ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತಂದು, ಸಂಪ್ರದಾಯದ ಪ್ರಕಾರ ಎಲ್ಲಾ ಪದ್ಧತಿಗಳನ್ನು ಮತ್ತು ಕಾರ್ಯವನ್ನು ಮುಗಿಸಿ, ದೇಹವನ್ನು ಮಣ್ಣಿಗೆ ಇಡುವ ಬದಲು ಸಂಶೋಧನೆಗೆ ನೀಡಿದರು. ಮನಸ್ಸಿಗೆ ನೆಮ್ಮದಿ ಆಗುವ ಹಾಗೆ ಸಂಪ್ರದಾಯವೂ ಆಯಿತು, ಅವರ ದೇಹವನ್ನು ಸಂಶೋಧಿಸಿ ನೂರಾರು ವಿದ್ಯಾರ್ಥಿಗಳು ಮುಂದೆ ಸಾವಿರಾರು ಜೀವಗಳನ್ನು ಉಳಿಸಲು ಶಕ್ತರಾಗಲು ಸಹಾಯವೂ ಆಯ್ತು. ಒಂದು ದೇಹದ ಸಂಶೋಧನೆಯಿಂದ ಸಾವಿರಾರು ಜೀವಗಳನ್ನು ಉಳಿಸಲು ಅನುಕೂಲವಾಗುತ್ತದೆ ಎಂದರೆ ಅದಕ್ಕಿಂತ ಪ್ರಶಸ್ತವಾದ ಕಾರ್ಯ ಇನ್ಯಾವುದಿದೆ.
ಪ್ರಶಾಂತ್‌ ಬೀಚಿ ಅಂಕಣ

 

“ಜಗತ್ತಿನಲ್ಲಿ ಇನ್ನೂ ಮಳೆ ಬೆಳೆ ಚೆನ್ನಾಗಿ ಆಗ್ತಾ ಇದೆ ಅಂದ್ರೆ, ದಾನ ಧರ್ಮ ಮಾಡೊ ಜನ ಭೂಮಿ ಮೇಲೆ ಇದ್ದಾರೆ” ಈ ಮಾತನ್ನ ಎಲ್ಲರೂ ಕೇಳಿರ್ತೀವಿ. ಧರ್ಮ ಕ್ಕೆ ಅದರದ್ದೆ ಆದ ವ್ಯಾಖ್ಯಾನ ಇದೆ, ಅದು ಈಗ್ಲೂ ವಾದ ವಿವಾದದಲ್ಲೆ ಸಾಗ್ತಿದೆ. ದಾನ ಮಾತ್ರ ನಿರ್ವಿವಾದವಾಗಿ ಅರ್ಥ ಪಡೆದುಕೊಂಡಿದೆ. ನಾವು ಮನಸ್ಪೂರ್ತಿಯಾಗಿ ಏನೇ ಕೊಟ್ಟರೂ ಅದು ದಾನವೇ. ಆದರೆ ಯಾವ ದಾನ ದೊಡ್ಡದು? ಶೈಕ್ಷಣಿಕ ಸಂಸ್ಥೆಯ ಭಾಷಣದಲ್ಲಿ ನಾವು ಕೇಳುವುದು “ಎಲ್ಲಾ ದಾನಕ್ಕಿಂತ ವಿದ್ಯಾ ದಾನ ಶ್ರೇಷ್ಠ”. ದಾಸೋಹ ನೆಡೆಯುವ ಧರ್ಮ ಕ್ಷೇತ್ರಗಳಲ್ಲಿ ಕೇಳುವುದು “ಅನ್ನ ದಾನಕ್ಕಿಂತ ಮಿಗಿಲಾದ ದಾನವಿಲ್ಲ”. ಮದುವೆ ಆಮಂತ್ರಣ ಕೊಡಲು ಹೋದ ಕನ್ಯೆಯ ತಂದೆಗೆ ಹೇಳುವರು “ನೂರು ದೇವಸ್ಥಾನವನ್ನು ಕಟ್ಟಿಸಿದ ಪುಣ್ಯ ಒಂದು ಕನ್ಯಾ ದಾನಕ್ಕೆ ಸಮ”. ಕಷ್ಟದ ಸಮಯದಲ್ಲಿ ದಾನ ಕೊಡುವವರ ಮುಂದೆ ಹೇಳುತ್ತಾರೆ “ಕಷ್ಟಕಾಲದಲ್ಲಿ ಕೊಡುವ ದಾನ ಕೋಟಿ ದಾನಕ್ಕಿಂತ ಮಿಗಿಲು”. ಹೀಗೆ ಕೊಡುವವರು, ಪಡೆಯುವವರು, ಸ್ಥಳ ಮತ್ತು ಸಮಯದ ಪ್ರಕಾರ ಯಾವ ದಾನ ಶ್ರೇಷ್ಠ ಎನ್ನುವುದು ನಿರ್ಧಾರವಾಗುತ್ತದೆ. ಪಡೆಯುವ ಮನಸ್ಸಿಗೆ ಘಾಸಿಯಾಗದಂತೆ, ನೀಡುವ ಮನಸ್ಸು ನಿರ್ಮಲವಾಗಿದ್ದರೆ ಅದೆಲ್ಲವೂ ಶ್ರೇಷ್ಠ ದಾನವೆ.

