ಡಾನ್ ಬ್ರಾಡ್ಮನ್ ಎಂತಹ ಬ್ಯಾಟ್ಸ್ಮನ್ ಆಗಿದ್ದರೆಂದರೆ ಅವರನ್ನು ಔಟ್ ಮಾಡುವುದಕ್ಕೆ ದೇವರೇ, ಅಥವ ನಮ್ಮ ಭಾಷೆಯಲ್ಲಿ ಹೇಳಬೇಕೆಂದರೆ ಬ್ರಹ್ಮನೇ ಬರಬೇಕು ಅನ್ನುವ ಹಾಗೆ ಆಗಿತ್ತು. ಇದನ್ನು ಹೇಗಾದರೂ ಮುರಿಯಬೇಕು ಎಂದು ಇಂಗ್ಲೆಂಡ್ ತಂಡ ಒಂದು ತೀರ್ಮಾನಕ್ಕೆ ಬಂದು 1934ರಲ್ಲಿ ತಂಡದ ನಾಯಕ ಜಾರ್ಡಿನ್ ಒಂದು ಪ್ಲಾನ್ ಹಾಕಿದರು. ಅದನ್ನು ‘ಬಾಡಿ ಲೈನ್’ ಎಂದು ಕರೆದು ಅದನ್ನು ಮಾಡುವುದಕ್ಕೆ ಹೆರಾಲ್ಡ್ ಲಾರ್ವುಡ್ ಅನ್ನುವ ಬೋಲರ್ ಅನ್ನು ತಯಾರು ಮಾಡಿಟ್ಟರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಡಾನ್ ಬ್ರಾಡ್ಮನ್ ಕುರಿತ ಬರಹ ನಿಮ್ಮ ಓದಿಗೆ

ಡಾನ್ ಬ್ರಾಡ್ಮನ್ ವಿಶ್ವದಲ್ಲೇ ಪ್ರಸಿದ್ಧ ಕ್ರಿಕೆಟ್ ಆಟಗಾರರಾಗಿದ್ದರು. ನೂರು ವರ್ಷದ ಹಿಂದೆ ಶುರುವಾದ ಕ್ರಿಕೆಟ್ ಆಟದಲ್ಲಿ, ಕ್ರಿಕೆಟ್ ದೇಶಗಳಲ್ಲಿ/ ಸಂಸ್ಥೆಗಳಲ್ಲಿ, ಇಲ್ಲಿಯವರೆಗೆ ಯಾರು ಶ್ರೇಷ್ಟ ಆಟಗಾರ ಅನ್ನುವ ಪ್ರಶ್ನೆಗೆ ಒಂದೇ ಒಕ್ಕೊರಲಿನ ಉತ್ತರ. ವಿಶ್ವದಲ್ಲೇ ನಂಬರ್ 1 ಆಟಗಾರ. ಡಾನ್ ಬ್ರಾಡ್ಮನ್. ಅವರ ದಾಖಲೆಯನ್ನು ಮುರಿಯುವ ಪ್ರಶ್ನೆಯೇ ಇಲ್ಲ ಅಂತ ಎಲ್ಲರ ಅಭಿಪ್ರಾಯ.

ಇದೀಗ ಅಂದರೆ 15 ವರ್ಷದ ಹಿಂದೆ ಶುರುವಾದ ಟಿ20 ಆಟದ ಬಹಳ ಮುಖ್ಯವಾದ ಅಂಶವೆಂದರೆ ಎಷ್ಟು ವೇಗವಾಗಿ ರನ್ ಗಳಿಸುವುದು. ಅದನ್ನು ಸ್ಟ್ರೈಕ್ ರೇಟ್ ಎಂದು ಕರೆಯುತ್ತಾರೆ. ಕೇವಲ 20 ಓವರ್ ಆಡುವ ಈ ಆಟದಲ್ಲಿ ಬಿರುಸಿನ ಆಟಕ್ಕೆ ಬಹಳ ಪ್ರಾಮುಖ್ಯತೆ ಇರುತ್ತೆ. 6 ಬಾಲು ಇರುವ ಒಂದು ಓವರ್‌ಗೆ 6 ರನ್ ಹೊಡೆದರೆ ಸ್ಟ್ರೈಕ್ ರೇಟ್ 100; ಪ್ರತಿ ಬಾಲಿಗೂ ಒಂದು ರನ್. 20 ಓವರ್‌ಗೆ ಸ್ಕೋರ್ 120 ತಲುಪುತ್ತೆ. ರೇಟ್ ಡಬಲ್ ಆದರೆ ಸ್ಕೋರ್ 240 ಆಗುತ್ತೆ. ಸಾಧಾರಣವಾಗಿ ಒಂದು ತಂಡದ ಸ್ಕೋರ್ 160 ರಿಂದ 180 ತನಕ ಆಗುತ್ತೆ. ಆದಕ್ಕೆ ಸರಿಯಾಗಿ ಪಿಚ್, ಹವಾಮಾನ, ಗಾಳಿ, ಮೋಡ, ಮಳೆಯಿಲ್ಲದೆ ಒಳ್ಳೆ ವಾತಾವರಣ ಇರಬೇಕಾಗುತ್ತೆ.

ಈಗ ಭಾರತದ ಸೂರ್ಯಕುಮಾರ್ ಯಾಧವ್ ಪ್ರಪಂಚದಲ್ಲೇ ಅತ್ಯುತ್ತಮ ಟಿ20 ಆಟಗಾರನೆಂದು ನಿಷ್ಕರ್ಕೆಯಾಗಿದೆ. ಅವರ ಸ್ಟ್ರೈಕ್ ರೇಟ್ 180, 200 ಮಟ್ಟದಲ್ಲಿ ಇರುತ್ತೆ. 20/25 ಬಾಲುಗಳಲ್ಲಿ 50 ರನ್ ಹೊಡೆಯುತ್ತಾರೆ ಸೂರ್ಯಕುಮಾರ್. ಅವರ ಆಟ ಎಷ್ಟು ಆಕರ್ಷಕವಾಗಿರುತ್ತದೆಂದರೆ ಅವರ ಹೆಸರನ್ನು ಮೊಟಕಿಸಿ ಅವರನ್ನು ಈಗ ‘ಸ್ಕೈ’ ಎಂದು ಕರೆಯುತ್ತಾರೆ. ಅವರು ಹೊಡೆದ ಬಾಲುಗಳು ಆಕಾಶ ಗಂಗೆ ತರಹ ಮೇಲೆ ಚಿಮ್ಮಿ ಅದು ಹೋಗಿ ಅಲ್ಲಿಂದ ಸಿಕ್ಸರ್ ತಲುಪುತ್ತೆ! ಅವರನ್ನು 360 ಡಿಗ್ರಿ ಅಂತಲೂ ಕರೆಯುತ್ತಾರೆ! ಅಂದರೆ ಅವರ ದೇಹದ ಸುತ್ತಲೂ ಎಲ್ಲಿ ಚೆಂಡು ಬಂದರೂ ಅದನ್ನು ಬೌಂಡರಿಗೋ ಸಿಕ್ಸರ್‍ಗೋ ಕಳಿಸುವ ಶಕ್ತಿ ಅವರಿಗಿದೆ!

