ಎರಡು ವರ್ಷ- ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಅವರು ‘ಇಲ್ಲ’ ಎನ್ನುವುದನ್ನು ನಂಬಲಿಕ್ಕೂ ಆಗುತ್ತಿಲ್ಲ. ಅವರಿದ್ದದ್ದೇ ಹಾಗೆ- ಸದ್ದಿಲ್ಲದೆ, ಸುದ್ದಿಯಾಗದೇ. ತಮ್ಮ ಪಾಡಿಗೆ ತಾವು ಗಿಡಗಂಟೆಕುಂಟೆಗಳ ನಡುವೆ. ಎರಡು ವರ್ಷಗಳ ಹಿಂದೆ, ಇದೇ ಏಪ್ರಿಲ್ ಐದರಂದು ದೂರದ ಮಲೆನಾಡಿನ ಮಡಿಲಿನಲ್ಲಿರುವ ಮೂಡಿಗೆರೆಯಿಂದ ಎದ್ದುಬಂದ ‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಕನ್ನಡಿಗರನ್ನು ಕ್ಷಣ ಖಿನ್ನತೆಗೆ ದೂಡಿತ್ತು. ಮೂಡಿಗೆರೆಯ ಮೂಲೆಯಲ್ಲಿ, ಮೂಡಿಗೆರೆಯ ಜನಕ್ಕೇ ಗೊತ್ತಿಲ್ಲದಂತೆ ಬದುಕುತ್ತಿದ್ದ ಬಿರಿಯಾನಿ ಕರಿಯಪ್ಪನನ್ನು ಕರ್ನಾಟಕಕ್ಕೇ ಪರಿಚಯಿಸಿದ ತೇಜಸ್ವಿ, ಕಾಕತಾಳೀಯವೆಂಬಂತೆ, ತಮ್ಮ ಕೊನೆಯ ಊಟಕ್ಕೆ ಆಯ್ಕೆ ಮಾಡಿಕೊಂಡದ್ದೂ ಕೂಡ ಬಿರಿಯಾನಿಯನ್ನೇ. ತೇಜಸ್ವಿಯವರ ವಿಶೇಷವಿದ್ದದ್ದೇ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳನ್ನು ಕಂಡಿರಿಸುವಲ್ಲಿ. ಕರ್ನಾಟಕಕ್ಕೆ ಪರಿಚಯಿಸುವಲ್ಲಿ.

ತೇಜಸ್ವಿಯವರ ವ್ಯಕ್ತಿತ್ವವೇ ಅಂಥಾದ್ದು. ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕುತ್ತಲೇ ತಮ್ಮ ಸೃಜನಶೀಲ ಪ್ರತಿಭೆಯನ್ನು ಹತ್ತು ಹಲವು ಕ್ಷೇತ್ರಗಳಲ್ಲಿ ಹರಿಯಬಿಟ್ಟವರು. ಉಡಾಫೆಯ ವ್ಯಕ್ತಿಯಂತೆ ಕಾಣುತ್ತಿದ್ದರೂ ತಮ್ಮ ಗಂಭೀರ ಸಂಸ್ಕೃತಿ ಚಿಂತನೆಗಳಿಂದ ಕನ್ನಡಿಗರ ಮನದಲ್ಲಿ ಛಾಪು ಒತ್ತಿದವರು. ಕೃಷಿ, ಕಾಡು, ಕಣಿವೆಗಳಲ್ಲಿ ಕಂಡುಂಡ ಅನುಭವದ್ರವ್ಯವನ್ನು ಬರಹಕ್ಕೆ ತಂದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಸಮಾಜವಾದಿ ಹೋರಾಟ, ರೈತ ಸಂಘಟನೆ, ಪ್ರಗತಿಪರ ನೋಟ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಸರಳ ಕನ್ನಡಕ್ಕಿಳಿಸಿ ಕನ್ನಡದ ಓದುಗ ವಲಯವನ್ನು ವಿಸ್ತರಿಸಿದವರು.

