ಕಾಲ ನಿಯಮ

ಕರಿಹಾವ ಬಿಲದೊಳಗೆ
ಬಿಳಿದೊಗಲ ಜಾರು ಮೈ
ಗೋಡೆಗಳು ಹೊರಗೊಳಗೆ
ಏರಲಾಗದು ಸಿಗದೆ ಕೈ

ಹಸಿರಿಹುದು ಹೊರಗಿನ ಬಯಲು
ಒಳಗಿಣುಕುತಿಹ ಬೇರು
ದಾಟಲಾಗದ ಬೇಲಿಗಳ ಮೀರಿ
ಕರೆದು ಮಿನುಗುತಿಹ ಬಾನು

ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ

ಎದ್ದು ನಿಂತಿಹ ಎತ್ತರದ ಗೋಪುರಗಳು
ಅಡಗಿಸಿಟ್ಟಿವೆ ನೂರು ಭಾವಗಳು
ಒಂದೊಮ್ಮೆ ಅಭೇದಿತ ಗೋಡೆಗಳು
ಸಿಡಿದು ಹಾರಿವೆ ಇಂದು ಕುದ್ದು ಆಕ್ರೋಶ

ದೂರ ದೂರಕೆ ಜನ್ಮ ಜನ್ಮಾಂತರದ
ಹೊಸತಿಗೆ , ಮರುಹುಟ್ಟಿಗೆ
ಒಡಲಾಳದ ಒತ್ತಡದಿ ವಿಷಯ
ವಸ್ತುಗಳ ಬಯಸಿ ಮುರಿದು ನೇಮನಿಷ್ಠೆ

ಹೊಸತಾಗುತ್ತವೆ ಮರಳಿ ಪ್ರಕೃತಿ ಬಯಲು, ಬಾನು
ಪರಂಪಾನುಗತ ಸಂಪ್ರದಾಯಗಳನು ಮೀರಿ
ಹೊಸ ಧಾರಣೆ, ಚಿತಾವಣೆ, ಇಲ್ಲದಿರುವುದೆ
ಕಾಲನಿಯಮದಲಿ ಬದಲಾಗದ್ದು ಏನು?