(ಕಾಮಿನಿ ಪಟೇಲ್)

ಕಳೆದ ಹದಿನೈದು ದಿನದ ಹಿಂದೆ ಈ ವಿಷಯದ ಬಗ್ಗೆ ಬರೆಯಬೇಕೆನಿಸಿದಾಗ ಕೇವಲ ಒಂದೇ ಒಂದು ಕಾರಣವಿತ್ತು, ಬಹಳ ನೋವಿನೊಂದಿಗೆ ಮತ್ತೆರಡು ಕಾರಣಗಳು ಸೇರಿಕೊಂಡವು. ಹತ್ತು ದಿನದ ಕೆಳಗೆ ನ್ಯಾಷನಲ್ ಸುದ್ದಿವಾಹಿನಿಯಲ್ಲಿ ಒಂದು ಸುದ್ದಿ ಬಂದಿತು. ಕಾಮಿನಿ ಪಟೇಲ್ ಎನ್ನುವ ಮಹಿಳೆ ಕೆಲವು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮೆದುಳು ನಿಷ್ಕ್ರಿಯೆಯಾಗಿದೆ ಹಾಗು ಅದು ಮತ್ತೆ ಕ್ರಿಯಾಶೀಲವಾಗುವುದಿಲ್ಲ. ದೇಹದ ಎಲ್ಲಾ ಅಂಗಗಳು ಕಾರ್ಯನಿರ್ವಹಿಸುತ್ತಿದ್ದು ಮೆದುಳು ಮಾತ್ರ ನಿಷ್ಕ್ರಿಯವಾಗಿದೆ. ಜೀವಾಧಾರಕವಾಗಿರುವ ವೆಂಟಿಲೇಟರ್ ಇರುವವರೆಗೂ ಅವರು ಉಸಿರಾಡುತ್ತಿರುತ್ತಾರೆ ಆದರೆ ಕಣ್ಣು ತೆರೆಯುವುದಿಲ್ಲ, ಮಾತನಾಡುವುದಿಲ್ಲ, ಮತ್ತೆಂದು ಹಿಂದಿನಂತೆ ಜೀವಂತವಾಗುವುದಿಲ್ಲ ಎಂದು ವೈದ್ಯರು ಶರಾ ಬರೆದುಕೊಟ್ಟಿದ್ದರು.