ಇಂತಹ ಸಂಸ್ಕೃತಿಕೇಂದ್ರಿತ ಲೇಖಕ ಈ ಕ್ಷಣದಲ್ಲಿ ಯಾಕೆ ನೆನಪಾದರೆಂದರೆ, ನಾನೂ ಕೂಡ ಅವರು ಕಂಡಿರಿಸಿದ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳಲ್ಲಿ ಒಬ್ಬನಾದ್ದರಿಂದ. ನಾನು ಅವರ ಬರಹಕ್ಕೆ ವಸ್ತುವಾಗಲಿಲ್ಲ, ವಶವಾದೆ. ಚನ್ನರಾಯಪಟ್ಟಣದಂತಹ ಪುಟ್ಟ ಊರಲ್ಲಿ ತೇಜಸ್ವಿಯವರ ಬರಹಗಳಿದ್ದ ‘ಪತ್ರಿಕೆ’ ಮಾರುತ್ತಾ, ಅವರು ಬರೆದದ್ದನ್ನು ಬೆರಗಿನಿಂದ ಓದುತ್ತಾ, ಕುವೆಂಪುರವರ ಮಗ ತೇಜಸ್ವಿಯನ್ನು ಬೆಟ್ಟದಂತೆ ಭಾವಿಸಿದವನು. ಮುಂದೊಂದು ದಿನ ಆ ಬೆಟ್ಟದೊಂದಿಗೆ ಬೆರೆಯುತ್ತೇನೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಅದು ಕೈಗೂಡಲು ಕಾರಣ ಲಂಕೇಶರು ಮತ್ತವರ ಪತ್ರಿಕೆ.

ಲಂಕೇಶ್ ಪತ್ರಿಕೆಯ ಬಳಗದಲ್ಲಿ ತೇಜಸ್ವಿಯವರಿಗೆ, ಅವರ ಸಮಕಾಲೀನರಾದ ಲಂಕೇಶರು, ಶ್ರೀನಿವಾಸಗೌಡ್ರು, ರಾಮದಾಸ್, ಶ್ರೀರಾಮ್, ಎಚ್ಚೆಲ್ಕೆ ಸ್ನೇಹಿತರಾದರೆ, ಪತ್ರಿಕೆಯನ್ನು ರೂಪಿಸುತ್ತಿದ್ದ ಸಂಪಾದಕೀಯ ಬಳಗದಲ್ಲಿ ಸತ್ಯಮೂರ್ತಿ ಆನಂದೂರು ಅವರನ್ನು ಕಂಡರೆ ಹೆಚ್ಚು ಇಷ್ಟ. ಸತ್ಯಮೂರ್ತಿಯವರ ಸಂಕೋಚ ಸ್ವಭಾವ, ವಸ್ತುನಿಷ್ಠ ಬರವಣಿಗೆ, ಪ್ರಾಮಾಣಿಕತೆ, ಪತ್ರಿಕೆಯನ್ನು ಪ್ರಾಣದಂತೆ ಪ್ರೀತಿಸುತ್ತಿದ್ದ ಪರಿ ತೇಜಸ್ವಿಯವರಿಗೆ ಇಷ್ಟವಾಗಿರಬಹುದು. ಮಲೆನಾಡಿನವರು ಎಂಬ ಕಾರಣಕ್ಕೆ ಅದು ಇನ್ನಷ್ಟು ಇಂಟಿಮೆಸಿಗೆ ಕಾರಣವಾಗಿರಲೂಬಹುದು. ಅಂತೂ ಸತ್ಯಮೂರ್ತಿಯವರೊಂದಿಗೆ ತೇಜಸ್ವಿಯವರಿಗೆ ನಿಕಟ ಸಂಪರ್ಕವಿತ್ತು. ಸತ್ಯಮೂರ್ತಿಯೂ ಅಷ್ಟೆ, ತೇಜಸ್ವಿಯವರನ್ನು ಬಹಳವಾಗಿ ಮೆಚ್ಚುತ್ತಿದ್ದರು.

ಆ ಸಂದರ್ಭವೇ ಅಂತಹ ಒಂದು ಸಹಮನಸ್ಕ ಗುಂಪಿನ ಸೃಷ್ಟಿಗೆ ಕಾರಣವಾಗಿತ್ತು. ಲಂಕೇಶರ ಪ್ರಚಂಡ ಪ್ರತಿಭೆಯ ಅನಾವರಣ, ಅದಕ್ಕೆ ಪತ್ರಿಕೆಯ ಬಳಗದ ಅತ್ಯುತ್ಸಾಹದ ಹುಮ್ಮಸ್ಸು, ಪ್ರಜ್ಞಾವಂತ ಓದುಗ ವಲಯದ ಬೆಂಬಲ, ಪರಾಕಾಷ್ಠೆ ತಲುಪಿದ್ದ ಪತ್ರಿಕೆಯ ಪ್ರಸಾರ… ಒಂದು ರೀತಿಯಲ್ಲಿ ಕೃಷ್ಣದೇವರಾಯನ ಕಾಲದ ಸುವರ್ಣಯುಗ.

