್ತೆ ಅವರಿಗೆ ನೀವು ಬರಲೇಬೇಕು ಎಂದು ಹಟ ಹಿಡಿದ. ಮಾಥೂರ್ ಅವನಿಗೆ , ‘ನಿನ್ನ ಕಾರಿನಲ್ಲಿ ಹೊರಟು ಬಾ. ನೀನು ಇಲ್ಲಿಗೆ ಬಂದ ತಕ್ಷಣವೇ ನಿನ್ನನ್ನು ನೋಡುತ್ತೇನೆ. ದಾರಿಯಲ್ಲಿ ನಿನ್ನ ಪ್ರಾಣಕ್ಕೆ ಏನಾದರೂ ಅಪಾಯವಾದರೆ ಆದರೆ, ಅದಕ್ಕೆ ನಾನು ಹೊಣೆ!’ ಎಂದು ಹೇಳಿ ಫೋನ್ ಕೆಳಗಿಟ್ಟರು. ಅವರ ಬಗ್ಗೆ ನನಗಿದ್ದ ಗೌರವ ಹೆಚ್ಚಿತು. ಸಾಮಾನ್ಯ ಜನರನ್ನು ಉದಾಸೀನ ಮಾಡದೆ ದೊಡ್ಡವರೆಂದು ಮಣೆ ಹಾಕದೆ ತನ್ನ ಕೆಲಸವನ್ನು ನಿಷ್ಟೆಯಿಂದ ಮಾಡುವ ಡಾಕ್ಟರ್ ಅವರು.

ಮತ್ತೊಮ್ಮೆ ನಾನು ಗಂಟಲು ನೋವಿನಿಂದ ಹೋದಾಗ ಸಿಗರೇಟ್ ಸೇದುತ್ತಿದ್ದ ನನಗೆ, ಸ್ವಲ್ಪ ದಿವಸ ಸಿಗರೇಟು ನಿಲ್ಲಿಸು ಮತ್ತು ತಣ್ಣಗಿರುವದನ್ನು ಯಾವುದೂ ಸೇವಿಸಬೇಡ, ಎಂದರು. ನಾನು ಅವರಿಗೆ ತಮಾಶೆಯಿಂದ, ‘ನೀವು ಸಿಗರೇಟ್ ಸೇದುತ್ತೀರಲ್ಲಾ? ಪರವಾಗಿಲ್ವಾ?” ಎಂದೆ. ಅವರು ಥಟ್ಟನೆ, ‘ಯಾರಿಗೆ ಪ್ರಾಬ್ಲಂ ಇರೋದು, ನಿನಗಾ, ನನಗಾ’? ಎಂದು ನನ್ನ ಬಾಯಿಮುಚ್ಚಿಸಿದರು.

ಅವರು ರೋಗಿಗಳ ಜೊತೆ ತಮಾಶೆಯಾಗಿ ಮಾತನಾಡುತ್ತಾ, ಅವರನ್ನು ನಗಿಸಿ, ಔಷಧ ಕೊಟ್ಟು ಕಳಿಸುತಿದ್ದರು, ಜನಗಳ ಮನಸ್ಸನಲ್ಲಿ ಔಷಧವೇ ಬೇಡ, ಮಾಥೂರ್ ಹತ್ರ ಹೋಗಿ ಬಾ, ಕಾಯಿಲೆ ತಾನಾಗಿ ಹೋಗುತ್ತೆ’ ಅನ್ನುವ ಭರವಸೆ ಬೆಳೆದಿತ್ತು.
ಯಾವುದಾದರೂ ಪಾರ್ಟಿಯಲ್ಲಿ ಸಿಕ್ಕಿದಾಗ, ಅವರ ಸುತ್ತಲೂ ಒಂದು ಗುಂಪಿನ ಮದ್ಯೆ ಏನಾದರೂ ಸ್ವಾರಸ್ಯವಾಗಿ ಮಾತನಾಡುತ್ತಾ ಇರೋವ್ರು. ‘ಹಲೋ ಡಾಕ್! ಲಾಂಗ್ ಟೈಮ್ ನೋ ಸೀ..’ ಎಂದಾಗ, ‘ಗುಡ್! ಕೀಪ್ ಇಟ್ ದಟ್ ವೇ ಓನ್ಲಿ!’ ಅಂತ ಅಲ್ಲಿಂದಲೇ ಕೂಗೋವ್ರು!

