ನೆಮ್ಮದಿಗೆ ಭಂಗ ತರುವ ಅನುಭವ ಆದದ್ದು, ತುಂಬ ಶ್ರಮವಹಿಸಿ ನೆಟ್ಟ ಮರಗೆಣಸಿನ ಗಿಡದ ಬುಡದಲ್ಲಿ ಬುಟ್ಟಿಯಷ್ಟು ಬಿದ್ದ ಮಣ್ಣಿನ ರಾಶಿಯನ್ನು ಕಂಡಾಗ. ಒಂದು ಸಣ್ಣ ಸುಳಿವಿಲ್ಲದೆ ಬಂದ ಶತೃಗಳು ಗೆಣಸನ್ನು ತಿಂದು ಅದರ ಸಿಪ್ಪೆಯನ್ನು ಬಿಟ್ಟು ಹೋಗಿದ್ದವು. ಮನೆಯ ಸುತ್ತ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನೇಕ ಬಿಲಗಳು ಕಂಡವು. ಮನೆಯ ಪಾಗಾರ ಅಡಿಯಿಂದ ಪಕ್ಕದ ಮನೆಗೆ ಹೆದ್ದಾರಿ ಮಾರ್ಗ ರಚಿಸಿಕೊಂಡಿದ್ದರು ನಮ್ಮ ದಿಟ್ಟಿಗೆ ಬಿದ್ದಿರಲಿಲ್ಲ. ಇದನ್ನು ಹೀಗೆಬಿಟ್ಟರೆ ನಮಗೆ ಗೆಣಸಿನ ಒಂದು ಗಡ್ಡೆಯು ಸಿಗುವುದಿಲ್ಲವೆಂದು ಕಾರ್ಯಪ್ರವೃತ್ತನಾದೆ. ಇಲಿಯನ್ನು ಕೊಲ್ಲಲು ಇಲಿಬೋನುನನ್ನು ಕೊಂಡುತಂದೆ.
ಸುಧಾಕರ ದೇವಾಡಿಗ ಬಿ. ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

ಗುಟ್ಟಲ್ಲಿ ನಿಮಗೊಂದು ಮಾತು ಹೇಳುವೆ. ಉಪನ್ಯಾಸಕರು, ಮೇಷ್ಟ್ರುಗಳು ತಾವು ಜೀವನದಲ್ಲಿ ಏನು ಮಾಡುವುದಿಲ್ಲವೊ, ಅದೆಲ್ಲವನ್ನು ವಿದ್ಯಾರ್ಥಿಗಳೆದುರು ಆದರ್ಶವೆಂಬಂತೆ ಬೋಧಿಸುತ್ತಾರೆ. ತಾನು ಪಾಲಿಸದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಈ ನಯವಂಚಕತನ ನಮ್ಮಲ್ಲಿ ಹಲವರಿಗಿದೆ. ನನ್ನಲ್ಲಂತು ತುಸು ಜಾಸ್ತಿಯೇ ಇದೆಯೆಂದು ಬಹಿರಂಗವಾಗಿ ಒಪ್ಪಿಕೊಳ್ಳುವೆ. ಈ ತಪ್ಪೊಪ್ಪಿಗೆಯನ್ನು ನಿಮ್ಮಲ್ಲಿ ನಿವೇದಿಸಿಕೊಳ್ಳಲು ಕಾರಣವಿಷ್ಟೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಸವಣ್ಣನವರ “ದಯೆಯಿರಲಿ ಸಕಲ ಜೀವಿಗಳೆಲ್ಲರಲಿ, ದಯವೇ ಧರ್ಮದ ಮೂಲವಯ್ಯ” ಎಂಬ ವಚನವನ್ನು ಬೋಧಿಸುತ್ತಿದ್ದೆ. ವರ್ತಮಾನ ಸಮಾಜದ ಹಿಂಸೆಗೆ ದಯೆಯೇ ಮದ್ದು. ಇಂತಹ ದಯೆ ನಿಮ್ಮೆಲ್ಲರ ವ್ಯಕ್ತಿತ್ವದ ಭಾಗವಾಗಬೇಕು. ಈ ‘ದಯಾ’ ಗುಣದ ಗೈರುಹಾಜರಿಯೇ ಜಗತ್ತಿನ ಹಿಂಸೆಗೆ ಕಾರಣ ಎಂಬ ದೊಡ್ಡ ದೊಡ್ಡ ಮಾತುಗಳನ್ನು ಹೇಳಿದೆ. ಮಕ್ಕಳ ಮೊಗದಲ್ಲಿ ವ್ಯಂಗ್ಯದ ಮಂದಹಾಸವೊಂದು ಮಿಂಚಿ ಮರೆಯಾಯಿತು.

ತರಗತಿ ಮುಗಿದ ನಂತರ ಕಾಲಿಗೆ ಚುಚ್ಚಿದ ಮುಳ್ಳಿನಂತೆ ಈ ವ್ಯಂಗ್ಯದ ನಗೆ ಮನವನ್ನು ಇರಿಯುತ್ತಲೇ ಇತ್ತು. ಒಬ್ಬ ಹುಡುಗ/ಗಿಯೇನಾದರು ನಕ್ಕಿದ್ದರೆ ಅವನ/ಳ ಜನ್ಮ ಜಾಲಾಡಿ ತೆಪ್ಪಗೆ ಕೂರಿಸುತ್ತಿದ್ದೆ. ಆದರೆ ಇಡೀ ತರಗತಿಯೇ ನಕ್ಕಾಗ ಏನು ಮಾಡುವುದು? ‘ಒಲೆಹತ್ತಿ ಉರಿದೆಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೆಡೆ ನಿಲಲಾಗದು’ ಎಂಬ ವಚನದ ಸಾಲಿನಂತೆ ನನ್ನ ಸ್ಥಿತಿ. ಅದಲ್ಲದೆ ಮುಗುಳ್ನಗೆ ಬೇರೆ, ಈ ನಗೆಯ ಗುಟ್ಟನ್ನು ಅರಿಯುವುದೆಂತು ಎಂಬುದು ಜೀವನ್ಮರಣದ ಪ್ರಶ್ನೆಯಾಗಿ ಭಾದಿಸಿತು. ಈ ನಗೆಯ ಕಾರಣ ತಿಳಿಯಲು ನನ್ನ ಹಲವು ರಾತ್ರಿಗಳು ಸಿಗರೇಟಿನ ಬೂದಿಯಂತೆ ದಹಿಸಿದವು. ನಿದ್ದೆಯು ಹಾಳಾಯಿತು. ಬೋಧಿ ವೃಕ್ಷದಡಿ ಗೌತಮನಿಗೆ ಜ್ಞಾನೋದಯವಾದಂತೆ, ನಿದ್ದೆ ಬಾರದ ಒಂದು ನಡುರಾತ್ರಿಯಲ್ಲಿ ನನಗೆ ಜ್ಞಾನೋದಯವಾಯಿತು. ವ್ಯಂಗ್ಯದ ನಗುವಿಗೆ ಸಿಕ್ಕ ಉತ್ತರ ‘ಯುರೇಕಾ’ ಎಂದು ಸಂಭ್ರಮಿಸುವಷ್ಟು ಖುಷಿ ಮೂಡಿಸಿದರು, ಈ ಖುಷಿಯನ್ನು ಅಭಿವ್ಯಕ್ತಿಸದೆ ಅಡಗಿಸಬೇಕಾಯಿತು. ಖುಷಿಯನ್ನು ಅಡಗಿಸಿದ್ದು ಏಕೆ ಎಂದು ನೀವು ಪ್ರಶ್ನಿಸಬಹುದು. ಉತ್ತರವಿಷ್ಟೆ. ನಾನು ಏನೇನೊ ವಿಚಾರಗಳನ್ನು ಆಲೋಚಿಸುತ್ತ ಸ್ವಗತದಲ್ಲಿ ಮಾತನಾಡಿಕೊಳ್ಳುವ ಗುಣವಿದೆ. ಈ ಗುಣವನ್ನೆ ಮನೆಯವರು ಅರೆಮರುಳತನದ ಸೂಚಕವಾಗಿ ಭಾವಿಸಿದ್ದಾರೆ. ಹಾಗೇನಾದರು ಯುರೇಕಾ ಎಂದು ಕೂಗಿದ್ದರೆ ನನಗೆ ಪೂರ್ಣಹುಚ್ಚ ಎಂಬ ಪ್ರಮಾಣಪತ್ರವು ನಿರಯಾಸವಾಗಿ ಲಭಿಸುತ್ತಿತ್ತು. ಇದು ನನ್ನ ಮರುಳುತನಕ್ಕೆ ಪ್ರಬಲ ಸಾಕ್ಷಿಯಾದೀತು ಎಂದು ಯುರೇಕಾ ಎಂಬ ಪದ ಬಾಯಲ್ಲೇ ಸಕ್ಕರಯಂತೆ ಕರಗಿತು.

ನಡುರಾತ್ರಿಯಲ್ಲಿ ಸಿಕ್ಕ ಉತ್ತರವಾದರು ಏನೆಂದು ನಿಮಗೆ ನಿವೇದಿಸುತ್ತೇನೆ. ತರಗತಿಯಲ್ಲಿ ಒಂದು ಸಣ್ಣ ನಗು, ಮಾತು, ಆಕಳಿಕೆ, ತೂಕಡಿಕೆ ಏನಾದರೂ ಕಂಡರೆ ಅದನ್ನು ಅಲ್ಲಿಯೆ ಹತ್ತಿಕ್ಕುವ ನನ್ನ ಉಪನ್ಯಾಸಕನ ನಿರ್ದಯತೆ ಮಕ್ಕಳಿಗೆ ನೆನಪಾಗಿದೆ. ಇದು ವ್ಯಂಗ್ಯದ ಮಂದಹಾಸ ಸೃಷ್ಟಿಸಿದೆ. ಹಾಗಾಗಿ ‘ದಯೆ’ ಎಂಬ ಮೌಲ್ಯ ಅತ್ಯಂತ ಅಗತ್ಯವಾಗಿರುವುದು ನಿನಗೇ ಮೂರ್ಖ ಎಂಬ ಸಂದೇಶ ಆ ವ್ಯಂಗ್ಯದ ನಗುವಿನ ಹಿಂದಿತ್ತು ಎಂಬ ಜ್ಞಾನೋದಯವಾಯಿತು. ಎಂತಹ ಕಟು ಸತ್ಯವನ್ನು ಮಾತಿಲ್ಲದೆ ರವಾನಿಸಿದ ವಿದ್ಯಾರ್ಥಿಗಳ ಪ್ರಬುದ್ಧತೆಯನ್ನು ಮೆಚ್ಚಬೇಕಲ್ಲವೆ? ನಾವು ಮೇಷ್ಟ್ರುಗಳು ಎಂತಹ ಆತ್ಮವಂಚಕರು ಎಂದು ನಿಮಗೆ ತಥ್ಯವಾಯಿತು. ನಿದ್ರೆ ಇಲ್ಲದ ಆ ರಾತ್ರಿಯಲ್ಲಿ ನನ್ನೊಳಗಿನ ದಯೆಯ ಪ್ರಮಾಣ ಎಷ್ಟಿರಬಹುದು ಎಂಬ ಆಲೋಚನೆ ಮನದ ಗೋಡೆಯೆದುರು ಹಾದುಹೋಯಿತು. ಹಿಂದಿನ ಘಟನೆಗಳನ್ನು ಅವಲೋಕಿಸುವಾಗ ನನ್ನಲ್ಲಿ ದಯೆಗಿಂತ ನಿರ್ದಯತೆಯ ಕುಹುರುಗಳು ಹೆಚ್ಚಾದಂತೆ ಭಾಸವಾಗಿ ಕಸವಿಸಿಯಾದೆ.

ನಾನು ನಿರ್ದಯವಾಗಿ ವರ್ತಿಸುವಲ್ಲಿ ಸನ್ನಿವೇಶದ ಪಾತ್ರವೆ ಹೆಚ್ಚು ಹೊರತು ನಿಜವಾಗಿಯು ನಿರ್ದಯತೆ ನನ್ನ ಗುಣವಲ್ಲ. ಈ ಮಾತು ಸ್ವಪ್ರಶಂಸೆಯಿಂದ ಮೂಡಿದವು ಎಂದನ್ನಿಸಿದರು, ಹೀಗೆ ಆತುರದ ತೀರ್ಮಾನಕ್ಕೆ ತಲುಪಬೇಡಿ. ನನ್ನನ್ನು ಸೇರಿದಂತೆ ಎಲ್ಲರು ಸನ್ನಿವೇಶಕ್ಕೆ ವಶವಾಗಿ ನಿರ್ದಯಿಯಾದವರೆ ಆಗಿದ್ದೇವೆ. ನಿರ್ದಯತೆ ಸನ್ನಿವೇಶ ಸೃಷ್ಟಿಯೆಂಬ ಪಲಾಯನವಾದವನ್ನು ಮಂಡಿಸುತ್ತಿಲ್ಲ. ನನ್ನನ್ನು ನಿರ್ದಯಿಯಾಗಿ ರೂಪಿಸಿದ ಸನ್ನಿವೇಶಗಳನ್ನು ನೀವು ತಿಳಿದರೆ ನನ್ನೊಳಿಗಿನ ದಯೆಯ ಪರಿಚಯವಾದೀತು. ನಾವು ವಾಸಿಸುವ ಮನೆಯೆಂಬ ಪುಟ್ಟ ಗೂಡಿನ ಪಾಗಾರದೊಳಗೆ ತುಸು ಜಾಗವಿದೆ. ಅಲ್ಲಿ ಏನಾದರು ಗಿಡವನ್ನು ಬೆಳೆಸುವ ದೂ(ದು)ರಾಲೋಚನೆ ಮೂಡಿತು. ಮನೆಯ ಮುಂದಿನ ಸೌಂದರ್ಯವನ್ನು ಹೆಚ್ಚಿಸಲು ಹೂವಿನ ಗಿಡವನ್ನು, ಹಿತ್ತಿಲಿನ ಜಾಗದಲ್ಲಿ ಹಣ್ಣಿನ ಗಿಡವನ್ನು ನೆಡಲಾಯಿತು. ಹಣ್ಣಿನ ಗಿಡ ಹಿಂದಿದ್ದರೆ ಚೆಂದ ಅಲ್ಲವೆ. ಮನೆಯೆದುರು ಇದ್ದರೆ ಅದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುವುದು. ಅದಲ್ಲದೆ ನಮಗೊಂದಿಷ್ಟು ಕೊಡಿಯೆಂಬ ಅವರಿವರ ಪೀಡನೆಯಿಂದಲೂ ತಪ್ಪಿಸಿಕೊಳ್ಳಬಹುದು. ಎಷ್ಟು ಸ್ವಾರ್ಥಿಗಳು ಎಂದು ನಿಮಗನ್ನಿಸಬಹುದು. ಆದರೆ ನಾನು ಹೇಳುವ ಘಟನೆಯನ್ನು ಕೇಳಿದರೆ ನನ್ನ ಮಾತಿನ ತಥ್ಯ ಅರ್ಥವಾದೀತು.

ಕೇಳಿ, ಒಮ್ಮೆ ಮನೆಯಲ್ಲಿ ಬೆಳದ ಬಾಳೆಹಣ್ಣನ್ನು ಅಭಿಮಾನದಿಂದ ಗೆಳೆಯರಿಗೆ ಬಂಧುಗಳಿಗೆ ನೆರೆಹೊರೆಯವರಿಗೆ ನೀಡಿದೆ. ಹೀಗೆ ನೀಡಿದ್ದರ ಹಿಂದೆ ನಮ್ಮ ಶ್ರಮವನ್ನು ಹೊಗಳಲಿ ಎಂಬ ದುರಾಸೆಯಿತ್ತು. ಒಮ್ಮೆ ಪಡೆದ ಫಲಾನುಭವಿಗಳು ನಿಮ್ಮ ಮನೆಯಲ್ಲಿ ಬೆಳೆದ ಹಣ್ಣಿನ ರುಚಿ ಬೇರೆಲ್ಲು ಸಿಗಲಿಲ್ಲ ಎಂದು ಹೊಗಳಿದರು. ಈ ಹೊಗಳಿಕೆಯಿಂದ ಮನ ಹಿಗ್ಗಿತು. ಆದರೆ ಈ ಹೊಗಳಿಕೆ ಮತ್ತೆಮತ್ತೆ ಬಂದಾಗ ಅದರ ಹಿಂದಿನ ಸಂಚು ತಿಳಿಯಿತು. ಹೀಗೆ ಹೊಗಳಿದ್ದು ನೀವು ಮತ್ತೆ ನಮಗೆ ಹಣ್ಣನ್ನು ನೀಡಲೆಯಿಲ್ಲ ಎಂದೆಚ್ಚರಿಸಲು. ನಾವು ಬೆಳೆಸಿದ ಫಲವನ್ನು ಬೇರೆಯವರು ಹೊಗಳಲಿ ಎಂದು ನೀಡುವುದರ ಅಪಾಯ ತಿಳಿದು ಅಂದಿನಿಂದ ಸುಮ್ಮನಾದೆ.

ನಾವು ಅನೇಕ ನರ್ಸರಿಗಳನ್ನು ಸುತ್ತಿ ಸುಂದರ ಹೂವಿನ ಗಿಡಗಳನ್ನು ತಂದು ಬೆಳೆಸಿದವು. ಕೆಲವಂತು ಅವರಿವರ ಬಳಿ ಬೇಡಿ ತಂದದ್ದು ಉಂಟು. ಕೆಲವನ್ನು ನನ್ನ ವಿದ್ಯಾರ್ಥಿಗಳ ಬಳಿ ನಿರ್ಲಜ್ಜೆಯಿಂದ ಬೇಡಿ ಅವರ ಮನೆಯಿಂದ ತರಿಸಿ ನೆಟ್ಟಿದ್ದೆ. ಹೀಗೆ ಹಲವು ಬಣ್ಣದ ದಾಸವಾಳ, ಗುಲಾಬಿ ಗಿಡಗಳು ಬೆಳೆದು ಹೂ ಬಿಟ್ಟಾಗ ಆದ ಸಂತಸವಿದೆಯಲ್ಲ, ಅದು ಸಾವಿರಾರು ಕೋಟಿಗಳಿಗೂ ಮಿಗಿಲಾದದ್ದು. ಹೀಗೆಯೇ ಮನೆಯ ಹಿಂದೆ ಅನೇಕ ತಳಿಯ ಬಾಳೆ ಕಂದುಗಳನ್ನು ಕೃಷಿ ಮೇಳಗಳಿಂದ ತಂದು ಮಕ್ಕಳನ್ನು ಆರೈಕೆ ಮಾಡಿದಂತೆ ಬೆಳೆಸಿದೆ. ಇವು ತಡವಾಗಿಯಾದರು ಫಲಬಿಟ್ಟು ನಳನಳಿಸ ತೊಡಗಿದವು. ಪ್ರತಿದಿನ ಬಾಳೆಯ ಹೂ, ಆ ಗೊನೆಯಲ್ಲಿ ಆದ ಕಾಯಿಗಳ ಬೆಳವಣಿಗೆಯನ್ನು ನೋಡುವುದು ದಿನಚರಿಯಾಯಿತು. ಮಕ್ಕಳು ಪ್ರತಿದಿನ ಯಾವಾಗ ಹಣ್ಣಾಗುವುದು ಎಂದು ಆಸೆಗಣ್ಣಿಂದ ಕಾದವು. ಇವುಗಳನ್ನು ಬೆಳೆಸಲು ಪಟ್ಟಶ್ರಮವನ್ನು ಕುರಿತು ಬರೆದರೆ ಅದೊಂದು ಕಾದಂಬರಿಯಾದೀತು. ಆದರು ನನ್ನ ಶ್ರಮದ ಸ್ವರೂಪವನ್ನು ತಿಳಿಸಲು ಒಂದು ಘಟನೆಯನ್ನು ಹಂಚಿಕೊಳ್ಳುವೆ.