ಸುವರ್ಣಯುಗಕ್ಕೂ ಒಂದು ಕಾಲಘಟ್ಟವಿರುವಂತೆ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಇದ್ದಕ್ಕಿದ್ದಂತೆ ಸತ್ಯಮೂರ್ತಿ ಪತ್ರಿಕೆ ಬಿಟ್ಟರು. ಗುಬ್ಬಿ, ಪಂಜು, ಕಂಪೋಸಿಟರ್‌ಗಳು ಅವರನ್ನು ಹಿಂಬಾಲಿಸಿದರು. ಪತ್ರಿಕೆ ಎಂದರೆ ಸತ್ಯ-ಗುಬ್ಬಿ ಎಂಬಂತಿದ್ದ, ಜೀವಚೈತನ್ಯದಂತೆ ಕಂಗೊಳಿಸುತ್ತಿದ್ದ ಕಚೇರಿ ಇದ್ದಕ್ಕಿದ್ದಂತೆ ಖಾಲಿ. ಬಿಕೋ ಎನ್ನತೊಡಗಿತು. ಅನುಮಾನಗಳು, ಅಪನಂಬಿಕೆಗಳು ವಿಜೃಂಭಿಸಿದವು. ಮನಸುಗಳು ಮುರಿದುಬಿದ್ದವು. ಇಂತಹ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದ, ಲಂಕೇಶರನ್ನು ಕಂಡರಾಗದ ಕೆಲವರು ಪರಿಸ್ಥಿತಿಯ ಲಾಭ ಪಡೆದರು. ಸಾರ್ವಜನಿಕ ವಲಯದಲ್ಲಿ ಲಂಕೇಶರು ಸರ್ವಾಧಿಕಾರಿಯಂತೆ ಕಾಣತೊಡಗಿದರು. ಲಂಕೇಶರಿಂದ, ಪತ್ರಿಕೆಯಿಂದ ಮೊದಲೇ ದೂರವಿದ್ದ ತೇಜಸ್ವಿಯವರು, ಕೆಲಸಗಾರರ ನಿರ್ಗಮನದಿಂದಾಗಿ ಇನ್ನಷ್ಟು ದೂರವಾದರು. ದೂರವಾದರು ಎನ್ನುವುದಕ್ಕಿಂತ ಸೈಲೆಂಟಾದರು ಎಂದರೆ ಸೂಕ್ತವೇನೋ. ಆದರೆ, ‘ಪತ್ರಿಕೆಗೆ’ ಬರೆಯುವುದನ್ನು ಮುಂದುವರೆಸಿದರು. ಹಾಗೆಯೇ ಬೆಂಗಳೂರಿಗೆ ಬಂದಾಗ ಪತ್ರಿಕೆಯ ಕಚೇರಿಗೆ ಬಂದು, ಅಪರೂಪಕ್ಕೆ ಒಂದು ಗ್ಲಾಸ್ ಬಿಯರ್ ಕುಡಿದು ಹರಟೆ ಹೊಡೆದು ಹೋಗುತ್ತಿದ್ದುದೂ ಉಂಟು.

