ಅವನು ಒಂದು ದಿನ ಹೀಗೆ ಯೋಚಿಸುತ್ತಾನೆ: ತಾನು ಮಂದೆ ದೊಡ್ಡವನಾದಮೇಲೆ ಬಹಳ ಪ್ರಸಿದ್ಧ ವ್ಯಕ್ತಿಯಾದರೆ ಹೇಗಿರಬಹುದು, ಜನರೆಲ್ಲಾ ತನ್ನನ್ನು ಗುರುತಿಸುತ್ತಾರೆ, ಎಲ್ಲರಿಗೂ ತಾನೆಂದರೆ ಯಾರು ಅಂತ ತಿಳಿದಿರುತ್ತದೆ. ಹಾಗೆ ತನ್ನ ಹುಟ್ಟಿದ ಹಬ್ಬದಂದು ರಜಾ ದಿನ ಕೂಡಾ ಘೋಷಣೆಯಾಗಬಹುದು. ಅದು ಸಂತಸದ ವಿಷಯವೇ ಆದರೂ ಕೆಲವು ತನಗೆ ಮುಜುಗರ ತರಿಸಬಹುದು. ಉದಾಹರಣೆಗೆ – ‘ಗ್ರೆಗ್ ದಿನದ ಮೆಗಾ ಸೇಲ್. ಕಾಚಾ ಬನಿಯನ್ ಮೇಲೆ ಎಷ್ಟೋ ಪ್ರತಿಶತ ಕಡಿತ’ ಅನ್ನೋ ತರಹದ ಜಾಹಿರಾತುಗಳು ಬಂದು ತನ್ನ ಹುಟ್ಟುಹಬ್ಬಕ್ಕೆ ಬೆಲೆಯೇ ಇರದ ಸನ್ನಿವೇಶ ಬರಬಹುದು ಎಂದೂ ಚಿಂತಿಸುತ್ತಾನೆ.
‘ಓದುವ ಸುಖ’ ಅಂಕಣದಲ್ಲಿ “ಡೈರಿ ಆಫ್‌ ಅ ವಿಂಪಿ ಕಿಡ್ಸ್‌” ಸರಣಿಯ ಕುರಿತು ಗಿರಿಧರ್ ಗುಂಜಗೋಡು ಬರಹ

 

ನನಗೆ ಸುಮಾರು ೫ ವರ್ಷಗಳಾಗಿದ್ದಾಗ ಅಪ್ಪ ಚಿತ್ರಸಹಿತ ವಿವರಣೆ ಇರುವ ವಿವಿಧ ನೀತಿಕಥೆಗಳಿರುವ ಪುಸ್ತಕಗಳ ತಂದುಕೊಟ್ಟಿದ್ದ. ಆಗ ಸರಿಯಾಗಿ ಓದಲು ಬಾರದ ಕಾರಣ ಮನೆಯವರು ಯಾರಾದರೂ ಓದಿ ಹೇಳುತ್ತಿದ್ದರು. ಅದಾದಮೇಲೆ ಬಾಲಮಂಗಳ, ಚಂಪಕ, ಚಂದಮಾಮ, ಬಾಲಮಿತ್ರ ಇತ್ಯಾದಿ ಮಕ್ಕಳ ಪತ್ರಿಕೆಗಳನ್ನೂ ಹಾಗೂ ಬೇರೆ ಬೇರೆ ಮಕ್ಕಳ ಪುಸ್ತಕಗಳ ಓದುತ್ತಿದ್ದೆ. ಈ ಅಭ್ಯಾಸ ದೊಡ್ಡವನಾದಮೇಲೂ ಬಿಡಲಿಲ್ಲ. ನನಗೆ ಈಗಲೂ ಮಕ್ಕಳ ಪುಸ್ತಕಗಳೆಂದರೆ ಬಹಳ ಇಷ್ಟ. ಎಲ್ಲೇ ಮಕ್ಕಳ ಪುಸ್ತಕಗಳು ಸಿಕ್ಕರೂ ಓದದೇ ಬಿಡುವುದಿಲ್ಲ. ಮಕ್ಕಳ ಪುಸ್ತಕಗಳನ್ನು ಓದುವಷ್ಟು ಕ್ಷಣವಾದರೂ ಪುನಃ ಬಾಲ್ಯಕ್ಕೆ ಹಿಂದಿರುಗುವುದು, ಮಕ್ಕಳಂತೆ ಯೋಚನೆ ಮಾಡುವುದು ನನಗೆ ಬಹು ಇಷ್ಟದ ಸಂಗತಿ. ಮಕ್ಕಳ ಪುಸ್ತಕಗಳೆಂದರೆ ಬರೀ ಬೊಂಬೆಚಿತ್ರ, ರಮ್ಯ ಕಥಾಲೋಕ ಇತ್ಯಾದಿಗಳೇ ಆಗಬೇಕೆಂದಿಲ್ಲ. ಮಕ್ಕಳಿಗಾಗಿ ಬರೆದ ವಿಜ್ಞಾನ, ಭೂಗೋಳ ಇತ್ಯಾದಿ ಸಂಬಂಧಿತ ವಿಷಯಗಳೂ ಬಹಳ ಇಷ್ಟ ನನಗೆ. ಕನ್ನಡದಲ್ಲಿ ಅನೇಕ ಉತ್ತಮವಾದ ಮಕ್ಕಳ ಸಾಹಿತ್ಯ ಬರ್ತಾ ಇದ್ದರೂ ಅಲ್ಲಿ ನಾವು ಬೆಳವಣಿಗೆ ಹೊಂದಬೇಕಾದುದು ಬಹಳ ಇದೆ ಅನ್ನುವುದು ನನ್ನ ಅಭಿಪ್ರಾಯ.

