ನನಗೆ ಆಪ್ತರಾಗಿರುವ ಲೇಖಕ ಎಂ. ಪೆಜತ್ತಾಯ ಅವರು, ಈಚೆಗೆ ತಮ್ಮ ನಾಯಿಯ ಮೇಲೆ ಬರೆದಿರುವ ಪುಸ್ತಕ ಕಳಿಸಿಕೊಟ್ಟರು. ನನಗೆ ತಿಳಿದಂತೆ ನಾಯಿಯ ಬಗ್ಗೆ ಕನ್ನಡದಲ್ಲಿ ಬಂದಿರುವ  ಮೊದಲ ಜೀವನ ಚರಿತ್ರೆಯಿದು. ಒಂದು ಪ್ರಾಣಿಯ ಜತೆಗೆ ಇಷ್ಟೊಂದು ಆಳವಾದ ಸಂಬಂಧ ಸಾಧ್ಯವೇ ಎಂದು ಸೋಜಿಗ ಪಡುವಂತೆ ಇಲ್ಲಿನ ಅನುಭವ ಆಪ್ತವಾಗಿದೆ. ಭಾವುಕವಾಗಿದೆ.
ಇದನ್ನು ಓದುವಾಗ, ನನಗೊಂದು ಘಟನೆ ನೆನಪಾಯಿತು. ಅದೊಂದು ಪಿ.ಎಚ್‌.ಡಿ. ಅಭ್ಯರ್ಥಿಗಳ ಜತೆಗಿನ ಚರ್ಚೆ ಸಂದರ್ಭ. ಅಭ್ಯರ್ಥಿಗಳು ಯಾವ್ಯಾವ ವಿಷಯದ ಮೇಲೆ ಅಧ್ಯಯನ ಮಾಡಬಯಸಿದ್ದಾರೆ ಎಂದು ಕೇಳುತ್ತಿರುವಾಗ, ಒಬ್ಬ ತರುಣ, ‘ಕನ್ನಡ ಸಾಹಿತ್ಯದಲ್ಲಿ ನಾಯಿ’ ಎಂದನು. ಸಭೆಯಲ್ಲಿ ನಗು ಉಕ್ಕಿತು. ತರುಣನು ಗುರುಗುರು ಎನ್ನುತ್ತಿದ್ದನು. ಮಿತ್ರರೊಬ್ಬರು ನಗು ತಡೆದುಕೊಂಡು ‘ಇದಕ್ಕೆ ಅವಕಾಶ ಕೊಟ್ಟರೆ, ನಾಳೆ ಕನ್ನಡ ಸಾಹಿತ್ಯದಲ್ಲಿ ಬೆಕ್ಕು, ಕೋಳಿ, ಹಂದಿ, ನೊಣ ಎಂಬ ವಿಷಯಗಳು ಬರೋಕೆ ಶುರುವಾಗ್ತವೆ’ ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ನಾನು ಕೂಡ ಬರುತ್ತಿದ್ದ ನಗುವನ್ನು ತಡೆದುಕೊಂಡೆ.

ಆಮೇಲೆ ಯೋಚಿಸಿದೆ. ಹೌದು. ಯಾಕಾಗಬಾರದು ಈ ವಿಷಯ? ಕೆಲವು ವಿಷಯಗಳ ಹೆಸರು ಕೇಳಿದ ಕೂಡಲೆ ಯಾಕೆ ನಗು ಬರುತ್ತದೆ? ಯಾಕವು ಚಿಲ್ಲರೆ ಅನಿಸುತ್ತವೆ? ನಾಯಿ ಕುರಿತ ನಮ್ಮ ಮಮಕಾರ ಮತ್ತು ಪೂರ್ವಗ್ರಹಗಳು ನಮ್ಮ ಸ್ವಂತವೇನಲ್ಲ. ನಾವು ಹುಟ್ಟಿಬೆಳೆದ ಸಮಾಜ ನಮ್ಮ ಮನಸ್ಸಿಗೆ ಕೆಟ್ಟ-ಒಳ್ಳೆಯ, ನೀಚ-ಶ್ರೇಷ್ಠ, ಸುಂದರ-ಕುರೂಪವೆಂದು ಕಲಿಸಿದ ಪಾಠಗಳನ್ನು ನಾವು ಅಭಿನಯ ಮಾಡುತ್ತಿದ್ದೇವಷ್ಟೆ. ಗಂಭೀರವೆನಿಸುವ ವಿಷಯವಿಟ್ಟುಕೊಂಡು ಹಾಸ್ಯಾಸ್ಪದ ಅಧ್ಯಯನ ಮಾಡಿದ ಎಷ್ಟು ನಿದರ್ಶನಗಳಿಲ್ಲ? ಕೇಳಲು ಹಾಸ್ಯಾಸ್ಪದ ಎನಿಸುವ ವಿಷಯದ ಮೇಲೆ ಅರ್ಥಪೂರ್ಣ ಅಧ್ಯಯನವನ್ನು ಎಷ್ಟು ಜನ ಮಾಡಿಲ್ಲ? ನಾಯಿಯ ಮೇಲೆ ಸಂಶೋಧನೆ ಮಾಡಲು ಆ ತರುಣನಿಗೆ ಸಾಧ್ಯವಾಯಿತೊ ಇಲ್ಲವೊ? ಆದರೆ ಒಂದು ಶ್ವಾನಸಂಶೋಧನೆಯನ್ನು ಕೈದುಮಾಡಿದ ಪಾಪಪ್ರಜ್ಞೆ ಮಾತ್ರ ಈಗಲೂ ಕಾಡುತ್ತಿದೆ.

