ಕವಲು..

ಕೂಡಿಟ್ಟು ಕೂಡಿಟ್ಟು
ಕಲೆಹಾಕಿದ್ದಕ್ಕೆಲ್ಲ ಲೆಕ್ಕವಿಟ್ಟು
ಬೆನ್ನ ತಟ್ಟಿಕೊಳ್ಳುವುದಕ್ಕಿಂತ
ಮಾಗಿ ಬಾಗಿ ಕಲಿತಿದ್ದೇನೆ
ಮರೆತುಬಿಡುವುದೇ ಲೇಸೆಂದು

ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು

ಬೆನ್ನ ಬಾಗದೆ ನಿಂತು
ಮುಖವ ಕೆಳಗೆ ಹಾಕದೆ ಕನಲಿ
ಸಂಧಾನಕ್ಕೆ ಹಂಬಲಿಸಿ
ದುಷ್ಟಶಕ್ತಿಗಳ ಕಶೇರುಕ ರಜ್ಜೆ
ಮಂಡಲಗಳಲಿ
ತೂರಿ ನಡುಗುವಂತೆ
ಬೆನ್ನ ತಿರುಗಿಸುವುದನ್ನು

ನೇರ ಮಾತುಗಳ ಒಗೆದು
ಒಳಿತನ್ನೇ ಬಗೆದು
ಗೆಲ್ಲಲಾಗದ ಯುದ್ಧಗಳಲಿ
ನಲುಗಿ ಸಿಗದ ಫಲಿತಕ್ಕಾಗಿ
ಹಂಬಲಿಸದೆ
ನಿಲ್ಲಿಸಿದ್ದೇನೆ ಶುರು ಮಾಡುವುದನ್ನು

ಸತ್ಯ ಶೋಧವ ತೋರುವುದಕ್ಕಿಂತ
ಸತ್ಯ ಕಂಡುಕೊಳ್ಳಿರೆಂದು
ದಾರಿಗೆಳೆದು ಅವರನ್ನು
ಕಾಯುವುದನ್ನು ಕಲಿತಿದ್ದೇನೆ
ಅವರೇ ಕಾಣಲೆಂದು
ಆ ಗೆಲುವು ಅವರದೇ ಆಗಲೆಂದು….