ಲಂಕೇಶ್ ಮತ್ತು ತೇಜಸ್ವಿ- ಇಬ್ಬರೂ ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಲಂಕೇಶರು ಪತ್ರಿಕೆ ಮಾಡಿದಾಗ ಬರೆದಿದ್ದಾರೆ. ಪ್ರಗತಿರಂಗ ಮಾಡಿದಾಗ ಅವರ ಜೊತೆ ಊರೂರು ಅಲೆದು, ಸಭೆಗಳಿಗೆ ಸೇರುತ್ತಿದ್ದ ಮೂರು ಮತ್ತೊಂದು ಜನಕ್ಕೆ ಭಾಷಣ ಮಾಡಿದ್ದಾರೆ. ಹಾಗೆಯೇ ತೇಜಸ್ವಿಯವರು ಬರೆದದ್ದೆಲ್ಲವನ್ನೂ ಲಂಕೇಶರು ಪ್ರಕಟಿಸಿದ್ದಾರೆ. ಬರೆದದ್ದೆಲ್ಲವನ್ನೂ ಅಂತ ಯಾಕೆ ಇಲ್ಲಿ ಒತ್ತಿ ಹೇಳುತ್ತಿದ್ದೇನೆಂದರೆ, ತೇಜಸ್ವಿಯವರು ಕೆಲವು ಸಲ ಅತಿ ಅನ್ನಿಸುವಷ್ಟು ಕಾಫಿ ಬೆಳೆಯ ಬಗ್ಗೆ, ಬೆಳೆಗಾರರ ತೊಂದರೆಗಳ ಬಗ್ಗೆ ಬರೆಯುತ್ತಿದ್ದರು. ಅದನ್ನು ನೋಡಿ ಲಂಕೇಶರು, ‘ಜಾಸ್ತಿ ಆಯ್ತು, ಇರಲಿ ಹಾಕು…’ ಎನ್ನುತ್ತಿದ್ದರು.

ತೇಜಸ್ವಿ, ರಾಜೇಶ್ವರಿ, ಕಿವಿಹಾಗೆಯೇ ಪತ್ರಿಕೆಯ ಕಚೇರಿಯೊಳಗಡೆ ನಡೆಯುವ ಕೆಲವು ಬದಲಾವಣೆಗಳಿಗೂ ತೇಜಸ್ವಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಇಬ್ಬರೂ ತಮ್ಮೆಲ್ಲ ವೈಯಕ್ತಿಕ ರಾಗ-ದ್ವೇಷಗಳನ್ನು ಬದಿಗೊತ್ತಿ ಓದುಗರಿಗಾಗಿ ಬರೆಯುತ್ತಿದ್ದರು ಎನ್ನುವುದು ನನ್ನ ಗ್ರಹಿಕೆ. ಈ ಸಮಯದಲ್ಲಿಯೇ ಅವರೊಂದಿಗೆ ಫೋನು, ಪತ್ರಗಳ ಒಡನಾಟ ಗರಿಗೆದರಿತು. ಅದಕ್ಕೆಲ್ಲ ಸೇತುವೆಯಂತೆ ಪತ್ರಿಕೆಯೂ ಇತ್ತು. ಒಂದು ಸಲ ತೇಜಸ್ವಿ ಯಾವುದೋ ಒಂದು ಕುದುರೆಹುಳುವಿನಂತಹ ಕೀಟದ ಬಗ್ಗೆ ಬರೆದಿದ್ದರು. ಬರೆದು ಪೋಸ್ಟ್ ಮಾಡಿದ ಮೇಲೆ ಒಂದು ಫೋನ್,

‘ಏನಯ್ಯಾ, ಬಂತೇನಯ್ಯಾ… ಆ ಆರ್ಟಿಕಲ್‌ಗೆ ಚಿತ್ರ ಹಾಕ್ಬೇಕ್ ಕಣೋ, ಅದನ್ನ ನಾನು ಟ್ರೇಸಿಂಗ್ ಪೇಪರ್ ಮೇಲೆ ಪ್ರಿಂಟ್ ತೆಗೆದು ಕಳ್ಸಿದೀನಿ, ಮತ್ತೇನೂ ಪಾಸಿಟಿವ್ ಮಾಡ್ಸಕೋಗಬೇಡಿ, ಪೇಜ್ ಲೇಔಟ್‌ನಲ್ಲಿ ಜಾಗ ಬಿಟ್ಟು ಅಲ್ಲಿಗೆ ಅಂಟಿಸಿದ್ರಾಯ್ತು…’ ಹೀಗೆ ಪ್ರತಿಯೊಂದನ್ನೂ ಹೇಳುತ್ತಿದ್ದರು.