ಮಾನವರು ಅನೇಕ ಕಾಡು ಪ್ರಾಣಿಗಳನ್ನು ಪಳಗಿಸಿ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡರು. ಅವುಗಳಲ್ಲಿ ನಾಯಿಯಷ್ಟು ಆಪ್ತಪ್ರವೇಶವನ್ನು ಮಾನವ ಬದುಕಿನಲ್ಲಿ ಪಡೆದಿರುವ ಪ್ರಾಣಿ ಇನ್ನೊಂದು ಇದೆಯೊ ಇಲ್ಲವೊ? ಇಷ್ಟೊಂದು ಜನರ ಪ್ರೀತಿಗೆ ಭಾಜನವಾಗಿರುವ ಅಥವಾ ಇಷ್ಟೊಂದು ಜನರಿಗೆ ಪ್ರೀತಿಯನ್ನು ಧಾರೆಯೆರೆದಿರುವ ಇದರ ಬಗ್ಗೆ ಸಮಾಜದಲ್ಲಿ ನಿಕೃಷ್ಟಭಾವವೂ ಇದೆ. ಇಲ್ಲದಿದ್ದರೆ  ‘ನಾಯಿ ಆಡದಂಗೆ ಆಡ್ತಾನೆ’ ‘ಅವನದು ನಾಯಿಬುದ್ಧಿ’ ಎಂದರೆ ನಮಗೇಕೆ ಬೇಸರವಾಗಬೇಕು? ಮೊನ್ನೆ ವಿರೋಧ ಪಕ್ಷದವರನ್ನು ಮಂತ್ರಿ ಶ್ರೀರಾಮುಲು ನಾಯಿಗಳಿಗೆ ಹೋಲಿಸಿದ್ದಾರೆ. ದೊಡ್ಡ ಗಲಾಟೆ ಆಗುತ್ತಿದೆ. ತಮ್ಮ ವಿರೋಧಿಗಳ ಹೆಸರನ್ನು ನಾಯಿಗಳಿಗಿಟ್ಟು ಮುಯ್ಯಿ ತೀರಿಸಿಕೊಳ್ಳುವವರೂ ಉಂಟು. ಅಮೀರಖಾನನು ತನ್ನ ನಾಯಿಗೆ ಶಾರೂಖ್ ಎಂದು ಹೆಸರಿಟ್ಟಿದ್ದನೆಂದು ಸುದ್ದಿಯಾಗಿತ್ತು. ಆದರೆ ಪೆಜತ್ತಾಯರು ತಮಗೆ ನಾಯಿ ಎಂದು ಹಿರಿಯರು ಬೈದರೆ ಬೇಸರವಾಗುತ್ತಿರಲಿಲ್ಲವೆಂದು ಬರೆಯುತ್ತಾರೆ. ಕಾರಣ, ನಾಯಿಯು ನಿಷ್ಠೆಯ ಸಂಕೇತವೆಂದು ಅವರು ನಂಬಿದ್ದವರು.

ಎಚ್ ಎಂ ವಿ ಯ ಚಿಹ್ನೆನಿಷ್ಠೆಯೆಂದಾಗ ನೆನಪಾಯಿತು. ಹಳೆಯ ಸಂಗೀತ ರೆಕಾರ್ಡು ಕಂಪನಿಯಾದ ಎಚ್‌ಎಂವಿಯ ಚಿಹ್ನೆ ಗ್ರಾಮಾಫೋನಿನ ಮುಂದೆ ಆಲಿಸುತ್ತ ಕುಳಿತ ನಾಯಿಯದು. ಎತ್ತಣ ನಾಯಿ ಎತ್ತಣ ಸಂಗೀತ? ಆದರೆ ಹಿಸ್ ಮಾಸ್ಟರ್ಸ್ ವಾಯ್ಸನ್ನು ನಮಗೆ ತಲುಪಿಸುವ ಪ್ರಮಾಣವಚನದ ಸಂಕೇತದಂತಿದೆ ಆ ನಾಯಿ. ನಿಷ್ಠೆಯಿಂದ ಸೇವೆಸಲ್ಲಿಸುತ್ತೇವೆಂದು ಸೂಚಿಸುವಂತೆ ಒಂದು ಬ್ಯಾಂಕಿನವರೂ ಬಹುಕಾಲ ನಾಯಿಚಿಹ್ನೆ ಇಟ್ಟುಕೊಂಡಿದ್ದರು. ಈಚೆಗೆ ಅವರೂ ಬದಲಿಸಿಕೊಂಡಂತಿದೆ. ನಾಯಿಯನ್ನು ತುಚ್ಛತೆಯ ಸಂಕೇತವಾಗಿ ಬಳಸುವ ಸಮಾಜದಲ್ಲಿ ಅವರು ತಾನೇ ಏನು ಮಾಡಿಯಾರು?