ಪ್ರತಿದಿನ ಸಂಜೆ ಕಾಲೇಜು ಮುಗಿಸಿ ಮನೆಗೆ ಬಂದವನು ವಾಯುವಿಹಾರಕ್ಕೆ ಹೋಗುವಾಗ ಕೈಯಲ್ಲಿ ಪ್ಲಾಸ್ಟಿಕ್ ಜರಿಕೊಟ್ಟೆ ಹಿಡಿದು ಹೋಗುವುದು. ರಸ್ತೆ ಬದಿಯಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿತರುವುದು. ಇದು ಎಷ್ಟು ಅಪಮಾನದ ಸಂಗತಿಯೆಂದು ಅವರಿವರ ಚಾಡಿ ಮಾತು ಕೇಳಿದಾಗಲೇ ತಿಳಿದದ್ದು. ಈ ಅಪಮಾನವನ್ನು ಮನದ ಗೋಡೆಯಿಂದ ಅಳಿಸಿ ನೆಮ್ಮದಿ ನೀಡಿದ್ದು ನಳನಳಿಸುವ ಈ ಗಿಡಗಳು. ಹಾಗಾಗಿ ಎಲ್ಲೆ ಸೆಗಣಿ ಕಂಡರು ಮರ್ಯಾದೆಬಿಟ್ಟು ಹೆಕ್ಕಿ ತರುವುದು ಕಾಯಕವಾಯಿತು. ಇದೆಲ್ಲವು ವಿಚಿತ್ರ ಆನಂದ ನೆಮ್ಮದಿಯನ್ನು ನೀಡಿದವು. ಆದರೆ ಈ ನೆಮ್ಮದಿಯ ದಿನಗಳು ಹೆಚ್ಚುಕಾಲ ಇರಲಿಲ್ಲ.

ಎಂತಹ ಕಟು ಸತ್ಯವನ್ನು ಮಾತಿಲ್ಲದೆ ರವಾನಿಸಿದ ವಿದ್ಯಾರ್ಥಿಗಳ ಪ್ರಬುದ್ಧತೆಯನ್ನು ಮೆಚ್ಚಬೇಕಲ್ಲವೆ? ನಾವು ಮೇಷ್ಟ್ರುಗಳು ಎಂತಹ ಆತ್ಮವಂಚಕರು ಎಂದು ನಿಮಗೆ ತಥ್ಯವಾಯಿತು. ನಿದ್ರೆ ಇಲ್ಲದ ಆ ರಾತ್ರಿಯಲ್ಲಿ ನನ್ನೊಳಗಿನ ದಯೆಯ ಪ್ರಮಾಣ ಎಷ್ಟಿರಬಹುದು ಎಂಬ ಆಲೋಚನೆ ಮನದ ಗೋಡೆಯೆದುರು ಹಾದುಹೋಯಿತು. ಹಿಂದಿನ ಘಟನೆಗಳನ್ನು ಅವಲೋಕಿಸುವಾಗ ನನ್ನಲ್ಲಿ ದಯೆಗಿಂತ ನಿರ್ದಯತೆಯ ಕುಹುರುಗಳು ಹೆಚ್ಚಾದಂತೆ ಭಾಸವಾಗಿ ಕಸವಿಸಿಯಾದೆ.

ನೆಮ್ಮದಿಗೆ ಭಂಗ ತರುವ ಅನುಭವ ಆದದ್ದು, ತುಂಬ ಶ್ರಮವಹಿಸಿ ನೆಟ್ಟ ಮರಗೆಣಸಿನ ಗಿಡದ ಬುಡದಲ್ಲಿ ಬುಟ್ಟಿಯಷ್ಟು ಬಿದ್ದ ಮಣ್ಣಿನ ರಾಶಿಯನ್ನು ಕಂಡಾಗ. ಒಂದು ಸಣ್ಣ ಸುಳಿವಿಲ್ಲದೆ ಬಂದ ಶತೃಗಳು ಗೆಣಸನ್ನು ತಿಂದು ಅದರ ಸಿಪ್ಪೆಯನ್ನು ಬಿಟ್ಟು ಹೋಗಿದ್ದವು. ಮನೆಯ ಸುತ್ತ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನೇಕ ಬಿಲಗಳು ಕಂಡವು. ಮನೆಯ ಪಾಗಾರ ಅಡಿಯಿಂದ ಪಕ್ಕದ ಮನೆಗೆ ಹೆದ್ದಾರಿ ಮಾರ್ಗ ರಚಿಸಿಕೊಂಡಿದ್ದರು ನಮ್ಮ ದಿಟ್ಟಿಗೆ ಬಿದ್ದಿರಲಿಲ್ಲ. ಇದನ್ನು ಹೀಗೆಬಿಟ್ಟರೆ ನಮಗೆ ಗೆಣಸಿನ ಒಂದು ಗಡ್ಡೆಯು ಸಿಗುವುದಿಲ್ಲವೆಂದು ಕಾರ್ಯಪ್ರವೃತ್ತನಾದೆ. ಇಲಿಯನ್ನು ಕೊಲ್ಲಲು ಇಲಿಬೋನುನನ್ನು ಕೊಂಡುತಂದೆ. ಬೋನಿನ ಸರಳಿಗೆ ಪರಿಮಳಭರಿತ ತಿಂಡಿ ಸಿಕ್ಕಿಸಿ ಮರಗೆಣಸಿನ ಗಿಡದ ಬಳಿ ಇರಿಸಿದೆ. ಬೆಳಗೆದ್ದು ಬಾಯಿಗೆ ನೀರು ಹಾಕದೆ, ಇಲಿಯೇನಾದರು ಬಿದ್ದಿದೆಯೇ ಎಂದು ನೋಡಲು ಹೋದೆ. ಪುಟ್ಟ ಬೆಕ್ಕಿನಮರಿಯು ವಿಕಾರವಾಗಿ ಅರಚುತ್ತ ಬಂಧಿಯಾಗಿತ್ತು. ಮೂಷಕ ಪಡೆ ಮತ್ತೆರೆಡು ಗಿಡದ ಗೆಣಸನ್ನು ಖಾಲಿಮಾಡಿ ನನಗೆ ಬುದ್ಧಿಕಲಿಸಿದ್ದವು. ನೆಲಕ್ಕೆ ಬಿದ್ದರು ಮೀಸೆ ಮಣ್ಣಾಗದ ಜಟ್ಟಿಯಂತೆ ಮತ್ತೆ ಬೋನಿಗೆ ಸುಟ್ಟಕಾಯಿಯನ್ನು ಸಿಕ್ಕಿಸಿ ಪ್ರಯತ್ನಶೀಲನಾದೆ. ಮಾರನೆಯ ಬೆಳಗಿನ ನಿರೀಕ್ಷೆಯಲ್ಲಿಯೆ ಇರುಳು ಸಂದಿತು. ಬೆಳಗೆದ್ದು ಕಂಡರೆ ನನ್ನ ಶ್ರಮ ವ್ಯರ್ಥವಾಗಿರಲಿಲ್ಲ. ಎರಡು ಚಿಕ್ಕ ಇಲಿಮರಿಗಳು ಬಂಧಿಯಾಗಿದ್ದವು. ಯುದ್ಧಗೆದ್ದ ಸಂಭ್ರಮದಲ್ಲಿ ಮನೆಯವರನ್ನೆಲ್ಲ ಕರೆದು ತೋರಿಸಿದೆ. ಅವರು ಪಕ್ಕದ ಮರಗೆಣಸಿನ ಬಳಿಬಿದ್ದ ಮಣ್ಣಿನ ರಾಶಿ ತೋರಿಸಿ ನಗೆಯಾಡಿ ನನ್ನ ಸಂಭ್ರಮಕ್ಕೆ ತಣ್ಣೀರೆರಚಿದರು. ಬೆಟ್ಟ ಅಗೆದು ಇರುವೆ ಹಿಡಿದ ಸ್ಥಿತಿ ನನ್ನದಾಯಿತು. ಈ ಪಾಪದ ಇಲಿ ಮರಿಗಳು ಲೂಟಿಕೋರ ಕೂಟದ ಸದಸ್ಯರೆ ಹೊರೆತು ಲೂಟಿಕೋರರಲ್ಲ. ಆದರು ಇಂದಿನ ಮಕ್ಕಳೆ ನಾಳಿನ ಲೂಟಿಕೋರರು ಎಂದು ಈ ಸದಸ್ಯರನ್ನು ಬೆಕ್ಕಿನ ಸಂಸಾರದ ಮುಂದೆ ಬಿಡುಗಡೆಗೊಳಿಸಿದೆ. ಕ್ಷಣಾರ್ಧದಲ್ಲಿ ಅವು ಬೆಕ್ಕಿನ ಭೋಜನವಾದವು.

