ಪಂಜರದ ಗಿಳಿಯೊಳಗೆ ನೆನಪಿನ ಪ್ರಾಣ

‘ಬಕ್ಕಣದಲ್ಲಿ ಬಟಾಣಿ ಕಾಳು
ಇಟ್ಟುಕೊಂಡು ತಿನ್ನುತ್ತಿದ್ದೆವಲ್ಲ ಶಾಲೆಯಲ್ಲಿ
ಯಾರಿಗೂ ಗೊತ್ತಾಗದ ಹಾಗೆ’
ಹೊಸ ಮನೆಯ ಇಎಮ್ಐ
ಕಟ್ಟುವ ತಲೆಬಿಸಿಯಲ್ಲಿ ಕೇಳುತ್ತಾನೆ ಗೆಳೆಯ

ಕೊಯ್ಲಿಗೆ ಬಂದ ಬೆಳೆಗೆ ಕೃಷಿ ಕಾರ್ಮಿಕರು
ಸಿಗದೇ ಬಾಯ್ಲಾಗುತ್ತಿರುವ ತಲೆ ಅಲ್ಲಾಡಿಸುತ್ತ
‘ಹೆಬ್ಬಾರಕ್ಕೋರ ಮಗಳಿಗೆ
ಲವ್ ಲೆಟರಿನಲ್ಲಿ ಇಂತಿ ಬರೆಯದ ನಿನ್ನಿಂದ
ಆದ ಫಜೀತಿ ಆಗಲ್ಲ ಮರೆಯಲಿಕ್ಕೆ’ ನಗುವೆ ಮನಸಾರೆ

ಬೂರ್ಗಳವು ಆಲೆಮನೆ ಹುಲ್ಕೆ
ತೆಳ್ಳೇವು ಅಟ್ಲು ಶೀಕರಣೆ ನೆನಪಿನುಲ್ಕೆ
ಆ್ಯಪ್ ಆ್ಯಪಲ್ ಚಾಟ್ ಜಿಪಿಟಿ
ಬಗ್ಗೆ ಕೇಳಿದರೆ ಮಾತು ಮರೆಸುತ್ತಾ
ಮರು ಸವಾಲು ಎಸೆಯುತ್ತಾನೆ
ಬೆಳೆ ಹೇಗೆ?
ಮತ್ತೆ ಮರಳುತ್ತೇವೆ ಬಾಲ್ಯಕ್ಕೆ
ಬಂತೆ ಮರುಳು ಅಥವಾ ಅರಳುತ್ತಿದ್ದೇವೆಯೋ?

ದುರುಗಜ್ಜ ಮಾಡಿ ಕೊಡುತ್ತಿದ್ದ
ಚೊಂಯ ಚೊಂಯ ಚರ್ಮದ ಚಪ್ಪಲಿ
ಹಯಾತನ ಐದು ಪೈಸೆ ಐಸ್ ಕ್ಯಾಂಡಿ
ಶಿವಪ್ಪ ತರುತ್ತಿದ್ದ ಅಪ್ಪೆ ಮಿಡಿ
ಅಂತೋನಿಮಾಮ್‌ನ ಗೂಡಂಗಡಿಯ ಗೋಲಿಸೋಡಾ
ನೆನಪಿನ ಬಾವಿಗೆ ಜಾರುವೆವು
ಹಗ್ಗ ಇಳಿಬಿಟ್ಟು

ಭೂತಕ್ಕೆ ಭಯದ ಹಂಗಿಲ್ಲ
ಪೂರ್ತ ಅಲ್ಲಿರಲಾಗುವುದಿಲ್ಲ
ಭವಿಷ್ಯದ ವಾಹನವೇರಿ
ಏಳು ಸಮುದ್ರದ ಆಚೆ ಹಾಲು ಸಮುದ್ರ
ಚಿನ್ನದ ಸಮುದ್ರ, ಮುತ್ತಿನ ಸಮುದ್ರ
ದಾಟ ಹೊರಟವರಿಗೆ
ರಿಯರ್ ವ್ಯೂ ಮಿರರ್‌ನಲ್ಲಿ
ಕಾಣುತ್ತಿದೆ ಅಡಿಟಿಪ್ಪಣಿ
‘ಕನ್ನಡಿಯಲ್ಲಿರುವ ವಸ್ತುಗಳು
ಗೋಚರಿಸುವುದಕ್ಕಿಂತ ಹತ್ತಿರದಲ್ಲಿವೆ’