ಆಕೆಯ ಮಗ ಮತ್ತು ಗಂಡ ಅಂತಹ ಸಮಯದಲ್ಲೂ ಆಕೆಯ ಅಂಗಾಂಗಗಳು ಬೇರೆಯವರಿಗಾದರೂ ಉಪಯೋಗಕ್ಕೆ ಬರಲಿ ಎಂದು ತೀರ್ಮಾನಿಸಿ, ಎರಡು ಮೂತ್ರಪಿಂಡಗಳು, ಶ್ವಾಸಕೋಶಗಳು, ಯಕೃತ್ತು, ಹೃದಯ ಮತ್ತು ಕಣ್ಣುಗಳನ್ನು ದಾನವಾಗಿ ನೀಡಿದರು. ಎಲ್ಲಾ ಅಂಗಗಳು ಬೇರೆ ಬೇರೆ ಊರಿನ ವ್ಯಕ್ತಿಗಳಿಗೆ ಸಂದಾಯವಾಗಬೇಕಾಗಿದ್ದರಿಂದ ಕೆಲವನ್ನು ರಸ್ತೆ ಮಾರ್ಗದಲ್ಲಿ ಮತ್ತು  ಕೆಲವನ್ನು ವಿಮಾನದಲ್ಲಿ ಕಳಿಸಬೇಕಾಯಿತು. ಸಮಯದ ಅಭಾವವಿದ್ದರಿಂದ ಸೂರತ್ ನಿಂದ ಹೈದರಾಬಾದಿಗೆ ವಿಮಾನದಲ್ಲಿ ತರಲು ವ್ಯವಸ್ಥೆ ಮಾಡಿಕೊಂಡರು. ಆದರೆ ಸೂರತ್ ವಿಮಾನ ನಿಲ್ದಾಣ ರಾತ್ರಿ ಹೊತ್ತು ಕಾರ್ಯನಿರ್ವಹಿಸುವುದಿಲ್ಲ. ಜೀವ ಉಳಿಸುವ ಕಾರಣಕ್ಕೆ ವಿಮಾನ ನಿಲ್ದಾಣವನ್ನು ತಕ್ಷಣ ತೆರೆಯುವಂತೆ ಮಾಡಿ ದಾರಿಯನ್ನು ಸುಗಮವಾಗಿಸಿದರು. ಅದೇ ರೀತಿ ಸೂರತ್ ನಿಂದ ಅಹಮದಾಬಾದ್ ಗೆ ರಸ್ತೆಯ ಮೂಲಕ ಅಂಗಗಳನ್ನು ಸಾಗಿಸುವಾಗ ಯಾವುದೇ ಅಡಚಣೆಯಾಗದಂತೆ ಸಂಚಾರವನ್ನು ಸುಗಮಗೊಳಿಸಿದ್ದರು. ಕೇವಲ ನಾಲ್ಕರಿಂದ ಆರು ತಾಸುಗಳಲ್ಲಿ ಎಲ್ಲಾ ಅಂಗಗಳು ಸೇರಬೇಕಾದ ಜಾಗಕ್ಕೆ ತಲುಪಿ ಏಳು ಜೀವಗಳನ್ನು ಉಳಿಸಿದ್ದರು.

(ಸಂಚಾರಿ ವಿಜಯ್)

ಬದುಕಿದ್ದಾಗ ಏನೇನೋ ಸಹಾಯಗಳು ಮಾಡಿರಬಹುದು. ಸತ್ತ ಮೇಲೂ ಏಳು ಜೀವಗಳನ್ನು ಉಳಿಸಿದ್ದು ಮಹಾತಾಯಿ ಆ ಕಾಮಿನಿ ಪಟೇಲ್, ಅದಕ್ಕೆ ಕಾರಣರಾದ ಅವರ ಕುಟುಂಬ.

ನೋವು ಎನ್ನುವುದು ಕೆಲವು ಸಾರಿ ಹೇಳಿಕೊಳ್ಳಲಾಗದಷ್ಟು. ಅತ್ತರೂ ಮುಗಿಯದಷ್ಟು ಮತ್ತು ನೆನಪುಗಳು ಮರೆಯಲಾಗದಷ್ಟು. ಅದು ಕಂಡಿದ್ದು ವಿಜಯ್ ಸಾವಿನಲ್ಲಿ. ಸಂಚಾರಿ ವಿಜಯ್ ಎಂದರೆ ಪ್ರಪಂಚಕ್ಕೆ ತಿಳಿಯುತ್ತದೆ. ಒಬ್ಬ ಸೌಜನ್ಯಯುತ ವ್ಯಕ್ತಿ, ಉತ್ಕೃಷ್ಟವಾದ ವ್ಯಕ್ತಿತ್ವ, ಗಟ್ಟಿಯಾದ ಗೆಳೆತನ, ನಗುತಿದ್ದ ಜೀವನ, ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ನಟ, ಯಾವುದೇ ಒಳ್ಳೆಯ ಉಪಮೇಯಕ್ಕೆ ಹೊಂದಿಕೊಳ್ಳುವವರು ಸಂಚಾರಿ ವಿಜಯ್.

