ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು. ತಾನು ಮಾತ್ರ ಗೋಷಾ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದು ಎಚ್ಚರಿಸಿದಳು. ತಾಯಿಯಾಗಿ ತನಗೆ ನೀಡಿದ ಮಾತು ತಪ್ಪಬಾರದೆಂದು ಅಂಗಲಾಚಿದಳು. ಆದರೂ ಮಾಬುನ್ನಿ ಅವನ್ನೆಲ್ಲ ಚಿಕ್ಕಹುಡುಗಿಯ ಚೇಷ್ಟೆಗಳೆಂದುಕೊಂಡಳು. ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ.
ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

 

ಚಾಂದಿನಿ ಮನೋಹರ್ ನ ಜೊತೆ ಓಡಿಹೋದಳೆಂಬ ವಾರ್ತೆ ಊರೆಲ್ಲ ಹಬ್ಬಿದೆ. ಚಾಂದಿನಿ ಕುರಿತು ಚೆನ್ನಾಗಿ ತಿಳಿದವರೆಲ್ಲ “ಇದೇನಪ್ಪಾ.. ಹೀಗೆ ಮಾಡಿದಳು ಆ ಹುಡುಗಿ”ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಮತ್ತೆ ಕೆಲವರು “ಯಾವಾಗ ನೋಡಿದರೂ ಗೋಷಾ… ಗೋಷಾ ಎನ್ನುತ್ತಿದ್ದಳು.. ಹಾಗೆ ಹೇಳುತ್ತಿದ್ದರೆ ಸಂಪ್ರದಾಯಸ್ಥ ಹುಡುಗಿ ಎಂದುಕೊಂಡೆವು.. ಆದರೆ ಹೀಗೆ ಮಾಡುತ್ತಾಳೆಂದು ಯಾವಾಗಲೂ ಅಂದುಕೊಳ್ಳಲಿಲ್ಲಪ್ಪ” ಎಂದು ಕೊಂಕಾಗಿ ಮಾತನಾಡಿದರು.

ತಾಯಿ ಮಾಬುನ್ನಿಗೆ ಕಣ್ಣೀರು ಉಕ್ಕಿ ಬರುತ್ತಿದೆ. ಯಾರೋ ಏನೋ ಅಂದರೆಂದೋ, ಇಲ್ಲವೇ ಮಗಳು ಹೀಗೆ ಮಾಡಿದಳೆಂದು ಅಲ್ಲ ಆಕೆಯ ಬಾಧೆ.
ಆಕೆಗಿರುವ ನೋವೆಲ್ಲ “ಏನಿದು..? ಈ ಪ್ರದೇಶಕ್ಕೆ ಏನು ದರಿದ್ರ ಆವರಿಸಿದೆ? ಅದು ಯಾವಾಗ ತೊಲಗುತ್ತದೆ?” ಎಂಬುದೇ.

ಅದ್ಯಾವಾಗೊ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತದ್ದು ನಾಲ್ಕು ಅಕ್ಷರಗಳೇ ಆದರೂ ಅಪಾರವಾದ ಜೀವನಾನುಭವ ಮಾಬುನ್ನಿಯದು. ಆಕೆಗೇನು ಮಾತನಾಡಬೇಕೆಂದು ಅರ್ಥವಾಗುತ್ತಿಲ್ಲ. ಮನೆಯಲ್ಲಿ ವೈರಿನ ಮಂಚದ ಮೇಲೆ ಮೌನವಾಗಿ ಕುಳಿತು ಬೀದಿಯತ್ತ ನೋಡುತ್ತಿದ್ದಾಳೆ. ನಿಜಕ್ಕೆ ಆಕೆ ಬೀದಿ ನೋಡುತ್ತಿದ್ದಾಳೋ ಇಲ್ಲವೇ ಶೂನ್ಯದತ್ತ ನೋಡುತ್ತಿರುವಳೋ ಕೂಡ ಹೇಳುವುದು ಕಷ್ಟ.

ಆದರೆ ಚಾಂದಿನಿ ವಿಷಯ ಸಾಧ್ಯವಾದಷ್ಟು ಎಲ್ಲರಿಗೂ ತಿಳಿಯುವ ಮೊದಲೇ ಪರಿಹರಿಸಬೇಕೆಂದು ತಂದೆ ಫಕೃದ್ದೀನ್ ಶತಪ್ರಯತ್ನ ಮಾಡಿದನಾದರೂ ಪ್ರಯೋಜನವಾಗಲಿಲ್ಲ. ಮೊದಲೇ ಅದು ಚಿಕ್ಕ ಊರು. ವಿಷಯ ಕ್ಷಣಮಾತ್ರದಲ್ಲಿ ಎಲ್ಲರ ಕಿವಿಗೂ ಮುಟ್ಟಿತು. ಮಾಮೂಲಿ ಸುದ್ದಿಗಿಂತಲೂ ಇದು ವೇಗವಾಗಿ ಹರಡಿದೆ. ಅವರಿವರು ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ, ಫಕೃದ್ದೀನ್ ಗೆ ಮೈಯೆಲ್ಲ ಉರಿಯುತ್ತಿದೆ, ಆದರೆ ಹೊರಗೆ ಏನೂ ಮಾತನಾಡಲಾಗುತ್ತಿಲ್ಲ. ಆತನಿಗೆ ತನ್ನದೇ ಸಾಕಷ್ಟು ಯೋಚನೆಗಳಿವೆ.

ಮನೋಹರ್ ಕುಮ್ಮರಾಂ ಹಳ್ಳಿ ನಾಗಿರೆಡ್ಡಿಯ ಮಗ. ನಾಗಿರೆಡ್ಡಿ ದೊಡ್ಡಮನುಷ್ಯ. ತಪ್ಪು ಎಲ್ಲಿ ನಡೆದಿದೆಯೋ ಆತನು ಗ್ರಹಿಸಬಲ್ಲ. ಮನೋಹರ್, ಚಾಂದಿನಿ ಇಬ್ಬರೂ ವೀರಪುನಾಯುನಿ ಹಳ್ಳಿಯ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಬ್ಬರಿಗೂ ಅಲ್ಲಿಯೇ ಪರಿಚಯವಾಗಿರಬಹುದು. ಒಂದೆರಡು ಬಾರಿ ಇವರಿಬ್ಬರೂ ತಮ್ಮ ಊರಿನ ನದಿಯ ಬಳಿ ಮರಳ ರಾಶಿಯ ಬಳಿ ಕಾಣಿಸಿದರೆಂದು ಈಗ ವಿಚಾರಣೆಯ ಮೂಲಕ ತಿಳಿಯುತ್ತಿದೆ.

ಇವರು ಹೋಗಿದ್ದರೆ ಎಲ್ಲಿ ಹೋಗಿರುತ್ತಾರೆ? ಅರ್ಜೆಂಟಾಗಿ ನಾಗಿರೆಡ್ಡಿಯ ಜೊತೆ ಮಾತನಾಡಬೇಕು. ಮಾತನಾಡಿದರೆ ಒಳ್ಳೆಯದಾ.. ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೊಟ್ಟರೆ ಒಳ್ಳೆಯದಾ? ಪೊಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೆಂಟ್ ನೀಡಿದರೆ ಕನಿಷ್ಠಪಕ್ಷ ಅವರು ಎಲ್ಲಿದ್ದಾರೋ, ಹೇಗಿದ್ದಾರೋ ಎಂದಾದರೂ ತಿಳಿಯುತ್ತದೆ.

ತಾನು ಹೇಗಿದ್ದರೂ ಮನುಷ್ಯರನ್ನಿಟ್ಟು ಹುಡುಕಿಸಲಾರ. ನಾಗಿರೆಡ್ಡಿಯ ಮೇಲೆ ಅವಲಂಭಿಸುವುದು ಕೂಡ ಆತನಿಗೆ ಸರಿಯೆನಿಸಲಿಲ್ಲ. ಅದಕ್ಕೆ ಪೊಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೆಂಟ್ ಮಾಡಲು ನಿರ್ಧರಿಸಿ ಹೋಗಿ ಕೊಟ್ಟು ಬಂದನು.

