ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. ನಾವು ಉಸಿರಾಡುವ ಗಾಳಿ ದೇಹದೊಳಗೆ ಇಲ್ಲದೇ ಹೋದರೆ ಅದನ್ನು ಹೆಣ ಅಂತ ಕರೀತಾರೆ. ಹಾಗಾಗಿ ಜೀವ ಇದೆ ಅಂದ್ರೆ ಅದಕ್ಕೆ ಗಾಳಿ ಅತಿ ಅವಶ್ಯ.
ಕೃಷ್ಣ ದೇವಾಂಗಮಠ ಅಂಕಣ

 

ಜಗತ್ತಿಗೆ ಪ್ರಪಂಚ ಎಂಬ ಹೆಸರಿರುವುದಕ್ಕೂ ಪಂಚಭೂತ ಅನ್ನುವ ಶಬ್ಧಕ್ಕೂ ಸಂಬಂಧವಿದೆ. ಪ್ರಪಂಚ ಅನ್ನುವಲ್ಲಿ ಪ್ರ ಎಂದರೆ ಪ್ರಸವ ಸೂಚಕ, ಪ್ರಸವ ಎಂದರೆ ಹುಟ್ಟು ಎಂಬುದಾಗಿ, ಇನ್ನು ಪಂಚ ಎಂದರೆ ಪಂಚಭೂತಗಳನ್ನು ಸೂಚಿಸುವಂಥದ್ದು. ಹಾಗಾಗಿಯೇ ಪಂಚಭೂತಗಳಿಲ್ಲದೆ ಯಾವುದೇ ಜೀವಿಗೂ ಹುಟ್ಟೆಂಬುದಿಲ್ಲ. ಹಾಗೆಯೇ ನಿರ್ಜೀವಕ್ಕೂ ಕೂಡ.

ಮನುಷ್ಯ ಹುಟ್ಟಿದಾಗಿನಿಂದ ಹಿಡಿದು, ಸಾಯುವವರೆಗೂ ಪಂಚಭೂತಗಳೊಂದಿಗೆ ಸಂಬಂಧ ಹೊಂದಿಯೇ ಇರುತ್ತಾನೆ. ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ಆಕಾಶವನ್ನು ಅವಲಂಬಿಸಿರುವಂತೆಯೇ,
ವಾಸಿಸಲಿಕ್ಕೆ ಭೂಮಿಯನ್ನು, ಮನೋಕಾಮನೆಗೆ ಅಗ್ನಿಯನ್ನು, ಬದುಕಿಗಾಗಿ ನೀರನ್ನು, ಉಸಿರಿಗಾಗಿ ಗಾಳಿಯನ್ನು ಅಷ್ಟೇ ಏಕೆ ಸತ್ತ ಮೇಲೂ ಸಕಲ ಚರಾಚರವೂ ಪಂಚಭೂತಗಳಲ್ಲಿಯೇ ಲೀನವಾಗುತ್ತದೆ. ಸೃಷ್ಟಿಯ ಆಗುಹೋಗುಗಳಿಗೆಲ್ಲ ಕಾರಣವೇ ಪಂಚಭೂತಗಳು. ಈ ಐದು ಮೂಲಭೂತಗಳಿಂದಾಗಿಯೇ ವಿಶ್ವದ ಉಗಮವಾಗಿದೆ.

ಆಕಾಶ ಮತ್ತು ಭೂಮಿ, ಹಾಗೆಯೇ ನೀರು ಮತ್ತು ಬೆಂಕಿ, ಗಾಳಿ ಮತ್ತು ನೀರು, ಬೆಂಕಿ ಮತ್ತು ನೀರು ಹೀಗೆ ಗುಣಸ್ವಭಾವಗಳ ದೃಷ್ಟಿಯಿಂದ ನೋಡಿದಾಗ ಪರಸ್ಪರ ಪೂರಕವೂ ವಿರೋಧವೂ ಆಗಿರುವುದು ಕೂಡ ತಿಳಿಯುತ್ತವೆ. ಬಾಲ್ಯದಲ್ಲಿ ಕಲಿತ ಕೆಲವು ಶ್ಲೋಕಗಳ ಅರ್ಥ, ಉದ್ದೇಶ ಈಗ ಸಾಧ್ಯವಾಗುತ್ತಿವೆ. ಶ್ಲೋಕ ಬಾಯಿಪಾಠವಾಗಿ ನೆನಪಿನಲ್ಲಿವೆ ಆದರೆ ಯಾವ ಪುಸ್ತಕಗಳಿಂದ ಕಲಿತದ್ದು ಎಂಬುದು ಮರೆತಿದೆ.

