ಗಾಳ ಹಾಕಿ ಕೂತ ಮನಸು…

ಗಾಳ ಹಾಕಿ ಕೂತ ಮನಸ
ಜಾಳು ಜಾಳು ಬಲೆಯ ತುಂಬ
ಸಿಕ್ಕ ನೆನಪುಗಳು ವಿಲ ವಿಲ

ಪರ್ವತಗಳು ಪುಡಿಯಾಗಿ ಸಿಡಿದು
ಹಡೆದ ಮರುಭೂಮಿಯಲ್ಲಿ
ಸೂರ್ಯ ಉರಿದು ಕರಗಿ
ನಡುಗಿ ಇಳಿಯುತಿರುವಲ್ಲಿ
ಕಡುಗಪ್ಪು ಬಣ್ಣದ ವೃತ್ತ
ಭುವಿಯ ಕುದಿಯೆಲ್ಲ ಉಕ್ಕಿ
ರಂಧ್ರಗನ್ನಡಿ ಕೊರೆದು ಕಣ್ಣೀರಿನಲಿ
ಸೃಷ್ಟಿಸಿದಂತಹ ಪುಟ್ಟ ಕೊಳ
ಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲ
ದಂಡೆಯಿರದ ತೀರ
ಬೇರೊಂದು ಲೋಕಕ್ಕೆ ಒಯ್ಯಲು
ತೆರೆದಂತೆ ಬಾಗಿಲಾಗಿ ಕರೆವಲ್ಲಿ
ತಲೆ ಮೇಲೆತ್ತಿ ನೋಡಲು
ಆಗಸದಲಿ ಮೋಡ, ತಾರೆಗಳಿಲ್ಲ

ಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆ
ತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆ
ದಶಕಗಳಿಗೂ ಮುಂಚೆ
ಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿ
ಒಂದು ಬಾಗಿ ನನ್ನ ತಲೆ ಸವರಿದಂತೆ
ಹಿಡಿದು ಬಿಡಲು ಸೆಣೆಸುತ್ತೇನೆ
ಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತು
ಆತಿಡಿದು ಜೋತುಬೀಳಲು ಮನಸಿನಲಿ
ಕನಸುಗಳು ಗೂಡು ಕಟ್ಟಲಾಗಲಿಲ್ಲ

ಮತ್ತೇನೋ ತಡಕುತ್ತದೆ ಬಹು
ಆಳದ ತಳದಲ್ಲಿ ಭಾರೀ ತೂಕದ ವಸ್ತು
ಅದರ ನೆನಪೆಲ್ಲ ಹೇಳುವುದು ದುಃಖದ
ಕತೆ, ಅಳಲು, ಅಸಹಾಯಕತೆ
ಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿ
ಒಳಗಿಳಿದು ನೋಡಿದರೆ ನನ್ನದೇ ಕಥೆ

ಹೋಗಿ ಸೇರಲು ರಸ್ತೆ ಕಡಿದು
ಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ
-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿ
ಕತ್ತಲು ಸೂರ್ಯನ ಕರಗಿಸಿ
ಬಾನನ್ನು ತಿಂದು ತೇಗಿ
ಪ್ರೇತದಂತಹ ಚಂದ್ರನ ತೂಗುಬಿಟ್ಟಿದೆ

ಗಾಳವನು ಸರಕ್ಕನೆ ಎಳೆದು ತಲೆಯೆತ್ತಿ
ದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿ
ಗಾಳವೆಸೆದು ಕೂರುತ್ತೇನೆ ಮತ್ತೆ
ಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?

ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ….