ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು‌. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತ ಅವರ ಆಲೋಚನೆಗಳನ್ನು ಪ್ರೀತಿಯಿಂದ ತಿದ್ದುತ್ತಿದ್ದರು.
ಅವರ ಸ್ನೇಹಿತರಾದ ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ. ‌

 

ಹಠಾತ್ತನೇ ವಿದಾಯ ಹೇಳಿ ಹೋದ ಗೆಳೆಯರೊಬ್ಬರನ್ನು ನೆನೆಯುವುದು ಹೇಗೆ? ನನಗೆ ಮತ್ತು ಅವರಿಗೆ ಸಮಾನವಾಗಿ ಇರುವ ಸಂಗತಿಗಳೆಂದರೆ, ನಾವಿಬ್ಬರು ಇಂಗ್ಲಿಷ್ ಮೇಷ್ಟ್ರುಗಳು. ಸಾರ್ವಕಾಲಿಕವಾಗಿರುವ ಶೇಕ್ಸ್ ಪಿಯರ್, ಬಲಪಂಥೀಯ ಚಿಂತನೆಗಳ ಬಗ್ಗೆ ಮತ್ತು ರಾಜಕೀಯದ ಬಗ್ಗೆ ರೋಷದಿಂದ ಕೂಡಿದ ಪ್ರತಿರೋಧ, ಒಳ್ಳೆಯ ಪುಸ್ತಕಗಳ ಬಗೆಗಿನ ಪ್ರೀತಿ ಮತ್ತು ಮಾತಿನ ನಿಲುಗಡೆಯೇ ಇಲ್ಲದ ಗೆಳೆಯರೊಂದಿಗೆ ದೀರ್ಘ ಸಾಯಂಕಾಲಗಳು. ಹೀಗಾಗಿ ಅವರು ಶಿವಮೊಗ್ಗೆಗೆ ಬರುತ್ತಾರೆ ಎಂದು ನಿಗದಿಯಾದ ಕೂಡಲೇ ನಾನು, bad boy ಸಿರಾಜ್, ಪುನೀತ್, ರಾವ್ ಹೀಗೆ ಗೆಳೆಯರ ಒಂದು ಟೋಳಿಯು ಸರ್ವಸಿದ್ಧತೆಗಳೊಂದಿಗೆ ಕಾಯುತ್ತಿತ್ತು. ಏನು ಸರ್, ನಿಮ್ಮ ದೇಶದಲ್ಲಿ ಕೋಳಿಗಳ ಆರೋಗ್ಯ, ಸ್ಥಿತಿಗತಿ ಹೇಗೆ ಎಂದು ಆರಂಭವಾಗಿ ಆರೋಗ್ಯವಂತ ಕೋಳಿಗಳು ಚಿಕನ್ ಆಗಿ, ಮೀನುಗಳು ಮಸಾಲೆ ಉಟ್ಟುಕೊಂಡು ಕೆಂಪಾಗಿ ಒಂದು ಸಣ್ಣಪ್ರಮಾಣದ ಮೇಜವಾನಿ ಆರಂಭವಾಗುತ್ತಿತ್ತು.