ಆಕಾಶಸ್ಯಾಧಿಪೋ ವಿಷ್ಣುಃ ಅಗ್ನೇಶೈವ ಮಹೇಶ್ವರೀ |
ವಾಯೋಃ ಸೂರ್ಯಃ ಕ್ಷಿತೇರೀಶಃ ಜೀವನಸ್ಯ ಗಣಾಧಿಪಃ

ಆಕಾಶತತ್ವ್ತಕ್ಕೆ ಅಧಿಪತಿಯು ವಿಷ್ಣುವು, ದುರ್ಗೆಯು ಅಗ್ನಿತತ್ತ್ವಕ್ಕೆ ಸ್ವಾಮಿನಿಯು, ಸೂರ್ಯನು ವಾಯವೀಯ ತತ್ತ್ವಕ್ಕೆ ಒಡೆಯನು, ಶಿವನು ಭೂಮಿ ತತ್ವ್ತಕ್ಕೆ ಅಧೀಶ್ವರನು, ಗಣೇಶನು ಜೀವತತ್ವ್ತಕ್ಕೆ ಅಧಿಪತಿಯು ಈ ರೀತಿಯಲ್ಲಿ ಪಂಚ ದೇವತೆಗಳು ಭೌತಿಕ ತತ್ತ್ವಗಳಿಗೆ ಅಧಿಪತಿಗಳಾಗಿದ್ದಾರೆ.

ವಿಷ್ಣುವು ಆಕಾಶ ತತ್ತ್ವಕ್ಕೆ ಅಧಿಪತಿಯಾದ ಕಾರಣ ಸ್ತುತಿಪಾಠ ಅವನಿಗೆ ಅಭೀಷ್ಟವಾಗಿದೆ. ಅಗ್ನಿತತ್ವ್ತಕ್ಕೆ ದೇವಿಯು ಅಧೀಶ್ವರಿಯಾದ ಕಾರಣ ಚಂಡಿಕಾಹವನಕ್ಕೆ ದೇವೀ ಉಪಾಸನೆಯಲ್ಲಿ ಪ್ರಾಧಾನ್ಯತೆ ಬಂತು. ಸಕಲ ಚರಾಚರ ಜೀವಿಗಳಿಗೆ ಆತ್ಮನಾದ ಕಾರಣ ಸೂರ್ಯನ ಪೂಜಾವಿಧಿ ಮೊದಲು ಬಂತು. ಶಿವನು ಪಾರ್ಥಿವ ತತ್ವ್ತಕ್ಕೆ ಸಂಬಂಧಿಸಿದವನಾದ ಕಾರಣ ಪಾರ್ಥಿವ ದ್ರವ್ಯದ ವಿವಿಧ ಲಿಂಗಗಳು ಲಿಂಗಾಕೃತಿಯಲ್ಲಿ ಪೂಜಿಸತಕ್ಕವುಗಳಾಗಿವೆ. ಜೀವತತ್ವಕ್ಕೆ ಗಣೇಶನು ಅಧಿಪತಿಯಾದ ಕಾರಣ ವಿಘ್ನಗಳನ್ನು ಸಂಹರಿಸಿ ಸರ್ವಕಾರ್ಯಗಳೂ ಸುಲಲಿತವಾಗಿ ಆಗುವಂತೆ ಅನುವಾಯಿತು.