ವಿಚಿತ್ರವೆಂದರೆ, ತಿರಸ್ಕಾರ ಮಡುಗಟ್ಟಿರುವ ಶ್ವಾನಭಾಷೆಯನ್ನು ಸ್ವತಃ ನಾಯಿ ಸಾಕಿದವರೂ ಬಳಸುವುದು. ನಾಯಿ ಬಾಲ ಡೊಂಕು, ನಾಯೀನ ಅಂಬಾರಿ ಮೇಲೆ ಕೂರಿಸಿದರೆ, ಅದೇನೊ ನೋಡಿ ಕೆಳಗೆ ಬಂತಂತೆ, ನಾಯಿಗೆ ಸಲುಗೆ ಕೊಟ್ರೆ ನಾಯಿ ಮುಖನೆಕ್ಕಿತು, ನಾಯಿ ಬೊಗಳಿದರೆ ಆನೆಗೇನು ಕೇಡು, ‘ಬಾಳೋಮನೆಗೆ ಒಂದು ಬೊಗಳೊ ನಾಯಿ’ -ಹೀಗೆ ನೂರಾರು ಗಾದೆಗಳು ಬಳಕೆಯಲ್ಲಿವೆ. ಮಹಾರಾಷ್ಟ್ರದ ಬತ್ತೀಸಶಿರಾಳಕ್ಕೆ ಒಮ್ಮೆ ಹೋಗಿದ್ದೆ. ಅಲ್ಲೊಂದು ಹೊಲದ ಬದುವಿಗೆ ನೆಟ್ಟ ಶಿಲ್ಪವಿತ್ತು. ನಾಯಿಯಿಂದ ಭೋಗಕ್ಕೆ ಒಳಗಾಗುತ್ತಿರುವ ಮಹಿಳೆಯೊಬ್ಬಳನ್ನು ಅದರಲ್ಲಿ ಕೆತ್ತಲಾಗಿತ್ತು. ವಿಚಾರಿಸಲು, ದಾನಕೊಟ್ಟಿರುವ ಆ ಹೊಲವನ್ನು ಕಿತ್ತುಕೊಂಡವರಿಗೆ ಹಾಕಿರುವ ಶಾಪದ ಸಂಕೇತ ಆ ಶಿಲ್ಪವೆಂದು ತಿಳಿಯಿತು. ಮನುಷ್ಯರು ತಮ್ಮನ್ನ ಹೀಗೆಲ್ಲ ಚಿತ್ರಿಸಿರುವುದು ಪಾಪದ ನಾಯಿಗಳಿಗೆ ಗೊತ್ತಿದೆಯೊ ಇಲ್ಲವೊ?

ಬತ್ತೀಸ ಶಿರಾಳದಲ್ಲಿರುವ ಶಿಲ್ಪ ಧಾರ್ಮಿಕವಾಗಿ ಕೂಡ ನಾಯಿ ಮೈಲಿಗೆಯ ಸಂಕೇತ. ಸಂಪ್ರದಾಯವಾದಿ ಮುಸ್ಲಿಮರು ನಾಯಿಯನ್ನು ಸಾಕುವುದಿಲ್ಲ. ಅದರ ಕೂದಲು ಬಿದ್ದ ಜಾಗದಲ್ಲಿ ಪೈಗಂಬರರ ಸುಳಿವು ಇರುವುದಿಲ್ಲವಂತೆ. ವೈದಿಕ ಸಂಸ್ಕೃತಿ ಕೂಡ ನಾಯಿಯನ್ನು ಶಾನೇ ಹೀನಗೊಳಿಸಿದೆ. ಶ್ವಾನಸ್ಪರ್ಶವಾದರೆ ಸಚೇಲ ಸ್ನಾನ ಮಾಡಬೇಕು. ಬೇಂದ್ರೆಯವರಲ್ಲಿ ‘ಬೀದಿನಾಯಿ ರಾಧೆ’ ಎಂಬ ಪದ್ಯವೊಂದಿದೆ. ಜೋರು ಮಳೆಯಲ್ಲಿ ನೆಂದು ಚಳಿಯಿಂದ ನಡುಗುತ್ತ ಮನೆಯೊಳಗೆ ಬರಲೆತ್ನಿಸುವ ನಾಯಿಮರಿಯೊಂದನ್ನು ಭಟ್ಟರು, ಬರಗೊಡದಂತೆ ಬಾಗಿಲುಹಾಕುವ ಚಿತ್ರ ಅದರಲ್ಲಿದೆ. ಸುಂದರಿಯರ ಮಡಿಲಿನಲ್ಲಿ ಕುಳಿತು ಕಾರಿನಲ್ಲಿ ಪಯಣಿಸುವ ಭಾಗ್ಯವನ್ನೂ ಮನೆಯೊಳಗೆ ಬಾರದಂತೆ ಹೊರಗೆ ನಿಲ್ಲುವ ಅಸ್ಪೃಶ್ಯತೆಯನ್ನೂ ಒಂದೇ ಸಮಾಜದಲ್ಲಿ ಅನುಭವಿಸಿದ ಪ್ರಾಣಿ ನಾಯಿಯೇ ಇರಬೇಕು.

ವೈರುಧ್ಯವೆಂದರೆ, ವೈದಿಕ ಸಂಸ್ಕೃತಿಯ ಕಟುವಿಮರ್ಶಕನಾದ ಶರಣ ಸಂಸ್ಕೃತಿಯೂ ಶ್ವಾನವಿರೋಧಿ ಆಗಿರುವುದು. ‘ನಮ್ಮ ಸೊಣಗಂಗೆ ತಣಿಗೆಯನ್ನಿಕ್ಕಬೇಡ’ ಎಂದು ಬಸವಣ್ಣ ಹೇಳುತ್ತಾರೆ. ಶರಣರು ನಾಯಿ ನಿರಾಕರಿಸಲು ಒಂದು ಕಾರಣವಿರಬಹುದು. ಅವರು ಕಾಪಾಲಿಕರ ಮತ್ತು ಭೈರವಾರಾಧನೆಯ ವಿರೋಧಿಗಳು. ಭೈರವನ ವಾಹನ ಶ್ವಾನ. ೧೨ನೇ ಶತಮಾನದ ಬಳಿಕ ಕರ್ನಾಟಕದಲ್ಲಿ ಶ್ವಾನಸಮೇತನಾದ ಭೈರವ ಶಿಲ್ಪಗಳನ್ನು ಭಗ್ನಗೊಳಿಸಲಾಯಿತು. ಕೆಲವು ಕಡೆ ಭೈರವನನ್ನು ಉಳಿಸಿ ಅವನ ಪಕ್ಕದ ನಾಯಿಯನ್ನಷ್ಟೆ ಕೆತ್ತಿ ತೆಗೆಯಲಾಯಿತು. ಹಳೇಬೀಡಿನ ಗುಡಿಯಲ್ಲಿ ಇದನ್ನು ನೋಡಬಹುದು. ನಾಯಿಗೆ ಕಲ್ಲುಹೊಡೆಯುವುದಿದೆ. ಆದರೆ ಕಲ್ಲಿನ ನಾಯಿಯ ಮೇಲೂ ಸೇಡು ತೀರಿಸಿಕೊಳ್ಳಲಾಗಿದೆ.