ತೇಜಸ್ವಿ ಟ್ರೇಸಿಂಗ್ ಪೇಪರ್‌ನಲ್ಲಿ ಕಳುಹಿಸಿದ್ದ ಚಿತ್ರ ಹಾರಿಜಾಂಟಲ್-ವರ್ಟಿಕಲ್… ಯಾವ ಕಡೆಯಿಂದ ನೋಡಿದರೂ ತಲೆಬುಡ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಆ ಕೀಟದ ಇಡೀ ದೇಹ ಕಡ್ಡಿಯಂತಿದ್ದು ತಲೆ ಮತ್ತು ಬುಡ ಮಾತ್ರ ಎರಡು ಗುಂಡುಗಳನ್ನು ಹೊಂದಿತ್ತು. ಒಂದು ಅಂದಾಜಿನ ಮೇಲೆ ಅಂಟಿಸಿದ್ದೆ.

ಪತ್ರಿಕೆ ಬಂತು, ಹಾಗೆಯೇ ಮೂಡಿಗೆರೆಯಿಂದ ನನಗೊಂದು ಪತ್ರವೂ… ಆ ಪತ್ರ ಹೇಗಿತ್ತೆಂದರೆ… ಲಂಕೇಶರೊಂದಿಗಿನ ಅಸಮಾಧಾನವನ್ನು, ಸತ್ಯಮೂರ್ತಿ ಬಿಟ್ಟ ಸಿಟ್ಟನ್ನು, ನನ್ನಂತಹ ಅಡ್ಡಕಸುಬಿಗಳ ಕೈಯಿಂದಾದ ಅನಾಹುತವನ್ನು, ಅಂತಹ ಪತ್ರಿಕೆಗೆ ಅವರು ಬರೆಯಬೇಕಾಗಿ ಬಂದಿರುವ ದುಸ್ಥಿತಿಯನ್ನು- ಒಟ್ಟಿಗೇ ಹೇಳಿದಂತಿತ್ತು. ಅದು ನನಗೆ ನಿಜಕ್ಕೂ ಪಾಠವಾಗಿತ್ತು. ಸ್ಥಾನದ ಜವಾಬ್ದಾರಿಯ ಬಗ್ಗೆ ತಿಳಿಹೇಳುತ್ತಲೇ ಮರ್ಮಕ್ಕೆ ತಾಕುವಂತಿತ್ತು. ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿತ್ತು. ಆದರೆ ಅದಷ್ಟೆ, ಲಂಕೇಶರಿಗೂ ಆ ಬಗ್ಗೆ ತಿಳಿಸಲಿಲ್ಲ.

ನಾನೇ ಧೈರ್ಯ ಮಾಡಿ ಫೋನ್ ಮಾಡಿದೆ, ‘ಅಲ್ಲಾ ಕಣೋ… ಒಂದ್ ಚಿತ್ರ ಅಂದಾಜ್ ಮಾಡಕ್ಬರಲ್ಲ ಅಂದ್ರೆ… ಏನೇಳದೋ… ಇನ್ನೊಂದ್ಸಲ ಅಂತ ತಪ್ಪು ಮಾಡಿದ್ಯೋ… ಅಲ್ಲಿಗೇ ಬಂದ್ ಕಾಲ್ ಮುರಿತಿನಿ…’ ಎಂದು ಧಮ್‌ಕಿ ಹಾಕಿದ್ದರು. ಆ ಸಿಟ್ಟೂ ಅಷ್ಟೇ, ಆ ಕ್ಷಣಕ್ಕೆ. ಮತ್ತದೇ ಆತ್ಮೀಯತೆ.

ತೇಜಸ್ವಿಯವರಿಗೆ ಕಂಪ್ಯೂಟರ್ ಬಳಕೆ ಚೆನ್ನಾಗಿ ತಿಳಿದಿತ್ತು. ಕನ್ನಡಕ್ಕೆ ಕನ್ನಡದ್ದೇ ಆದ ಒಂದು ಫಾಂಟ್ ಪ್ಯಾಕೇಜ್ ಇಲ್ವಲ್ಲ ಎಂಬ ಬಗ್ಗೆ ಭಾರೀ ಕೊರಗಿತ್ತು. ಆ ಬಗ್ಗೆ ತುಂಬುಕಾಳಜಿಯಿಂದ ಮಾತನಾಡುತ್ತಿದ್ದರು. ಅವರ ಕಂಪ್ಯೂಟರ್ ಕೈ ಕೊಟ್ಟಾಗ, ಅವರು ಕಳುಹಿಸಿದ್ದು ನಮಗೆ ಸಿಕ್ಕದೆ ಫೋನ್ ಮಾಡಿ ತೊಂದರೆ ಕೊಡುವಾಗ, ಕಂಪ್ಯೂಟರ್ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಿದೆ.