ಮಾನವಾನಾಂ ಪ್ರಕೃತಯಃ ಪಂಚಧಾಪರಿಕೀರ್ತಿತಾಃ |
ಯತೋ ನಿರೂಪ್ಯತೇ ಧರ್ಮಃ ಪಂಚಭೂತಾತ್ಮಕೋ ಬುಧೈಃ ||
ಭಿನ್ನಾ ಯದ್ಯಪಿ ಭೂತಾನಾಂ ಪ್ರಕೃತಿಃ ಪ್ರಕೃತೇರ್ವಶಾತ್ | ತಥಾಪಿ ಪಂಚತತ್ತ್ವಾನಾಂ ಅನುಸಾರೇಣ ತತ್ತ್ವವಿತ್ || “ಅಪ ಏವ ಸಸರ್ಜಾದೌ”

ಎಂಬ ಸೃಷ್ಟಿಕ್ರಮದಂತೆ ಜಲತತ್ತ್ವಕ್ಕೆ ಸಂಬಂಧಿಸಿದ ಗಣಪತಿ ಪೂಜೆ ಅಗ್ನಿತತ್ತ್ವವನ್ನಾಶ್ರಯಿಸಿದ ದೇವಿಯು ಗಣಪತಿಯ ತಾಯಿಯಾದ ಕಾರಣ ಅನಂತರದ ಸ್ಥಾನ ಶಕ್ತಿ ದೇವತೆಯಾದ ದುರ್ಗಾದೇವಿಗೆ. ಪೃಥವೀ, ಜಲ, ಅಗ್ನಿ ಈ ಮೂರು ತತ್ತ್ವಗಳಿಗೆ ಆಶ್ರಯ ಭೂಮಿಯೇ ಆಗಿದ್ದು, ಪಾರ್ಥಿವ ತತ್ತ್ವಕ್ಕೆ ಸಂಬಂಧಿಸಿದ ಕಾರಣ ತಾಯಿಯ ನಂತರದ ಸ್ಥಾನ ತಂದೆ ಶಿವನಿಗೆ ಬಂತು. ಸಕಲ ತತ್ತ್ವಗಳಿಗೂ ವಿಷ್ಣುವೇ ಆಶ್ರಯವಾದ ಕಾರಣ (ಆಕಾಶವೇ ಆಶ್ರಯವಾದ ಕಾರಣ) ವಿಷ್ಣುವಿನ ಪೂಜೆ ಕಡೆಗೆ ಬಂತು ಎಂದು ಹೇಳಲಾಗಿದೆ.

ಇನ್ನು ನವಗ್ರಹಗಳಲ್ಲಿ ಪಂಚಭೂತ ತತ್ವ ಆಧರಿಸಿ ಮನುಷ್ಯನ ಆಗುಹೋಗುಗಳನ್ನ ಗುರ್ತಿಸಲಿಕ್ಕೆ ಹಾಗೂ ಅವನ ಗುಣ ಧರ್ಮವನ್ನ ಚಿಂತಿಸಲಿಕ್ಕೆ ಜ್ಯೋತಿಷ್ಯ ಶಾಸ್ತ್ರವನ್ನ ಋಷಿಗಳು ತಯಾರಿಸಿದರು. ಪ್ರಧಾನವಾಗಿ 7 ಗ್ರಹಗಳಿವೆ. ಒಂದೊಂದು ಗ್ರಹವೂ ಒಂದೊಂದು ತತ್ವಕ್ಕೆ ಅಧಿಪತ್ಯವನ್ನು ಹೊಂದಿದೆ. ಜಲತತ್ವ ಮತ್ತು ಅಗ್ನಿತತ್ವಗಳು ಎರಡೆರಡು ಗ್ರಹಗಳನ್ನು ಹೊಂದಿವೆ.