ಈಗ ಹಾಗಂದರೆ ಒಳ್ಳೆಯ ಆಕರ್ಷಕ ಬ್ಯಾಟಿಂಗ್ ಮಾಡುವ ಆಟಗಾರ 19/20 ಬಾಲುಗಳಿಗೆ 50 ರನ್ ಬಾರಿಸುತ್ತಾರೆ ಅನ್ನಬಹುದು.

ಹಾಗಿದ್ದರೆ 22 ಬಾಲ್‌ಗಳಲ್ಲಿ ಒಂದು ಸೆಂಚುರಿ ಬಾರಿಸುವವರನ್ನು ಏನಂತ ಕರೆಯಬೇಕು?! ಅವರನ್ನು ನೀವು ಏನಂತ ಕರೆಯುತ್ತೀರಿ?! ಬ್ರಾಡ್ಮನ್ ವಿಶ್ವದ ಏಕೈಕ ಬ್ಯಾಟ್ಸ್ಮನ್ ಈ ದಾಖಲೆ ಮಾಡಿರುವುದು. ಅದನ್ನು ಯಾರೂ ಮುರಿದಿಲ್ಲ, ಅದು ಮುರಿಯುವುದೂ ಬಹಳ ಕಷ್ಟಕರ! ಅದು ಡಾನ್ ಬ್ರಾಡ್ಮನ್ ಮಾಡಿದ್ದಾರೆ! ಅದು ನಂಬಲು ಅಸಾಧ್ಯ. ಆದರೆ ಅದನ್ನು ಮಾಡಿದ್ದುಂಟು. ನಿಜ. ಬ್ರಾಡ್ಮನ್ ಆಡುವಾಗ ಟ 20 ರ ಆಟ ಬಂದಿರಲಿಲ್ಲ. ಅದು ಇದ್ದಿದ್ದರೆ ಏನೇನು ದಾಖಲೆ ಮಾಡುತ್ತಿದ್ದರೋ, ಅದು ಊಹಿಸಲೂ ಕಷ್ಟ.

ಆಸ್ಟ್ರೇಲಿಯಾದಲ್ಲಿ ಮುಂಚೆಯೆಲ್ಲಾ ಒಂದು ಓವರ್‌ಗೆ 8 ಬಾಲು (ಎಸೆತ) ಗಳಿದ್ದವು. ಕ್ರಮೇಣ ಅದನ್ನು ವಿಶ್ವದಲ್ಲಿ ಪ್ರಚಲಿತ 6 ಬಾಲುಗಳಿಗೆ ತಂದರು.

ಬ್ರಾಡ್ಮನ್ 22 ಬಾಲುಗಳಲ್ಲಿ 100 ರನ್ನು ಹೊಡೆದಾಗ ಆಗ ಅಲ್ಲಿ ಒಂದು ಓವರ್‌ಗೆ 8 ಬಾಲುಗಳಿದ್ದವು.

ನವೆಂಬರ್ 3, 1931 ರಲ್ಲಿ ಆಸ್ಟ್ರೇಲಿಯಾದ ಬ್ಲಾಕ್ಹೀತ್ ಮತ್ತು ಲಿತ್ಗೊ ಅವರ ಮಧ್ಯೆ ನಡೆದ ಪಂದ್ಯದಲ್ಲಿ ಬ್ರಾಡ್ಮನ್ 14 ಸಿಕ್ಸರ್ ಮತ್ತು 29 ಬೌಂಡರಿ ಮೂಲಕ 256 ರನ್ ಬಾರಿಸಿದರು! ಅವರ ಬ್ಯಾಟಿಂಗ್‌ನ ವಿಶೇಷವೆಂದರೆ, ಆಟದ ಮದ್ಯೆ ಕೇವಲ 3 ಓವರ್‌ಗಳಲ್ಲಿ – 22 ಬಾಲುಗಳಲ್ಲಿ- 101 ರನ್ ಹೊಡೆದರು! ಇನ್ನೂ ವಿಶೇಷವೆಂದರೆ ಅವರ ಜೊತೆಯಾಡುತ್ತಿದ್ದ ಆಟಗಾರ ವೆಂಡನ್ ಬಿಲ್ ಕೂಡ ಎರಡು ಬಾಲ್ ಆಡಿ ಎರಡು ರನ್ ಹೊಡೆದರು!

ಆ 3 ಓವರ್‌ಗಳ ಸ್ಕೋರ್ ವಿವರ ಹೀಗಿದೆ.: ಮೊತ್ತ ರನ್

ಮೊದಲನೆಯ ಓವರ್: 6 6 4 2 4 4 6 1 33

ಎರಡನೆಯ ಓವರ್: 6 4 4 6 6 4 6 4 40

ಮೂರನೆಯ ಓವರ್: 1 6 6 1 1 4 4 6 29 (ಬ್ರಾಡ್ಮನ್ 27, ವೆಂಡನ್ ಬಿಲ್ 2)

ಮೂರು ಓವರ್‌ನಲ್ಲಿ ಹೊಡೆದ ಒಟ್ಟು ಸ್ಕೋರ್ 102 ರನ್‍ಗಳು

ಬ್ರಾಡ್ಮನ್ : 100 ರನ್‌ಗಳು, ಬಿಲ್ ; 2 ರನ್.