ಮೇಲಿನ ಘಟನೆಯಲ್ಲಿ ಎಲ್ಲಿಯಾದರು ನನ್ನ ನಿರ್ದಯತೆಗೆ ಸಾಕ್ಷಿ ಸಿಗುವುದೆ? ತಿಳಿಸಿ. ಇಲ್ಲಿ ಬೆಕ್ಕಿಗೆ ಆಹಾರ ನೀಡಿದ ನಾನು ದಾನಿಯೆ ಹೊರತು ನಿರ್ದಯಿಯಲ್ಲ ಅಲ್ಲವೆ. ಈ ಮೂಷಿಕ ಸಮೂಹದ ಉಪಟಳ ಗೆಣಸಿಗೆ ಸೀಮಿತವಾಗಲಿಲ್ಲ. ಹುಲುಸಾಗಿ ಬೆಳೆದ ಬಾಳೆಯ ಗಿಡದ ಬುಡದಲ್ಲು ಜೆ.ಸಿ.ಬಿಯಿಂದ ಅಗೆದಷ್ಟು ಮಣ್ಣು ಬೀಳತೊಡಗಿತು. ಸಣ್ಣ ಗಾಳಿಯನ್ನು ತಡೆಯದ ಫಲಬಿಟ್ಟ ಕದಳಿಯು ಬುಡ ಮೇಲಾಗಿ ನೆಲಕ್ಕುರುಳಿತು. ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕದಳಿಯ ಬುಡದಲ್ಲಿ ಸಣ್ಣ ಸುರಂಗವೇ ನಿರ್ಮಾಣವಾಗಿರುವುದು ತಿಳಿಯಿತು. ಮಣ್ಣು ತುಂಬಿಸಿ ಫಲಬಿಟ್ಟ ಗಿಡವನ್ನು ಉಳಿಸಿಕೊಳ್ಳುವ ಪ್ರಯತ್ನವು ಫಲನೀಡಲಿಲ್ಲ. ಮಾರನೆಯ ದಿನ ಅಷ್ಟೇ ಮಣ್ಣು ಹೊರಬಿದ್ದು ಸುರಂಗ ಎಂದಿನಂತೆ ರೂಪುಪಡೆಯುತಿತ್ತು. ಇದರಿಂದ ಸೋಲದ ನಾನು ಬಾಳೆಯನ್ನು ಉಳಿಸಿಕೊಳ್ಳಲು ಭಗೀರಥ ಪ್ರಯತ್ನನಿರತನಾದೆ. ಈ ಸಮಸ್ಯೆಯ ಕುರಿತು ಎಲ್ಲರ ಬಳಿ ಹೇಳಿಕೊಳ್ಳಲು ಶುರುಮಾಡಿದೆ. ಪ್ರತಿಯೊಬ್ಬರು ಒಂದೊಂದು ಉಪಾಯ ಹೇಳಿದರು. ಒಂದೊಂದಾಗಿ ಪ್ರಯೋಗಿಸಿದೆ. ಯಾವುದೂ ಈ ಸಮಸ್ಯೆಯಿಂದ ನನ್ನನ್ನು ಪಾರು ಮಾಡಲಿಲ್ಲ.