ಮನುಷ್ಯ ಹುಟ್ಟಿದ ಸಂದರ್ಭದಲ್ಲಿ ಯಾವ ಗ್ರಹ ಆತನ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಅನ್ನೋದನ್ನು ನೋಡಿಕೊಂಡು ಅವನ ಜೀವನ ಕ್ರಮ, ಆಹಾರ ಪದ್ದತಿಗಳನ್ನ ರೂಪಿಸಿಕೊಳ್ಳಲಿ ಎಂದೇ ಈ ಮಹತ್ತರವಾದ ಜ್ಯೋತಿಷ್ಯ ಶಾಸ್ತ್ರವನ್ನ ರಚಿಸಿಕೊಟ್ಟಿದ್ದಾರೆ. ಆದರೆ ಇಂದು ಎಲ್ಲವೂ ವ್ಯವಹಾರವಾಗಿ ಹಣ ಮತ್ತು ಹೆಸರು ಮಾಡುವ ಭರಾಟೆಯಲ್ಲಿ ಶಾಸ್ತ್ರದ ಮೂಲ ತತ್ವ ಅಧೋಗತಿ ತಲುಪಿದೆ.

ಭೂ ತತ್ವಕ್ಕೆ ಅಧಿಪತಿ – ಬುಧ
ಜಲ ತತ್ವಕ್ಕೆ ಅಧಿಪತಿ – ಚಂದ್ರ-ಶುಕ್ರರು
ಅಗ್ನಿ ತತ್ವಕ್ಕೆ ಅಧಿಪತಿ – ಸೂರ್ಯ-ಕುಜರು
ವಾಯು ತತ್ವಕ್ಕೆ ಅಧಿಪತಿ – ಶನಿ
ಆಕಾಶ ತತ್ವಕ್ಕೆ ಅಧಿಪತಿ – ಗುರು,

ಒಂದೊಂದು ಗ್ರಹವೂ ಒಂದೊಂದು ತತ್ವವನ್ನು ಹೀಗೆ ವೃದ್ಧಿಸಿ, ಕ್ಷಯಿಸುವ ಶಕ್ತಿಯನ್ನು ಹೊಂದಿವೆ. ಮನುಷ್ಯ ಹುಟ್ಟಿದಾಗ ಯಾವ ಗ್ರಹಕ್ಕೆ ಹೆಚ್ಚು ಬಲವಿರುತ್ತದೋ ಆ ಗ್ರಹ ಆ ರೀತಿಯ ತತ್ವವನ್ನ ವೃದ್ಧಿಸುತ್ತದೆ. ಯಾವ ಗ್ರಹ ಬಲಹೀನವಾಗಿದೆಯೋ ಅದು ತನ್ನ ಬಲವನ್ನ ಕುಗ್ಗಿಸುತ್ತದೆ. ಹೀಗಾಗಿ ದೇಹದ ಪಂಚಭೂತ ತತ್ವವನ್ನು ಕಾಪಾಡಿಕೊಂಡರೆ ಗ್ರಹಗಳು ಬೀರುವ ಸಮಸ್ಯೆಗೆ ಪರಿಹಾರ ಸಿಕ್ಕಿದಹಾಗೇ ಎಂಬ ಮಾತುಗಳು ಇದ್ದೇ ಇವೆ.

ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ॥೪॥

ಭಗವದ್ಗೀತೆಯ ಏಳನೇಯ ಅಧ್ಯಾಯದ ನಾಲ್ಕನೇಯ ಈ ಪದ್ಯವು ಭಗವಂತನ ಪ್ರಪಂಚ ಸೃಷ್ಟಿಯ ವಿರಾಟ ರೂಪವನ್ನು ಸಮಷ್ಟಿಯಾಗಿ ತಿಳಿಸುತ್ತದೆ. ಸೃಷ್ಟಿ ಪೂರ್ವದಲ್ಲಿ ಈ ಸಂಪೂರ್ಣ ಜಗತ್ತು ಸೂಕ್ಷ್ಮ ರೂಪದಲ್ಲಿ ಆ ಭಗವಂತನ ಉದರದಲ್ಲಿ ನೆಲೆಗೊಂಡಿದ್ದು, ನಂತರ ಭಗವಂತ ಈ ಸೃಷ್ಟಿಯನ್ನು ನಿರ್ಮಿಸಿದ. ಹೀಗೆ ಮೊದಲು ನಿರ್ಮಾಣವಾದುದು ಈ ಜಡ ಪ್ರಕೃತಿ. ಇಲ್ಲಿ ಪಂಚಭೂತಗಳ ಜೊತೆಗೆ ಮನಸ್ಸು, ಬುದ್ಧಿ ಮತ್ತು ಅಹಂಕಾರ. ಇವು ಒಟ್ಟು ಎಂಟು ಬಗೆ. ಸೃಷ್ಟಿ ಪ್ರಕ್ರಿಯೆಯಲ್ಲಿ ಎಂಟರ ಮಹತ್ವದ ಕುರಿತು (ಆಚಾರ್ಯ ಬನ್ನಂಜೆಯವರ ಅಂಕೆಯಲ್ಲಿ ಅಧ್ಯಾತ್ಮ) ಎನ್ನುವ ಪುಸ್ತಕ ಹೆಚ್ಚು ಬೆಳಕು ಚೆಲ್ಲುತ್ತದೆ.