ಮನೆಗೆ ಬಂದ ಸ್ವಲ್ಪಹೊತ್ತಿಗೆ ಅವನ ಮುದ್ದಿನ ತಂಗಿ ನಾಜಿಯಾ ನಂದಿ ಮಂಡಲಂನಿಂದ ಬಂದಿಳಿದಳು. ಆ ಊರಿಗೆ ಈ ಊರಿಗೆ ತುಂಬಾ ದೂರವೇನಲ್ಲ. ಹಾಗಾಗಿ ಆಕೆಗೂ ವಿಷಯ ಬೇಗನೆ ತಿಳಿಯಿತು. ಗಂಟಲು ಒಣಗಿದ್ದರಿಂದ ನಾಜಿಯಾ ಬಂದವಳೇ ಬುರ್ಖಾ ಕೂಡ ತೆಗೆಯದೆ ಗುಟುಕು ನೀರು ಕುಡಿಯಲು ಕೋಣೆಯ ಒಂದು ಮೂಲೆಯಲ್ಲಿದ್ದ ಮಡಿಕೆಯ ಬಳಿ ಹೋದಳು. ಅವಳನ್ನು ಗೇಲಿಮಾಡಿದಂತಿತ್ತು ಖಾಲಿ ಮಡಿಕೆ.

“ಏನತ್ತಿಗೆ.. ಬಾಯಾರಿಕೆಯಾಗುತ್ತಿದೆ. ತೊಟ್ಟು ನೀರು ಕೂಡ ಇಲ್ಲದೆ ಹೇಗಿದ್ದೀಯ ಮನೆಯಲ್ಲಿ..” ಎಂದು ಆಶ್ಚರ್ಯ ವ್ಯಕ್ತಪಡಿಸಿದಳು.
ಆ ಮಾತು ಕೇಳುತ್ತಲೇ ಮಾಬುನ್ನಿಗೆ ದುಃಖ ಉಮ್ಮಳಿಸಿತು, “ಇಷ್ಟು ಕಷ್ಟಕ್ಕೆ ಈ ನೀರೇ ಅಲ್ಲವೇ ತಾಯಿ ಕಾರಣ” ಎಂದಳು ಭಯದಿಂದ.
ನಾಜಿಯಾಳಿಗೆ ಏನೂ ಅರ್ಥವಾಗಲಿಲ್ಲ.

“ಸರಿ.. ಬಿಂದಿಗೆ ಎಲ್ಲಿದೆಯೋ ಹೇಳು.. ನಾನು ಹೋಗಿ ತರುತ್ತೀನಿ.. ನೀರು” ಎಂದಳು.
ಮಾಬುನ್ನಿ ಮಾತನಾಡಲಿಲ್ಲ.

ಬಿಂದಿಗೆಯನ್ನು ತಾನೇ ಹುಡುಕಿಕೊಂಡಳು. ಅತ್ತಿತ್ತ ಹುಡುಕಿ ಕೈಗೆ ಸಿಕ್ಕಿದ ಹಳದಿ ಬಣ್ಣದ ಪ್ಲಾಸ್ಟಿಕ್ ಬಿಂದಿಗೆ ಕೈಗೆ ತೆಗೆದುಕೊಂಡಳು. ಮತ್ತೊಂದು ಬಿಂದಿಗೆಗಾಗಿ ಹುಡುಕಿದಳು.

“ಇನ್ನೊಂದು ಬಿಂದಿಗೆ ಇರಬೇಕಲ್ಲ ಅತ್ತಿಗೆ.. ಅದು ಎಲ್ಲಿದೆ ಹೇಳು.. ಒಂದೇ ಸಲ ಎರಡು ಬಿಂದಿಗೆಯಲ್ಲಿ ತೆಗೆದುಕೊಂಡು ಬರುತ್ತೇನೆ..” ಎಂದಳು ನಾಜಿಯಾ.

ನಾಜಿಯಾಗೆ ಹಳ್ಳಿಯಲ್ಲಿ ಸೊಂಟದ ಮೇಲೆ ಒಂದು ಬಿಂದಿಗೆ, ಭುಜದ ಮೇಲೆ ಮತ್ತೊಂದು ಬಿಂದಿಗೆ ಎತ್ತಿಕೊಂಡು ನೀರು ತರುವ ಅಭ್ಯಾಸವಿದೆ. ಆ ಅಭ್ಯಾಸದಿಂದಲೇ ಕೇಳಿದಳು. ಆದರೆ ಆ ಬಿಂದಿಗೆ ಎಲ್ಲಿದೆಯೆಂದು ಹೇಳುತ್ತಾಳೆ ಮಾಬುನ್ನಿ? ಸ್ವಲ್ಪಹೊತ್ತು ತಡಬಡಾಯಿಸಿ ‘ಪಕ್ಕದ ಮನೆಯವರು ತೆಗೆದುಕೊಂಡು ಹೋಗಿದ್ದಾರೆ ಬಿಡು.. ನಾಜಿಯಾ” ಎಂದು ಹೇಳಿದಳು ಸುಮ್ಮನೆ.

‘ಸರಿ..’ ಎಂದು ಇದ್ದ ಒಂದು ಬಿಂದಿಗೆಯನ್ನು ತೆಗೆದುಕೊಂಡು ಬೋರೆವೆಲ್ ಹುಡುಕುತ್ತ ಹೊರಟಳು ನಾಜಿಯಾ.

ಫಕೃದ್ದೀನ್ ಮನೆಯ ಹೊರಗೆ ವರಾಂಡಾದಲ್ಲಿ ಜಗಲಿಯ ಮೇಲೆ ಕುಳಿತು ಬೀಡಿ ಹೊಗೆ ಬಿಡುತ್ತಿದ್ದಾನೆ.

ನಾಜಿಯಾ ಹೊರಟ ಕಡೆಗೇ ಸ್ವಲ್ಪಹೊತ್ತು ನೋಡಿ, ನಿಧಾನವಾಗಿ ಯೋಚನೆಯಲ್ಲಿ ಮುಳುಗಿದಳು ಮಾಬುನ್ನಿ.

ಮಾಬುನ್ನಿ ಮನೆಯಲ್ಲಿ ಎರಡು ಪ್ಲಾಸ್ಟಿಕ್ ಬಿಂದಿಗೆಗಳಿವೆ. ಒಂದೇನೋ ಹಳದಿಯದು ಅಂದರೆ ಈಗ ನಾಜಿಯಾ ನೀರಿಗೆ ತೆಗೆದುಕೊಂಡು ಹೋದಳಲ್ಲವಾ ಅದು. ಮತ್ತೊಂದು ಕೆಂಪದು.. ಹೂವುಗಳಿದ್ದದ್ದು.

ನಿನ್ನೆ ಸರಿಯಾಗಿ ಇದೇ ಸಮಯಕ್ಕೆ ಈಗ ಇದೇ ನಾಜಿಯಾ ಹೊರಟಂತೆಯೇ ಆ ಕೆಂಪು ಬಿಂದಿಗೆಯನ್ನು ತೆಗೆದುಕೊಂಡು ನೀರಿಗೆ ಹೊರಟಳು ಚಾಂದಿನಿ. ಹೋದ ಹುಡುಗಿ ಹಾಗೆಯೇ ಮಾಯವಾಗುತ್ತಾಳೆಂದು ಮಾಬುನ್ನಿ ಊಹಿಸಿರಲಿಲ್ಲ. ಅಲ್ಲಿಗೂ ನಿನ್ನೆ ಸಂಜೆ ಬೋರವೆಲ್ ಬಳಿಗೂ ಹೋಗಿ ನೋಡಿಕೊಂಡು ಬಂದಿದ್ದನು ಫಕೃದ್ದೀನ್. ಚಾಂದಿನಿ ಸುಳಿವಾಗಲಿ ಆಕೆ ತೆಗೆದುಕೊಂಡು ಹೋದ ಆ ಬಿಂದಿಗೆಯ ಸುಳಿವಾಗಲಿ ಯಾವುದೂ ಸಿಗಲಿಲ್ಲ. ಚಾಂದಿನಿ ಬಿಂದಿಗೆಯನ್ನು ಯಾರ ಮನೆಯಲ್ಲಾದರೂ ಇಟ್ಟು ಹೋದಳೇನೋ.. ಇಲ್ಲವೇ ಅಲ್ಲೇ ಬೋರ್ ವೆಲ್ ಬಳಿ ಬಿಟ್ಟರೆ ಇನ್ನಾರಾದರೂ ತೆಗೆದುಕೊಂಡು ಹೋದರೇನೋ..! ಎರಡನೆಯದೇ ನಿಜವಾಗಿರುತ್ತದೆ.