ಕೇವಲ 22 ಬಾಲುಗಳಲ್ಲಿ ಒಂದು ಶತಕ ಇದುವರೆಗು ಯಾರೂ ಬಾರಿಸಿಲ್ಲ, ಬಹುಶಃ ಬಾರಿಸಲು ಅಸಾಧ್ಯವೆಂದೇ ಹೇಳಬಹುದು. ಒಂದು ಕಾಲದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ, ಭಾರತದ ಸಚಿನ್ ಟೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವ್ರಾಜ್ ಸಿಂಘ್, ಪಾಕಿಸ್ತಾನದ ಆಫ್ರಿಡಿ ಬಿರುಸಿನ ಹೊಡೆತಕ್ಕೆ ಪ್ರಸಿದ್ಧಿಯಾಗಿದ್ದರು. ಅವರಿಂದಲೂ ಈ ತರಹ ಹೊಡೆದು ಈ ದಾಖಲೆಯನ್ನು ಮುರಿಯುವುದಕ್ಕೆ ಆಗಲಿಲ್ಲ. ಒಂದು ರೀತಿಯಲ್ಲಿ ಇದನ್ನು ಮೊದಲನೇ ದರ್ಜೆಯ ಪಂದ್ಯವೆಂದು ಪರಿಗಣಿಸಿಲ್ಲ. ಯಾಕೆಂದರೆ, ಅದು ಆಸ್ಟ್ರೇಲಿಯಾದಲ್ಲೇ ಎರಡು ಪಂಗಡಗಳಿಗೆ ಆದ ಪಂದ್ಯ. ಆದರೂ ಇದು ಒಂದು ವಿಶೇಷ ದಾಖಲೆ.

ಇನ್ನೊಂದು ವಿಶೇಷವೆಂದರೆ ಆಗಿನ ಕಾಲದಲ್ಲಿ ಈಗಿನ ತರಹ ರಕ್ಷಣಾ ಕವಚಗಳಾದ ಹೆಲ್ಮೆಟ್, ಥೈಪ್ಯಾಡ್, ಹ್ಯಾಂಡ್ ಗಾರ್ಡ್‌ಗಳಾವುದೂ ಇರಲಿಲ್ಲ. ಜೊತೆಗೆ ಪಿಚ್‌ಗಳನ್ನು ಮುಚ್ಚಿಡುತ್ತಿರಲಿಲ್ಲ. ಮಳೆ ಬಂದರೆ ಆಟ ನಿಲ್ಲಿಸಿ ಮತ್ತೆ ನೀರಿದ್ದ, ಒದ್ದೆಯಾದ ಪಿಚ್ ಮೇಲೆಯೇ ಆಡುತ್ತಿದ್ದರು. ಏಟುಗಳು ಬೀಳುವುದು ಸರ್ವೇ ಸಾಮಾನ್ಯವಾಗಿತ್ತು. ಈಗಿನ ಕಾಲದ ತರಹ ಒಂದು ಓವರ್‌ಗೆ ಒಂದೆ ಬೌನ್ಸರ್, ಬೀಮರ್ ಹಾಗೆ ನಿಯಮಗಳೇನೂ ಇರಲಿಲ್ಲ. ಬ್ಯಾಟಿಂಗ್ ಗ್ಲೊವ್, ಕಾಲಿನ ಪ್ಯಾಡ್‌ಗಳು ಉನ್ನತ ಮಟ್ಟದಲ್ಲಿ ಮಾಡಿರಲಿಲ್ಲ. ಹಾಗಿದ್ದಾಗ ಚೆಂಡು ತಗುಲಿ, ಬಲವಾದ ಏಟು ತಿಂದು, ಆಡುವುದಕ್ಕೆ ಆಗದೆ, ಆಟದಿಂದ ಕೆಲವು ದಿನಗಳು ತಿಂಗಳು ಹೊರಗಡೆ ಹೋಗುವುದು ಸಾಮಾನ್ಯವಾಗಿತ್ತು. ಅಂತಹ ಕಾಲದಲ್ಲಿ, ಆ ಪರಿಸ್ಥಿತಿಯಲ್ಲಿ ಬ್ರಾಡ್‍ಮನ್ ಮಾಡಿರುವುದು ಒಂದು ಅದ್ಭುತ ಸಾಧನೆಯೆಂದು ಹೇಳಬಹುದು.