ಅವರ ಅಗಲಿಕೆಯ ನಂತರ ಬಂದಂತಹ ಬರಹಗಳು ಲೆಕ್ಕವಿಲ್ಲದಷ್ಟು, ಕನ್ನಡ ಗೊತ್ತಿರುವವರು, ಕರ್ನಾಟಕದವರು ಎಲ್ಲರೂ ನೊಂದಿದ್ದಾರೆ. ಅವರ ನಟನೆ ಒಂದು ತೂಕವಾದರೆ ಅವರ ಮಾನವೀಯ ಗುಣ ಇನ್ನೊಂದು ತೂಕ. ಬದುಕಿರುವಷ್ಟು ದಿನ ಬದುಕಿಗಾಗಿ ಹೋರಾಡಿ, ಅದರಲ್ಲಿ ಗೆದ್ದು ತೋರಿಸಿ, ನಗು ನಗುತ್ತಲೇ ಎಲ್ಲರ ನೋವಿಗೆ ನೆರವಾದವ. ಅಪಘಾತದ ನಂತರ ಆಸ್ಪತ್ರೆಯಲ್ಲಿದ್ದಾಗ ಮಿಡಿಯದ ಹೃದಯಗಳಿಲ್ಲ, ಕಣ್ಣೀರಾಗದ ಕಣ್ಣುಗಳಿಲ್ಲ. ಹೇಗಾದರೂ ಬದುಕಿ ಬರಲಿ ಎಂದು ಕಾದಿದ್ದೆ ಕಾದಿದ್ದು, ಯಾರಾದರೂ ಆತುರದಲ್ಲಿ ಸುಳ್ಳು ಸುದ್ದಿ ಹೇಳಿದಾಗ ಸಿಟ್ಟಗಿದ್ದೆವು. ನಂತರ ಸುಳ್ಳು ಸುದ್ದಿಯೆ ನಿಜವಾದಾಗ ಸಿಟ್ಟೆಲ್ಲಾ ನೋವಿನಲ್ಲಿ ಮುಳುಗಿಹೋಯಿತು. ಕಾಣದ ಕಾಮಿನಿ ಪಟೇಲ್ ಕಥೆಯನ್ನೇ ವಿಜಯ್ ಮುಂದುವರೆಸಿದರು.

ಕೊಡುವವರು, ಪಡೆಯುವವರು, ಸ್ಥಳ ಮತ್ತು ಸಮಯದ ಪ್ರಕಾರ ಯಾವ ದಾನ ಶ್ರೇಷ್ಠ ಎನ್ನುವುದು ನಿರ್ಧಾರವಾಗುತ್ತದೆ. ಪಡೆಯುವ ಮನಸ್ಸಿಗೆ ಘಾಸಿಯಾಗದಂತೆ, ನೀಡುವ ಮನಸ್ಸು ನಿರ್ಮಲವಾಗಿದ್ದರೆ ಅದೆಲ್ಲವೂ ಶ್ರೇಷ್ಠ ದಾನವೆ.