ಒಂದು ಸಲ ಅವರ ಕ್ಲಿನಿಕ್ ಹತ್ರ ನಾವು ಹೋಗುತ್ತಿದ್ದಾಗ, ನಮಗೆ ಅವರನ್ನು ಮನೆಗೆ ಊಟಕ್ಕೆ ಕರೆಯಬೇಕೆನ್ನಿಸಿತು. ಪೇಷೆಂಟುಗಳೆಲ್ಲಾ ಹೋದಮೇಲೆ, ನಾವು ಒಳಗೆ ಹೋದೆವು. ಸಿಗರೇಟು ಹಚ್ಚಿದ್ದರು. ಎಂದಿನಂತೆ ‘ಈ ಸರ್ತಿ ಯಾರಿಗೆ ಮೈಲಿ ಹುಶಾರಿಲ್ಲ’ ಎಂದು ಕೇಳಿದರು. ನಾವು ಅಲ್ಲಿಗೆ ಹೋದ ಉದ್ದೇಶ ಹೇಳಿದಾಗ, ಅವರು ಜೋರಾಗಿ ನಕ್ಕು, ‘ಈ ಸಲ ಇಬ್ಬರಿಗೂ ಸರಿಯಿಲ್ಲ. ತಲೆ ಕೆಟ್ಟಿದೆ, ನನಗೆ ಅದನ್ನ ವಾಸಿ ಮಾಡಕ್ಕೆ ಬರಲ್ಲ’ ಅಂತ ನಗೆಯಾಡಿದರು. ಮನೆಗೆ ಹೆಂಡತಿಯೊಡನೆ ಬರಲು ಒಪ್ಪಿದರು. ಮಕ್ಕಳು ಬೇಡ. ಮಧ್ಯೆ ತಕರಾರು ಮಾಡ್ತಾರೆ, ನಾವಿಬ್ಬರೇ ಬರ್ತೀವಿ’ ಎಂದರು. ಮೆನುವಿನ ಬಗ್ಗೆ ವಿಚಾರಿಸಿದಾಗ, ನಾನು ಏನಿದ್ರೂ ತಿನ್ತೀನಿ’ ಅಂದ್ರು.

ಸೂಟ್ ಧರಿಸಿ ಬಂದ ಮಾಥೂರ್, ಬೀರ್ ಕುಡೀತಾ, ದೆಹಲಿಯಲ್ಲಿ ಅದರ ಸುತ್ತಮುತ್ತ ಇರುವ ಪ್ರಾಚೀನ ಕಟ್ಟಡಗಳ ಆರ್ಕಿಟೆಕ್ಚರ್ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿ, ವ್ಯಾಖ್ಯಾನವನ್ನೇ ಕೊಟ್ಟರು. ಮತ್ತೆ ಮತ್ತೆ ಬಿಸಿಬೇಳೆ ಅನ್ನ, ಸೌತೇಕಾಯಿ ಪಳಿದ್ಯ ಹಾಕಿಸಿಕೊಂಡು ಊಟ ಮಾಡಿದರು. ಸಿಹಿ ತಿನ್ನಬಾರದೆಂದು ಅವರ ಪತ್ನಿ ಆಕ್ಷೇಪಣೆ ಮಾಡಿದಾಗ, ಊಟಕ್ಕೆ ಕರೆದವರ ಮನೆಗೆ ಹೋಗಿ ಸ್ವೀಟ್ಸ್ ಎರಡು ಸರ್ತಿ ತಿನ್ನಬಹುದೆಂದು ರವಾ ಕೇಸರಿಯನ್ನು ಎರಡು ಬಾರಿ ಹಾಕಿಸಿಕೊಂಡರು. ಆವಾಗಿನಿಂದ ಮಾಥೂರ್ ನಮಗೆ ಫ್ಯಾಮಿಲಿ ಡಾಕ್ಟರ್ ಆದರು. ಮಿತ್ರರಿಂದ ಮನೆಯವರೊಬ್ಬರಾದಂತೆ ಇದ್ದರು.