ಮನೆಗೆ ಬಂದ ಸ್ವಲ್ಪಹೊತ್ತಿಗೆ ಅವನ ಮುದ್ದಿನ ತಂಗಿ ನಾಜಿಯಾ ನಂದಿ ಮಂಡಲಂನಿಂದ ಬಂದಿಳಿದಳು. ಆ ಊರಿಗೆ ಈ ಊರಿಗೆ ತುಂಬಾ ದೂರವೇನಲ್ಲ. ಹಾಗಾಗಿ ಆಕೆಗೂ ವಿಷಯ ಬೇಗನೆ ತಿಳಿಯಿತು. ಗಂಟಲು ಒಣಗಿದ್ದರಿಂದ ನಾಜಿಯಾ ಬಂದವಳೇ ಬುರ್ಖಾ ಕೂಡ ತೆಗೆಯದೆ ಗುಟುಕು ನೀರು ಕುಡಿಯಲು ಕೋಣೆಯ ಒಂದು ಮೂಲೆಯಲ್ಲಿದ್ದ ಮಡಿಕೆಯ ಬಳಿ ಹೋದಳು. ಅವಳನ್ನು ಗೇಲಿಮಾಡಿದಂತಿತ್ತು ಖಾಲಿ ಮಡಿಕೆ.

ಇಷ್ಟಕ್ಕೆ ಇದೆಲ್ಲಕ್ಕೂ ಕಾರಣ, ತಾನೇ. ತಾನೇ ಬಲವಂತವಾಗಿ ಬಿಂದಿಗೆ ಕೈಯಲ್ಲಿಟ್ಟು ಚಾಂದಿನಿಯನ್ನು ನೀರಿಗೆ ಕಳುಹಿಸಿದ್ದು. ಬಾಯಾರಿಕೆಯಿಂದ ಸತ್ತಾದರೂ ಹೋಗುತ್ತೇನಾಗಲಿ ನೀರಿಗೆ ಮಾತ್ರ ಹೋಗುವುದಿಲ್ಲ ಎಂದು ಆ ಹುಡುಗಿ ಎಷ್ಟು ಮೊಂಡು ಹಿಡಿದಳು. ನೀರು ತರುವುದೆಂದರೆ ಅವಳಿಗಷ್ಟು ಬೇಜಾರು.

ತಾವೊಬ್ಬರೇ ಅಲ್ಲವಲ್ಲ.. ಇಡೀ ಊರಿನವರೆಲ್ಲ ಹೀಗೇ ನೀರಿಗೆ ಗೋಳಾಡುತ್ತಿರುವುದು. ಈ ದರಿದ್ರ ಯಾವತ್ತಿನದು? ಯಾವಾಗ ನೋಡಿದರೂ ರಾಯಲಸೀಮೆಗೆ ಯಾವುದೋ ಒಂದು ಮಾಡುತ್ತೀವಿ.. ಎಂದು ಹೇಳುವವರೇ ಹೊರತು ಮಾಡಿದ್ದೇನೂ ಇಲ್ಲ.. ಯಾವುದಾದರೂ ತೊರೆಯೋ.. ಯಾವುದೋ ಕಾಲುವೆಯೋ ಹರಿದು ಭೂತಾಯಿ ತಂಪಾಗಿದ್ದು ಇಲ್ಲ. ಬೋರ್ ವೆಲ್ ಗಳಿಗೆ ನೀರು ಹತ್ತಿದ್ದೂ ಇಲ್ಲ.

ಅವೆಲ್ಲ ಹಾಗಿರಲಿ ಒಂದು ರೀತಿ ತಾನೇ ಚಾಂದಿನಿಯನ್ನು ನೀರಿಗೆ ಕಳುಹಿಸಿ ಮನೋಹರನೊಂದಿಗೆ ಓಡಿಹೋಗುವ ಹಾಗೆ ಮಾಡಿದ್ದು. ಆಕೆಗೆ ಒಮ್ಮೆಲೇ ನೂರಾರು ಆಲೋಚನೆಗಳು ಬಂದು ತಲೆ ಬಿಸಿಯಾಯಿತು.

ಆಕೆಯ ಆಲೋಚನೆಗೆ ತಕ್ಕಂತೆಯೇ ಹೊರಗೆ ರಣ ಬಿಸಿಲು. ಆ ಬಿಸಿಲಿನಲ್ಲಿ ಬಂದ ಹೆಣ್ಣುಮಗಳಿಗೆ ಒಂದು ಗುಟುಕು ನೀರು ನೀಡಲಾರದ ದುಸ್ಥಿತಿ. ಮೇಲಾಗಿ ಬಿಸಿಲಿನಲ್ಲಿ ಬಂದ ಅವಳೇ ಬಿಂದಿಗೆ ತೆಗೆದುಕೊಂಡು ನೀರಿಗೆ ಹೊರಟಳು. “ಇದೇನು ಕಷ್ಟ ತಂದಿಟ್ಟೆಯಪ್ಪಾ.. ದೇವರೇ..” ಎಂದುಕೊಂಡಳು ಮಾಬುನ್ನಿ ಮನಸ್ಸಿನಲ್ಲಿ. ಆಕೆಗೆ ನಿನ್ನೆ ನಡೆದ ಘಟನೆಗಳು ಒಂದೊಂದಾಗಿ ಕಣ್ಣಮುಂದೆ ತೇಲುತ್ತಿವೆ.

ಬರಕ್ಕೆ ಹೊಲಗಳಲ್ಲಿರುವ ಬೋರ್ ವೆಲ್ಗಳೇ ಅಲ್ಲ ಊರಿನಲ್ಲಿರುವ ಬೋರ್ ಗಳೂ ಒಣಗಿಹೋಗುತ್ತಿವೆ. ಮೊನ್ನೆಯವರೆಗೂ ಮೇದರ ಬೀದಿಯಲ್ಲಿ ಸುಬ್ಬಮ್ಮನ ಮನೆಯ ಬಳಿ ಬೋರ್ ವೆಲ್ ಇದ್ದಿತು. ಅದನ್ನು ಮೆಲ್ಲಗೆ ಹೊಡೆಯುವಂತೆ ಸುಬ್ಬಮ್ಮ ಎಲ್ಲರಿಗೂ ಹೇಳುತ್ತಿದ್ದಳು.

“ಯಾವಾಗೆಂದರೆ ಆಗ ದಬಾ ದಬಾ ಎಂದು ಬೋರ್ ವೆಲ್ ಅನ್ನು ಹಾಗೆ ಹೊಡೆಯುತ್ತಿದ್ದೀರೇ. ಅದು ಕೂಡ ಕೆಟ್ಟುಹೋದರೆ ಉಚ್ಚೆ ಕುಡಿದು ಬದುಕಬೇಕು ನನ್ ಮ..ಳಾ… ನನ್ ಸ… ಮುಂ.. ರಾ” ಎಂದು ಅಡಿಕೆಎಲೆ ಜಗಿದ ಬಾಯಿ ಅಷ್ಟಗಲ ಮಾಡಿ ಎಲ್ಲರನ್ನು ಗದರಿಕೊಳ್ಳುತ್ತಿದ್ದಳು.

ಯಾರು ಕೇಳಿದರು? ಯಾರೂ ಕೇಳಲಿಲ್ಲ. ಎಲ್ಲರೂ ಸುಬ್ಬಮ್ಮನನ್ನು ಬೈದುಕೊಳ್ಳುವವರೇ.

“ಬೋರ್ ವೆಲ್ ಅವಳೊಬ್ಬಳ ಆಸ್ತಿ ಇದ್ದಹಾಗೆ ಎಲ್ಲರನ್ನು ಓ… ದಬಾಯಿಸುತ್ತಿದ್ದಾಳೆ” ಎಂದು ಆಡಿಕೊಳ್ಳುತ್ತಿದ್ರು.