ಬದುಕಿದ್ದಾಗ ನೆರೆಯ ಸಂತ್ರಸ್ತರಿಗೆ ನೆರವಾದ, ಪ್ರವಾಹದಲ್ಲಿ ನಲುಗಿದವರ ಕೈ ಹಿಡಿದು ದಡ ಸೇರಿಸಿದ, ಕೋವಿಡ್ ನಿಂದ ಕಂಗಾಲಾದವರಿಗೆ ಉಸಿರಿನ ಮೂಲಕ ಉಸಿರು ತುಂಬಿದ. ಕೊನೆಯ ಉಸಿರಿನವರೆಗೂ ಹಸನಾಗಿದ್ದವನು, ಜೀವ ಕಳೆದುಕೊಂಡ ಮೇಲೂ ಹಲವರ ಜೀವಕ್ಕೆ ಜೀವನ ನೀಡಿದ. ವಿಜಯ್ ನ ಮೆದುಳು ನಿಂತಿದೆ ಆದರೆ ಮಿಕ್ಕೆಲ್ಲಾ ಅಂಗಗಳು ನಡೆಯುತ್ತಿದೆ ಎಂದಾಗ ಸ್ವತಃ ವಿಜಯ್ ಕೂಡ ಮಾಡುತ್ತಿದ್ದ ಕೆಲಸವನ್ನೆ ಅವರ ಕುಟುಂಬದವರು ಮಾಡಿದರು. ವಿಜಯ್ ರ ಎಲ್ಲಾ ಪ್ರಮುಖ ಅಂಗಗಳನ್ನು ಅಗತ್ಯವಿದ್ದವರಿಗೆ ನೀಡಿ ಅನೇಕರನ್ನು ಜೀವಂತವಾಗಿರಿಸಿದರು. ಅಂಗಗಳ ದಾನದ ಅರಿವು ಮತ್ತು ಮಹತ್ವ ಬಹಳ ಜನರಿಗೆ ತಿಳಿದಿಲ್ಲ, ವಿಜಯ್ ತನ್ನ ಸಾವಿನಲ್ಲೂ ಅರಿವು ಮೂಡಿಸಿ ನಿಜವಾಗ ಹೀರೋ ಆಗಿಯೆ ಉಳಿದ.

ಮೂರನೆ ಭಾಗ ಅಂಗಾಗ ದಾನದ ಮುಂದುವರೆದ ಭಾಗ. ಚಿಕ್ಕಣ್ಣ ದೇವರು ಅಥವ ಚಿಕ್ಕಯ್ಯ ದೇವರು ಸುಮಾರು ಎಪ್ಪತ್ತೆಂಟು ವರ್ಷ. ಬೀರೂರಿನಲ್ಲಿ ಪೂರ್ತಿ ಜೀವನ ಕಳೆದು, ಸಾಮಾನ್ಯ ನಾಗರೀಕರಂತೆ ಜೀವನ ಸಾಗಿಸಿದವರು. ಮಧ್ಯಮ ಕುಟುಂಬದಲ್ಲಿ ಮಡದಿ ಮಕ್ಕಳ ಜೊತೆಗೆ ಸಾಮಾನ್ಯ ಜೀವನ ಸಾಗಿಸಿ ಎಪ್ಪತ್ತು ವರ್ಷದ ನಂತರ ನಿವೃತ್ತಿ ಜೀವನ ನೆಡೆಸುತ್ತಿದ್ದರು. ಇದ್ದ ಸಕ್ಕರೆ ಖಾಯಿಲೆಗೆ ಸ್ನೇಹಿತರಂತೆ ಬೇರೆ ಬೇರೆ ತೊಂದರೆಗಳು ಸೇರಿದವು. ವೈದ್ಯರು ಅವರ ಖಾಯಿಲೆಗೆ ಚಿಕಿತ್ಸೆ ನೀಡಿದರೂ, ಕೆಲವು ವೈದ್ಯರ ಅಜಾಗರೂಕತೆಯಿಂದ ಕಾಲಿನ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಮೂರ್ನಾಲ್ಕು ಬಾರಿ ಅಸ್ಪತ್ರೆ ಸೇರಿ ವೈದ್ಯರ ಚಿಕಿತ್ಸೆಯಿಂದ ಗುಣವಾಗಿ ಬಂದಿದ್ದರೂ ತಮ್ಮ ಎಪ್ಪತ್ತೆಂಟನೆ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

(ಚಿಕ್ಕಣ್ಣನವರು)

