”ಮುಸ್ಸಂಜೆ ಜಾರುವ ಹೊತ್ತಿಗೆ ಪಡಸಾಲೆಯಲ್ಲಿ ಸೇರುತ್ತಿದ್ದ ಜನಜಂಗುಳಿ, ತಾಂಬೂಲ ಜಗಿಯುತ್ತಲೇ ಅಜ್ಜನು ಶುರುವಿಡುತ್ತಿದ್ದ ಜೈಮಿನಿ ಹಾಗೂ ಕುಮಾರವ್ಯಾಸ ಭಾರತದ ಗಮಕ, ದೂರದಲ್ಲೇ ಕೂತು ಕೇಳುತ್ತಾ ಕೂತ ಆಳುಗಳು, ಅವರಿಗೆಲ್ಲಾ ದಿನವೂ ಕಾಫಿ ಮಂಡಕ್ಕಿಯ ಸಮಾರಾಧನೆ, ಇದೆಲ್ಲವನ್ನೂ ಕಣ್ತುಂಬಿಕೊಳ್ಳುತ್ತಾ ಯಾವುದಾದರೊಬ್ಬ ಮಾವನ ಮಡಿಲಲ್ಲಿ ಹಿತವಾಗಿ ಕೂತು ಪಂಚೆಯಂಚಿನಲ್ಲಿ ಆಟವಾಡುತ್ತಾ ಅಲ್ಲೇ ಏನಾದರೊಂದು ಮೆದ್ದು ಹಾಗೇ ಮಲಗಿಬಿಡುತ್ತಿದ್ದ ನಾನು”
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಐದನೆಯ ಕಂತು.

 

ಸುವಿಶಾಲವಾದ ಹದಿನಾರಂಕಣದ ಮನೆಯ ನಟ್ಟನಡುವಿನಲ್ಲಿ ತೂಗುತ್ತಿದ್ದ ಮರದ ದೊಡ್ಡ ತೂಗುಮಂಚ, ಅದರ ಮೇಲಿರುತ್ತಿದ್ದ ಅಜ್ಜನ ಅಡಕೆಲೆ ಪೆಟ್ಟಿಗೆ, ಇಡೀ ಮನೆಯ ತುಂಬಾ ಗಡಗಡನೆಂದು ಗುಡುಗುವ ಹಲವಾರು ಗಂಡು ದನಿಗಳು, ಅಡುಗೆಮನೆ ಹಾಗೂ ಹಿತ್ತಿಲು ಬಿಟ್ಟರೆ ಕಣದ ಪಕ್ಕದ ಹೂದೋಟದ ಬಳಿ ಮಾತ್ರ ರಿಂಗಣಿಸುವ ಕಿಲಕಿಲ ಹೆಣ್ಣು ದನಿಗಳು. ಅದರಲ್ಲೂ ಕಸ್ತೂರಿ ಕನ್ನಡದೊಡನೆ ಬೆರೆತು ಬರುವ ತೆಲುಗು ಮೆಲುನುಡಿಗಳು, ನಡುಮನೆ ಕಳೆದು ಮುಂದೆ ಕಾಲಿಟ್ಟರೆ ಘಮ್ಮೆನುವ ಅಡುಗೆ ಕಾರ್ಯಸ್ಥಾನ, ಅಲ್ಲಿ ಯಾವಾಗಲೂ ಏನಾದರೊಂದು ಮಾಡುತ್ತಾ ಯಾವುದೋ ಹಾಡೊಂದನ್ನು ಎದೆಗೆ ಬಿದ್ದ ನೋವಂತೆ ಗುನುಗುನಿಸುತ್ತಾ ಒಳಗಿನ ದರ್ದನ್ನು ಹೊರಹಾಕಲು ಪ್ರಯತ್ನಿಸುತ್ತಾ ಸವೆಯುತ್ತಿರುವ ಆ ಮಹಾಗರತಿಯರು, ಹಿತ್ತಿಲಿನ ಹೂಬನ, ಮಧ್ಯೆ ನನಗಿಂತಲೂ (ಆಗಿನ ಕಾಲಕ್ಕೆ) ಎತ್ತರದ ಒಂದು ತುಳಸೀಕಟ್ಟೆ, ಮನೆಯ ಎಡಭಾಗಕ್ಕೊಂದು ಕೊಟ್ಟಿಗೆಯೆಂಬ ಸುವಿಶಾಲ ಪ್ರಾಂಗಣ, ಅಲ್ಲಿ ದೊಡ್ಡಗೆ ದನಿ ತೆಗೆದು ಮೊರೆಯುತ್ತಾ ಮೆರೆಯುವ ದಷ್ಟಪುಷ್ಟ ರಾಸುಗಳು, ಕರುಗಳು ಹಾಗೂ ಅವುಗಳ ಕೇರ್ ಟೇಕರ್ ಭೀಮಜ್ಜ, ಇವೆಲ್ಲದರ ಸವಿ ಸವಿಯುತ್ತಾ ಯಾವಾಗಲೂ ಯಾರದಾದರೊಂದು ಸೊಂಟದಲ್ಲಿ ರಾರಾಜಿಸುತ್ತಾ, ಲಲ್ಲೆಗರೆಯುತ್ತಾ ಓಡಾಡುವ ನಾನು… ಆಹಾ! ನಿನ್ನ ತವರೆಂಬ ನನ್ನ ಸ್ವರ್ಗದ ಬಗ್ಗೆ ಏನೇನೆಂದು ಬಣ್ಣಿಸಲಿ?