ನಾನು ಓದಿದ ಈ ಪ್ರಕಾರದ ಪುಸ್ತಕಗಳಲ್ಲಿ ಹೆಚ್ಚೂಕಮ್ಮಿ ಎಲ್ಲಾ ಪುಸ್ತಕಗಳು ಕನ್ನಡ ಪುಸ್ತಕಗಳೇ. ಚಿಕ್ಕವನಿದ್ದಾಗ ನನಗೆ ಅಷ್ಟು ಇಂಗ್ಲಿಷ್ ಅರ್ಥವಾಗ್ತಾ ಇರಲಿಲ್ಲ. ದೊಡ್ಡವನಾದಮೇಲೂ ಅಷ್ಟೇನೂ ಆಸಕ್ತಿ ಕೆರಳಿಸಲಿಲ್ಲ. ಅದಕ್ಕೇ ನನಗೆ ನನ್ನ ಓರಗೆಯವರು ಬಹುಮೆಚ್ಚಿದ ಇಂಗ್ಲಿಷ್ ಸಾಹಿತ್ಯದ ಮಕ್ಕಳ ಕಥಾಲೋಕ ಬಹುತೇಕ ಅಪರಿಚಿತವೇ.

೨೦೧೪ ಕೊನೆ ತಿಂಗಳು ಅಥವಾ ೨೦೧೫ ಆರಂಭದಲ್ಲಿ ರಲ್ಲಿ ಒಂದು ದಿನ ಮೈಸೂರಿನ ಸಪ್ನಾ ಮಳಿಗೆಗೆ ಹೋಗಿದ್ದೆ. ಮೆಟ್ಟಿಲು ಹತ್ತುತ್ತಾ ಕನ್ನಡ ಪುಸ್ತಕಗಳಿರುವ ಮೇಲಿನ ಮಾಳಿಗೆಗೆ ಹೋಗುತ್ತಿರಬೇಕಾದರೆ ಒಂದನೆ ಮಹಡಿಯ ಮೆಟ್ಟಿಲಿನ ಪಕ್ಕದಲ್ಲೇ ಪೇರಿಸಿಟ್ಟ ಜೆಫ್ ಕೆನ್ನಿ ಅನ್ನುವವರು ಬರೆದ ‘Dairy of a Wimpy Kid – Long Haul’ ಅನ್ನುವ ಪುಸ್ತಕವೊಂದು ಕಂಡಿತ್ತು. ಹೀಗೆ ಎರಡು ಪುಟ ತಿರುಗಿಸಿದೆ ಕೂತೂಹಲಕರವಾಗಿ ಕಂಡಿತು. ಅದು ಆ ಪುಸ್ತಕ ಸರಣಿಯ ಒಂಬತ್ತನೇ ಪುಸ್ತಕವಾಗಿದ್ದರೂ ಈ ಕತೆಗೆ ಹಿಂದಿನ ಭಾಗದ ಹಂಗಿಲ್ಲದಂತೆ ಅನ್ನಿಸಿದ ಕಾರಣ ಎತ್ತಿ ಬುಟ್ಟಿಗೆ ಹಾಕಿಕೊಂಡೆ. ಮನೆಗೆ ಬಂದು ಓದಲು ತೊಡಗಿದ ಮೇಲೆ ಬರೀ ಮನೋರಂಜನೆಯ ಹೊತ್ತಿಗೆಯಾಗಿ ಮಾತ್ರವಲ್ಲ ಇನ್ನೂ ಬೇರೆ ಕಾರಣಗಳಿಗಾಗಿ ಈ ಸರಣಿಯ ಪುಸ್ತಕಗಳು ಇಷ್ಟವಾಗತೊಡಗಿದವು.