ಒಂದು ಸಮಾಧಿಕಾರಣ, ನಾಯಿ ಅಧೋಜಗತ್ತಿಗೆ ಸೇರಿದ ಪ್ರಾಣಿ. ಚಾಂಡಾಲರ ಸಂಗಾತಿಯದು. ಅದ್ವೈತ ಚಿಂತನೆಯಲ್ಲಿ ಸಮದರ್ಶಿಯ ಗುಣವನ್ನು ಹೇಳುವಾಗ ಆತ ‘ಶುನಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನ:’ ಎಂಬ ಮಾತಿದೆ. ಇದರರ್ಥ ಅತ್ಯಂತ ನೀಚವೆನಿಸಿರುವ ನಾಯಿ ಮತ್ತು ನಾಯಿಮಾಂಸ ತಿನ್ನುವವರಿಂದ ಹಿಡಿದು ಜಗತ್ತಿನ ಅತ್ಯಂತ ಶ್ರೇಷ್ಠವನ್ನೂ ಸಮಾನವಾಗಿ ನೋಡಬಲ್ಲವನು ಎಂದು. ಅಂದರೆ ಶ್ವಪಚರು ಪ್ರಾಚೀನ ಭಾರತದಲ್ಲಿ ಇದ್ದರೆಂದಾಯಿತು. ಆಹಾರವಿಲ್ಲದಾಗ ವಿಶ್ವಾಮಿತ್ರನು ನಾಯಿಮಾಂಸ ತಿಂದ ಕತೆಯೂ ಇದೆಯಷ್ಟೆ. ಅಷ್ಟೇ ಏಕೆ ಈಗಲೂ ಈಶಾನ್ಯ ಭಾರತದಲ್ಲಿ  ಶ್ವಪಚರಿದ್ದಾರೆ. ಅಲ್ಲಿ ಗಣ್ಯ ಅತಿಥಿ ಬಂದರೆ ನಾಯಿಮಾಂಸವಂತೆ. ಅಲ್ಲಿನ ಮಾರುಕಟ್ಟೆಗಳಲ್ಲಿ ಗೋಣಿಚೀಲದಲ್ಲಿ ಬಂಧಿಯಾಗಿ ಕತ್ತನ್ನು ಹೊರಗೆ ಇಣುಕಿಸುತ್ತ ಕುಳಿತಿರುವ ನಾಯಿಗಳ ಚಿತ್ರವನ್ನು ಬಹುಶಃ ‘ಕೆಂಡಸಂಪಿಗೆ’ಯಲ್ಲೇ ಓದಿದ ನೆನಪು. ಮಂಗೋಲಿಯನ್ ಸಂಸ್ಕೃತಿಯಲ್ಲಿ ನಾಯಿಮಾಂಸ ಭಕ್ಷಣೆ ಸಾಮಾನ್ಯ. ಬೀಜಿಂಗ್ ಒಲಂಪಿಕ್ಸ್ ನಡೆಯುವಾಗ ಚೀನಾ ನಾಯಿಮಾಂಸ ಮಾರದಂತೆ ಹೋಟೆಲುಗಳಿಗೆ ಕೆಲವುಕಾಲ ನಿರ್ಬಂಧ ವಿಧಿಸಿದ್ದನ್ನು ನೆನೆಯಬಹುದು.