‘ನೋಡೋ ಬೇರೆ ಭಾಷೆಯ ಜನ ಆಗಲೇ ಅವರ ಭಾಷೆಯ ಯೂನಿಫಾರ್ಮ್ ಫಾಂಟ್ ಕ್ರಿಯೇಟ್ ಮಾಡಿ, ಎಲ್ಲರೂ ಒಂದೇ ಕೀಬೋರ್ಡ್ ಬಳಸುವಂತಹ ಪ್ಯಾಕೇಜ್ ಮಾಡ್ಕೊಂಡಿದ್ದಾರೆ. ಇಲ್ಲಿ ನಿಂದೇ ಬೇರೆ, ನಂದೇ ಬೇರೆ, ಒಂದಕ್ಕೊಂದು ಸಂಬಂಧಾನೆ ಇಲ್ಲ. ನೋಡಿದ್ರೆ, ಇನ್ಫೋಸಿಸ್, ವಿಪ್ರೋಗಳಂತಹ ಘಟಾನುಘಟಿಗಳೇ ಕರ್ನಾಟಕದಲ್ಲವ್ರೆ. ಆದರೆ ಅವರ್‍ಯಾರೂ ಕನ್ನಡ ಭಾಷೆ, ಅದಕ್ಕೊಂದು ಪ್ಯಾಕೇಜ್ ಬೇಕು ಅಂತ ಯೋಚಿಸ್ತಾನೇ ಇಲ್ವಲ್ಲೋ… ಕೇಳೋರು ಯಾರು ಇಲ್ಲ. ಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ… ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ…’ ಹೀಗೆ ಸಮಯ ಸಿಕ್ಕಾಗಲೆಲ್ಲ ಹೇಳೋರು. ಇವತ್ತು ಕನ್ನಡ ತಂತ್ರಾಂಶ ನುಡಿ ಏನಾದ್ರು ಈ ಮಟ್ಟಕ್ಕೆ ಎಲ್ಲರಿಗೂ ಉಚಿತವಾಗಿ ಸಿಕ್ತಾಯಿದೆ ಅಂದ್ರೆ, ಅದರ ಹಿಂದೆ ತೇಜಸ್ವಿಯವರ ಶ್ರಮವೂ ಸ್ವಲ್ಪ ಇದೆ ಅಂತಾನೇ ಅರ್ಥ.

ನಾನು ಅವರಿಗೆ ಯಾವಾಗ ಫೋನ್ ಮಾಡಿದರೂ ಅಥವಾ ಅವರೇ ಮಾಡಿದರೂ, ಮಾತಿನ ಕೊನೆಯಲ್ಲಿ, ‘ಏಯ್, ಆ ಸತ್ಯಮೂರ್ತಿ ಏನ್ಮಾಡ್ತಿದಾನೋ, ನಿನಗೇನಾದ್ರು ಸಿಗ್ತನೇನೋ, ನಿಮ್ದೆಲ್ಲ ಒಂದೇ ಕಡೆಯಂತಲ್ಲೋ ಮನೆ, ಫೋನ್ ಮಾಡಕ್ಕೇಳೋ…’ ಎನ್ನುವ ಒಂದು ಮಾತು ಇದ್ದೇ ಇರುತ್ತಿತ್ತು. ಸತ್ಯಮೂರ್ತಿ ಬಗ್ಗೆ ಅದೇನೋ ಅವ್ಯಕ್ತ ಪ್ರೀತಿ. ಆ ಬೆಂಗಳೂರು ಅವನಂಥವನಿಗಲ್ಲ ಅನ್ನುವ ಆತಂಕ ಅವರ ಪ್ರತಿ ಮಾತಿನಲ್ಲೂ ಧ್ವನಿಸುತ್ತಿತ್ತು. ಅದು ಎಲ್ಲಿಯವರೆಗೆಂದರೆ, ಅವರು ಸಾಯಲಿಕ್ಕೆ ನಾಲ್ಕು ತಿಂಗಳು ಇರುವಾಗ, ಡಿಸೆಂಬರ್ ೨೦೦೬ರಲ್ಲಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಅವರ ಮಗಳ ಮನೆಯಲ್ಲಿ ಸಿಕ್ಕ ಕೊನೆಯ ಭೇಟಿಯಲ್ಲೂ…