ನೆರಮನೆಯ ಬೆಕ್ಕು ನಮ್ಮ ಮನೆಯ ಶೆಡ್ಡನ್ನು ಹೆರಿಗೆ ಆಸ್ಪತ್ರೆಯನ್ನಾಗಿಸಿಕೊಂಡು ಮರಿಗಳಿಗೆ ಜನ್ಮನೀಡಿತ್ತು. ಬೆಕ್ಕನ್ನು ಕಂಡು ಅಷ್ಟೇನು ಪ್ರೀತಿಯಿರದ ನಾನು ಈ ಬೆಕ್ಕಿನ ಸಂಸಾರವನ್ನು ಇಲಿಗಳನ್ನು ಮಟ್ಟಹಾಕಿಲಿಕ್ಕೆಂದೆ ಸಾಕಿದೆ. ನಾವು ಹಾಕಿದ ಅನ್ನ ತಿಂದ ಇವು ವರಾಂಡಾದ ಸೋಫ ಮೇಲೆ ಗಡದ್ದಾಗಿ ನಿದ್ರಿಸಿದವೆ ಹೊರತು ಒಂದೇ ಒಂದು ಇಲಿಯನ್ನು ಹಿಡಿಯಲಿಲ್ಲ. ಇವುಗಳಿಂದ ಆದ ಉಪಕಾರ ಕಿಂಚಿತ್ತು ಇಲ್ಲ. ಇದರಿಂದಾದ ಉಪದ್ರ ಅಷ್ಟಿಷ್ಟಲ್ಲ. ಅವರಿವರ ಮನೆಯವರು ಸ್ವಚ್ಚಗೊಳಿಸಿ ಬಿಸಾಡಿದ ಮೀನಿನ ತ್ಯಾಜ್ಯವನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ಸೋಫ ಮೇಲೆ ವಾಂತಿ ಮಾಡಿರುತ್ತಿದ್ದವು. ಬೆಳಗೆದ್ದು ಈ ಇದನ್ನು ಸ್ವಚ್ಚಗೊಳಿಸುವುದೇ ಮಹಾಕಾರ್ಯವಾಯಿತು. ಮಕ್ಕಳು ಮಾಡಿದ ವಾಂತಿಯನ್ನು ಬಾಚಲು ಅಸಹ್ಯಯಿಸುವ ನಾನು ಮನೆಯವರ ಬೈಗುಳದಿಂದ ಪಾರಾಗಲು ಸ್ವಚ್ಚಮಾಡಲೇಬೇಕಾಯಿತು. ಈಗ ಇಲಿಗಳ ನಿರ್ಮೂಲನೆಯ ಜೊತೆಗೆ ಬೆಕ್ಕುಗಳ ನಿರ್ಮೂಲನೆಯ ಕಾರ್ಯಯೋಜನೆ ರೂಪಿಸಬೇಕಾಯಿತು. ಹೀಗೆ ಇಲಿಗಳನ್ನು ಜಾಗ ಖಾಲಿ ಮಾಡಿಸುವ ಯಾವ ಉಪಾಯವು ಕೈಹಿಡಿಯಲಿಲ್ಲ.

ಕೊನೆಗೆ ಮೂಷಿಕ ಸಂಹಾರಕ್ಕೆ ರಾತ್ರಿ ಕಾವಲಿಗೆ ನಿಂತೆ. ಕೈಯಲ್ಲಿ ದೊಡ್ಡ ದೊಣ್ಣೆ ಮತ್ತು ಬ್ಯಾಟರಿಯನ್ನು ಹಿಡಿದು ರಾತ್ರಿ ನಿದ್ದೆ ಬಿಟ್ಟು ಕಾದೆ. ಬ್ಯಾಟರಿ ಬೆಳಕನ್ನು ಕಣ್ಣಿಗೆ ಹಾಯಿಸಿದರೆ ಅದು ಓಡದೆ ನಿಲ್ಲುವುದು ಆಗ ದೊಣ್ಣೆಯಿಂದ ಹೊಡೆದು ಕೊಲ್ಲುವ ಸನ್ನಾಹ ಮಾಡಿದೆ. ರಾತ್ರಿ ಹಿತ್ತಿಲ ಬಾಗಿಲ ಬಳಿ ದೀಪ ಆರಿಸಿ ಕುಳಿತೆ. ನನ್ನ ನೀರಿಕ್ಷೆಯನ್ನು ಮೀರಿ ಇಡೀ ಮೂಷಿಕ ಸೈನ್ಯವೇ ದಾಳಿಯಿಟ್ಟಿತು. ಇವು ನೋಡಲು ಪುಟ್ಟಹಂದಿಯ ಮರಿಯಂತೆ ಬೆಳೆದುಕೊಂಡಿವೆ. ಅಷ್ಟುದೊಡ್ಡ ಬೆಕ್ಕಿನ ಸಂಸಾರವಿದ್ದರು ಇಲಿಗಳ ಉಪಟಳ ಏಕೆ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆಗೆ ಉತ್ತರ ದೊರೆಕಿತು. ಒಂದರಘಳಿಗೆ ನನಗೆ ಭೀತಿಯಾದರು ಧೈರ್ಯ ಮಾಡಿ ಬ್ಯಾಟರಿ ಬೆಳಕನ್ನು ಬೀರಿದೆ. ಕೆಲವು ಆಚೀಚೆ ಓಡಿದವು. ಒಂದು ಬೃಹತ್ ಗಾತ್ರದ ಇಲಿ ಬೀದಿ ರೌಡಿಯ ಹಾಗೆ ಬೆಳಕಿಗೆ ಗುರಾಯಿಸುತ್ತ ನಿಂತಿತು. ಕೈಯ ದೊಣ್ಣೆ ಸಿದ್ಧಪಡಿಸಿಕೊಂಡು ಬೆಳಕು ಅಲುಗದ ಹಾಗೆ ಅದರ ಸಮೀಪ ಬಂದು ಬಾರಿಸಿದೆ. ಚೂರು ಪೆಟ್ಟುಬಿದ್ದು ದೇಹವನ್ನೆಳೆದುಕೊಂಡು ಓಡಿತು. ಅಯ್ಯೋ ತಪ್ಪಿಸಿಕೊಳ್ಳುತ್ತದೆ ಎಂದು ಬೆನ್ನಟ್ಟಲು ಎರಡು ಹೆಜ್ಜೆಯಿಟ್ಟು ಮೂರನೆಯ ಹೆಜ್ಜೆ ಇಟ್ಟದ್ದೇ ಕಾಲುಜಾರಿ ದೊಪ್ಪನೆಬಿದ್ದೆ. ಕಾಲು ಉಳುಕಿ ಮಾರನೆ ದಿನ ಊದಿಕೊಂಡಿತ್ತು. ಇಲಿಯ ಸಂಹಾರ ಪ್ರಯತ್ನದಲ್ಲಿ ಒಂದುವಾರ ಕುಂಟುತ್ತ ನಡೆಯುವ ಸ್ಥಿತಿ ನಿರ್ಮಾಣವಾಯಿತು. ಈ ಪ್ರಯತ್ನ ಮತ್ತೆ ಮುಂದುವರಿಯಲಿಲ್ಲ. ಎಷ್ಟು ಇಲಿಯನ್ನು ಕೊಂದೆ? ಎಂಬ ಮನೆಯವರ ವ್ಯಂಗ್ಯದ ಪ್ರಶ್ನೆ ಕಾಲಿನ ನೋವಿಗಿಂತ ಹೆಚ್ಚು ನೋವುಂಟು ಮಾಡಿತು. ಮೂರು ದಿನದ ನಂತರ ಕುಂಟುತ್ತ ಹಿತ್ತಲಿಗೆ ಹೋದರೆ ಮೂಗಿಗೆ ಒಡೆಯುವಷ್ಟು ದುರ್ವಾಸನೆಯಿತ್ತು. ಇದು ನನ್ನಿಂದ ಪೆಟ್ಟುತಿಂದು ಸತ್ತ ಇಲಿಯದೇ ದುರ್ವಾಸನೆ ಎಂದು ಮನೆಯವರಲ್ಲಿ ಹೇಳಿಕೊಂಡು ಬೀಗಿದೆ.