ಪಾಶ್ಚಿಮಾತ್ಯರು ಶ್ವಪಚರೊ ಅಲ್ಲವೊ ತಿಳಿಯದು. ಆದರೆ ಮಹಾ ಶ್ವಾನಪ್ರೇಮಿಗಳು. ತಾವು ವಶಪಡಿಸಿಕೊಂಡ ದೇಶದ ಜನರನ್ನು ನಾಯಿಗಿಂತ ಕಡೆಯಾಗಿ ನಡೆಸಿಕೊಳ್ಳುವಲ್ಲಿ ಅವರು ಪರಿಣಿತರಾದರೂ, ನಾಯಿ ಬೆಕ್ಕು ವಿಷಯದಲ್ಲಿ ಅವರ ಪ್ರೀತಿಗೆ ಸಾಟಿಯಿಲ್ಲ. ಒಮ್ಮೆ ಹಂಪಿಯ ವಿರೂಪಾಕ್ಷ ಗುಡಿಯೆದುರಿನ ಬೀದಿಯಲ್ಲಿ, ಕೈತೊಳೆದು ಮುಟ್ಟುವಂತಹ ಒಬ್ಬ ಸುಂದರಿಯು, ಬೀದಿಯಲ್ಲಿ ಮಲಗಿದ್ದ ಪುಟ್ಟ ನಾಯಿಮರಿ ಜತೆ ನೆಲಕ್ಕೆ ಕುಳಿತು ಅದರ ಜತೆ ಬಹಳ ಹೊತ್ತು ಆಟವಾಡಿದಳು. ನಾವಾದರೂ ನಾಯಿಯಾಗಬಾರದಿತ್ತೇ ಎಂಬಂತೆ ಆ ಆಟವಿತ್ತು. ಕಡೆಗವಳು ಅದನ್ನು ಕೈಯಲ್ಲಿ ಎತ್ತಿಕೊಂಡಳು. ಅದು ಅವಳ ಮೂಗನ್ನು ನೆಕ್ಕಿತು. ಅವಳಿಗೆ ಸಂತೋಷವಾಯಿತು. ಬಿಳಿಯರು ನಾಯಿ ಸತ್ತರೆ ಅದಕ್ಕೆ ಸ್ಮಾರಕವನ್ನೂ ಕಟ್ಟುವುದುಂಟು. ಬ್ರಿಟಿಷರ ವಸತಿ ಪ್ರದೇಶವಾಗಿದ್ದ ಅಂಡಮಾನಿನ ರಾಸ್ ದ್ವೀಪದಲ್ಲಿ ಅನೇಕ ಶ್ವಾನಸ್ಮಾರಕಗಳನ್ನು ನಾನು ಗಮನಿಸಿದೆ. ಲಖನೊವಿನ ರೆಸಿಡೆನ್ಸಿಯಲ್ಲಿಯೂ ಕರ್ನಾಟಕದ ಸುರಪುರದಲ್ಲಿಯೂ ಅವನ್ನು ನೋಡಿದೆ. ಸುರಪುರವು ರಾಜಾ ವೆಂಕಟಪ್ಪ ನಾಯಕನ ಊರು. ಮಹಾಸ್ವಾಭಿಮಾನಿಯೂ ಬಿಸಿರಕ್ತದ ತರುಣನೂ ಆದ ವೆಂಕಟಪ್ಪ ಬ್ರಿಟಿಷರ ಬಂಧಿಯಾಗಿ ನಾಯಿಬಾಳು ಬಾಳಲೊಪ್ಪದೆ ತನ್ನ ಜೀವವನ್ನು ಕೈಯಾರೆ ಕೊಂಡವನು. ಆಗ ಸುರಪುರದಲ್ಲಿ ಬ್ರಿಟಿಷ್ ಏಜೆಂಟ್ ಮೆಡೋಸ್ ಟೇಲರನಿದ್ದು, ಅವನು ಊರಗುಡ್ಡದ ಮೇಲೆ ಬಂಗಲೆ ಕಟ್ಟಿಕೊಂಡು ವಾಸವಾಗಿದ್ದನು. ಟೇಲರ್ ಬಂಗಲೆಯ ಆಸುಪಾಸಿನಲ್ಲಿ ನಾಯಿ ಸಮಾಧಿಗಳಿವೆ. ಏಕಾಂತಪ್ರಿಯ ಜೀವನಶೈಲಿಯುಳ್ಳ ಬಿಳಿಯರಿಗೆ ಈ ಪ್ರಾಣಿಸಂಗ ಅಗತ್ಯವಾಗಿರಬೇಕು ಅಥವಾ ಸಮರ ಸಂಸ್ಕೃತಿಯಲ್ಲಿ ನಾಯಿಯೂ ಒಂದು ಆಯುಧವೆಂದು ಬೇಕಾಗಿರಬೇಕು.

ಭಗವಂತನನ್ನೇ ಹೊತ್ತ ಶ್ವಾನನಾಯಿಯನ್ನು ಹೀನೋಪಮೆಗೆ ಬಳಸುವ ನಮ್ಮಲ್ಲೂ ಶ್ವಾನ ಪ್ರೀತಿಯಲ್ಲ, ಆರಾಧನೆಯೇ ಇದೆ. ಭಾರತದ ನಾಥಪಂಥದಲ್ಲಿ ನಾಯಿ ಪವಿತ್ರ. ಭೈರವ ಶಿಲ್ಪದಲ್ಲಿ ನಾಯಿ ಅದೆಷ್ಟು ತರಹದಲ್ಲಿ ಕಾಣಿಸಿಕೊಳ್ಳುತ್ತದೆ! ಕೃಷ್ಣನ ಹಿಂದೆ ಹಸುನಿಂತಂತೆ, ಭೈರವನನ್ನು ಬೆನ್ನಮೇಲೆ ಹೊತ್ತಿರುವಂತೆ, ಅನ ಪಕ್ಕ ನಿಂತಂತೆ, ವಂದೆ ಮಲಗಿದಂತೆ-ನಾನಾ ತರಹ. ಹೆಚ್ಚಾಗಿ ಭೈರವನ ಕೈಯಲ್ಲಿರುವ ನರರುಂಡಕ್ಕೆ  ಹಾರುವ ಭಂಗಿಯಲ್ಲಿಯೆ ಅದು ಕಟೆಯಲ್ಪಟ್ಟಿದೆ. ಈಗಲೂ ನಾಥಯೋಗಿಗಳು ಕಪ್ಪುನಾಯಿನ್ನು ಮುಂದಿಟ್ಟುಕೊಂಡೇ ಪ್ರಯಾಣ ಮಾಡುತ್ತಾರೆ. ನಾನು ಕೊಲ್ಲಾಪುರದ ನಾಥಮಠಕ್ಕೆ ಹೋದಾಗ, ಅದರ ತುಂಬ ನಾಯಿಗಳೇ ತುಂಬಿದ್ದವು. ನಾಯಿಯನ್ನು ಮಾನ್ಯಮಾಡಿರುವ ಇನ್ನೊಂದು ಪಂಥ ದತ್ತಪಂಥ. ದತ್ತಾತ್ರೇಯನ ಸುತ್ತ ನಾಲ್ಕು ನಾಯಿಗಳಿವೆ. ನಾಲ್ಕು ವೇದಗಳು ನಾಯಿಗಳಾಗಿ ದತ್ತನನ್ನು ಅನುಸರಿಸುತ್ತಿವೆ ಎಂದು ಪುರಾಣ ಹೇಳುತ್ತದೆ. ಧರ್ಮರಾಯನಿಗೆ ಸ್ವರ್ಗಾರೋಹರಣದಲ್ಲಿ ಕೊನೆಗೂ ಜತೆಗೆ ಬರುವುದು ಒಂದು ನಾಯಿ ತಾನೇ?