ಒಂದು ದಿನ ಬೆಳಿಗ್ಗೆ ಮೇದರ ಬೀದಿಯ ಆ ಬೋರ್ ವೆಲ್ ಕೆಟ್ಟುಹೋಯಿತು. ಇನ್ನು ಪಂಚಾಯಿತಿಯವರು ಬಂದು ಬೋರ್ ವೆಲ್ ರಿಪೇರಿ ಮಾಡುವವರೆಗೂ ಏನು ಮಾಡುವುದು? ಅದಕ್ಕೆ ಎಲ್ಲರೂ ಊರ ಹೊರಗೆ ಛತ್ರದ ಬಳಿಯಿರುವ ಬೋರ್ ವೆಲ್ ಬಳಿ ಜಮಾಯಿಸಲಾರಂಭಿಸಿದರು. ಅಲ್ಲಿ ಒಂದು ಬೋರ್ ವೆಲ್ ಇದೆಯೆಂದು ನಿನ್ನೆ ಮೊನ್ನೆಯವರೆಗೂ ಯಾರಿಗೂ ತಿಳಿದಿರಲಿಲ್ಲ. ರಾಜ್ಯ ವಿಭಜನೆಯಾದಮೇಲೆ ಒಂಟಿಮಿಟ್ಟ ರಾಮಾಲಯ ಮುನ್ನೆಲೆಗೆ ಬಂದಂತೆ, ಊರಿನಲ್ಲಿರುವ ಬೋರ್ ವೆಲ್ ಗಳು ಕೆಲವು ಒಣಗಿ, ಕೆಲವು ಕೆಟ್ಟುನಿಂತಮೇಲೆ ಛತ್ರದ ಬಳಿಯಿರುವ ಬೋರ್ ವೆಲ್ ಕಳೆಗಟ್ಟಿತು.

ಆ ಬೋರ್ ವೆಲ್ ಬಹಳ ದೂರವಿತ್ತು. ಹೋಗಲು ಕಾಲು ಗಂಟೆ, ಬರಲು ಕಾಲು ಗಂಟೆ. ತಮ್ಮ ಸರದಿಗಾಗಿ ಸಾಲಿನಲ್ಲಿ ನಿಲ್ಲಲು ಅರ್ಧ ಗಂಟೆ.. ಹೀಗೆ ಒಂದು ಗಂಟೆ ಕಷ್ಟ ಪಡದ ಹೊರತು ಒಂದು ಬಿಂದಿಗೆ ನೀರು ತರುವುದು ಸಾಧ್ಯವಿರಲಿಲ್ಲ. ಮೇಲಾಗಿ ಭಾರ.

ಯಮನ ಬಳಿಯಿರುವ ಗದೆಯನ್ನು ಎತ್ತಿದಹಾಗೆ ಇಷ್ಟದೈವಕ್ಕೆ ನಮಸ್ಕರಿಸಿ ಬೋರ್ ವೆಲ್ ರಾಡ್ ಎತ್ತಿ ಕೆಳಕ್ಕೆ ಮೇಲಕ್ಕೆ ದಬದಬಾ ಹೊಡೆದರೆ ಅದರಿಂದ ತೊಟಕ್ ತೊಟಕ್ ಎಂದು ಒಂದೊಂದೇ ಹನಿಯುದುರಿ ಬಿಂದಿಗೆ ತುಂಬುವಷ್ಟರಲ್ಲಿ ಭುಜಗಳು ಹಿಂಡಿಹಿಪ್ಪೆಯಾಗಿರುತ್ತವೆ. ಊರ ಹೊರಗಿನ ಛತ್ರದ ಬಳಿ ಕಾಲುನಡಿಗೆಯಲ್ಲಿ ದೂರಬಾರ ಹೋಗುವವರಿಗೆ ದಾಹ ತೀರಿಸಿಕೊಳ್ಳಲು ಅನುಕೂಲವಾಗಲೆಂದು ಸರ್ಕಾರ ಆ ಬೋರ್ ವೆಲ್ ಕೊರೆಸಿತು. ಆದರೆ ಊರ ಜನರೇ ದಾರಿಹೋಕರಾಗಿ ಆ ಬೋರ್ ವೆಲ್ ಬಳಿ ಸಾಲುನಿಲ್ಲುವರೆಂದು ಯಾರೂ ಊಹಿಸಲಿಲ್ಲ.

ನೀರಿಗಾಗಿ ಎಲ್ಲರೂ ಆ ಬೋರ್ ವೆಲ್ ಮೇಲೆ ಅವಲಂಭಿಸಿದಾಗ ಮನೆಗಳಲ್ಲಿ ಜಗಳಗಳು ಆರಂಭವಾದವು. ಹೆಂಗಸರು “ನಾವಿನ್ನು ನೀರು ತರಲಾರೆವು ದಮ್ಮಯ್ಯ…” ಎಂದು ಬಾಯಿಬಾಯಿ ಬಡಿದುಕೊಳ್ಳಲಾರಂಭಿಸಿದರು. ಕೆಲವು ಹುಡುಗರು ಕೂಡ “ನಾವು ನೀರು ತರುವುದಿಲ್ಲ..” ಎಂದು ಹಿರಿಯರಿಗೆ ಎದುರು ಮಾತನಾಡಲಾರಂಭಿಸಿದರು. ಇನ್ನು ಮುದುಕ-ಮುದುಕಿಯರು ನೀರ ಮಾತೆತ್ತಿದರೆ ಬೆದರಿಹೋಗುತ್ತಿದ್ದಾರೆ. ಇದರಿಂದಾಗಿ ದೊಡ್ಡ ದೊಡ್ಡ ಗಂಡಸರು ಕೂಡ ಬಿಂದಿಗೆ ಹಿಡಿದು ಬೋರ್ ವೆಲ್ ಬಳಿ ಹೋಗುವ ಬಾಧೆ ತಪ್ಪುತ್ತಿಲ್ಲ.

ಕೆಲವರು ತಳ್ಳು ಗಾಡಿಯಲ್ಲಿ ಬಿಂದಿಗೆಗಳನ್ನಿಟ್ಟುಕೊಂಡು ತಳ್ಳಿಕೊಂಡು ಬರುತ್ತಿದ್ದರೆ ಮತ್ತೆ ಕೆಲವರು ಸೈಕಲ್ ಗಳ ಮೇಲೆ ಬಿಂದಿಗೆಗಳನ್ನಿಟ್ಟುಕೊಂಡು ತೆಗೆದುಕೊಂಡು ಬರುತ್ತಿದ್ದಾರೆ. ಇನ್ನು ಎಳೆ ಮಕ್ಕಳ ತಾಯಂದಿರು ಮಕ್ಕಳನ್ನು, ಬಿಂದಿಗೆಗಳನ್ನು ಸಮಾನವಾಗಿ ಎತ್ತಿಕೊಂಡು ಬರುತ್ತಿದ್ದಾರೆ. ಇನ್ನು ಬಸುರಿ ಹೆಂಗಸರು ಅಲ್ಲೊಂದು ಹೆಜ್ಜೆ.. ಇಲ್ಲೊಂದು ಹೆಜ್ಜೆ ಹಾಕುತ್ತ ಬಿಂದಿಗೆ ಹೊತ್ತುಬರುತ್ತಿದ್ದಾರೆ. ಎಲ್ಲಿ ನೋಡಿದರೂ ನೀರಿಗೆ ಪಡುತ್ತಿರುವ ಪಾಡು, ಕಣ್ಣೀರೇ ಕಾಣಿಸುತ್ತಿದೆ.

