ದಾಟಿ ಹೋಗುವುದಷ್ಟೇ

ಎಲ್ಲಿಂದ ಬಂದಿದ್ದೇವೋ ಒಂದು ನಿಲ್ದಾಣ
ಹಾದು ಹೋಗಬೇಕು
ಠಿಕಾಣಿ ಹೂಡುವುದಕ್ಕೆ ಬರಲಿಲ್ಲ
ಹಾದು ಹೋಗಬೇಕಷ್ಟೆ ಸುಮ್ಮನೆ
ಉಳಿದು ಒಂದಿಷ್ಟು ಉಸಿರೆಳೆದುಕೊಂಡು
ಬೊಗಸೆ ನೀರು ಕುಡಿದು
ಮತ್ತು ತುಸು ವಿಶ್ರಮಿಸಿ

ಯಾವ ಮೂಢ ಹೇಳಿದನು ನಿಮಗೆ?
ಹಾದು ಹೋಗುವ ದಾರಿಯಲ್ಲಿ
ಸಿರಿ ಸಂಗ್ರಹಕ್ಕೆ, ನದಿ ಬತ್ತಿಸಲಿಕ್ಕೆ
ಹಸಿರ ಸವರಲಿಕ್ಕೆ ಮಹಲ ಹೊದ್ದುಕೊಳ್ಳಲಿಕೆ
ಹಸಿದವರ ಕೊಲ್ಲುವುದಕ್ಕೆ
ಜೀವನಿಷ್ಟ ಹಾಡಿಗೆ ಕೊಳ್ಳಿ ಇಡುವುದಕ್ಕೆ
ತೆಪ್ಪಗೆ ಹಾದು ಹೋಗದೆ ಹಗೆಯಾಗುವದಕ್ಕೆ

ಜೀವಿಸಲು ಬರುವುದಕ್ಕೂ
ವಾಸಿಸಲು ಬರುವುದಕ್ಕೂ ಅಂತರವಿದೆ
ಜೀವಿಸಿ ಹೊರಡುವ ಬದಲು
ವಾಸಿಸಿದೆವು ಬೆಂಕಿ ಹಾಸಿದೆವು
ಅತಿಥಿಗಳಷ್ಟೆ ಈ ಇಳೆಗೆ
ತೆಪ್ಪಗೆ ಹೊರಡಬೇಕಿತ್ತು
ನಿಲ್ದಾಣವ ನರಕಮಾಡಿದೆವು

ಮುಟ್ಟಿದೆಲ್ಲವೂ ಭಸ್ಮ
ಮಿಂದಲೆಲ್ಲ ಬರಡು ತಳ ಒಣಗು
ಕೊಳ್ಳುಬಾಕರ ಬಾಕುವಿಗೆ ಇಹ ನೆಲಸಮ
ನಾಳೆ ಇಲ್ಲವಾಗುವ ನಿಜ ಮರೆತ ರಕ್ಕಸತನ
ಸುಮ್ಮನೆ ಹಾದು ಹೋಗಬೇಕಾಗಿತ್ತು
ಹಗುರ ಹಿತದ ಜೀವಯಾನ ಮುಗಿಸಿ
ರಕ್ತ ಪೀಪಾಸು ನಾತ ಉಳಿಸಿ ಹೋಗುತ್ತೇವೆ

ಹಾದು ಹೋಗುವುದಷ್ಟೇ ಸತ್ಯ
ನೆಲೆ ಎಂಬುದೆಲ್ಲ ಭ್ರಮೆ