ಇದನ್ನೆಲ್ಲ ನೋಡಿದ್ದ ನಾನು, ಸತ್ಯಮೂರ್ತಿಗೆ, ‘ಏನ್ ಧಣಿ ನಿಮ್ ಕಂಡ್ರೆ ಅಷ್ಟೊಂದ್ ಪ್ರೀತಿ ತೇಜಸ್ವಿಗೆ…’ ಅಂತಂದ್ರೆ ಸಾಕು… ಸತ್ಯಮೂರ್ತಿಯೂ ಅಷ್ಟೇ… ಮಾಯಾಲೋಕದೊಳಕ್ಕೆ ಮುಳುಗಿಬಿಡುತ್ತಿದ್ದರು, ಮೂಡಿಗೆರೆಗೇ ಹೋಗಿಬಿಡುತ್ತಿದ್ದರು. ಆ ಬಹುಮುಖ ವ್ಯಕ್ತಿತ್ವದೊಂದಿಗಿನ ಒಡನಾಟವನ್ನು ವಿವರಿಸುತ್ತ ಹಗುರಾಗುತ್ತಿದ್ದರು. ಅಂತಹದ್ದೊಂದು ಘಟನೆ ಇಲ್ಲಿದೆ… ಸತ್ಯಮೂರ್ತಿ ಬಾಯಲ್ಲಿಯೇ ಕೇಳಿ…

‘ಒಂದ್ ಸಲ ಏನಾಯ್ತು ಅಂದ್ರೆ… ಲಂಕೇಶ್ ಪತ್ರಿಕೆ ಬಿಟ್ಟಿದ್ದೆ, ಈ ವಾರ ಮಾಡಿ ಕೈ ಸುಟ್ಟುಕೊಂಡಿದ್ದೆ, ಮೂಡಿಗೆರೆಗೆ ಹೋಗಿ ಅವರ ಮುಂದೆ ನಿಂತೆ.
‘ಕೆಲ್ಸಿಲ್ಲ ಕಾರ್ಯಿಲ್ಲ ಅಂದ್ಮೇಲೆ ಆ ಬೆಂಗಳೂರಲ್ಲಿ ಬದುಕಾಯ್ತದೇನೋ, ಊರಲ್ಲೆ ಗೇಯಕ್ಕಾಗದಿಲ್ವ…’ ಅಂದ್ರು.

ಅದಕ್ಕೆ ನಾನು ‘ಹಂಗೇನಿಲ್ಲ, ಟಿವಿ ಸೀರಿಯಲ್‌ಗೆ ಡೈಲಾಗ್ ಬರೀತಿದೀನಿ’ ಅಂದೆ.
ಅದಕ್ಕವರು, ‘ಎಷ್ಟು ಕೊಡ್ತರೆ’ ಅಂದ್ರು.
ನಾನು ‘ಒಂದು ಎಪಿಸೋಡ್‌ಗೆ ಏಳುನೂರು ಐವತ್ರುಪಾಯಿ ಕೊಡ್ತರೆ’ ಅಂದೆ… ಥಟ್ ಅಂತ ಏನ್ನೋ ಜ್ಞಾಪಿಸಿಕೊಂಡವರಂತೆ,
‘ಹರಿವಾಣ ನೋಡಿದಿಯೇನೋ…’ ಅಂದ್ರು. ನಾನು ಒಂದು ಕ್ಷಣ ತಲೆಬಿಸಿಯಾಗಿ ಯೋಚಿಸುತ್ತಾ ನಿಂತೆ,
‘ಹರಿವಾಣ ಕಣೋ, ನಮ್ಮಲ್ಲೆಲ್ಲೋ ಅಟ್ಟದ ಮೇಲೆ ಬಿದ್ದಿರಬೇಕು ತಕ್ಕೊಡ್ತಿನಿರು, ತಗಂಡು ಹುಣಸೇಹಣ್ಣಾಕಿ ಚೆನ್ನಾಗಿ ಉಜ್ಜಬೇಕು, ಹ್ಯಂಗ್ ಉಜ್ಜಬೇಕಂದ್ರೆ ಫಳ ಫಳ ಹೊಳಿಬೇಕು, ಮುಖ ಕಾಣ್ಬೇಕು… ಹಂಗ್ ಉಜ್ಜಬೇಕು…

ಮತ್ತೂ ತಲೆಕೆಟ್ಟೋಯಿತು. ಒಂದಕ್ಕೊಂದ್ ಸಂಬಂಧಾನೆ ಇಲ್ಲದಂಗ್ ಮಾತಾಡ್ತರಲ್ಲ ಅನ್ನಿಸಿತು.