ಒಮ್ಮೆ ನನ್ನ ಜೊತೆ ಕೆಲಸಮಾಡುವ ಅಸಿಸ್ಟೆಂಟ್ ಅವನ ಮಗನ ವಿಚಾರದ ಪ್ರಾಬ್ಲಂ ತೋಡಿಕೊಂಡ. ಡಾ. ಮಾಥೂರ್ ಅವರ ಸಲಹೆ ಕೇಳಿದರ ಒಳ್ಳೇದು ಅಂತ ತೋರಿತು. ಅವರು ನಮ್ಮನ್ನು ನೋಡುವುದಕ್ಕೆ ಒಪ್ಪಿ, ಅವನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರಲು ಹೇಳಿದರು.

ಮಾಥೂರ್ ಅವರ ಮನೆ ಅವರ ಕ್ಲಿನಿಕ್ ಹಿಂದೆಯೇ ಇತ್ತು. ನಾವು ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿ ಹೆಂಗಸರು ಒಟ್ಟಿಗೆ ಮಾತನಾಡುತ್ತಿರಲಿ, ನಾವು ಮೂರು ಜನ ಇಲ್ಲಿ ಮಾತನಾಡೋಣ ಎಂದು ಅವರನ್ನು ಸಾಗ ಹಾಕಿ, ‘ಏನು ವಿಷಯ’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದರು. ಅವನಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನಿಗೆ 5 ವರ್ಷ, ಬುದ್ದಿ ಬೆಳೆದಿಲ್ಲ, ಬೆಳೆಯುದು ಕಷ್ಟವೇ. ಚಿಕ್ಕವನು 3 ವರ್ಷ, ಸರಿಯಾಗಿದ್ದಾನೆ. ಇದರಿಂದ ಮನೆಯಲ್ಲಿ ಆಗಾಗ್ಗೆ ಅವನಿಗೆ ಅವನ ಹೆಂಡತಿಗೆ ಮಾತಿ ಬೆಳೆದು, ಮನೆಯ ಶಾಂತಿಗೆ ಧಕ್ಕೆ. ಏನು ಮಾಡಲಿ ಸಾರ್, ಎಂದ.

ಮಾಥೂರ್ ಗಂಭೀರವಾಗಿ ಎಲ್ಲವನ್ನೂ ಕೇಳಿ, ‘ಇದಕ್ಕೆ ಎರಡು ರೀತಿಯ ಪರಿಹಾರವಿದೆ. ನೀನು ಮತ್ತು ನಿನ್ನ ಹೆಂಡತಿ ಯೋಚಿಸಿ ಯಾವುದು ಬೇಕಾದರೂ ಉಪಯೋಗಿಸಿಕೊಳ್ಳಬಹುದು. ಮೊದಲನೇದು : ಒಂದು ಟ್ಯಾಕ್ಸಿಯಲ್ಲಿ ನಿನ್ನ ಮಗನ್ನ ಮಾತ್ರ ಕರೆದುಕೊಂಡು ಹೊಗಿ, ದೂರ, ಬಹು ದೂರಕ್ಕೆ ಹೋಗಿ, ಒಂದು ದಟ್ಟವಾದ ಕಾಡಿನ ಮಧ್ಯೆ ಅವನನ್ನು ಬಿಟ್ಟು ಸಿದಾ ವಾಪಸ್ಸು ಮನೆಗೆ ಬರುವುದು. ಬಹುಷಃ ಅವನೊಬ್ಬನೇ ಮನೆಗೆ ವಾಪಸ್ಸು ಬರಲಾರ. ಅವನು ಯಾರಿಗಾದರೂ ಸಿಕ್ಕಿದರೂ ಅವನು ಯಾರು, ಯಾರ ಮಗ ಎಂದು ಅವನಿಗೆ ಹೇಳಕ್ಕೆ ಆಗಲ್ಲ. ನೀನು ಸೇಫ್; ಮನೆಯಲ್ಲೂ ಶಾಂತಿ ಇರುತ್ತೆ. ಸ್ವಲ್ಪ ದಿವಸ ಮನೆಯಲ್ಲಿ ಮೌನವಾಗಿರುತ್ತೆ. ಆಮೇಲೆ ಎಲ್ಲವೂ ತಾನಾಗಿ ಸರಿಯಾಗಿರುತ್ತೆ. ಕೊನೆಗೆ ಅವನು ನಿಮ್ಮ ಜೊತೆಯಲ್ಲಿ ಮನೆಯಲ್ಲಿದ್ದಿದ್ದು ಮರ್ತೇ ಹೋಗುತ್ತೆ.