ಡಾನ್ ಬ್ರಾಡ್ಮನ್ ಎಂತಹ ಬ್ಯಾಟ್ಸ್ಮನ್ ಆಗಿದ್ದರೆಂದರೆ ಅವರನ್ನು ಔಟ್ ಮಾಡುವುದಕ್ಕೆ ದೇವರೇ, ಅಥವ ನಮ್ಮ ಭಾಷೆಯಲ್ಲಿ ಹೇಳಬೇಕೆಂದರೆ ಬ್ರಹ್ಮನೇ ಬರಬೇಕು ಅನ್ನುವ ಹಾಗೆ ಆಗಿತ್ತು. ಇದನ್ನು ಹೇಗಾದರೂ ಮುರಿಯಬೇಕು ಎಂದು ಇಂಗ್ಲೆಂಡ್ ತಂಡ ಒಂದು ತೀರ್ಮಾನಕ್ಕೆ ಬಂದು 1934ರಲ್ಲಿ ತಂಡದ ನಾಯಕ ಜಾರ್ಡಿನ್ ಒಂದು ಪ್ಲಾನ್ ಹಾಕಿದರು. ಅದನ್ನು ‘ಬಾಡಿ ಲೈನ್’ ಎಂದು ಕರೆದು ಅದನ್ನು ಮಾಡುವುದಕ್ಕೆ ಹೆರಾಲ್ಡ್ ಲಾರ್ವುಡ್ ಅನ್ನುವ ಬೋಲರ್ ಅನ್ನು ತಯಾರು ಮಾಡಿಟ್ಟರು. ಅದರ ವಿಶೇಷವೆಂದರೆ ಬಾಲನ್ನು ವೇಗವಾಗಿ ಲೆಗ್ ಸೈಡ್‌ಗೆ ಮಾಡಿಸುವುದು. ಹಾಗೆ ಮಾಡಿದಾಗ ಬಾಲು ಕುತ್ತಿಗೆಯ ತನಕ ಚಿಮ್ಮತ್ತೆ. ಅದನ್ನು ಹೊಡೆಯುವುದು ಬಹಳ ಕಷ್ಟಕರ. ಅದು ಹೊಡೆಯದಿದ್ದರೆ ಅದು ಕುತ್ತಿಗೆಗೆ ತಾಕುವುದು ಖಂಡಿತ. ಅತ್ತ ಧರಿ ಇತ್ತ ಪುಲಿ ಸನ್ನಿವೇಶ. ಈ ತರಹದ ಬೋಲಿಂಗ್‌ನಲ್ಲಿ ಲಾರ್ವುಡ್ ನಿಪುಣತೆಯನ್ನು ಹೊಂದಿದ್ದರು. ಆದರೆ ಇದು ‘ವಿನಾಶಕಾಲೇ ವಿಪರೀತ ಬುದ್ಧಿ’ ಎನ್ನುವ ನಾಣ್ನುಡಿಯ ಹಾಗೇ ಆಯಿತು. ಇದನ್ನು ಕಾರ್ಯ ರೂಪಕ್ಕೆ ತಂದು ಬ್ರಾಡ್ಮನ್‌ಗೂ ಆಡುವುದು ಕಷ್ಟವಾಯಿತು. ಅನೇಕ ಆಟಗಾರರಿಗೂ ಬಾಲ್ ಕುತ್ತಿಗೆಗೆ ಜೋರಾಗಿ ತಾಕಿ, ಆಸ್ಪತ್ರೆಗೆ ದಾಖಲು ಮಾಡಬೇಕಾಯಿತು. ಎರಡು ದೇಶಗಳ ಮಧ್ಯೆ ಇದು ದೊಡ್ಡ ವಿಷಯವಾಗಿ ಎಲ್ಲೆ ಮೀರಿ ಹೋಯಿತು. ಎಲ್ಲಿ ಯುದ್ಧ ಶುರುವಾಗುವುದೋ ಎನ್ನುವ ಮಟ್ಟಕ್ಕೆ ಇಳಿದಿತ್ತು. ಅದೊಂದು ಕ್ರಿಕೆಟ್‌ನ ಕರಾಳ ದಿನಗಳಾಗಿ ಅದನ್ನು ದಾಟಿ ಮತ್ತೆ ಸುದಿನಗಳು ಬಂದವು. ಮುಂದೆ ಒಂದು ಓವರ್‌ಗೆ ಒಂದೇ ಒಂದು ಬೌನ್ಸರ್‌, ಬೀಮರ್ ಹಾಕಬಹುದೆಂದು ಐಸಿಸಿ ತೀರ್ಮಾನ ಮಾಡಿತು. ಇದಕ್ಕಿಂತ ಜಾಸ್ತಿ ಹಾಕಿದರೆ ಅದನ್ನು ‘ನೋ ಬಾಲ್’ ಎಂದು ಪರಿಗಣಿಸಲಾಯಿತು. ಹಾಗಿದ್ದಾಗಲೂ ಬ್ರಾಡ್ಮನ್ ತಮ್ಮ ಬಿರುಸಿನ ಆಟವನ್ನು ಬಿಡಲಿಲ್ಲ.

ಅವರ ಆಟ ಎಷ್ಟು ಆಕರ್ಷಕವಾಗಿರುತ್ತದೆಂದರೆ ಅವರ ಹೆಸರನ್ನು ಮೊಟಕಿಸಿ ಅವರನ್ನು ಈಗ ‘ಸ್ಕೈ’ ಎಂದು ಕರೆಯುತ್ತಾರೆ. ಅವರು ಹೊಡೆದ ಬಾಲುಗಳು ಆಕಾಶ ಗಂಗೆ ತರಹ ಮೇಲೆ ಚಿಮ್ಮಿ ಅದು ಹೋಗಿ ಅಲ್ಲಿಂದ ಸಿಕ್ಸರ್ ತಲುಪುತ್ತೆ! ಅವರನ್ನು 360 ಡಿಗ್ರಿ ಅಂತಲೂ ಕರೆಯುತ್ತಾರೆ! ಅಂದರೆ ಅವರ ದೇಹದ ಸುತ್ತಲೂ ಎಲ್ಲಿ ಚೆಂಡು ಬಂದರೂ ಅದನ್ನು ಬೌಂಡರಿಗೋ ಸಿಕ್ಸರ್‍ಗೋ ಕಳಿಸುವ ಶಕ್ತಿ ಅವರಿಗಿದೆ!

ಬ್ರಾಡ್ಮನ್ ಅವರ ಜೀವಮಾನದಲ್ಲಿ ಕೇವಲ 52 ಟೆಸ್ಟ್ ಮ್ಯಾಚ್‌ಗಳಲ್ಲಿ 6992 ರನ್ ಹೊಡೆದರು. ಜೊತೆಗೆ ಅವರು 28 ಸೆಂಚುರಿ ಬಾರಿಸಿದ್ದರು. ಅವರ ಈ ದಾಖಲೆ ಬಹಳ ವರ್ಷಗಳು ಹಾಗೇ ಇತ್ತು. ಅದನ್ನು ಸುನಿಲ್ ಗವಾಸ್ಕರ್ 1976ರಲ್ಲಿ ಮುರಿದು 29 ಸೆಂಚುರಿ ಬಾರಿಸಿ, 10,000 ರನ್ ಹೊಡೆಯುವ ಮೊದಲ ಆಟಗಾರರಾದರು. 130 ಟೆಸ್ಟ್ ಆಡಿದ ಗವಾಸ್ಕರ್ ತಾನು ಬ್ರಾಡ್ಮನ್‌ರ ರೆಕಾರ್ಡು ಮುರಿದಿದ್ದೇನೆ ಅಂತ ಇವತ್ತಿಗೂ ಅದನ್ನು ಒಪ್ಪುತ್ತಿಲ್ಲ. ಬ್ರಾಡ್ಮನ್ 52 ಟೆಸ್ಟ್ ಗಳಲ್ಲಿ 29 ಸೆಂಚುರಿ ಮಾಡಿದ್ದಾರೆ; ಅದನ್ನು ಮುರಿಯಬೇಕೆಂದರೆ 51 ಟೆಸ್ಟ್‌ಗಳಲ್ಲಿ 29 ಸೆಂಚುರಿ ಮಾಡಿದರೆ ಮಾತ್ರ ಅವರ ದಾಖಲೆಯನ್ನು ಮುರಿದಹಾಗೆ ಅನ್ನುತ್ತಾರೆ ಗವಾಸ್ಕರ್!

ಬ್ರಾಡ್ಮನ್‌ರ ಹೊಡೆದ ಸ್ಕೋರಿನ ಸರಾಸರಿ ಎಷ್ಟಿತ್ತೆಂದರೆ, ಅದು 99.94 ಅವರು ಇನ್ನು ನಾಲ್ಕು ರನ್‌ ಗಳಿಸಿದ್ದರೆ ಅವರ ಸರಾಸರಿ 100.0 ಮುಟ್ಟುತ್ತಿತ್ತು.