ಧಾರ್ಮಿಕ ನಂಬಿಕೆಗಳು ನಾಯಿಯನ್ನು ಪುರಸ್ಕರಿಸಲಿ ತಿರಸ್ಕರಿಸಲಿ, ನಾಯಿಯನ್ನು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ಮಿಗಿಲಾಗಿ ಸಾಕುವ ಲಕ್ಷೋಪಲಕ್ಷ ಜನರಿದ್ದಾರೆ. ನಾಯಿಯನ್ನು ಉಳ್ಳವರು ಮನೆ ರಕ್ಷಣೆಗಾಗಿಯೊ ಶೋಕಿಗಾಗಿಯೊ ಸಾಕಿದರೆ, ರೈತರು ಮತ್ತು ಬೇಟೆಗಾರರು ತಮ್ಮ ದೈನಿಕ ಬದುಕಿನ ಭಾಗವಾಗಿ ಸಾಕುತ್ತಾರೆ. ಅವರಿಗೆ ನಾಯಿ ಸಂಗಾತಿಯಿದ್ದಂತೆ. ಇದಕ್ಕೆ ಸಾಕ್ಷಿ, ಬಳ್ಳಿಗಾವಿಯ ಕೇದಾರೇಶ್ವರ ಗುಡಿಯ ಆವರಣದಲ್ಲಿರುವ ಒಂದು ವೀರಗಲ್ಲು. ಅದರಲ್ಲಿ ಗದ್ದೆಕಾಯಲು ಹೋದ ರೈತನು ಹಂದಿಗಳ ಜತೆ ಸಂಘರ್ಷ ಮಾಡುತ್ತಿರುವ ಶಿಲ್ಪವಿದೆ. ಅದರಲ್ಲಿ ದೊಡ್ಡದೊಂದು ಸೂಕರ ಅವನ ಮೇಲೆ ಏರಿಬರುತ್ತಿದೆ. ಅವನ ಜತೆಗಾರರು ಬೆಂಗೊಟ್ಟು ಓಡುತ್ತಿದ್ದರೆ, ನಾಯಿ ಮಾತ್ರ ಅವನ ಸಮಕ್ಕೆ ನಿಂತು ಹಂದಿಯನ್ನು ಎದುರಿಸುತ್ತಿದೆ. ಬಹುಶಃ ಆ ಸೆಣಸಾಟದಲ್ಲಿ ಆ ವೀರ ಜೀವಕಳೆದುಕೊಂಡಿರಬೇಕು. ಅದಕ್ಕೆಂದೇ ವೀರಗಲ್ಲು ನೆಡಲಾಗಿದೆ. ಹೈಸ್ಕೂಲಿನಲ್ಲಿ ಎಂದು ಕಾಣುತ್ತದೆ, ನಮ್ಮ ಪುಸ್ತಕದಲ್ಲಿ ‘ಫಿಡಿಲಿಟಿ’ ಎಂಬ ಪದ್ಯವಿತ್ತು. ಬೇಟೆಗೆಂದು ಹೋದ ಒಡೆಯನು ಅಕಸ್ಮಾತ್ ಮರಣಹೊಂದಲು, ಅಲ್ಲಿಗೆ ಜನ ಬರುವ ತನಕ, ಎಷ್ಟೋ ದಿನಗಳವರೆಗೆ ಅವನ ನಾಯಿ ಕಾದುಕೂತಿದ್ದನ್ನು ಆ ಪದ್ಯ ವರ್ಣಿಸುತ್ತದೆ. ನಾಯಿಯ ನಿಯತ್ತಿಗೆ ದೇಶಕಾಲಗಳಿಲ್ಲ.