ಎರಡನೇ ಪರಿಹಾರ ; ಈಗಿರುವ ಹಾಗೇ ನಡೆಯಲಿ. ಮಧ್ಯೆ ಮಧ್ಯೆ ಏನಾದ್ರೂ ಪ್ರಾಬ್ಲಂ ಬರುತ್ತೆ. ಅದನ್ನು ಸಹಿಸಿಕೊಳ್ಳಿ. ಚಿಕ್ಕವನು ದೊಡ್ಡವನಾದ ಮೇಲೆ ಅಣ್ಣನ ಸ್ಥಿತಿ ಅವನಿಗೇ ಅರಿವಾಗುತ್ತೆ. ಕ್ರಮೇಣ ತಾನೇ ಅಣ್ಣನನ್ನು ನೋಡಿಕೋಬೇಕು ಎನ್ನುವ ಭಾವನೆ ಅವನಿಗೆ ಬರಬಹುದು. ಆವಾಗ ನಿಮ್ಮಿಬ್ಬ್ರ ಜವಾಬ್ದಾರಿನ ಅವನು ಹೊರಲು ಸಿದ್ಧನಾಗುತ್ತಾನೆ. ನೀವು ಅದಕ್ಕೆ ಕಾಯಬೇಕು. ಅವನಿಗೆ ಒಳ್ಳೆ ವಿದ್ಯೆ ಕೊಡಿಸಿ. ಕೆಟ್ಟದ್ದು, ಒಳ್ಳೆದರ ಬಗ್ಗೆ ವಿವೇಚನೆ ಕೊಡಿ. ಮುಂದೆ ವಿಧಿ ಹ್ಯಾಗೆ ಮಾಡಬೇಕೋ ಹಾಗೆ ಮಾಡಿಸುತ್ತೆ. ಒಳ್ಳೆಯದನ್ನೇ ನೆನೆಯಿರಿ’ ಎಂದ್ರು ಮಾಥೂರ್. ನನ್ನ ಸಹೋದ್ಯೋಗಿ ಕಣ್ಣಲ್ಲಿ ನೀರಿತ್ತು. ಏನು ಮಾಡಬೇಕೆಂದು ಬಹಳ ಚೆನ್ನಾಗಿ ವಿವರಿಸಿ ಹೇಳಿದ್ದರು ಮಾಥುರ್. ಅವನ ಮನಸ್ಸು ಹಗುರಾಗಿತ್ತು.


ನನ್ನ ಸಹೋದ್ಯೋಗಿ ಹೆಂಡತಿ, ಮಕ್ಕಳು ಹೋದ ಮೇಲೆ, ನಾನೂ ಹೊರಡುತ್ತಾ ಮಾಥೂರ್ ಅವರನ್ನು ಮನಸಾರೆ ಹೊಗಳಿ, ನೀವು ಎಷ್ಟು ಚೆನ್ನಾಗಿ ಅವನಿಗೆ ಬುದ್ಧಿ ಹೇಳಿದಿರಿ ಎಂದಾಗ, ನಾನು ಡಾಕ್ಟರ್, ಹಾಗೂ ನನಗಿಂತ ಅವನಿಗೆ ಈ ವಿಷಯದಲ್ಲಿ ಬೇರೆ ಯಾರು ಹೇಳಲಿಕ್ಕೆ ಸಾಧ್ಯ’ ಎಂದು ಹೇಳುತ್ತಾ ಇಬ್ಬರೂ ಮುಂದೆ ನಡೆದಾಗ, ಪಕ್ಕದ ರೂಮಿನಲ್ಲಿ, ಇಬ್ಬರು ಹುಡುಗರು ಆಡುತ್ತಿರುವುದನ್ನು ನೋಡಿದೆ. ಅದರಲ್ಲಿ ಒಬ್ಬ ಹುಡುಗನಿಗೆ ಬುದ್ಧಿ ಸರಿ ಇರಲಿಲ್ಲ ಎಂದು ತೋರಿತು. ನಾನು ಬೆಚ್ಚಗಾಗಿ, ಡಾ. ಮಾಥೂರ್ ಅವರನ್ನು ನೋಡಿದಾಗ, ಅವರು ತಲೆಯನ್ನು ಆಡಿಸಿದರು. ಅವರ ಕಣ್ಣಂಚಿನಲ್ಲಿ ಹನಿಯಿತ್ತು.