ಮೊದಲಿಗೆ ಈ ಸರಣಿ ಏನು ಎನ್ನುವುದನ್ನು ಚಿಕ್ಕದಾಗಿ ಹೇಳಿಬಿಡುತ್ತೇನೆ. ಅಮೆರಿಕಾದ ಯಾವುದೋ ಒಂದು ನಗರದಲ್ಲಿರುವ (ಪ್ರಾಯಶಃ ಪೂರ್ವ ಕರಾವಳಿ) ಅಪ್ಪ ಅಮ್ಮ ಮತ್ತು ಮೂವರು ಮಕ್ಕಳ ಒಂದು ಚಿಕ್ಕ ಸಂಸಾರ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವ ಎರಡನೆಯ ಮಗನೇ ಗ್ರೆಗರಿ, ಈ ದಿನಚರಿ ಅಥವಾ ಡೈರಿ ಬರೆಯುವವನು. ಅವನ ನಿರೂಪಣೆಯಲ್ಲೇ ಇಡೀ ಕಥನ ಸಾಗುತ್ತದೆ. ಮಕ್ಕಳನ್ನು ಮತ್ತು ಕುಟುಂಬವನ್ನು ತುಂಬಾ ಪ್ರೀತಿಸುವ ಮತ್ತು ಅವರ ಬಗ್ಗೆ ಮತ್ತು ಕುಟುಂಬದ ಬಗ್ಗೆ ಅತೀವವಾದ ಕಾಳಜಿ ಹೊಂದಿರುವ, ಕುಟುಂಬದ ಸದಸ್ಯರ ನಡುವೆ ಸದಾ ಅನ್ಯೋನ್ಯ ಸಂಬಂಧ ಬಯಸುವ, ಮಕ್ಕಳಿಗೆ ಹಾಳು ಮೂಳು ಆಹಾರ ಕೊಡದೇ ಏನೂ ರುಚಿಯಿಲ್ಲದ ಆರೋಗ್ಯಕರ ಆಹಾರ ಕೊಡುವ ಅಮ್ಮ. ಸ್ವಲ್ಪ ಗಡಿಬಿಡಿ ಸ್ವಭಾವದ, ಹೆಂಡತಿ ಮಕ್ಕಳ ಉಪದ್ರವದಿಂದ ಕೆಲವೊಮ್ಮೆ ಸ್ವಲ್ಪ ಕಿರಿಕಿರಿಗೊಂಡಂತೆ ವರ್ತಿಸುವ, ಮಕ್ಕಳಿಗೆ ವಿಡೀಯೋ ಗೇಂ ಆಡಲು ಬಿಡದೇ ನಿಜವಾದ ಆಟಗಳೆಡೆ ಸಳೆಯಲು ಪ್ರಯತ್ನಿಸೋ ಅಪ್ಪ. ಸ್ವಲ್ಪ ಉಡಾಳನೂ, ಗೆಳೆಯರ ಸಹವಾಸದಿಂದ ಸ್ವಲ್ಪ ಪೋಲಿ ಬಿದ್ದಿರುವ ಸಂಗೀತದ ಬ್ಯಾಂಡ್ ಒಂದರಲ್ಲಿ ಕೆಲಸ ಮಾಡುವ, ತಮ್ಮಂದಿರಿಗೆ ಆಗಾಗ ಕೀಟಲೆ ಮಾಡುತ್ತಿರುವ, ಈಗಷ್ಟೇ ಹದಿಹರೆಯ ಪ್ರವೇಶಿಸಿರುವ ಅಣ್ಣ. ಸದ್ಯ ಚಿಕ್ಕವನಾದ, ತಂದೆ ತಾಯಂದಿರಿಂದ ಚೂರು ಜಾಸ್ತಿ ಮುದ್ದು ಪಡೆಯುತ್ತಿರುವ ಆಗಾಗ ಅಣ್ಣಂದಿರನ್ನು ಫಜೀತಿಗೆ ಸಿಕ್ಕಿಸುವ ತಮ್ಮ. ಇದು ಕುಟುಂಬದ ಮುಖ್ಯ ಪಾತ್ರಗಳಾದರೆ ಗ್ರೆಗ್‌ನ ಆತ್ಮೀಯ ಗೆಳೆಯ ರೌಲಿ, ಅವನ ಇತರ ಕೆಲ ಗೆಳೆಯರು, ಕ್ರಶ್‌ಗಳು, ಸಂಬಂಧಿಕರು ಇತ್ಯಾದಿಗಳು ಉಳಿದ ಪಾತ್ರವರ್ಗ.