ಒಮ್ಮೆ ಕಾಲು ಮುರಿದಕೊಂಡ ನಾನು ಇಲಿಗಳ ಮಟ್ಟಹಾಕುವ ಕಾರ್ಯಕ್ಕೆ ವಿದಾಯ ಹೇಳಿದೆ. ಮೂಷಿಕ ಉಪಟಳಕ್ಕೆ ಕಡಿವಾಣ ಇಲ್ಲದಂತಾಯಿತು. ದಾಸವಾಳ, ಗುಲಾಬಿ, ಸಾಂಬಾರು ನೆಟ್ಟಿ ಎಲ್ಲ ಗಿಡಗಳ ಬುಡವನ್ನು ಅಭದ್ರಗೊಳಿಸಿ ಅವುಗಳ ವಿನಾಶಕ್ಕೆ ಮುನ್ನುಡಿ ಬರೆದವು. ಈ ಉಪಟಳವನ್ನು ಎದುರಿಗೆ ಸಿಕ್ಕ ಎಲ್ಲರ ಬಳಿ ವ್ಯಥೆಯಿಂದ ಹೇಳಲು ಶುರುಮಾಡಿದೆ. ಹೀಗೆ ಹೇಳುವುದು ಒಂದು ವ್ಯಾದಿಯಾಯಿತು. ಕೆಲವರು ಎದುರಿಗೆ ಸಿಕ್ಕರು ಮುಗುಳ್ನಕ್ಕು ಮಾತಿಲ್ಲದೆ ಮಂದುವರೆದರು. ನನ್ನ ಮೂಷಿಕ ಕಥೆಯ ಹಿಂಸೆಯನ್ನು ಸಹಿಸಿಕೊಳ್ಳದೆ ಅನೇಕರು ನನ್ನೊಡನೆ ಮಾತುಬಿಟ್ಟರು. ಕ್ರಮೇಣ ನಾನು ಅಂತರ್ಮುಖಿಯಾದೆ. ಛಲಬಿಡದ ತ್ರಿವಿಕ್ರಮನಂತೆ ಯುಟ್ಯೂಬಿನ ವಿಡಿಯೋಗಳನ್ನು ನೋಡಿ ಮತ್ತೆ ಇಲಿಸಂಹಾರಕ್ಕೆ ಅನೇಕ ಪ್ರಯೋಗ ಮಾಡಿದೆ. ಯಾವುದು ಫಲ ಕೊಡಲಿಲ್ಲ. ಕೊನೆಗೆ ನನ್ನಿಂದ ಸಾಧ್ಯವಿಲ್ಲವೆಂದು ಕೈಚೆಲ್ಲಿದೆ.

ಕ್ರಮೇಣ ಈ ಇಲಿಗಳು ಉಪಟಳವು ಸಹ್ಯವಾಯಿತು. ಬೆಳಗೆದ್ದು ಈ ದಿನ ಏನು ಮಾಡಿದೆ ಎಂದು ಪರಿಶೀಲಿಸುವುದು ದಿನಚರಿಯಾಯಿತು. ಪ್ರತಿದಿನ ಇಲಿಯ ಕಾರ್ಯದ ವರದಿಯನ್ನು ಮಗಳೊಂದಿಗೆ ಹಂಚಿಕೊಳ್ಳುವುದು. ಅವಳು ಕಥೆಯನ್ನು ಕೇಳಿದಷ್ಟೇ ಶ್ರದ್ಧೆಯಿಂದ ಅದನ್ನು ಆಲಿಸುವಳು. ಕೊನೆಗೆ ಅವಳು ಇಲಿಗಳ ಕಾರ್ಯಭಾರದ ವಿವಿಧ ವರದಿಗಳನ್ನು ಒಪ್ಪಿಸತೊಡಗಿದಳು. ಅಪ್ರಜ್ಞಾಪೂರ್ವಕವಾಗಿ ಇಲಿಗಳ ಕುರಿತ ಪ್ರಸ್ಥಾಪವು ನಮ್ಮ ಮಾತುಕತೆಯ ಭಾಗವಾಯಿತು.

ಇಂತಹ ಸಂದರ್ಭದಲ್ಲಿ ಒಂದು ನಡುರಾತ್ರಿ ಗಾಢವಾದ ನಿದ್ದೆಯ ಆಲಿಂಗನದಲ್ಲಿರುವ ವೇಳೆಗೆ ನಮ್ಮ ಕೊಠಡಿಯ ಹೊರೆಗೆ ಬುಸ್ ಬುಸ್ ಎಂದು ಏದುರಿಸುಬಿಟ್ಟು ಸದ್ದು ಕೇಳತೊಡಗಿತು. ಆರಂಭದಲ್ಲಿ ನಿರ್ಲಕ್ಷಿಸಿದೆ. ಕ್ರಮೇಣ ಸದ್ದು ಬೆಳೆಯುತ್ತ ಹೋದಂತೆ ನೋಡುವ ಕುತೂಹಲ ಮೂಡಿತು. ರೂಮಿನ ಕಿಟಕಿಯಿಂದ ಇಣುಕಿದೆ. ನಾಗರಹಾವು ಹೆಡೆಬಿಚ್ಚಿ ಅತ್ತಿತ್ತ ತೂಗುತ್ತ ಬುಸುಗುಡುವುದು ಅಸ್ಪಷ್ಟವಾಗಿ ಕಂಡಿತು. ಮೊಬೈಲ್ ಟಾರ್ಚ್ ಬೆಳಕನ್ನು ಬೀರಿದಾಗ ಸ್ಪಷ್ಟವಾಗಿ ಗೋಚರಿಸಿತು. ಮನೆಯ ಹೊರಗಿನ ದೀಪಹೊತ್ತಿಸಿ ಬಾವಿಕಟ್ಟೆ ಅಂಗಳವನ್ನು ಕಂಡರೆ ದೊಡ್ಡಗಾತ್ರದ ಇಲಿಯೊಂದು ಹಾವಿನ ಬಾಲವನ್ನು ಕಚ್ಚುವುದು. ಹಾವು ಕೋಪದಿಂದ ಅದರ ಮೇಲೆ ದಾಳಿಮಾಡಲು ನುಗ್ಗುವ ಹೊತ್ತಿಗೆ ತಪ್ಪಿಸಿಕೊಳ್ಳುವುದು. ಅನಂತರ ಮತ್ತೆ ಹಿಂದಿನಿಂದ ಹಾವಿನ ಬಾಲ ಕಚ್ಚಲು ಬರುವುದು, ಹಾವು ಬುಸುಗುಡುತ್ತ ಕಚ್ಚಲು ಹೋದಾಗ ತಪ್ಪಿಸಿಕೊಳ್ಳುವುದು. ಈ ಆಟ ತುಂಬಾ ಹೊತ್ತಿನಿಂದ ಚಾಲ್ತಿಯಲ್ಲಿತ್ತು. ಈ ಕದನ ಯಾವಾಗ ಕೊನೆಗೊಳ್ಳವುದು ಎಂದು ಕಾಯುತ್ತ ಕುಳಿತೆ. ಇದು ಮುಗಿಯಲಿಲ್ಲ. ಇಲಿ ಹಾವಿಂದ ಕಚ್ಚಿಸಿಕೊಂಡು ಸಾಯುವುದು ಶತಸಿದ್ಧ ಎಂದು ಕಾದದ್ದು ವ್ಯರ್ಥವಾಯಿತು. ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಗಾದೆಯಂತೆ, ಯಾರೊಬ್ಬರು ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಕದನ ವಿರಾಮವಾಗಲಿ, ಯುದ್ಧಂತ್ಯವಾಗಲಿ ಅಸಾಧ್ಯ ಎನ್ನಿಸಿ ಬ್ಯಾಟರಿ ಪ್ರಖರ ಬೆಳಕನ್ನು ಇಲಿಗೆ ಹಾಯಿಸಿ ಓಡಿಸಿದೆ. ಮತ್ತೊಂದು ಐದು ನಿಮಿಷ ಶತ್ರು ದಾಳಿ ಮಾಡಬಹುದು ಎಂದು ಕಾಯ್ದ ಹಾವು ಹೆಡೆ ಇಳಿಸಿ ಮೆಲ್ಲಗೆ ಪಲಾಯನ ಮಾಡಿತು. ಹಾವು ಎಲ್ಲಾದರು ಕೋಣೆಯೊಳಗೆ ಬಂದೀತು ಎಂಬ ಭಯದಿಂದ ತೆರೆದ ಕಿಟಕಿಯ ಬಾಗಿಲು ಮುಚ್ಚಿ ಮಲಗಿದೆ. ನಿದ್ದೆ ಬರಲಿಲ್ಲ.