ಅದರ ನಿರೀಕ್ಷೆಯಲ್ಲಿ ಒಂದು ದಿನ ಸ್ಟೇಡಿಯಮ್‌ನಲ್ಲಿ ಎಲ್ಲರೂ ಕಾಯುತ್ತಿದ್ದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡಿನ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಎಲ್ಲರಿಗೂ ಬ್ರಾಡ್ಮನ್‌ರ ಸರಾಸರಿ 100 ದಾಟಿಹೋಗುವುದು ಖಚಿತ ಅನ್ನಿಸಿತ್ತು. ಮೇಲಾಗಿ ಬ್ರಾಡ್ಮನ್ ಆ ಪಂದ್ಯ ಅವರ ಕೊನೆಯ ಪಂದ್ಯವೆಂದು ಮುಂಚೆಯೇ ಘೋಷಿಸಿದ್ದರು.

ಕರತಾಡನದ ಸುರಿಮಳೆಯ ಮಧ್ಯೆ ಬ್ರಾಡ್ಮನ್ ಮೈದಾನಕ್ಕೆ ಇಳಿದರು.

ಎರಿಕ್ ಹಾಲಿಸ್ ಅನ್ನುವ ಸ್ಪಿನ್ನರ್ ಬೋಲಿಂಗ್ ಮಾಡುತ್ತಿದ್ದರು.

ಮೊದಲನೆಯ ಬಾಲು ಅವರು ಹೊಡೆದ ಹೊಡೆತಕ್ಕೆ ಬೌಂಡರಿಗೆ ಹೋಗಿ ಸರಾಸರಿ 100 ಆಗಿರೋದು. ಅದನ್ನು ಹಾಲಿಸ್ನೆ ತಡೆದರು. ಎರಟನೆಯ ಬಾಲ್ ಬ್ರಾಡ್ಮನ್ ಬೋಲ್ಡ್ ಆಗಿ ಔಟಾದರು!

ಮೈದಾನದಲ್ಲಿ ಒಂದೇ ಕ್ಷಣದಲ್ಲಿ ಸಿಡಿಲು ಬಡಿದು ಸ್ಮಶಾನದ ಮೌನದ ವಾತಾವರಣ. ಬ್ರಾಡ್ಮನ್ ಸೊನ್ನೆಗೆ ಔಟಾಗಿ ಬ್ಯಾಟನ್ನು ಕಂಕುಳಿಗೆ ಸಿಕ್ಕಿಸಿಕೊಂಡು ವಾಪಸ್ಸು ಪೆವಿಲಿಯನ್‌ಗೆ ಮರಳಿದರು.

ಒಂದೇ ದಿನಕ್ಕೆ ಮುನ್ನೂರು ಹೊಡೆದ ಆಟಗಾರ, ಮೂರು ಬೇರೆ ಬೇರೆ ಪಂದ್ಯದಲ್ಲಿ ಭಾಗವಹಿಸಿ ಪ್ರತಿಯೊಂದರಲ್ಲೂ ಶತಕ ಭಾರಿಸಿದ ಮಹಾನುಭಾವ ಆತನ ಕೊನೆಯ ಆಟದಲ್ಲಿ ಕೊನೆಯ ಇನಿಂಗ್ಸ್‌ನಲ್ಲಿ ಸೊನ್ನೆಗೆ ಔಟ್.

ವಿಧಿ ತನ್ನದೇ ಒಂದು ಆಟ ಇಟ್ಟಿರುತ್ತೆ. ಬ್ರಾಡ್ಮನ್‌ರ ಸರಾಸರಿ ಸೆಂಚುರಿ ಆಗೇ ಆಗುತ್ತೆ ಎಂದುಕೊಂಡ ಪ್ರೇಕ್ಷಕರು, ರೇಡಿಯೋ ಮುಖಾಂತರ ಕೇಳುತ್ತಿದ್ದ ಶ್ರೋತೃಗಳು ಎಲ್ಲರೂ ದಂಗಾಗಿ ಹೋದರು ಬ್ರಾಡ್ಮನ್ನ ಸೊನ್ನೆಗೆ ಔಟಾದರು ಅನ್ನುವ ಸುದ್ದಿಕೇಳಿ. ವಿಧಿ ತನ್ನದೇ ಆದ ಶೈಲಿಯಲ್ಲಿ ಜೀವನದ ಆಗುಹೋಗು ಗಳಿಗೆ ಜವಾಬ್ದಾರಿಯುತನಾಗುತ್ತೆ. ಇನ್ನು ಒಂದೆರೆಡು ಟೆಸ್ಟ್ ಆಡಿ ಸರಾಸರಿ ನೂರು ಮಾಡಿ ಎಂದು ಎಲ್ಲರೂ ಬ್ರಾಡ್ಮನ್ನಿಗೆ ದುಂಬಾಲು ಬಿದ್ದರು. ಬ್ರಾಡ್ಮನ್ ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಅಲ್ಲಿಗೆ ಅವರ ಆಟ ಸಮಾಪ್ತಿ ಆಯಿತು.

ಎರಿಕ್ ಹಾಲಿಸ್ಗಂತೂ ತಾನು ಬ್ರಾಡ್ಮನ್ನರನ್ನು ಸೊನ್ನೆಗೆ ಔಟ್ ಮಾಡಿದ್ದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಸ್ವಲ್ಪ ದಿವಸ ಯಾರಾದರೂ ಅವನ ಕೈಕುಲುಕಿದರೆ, ಆಗ ‘ಇದೇ ಕೈ ಬ್ರಾಡ್ಮನ್ರನ್ನು ಸೊನ್ನೆಗೆ ಔಟ್ ಮಾಡಿದ್ದು’ ಅಂತ ಹೇಳಿಕೊಂಡು ಓಡಾಡುತ್ತಿದ್ದ. ಕೊನೆಗೆ ಬ್ರಾಡ್ಮನ್ರನ್ನು ಹೇಗೆ ಔಟ್ ಮಾಡಿದೆ ಅಂತ ಒಂದು ಪುಸ್ತಕವನ್ನೂ ಬರೆದ! ಪತ್ರಕರ್ತರು, ಪ್ರೇಕ್ಷಕರು, ‘ಕೊನೆಯ ಪಂದ್ಯವಾದದ್ದರಿಂದ ಬ್ರಾಡ್ಮನ್ಗೆ ಕಣ್ಣಾಲಿಗಳು ತುಂಬಿ ಬಂದಿದ್ದವು. ಅದಕ್ಕೆ ಅವರಿಗೆ ಬಾಲು ಸರಿಯಾಗಿ ಕಾಣಿಸಿರಲ್ಲ’ ಅನ್ನುವ ಮಾತಿಗೆ ಬ್ರಾಡ್ಮನ್ರೇ, ‘ಅದೆಲ್ಲಾ ಸುಳ್ಳು! ಒಳ್ಳೆಯ ಬಾಲ್ನಿಂದ ನನ್ನನ್ನು ಬೋಲ್ಡ್ ತೆಗೆದರು ಹಾಲಿಸ್. ನಾನು ಔಟಾದೆ.’ ಎಂದು ಹಾಲಿಸನ್ನು ಪ್ರಶಂಶಿಸಿದರು.