ನಮ್ಮ ಕಥಾನಾಯಕನಾದ ಗ್ರೆಗ್ ಯಾವತ್ತೂ ಆತ್ಮವಂಚನೆ ಮಾಡಿಕೊಳ್ಳದೇ ಎಲ್ಲವನ್ನೂ ತನ್ನ ದಿನಚರಿಯಲ್ಲಿ ಬರೆಯುತ್ತಾನೆ. ಅವನು ಫಜೀತಿಗೆ ಸಿಲುಕಿದ, ನಾಲ್ಕು ಜನರ ಮುಂದೆ ಮರ್ಯಾದಿ ತೆಗೆಸಿಕೊಂಡ, ಅಪ್ಪ ಅಮ್ಮನ ಮುಂದೆ ಸಿಕ್ಕಿ ಹಾಕಿಕೊಂಡ ಘಟನೆಗಳೇ ಬಹಳವಾದರೂ ಅವೆಲ್ಲವನ್ನೂ ಪ್ರಾಮಾಣಿಕವಾಗಿಯೇ ಬರೆಯುತ್ತಾನೆ. ಈ ಸರಣಿಯಲ್ಲಿ ಈವರೆಗೆ ಒಟ್ಟೂ ಹದಿನಾರು ಪುಸ್ತಕಗಳು ಬಂದಿವೆ. ಇನ್ನುವರೆಗೂ ಸಾಕು ಎಂದು ಅನ್ನಿಸಿಲ್ಲ. ಅನೇಕ ಘಟನೆಗಳು ನಕ್ಕು ನಲಿಯುವಂತೆ ಮಾಡಿದರೆ ಇನ್ನೂ ಕೆಲವು ಘಟನೆಗಳು ಪರೋಕ್ಷವಾಗಿ ಚಿಂತನೆಗೆ ಹಚ್ಚುತ್ತವೆ.

ಆ ಪುಸ್ತಕ ಸರಣಿಯ ಒಂಬತ್ತನೇ ಪುಸ್ತಕವಾಗಿದ್ದರೂ ಈ ಕತೆಗೆ ಹಿಂದಿನ ಭಾಗದ ಹಂಗಿಲ್ಲದಂತೆ ಅನ್ನಿಸಿದ ಕಾರಣ ಎತ್ತಿ ಬುಟ್ಟಿಗೆ ಹಾಕಿಕೊಂಡೆ. ಮನೆಗೆ ಬಂದು ಓದಲು ತೊಡಗಿದ ಮೇಲೆ ಬರೀ ಮನೋರಂಜನೆಯ ಹೊತ್ತಿಗೆಯಾಗಿ ಮಾತ್ರವಲ್ಲ ಇನ್ನೂ ಬೇರೆ ಕಾರಣಗಳಿಗಾಗಿ ಈ ಸರಣಿಯ ಪುಸ್ತಕಗಳು ಇಷ್ಟವಾಗತೊಡಗಿದವು.