ಸರಿಯಾಗಿ ಇಂತಹ ಸಮಯದಲ್ಲಿಯೇ ಊರಿನ ಉರ್ದು ಟೀಚರ್ ಗೌಸುದ್ದೀನ್ ಮಗಳು ‘ಪ್ಯಾರಿ’ ಇದ್ದಾಳಲ್ಲಾ ಅವಳು ಮೈನೆರೆದಿದ್ದಾಳೆ. ಪ್ಯಾರಿ ಮತ್ತು ಚಾಂದಿನಿ ಆಪ್ತ ಗೆಳತಿಯರು. ಇಬ್ಬರೂ ಒಂದೇ ಕ್ಲಾಸು, ಒಂದೇ ಬೆಂಚು. ಶಾಲೆ ಬಿಟ್ಟು ಮನೆಗೆ ಬಂದ ಮೇಲೆ ಕೂಡ ಇಬ್ಬರೂ ಬಿಂದಿಗೆಗಳನ್ನು ತೆಗೆದುಕೊಂಡು ಬೋರ್ ವೆಲ್ ಬಳಿ ಜೊತೆಯಲ್ಲಿ ಹೋಗಿ ನೀರು ಹೊತ್ತುಕೊಂಡು ಬರುತ್ತಿದ್ದರು. ಇದ್ದಕ್ಕಿದ್ದಂತೆ ಪ್ಯಾರಿ “ಗೋಷಾ” ಹೆಸರಿನಲ್ಲಿ ಮನೆಯಿಂದ ಹೊರಬರುವುದನ್ನೇ ಬಿಟ್ಟುಬಿಟ್ಟಳು. ‘ನಾಲ್ಕು ದಿನ ಕಳೆದು ಮತ್ತೆ ಬರುತ್ತಾಳೇನೋ..’ ಎಂದು ಎದುರು ನೋಡುತ್ತಿದ್ದ ಚಾಂದಿನಿಗೆ ನಿರಾಸೆಯಾಯಿತು.

ಪ್ಯಾರಿಗೆ, ಅವರ ಮನೆಯಲ್ಲಿ ಬಂಧುಬಳಗದವರನ್ನು ಕರೆದು ಹೊಸಿಕೆ ಹಾಕಿಸಿದರು. ಆ ಕಾರ್ಯಕ್ರಮಕ್ಕೆ ಚಾಂದಿನಿಯೂ ಹೋದಳು. ಪ್ಯಾರಿಯ ವೈಭವವನ್ನು ಕಣ್ಣಾರೆ ಕಂಡಳು. ಹೊಸದಾಗಿ ಹೊಲಿಸಿದ್ದ ಲಂಗ ದಾವಣಿ, ಮೈತುಂಬಾ ಒಡವೆಗಳು, ಹೂವಿನ ಹಾರಗಳು, ಸ್ವೀಟುಗಳು, ಅವಳ ಸುತ್ತಲೂ ನೆರೆದಿರುವ ನೆಂಟರು.. ಅಬ್ಬಾ ಮನೆಯ ತುಂಬಾ ಸಡಗರ. ಆ ಸಡಗರವನ್ನು, ಆ ಸಂತೋಷವನ್ನು ನೋಡಿ ಚಾಂದಿನಿಗೆ ಪ್ಯಾರಿಯ ಮೇಲೆ ಎಷ್ಟೇ ಇಲ್ಲವೆಂದರೂ ಎಲ್ಲೋ ಸ್ವಲ್ಪ ಅಸೂಯೆ ಹುಟ್ಟಿತು.

ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಚಾಂದಿನಿಯನ್ನು ಕಾಡಿದ ವಿಚಾರವೇನೆಂದರೆ “ಸದ್ಯ, ಇನ್ನು ನನಗೆ ಬೋರ್ ವೆಲ್ ನಿಂದ ನೀರು ತಂದು ಹಾಕುವ ಬಾಧೆ ಇಲ್ಲಪ್ಪ ಸ್ವಾಮಿ..” ಎಂದು ಪ್ಯಾರಿ ಭುಜಗಳೆಗುರಿಸಿ ಸಂತೋಷವಾಗಿ ಹೇಳಿದ್ದು. ಆ ಮಾತಿನಿಂದ ಚಾಂದಿನಿಗೆ ಒಮ್ಮೆಗೇ ಭಯ ಆವರಿಸಿತು.

ಹೌದು ಇನ್ನು ಪ್ಯಾರಿ ತನ್ನೊಂದಿಗೆ ನೀರಿಗೆ ಬೋರ್ ವೆಲ್ ಬಳಿ ಬರುವುದಿಲ್ಲ. ತಾನೊಬ್ಬಳೇ ಅಷ್ಟು ದೂರದಿಂದ ನೀರು ಹೊತ್ತುಕೊಂಡು ಬರಬೇಕು. ಪ್ಯಾರಿ ಅದೃಷ್ಟವಂತಳು. ನೀರು ಹೊರುವ ಬಾಧೆಯಿಂದ ತಪ್ಪಿಸಿಕೊಂಡಳು. ಮತ್ತೆ ತನಗೇಕೆ ಆ ಬಾಧೆ ತಪ್ಪಲಿಲ್ಲ.
ನಿಜ ಹೇಳಬೇಕೆಂದರೆ ಪ್ಯಾರಿಗಿಂತ ಮೊದಲು ಮೈನೆರೆದವಳು ಚಾಂದಿನಿ.

“ಹೆಣ್ಣುಮಕ್ಕಳಿಗೆ ಇದು ಮಾಮೂಲೇ. ಹೊರಗೆ ಹೇಳುವ ಅಗತ್ಯವಿಲ್ಲ. ಆದರೆ ಒಂದು ವಿಷಯ ನೆನಪಿಟ್ಟುಕೋ.. ನಿನಗೆ ಹೀಗೆ ಆಗಿದೆ ಎಂದು ಹೊರಗೆಲ್ಲೂ ಹೇಳಬೇಡ. ಹೇಳಿದರೆ ದರಿದ್ರ ಸುತ್ತುಕೊಳ್ಳುತ್ತದೆ ಹುಷಾರು..” ಎಂದು ಬೆದರಿಸಿದ್ದಳು ಅಮ್ಮ ಮಾಬುನ್ನಿ. ಆ ಮೂರು ದಿನ ಜ್ವರದ ನೆಪದಿಂದ ಮನೆಯಲ್ಲಿದ್ದು ಮತ್ತೆ ಮಾಮೂಲಿನಂತೆ ಏನೂ ತಿಳಿಯದಂತೆ ಶಾಲೆಗೆ ಹೋದಳು ಚಾಂದಿನಿ.

ಆದರೆ ಅದೊಂದು ಕಾರ್ಯಕ್ರಮವೆಂದು, ಅದಕ್ಕೆ ಹೀಗೆ ಹೊಸಿಕೆ ಹಾಕುವರೆಂದು, ಎಲ್ಲರನ್ನು ಕರೆದು ಶಾಸ್ತ್ರ ಮಾಡುತ್ತಾರೆಂದು, ಎಲ್ಲಕ್ಕಿಂತಲೂ ಮನೆಯಲ್ಲಿ ಗೋಷಾ ಇಟ್ಟು ಹೊರಗಿನಿಂದ ನೀರು ತಂದುಹಾಕುವ ಬಾಧೆ ತಪ್ಪಿಸುತ್ತಾರೆಂದು ಆಕೆಗೆ ಪ್ಯಾರಿಯನ್ನು ನೋಡುವವರೆಗೂ ತಿಳಿಯಲಿಲ್ಲ. ಆ ದಿನ ಮನೆಗೆ ಬಂದವಳೆ ಬಹಳ ಕೋಪದಿಂದ ಅಮ್ಮನನ್ನು ಕೂಗಿದಳು.

“ಅಮ್ಮೀ… ಪ್ಯಾರಿಗೆ ಇಟ್ಟ ಹಾಗೆ ನನಗೇಕೆ ಗೋಷಾ ಇಡಲಿಲ್ಲ ನೀನು. ನಿಜವಾಗಲೂ ನಾನು ನಿನ್ನ ಮಗಳೇನಾ.. ಅಲ್ಲವಾ.. ಅದು ಹೇಳು ಮೊದಲು..” ಎಂದು ಕಿರುಚಾಡಿದಳು.

ಮಾಬುನ್ನಿಗೆ ಏನು ಮಾತನಾಡುವುದೋ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಿರಿಯ ಜೀವ ಒದ್ದಾಡಿತು. ಕೂಡಲೇ ನಿಸ್ಸಹಾಯಕವಾಗಿ ಧಡಧಡ ಎಂದು ಕಣ್ಣೀರು ಸುರಿಸಿದಳು.