ಅದು ಜೂನ್ ಇಪ್ಪತ್ತೊಂದು, ಎರಡು ಸಾವಿರದ ಹದಿನಾರನೆ ಇಸವಿ. ರಾತ್ರಿ ಹತ್ತು ನಲವತ್ತೈದು. ವೈದ್ಯರು ಬಂದು ಅವರು ಜೀವಂತವಾಗಿಲ್ಲ ಎಂದಾಗ ಕುಟುಂಬದವರಿಗೆ ಆಘಾತ ಉಂಟಾಗಿತ್ತು. ಎರಡು ದಿನದ ಹಿಂದೆ ಚೆನ್ನಾಗಿದ್ದಾರೆ, ಗುಣವಾಗುತ್ತಾರೆ ಎಂದು ಹೇಳಿದ ವೈದ್ಯರೇ ಇವತ್ತು ಜೀವ ಹೋದ ಸುದ್ದಿಯನ್ನು ಹೇಳಿದ್ದರು. ಕುಟುಂಬದ ಉಳಿದವರೆಲ್ಲಾ ದುಃಖದಲ್ಲಿ ಮುಂದೇನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಅವರ ಅಂಗಗಳನ್ನು ದಾನ ಮಾಡುವುದಕ್ಕೆ ನಿರ್ಧರಿಸಿದರು. ಕಾರಣಾಂತರದಿಂದ ಅವರ ಯಾವುದೇ ಅಂಗ ದಾನಮಾಡಲು ಅನುಕೂಲವಾಗಿಲ್ಲ ಎಂದು ತಿಳಿದಾಗ ಅವರ ದೇಹವನ್ನು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಮತ್ತು ಸಂಶೋಧನೆಗೆ ದಾನವಾಗಿ ನೀಡಲು ತೀರ್ಮಾನಿಸಿದರು. ಒಂದು ಸಂಪ್ರದಾಯಸ್ಥ ಕುಟುಂಬ ಅನೇಕ ಸಂಪ್ರದಾಯಸ್ಥರ ಕೆಂಪುಗಣ್ಣಿಗೆ ಗುರಿಯಾಗಬಹುದು ಎನ್ನುವ ಅರಿವಿದ್ದರೂ, ಈ ತೀರ್ಮಾನಕ್ಕೆ ಬಂದು ಎಂ ಎಸ್ ರಾಮಯ್ಯ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ದೇಹವನ್ನು ದಾನ ಮಾಡಿದರು.

ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತಂದು, ಸಂಪ್ರದಾಯದ ಪ್ರಕಾರ ಎಲ್ಲಾ ಪದ್ಧತಿಗಳನ್ನು ಮತ್ತು ಕಾರ್ಯವನ್ನು ಮುಗಿಸಿ, ದೇಹವನ್ನು ಮಣ್ಣಿಗೆ ಇಡುವ ಬದಲು ಸಂಶೋಧನೆಗೆ ನೀಡಿದರು. ಮನಸ್ಸಿಗೆ ನೆಮ್ಮದಿ ಆಗುವ ಹಾಗೆ ಸಂಪ್ರದಾಯವೂ ಆಯಿತು, ಅವರ ದೇಹವನ್ನು ಸಂಶೋಧಿಸಿ ನೂರಾರು ವಿದ್ಯಾರ್ಥಿಗಳು ಮುಂದೆ ಸಾವಿರಾರು ಜೀವಗಳನ್ನು ಉಳಿಸಲು ಶಕ್ತರಾಗಲು ಸಹಾಯವೂ ಆಯ್ತು. ಒಂದು ದೇಹದ ಸಂಶೋಧನೆಯಿಂದ ಸಾವಿರಾರು ಜೀವಗಳನ್ನು ಉಳಿಸಲು ಅನುಕೂಲವಾಗುತ್ತದೆ ಎಂದರೆ ಅದಕ್ಕಿಂತ ಪ್ರಶಸ್ತವಾದ ಕಾರ್ಯ ಇನ್ಯಾವುದಿದೆ.

ನಾಳೆ ಜೂನ್ ಇಪ್ಪತ್ತೊಂದನೆ ತಾರೀಖಿಗೆ ಚಿಕ್ಕಣ್ಣರವರು ಕೊನೆಯುಸಿರೆಳೆದು ಐದು ವರ್ಷವಾಗುತ್ತದೆ. ಅವರಿಂದ ಎಷ್ಟು ವೈದ್ಯರು ವೈದ್ಯಕೀಯ ಮುಗಿಸಿದ್ದಾರೆ, ಮುಂದೆ ಅವರಿಂದ ಎಷ್ಟು ಜೀವಗಳು ಉಳಿಯುತ್ತವೆ ಎಂದು ಯೋಚಿಸಿದರೆ ಸಾರ್ಥಕತೆಯ ಭಾವ ಮೂಡುತ್ತದೆ.

ನಾನು ಚಿಕ್ಕಣ್ಣರವರ ಮಗ ಎನ್ನಲು ಬಹಳ ಹೆಮ್ಮೆ!