ನನ್ನಜ್ಜಿ, ನಿನ್ನಮ್ಮ ಎಂದೂ ಯಾರೊಂದಿಗೂ ಮುಖ ಕೊಟ್ಟು ತಲೆಯೆತ್ತಿ ಮಾತಾಡದ ಕಾರಣ ಯಾರಿಗೂ ಅವಳ ಮುಖದ ಸ್ಪಷ್ಟ ಚಿತ್ರಣವಿರಲಿಲ್ಲ. ಎಂದೂ ನೀಲಿ ಬಣ್ಣವನ್ನೇ ಹೋಲುವ ಸೀರೆಯುಡುತ್ತಿದ್ದ ಅವಳ ಹರವಾದ ಬೆನ್ನು, ಅದರ ಮೇಲೆ ಆಲದ ಮರದಿಂದ ಭುವಿಗಮರಿದ ಬಿಳಲಿನಂಥಾ ನೀಳ ದಪ್ಪ ಕಪ್ಪು ಜಡೆ ಅವಳದ್ದಂತೆ. ಸುತ್ತಾ ಹತ್ತೂರಿಗೆ ದೇವತೆಯಂತಹ ಅಮ್ಮನೋರು ಎಂದೇ ಹೆಸರಾದವಳಂತೆ. ಮನೆಯ ಬಾಗಿಲಿಗೆ ಬಂದ ಯಾವೊಂದು ನರಪ್ರಾಣಿಯೂ ಹಸಿದ ಹೊಟ್ಟೆಯಲ್ಲಿ ಹಿಂದಿರುಗದಂತೆ ನೋಡಿಕೊಂಡಿದ್ದ ಮಹಾಮಾಯಿಯಂತೆ. ಅಜ್ಜನ ಆಣತಿಗೆ ಯಾವತ್ತೆಂದರೆ ಯಾವತ್ತೂ ಚಕಾರವೆತ್ತದ ಹೆಣ್ಣಂತೆ. ಅವನು ಕೊಟ್ಟುಬಿಡು ಎಂದಾಗ ಕತ್ತಿನ ಸರಗಳನ್ನೂ ಅದೆಷ್ಟೋ ತೊಲದ ಕೈಬಳೆಗಳನ್ನೂ ಕಿವಿಯೋಲೆಗಳನ್ನೂ ನಿಂತ ನಿಲುಕಿನಲ್ಲೇ ಬಿಚ್ಚಿ ಪಡಸಾಲೆಯಲ್ಲಿ ಬೇಡಿ ಬರುತ್ತಿದ್ದ ಬಡವರಿಗೆ ದಾನ ನೀಡಿದ್ದ ಗರತಿಯಂತೆ. ದನಿಯೆತ್ತಿ ಎಂದೂ ಯಾರನ್ನೂ ಕೂಗದ ಅವಳಿಗೆ ಅಬಚಿಯ ಮೇಲೆ ಪ್ರಾಣವಂತೆ! ನಿನ್ನನ್ನಾದರೋ ಸಿಡುಕುಮೂತಿ ಸಿಂಗಾರೆವ್ವ ಎಂದೇ ಕರೆಯುವಳಂತೆ. ಇಂತಹ ಅಂತೆಕಂತೆಗಳಿಂದಲೇ ನನ್ನಜ್ಜಿ ಒಬ್ಬ ನರರೂಪಧಾರಿ ದೇವತೆಯಾಗಿದ್ದಳು ಎಂಬಂತಹ ಸುಂದರ ಕಥೆಯೊಂದು ನನಗೆ ಬುದ್ಧಿ ತೋಚುವ ಮೊದಲೇ ಅಚ್ಚೊತ್ತಿತ್ತು. ಅವಳ ಸಾವಿನ ವರುಷ ತಿರುಗುವ ಮೊದಲೇ ಹುಟ್ಟಿದ್ದ ನಾನು ಅವಳ ಅಪರಾವತಾರವೆಂದೇ ಎಲ್ಲರೂ ನಂಬಿದ ಪರಿಗೆ ನನಗೇ ನಾಚಿಕೆಯಾಗುತ್ತಿತ್ತು. ಪರಿಣಾಮವಾಗಿ ಆ ಮನೆ ನನಗೆ ಉಣಿಸುತ್ತಿದ್ದ ಪ್ರೀತಿಯ ಅಮೃತಧಾರೆಯೊಂದೇ ನನ್ನ ಪಾಲಿನ ಅದೃಷ್ಟ.

