ಬಸ್ ನಿಲ್ದಾಣದಲ್ಲೊಂದು ಮಳೆ

ಆದದ್ದಿಷ್ಟೇ,
ಅದೊಂದು ಮಳೆಗಾಲ
ಬಿಟ್ಟು ಹಿಡಿದು ಹಿಡಿದು ಬಿಟ್ಟು
ಜಿಟಿ ಜಿಟಿ ಸುರಿಯುವ
ಮಳೆಗೆ
‘ಕೆಂಬನಿʼಯ
ಬಸ್ಸುಗಳೆಲ್ಲವೂ ತೊಯ್ದು
ತೊಪ್ಪೆಯಾಗುತ್ತಿರುವಾಗ
ಪ್ಲಾಟ್ ಫಾರ್ಮ್ ನಲ್ಲಿ
ಕೊಡೆಹಿಡಿದು
ಸುರಿವ ಹನಿಗಳ
ಆಕಾರವನ್ನೇ
ದಿಟ್ಟಿಸುತ್ತಿದ್ದ
ಆ ನನ್ನನ್ನ
ಅದೊಬ್ಬ ಮುದುಕಿ
ಕೈಹಿಡಿದು ಕೆಳಗೆ
ಜಗ್ಗಿ
ತಾನೂ ಕೊಡೆಯೊಳಗೆ
ನುಗ್ಗಿ
ಅವಳ ಅಂಕಣದ ಸಂಖ್ಯೆ
ಹೇಳಿ
ಬಸ್ಸು ಹತ್ತಿಸೆಂದಳು
ಅವಳ ಹೆಜ್ಜೆಗಳೇ
ಹಾದಿ ವಾಸನೆಯ ಹಿಡಿದು
ನೆನಪಿನಿಂದ ನಡೆಯುತ್ತಾ
ಸಾಗು
ವಾಗ
‘ಎಲ್ಲಿಂದ ಎಲ್ಲಿಗೆ’
ಹಾಗೆ ಹೀಗೆ ಎಂದು ಗಲ ಗಲ
ಮಾತಾಡಿ
ಬಸ್ಸೇರಿ
ಪುಣ್ಯ ಬರಲಿ ನಮ್ಮಪ್ಪನೇ!
ಎಂದವಳು
ಸೀಟಿನ ಪಕ್ಕದ ಕಿಟಕಿಯಿಂದ ಕೈ ಮಾಡಿದಳು
ಆದದ್ದಷ್ಟೇ

ಈಗ ನೆನಪಾದಾಗ
ಜಾದೂಗಾರಿಣಿ ಮಾಯಾವಿ ಮುದುಕಿ
ಯಾವ ಲೋಕಕ್ಕೆ
ಕರೆದೊಯ್ದು
ಕೈಬಿಟ್ಟು ಹೋಗಿದ್ದಳು?
ಸುರಿವ ನಡುನೀರಲ್ಲಿ
ಜನನಿಬಿಡ ನಿಲ್ದಾಣದಲ್ಲಿ
ಕಾಡಿದ್ದು
ಯಾವ ಭಾವ?
ಯೋಚಿಸುತ್ತಲೇ ಇದ್ದೇನೆ…
ಮಳೆ ಸುರಿವಾಗ
ಕೊಡೆ ಹಿಡಿದು ನಿಂತಾಗ
ಅಂಥದ್ದೇ
ಅದೇ
ಸಂಜೆ ಮರಳಿ ಬರಲೆಂದು
ಆಸೆ ಪಡುತ್ತೇನೆ
ಆಗುವುದು
ಅದಷ್ಟೇ!

 

ದಾದಾಪೀರ್ ಜೈಮನ್ ಯುವ ಲೇಖಕ
ವೃತ್ತಿಯಿಂದ ಅಧ್ಯಾಪಕ
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಆಸಕ್ತಿಯ ಕ್ಷೇತ್ರಗಳು
ಇವರ ಹಲವಾರು ಕತೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