‘ಯಾವುದೋ ಒಂದ್ ಬಾರ್ ಮುಂದೆನೊ, ಹೋಟೆಲ್ ಪಕ್ಕದಲ್ಲೊ ಬಣ್ಣದ್ ಛತ್ರಿ ಬಿಚ್ಚಿ ಹರಿವಾಣ ಇಟ್ಕಂಡು ನಿಂತ್ಕಂಡೆ ಅನ್ನು… ದಿನಕ್ಕೆ ಐನೂರು ಬೀಡಾ ಹೋಗ್ಲೇಳೋ… ಒಂದಕ್ಕೆ ಎರಡ್ರೂಪಾಯಿ ಸಿಕ್ಕಿದ್ರು… ಒಂದ್ ಸಾವ್ರಾಯ್ತು… ಮುಠ್ಠಾಳ ಹದ್ನೈದು ಪುಟ ಬರ್‍ದು ಏಳ್ನೂರ್ರುಪಾಯಿ ಈಸ್ಕತನಂತೆ… ಹೋಗ್ ಹೋಗೋ…

ಕಡಲ ತೆರೆಗಳ ಮುಂದೆ ತೇಜಸ್ವಿ‘ಅಂದ್ರೆ, ಬೀಡಾ ಮಾರು ಅಂತೇಳ್ತಿದೀರಾ…’
‘ಯಾಕೆ ಬರ್‍ದೆ ಬದುಕ್ಬೇಕು ಅಂತೇನಾದ್ರು ಹೇಳಿಕೊಂಡು ಹುಟ್ಟಿದ್ದೀಯಾ…’
‘……’
‘ಈ ಜೀತಕ್ಕಿಂತ ಅದೇ ಎಷ್ಟೋ ವಾಸಿ, ಯೋಚ್ನೆ ಮಾಡೇಳು, ಅಟ್ಟದ ಮೇಲೈತೆ ಹುಡಿಕ್ಕೊಡ್ತಿನಿ…’

ಇಂತಹ ಹಲವಾರು ಘಟನೆಗಳು ತೇಜಸ್ವಿಯವರ ಒಡನಾಟದಲ್ಲಿ ಹಲವರ ಅನುಭವಕ್ಕೆ ಬಂದಿರಬಹುದು. ಅಂತಹ ಅನುಭವಗಳನ್ನೇ ತೇಜಸ್ವಿಯವರು ತಮ್ಮ ಸೃಜನಶೀಲ ಕುಲುಮೆಗೆ ಹಾಕಿ ಕುದಿಸಿ, ಅದರಿಂದ ಬಂದ ಅನುಭವದ್ರವ್ಯವನ್ನು ಕನ್ನಡಿಗರಿಗೆ ಕೊಡುತ್ತಿದ್ದರು. ಕೊಡುತ್ತಲೇ ಹೊಸ ದಿಗಂತದ ನೆಲೆಯನ್ನು ವಿಸ್ತರಿಸಿದರು. ಇಂತಹ ತೇಜಸ್ವಿ ಈಗಲೂ ಇದ್ದಾರೆ- ಮಲೆನಾಡಿನ ಕಾಡು ಕಣಿವೆಗಳಲ್ಲಿ, ಬಿರಿಯಾನಿ ಕರಿಯಪ್ಪನಲ್ಲಿ, ಮೂಡಿಗೆರೆಯ ಮಂದಣ್ಣನಲ್ಲಿ, ಬದಲಾವಣೆ ಬಯಸುವ ಮನಸ್ಸುಗಳಲ್ಲಿ, ಕನ್ನಡಿಗರ ಮನದಲ್ಲಿ… ಇಂದಿಗೂ ಎಂದೆಂದಿಗೂ.