ಈಗ ನಾನಿರುವ ಹಂಪಿ ಮೂಲತಃ ಬೇಡರ ಸೀಮೆ. ಇಲ್ಲಿಯ ಜನ ಬೆಳಿಗ್ಗೆ ಹೊಲಗದ್ದೆಗಳಿಗೆ ಹೋಗುವಾಗ ಒಂದು ಕುರಿಯನ್ನೂ ನಾಯಿಯನ್ನೂ ಕರೆದುಕೊಂಡು ಹೋಗುವುದನ್ನು ದಿನವೂ ನೋಡುತ್ತೇನೆ. ನಾನು ಇಲ್ಲಿಗೆ ಬಂದ ಹೊಸತರಲ್ಲಿ ಬೇಡರಲ್ಲಿ ಯುಗಾದಿ ಹಿಂದಿನ ದಿನ ಬೇಟೆಗೆ ಹೋಗುವ ಪದ್ಧತಿಯಿದ್ದು, ಬೇಟೆಯಾಡಿದ ನಾಯಿಯನ್ನು ಬೇಟೆಯಾದ ಹಂದಿಯನ್ನೂ ಮೆರವಣಿಗೆ ತೆಗೆಯಲಾಗುತ್ತಿತ್ತು. ಚಕ್ಕಡಿಯ ಮೇಲೆ ಒಂದು ಬದಿ ಹಂದಿ, ಇನ್ನೊಂದು ಬದಿ ಹೂಹಾರ ಹಾಕಿಸಿಕೊಂಡ ನಾಯಿ. ಆ ನಾಯಿಗಳೋ ಎಲೆಕ್ಷನ್ನು ಗೆದ್ದವರಂತೆ, ಈಗತಾನೇ ವಿವಾಹವಾದ ಮದುಮಗನಂತೆ, ಸೆಟೆದು ನಿಂತು ನೀಟಾಗಿ ಮೆರವಣಿಗೆಯ ಸುಖವನ್ನು ಅನುಭವಿಸುತ್ತಿದ್ದವು. ಈಚೆಗೆ ಈ ಬೇಟೆಯನ್ನೂ ಮೆರವಣಿಗೆಗಳನ್ನೂ ನಿಲ್ಲಿಸಲಾಗಿದೆ.

ಈಗಲೂ ನಮ್ಮ ವಿಶ್ವವಿದ್ಯಾಲಯದ ಬಸ್ಸಿನ ಡ್ರೈವರುಗಳು ಕೋಳಿ ಗಾಡಿಗೆ ಸಿಕ್ಕರೆ ಹೆದರುವುದಿಲ್ಲ. ನಾಯಿಗೆ ಏನಾದರೂ ಆಯಿತೊ, ಥರಥರ ನಡುಗುತ್ತಾರೆ. ಕಾರಣ, ಧರ್ಮದೇಟು ಗ್ಯಾರಂಟಿ.  ರಸ್ತೆತಡೆ ಮಾಡಿ ನಮ್ಮ ನಾಯಿಗೆ ಜೀವ ತಂದುಕೊಡು ಎಂದು ಹಠಹಿಡಿದು ಕೂತುಬಿಡುತ್ತಾರೆ. ಹಣಕೊಟ್ಟರೂ ಇಸಿದುಕೊಳ್ಳುವುದಿಲ್ಲ. ಆ ನಾಯಿಗಳೊ ನಡುರಸ್ತೆಯಲ್ಲಿ ತಮ್ಮ ಬಿಡಾರವನ್ನು ಹೂಡಿಕೊಂಡು ಹೋಗು ನೋಡೋಣ ಎಂದು ಸವಾಲನ್ನು ಎಸೆದು ಮಲಗಿರುತ್ತವೆ. ಬಹಳ ಹಾರನ್ ಮಾಡಿದರೆ, ‘ಬದುಕಿಕೊ ಹೋಗು’ ಎಂದು ಸಹಾನುಭೂತಿ ತೋರಿಸಿ ನಿಧಾನವಾಗಿ ಎದ್ದು, ಮೈಮುರಿದು ಅಂಗಸಾಧನೆ ಮಾಡಿ, ಬಳಿಕ ಹಾದಿಬಿಡುತ್ತವೆ. ನಮ್ಮ ರಸ್ತೆಯಲ್ಲಿ ಇವನ್ಯಾವನು ಬರುವುದಕ್ಕೆ ಎಂಬುದು ಅವುಗಳ ಧೋರಣೆಯಿರಬೇಕು.