ನಮ್ಮಲ್ಲಿ ಪಂಚ ಎಂಬುದಕ್ಕೆ ವಿಶೇಷ ಮಹತ್ತ್ವವಿದೆ. ಈ ಭೂಮಿ ಎಂಬುದು ಪಂಚಭೂತಗಳಿಂದ ಕೂಡಿರುವುದೇ ಇದಕ್ಕೆ ಮೂಲಕಾರಣ. ಪೂಜೆ ಪುನಸ್ಕಾರಗಳಲ್ಲಿ ಪಂಚಾಂಗ, ಪಂಚಕಜ್ಜಾಯ, ಪಂಚಾಯತನ ಪೂಜೆ, ಪಂಚಾಮೃತ, ಪಂಚಗವ್ಯ, ಮೊದಲಾದ ಪದಗಳನ್ನು ಬಳಸುವುದು ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ,

ಪಂಚೆಂದ್ರಿಯಗಳು – ನೋಡುವ ಕಣ್ಣು, ರುಚಿ ಹೇಳುವ ನಾಲಗೆ, ಪರಿಮಳ ಗ್ರಹಿಸುವ ಮೂಗು, ಕೇಳುವ ಕಿವಿ ಮತ್ತು ಸ್ಪರ್ಶಜ್ಞಾನ ನೀಡುವ ಚರ್ಮ ಇವು ಪಂಚ ಜ್ಞಾನೇಂದ್ರಿಯಗಳಾಗಿವೆ.

ಪಂಚಕೋಶ – ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಹಾಗೂ ಆನಂದಮಯ ಕೋಶಗಳು ದೇಹವನ್ನು ರಕ್ಷಿಸುವ ಕೋಶಗಳೆನಿಸಿವೆ.

ಪಂಚವಾಯುಗಳು – ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ

ಪಂಚಾಂಗ – ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳೆಂಬ ಪಂಚ ಅಂಗಗಳು ನಮಗೆ ನಿರಂತರ ನಿರ್ದೇಶನಗಳನ್ನು ನೀಡುತ್ತವೆ.

ಪಂಚಾಕ್ಷರ – ” ಶಿವಾಯ ನಮಃ ” ಎನ್ನುವುದು ಪಂಚಾಕ್ಷರ ಮಂತ್ರ. ರುದ್ರದೇವನನ್ನು ಪಂಚಾಕ್ಷರಮಂತ್ರದ ಮೂಲಕವೇ ಸ್ತುತಿಸುತ್ತಾರೆ.

ಪಂಚಾಮೃತ : ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಗಳ ಸಂಯೋಜನೆಯೇ ಪಂಚಾಮೃತ.

ಪಂಚಗವ್ಯ: ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಇವು ಒಟ್ಟಾದರೆ ಪಂಚಗವ್ಯವೆಂದಾಗುತ್ತದೆ. ಇದನ್ನು ತೀರ್ಥದಂತೆ ಸೇವಿಸುವ ರೂಢಿಯಿದೆ.

ಪಂಚಬಾಣಗಳು: ಅರವಿಂದ, ಅಶೋಕ, ಚ್ಯೂತ, ನವಮಲ್ಲಿಕಾ ಹಾಗೂ ನೀಲೋತ್ಪಲ – ಇವು ಮನ್ಮಥನ ಐದು ಬಾಣಗಳಾಗಿವೆ.