ಉದಾಹರಣೆಗೆ, ಅವನು ಒಂದು ದಿನ ಹೀಗೆ ಯೋಚಿಸುತ್ತಾನೆ. ತಾನು ಮಂದೆ ದೊಡ್ಡವನಾದಮೇಲೆ ಬಹಳ ಪ್ರಸಿದ್ಧ ವ್ಯಕ್ತಿಯಾದರೆ ಹೇಗಿರಬಹುದು ಎಂದು. ಜನರೆಲ್ಲಾ ತನ್ನನ್ನು ಗುರುತಿಸುತ್ತಾರೆ, ಎಲ್ಲರಿಗೂ ತಾನೆಂದರೆ ಯಾರು ಅಂತ ತಿಳಿದಿರುತ್ತದೆ. ಹಾಗೆ ತನ್ನ ಹುಟ್ಟಿದ ಹಬ್ಬದಂದು ರಜಾ ದಿನ ಕೂಡಾ ಘೋಷಣೆಯಾಗಬಹುದು. ಅದು ಸಂತಸದ ವಿಷಯವೇ ಆದರೂ ಕೆಲವು ತನಗೆ ಮುಜುಗರ ತರಿಸಬಹುದು. ಉದಾಹರಣೆಗೆ – ‘ಗ್ರೆಗ್ ದಿನದ ಮೆಗಾ ಸೇಲ್. ಕಾಚಾ ಬನಿಯನ್ ಮೇಲೆ ಎಷ್ಟೋ ಪ್ರತಿಶತ ಕಡಿತ’ ಅನ್ನೋ ತರಹದ ಜಾಹಿರಾತುಗಳು ಬಂದು ತನ್ನ ಹುಟ್ಟುಹಬ್ಬಕ್ಕೆ ಬೆಲೆಯೇ ಇರದ ಸನ್ನಿವೇಶ ಬರಬಹುದು ಎಂದೂ ಚಿಂತಿಸುತ್ತಾನೆ.

ಹಾಗೇ ತನ್ನ ಶಾಲೆಯಲ್ಲಿರುವ ಇನ್ನೂರು ಚಿಲ್ಲರೆ ಜನರಲ್ಲಿ ಪ್ರಸಿದ್ಧರಾಗಿರುವ ವಿದ್ಯಾರ್ಥಿಗಳ ಒಂದು ಪಟ್ಟಿ ಮಾಡಿದರೆ ತನ್ನ ಸ್ಥಾನ ಎಷ್ಟಿರಬಹುದು? ತನ್ನ ಗೆಳೆಯ ರೌಲಿಯದ್ದು ಎಷ್ಟಿರಬಹುದು? ತಾನು ಶಾಲೆಯಲ್ಲಿ ಪ್ರಸಿದ್ಧ ಹುಡುಗನಾಗಲು, ಹುಡುಗಿಯರ ಮನ ಗೆಲ್ಲಲು ಏನೇನೆಲ್ಲಾ ಮಾಡುವುದು ಎಂಬ ಯೋಚನೆ ಹಾಕುತ್ತಾನೆ.