ಎಡಗೈಲಿ ಕುಸುರಿ ಕೆಲಸದ ಊರುಗೋಲಿನೊಟ್ಟಿಗೆ ಒಂದು ಛತ್ರಿ ಛಾಪಿನ ನಶ್ಯದ ಡಬ್ಬಿ, ಬಲಗೈಲಿ ಮಲ್ಲಿನ ಬಿಳೀ ಕರವಸ್ತ್ರ ಹಿಡಿದು ಅಡ್ಡಾಡುತ್ತಿದ್ದ ನಿನ್ನಪ್ಪನೆಂಬೋ ಆರೂವರೆ ಅಡಿಗಳ ಮುಂಗೋಪದ ಮುದ್ದೆಯೊಂದು ನನ್ನ ಅದೆಷ್ಟು ಪ್ರೀತಿಸುತ್ತಿತ್ತೋ ಅದರ ಹತ್ತರಷ್ಟು ಪ್ರಾಣ ತಿನ್ನುತ್ತಿತ್ತೆಂಬುದು ಒಂದು ದೊಡ್ಡ ವಿಪರ್ಯಾಸದ ಸತ್ಯ. ಅವನೊಬ್ಬ ಜಹಗೀರಿಯ ಜಮೀನ್ದಾರ, ಸುತ್ತ ನಾಲ್ಕಾರು ಹಳ್ಳಿಗಳಿಗೆ ಸಾಮ್ಯೋರು ಎಂದೇ ಕರೆಯಲ್ಪಡುವವನು, ಥೇಟ್ ಸಿನೆಮಾಗಳಲ್ಲಿ ಕಾಣಸಿಗುವ ಮನೆಯ ಹಿರಿಯಜ್ಜನಂತೆ ಊರುಗೋಲನ್ನು ತನ್ನ ಠೀವಿಗಾಗಿ ಬಳಸುತ್ತಾ ಓಡಾಡುವ ದೊಡ್ಡ ಆರಂಭದ ಕಮತದವನೂ ಆಗಿದ್ದನು ಅನ್ನುವುದು ಬೇರೆ. ಅವನು ನನ್ನ ‘ನನ್ನಮ್ಮನೇ.. ನಮ್ಮನೆ ಬೆಳಕೇ.. ಬಂಗಾರ..’ ಅಂತೆಲ್ಲಾ ಹೇಳುತ್ತಾ ಎತ್ತಿ ಮುದ್ದಾಡುತ್ತಿದ್ದವನು ನಾನು ಬೆಳೆದು ದೊಡ್ಡವಳಾದಂತೆಲ್ಲಾ “ಬರೀ ಆಟವಾಡುತ್ತಾ ಕಾಲ ಕಳೆಯುತ್ತೆ ಮುಂಡೇದೇ.. ಎಲ್ಲಿ ಪುಸ್ತಕ ತೆಗೀ.. ಎಲಎಲಾ.. ನಾ ಹೇಳಿದ್ದ ಬರೆದು ತೋರಿಸು. ತಿರ್ಯಗ್ಜಂತುವಿನ ಹಾವಳಿಯರಿತ ಪ್ರದ್ಯುಮ್ನನು ನಿರ್ವ್ಯಾಜ್ಯಾಧಿಗಮನೆ ವಾರಿಧಿಗಾತು ಗತಿಸಿದನು. ಇದನ್ನ ಬರೀ ಇವಾಗ..” ಎನ್ನುವನು. ಕಕರುಮಕರಾಗಿ ಪಿಳಿಪಿಳಿ ಕಣ್ಣು ಬಿಟ್ಟರೆ ಆ ಕುಸುರಿಯ ಬೆತ್ತವನ್ನೆತ್ತಿ ಬೆನ್ನಿಗೊಂದು ಠಪಾರನೆ ಬಡಿಯುವನು. “ಅಯ್ಯೋ ತಾತಾ.. ನೋವೂ.. ಹೊಡೀಬೇಡಾ..” ಅಂದರೆ-

“ಬರೆಯಲಾರದ ಸೋಂಭೇರಿಯೇ.. ಕತ್ತೆಯ ವಯಸ್ಸಾಯಿತು. ಇನ್ನೂ ಅಕ್ಷರ ಬರದ ಮೂರ್ಖಳೇ.. ಬರೀ ಆಟವಾಡುವ ಹುಚ್ಚು ಮುಂಡೇದೇ.. ನೆನ್ನೆ ಹೇಳಿಕೊಟ್ಟ ಶ್ಲೋಕ ಇನ್ನಾದರೂ ಬಂತೋ ಇಲ್ಲವೋ..?”