ಅವರಲ್ಲೊಬ್ಬ ಅಪ್ಪಟ hedonist ಇದ್ದುದರಿಂದ ನನಗೆ ಅವರು ಪ್ರಿಯವಾದ ಮಿತ್ರರು. ಕಾರ್ಯಕ್ರಮವೆಂದರೆ ಗ್ರೀನ್ ರೂಮಿನಿಂದ ಹೊರಬಂದ ನಟನ ಹಾಗೆ ಆಕರ್ಷಕವಾಗಿ ಬಟ್ಟೆತೊಟ್ಟು ದನಿಯ ಏರಿಳಿತಗಳನ್ನೂ ಕರಾರುವಾಕ್ಕಾಗಿ ಬಳಸಿಕೊಂಡು ಮತ್ತು ಭಾಷಣದ ಮಧ್ಯೆ ಯಾರಾದರೂ ಮಾತನಾಡಿದರೆ ಕೆಂಗಣ್ಣು ಮಾಡಿಕೊಂಡು ಹುಬ್ಬೇರಿಸಿ, ಕೋಪ ತೋರಿಸಿ ಸದ್ದು ಅಡಗಿದ ಮೇಲೆ ಮತ್ತೆ ಭಾಷಣ. ವ್ಯಂಗ್ಯ, ಕಟಕಿ ಇವುಗಳ ಜೊತೆಗೆ ಎಲ್ಲೋ ಅಮೂರ್ತಗಳ ಕಡೆಗೆ ತುಡಿಯುವ, ಪ್ರತಿಮೆಗಳೊಂದಿಗೆ ಸ್ವಗತದಂತಹ ಮಾತು ಕೂಡ.

ಆದರೆ ಚಳವಳಿ, ವಿರೋಧ, ಪ್ರದರ್ಶನಗಳಿದ್ದರೆ ಅಪಾರ ಬದ್ಧತೆ ಮತ್ತು ಶಿಸ್ತಿನ ವ್ಯಕ್ತಿ. ಖಚಿತವಾದ ಮಾತು ಚಿಂತನೆ. ದಣಿವು, ಆರಾಮ ವಿರಾಮಗಳ ನೆಪವೇ ಇಲ್ಲ. ಸೆಲೆಬ್ರಿಟಿಯಾಗಿದ್ದರೂ ಪ್ರಚಾರಪ್ರಿಯತೆ ಬೇಡವೆನ್ನುವಂತಹ ಧೈರ್ಯದಿಂದ ಮುನ್ನುಗ್ಗುವ ಸ್ವಭಾವ, ಹೀಗೆಲ್ಲಾ ನೆನಪುಗಳು ಇರಲಿ.