“ನಿನಗೆ ತಿಳಿಯದಿರುವುದು ಏನಿದೆ ಹೇಳಮ್ಮ. ನನ್ನ ಹೊಟ್ಟೆಯಲ್ಲಿ ಇನ್ನೊಂದು ಗಂಡು ಮಗುವನ್ನು ಕರುಣಿಸಲಿಲ್ಲ ದೇವರು. ಎಲ್ಲೆಲ್ಲೋ ಸುತ್ತಿ, ಎಷ್ಟು ದೇವರಿಗೆ ಕೈ ಮುಗಿದು ಕೊನೆಗೆ ಆ ಮಹಬೂಬ್ ಸುಬಹಾನ್ ಸಾಹೇಬ್ ಗೆ ಹರಕೆ ಹೊತ್ತುಕೊಂಡರೆ ನೀನು ಹುಟ್ಟಿದೆ ಬಹಳ ತಡವಾಗಿ. ನೀನೇ ನಮಗೆ ದಿಕ್ಕು. ನಿನ್ನನ್ನು ನೋಡಿಕೊಂಡೇ ನಾವು ಬದುಕುತ್ತಿದ್ದೀವಿ. ನಿನ್ನನ್ನು ಗೋಷಾ ಇಟ್ಟು ನಾಲ್ಕು ಜನರಂತೆ ಸುಖವಾಗಿ ನೋಡಿಕೊಳ್ಳಬೇಕೆಂದು ನಮಗಿರುವುದಿಲ್ಲವಾ ಹೇಳು. ಆದರೆ ಏನು ಮಾಡುವುದು. ಮನೆಗೆ ನೀರು ತಂದುಹಾಕಿಕೊಳ್ಳುವ ಶಕ್ತಿ ಕೂಡ ನಮಗಿಲ್ಲದಂತೆ ಮಾಡಿದ್ದಾನಲ್ಲವಾ.. ಆ ದೇವರು.

ಇನ್ನು ಆ ಪ್ಯಾರಿ ವಿಷಯ.. ಅವರಮ್ಮ ರಮೀಜಾ ಒಬ್ಬಿಬ್ಬರಲ್ಲ ವರಸೆಯಾಗಿ ಮೂವರು ಗಂಡು ಮಕ್ಕಳನ್ನು ಹೆತ್ತಿದ್ದಾಳೆ. ಗಂಡು ಮಕ್ಕಳು ಇಲ್ಲದವರು ಇಲ್ಲವೆಂದು ಸಾಯುತ್ತಿದ್ದರೆ.. ದೇವರು ಇರುವವರಿಗೇ ಮತ್ತೆ ಮತ್ತೆ ಕರುಣಿಸುತ್ತಿದ್ದಾನೆ. ಆ ಮೂವರು ಗಂಡುಮಕ್ಕಳು ಪ್ಯಾರಿ ಮೈನೆರೆಯುತ್ತಿದ್ದಂತೆ ಅವರಮ್ಮನ ಬಳಿ ಹೋಗಿ ‘ಅಮ್ಮೀ.. ತಂಗಿಯನ್ನು ಗೋಷಾ ಇಡೋಣಮ್ಮ.. ಮನೆಗೆ ನಾವು ಮೂವರೂ ಸರದಿಯಂತೆ ನೀರು ತಂದುಹಾಕುತ್ತೇವೆ..’ ಎಂದು ಹೇಳಿದರಂತೆ. ಅವರ ಹೊಟ್ಟೆ ತಣ್ಣಗಿರಲಿ.. ಹೇಳಿದಂತೆ ನೀರು ತಂದು ಹಾಕುತ್ತಿದ್ದಾರೆ. ನಿನಗೂ, ನನಗೂ ಆ ಸುಖ ಎಲ್ಲಿದೆಯಮ್ಮ” ಎಂದಳು.

ಅದಕ್ಕೆ ಸ್ವಲ್ಪ ಯೋಚಿಸಿ ಕೂಡಲೇ ಅಮ್ಮನಿಗೆ ಹೇಳಿದಳು.

“ಅಮ್ಮೀ.. ನನಗೆ ನೀನು ಗೋಷಾ ಇಡದಿದ್ದರೆ ಹೋಗಲಿ ನಾಳೆ ನನ್ನನ್ನು ಗೋಷಾ ಇಡುವ ಮನೆಗೇ ಮದುವೆ ಮಾಡಿಕೊಡಬೇಕು.. ಸರೀನಾ..”
ಆ ಮಾತಿಗೆ ಸಣ್ಣಗೆ ನಕ್ಕು “ಸರಿ ಬಿಡಮ್ಮಾ.. ನಿನಗೆ ಮದುವೆ ಮಾಡಿಕೊಟ್ಟು ನಾನು, ನಿಮ್ಮ ಅಪ್ಪ ಯಾವುದಾದರೂ ದರ್ಗಾ ಬಳಿ ಹೋಗಿ ‘ಅಲ್ಲಾ.. ಬಿಸ್ಮಿಲ್ಲಾ..’ ಎಂದು ಕಳೆದುಬಿಡುತ್ತೇವೆ ಬಿಡು..” ಎಂದಳು ಮಾಬುನ್ನಿ.

ಆಕೆಯ ಆಲೋಚನೆಗೆ ತಕ್ಕಂತೆಯೇ ಹೊರಗೆ ರಣ ಬಿಸಿಲು. ಆ ಬಿಸಿಲಿನಲ್ಲಿ ಬಂದ ಹೆಣ್ಣುಮಗಳಿಗೆ ಒಂದು ಗುಟುಕು ನೀರು ನೀಡಲಾರದ ದುಸ್ಥಿತಿ. ಮೇಲಾಗಿ ಬಿಸಿಲಿನಲ್ಲಿ ಬಂದ ಅವಳೇ ಬಿಂದಿಗೆ ತೆಗೆದುಕೊಂಡು ನೀರಿಗೆ ಹೊರಟಳು. “ಇದೇನು ಕಷ್ಟ ತಂದಿಟ್ಟೆಯಪ್ಪಾ.. ದೇವರೇ..” ಎಂದುಕೊಂಡಳು ಮಾಬುನ್ನಿ ಮನಸ್ಸಿನಲ್ಲಿ.

ಇದು ಆಗಿ ಎರಡು ವರ್ಷ ಕಳೆಯಿತು. ಮೇದರ್ ಬೀದಿಯಲ್ಲಿ ಕೆಟ್ಟುಹೋದ ಬೋರ್ ವೆಲ್ ರಿಪೇರಿಯಾಗದೆ ಹಾಗೇ ಬಿದ್ದಿದೆ. ರಿಪೇರಿ ಮಾಡಿಸಲು ಮುಂದಾದ ಪಂಚಾಯಿತಿ ಅಧಿಕಾರಿಗಳು ಇನ್ನು ಅದು ರಿಪೇರಿಯಾಗುವುದಿಲ್ಲವೆಂದು ಘೋಷಿಸಿದರು. ನೀರಿಗೆ ಪರದಾಟ ಮುಂದುವರಿಯಿತು. ಇನ್ನು ಚಾಂದಿನಿ ಗೋಷಾ ಮಾತು ಯಾವತ್ತೋ ಮರೆತುಬಿಟ್ಟಿದ್ದಾಳೆ ಎಂದುಕೊಂಡಳು ಮಾಬುನ್ನಿ. ಆದರೆ ಆಕೆ ಮರೆತುಹೋಗಲಿಲ್ಲವೆಂದು ಕಾಲದೊಂದಿಗೆ ಆಕೆಯ ಕೋರಿಕೆಯು ಕೂಡ ಹಾಗೇ ಅವಳ ಮನಸ್ಸಿನಲ್ಲಿ ಬೆಳೆಯುತ್ತ ಬರುತ್ತಿದೆಯೆಂದು ಮಾಬುನ್ನಿಗೆ ಮೊನ್ನೆ ಅರ್ಥವಾಯಿತು.

ಮಾಬುನ್ನಿ ಚಾಂದಿನಿಗೆ ಒಂದು ಸಂಬಂಧ ನೋಡಿದಳು. ರಾಯಚೋಟಿ ಬಳಿ ಕೋನಂ ಪೇಟೆಯಲ್ಲಿ ಇರುವ ನಿಂಬೆಕಾಯಿ ವ್ಯಾಪಾರಿ ಮಾಪ್ಪೀರ್ ಮಗ ಸುಭಾನ್ ಪಟ್ಟಣದಲ್ಲಿ ಓದುತ್ತಿದ್ದಾನಂತೆ. ಆತನಿಗೆ ಕೊಟ್ಟು ಮಾಡಿದರೆ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಂದೆಗೆ ಹೇಳುತ್ತಿದ್ದುದನ್ನು ಕೇಳಿಸಿಕೊಂಡಳು ಚಾಂದಿನಿ.