ಎಂದು ಬೆತ್ತಕ್ಕೆ ಕೆಲಸ ಕೊಡುವ ಮತ್ತೊಂದು ಮಾರ್ಗ ಹುಡುಕುವನು. ನಾನು ಅತ್ತೆಯರನ್ನೋ ಅಬಚಿಯನ್ನೊ ಕೂಗುತ್ತಾ ಅಲ್ಲಿಂದ ಎದ್ದುಬಿದ್ದು ಓಡುವೆನು. ಸಂಜೆಮುಂಜೆಗಳಲ್ಲಿ ಅವನು ತೂಗುಮಂಚದ ಮೇಲೆ ಕೂತು ತಾಂಬೂಲ ಮೆಲ್ಲುವಾಗ ಅಪ್ಪಿತಪ್ಪಿಯೂ ಆ ದಿಕ್ಕಿಗೆ ಸುಳಿಯದೇ ಹದಿನಾರಂಕಣಗಳ ಆ ದೊಡ್ಡ ಮನೆಯಲ್ಲಿ ಎಲ್ಲೋ ಹೊಕ್ಕು ಎಲ್ಲೋ ಹೊರಡುವ ವಿನ್ಯಾಸದ ಪರಿಯನ್ನೇ ಆಟವಾಗಿಸಿಕೊಂಡು ನಲಿಯುವೆನು.

ಮನೆಯ ಬಾಗಿಲಿಗೆ ಬಂದ ಯಾವೊಂದು ನರಪ್ರಾಣಿಯೂ ಹಸಿದ ಹೊಟ್ಟೆಯಲ್ಲಿ ಹಿಂದಿರುಗದಂತೆ ನೋಡಿಕೊಂಡಿದ್ದ ಮಹಾಮಾಯಿಯಂತೆ. ಅಜ್ಜನ ಆಣತಿಗೆ ಯಾವತ್ತೆಂದರೆ ಯಾವತ್ತೂ ಚಕಾರವೆತ್ತದ ಹೆಣ್ಣಂತೆ. ಅವನು ಕೊಟ್ಟುಬಿಡು ಎಂದಾಗ ಕತ್ತಿನ ಸರಗಳನ್ನೂ ಅದೆಷ್ಟೋ ತೊಲದ ಕೈಬಳೆಗಳನ್ನೂ ಕಿವಿಯೋಲೆಗಳನ್ನೂ ನಿಂತ ನಿಲುಕಿನಲ್ಲೇ ಬಿಚ್ಚಿ ಪಡಸಾಲೆಯಲ್ಲಿ ಬೇಡಿ ಬರುತ್ತಿದ್ದ ಬಡವರಿಗೆ ದಾನ ನೀಡಿದ್ದ ಗರತಿಯಂತೆ. ದನಿಯೆತ್ತಿ ಎಂದೂ ಯಾರನ್ನೂ ಕೂಗದ ಅವಳಿಗೆ ಅಬಚಿಯ ಮೇಲೆ ಪ್ರಾಣವಂತೆ.

ಸಂಜೆಯಾದರೆ ದೇವರ ಮನೆಯ ಮುಂದೆ ಉಂಟಾಗುತ್ತಿದ್ದ ಹಬ್ಬದ ವಾತಾವರಣ, ಸಾಮೂಹಿಕ ಭಜನೆ, ಝಗಮಗಿಸುವ ಮಂಗಳಾರತಿ, ಮಂಗಳಂ ಗುರುಶ್ರೀ ಚಂದ್ರಮೌಳೇಶ್ವರಗೇ.. ಎಂದು ರಾಗವಾಗಿ ಹಾಡುತ್ತಿದ್ದ ಮನೆಮಂದಿ ಇಂದಿಗೂ ನನ್ನ ಕನಸಿನ ತೇರು. ಆ ಸಮಯ ಏನೇ ಕೆಲಸವಿದ್ದರೂ ಬಿಟ್ಟು ಬಂದು ಸೆರಗಲ್ಲಿ ಕೈಯೊರೆಸುತ್ತಾ ಅರೆಬಾಗಿ ನಿಲ್ಲುತ್ತಿದ್ದ ಮನೆಯ ಹೆಂಗಳೆಯರ ಸೀರೆ ನೆರಿಗೆಯೊಳಗೆ ಅಡಗಿ ಮಂಗಳದ ಹಾಡು ಬಾರದಿದ್ದರೂ ದೊಡ್ಡ ದನಿ ತೆಗೆದು ಮಕ್ಕಳೆಲ್ಲಾ ಗುಯ್ಗುಡುತ್ತಾ ಏನೇನೋ ಹಾಡುತ್ತಿದ್ದೆವು. ಅದು ಭಗವಂತನ ಆರಾಧನೆಯೆಂಬುದನ್ನು ಅಕ್ಷರಶಃ ಮರೆತು ನಂತರದಲ್ಲಿ ಸಿಗಬಹುದಾದ ಪ್ರಸಾದದ ಬಗ್ಗೆ ಕಣ್ಣಂಚಿನಲ್ಲಿಯೇ ಮಾತಾಡಿಕೊಳ್ಳುತ್ತಿದ್ದೆವು. ಅದು ಕಡಲೆಹಿಟ್ಟೋ, ಸಿಹಿ ಅವಲಕ್ಕಿಯೋ, ಕೊಬ್ಬರಿ ಬೆಲ್ಲವೋ, ಬಾಳೆಹಣ್ಣಿನ ಚೆರುಪೋ? ಅದು ದಕ್ಕುವ ಪ್ರಮಾಣವೋ, ಅದರ ಮೇಲೆ ಯಾರಿಗೆ ಎಷ್ಟು ಒಲವೆಂಬ ಮಹತ್ತಾದ ಪ್ರಶ್ನೆಯೋ ಏನಾದರೊಂದು ಮಂಗಳದ ಹಾಡಿನ ದನಿಯನ್ನೂ ಮೀರಿ ಮನದಲ್ಲಿ ಕಾಡುತ್ತಿತ್ತು.