ನಾವು ಶಾಲೆಗೆ ಹೋಗುತ್ತಿದ್ದಾಗ ಅಕಸ್ಮಾತ್ ದಾರಿಯಲ್ಲಿ ನಾಯಿಯ‌ ಮಲವನ್ನೋ ಅಥವಾ ಇನ್ಯಾವುದಾದರೂ ಗಲೀಜನ್ನು ಮೆಟ್ಟಿಬಿಟ್ಟರೆ ಅವನು ಗಲೀಜಾಗುತ್ತಿದ್ದ. ಅದರಿಂದ ತಪ್ಪಿಸಿಕೊಳ್ಳಲು ಉಳಿದವರು ಹಸಿರು ಬಣ್ಣದ ಯಾವುದಾದರೂ ವಸ್ತುಗಳ ಮುಟ್ಟಿಕೊಂಡಿರಬೇಕಾಗಿತ್ತು. ಒಮ್ಮೆ ಯಾರಾದರೂ ಹಸಿರು ಮುಟ್ಟಿರದಿದ್ದಾಗ ಅವರನ್ನು ಈ ಮೈಲಿಗೆಯಾದ ಹುಡುಗ ಮುಟ್ಟಿದರೆ ಅದು ಆ ಹುಡುಗನಿಗೆ ವರ್ಗಾವಣೆಯಾಗುತ್ತಿತ್ತು. ಅದೆ ತರಹದ ವಿಚಾರ ಈ ಸರಣಿಯಲ್ಲಿ ಬರುತ್ತದೆ. ಆದರೆ ಇಲ್ಲಿ ಒಂದು ಹಳೆಯದಾದ ಚೀಸಿನ ತುಂಡನ್ನು ಮೆಟ್ಟಿದವರಿಗೆ ಮೈಲಿಗೆ ಅಂಟುತ್ತದೆ. ಇಂತಹ ಹಲವಾರು ಮುಗ್ಧ ಮನಸ್ಸಿನ ಹುಡುಗಾಟಗಳ ಬಗ್ಗೆ ನಕ್ಕು ನಲಿಸುವ ಚಿತ್ರಣಗಳಿವೆ.

ಇಲ್ಲಿ ನಿರೂಪಕನಾದ ಗ್ರೆಗ್ ಬರೆದಿರುವ (ಅಥವಾ ಲೇಖಕರಾದ್ ಜೆಫ್ ಕೆನ್ನಿ ಬರೆದಿರುವ) ಅದೆಷ್ಟೋ ಘಟನೆಗಳು ನಮ್ಮ‌ ಬಾಲ್ಯದಲ್ಲೂ ನಡೆದಿವೆ, ನಾವು ಯಾರಲ್ಲೂ ಹೇಳಿಕೊಳ್ಳದ ಆದರೆ ನಮ್ಮೊಳಗೆ ಹಲವಾರಿ ಬಾರಿ ಯೋಚಿಸಿದ ಯೋಚನೆಗಳು, ಕಳ್ಳಬುದ್ಧಿಗಳು ಇತ್ಯಾದಿಗಳನ್ನು ನಮ್ಮ ಮನಸ್ಸಿನಿಂದ ಹೆಕ್ಕಿ ತೆಗೆದು ಅಕ್ಷರ ರೂಪಕ್ಕೆ ತಂದಂತಿವೆ.

ಪಾಶ್ಚಿಮಾತ್ಯರಿಗೆ ನಮ್ಮ ದೇಶದ ಬಗ್ಗೆ ಏನೇನೋ ಕಲ್ಪನೆಗಳಿರುವಂತೆ ನಮಗೂ ಪಾಶ್ಚಾತ್ಯ ದೇಶಗಳ ಜನರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿರುತ್ತವೆ. ಅವರು ನಮ್ಮ ಬಗ್ಗೆ ತಪ್ಪು ತಿಳಿದುಕೊಂಡಾಗ ಅಂದರೆ ಭಾರತವೆಂದರೆ ಹಾವಾಡಿಗರ ದೇಶ, ಬರೀ ಮೂಢನಂಬಿಕೆಗಳಿಂದ ಕೂಡಿದ ದೇಶ ಎಂಬಿತ್ಯಾದಿ ಮಾತುಗಳ ಹೇಳಿದಾಗ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ಳುವ ನಾವು ಅವರ ಬಗ್ಗೆ ಅನೇಕ ತಪ್ಪು ಕಲ್ಪನೆಯನ್ನು ಮಾಡಿಕೊಂಡು ಆರಾಮಾಗಿ ನಾಲ್ಕು ಜನರ ಮುಂದೆ ಹರಡುತ್ತೇವೆ. ಮುಖ್ಯವಾಗಿ ಅಲ್ಲಿನವರಿಗೆ ಕೌಟುಂಬಿಕ ಅನುಬಂಧ ಇರುವುದಿಲ್ಲ, ತಂದೆ ತಾಯಿ ಮಕ್ಕಳ ನಡುವೆ ಆತ್ಮೀಯತೆ ಇರುವುದಿಲ್ಲ ಇತ್ಯಾದಿ ಇತ್ಯಾದಿ. ಪಾಶ್ಚಾತ್ಯ ದೇಶಗಳ ಕುರಿತ ನಮ್ಮ ಅದೆಷ್ಟೋ ಕಲ್ಪನೆಗಳು ತಪ್ಪು ಅನ್ನುವುದು ನಮಗೆ ಪರೋಕ್ಷವಾಗಿ ಗೊತ್ತಾಗುತ್ತದೆ. ನಮ್ಮಂತೆ ಅಲ್ಲೂ ಮಕ್ಕಳ ಬಗ್ಗೆ ಮತ್ತು ಅವರ ಭವಿಷ್ಯದ ಬಗ್ಗೆ ಕಾಳಜಿ ಮಾಡುವ ಅಮ್ಮ ಇರ್ತಾಳೆ, ಒಬ್ಬ ತರಲೆ ಅಣ್ಣ ಇರುತ್ತಾನೆ, ಸ್ಟ್ರಿಕ್ಟ್ ಆಗಿ ಇರಲು ಯತ್ನಿಸೋ ಅಪ್ಪ ಇರುತ್ತಾನೆ. ಮುಖ್ಯವಾಗಿ ನಮ್ಮಂತೆಯೆ ಅವರು ಅವರಂತೆಯೇ ನಾವು ಹಾಗೂ ನಾವೆಲ್ಲರೂ ಮನುಷ್ಯರು ಅನ್ನೋ ವಿಚಾರ ಗಟ್ಟಿಯಾಗುತ್ತದೆ.