ನಿಜಕ್ಕೂ ಕರುಣಾಜನಕ ಅನಿಸುವುದು ಪೊಲೀಸ್ ನಾಯಿಗಳ ಸ್ಥಿತಿ. ಬೆಲೆಬಾಳುವ ಬೆಲ್ಟು ಸರಪಳಿಗಳಿಂದ ಅಲಂಕೃತವಾಗಿರುವ ಅವು, ಸುಖವಾಗಿ ತಿಂದುಂಡು ದಷ್ಟಪುಷ್ಟವಾಗಿ ಬೆಳೆದ ಖೈದಿಗಳ ತರಹ ಕಾಣುತ್ತವೆ. ಅವು ಕಳ್ಳರ ಹಿಡಿದಿದ್ದನ್ನು ನಾನು ಒಮ್ಮೆಯೂ ಕೇಳಿಲ್ಲ. ‘ನಾಯಿಗಳು ಸ್ವಲ್ಪ ದೂರದವರೆಗೆ ಹೋಗಿ ಅಲ್ಲಿಗೆ ನಿಂತುಬಿಟ್ಟವು’ ಎಂಬ ವರದಿ ಮಾತ್ರ ಪತ್ರಿಕೆಯಲ್ಲಿ ತಪ್ಪದೆ ಬರುತ್ತದೆ. ತಮಗಾಗದ ಕೆಲಸವನ್ನು ವಹಿಸಿದರೆ ಅವಾದರೂ ಏನು ಮಾಡಿಯಾವು? ಹೋದ ತಿಂಗಳು, ಪೊಲೀಸ್ ನಾಯಿಗಳು ನಮ್ಮಲ್ಲಿ ಒಂದು ಸಾಹಸ ಮಾಡಿದವು. ವಿಗ್ರಹಗಳ್ಳರು ಕಾಮಲಾಪುರದ ಗುಡಿಯಲ್ಲಿದ್ದ ವಿಜಯನಗರ ಕಾಲದ ಗಣೇಶನ ವಿಗ್ರಹವನ್ನು ಅಪಹರಿಸಿಕೊಂಡು ಹೋದರು. ತಪಾಸಣೆಗೆಂದು ಪೊಲೀಸರ ಜೀಪುಗಳು ಪಡೆಗಳು ಬಂದವು. ಜತೆಗೆ ನಾಯಿಗಳೂ ಬಂದವು. ಅವು ಗಣಪತಿ ಕೂರಿಸಿದ್ದ ಪೀಠವನ್ನೊಮ್ಮೆ ಮೂಸಿನೋಡಿ ಊರ ಹೊರಗೆ ಹೊರಟವು. ಹಾಗೆ ಹೊರಟವು ತಟಾರನೆ ಒಂದು ಮನೆಯೊಳಗೆ ನುಗ್ಗಿಬಿಟ್ಟವು. ಅದರ ಮಾಲಕನು ಅಯ್ಯಯ್ಯೊ ಎಂದು ಕಿರಿಚಾಡಿಕೊಂಡು ಹೊರಗೆ ಬಂದು, ಪೊಲೀಸರ ಕಾಲಿಗೆ ಬಿದ್ದು ನನಗೂ ವಿಗ್ರಹಕ್ಕೂ ಸಂಬಂಧವಿಲ್ಲವೆಂದು ಬಾಯಿಬಡಿದುಕೊಳ್ಳಲು ಆರಂಭಿಸಿದನು. ಪರಿಶೀಲಿಸಿ ನೋಡಿದರೆ ಪೊಲೀಸ್ ನಾಯಿಗಳು ಮನೆಗೆ ನುಗ್ಗಿದ್ದು ಕಳ್ಳರಿಗಲ್ಲ; ಬೀದಿಕಾಮಣ್ಣಗಳಾಗಿ ತಿರುಗುತ್ತಿರುವ ಪುರುಷಶ್ವಾನಗಳ ಕಾಟದಿಂದ ಸಾಕಾಗಿ ಅಡಗಿಕೂತಿದ್ದ ಹೆಣ್ಣುನಾಯಿಗಾಗಿ. ಪೊಲೀಸರು ಮನೆಯ ಮಾಲಕನಿಗೆ ಸಮಾಧಾನ ಪಡಿಸಿ, ಬೆದೆಬಂದಿದ್ದ ಹೆಣ್ಣುನಾಯಿಯ ಜತೆ ವ್ಯವಹಾರ ಕುದುರಿಸುತ್ತಿದ್ದ ತಮ್ಮ ನಾಯಿಗಳನ್ನು ಈಚೆಗೆ ಎಳೆದುಕೊಂಡು ಬಂದರು. ಡಿಪಾರ್ಟ್‌ಮೆಂಟಿನ ಶಿಸ್ತಿನಲ್ಲಿ ಬೆಳೆದರೂ ಅವು ತಮ್ಮ ರಸಿಕತೆಯನ್ನು ಬಿಟ್ಟುಕೊಟ್ಟಿಲ್ಲದಿರುವುದು ಕಂಡು ಜನರಿಗೆ ಸಮಾಧಾನ. ಕಳ್ಳರನ್ನು ಹಿಡಿಯುವುದಕ್ಕಿಂತ ಪ್ರೇಯಸಿಯರನ್ನು ಅರಸುವ ಅವುಗಳ ಪರಿಣತಿಗೆ ಇನ್ನೊಂದು ಕಾರಣ, ಆಷಾಢಮಾಸದ ಹವೆಯೂ ಇರಬೇಕು.

ಕನ್ನಡದಲ್ಲಿ ಅನೇಕ ಲೇಖಕರು ನಾಯಿಯ ಬಗ್ಗೆ ಬರೆದಿದ್ದಾರೆ. ಆದರೆ ಕುವೆಂಪು ತೇಜಸ್ವಿಯವರಂತೆ ನಾಯಿಯನ್ನು ವ್ಯಕ್ತೀಕರಣ ಮಾಡಿ ಒಂದು ಪಾತ್ರವಾಗಿ ಚಿತ್ರಿಸಿದವರು ಬೇರೆಯಿಲ್ಲ. ನಮಗೆ ಸುಬ್ಬಣ್ಣ ಹೆಗ್ಗಡೆಯವರ ಮಗನ ಹೆಸರು ಮರೆತುಹೋಗಬಹುದು. ಆದರೆ ಗುತ್ತಿಯ ನಾಯಿ ಹುಲಿಯನ ಹೆಸರು ಮರೆತುಹೋಗುವುದಿಲ್ಲ. ನಾಯಿ ಸಾಕದ ಜನ ತಮ್ಮ ಜೀವನದ ಬಹುದೊಡ್ಡ ಅನುಭವವನ್ನು ಕಳೆದುಕೊಂಡಿದ್ದಾರೆಂದೇ ನನ್ನ ಭಾವನೆ. ಇದು ಸ್ವತಃ ನಾಯಿಯನ್ನು ಸಾಕಿದಾಗ ನನಗೆ ಅರಿವಾಯಿತು. ಅದೊಂದು ಸಹರ್ಷ ದಾರುಣ ಕಥೆ. ಅದನ್ನು ಕೇಳಿದರೆ ಪೆಜತ್ತಾಯರು ನನ್ನನ್ನು ಕ್ಷಮಿಸುವುದಿಲ್ಲ.

[ಮುಂದಿನ ಕಂತು: ನಾಯಿಪುರಾಣ-೨]

[ಚಿತ್ರಗಳು-ಲೇಖಕರು ಮತ್ತು ಸಂಗ್ರಹದಿಂದ]