1970-80ರ ಚಳವಳಿಗಳ ನಂತರ ಬರಹಗಾರರಿಗೆ ತಾವು ನಾಗರಿಕ ಸಮುದಾಯವೊಂದರ ಪ್ರತಿನಿಧಿಗಳು ಎನ್ನುವ ಎಚ್ಚರವೂ ತೀವ್ರವಾಯಿತು. ಯಾವುದೇ ಸಂಘಟನೆ ಪಕ್ಷಗಳಿಗೆ ಸೇರದೇ ಇದ್ದರೂ ಒಬ್ಬ ನಾಗರಿಕನಾಗಿ ಸಿವಿಲ್ ರೆಸಿಸ್ಟೆನ್ಸ್ ಮಾದರಿಯಲ್ಲಿ ಕ್ರಿಯಾಶೀಲತೆಯಲ್ಲಿ ಬದ್ಧನಾಗಿ ಭಾಗಿಯಾಗಬೇಕೆಂಬ ಒತ್ತಾಸೆ ಮೂಡಿತು. ಅಲ್ಲದೆ ಪ್ರಜಾಪ್ರಭುತ್ವವಾದೀ ವಾಗ್ವಾದ, ಚರ್ಚೆ, ವಿರೋಧಗಳಲ್ಲಿ ಎಲ್ಲರಿಗೂ ನಂಬಿಕೆಯಿತ್ತು. ಹೀಗಾಗಿ ಭಾಷಣ, ಬರಹ, ಪತ್ರಿಕೆಗಳಿಗೆ ಪತ್ರ, ಸಾರ್ವಜನಿಕ ಹೋರಾಟಗಳಲ್ಲಿ ಭಾಗವಹಿಸುವುದು -ಇವೆಲ್ಲವೂ ಅರ್ಥಪೂರ್ಣ ಕ್ರಿಯೆಗಳಾಗಿ ಕಾಣುತ್ತಿದ್ದವು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಉದಾರವಾದಿ ಮಾನವೀಯ ಚಿಂತನೆಯಲ್ಲಿ ಗಟ್ಟಿಯಾದ ನಂಬಿಕೆ ಇದ್ದ ಜಿ.ಕೆ. ಗೋವಿಂದ ರಾವ್ ಅವರಿಗೆ ಅಂದಿನ ಯುಗಧರ್ಮವು ಕೊಟ್ಟ ಪಾತ್ರವು ಅಸಹಜವಾಗಿ ಕಾಣಲಿಲ್ಲ. 1980-90ರ ನಂತರ ಕನ್ನಡದ ಪ್ರಜ್ಞೆಯೇ ಕೋಮುವಾದ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತಗಳ ಪ್ರತಿರೋಧದ ನೆಲೆಗಳತ್ತ ಪ್ರಬಲವಾಗಿ ಹೊರಳಿತು. ಪ್ರತಿರೋಧವೇ ಬರಹಗಾರನ ಗುರುತು ಎನ್ನುವಂತಾಯಿತು. ಹೀಗಾಗಿ ಗೋವಿಂದ ರಾವ್ ಅವರು ನಿರಂತರವಾಗಿ ತಮ್ಮ ವಿದ್ವತ್ತು, ಓದು ಹಾಗೂ ವ್ಯಕ್ತಿತ್ವವನ್ನು ಈ ಹೋರಾಟಗಳಲ್ಲಿ ತೊಡಗಿಸಿಕೊಂಡರು. ಅವರ ಸಿದ್ಧಾಂತಗಳಿಗಿಂತ, ಬರಹಗಳಿಗಿಂತ ಅತ್ಯಂತ ಪ್ರಭಾವಿಯಾಗಿದ್ದು ಅವರ ಪ್ರೆಸೆನ್ಸ್. ನಾನೇ ನೋಡಿದ ಹಾಗೆ ನೂರಾರು ಯುವಕರು, ವಿದ್ಯಾರ್ಥಿಗಳು ಹೋರಾಟಗಾರರು ಅವರಿಂದ ಪ್ರೇರಣೆ ಪಡೆದರು. ಅವರ ಅಪ್ಪಟ ಮನುಷ್ಯ ಪ್ರೀತಿ ಹಾಗೂ ಹೃದಯವಂತಿಕೆಯಿಂದ ಅನೇಕ ಸಂಘರ್ಷದ ಸನ್ನಿವೇಶಗಳು ಮಾನವೀಯವಾಗುತ್ತಿದ್ದವು.

ನನಗೆ ಖುಷಿ ಹಾಗೂ ಅಚ್ಚರಿಯೆಂದರೆ ಒಬ್ಬ ಇಂಗ್ಲಿಷ್ ಜೆಂಟಲ್ ಮ್ಯಾನ್ ಒಬ್ಬ ಆಕ್ಟಿವಿಸ್ಟ್ ಆಗಿ ಎರಡನ್ನೂ ಸಹಜವಾಗಿ ಸುಂದರವಾಗಿ ನಿಭಾಯಿಸಿದರು. ನನಗೆ ಗೊತ್ತು, ಇನ್ನು ಮೇಲೆ ಅವರನ್ನು ನೆನಪು ಮಾಡಿಕೊಂಡಾಗ ನನ್ನ ಮಾತುಗಳಿಗೆ ನಾಸ್ಟಾಲಜಿಕ್ ಭಾವನೆಯ ಲೇಪವಿರುತ್ತದೆ. ಒಂದು ಕಾಲದಲ್ಲಿ ಸಾಧ್ಯವಿದ್ದ ನಾಗರಿಕ, ಪ್ರಜಾಪ್ರಭುತ್ವವಾದೀ ಪ್ರತಿರೋಧದ ಸಂಕೇತವಾಗಿ, ಅಂದರೆ ಈಗ ಮುಗಿದು ಹೋದ ವಿದ್ಯಮಾನದ ಸಂಕೇತವಾಗಿ ಅವರು ಕಾಣತೊಡಗುತ್ತಾರೆ. ಇದು ನಮ್ಮ ದುರಂತ.