*****

ಬ್ರಾಡ್ಮನ್ ಕ್ರಿಕೆಟ್ ಆಟದಿಂದ ನಿವೃತ್ತಿಯಾದಮೇಲೆ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡುವ ಕಮಿಟಿಗೆ ಚೇರ್ಮನ್ ಆಗಿದ್ದರು.

ಒಮ್ಮೆ ಭಾರತ ಮತ್ತು ಆಸ್ಟ್ರೇಲಿಯ ಮಧ್ಯೆ ಟೆಸ್ಟ್ ಮ್ಯಾಚ್ ನಡೆಯುತ್ತಿದ್ದಾಗ ಟಿವಿಯಲ್ಲಿ ಆಡುತ್ತಿದ್ದ ಟೆಂಡೂಲ್ಕರ್‌ನನ್ನು ನೋಡಿ ಅವರಿಗೆ ತಮ್ಮ ಬ್ಯಾಟಿಂಗ್ ಅನ್ನೇ ನೋಡುತ್ತಿರುವ ಹಾಗೇ ಭಾಸವಾಯಿತು. ಕೂಡಲೇ ಅವರ ಹೆಂಡತಿಯನ್ನು ಕರೆದು ‘ಇವನು ನನ್ನ ತರಹ ಆಡುತ್ತಾನಲ್ಲವಾ?’ ಎಂದು ಕೇಳಿದರು. ಆಕೆ ಸ್ವಲ್ಪ ಹೊತ್ತು ಟಿವಿ ನೋಡಿ, ‘ಹೌದು. ನೀನು ಆಡುವ ಹಾಗೆಯೇ ಚೆನ್ನಾಗಿ ಆಡುತ್ತಾನೆ. ಸುಮಾರು ಒಂದೇ ಎತ್ತರ ಇದ್ದೀರಿ ನೀವಿಬ್ಬರೂ. ಇವನೂ ಚೆನ್ನಾಗಿ ಬೌಂಡರಿಗಳು ಬಾರಿಸುತ್ತಾನೆ. ನಿಮ್ಮನ್ನು ನೋಡಿದಹಾಗೆ ಅನ್ನಿಸುತ್ತೆ ಇವನನ್ನು ನೋಡಿದರೆ.’ ಎಂದಳು.

ಇದಾದ ಸ್ವಲ್ಪ ವರ್ಷಕ್ಕೆ ಆಗಸ್ಟ್ 27 1997 ರಲ್ಲಿ ಬ್ರಾಡ್ಮನ್‌ರಿಗೆ 90 ವರ್ಷ ತುಂಬಿತು. ಆ ಶುಭ ದಿನಕ್ಕೆ ಬ್ರಾಡ್ಮನ್ ಟೆಂಡೂಲ್ಕರ್ ಮತ್ತು ಶೇನ್ ವಾರ್ನರನ್ನು ಅವರ ಮನೆಗೆ ಭೋಜನಕ್ಕೆ ಅಮಂತ್ರಣ ಕೊಟ್ಟಿದ್ದರು. ಇದೊಂದು ಬಹಳ ದೊಡ್ಡ ಮರ್ಯಾದೆ ಎನ್ನುತ್ತಾರೆ ಟೆಂಡೂಲ್ಕರ್. ಆಸ್ಟ್ರೇಲಿಯಾದಲ್ಲಿ ಬಹಳ ಹೆಸರಾಂತ ಬ್ಯಾಟ್ಸ್ಮನ್‌ಗಳಿದ್ದರು. ಇಯನ್ ಛಾಪೆಲ್, ಅವರ ತಮ್ಮ ಗ್ರೆಗ್ ಛಾಪೆಲ್, ಮಾರ್ಕ ಟೈಲರ್ ಇತ್ಯಾದಿ. ತಂಡದ ನಾಯಕನಾಗಿದ್ದ ಟೈಲರ್ ಒಂದು ಮ್ಯಾಚ್‌ನಲ್ಲಿ ಅಂದು ಆಟ ಮುಗಿದಾಗ 334 ರನ್ ಹೊಡೆದು ಅಜೇಯರಾಗಿದ್ದರು. ಅದು ಬ್ರಾಡ್ಮನ್ ಹೊಡೆದಷ್ಟೇ ರನ್ ಆಗಿತ್ತು. ಮಾರನೆಯ ದಿನ ಎಲ್ಲರೂ ಟೈಲರ್ ಬ್ರಾಡ್ಮನ್‌ರ ರನ್ನುಗಳು ದಾಟಿಹೋಗುತ್ತಾರೆಂದು ಅದರ ನಿರೀಕ್ಷೆಯಲ್ಲಿದ್ದರು. ಆದರೆ ಆಟ ಶುರುವಾಗುವ ಮೊದಲು ಟೈಲರ್ ತಮ್ಮ ತಂಡದ ಹಿಂದಿನ ದಿನದ ಸ್ಕೋರಿಗೇ ಡಿಕ್ಲೇರ್ ಮಾಡಿಬಿಟ್ಟರು. ಯಾಕೆ ಹಾಗೆ ಮಾಡಿದಿರಿ. ನೀವು ರನ್ ಹೊಡೆದು ಬ್ರಾಡ್ಮನ್ನಿಗಿಂತ ಮುಂದೆ ಹೋಗಬಹುದಾಗಿತ್ತಲ್ಲಾ ಎಂದಾಗ, ಟೈಲರ್, ‘ನಾನು ಮುಂದೆ ಹೋಗುವುದು ಇರಲಿ, ಅವರ ಸಮಕ್ಕೆ ಸ್ಕೋರ್ ಮಾಡಿದ್ದು ನನ್ನ ಪುಣ್ಯ. ಮುಂದೆ ಈ ಸ್ಕೋರ್ ಬಂದಾಗೆಲ್ಲಾ ಅವರ ಹೆಸರಿನ ಜೊತೆ ನನ್ನ ಹೆಸರೂ ಬರುತ್ತೆ. ಅದು ನನಗೆ ಬಹಳ ದೊಡ್ಡ ಶ್ರೇಷ್ಟ. ಆದ್ದರಿಂದ ಡಿಕ್ಲೇರ್ ಮಾಡಿದೆ ಎಂದರು!

ಇಷ್ಟು ಒಳ್ಳೆ ಆಟಗಾರರಿದ್ದರೂ ಬ್ರಾಡ್ಮನ್ ಒಬ್ಬ ಭಾರತೀಯನಾದ ಟಂಡೂಲ್ಕರ್‌ಗೆ ವಿಶೇಷವಾಗಿ ಮನೆಗೆ ಕರೆದು ತನ್ನ 90ನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದ್ದು ಅನೇಕ ಆಸ್ಟ್ರೇಲಿಯನ್ನರಿಗೆ ಇಷ್ಟವಾಗಲಿಲ್ಲ. ಆಸ್ಟ್ರೇಲಿಯಾದ ಯಾರ ಆಟಗಾರರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಟೆಂಡೂಲ್ಕರ್ ಅವರನ್ನು ಕರೆಸಿ ಮರ್ಯಾದೆ ಮಾಡಿದ್ದು ಎಲ್ಲರಿಗೂ ನುಂಗಲಾರದ ತುತ್ತಾಯಿತು! ಟೆಂಡೂಲ್ಕರ್ ನನ್ನ ಜೀವಮಾನದಲ್ಲಿ ಇದೊಂದು ವಿಶೇಷ ದಿನವೆಂದು ಹೇಳಿಕೊಂಡರು.

ಡಾನ್ ಬ್ರಾಡ್ಮನ್ ಮತ್ತು ಸಚಿನ್‌ರ ಬ್ಯಾಟಿಂಗ್‌ನ ದಾಖಲೆಗಳು ಒಂದು ಟೇಬಲ್ ಮೂಲಕ ಕೊಟ್ಟಿದೆ.

ಶೇನ್ ವಾರ್ನ್‌ ವಿಶ್ವದ ಅತ್ಯಂತ ಯಶಸ್ವಿ ಲೆಗ್ ಸ್ಪಿನ್ನರೆಂದು ಪ್ರಖ್ಯಾತರಾಗಿ ಅವರು ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್‌ಗಳನ್ನು ಪಡೆದಿದ್ದರು. ದುರದೃಷ್ಟವಶಾತ್ ಶೇನ್ ವಾ ರ್ನ್‌ ತಮ್ಮ 52 ನೇ ವಯಸ್ಸಿಗೆ ಥಾಯಿಲೆಂಡಿಗೆ ಹೋಗಿದ್ದಾಗ 2022ರಲ್ಲಿ ಹೃದಯಾಘಾತವಾಗಿ ಕಾಲವಾದರು.

ಬ್ರಾಡ್ಮನ್ ಅವರಿಬ್ಬರನ್ನು ಕರೆಸಿ ಅವರ ಜೊತೆ ಮಾತನಾಡಿ, ಟೆಂಡೂಲ್ಕರ್‌ಗೆ ಅವರ ಬ್ಯಾಟನ್ನು ಜ್ಞಾಪಕಾರ್ಥವಾಗಿ ಕೊಟ್ಟರು. ಬೇರೆ ದೇಶದವರಾದರೂ ಟೆಂಡೂಲ್ಕರ್‌ರನ್ನು ಕರೆದು, ಅವರ ಬ್ಯಾಟಿಂಗ್‌ಅನ್ನು ಪ್ರಶಂಸಿಸಿ ಮನೆಗೆ ಕರೆದು 90ರ ಹುಟ್ಟಿದ ಹಬ್ಬ ಮಾಡಿದ ಬ್ರಾಡ್ಮನ್‌ರ ವಿಶಾಲ ಮನಸ್ಸನ್ನೂ ಬಹಳ ಜನ ಕೊಂಡಾಡಿದರು.

ಅವರು ಮೂರು ಜನ ಮಾತನಾಡುವಾಗ, ಶೇನ್ ವಾರ್ನ್‌ ಬ್ರಾಡ್ಮನ್ ಅವರಿಗೆ ಕೇಳಿದರಂತೆ. ‘ನಿಮ್ಮ ಬ್ಯಾಟಿಂಗ್ ಸರಾಸರಿ 99.94. ನೀವು ಇಂದಿನ ಬೋಲರ್ಸ್ ವಿರುದ್ಧ ಆಡಿದ್ದರೆ ನಿಮ್ಮ ಸರಾಸರಿ ಎಷ್ಟು ಆಗಿರೋದು? ಬ್ರಾಡ್ಮನ್: 70 -75 ಸರಾಸರಿಯಷ್ಟು ಹೊಡೆಯುತ್ತಿದ್ದೆ.’ ಆಗ ವಾರ್ನ್‌, ‘ಅಷ್ಟೇನೆ?’ ಎಂದು ಅಚ್ಚರಿಯಾಗಿ ಕೇಳಿದಾಗ, ‘ನನಗೆ ಈಗ 90 ವರ್ಷ. ಬೇಗ ಓಡುವುದಕ್ಕೆ ಆಗುವುದಿಲ್ಲ. ಅದಕ್ಕೆ 70-75 ಸರಾಸರಿಯಷ್ಟೆ ಆಗುವುದು’ ಎಂದರು ಬ್ರಾಡ್ಮನ್!