ಆಕಾಶ ಮತ್ತು ಭೂಮಿ, ಹಾಗೆಯೇ ನೀರು ಮತ್ತು ಬೆಂಕಿ, ಗಾಳಿ ಮತ್ತು ನೀರು, ಬೆಂಕಿ ಮತ್ತು ನೀರು ಹೀಗೆ ಗುಣಸ್ವಭಾವಗಳ ದೃಷ್ಟಿಯಿಂದ ನೋಡಿದಾಗ ಪರಸ್ಪರ ಪೂರಕವೂ ವಿರೋಧವೂ ಆಗಿರುವುದು ಕೂಡ ತಿಳಿಯುತ್ತವೆ. ಬಾಲ್ಯದಲ್ಲಿ ಕಲಿತ ಕೆಲವು ಶ್ಲೋಕಗಳ ಅರ್ಥ, ಉದ್ದೇಶ ಈಗ ಸಾಧ್ಯವಾಗುತ್ತಿವೆ.

ಪಂಚವಾದ್ಯಗಳು: ಬಾಯಿಯಿಂದ ಊದುವ ಶಂಖ, ಕೋಲಿನಿಂದ ಬಾರಿಸುವ ಭೇರಿ, ಕರದಿಂದ ಬಾರಿಸುವ ಗಂಟೆ, ಕೈಯಿಂದ ನುಡಿಸುವ ಡಮರು ಮತ್ತು ತಮಟೆ ಇವು ಪಂಚವಾದ್ಯಗಳೆನಿಸಿವೆ.

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚಕನ್ಯಾಸ್ಮರೇನಿತ್ಯಂ ಮಹಾಪಾಪ ವಿನಾಶನಂ

ಈ ಮಂತ್ರ ಐದೆಯರ ನಿತ್ಯ ಸ್ಮರಣೆಯು ಮಹಾಪಾಪಗಳನ್ನೇ ವಿನಾಶ ಮಾಡುತ್ತದೆ ಎಂದು ಹೇಳುತ್ತಲೇ ಸ್ತ್ರೀಯ ವಿಶ್ವರೂಪವನ್ನು ಕಾಣಲು ನಮ್ಮನ್ನು ಎಚ್ಚರಿಸುತ್ತದೆ.

ದಕ್ಷಿಣ ಭಾರತದಲ್ಲಿ ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ ೫ ಬೇರೆ ಬೇರೆ ದೇವಸ್ಥಾನಗಳಿವೆ. ಈ ೫ ದೇವಸ್ಥಾನಗಳು ಪಂಚಭೂತಗಳನ್ನು ಪ್ರತಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೇಶ್ವರ ದೇವಸ್ಥಾನ, ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಾಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ.

ಹೊರಗಿನ ಆಕಾಶ ಎಷ್ಟು ವಿಸ್ತಾರವಾಗಿದೆಯೋ, ಒಳಗಿನ ಆಕಾಶವೂ (ಅವಕಾಶವೂ ಅಂತ ಓದಿಕೊಳ್ಳಬಹುದು) ಅಷ್ಟೇ ವಿಸ್ತಾರವಾಗಿದೆ. ಪ್ರಕೃತಿಯು ಪಂಚಭೂತಗಳಿಂದ ಆಗಿರುವಂತೆಯೇ ನಮ್ಮ ದೇಹವೂ ಪಂಚಭೂತಗಳಿಂದ ಸೃಷ್ಟಿಯಾಗಿದೆ. ಹೊರಗೇನಿದೆಯೋ ಅದೇ ಒಳಗಿನಲ್ಲೂ ಇದೆಯಾದ್ದರಿಂದ ಜಗತ್ತೇ ನೀನಾಗಿರುವೆ ಎನ್ನುತ್ತದೆ ಛಾಂದೋಗ್ಯ ಉಪನಿಷತ್ತು.

ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ.