ನಿಂಬೆಕಾಯಿ ವ್ಯಾಪಾರಿ ಮಾಪ್ಪೀರ್ ಮಾಮನ ಕುರಿತು ಸ್ವಲ್ಪ ಚಾಂದಿನಿಗೆ ತಿಳಿದಿದೆ. ದಿನವೂ ನಿಂಬೆತೋಟದ ಕೆಲಸದ ಮೇಲೆ ಸುತ್ತಮುತ್ತಲಿನ ಊರು ಸುತ್ತುವ ಆತ ದೂರದ ನೆಂಟ ಎನ್ನುವ ನೆಪದಲ್ಲಿ ಆಗಾಗ ಮನೆಗೆ ಬಂದು ಊಟ ಮಾಡಿಹೋಗುತ್ತಿದ್ದನು. ಬಹಳ ಒರಟು ಮನುಷ್ಯ. ನಮಾಜ್ ದಾರ್ ಅಲ್ಲ.

ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು. ತಾನು ಮಾತ್ರ ಗೋಷಾ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದು ಎಚ್ಚರಿಸಿದಳು. ತಾಯಿಯಾಗಿ ತನಗೆ ನೀಡಿದ ಮಾತು ತಪ್ಪಬಾರದೆಂದು ಅಂಗಲಾಚಿದಳು. ಆದರೂ ಮಾಬುನ್ನಿ ಅವನ್ನೆಲ್ಲ ಚಿಕ್ಕಹುಡುಗಿಯ ಚೇಷ್ಟೆಗಳೆಂದುಕೊಂಡಳು. ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದ ಚಾಂದಿನಿ ಮಾಬುನ್ನಿಯರಿಗೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ಕೂಡ ಹಾಗೇ ಗಲಾಟೆಯಾಯಿತು.

ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಬಂದಳು ಚಾಂದಿನಿ. ಆವೇಗದಲ್ಲಿದ್ದಂತೆ ಕಂಡಳು. ಅದೇನು ಗಂಭೀರವೆನಿಸಲಿಲ್ಲ ಮಾಬುನ್ನಿಗೆ. ಅಭ್ಯಾಸದಂತೆ ಬರುತ್ತಿದಂತೆಯೇ ಬಿಂದಿಗೆ ನೀಡಿ ನೀರಿಗೆ ಕಳುಹಿಸಿದಳು.

“ಅಮ್ಮೀ.. ಓ ಅಮ್ಮಿ.. ನೀನು ನನ್ನನ್ನು ಗೋಷಾ ಇಡುವ ಹುಡುಗನಿಗೆ ಕೊಟ್ಟು ಮದುವೆ ಮಾಡುತ್ತೇನೆಂದು ಹೇಳಿದ್ದೀಯಲ್ಲವಾ..” ಎಂದಳು ಚಾಂದಿನಿ ಅನುಮಾನದಿಂದ.
“ಹಾಗೇ ಮಾಡೋಣ.. ನೀನೇನು ನನ್ನ ಸವತಿಯ ಮಗಳಾ.. ಯಾರೆಂದರೆ ಅವರಿಗೆ ಕೊಟ್ಟು ಮಾಡಲು. ಮೊದಲು ಬೋರ್ ವೆಲ್ ಬಳಿ ಹೋಗಿ ಒಂದು ಬಿಂದಿಗೆ ನೀರು ತೆಗೆದುಕೊಂಡು ಬಾಮ್ಮಾ.. ನಿನಗೆ ಕೈಮುಗಿಯುತ್ತೀನಿ. ಅಲ್ಲಿ ನೋಡು ಬೆಳಿಗ್ಗೆ ಹಾಕಿರುವ ಪಾತ್ರೆಗಳು.., ಹೇಗೆ ಒಣಗಿಹೋಗಿವೆ”, ದೀನವಾಗಿ ಹೇಳಿದಳು ಮಾಬುನ್ನಿ.

ಚಾಂದಿನಿ ಕೇಳಲಿಲ್ಲ.

“ಏನು ಒಣಗಿಹೋದರೂ ನನಗೇನೂ ಬೇಕಿಲ್ಲ.. ಮೊದಲು ನನಗೆ ಮಾತು ಕೊಡು.. ಆಗ ಹೋಗುತ್ತೇನೆ ನೀರಿಗೆ..”
ತಲೆಬಡಿದುಕೊಂಡಳು ಮಾಬುನ್ನಿ.

“ನೀರಿನ ಮಾತು ಎತ್ತಿದಾಗೆಲ್ಲಾ.. ನಿನ್ನದು ದೊಡ್ಡ ಹಾಡಾಗಿ ಹೋಗಿದೆಯೇ ನನಗೆ. ನಿನಗೆ ನಂಬಿಕೆ ಬರಬೇಕೆಂದರೆ ಆ ಅಲ್ಲಾನೇ ಇಳಿದುಬರಬೇಕೇ ಹೊರತು.. ನಾನೇ ಹೋಗುತ್ತೇನೆ ತೆಗಿ ನೀರಿಗೆ. ನಿನ್ನನ್ನೇನು ಅಷ್ಟು ಅಂಗಲಾಚುವುದು.. ದಾರಿಯಲ್ಲಿ ಯಾರಾದರೂ ನೋಡಿ ಏನಮ್ಮಾ ನೀನು ಬಂದಿದ್ದೀಯೇ.., ನಿನ್ನ ಮಗಳೇನಾದರೂ ಸತ್ತುಹೋದಳಾ.. ಎಂದು ಕೇಳಿದರೆ ಹೌದು ಎಂದೇ ಹೇಳುತ್ತೇನೆ..” – ಕಟುವಾಗಿ ಬೆದರಿಸುತ್ತ ಮೂಲೆಯಲ್ಲಿರುವ ಕೆಂಪು ಬಿಂದಿಗೆ ಕೈಯಲ್ಲಿ ತೆಗೆದುಕೊಳ್ಳಹೊರಟಳು ಮಾಬುನ್ನಿ.

ಚಾಂದಿನಿ ಬೆದರಿಹೋದಳು.

“ಮೊದಲೇ ಮುಪ್ಪಿನ ಜೀವ. ಯಾವಾಗಲೂ ಮೊಣಕಾಲು ನೋವು ಎನ್ನುತ್ತಿರುತ್ತಾಳೆ. ಎದ್ದರೆ ಕೂರಲಾಗದು.. ಕೂತರೆ ಏಳಲಾಗದು. ರೋಷ ಮಾತ್ರ ಬೇಗ ಬರುತ್ತದೆ. ಎಲ್ಲೋ ಊರಾಚೆಯ ಬೋರ್ ವೆಲ್ ಬಡಿದು ನೀರು ತರಲಾಗುತ್ತದಾ ಈಯಮ್ಮನಿಗೆ? ತಂದರೆ ದಾರಿನಡುವೆಯೇ ಪ್ರಾಣ ಪುಟುಕ್ ಎಂದು ಹಾರಿಹೋಗುತ್ತದೆ” ಗೊಣಗಿಕೊಂಡಳು ಚಾಂದಿನಿ.