ಮುಸ್ಸಂಜೆ ಜಾರುವ ಹೊತ್ತಿಗೆ ಪಡಸಾಲೆಯಲ್ಲಿ ಸೇರುತ್ತಿದ್ದ ಜನಜಂಗುಳಿ, ತಾಂಬೂಲ ಜಗಿಯುತ್ತಲೇ ಅಜ್ಜನು ಶುರುವಿಡುತ್ತಿದ್ದ ಜೈಮಿನಿ ಹಾಗೂ ಕುಮಾರವ್ಯಾಸ ಭಾರತದ ಗಮಕ, ದೂರದಲ್ಲೇ ಕೂತು ಕೇಳುತ್ತಾ ತಮ್ಮತಮ್ಮಲ್ಲೇ ಏನೇನೋ ಮಾತಾಡಿಕೊಳ್ಳುತ್ತಾ ಕೆಲವೊಮ್ಮೆ ವಿಷಾದವನ್ನೂ ಕೆಲವೊಮ್ಮೆ ಭರಪೂರ ನಗುವನ್ನೂ ಒಂದೇ ರೀತಿಯಲ್ಲಿ ಹೊರಹಾಕುತ್ತಾ ತಲ್ಲೀನರಾಗಿರುತ್ತಿದ್ದ ಹೊಲಮನೆ ಆಳುಗಳು, ಅವರಿಗೆಲ್ಲಾ ದಿನವೂ ಕಾಫಿ ಮಂಡಕ್ಕಿಯ ಸಮಾರಾಧನೆ, ಇದೆಲ್ಲವನ್ನೂ ಕಣ್ತುಂಬಿಕೊಳ್ಳುತ್ತಾ ಎಂಟರಲ್ಲಿ ಯಾವುದಾದರೊಬ್ಬ ಮಾವನ ಮಡಿಲಲ್ಲಿ ಹಿತವಾಗಿ ಕೂತು ಪಂಚೆಯಂಚಿನಲ್ಲಿ ಆಟವಾಡುತ್ತಾ ಅಲ್ಲೇ ಏನಾದರೊಂದು ಮೆದ್ದು ಹಾಗೇ ಮಲಗಿಬಿಡುತ್ತಿದ್ದ ನಾನು… ಇಂತಹ ಸುಖದ ಆಗರವಾದ ನಿನ್ನ ತವರೆಲ್ಲಿ? ಖಾಲಿ ಕಾಫಿಲೋಟಗಳನ್ನು ನಾನೇ ಆಯುತ್ತಾ, ಸದಾ ಯಾವುದಾದರೊಂದು ಬಾಗಿಲು ಆತು ದಕ್ಕದ ಪ್ರೀತಿಗಾಗಿ ಶಬರಿಯಂತೆ ಕಾಯುತ್ತಾ, ಮಾತು ಮಾತಿಗೆ ಬೈಗುಳವೋ ಏಟೋ ತಿನ್ನುತ್ತಾ ಬದುಕುವ ನರಕದಂಥಾ ನಿನ್ನ ಗಂಡನ ಮನೆಯೆಲ್ಲಿ?