ನಾವು ಉಸಿರಾಡುವ ಗಾಳಿ ದೇಹದೊಳಗೆ ಇಲ್ಲದೇ ಹೋದರೆ ಅದನ್ನು ಹೆಣ ಅಂತ ಕರೀತಾರೆ. ಹಾಗಾಗಿ ಜೀವ ಇದೆ ಅಂದ್ರೆ ಅದಕ್ಕೆ ಗಾಳಿ ಅತಿ ಅವಶ್ಯ. ಅದೇ ವಾಯು ತತ್ವ. ಇನ್ನು ಕೊನೆಯದಾಗಿ ನಮ್ಮೊಳಗೂ ಸ್ಪೇಸ್ ಇದೆ ಆ ಎಲ್ಲ ಖಾಲಿ ಜಾಗವೇ ಆಕಾಶ ತತ್ವ. ಹೀಗೆ ಮನುಷ್ಯನ ದೇಹ ಸಂಪೂರ್ಣವಾಗಿ ಪಂಚಭೂತ ತತ್ವದ ಆಧಾರದ ಮೇಲೆ ನಿಂತಿದೆ.

ಆಯುರ್ವೇದ, ಯೋಗ ವಿಜ್ಞಾನ ಮತ್ತು ವೇದಾಂತದ ಪ್ರಕಾರ ಮಾನವರನ್ನು ಪಂಚಕೋಶಗಳಿಂದ ಮಾಡಲಾಗಿದೆ ಎಂದು ಹೇಳಲಾಗಿದೆ. ಮಾನವನು ಪಂಚ ಕೋಶಗಳಿಂದ ಉಂಟಾಗಿರುವನೆಂದು ವೇದಾಂತದಲ್ಲಿ ಒಂದು ಸಿದ್ಧಾಂತವಿದೆ.

೧. ಅನ್ನಮಯಕೋಶ (ದೇಹ)
೨. ಪ್ರಾಣಮಯಕೋಶ (ಉಸಿರು)
೩. ಮನೋಮಯ ಕೋಶ (ಮನಸ್ಸು)
೪. ವಿಜ್ಞಾನಮಯಕೋಶ (ಜ್ಞಾನ)
೫. ಆನಂದಮಯ ಕೋಶ (ಸಂತೋಷ)

ಶ್ರೀ ಆದಿ ಶಂಕರ ವಿರಚಿತವೆಂದು ಪ್ರಸಿದ್ಧವಾಗಿರುವ ವಿವೇಕ ಚೂಡಾಮಣಿಯಲ್ಲಿ ಇದರ ವರ್ಣನೆ ಇದೆ. ತೈತ್ತರೀಯ ಉಪನಿಷತ್ ನಲ್ಲಿಯೂ ಇದರ ಸೂಕ್ಷ್ಮ ನಿರೂಪಣೆ ಇದೆ. ಯೋಗಾಸನಗಳಲ್ಲಿ ಅತ್ಯಂತ ಜನಪ್ರಿಯವಾದ ಸೂರ್ಯ ನಮಸ್ಕಾರ ಮಾಡುವದರಿಂದ ಈ ಐದೂ ಕೋಶಗಳ ಮೇಲೆ ಒಳ್ಳೆಯ ಪ್ರಭಾವ ಉಂಟಾಗುತ್ತದೆ ಎಂದು ಯೋಗ ವಿಜ್ಞಾನ ಹೇಳುತ್ತದೆ

ಪಂಚಕವೊ, ಪಂಚ ಪಂಚಕವೊ;ಮಾಭೂತಗಳ
ಹಂಚಿಕೆಯನರಿತೇನು? ಗುಣವ ತಿಳಿದೇನು ?
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೇ?
ಮಿಂಚಿದದು ಪರತತ್ವ-ಮಂಕುತಿಮ್ಮ ।।