ಇದಾದ ಕೆಲದಿನಗಳ ನಂತರ ಇಲಿಗಳು ಕಣ್ಮರೆಯಾದವು. ಅವುಗಳ ನಿರ್ಮೂಲನೆಗೆ ನಾವುಪಟ್ಟ ಪ್ರಯತ್ನಗಳೆಲ್ಲ ವಿಫಲವಾಗಿದ್ದವು. ಈಗ ಸದ್ದಿಲ್ಲದೆ ಜಾಗ ಖಾಲಿಮಾಡಿವೆ. ಸಾಲವನ್ನು ವಸೂಲಿ ಮಾಡಲು ಫೈನಾನ್ಸ್‌ನವರು ಗುಂಡಾಗಳನ್ನು ಬಿಟ್ಟಂತೆ ನಾನು ಇಲಿಗಳನ್ನು ಕೊಲ್ಲಲು ಹಾವನ್ನು ಬಿಟ್ಟಿದ್ದೇನೆ ಎಂದು ಭಾವಿಸಿ ಇಲಿಗಳು ಹೆದರಿ ಓಡಿದವೊ, ತಿನ್ನಲು ಏನು ಸಿಗದೆ ಹೋದವೊ ಗೊತ್ತಿಲ್ಲ. ಈಗೀಗ ಬೆಕ್ಕು ಇಲಿ, ಹಾವುಗಳ ಹಾವಳಿಯಿಲ್ಲದೆ ಪಾಗಾರ ಬಿಕೊ ಎನ್ನುತ್ತಿದೆ. ಅವುಗಳು ನೆರೆಹೊರೆಯವರಾಗಿ ಹಲವು ಬಗೆಯ ಸಂಚಲನಕ್ಕೆ ಕಾರಣವಾಗಿದ್ದವು. ಈಗ ಪಾಗಾರದ ಮೂಲೆ ಮೂಲೆ ಹುಡುಕಿದರು ಇಲಿಗಳ ಇರುವಿಕೆಯ ಒಂದು ಸಣ್ಣ ಕುರುಹೂ ದೊರೆಯುತ್ತಿಲ್ಲ.

ಅವುಗಳ ಗೈರಿನಲ್ಲಿ ಈಗೀಗ ಅನ್ನಿಸುತ್ತಿದೆ ಜೀವಜಗತ್ತಿನ ಸಂಸರ್ಗವಿಲ್ಲದೆ ಮಾನುವ ಬದುಕು ಏಕಾಂಗಿಯಲ್ಲವೆ. ಅವುಗಳನ್ನು ಕೊಂದು ಒಕ್ಕಲೆಬ್ಬಿಸಿ ಬೃಹತ್ ಆಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿಕೊಂಡು ಅವುಗಳ ಸಹವಾಸದಿಂದ ಮುಕ್ತವಾಗುವುದು ಯಾವ ಸೀಮೆ ನಾಗರೀಕತೆ? ಇನ್ನಾದರು ವಚನಕಾರರು ಹೇಳಿದ ಸಕಲ ಜೀವಿಗಳೆಲ್ಲರಲಿ ದಯೆತೋರುವ ಗುಣ ನಮ್ಮದಾಗಿಸಿಕೊಳ್ಳಬೇಕು. ಈ ಸಹಬಾಳ್ವೆಯ ಅಗತ್ಯವಿದೆ. ಹೀಗೆ ಜ್ಞಾನೋದಯವಾದ ತಕ್ಷಣವೇ ಮಣ್ಣನ್ನು ಸರಿಪಡಿಸಿ ಹೊಸ ಹೂವಿನ ಗಿಡಗಳನ್ನು, ಬಾಳೆಯ ಕಂದನ್ನು ತಂದು ನೆಟ್ಟಿದ್ದೇನೆ. ಮುಂಗಾರುವಿನ ಶುರುವಿನ ಹೊತ್ತಿಗೆ ನೆಟ್ಟ ಗೆಣಸು ಬೆಳೆದಿದೆ. ಈಗಲಾದರು ಮೂಷಿಕ, ಉರಗ, ಖಗ ಸಮೂಹವು ಬರಬಹುದೆ? ನಮ್ಮ ಜಡಬದುಕಿಗೆ ಕ್ರಿಯಾಶೀಲತೆ ತರಬಹುದೆ ಎಂದು ಕಾಯುತ್ತಿರುವೆ. ಈ ಕಾಯುವಿಕೆಗೂ ಒಂದು ಕೊನೆಯಿರಬಹುದೆ? ಬಲ್ಲವರು ತಿಳಿಸಬೇಕು.