(ಬ್ರಾಡ್‌ಮನ್‌ರ ಆಟದ ಅಂಕಿಅಂಶಗಳು)

(ಸಚಿನ್‌ರ ಆಟದ ಅಂಕಿಅಂಶಗಳು)

ಬ್ರಾಡ್ಮನ್‌ರ ಮಗ ಜಾನ್ ಬ್ರಾಡ್ಮನ್. ಅವನಿಗೆ ಕಿಕೆಟ್‌ನಲ್ಲಿ ಅಷ್ಟು ಇಷ್ಟವಿರಲಿಲ್ಲ. ಅದರ ಮೇಲೆ ಸುಪ್ರಸಿದ್ಧ ಬ್ರಾಡ್ಮನ್‌ರ ಮಗ. ಅವನು ಎಲ್ಲಿ ಹೋದರೂ ಅವನ ಹೆಸರು ಬಿಟ್ಟು ಬ್ರಾಡ್ಮನ್‌ರ ಮಗನೆಂದು ಕರೆಯುತ್ತಿದ್ದರು! ಆದು ಅವನ ಮನಸ್ಸಿಗೆ ಚುಚ್ಚುತ್ತಿತ್ತು. ಆದ್ದರಿಂದ ಅವನು ತಂದೆಗೆ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೀನಿ ಎಂದು ತಂದೆಯ ಅಭಿಪ್ರಾಯವನ್ನು ಕೇಳಿದ. ಅವನ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡ ಬ್ರಾಡ್ಮನ್ ಅದಕ್ಕೆ ಸಂಪೂರ್ಣ ಅನುಮತಿ ಮತ್ತು ಬೆಂಬಲ ಕೊಟ್ಟರು. ಬಹಳ ವರ್ಷಗಳಾದ ಮೇಲೆ ಜಾನ್ ಮತ್ತೆ ತನ್ನ ಹೆಸರನ್ನು ಜಾನ್ ಬ್ರಾಡ್ಮನ್ ಎಂದು ಬದಲಾಯಿಸಿಕೊಂಡರು!

ಬ್ರಾಡ್ಮನ್‌ರ ಕೆಲವು ದಾಖಲೆಗಳು:

# ಅವರು ಜೀವಮಾನದಲ್ಲಿ ಟೆಸ್ಟ್ ಮ್ಯಾಚುಗಳಲ್ಲಿ 680 ಬೌಂಡರಿಗಳನ್ನು ಬಾರಿಸಿದರು. ಆದರೆ ಸಿಕ್ಸರ್‌ಗಳು ಕೇವಲ 6 ಅಷ್ಟೆ!

# ಅವರು ಫಸ್ಟ್ ದರ್ಜೆಯ ಪಂದ್ಯಗಳಲ್ಲಿ 452 ರನ್ ಅಜೇಯನಾಗಿ ಗಳಿಸಿದರು. ಈ ದಾಖಲೆಯನ್ನು ಬ್ರೈನ್ ಲಾರ 505 ರನ್ ಅಜೇಯನಾಗಿ ಹೊಡೆದು ಮುರಿದರು. ಭಾರತದ ರಣಜಿ ಕಪ್ ಪಂದ್ಯವೊಂದರಲ್ಲಿ ಹೋಳ್ಕರ್‌ನ ನಿಂಬಾಳ್ಕರ್ 443 ರನ್‌ ಗಳಿಸಿ ಆಟವಾಡುತ್ತಿದ್ದಾಗ, ಎಲ್ಲಿ ತಮ್ಮ ವಿರುದ್ಧ ಬ್ರಾಡ್ಮನ್ ಸ್ಕೋರ್ ದಾಟಿ ಹೊಸ ದಾಖಲೆ ನಿಂಬಾಳ್ಕರ್ ಮಾಡಿಬಿಡುತ್ತಾರೋ ಎನ್ನುವ ಶಂಕೆಯಿಂದ ವಿರೋಧಿ ತಂಡವು ಅಂಪೈರುಗಳ ಹತ್ತಿರ ನಾವು ಈ ಮ್ಯಾಚ್ ಸೋತಿದ್ದೇವೆ. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಅವರ ಹತ್ತಿರ ಪ್ರಾರ್ಥಿಸಿಕೊಂಡು ಹೊರಗಡೆ ನಡೆದರು. ವಿಶ್ವ ದಾಖಲೆ ಮಾಡುವ ಅವಕಾಶ ಭಾರತದ ಒಂದು ಟೀಮ್ ಕಳೆದುಕೊಂಡಿತು!

#ವಿಜಯ್ ಹಜಾ಼ರೆ ಭಾರತದ ತಂಡದ ನಾಯಕನಾಗಿದ್ದರು. ಅವರು 1948ರಲ್ಲಿ ಆಸ್ಟ್ರೇಲಿಯಾದ ಅಡಿಲೆಡ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಬ್ರಾಡ್ಮನ್ ತಂಡದ ನಾಯಕನಾಗಿದ್ದಾಗ ಎರಡು ಇನ್ನಿಂಗ್ಸ್‌ನಲ್ಲೂ ಸೆಂಚುರಿ ಬಾರಿಸಿದ ಮೊದಲ ಭಾರತೀಯರಾದರು. 116 ಮತ್ತು 145 ಗಳಿಸಿದ ಹಜಾ಼ರೆ ಬ್ರಾಡ್ಮನ್‌ಗೆ ಬಹಳ ನಿಕಟ ಸ್ನೇಹಿತರಾಗಿದ್ದರು. ಬ್ರಾಡ್ಮನ್ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಕಾಲವಾದರು.

ಅವರಷ್ಟು ಧೀಮಂತ ಕ್ರಿಕೆಟ್ ಆಟಗಾರ ಹಿಂದೆಂದೂ ನೋಡದ ಮುಂದೆಯೂ ಅಷ್ಟು ಶ್ರೇಷ್ಟ ಮಟ್ಟದಲ್ಲಿ ಆಡುವ ಆಟಗಾರ ಬರಲಾರ ಎಂದು ಬಹಳ ಆಟಗಾರರ ನಂಬಿಕೆ. ಆದರೆ ಕ್ರಿಕೆಟ್ ಆಟದ ತರಹಾನೇ ಬ್ರಾಡ್ಮನ್ ಅವರು ಬಂದಹಾಗೆ ಮುಂದೆಯೂ ಎಲ್ಲಿಂದಲೋ ಅವರ ತರಹ ಆಟಗಾರ ಮತ್ತೆ ಹುಟ್ಟಿ ಬರುತ್ತಾರೆಂದು ಜನಗಳ ನಿರೀಕ್ಷೆ. ಹಾಗೆ ಬಂದರೆ ಕ್ರಿಕೆಟ್ ಆಟ ಇನ್ನೂ ರೋಮಾಂಚನವಾಗಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಯಾವ ಸಂದೇಹವಿಲ್ಲ.