ಪಂಚಭೂತಗಳೆಂಬ ಈ ಮಹಾ ಭೂತಗಳು ಐದೋ, ಇಪ್ಪತ್ತೈದೋ? ಅದರ ಲೆಕ್ಕವನ್ನು ಅರಿತು ಏನು ಪ್ರಯೋಜನ? ಅವುಗಳ ಗುಣಗಳನ್ನು ನಾವು ತಿಳಿದುಕೊಂಡು ಏನಾಗಬೇಕಿದೆ? ಅದರ ಸಮಗ್ರ ಅಥವಾ ಸಂಪೂರ್ಣ ಅರಿವು ನಮಗಾಗುವುದಿಲ್ಲ. ಅಲ್ಪಸ್ವಲ್ಪ ಅದನ್ನು ತಿಳಿದುಕೊಂಡರೆ, ಪೂರ್ಣದ ಅರಿವು ನಮಗೆ ಆಗುತ್ತದೆಯೇ? ಈ ಪರಮಾತ್ಮನ ಮತ್ತು ಅವನ ಸೃಷ್ಟಿಯ ಜ್ಞಾನ,ನಮ್ಮ ಅರಿತುಕೊಳ್ಳುವ ಕ್ಷಮತೆಗೆ ಮಿಂಚಿದ್ದು ಎಂದು ಕಗ್ಗದಲ್ಲಿ ಡಿವಿಜಿ ಅಭಿಪ್ರಾಯ ಪಟ್ಟಿದ್ದಾರೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ” ಆಕಾಶವು ” ಯಾವುದರಿಂದ ಮಾಡಲ್ಪಟ್ಟಿದೆ ಎಂದು ಗಾರ್ಗಿ ಕೇಳುವ ಪ್ರಶ್ನೆಗೆ ಯಾಜ್ಞವಲ್ಕ್ಯನು ಆಕಾಶವನ್ನು ” ಅಕ್ಷರ, ಅಸ್ಥೂಲ, ಅಹ್ರಸ್ವ, ಅಧೀರ್ಘ, ಆಲೋಹಿತ, ಅಸ್ನೇಹ ” ಮುಂತಾದಾಗಿ ವಿವರಿಸುತ್ತಾನೆ. ಸುಲಭಕ್ಕೆ ಯಾಜ್ಞವಲ್ಕ್ಯನ ಉತ್ತರ ನಮಗೇನೂ ಅರ್ಥವಾಗುವುದಿಲ್ಲ.

ಆ ಪರಮಾತ್ಮನಿಂದ ಆದ ಈ ಪಂಚಭೂತಗಳು, ಈ ಜಗತ್ತಿನಲ್ಲಿ ನಮ್ಮ ಬದುಕಿಗೆ ಹೇಗೆ ಪೂರಕವಾಗಿವೆ ಎಂಬುದನ್ನು ಅರಿತು, ಅವುಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಅವುಗಳನ್ನು ನಮ್ಮ ದುರ್ಬುದ್ಧಿಯಿಂದ ಹಾಳುಮಾಡದೆ ಬದುಕಿದರೆ ನಮ್ಮ ಬದುಕು ಸುಂದರವಾಗಿರುವುದಲ್ಲದೆ ಮುಂದಿನ ಪೀಳಿಗೆಗಳೂ ಸಹ ಬದುಕಲು ಅನುವು ಮಾಡಿಕೊಟ್ಟಂತಾಗುತ್ತದೆ. ಅಂತಹ ಪ್ರಯತ್ನವನ್ನು ನಾವು ಮಾಡಿದರೆ ಆ ಪರಮಾತ್ಮನ ಸೃಷ್ಟಿಗೆ ತನ್ನ ಸ್ವರೂಪ ಉಳಿಸಿಕೊಳ್ಳಲು ಸಹಾಯಮಾಡಿದಂತಾಗುತ್ತದೆ ಎನ್ನುವುದು ಆಶಯ.

ಪಂಚಭೂತಗಳು ದೈವಗಳಂತೆಯೇ ಮನುಷ್ಯನ ಅಣುವಣುವಿನಲ್ಲೂ ಕರಗಿ ಜೀವ ಚೈತನ್ಯಗಳಾಗಿವೆ. ಕೊನೆಗೆ ತೊರೆದು ಜೀವಿಸಬಹುದೇ ನಿಮ್ಮ ಚರಣಗಳ ಎಂದು ಬದುಕುವುದೇ ಸಹಜ ಪ್ರಕೃತಿ ಧರ್ಮ, ಸಹಜ ಮಾನವ ಧರ್ಮ ಅನ್ನಿಸುತ್ತದೆ.