ಅದೇ ರೀತಿ ನಮಗೆ ಅಲ್ಲಿನ ಎಷ್ಟೋ ಸಂಸ್ಕೃತಿ ವಿಚಾರಗಳ ಕುರಿತ ಪರಿಚಯ ಇರುವುದಿಲ್ಲ. ಅಲ್ಲಿನ ಎಷ್ಟೋ ಜನರಿಗೆ ನಮ್ಮ ಅನೇಕ ಹಬ್ಬಗಳ ಆಚರಣೆಗಳು ಅಪರಿಚಿತವಾಗಿರುವವೋ ಹಾಗೇ ನಮಗೆ ಅಲ್ಲಿನ ಹ್ಯಾಲೋವೀನ್ ಇತ್ಯಾದಿ ಆಚರಣೆಗಳು ಅಷ್ಟೇ ಅಪರಿಚಿತವಾಗಿರುತ್ತದೆ. ನಾನು ಈ ಸರಣಿಯ ಪುಸ್ತಕಗಳ ಓದಲು ಶುರುಮಾಡಿ ಒಂದೂ ಒಂದೂವರೆ ವರ್ಷಗಳಲ್ಲಿ ನಾನು ಅಮೆರಿಕಾಕ್ಕೆ ಹೋಗಬೇಕಾಗಿ ಬಂತು. ಅಲ್ಲಿನ ಎಷ್ಟೋ ವಿಚಾರಗಳು ಅಲ್ಲಿ ಹೋಗುವ ಮೊದಲು ನನಗೆ ಪರಿಚಿತವಾಗಿದ್ದವು.

ದೊಡ್ಡ ನಗರಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳಿಗೆ ಈ ಸರಣಿ ಪರಿಚಿತ. ಆದರೆ ಇವು ಕೇವಲ ಮಕ್ಕಳಿಗೆ ಮಾತ್ರ ಓದಲು ಇರುವವು ಅಂತ ನನಗೆ ಅನ್ನಿಸಿಲ್ಲ. ಚಿಕ್ಕ ಮಕ್ಕಳಿರುವವರು ಮಕ್ಕಳಿಗೆ ಓದಿಸುತ್ತಾ ನಾವೂ ಆನಂದಿಸಬಹುದು. ಇಲ್ಲವಾದರೆ ಯಾವತ್ತಾದರೂ ಪ್ರಪಂಚದ ಜಂಜಡಗಳ ಬಗ್ಗೆ ಬೇಸರವಾದಾಗ ಈ ಪುಸ್ತಕಗಳ ಓದುತ್ತಾ ಬಾಲ್ಯಕಾಲಕ್ಕೆ ಹೋಗಿ ನಮ್ಮ‌ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಪ್ರಯತ್ನಿಸಿ ನೋಡಿ ಒಮ್ಮೆ!