* * * * *

ಎಂಟು ಜನ ಸೋದರ ಮಾವಂದಿರೂ, ಒಬ್ಬಳು ಮುತ್ತಿನಂಥಾ ಚಿಕ್ಕಮ್ಮನೂ ಇದ್ದ ಮನೆಯಲ್ಲಿ ಅತ್ತೆಯರು ಮಾವಂದಿರ ಮಕ್ಕಳುಗಳು ಎಲ್ಲಾ ಸೇರಿ ಹಲವು ಮಂದಿ. ಒಬ್ಬೊಬ್ಬರದು ಒನ್ನೊಂದು ಪರಿ. ಕಿರಿಯ ಮಾವನು ಪ್ರತಿ ಬೆಳಗೂ ಯೋಗಾಸನ ಮಾಡುವೆನೆಂದು ವಿಚಿತ್ರವಾಗಿ ಕೈಕಾಲುಗಳನ್ನು ತಿರುಚುತ್ತಾ ಓಂಕಾರವನ್ನು ನಾಭಿಯಿಂದ ವ್ಯಾಕರಿಸುತ್ತಾ ಕಣ್ಣು ತೇಲಿಸಿ ಕೂರುವನು. ಕೈಕಾಲು ತಿರುಚಿದ್ದು ಮುಗಿದ ಮೇಲೆ ಹತ್ತಾರು ಚೊಂಬು ನೀರನ್ನು ಗಟಗಟನೆ ಕುಡಿಯುವನು, ಮತ್ತದನ್ನು ವಾಂತಿ ಮಾಡುತ್ತಾ ಹಾಗೇ ಹೊರಹಾಕುವನು. ನನಗೋ, ಇವನೊಂದು ಸೋಜಿಗವೇ ಸರಿ. ಅವನು ಹಾಗೆ ಬಕಬಕನೆ ಕುಡಿದ ನೀರೆಲ್ಲಾ ವಾಂತಿ ಮಾಡುವಾಗ ಹೆದರಿ ಹಿತ್ತಿಲ ಬಾಗಿಲಲ್ಲಿ ನಿಂತು ಮಾಮಾ.. ಹುಷಾರಾಗಿರು ಪ್ಲೀಸ್.. ಎಂದು ಕೂಗುವೆನು. ಯೋಗಾಭ್ಯಾಸ ಮುಗಿಸಿ ಬರುವ ಅವನು “ಅಯ್ಯೋ ಕಪಿಚಿನ್ನಿ, ನನಗೇನೂ ಆಗಿಲ್ಲ ಕಣೇ. ಅದು ದಿನಾ ಮಾಡುವ ಯೋಗಾಭ್ಯಾಸಾ..” ಎಂದು ಕೆನ್ನೆ ಕಚ್ಚಿ ಮುದ್ದಿಸುವನು. ಅಷ್ಟೂ ಜನ ಆಜಾನುಬಾಹು ಮಾವಂದಿರಲ್ಲಿ ಮೂರ್ನಾಲ್ಕು ಮಂದಿ ಮಾವಂದಿರು ಜಗಜಟ್ಟಿಗಳೆಂದೂ ಅವರು ಯೌವ್ವನದ ದಿನಗಳಲ್ಲಿ ಮನೆಯ ಹಿಂದಿನ ಗರಡಿಯಲ್ಲಿ ಸೀಸದ ಗುಂಡುಗಳನ್ನು ಗಾಳಿಯಲ್ಲಿ ಮೇಲಕ್ಕೆ ತೂರಿ ಭುಜದಲ್ಲಿ ಹಿಡಿಯುತ್ತಿದ್ದರೆಂದೂ ಹೇಳುತ್ತಿದ್ದೆಯಲ್ಲಾ, ಅವರಲ್ಲಿ ಒಬ್ಬನೇ ಈ ವಾಂತಿವೀರನಲ್ಲವೇ? ಮನೆಯ ತಲಬಾಗಿಲಿಗೆ ನೆತ್ತಿ ತಾಗುವಷ್ಟು ಎತ್ತರದವನು. ಕಡೆಗೂ ಮದುವೆಯಾಗದೇ ಬ್ರಹ್ಮಚರ್ಯಾಶ್ರಮದ ಕಠಿಣ ಪರಿಪಾಲನೆ ಮಾಡಿದವನಿಗೆ ಊರಿನ ಆ ಬದಿಯ ಕೇರಿಯಲ್ಲೊಂದು ಗರ್ಲ್ ಫ್ರೆಂಡ್ ಇತ್ತೆಂಬ ಕಾರಣಕ್ಕೆ ವೀರಪ್ರತಾಪಸಿಂಹನಾದ ತಾತನಿಗೂ ಯುವಕೇಸರಿಯಾದ ಈ ಮಾವನಿಗೂ ಮಹಾನ್ ಕುರುಕ್ಷೇತ್ರವೊಂದು ಆಗಾಗ ನಡುಮನೆಯ ಪ್ರಾಂಗಣದಲ್ಲಿ ಏರ್ಪಡುತ್ತಿತ್ತು. ಅದರ ಸುದ್ದಿಯು ಒಂದು ನೀಲಿ ಬಣ್ಣದ ಇನ್ ಲ್ಯಾಂಡ್ ಲೆಟರಿನ ಮೂಲಕ ನಿನಗೆ ತಲುಪಿ ಸೌಖ್ಯವಿಲ್ಲದ ಗಂಡನಮನೆಯಲ್ಲಿ ನಿನ್ನ ಕೆಲ ಕಣ್ಣೀರ ಹನಿಗಳು ಅನಾಮತ್ತು ಉರುಳಿ ಭೂಮಿ ಸೇರಲು ಕಾರಣವಾಗುತ್ತಿತ್ತು. ನಾನು ಹತ್ತಿರ ಬಂದು ತಬ್ಬಿ ಗೋಗರೆದು ಕೇಳಿದರೆ, “ನಿನ್ನ ಮೋನಿ ಮಾಮ ಹೀಗೆ ಮಾಡಬಹುದಾ ಕಂದಾ..? ನಮ್ಮ ಮನೆತನದ ಹೆಸರಿಗೆ ಮಸಿ ಬಳಿಯೋ ಕೆಲಸ.. ನಿಮ್ಮ ತಾತ ಎಂಥಾ ದೊಡ್ಡ ಮನುಷ್ಯ..!” ಎಂದಷ್ಟೇ ಹೇಳಿ ಅಳುತ್ತಿದ್ದೆ. ನಾವು, ಆ ಮನೆಯ ಮಕ್ಕಳು ಬೆಳೆದ ಮೇಲೆ, ನೀವು, ದೊಡ್ಡವರು ಕಣ್ಣಿಗೆ ತೊಡಿಸಿಟ್ಟಿದ್ದ ಇಂತಹ ಹಳದಿ ಹೊದಿಕೆಯನ್ನು ಬದಿಗೆ ಸರಿಸಿ ವಿಚಾರಗಳನ್ನು ನಮ್ಮದೇ ದೃಷ್ಟಿಯಲ್ಲಿ ಅಳೆಯತೊಡಗಿದ ಮೇಲೆ ಈ ದೊಡ್ಡಸ್ತಿಕೆಯೆಂಬ ದೊಂಬರಾಟದ ಹಲವು ಮುಖಗಳು ಅನಾವರಣಗೊಂಡು ನಡೆದದ್ದನ್ನೆಲ್ಲಾ ನಮ್ಮದೇ ಆಯಾಮದಲ್ಲಿ ಅರ್ಥಮಾಡಿಕೊಂಡೆವು. ಕರ್ಮದ ಹುಚ್ಚು ಹೆಣ್ಣು ಕಣೇ ನೀನು. ಎಲ್ಲರ ಪಾಪದ ಭಾರ ನಿನ್ನ ತಲೆಯ ಮೇಲೆಳೆದುಕೊಂಡು ಸುಖಾಸುಮ್ಮನೇ ಅಳುವದನ್ನೇ ಕಾಯಕ ಮಾಡಿಕೊಂಡವಳು. ಬರುಬರುತ್ತಾ ನೀನೂ ನನ್ನೊಟ್ಟಿಗೆ ತವರಿಗೆ ಬರುವುದು ಹೆಚ್ಚಾಗಿ ಅಲ್ಲೇ ಕಳೆಯುವ ದಿನಗಳೂ ಹೆಚ್ಚಾಗಿ ಮುಂದೊಮ್ಮೆ ನಿನ್ನ ತವರೇ ನಮ್ಮ ಬೀಡಾಗುವ ಹೊತ್ತಿಗೆ ಹುಲಿಯಂಥಾ ಅಜ್ಜನೂ ಮರೆಯಾಗಿದ್ದನು, ತವರೂ ಒಡೆದು ಚೂರುಚೂರಾಗಿತ್ತು.

ಅಲ್ಲಿ ನೋಡು, ಕೆಲ ವರುಷಗಳ ನಂತರ ಆ ನಿನ್ನ ದೇವತೆಯಂಥಾ ತಂಗಿಯು, ನನ್ನ ಪ್ರೀತಿಯ ಅಬಚಿಯು, ಅಜ್ಜನ ಯಾವ ಹೂಂಕಾರ ಠೇಂಕಾರಗಳಿಗೂ ಬಗ್ಗದೇ ಎಲ್ಲ ಕಟ್ಟುಪಾಡುಗಳನ್ನು ಝಾಡಿಸಿ ಧಿಕ್ಕರಿಸಿ ತನಗಿಷ್ಟ ಬಂದ ಸುಂದರಾಂಗನೊಬ್ಬನನ್ನು ವರಿಸಿ ಹಾಯಾಗಿ ತನ್ನ ದಾರಿ ತಾನು ತುಳಿದು ಇವರ್ಯಾರೂ ತನಗೆ ಸಂಬಂಧವೇ ಇಲ್ಲವೆಂಬಂತೆ ನಿರ್ಭಾರಳಾಗಿ ತನ್ನ ಬದುಕು ಕಟ್ಟಿಕೊಂಡಳು. ಸರ್ಕಾರಿ ನೌಕರಿಯ ಹುಡುಗ, ನೋಡಲು ಒಳ್ಳೇ ಹಾಲಿನ ಗೊಂಬೆ. ಅಕ್ಕಪಕ್ಕ ನಿಂತರೆ ಯಾರಿಗಿಂತ ಯಾರು ಚಂದ ಎಂದು ನಿರ್ಧರಿಸುವುದೇ ಕಷ್ಟ. ಆ ಮಹರಾಯನೋ ಮನೆತನಕ್ಕೆ ಕಾಲಿಟ್ಟವನೇ ನಿನ್ನನ್ನು ಅಕ್ಕಾ.. ಎಂದೇ ಕರೆದು ತನ್ನ ಹೆಂಡತಿಗೆ ಇನ್ನೂ ಪ್ರೀತಿಪಾತ್ರನಾದನು. ನನ್ನನ್ನೂ ತಮ್ಮನನ್ನೂ ತನ್ನ ಎರಡೂ ತೊಡೆಗಳ ಮೇಲೆ ಕೂಡ್ರಿಸಿಕೊಂಡು ಆಟವಾಡಿಸುವನು. ಬಿಡಿಸಲಾಗದ ಒಗಟುಗಳನ್ನು ಹೇಳಿ ಹಗಲೂ ರಾತ್ರಿಯೂ ಕಾಡುವನು. ಅಜ್ಜನನ್ನು ಅಪ್ಪಯ್ಯಾ ಎಂದೇ ಕರೆಯುವನು. ಅತ್ತೆ-ಮಾವಂದಿರಿಗೆ ಬೇಕುಬೇಕಾದ ಹಾಗೆ ಬಣ್ಣದ ಮಾತನಾಡುತ್ತಾ ಮದುವೆಯಾದ ಕೆಲವೇ ದಿನಗಳಲ್ಲಿ ನಿನ್ನ ಗಂಡನ ಅಸ್ಥಿತ್ವವೇ ಉಳಿಯದಂತೆ ಅಳಿಯನೆಂದರೆ ಮಾಲಿನಿಯ ಗಂಡನೇ ಎಂಬಷ್ಟು ನಿನ್ನ ತವರಿನಲ್ಲಿ ಬೆರೆತುಹೋದನು. ಅಬಚಿಯೂ ಅವರ ಮನೆಯ ನೆಚ್ಚಿನ ಸೊಸೆಯಾಗಿ ಹೋದಳು. ಈಗ ಅಬಚಿಗೆ ಗಂಡನ ಮನೆಯ ಪ್ರೀತಿಯೂ ದಕ್ಕಿ ಅವಳು ಮತ್ತಷ್ಟು ಮಗದಷ್ಟು ಹೆಣ್ಣಾಗುತ್ತಾ ಹೋದಳು. ಹಾಗೂ ನಮಗೆ ಕಡಿಮೆ ದಕ್ಕುತ್ತಾ ಮರೀಚಿಕೆಯಾಗುತ್ತಾ ಅವಳು ಬಿಟ್ಟು ನಡೆದ ಪ್ರೀತಿಯ ನೆನಪು ಮಾತ್ರ ಉಳಿಯುವಂತೆ ಮಾಡಿ ಹೋದಳು. ಅದು ಕಣೇ ಹುಚ್ಚಿ, ಬಾಳು ಕಟ್ಟಿಕೊಳ್ಳುವ ಜಾಣ್ಮೆಯೆಂದರೆ..! ಆದರೂ ಅನವರತ ನಿಮ್ಮಿಬ್ಬರೊಳಗೆ ವಿನಿಮಯವಾಗುತ್ತಿದ್ದ ಮೂರನೇ ಮನೆ ಕುಮಾರಣ್ಣನ ಮನೆಗೆ ಪೋಸ್ಟಿನಲ್ಲಿ ಬರುತ್ತಿದ್ದ ಆ ನೀಲಿ ಕಾಗದದ ವ್ಯವಹಾರವು ನಿನ್ನ ಹೊರತು ನನಗೆ ಮಾತ್ರ ಗೊತ್ತಿತ್ತೆಂಬುದು ಜಗತ್ತಿಗೆ ಗೊತ್ತೇ ಇಲ್ಲ! ಹಾಗೇ ನನ್ನ ಶಾಲೆಗೆ ಬಿಡುವಾಗ ನೀನು ಗುಟ್ಟಾಗಿ ವಾಪಸ್ ಡಬ್ಬಿಯಲ್ಲಿ ಹಾಕುತ್ತಿದ್ದ ಆ ಗೋಪೀ ಬಣ್ಣದ ಕಾರ್ಡಿನ ವಿಚಾರ ಕೂಡಾ…

(ಮುಂದುವರಿಯುವುದು)