ಅದಕ್ಕೆ ಮೊದಲೊಮ್ಮೆ ಹೀಗೆ ಹಠಕ್ಕೆ ಬಿದ್ದು ನೀರಿಗೆ ಹೊರಟಳು ಮಾಬುನ್ನಿ. ಮಾಬುನ್ನಿ ನೀರು ತರುವಾಗ ಸರಿಯಾಗಿ ಮನೆ ಅರ್ಧ ಕಿಲೋಮೀಟರ್ ಇರುವಾಗ ಬೇವಿನ ಮರದ ಬಳಿ ಕುಸಿದುಬಿದ್ದಳು. ಮೊದಲೇ ಅದು ಒಳ್ಳೆಯ ಜಾಗವಲ್ಲ ಎಂದು ಆ ಸುತ್ತಮುತ್ತಲವರ ಪ್ರಚಾರ. ಬಹಳ ಜನ ಬೇರೆ ಬೇರೆ ರೀತಿ ಕೆಳಗೆ ಬಿದ್ದು ಅಲ್ಲಿ ಪ್ರಾಣಕ್ಕೆ ತಂದುಕೊಂಡದ್ದು ಅಲ್ಲಿಯೇ. ಅದಕ್ಕೇ ಚಾಂದಿನಿ ಭಯಪಟ್ಟಳು. ಓಡೋಡಿ ಬಂದು ನೋಡಿದರೆ ಬಿಂದಿಗೆ ಒಡೆದು ನೀರೆಲ್ಲ ಚೆಲ್ಲಿ ಅಲ್ಲಿ ಕೆಸರುಮಯವಾಯಿತು. ಆ ಕೆಸರಿನಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಮಾಬುನ್ನಿ. ದಾರಿಯಲ್ಲಿ ಹೋಗುತ್ತಿದ್ದ ಪುಣ್ಯಾತ್ಮರು ಮಾಬುನ್ನಿಯನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಮಂಚದ ಮೇಲೆ ಮಲಗಿಸಿಹೋದರು. ಆಗ ಚಾಂದಿನಿಯನ್ನು ಎಲ್ಲರೂ ಎಷ್ಟು ಬೈದರೋ ಈಗಲೂ ನೆನಪಿದೆ ಅವಳಿಗೆ. ಅದಕ್ಕೇ ಇನ್ಯಾವಾಗಲೂ ತಾಯಿಯ ಕೈಲಿ ನೀರು ಹೊರಿಸಬಾರದೆಂದು ಪ್ರಮಾಣ ಮಾಡಿಸಿಕೊಂಡಳು.

ಆ ಬಲಹೀನತೆಯರಿತೇ ಕೊನೆಯ ಅಸ್ತ್ರವನ್ನು ಬೀಸಿದಳು ಮಾಬುನ್ನಿ. ಇನ್ನೇನು ಮಾಡಲಾಗುವುದಿಲ್ಲವೆಂದರಿತು ಭಯದಿಂದ ತಾಯಿಯ ಕೈಯಿಂದ ಬಿಂದಿಗೆಯನ್ನು ತೆಗೆದುಕೊಂಡಳು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದರೆ ತಲೆಬಗ್ಗಿಸಿಕೊಂಡು “ಸರಿ.. ನಾನೇ ತರುತ್ತೀನಿ ಕೊಡು ನೀರು..” ಎಂದು ನಿಧಾನವಾಗಿ ಬೋರ್ ವೆಲ್ ಬಳಿಗೆ ಹೊರಟಳು.

ಹಾಗೆ ಹೊರಟ ಚಾಂದಿನಿ ಒಂದು ಗಂಟೆಯಾದರೂ ಬರಲಿಲ್ಲ. ಎರಡು ಗಂಟೆಯಾದರೂ ಬರಲಿಲ್ಲ. ಕೊನೆಗೆ ಒಂದು ದಿನವಾದರೂ ಅವಳ ಜಾಡಿಲ್ಲ. ಆದರೆ ಚಾಂದಿನಿ ನಾಗಿರೆಡ್ಡಿಯ ಮಗ ಮನೋಹರನೊಂದಿಗೆ ಬೋರ್ ವೆಲ್ ಹತ್ತಿರವಿರುವ ಛತ್ರದ ಬಳಿ ಪುಲಿವೆಂದುಲ ಬಸ್ ಹತ್ತಿದಳೆಂದು ಯಾರೋ ನೋಡಿದವರು ಹೇಳುವವೇಳೆಗೆ ಇವರಿಬ್ಬರೂ ಓಡಿಹೋದರೆಂಬ ವಾರ್ತೆ ಎಲ್ಲರ ಬಾಯಿಗೆ ಆಹಾರವಾಯಿತು.

“ಅಬ್ಬ.. ಎಷ್ಟು ದೂರವಪ್ಪಾ ಬೋರ್ ವೆಲ್..” ಎಂದು ಬೆವರು ಸುರಿಸಿಕೊಂಡು ಬಂದ ನಾಜಿಯಾ ಮಾತು ಕಿವಿಗೆ ಬಿದ್ದು ಈ ಲೋಕಕ್ಕೆ ಬಂದಳು ಮಾಬುನ್ನಿ.

ನಾಜಿಯಾ ಬೇಗ ಬಿಂದಿಗೆ ಕೆಳಗಿಟ್ಟು ಲೋಟದಲ್ಲಿ ನೀರು ತುಂಬಿ ಹೊರಗೆ ಕುಳಿತಿದ್ದ ಅಣ್ಣ ಫಕೃದ್ದೀನ್ಗೆ ನೀಡಿದಳು. ಫಕೃದ್ದೀನ್ ಗಟಗಟ ನೀರು ಕುಡಿದು ಲೋಟ ನಾಜಿಯಾಳ ಕೈಗೆ ನೀಡುತ್ತ ‘ಈ ನೀರು ಎಷ್ಟು ಕೆಲಸ ಮಾಡುತ್ತಿದೆಯೋ ನಾಜಿಯಾ. ಅಮ್ಮ-ಮಗಳು ಒಬ್ಬರನ್ನು ಕಂಡರೆ ಒಬ್ಬರಿಗಾಗದಂತೆ ಮಾಡಿದೆ. ಪಕ್ಷಿ, ಹುಳು, ಗಿಡ, ಹುತ್ತ ಎಲ್ಲ ಒಣಗಿ ಸಾಯುತ್ತಿವೆ. ನಮ್ಮವರಿಗೆ ಮಾತ್ರ ಕನಸು ಕಾಣುವುದು ಹೇಗೆಂದು ಕೂಡ ತಿಳಿಯುತ್ತಿಲ್ಲ. ನಿನ್ನ ಅತ್ತಿಗೆಯೇನೋ.. ಗಂಡು ಮಗನಿದ್ದಿದ್ದರೆ ಚೆನ್ನಾಗಿತ್ತು ಎನ್ನುತ್ತಾಳೆ.. ಅವಳ ಮಗಳೇನೋ ಗೋಷಾ ಬೇಕು.. ಎನ್ನುತ್ತಿದ್ದಳು. ನಮಗೆ ಬೇಕಿದ್ದದ್ದು ನೀರಲ್ಲವಾ.. ಅದಿದ್ದಿದ್ದರೆ ಇವೆಲ್ಲ ಏಕೆ.. ಹಾಗಾದರೆ ಯಾಕೆ ನೀರು ಕುರಿತು ಯಾರೂ ಕೇಳುವುದಿಲ್ಲ? ನಾವು ಕಾಣಬೇಕಿದ್ದ ಕನಸನ್ನು ಬಿಟ್ಟು ಬೇರಾವುದೋ ಕನಸನ್ನು ಕಾಣುತ್ತಿದ್ದೇವೆ. ಅದಲ್ಲವಾ ‘ಬರ’ವಾಡುವ ಆಟ. ಈ ಸತ್ಯ ಹೊರಟುಹೋದ ಚಾಂದಿನಿಗಾಗಲಿ ನಿನ್ನ ಅತ್ತಿಗೆಗಾಗಲಿ ಹೇಗೆ ತಿಳಿಯಬೇಕು?” ಎಂದು ಹವಾಯಿ ಚಪ್ಪಲಿ ಕಾಲಿಗೇರಿಸಿಕೊಂಡು ಹೊರಟನು.

ಅಣ್ಣ ಬಹಳ ದುಃಖದಲ್ಲಿರುತ್ತಾನೆಂದುಕೊಂಡಳು ನಾಜಿಯಾ, ಆದರೆ ಆತನ ಬಾಧೆ ಮಾತ್ರ ಸರಿಯಾಗಿ ಅರ್ಥವಾಗಲಿಲ್ಲ. ಏನೂ ಯೋಚಿಸದೆ ಇನ್ನೊಂದು ಲೋಟ ನೀರು ತುಂಬಿಕೊಂಡು ಬಂದು ಮಾಬುನ್ನಿಗೆ ನೀಡಿದಳು ನಾಜಿಯಾ.

ತುಂಬಾ ದಾಹವಾಗಿದ್ದ ಮಾಬುನ್ನಿಗೆ ಲೋಟ ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಕೈ ನಡುಗುತ್ತಿದೆ. ನೀರು ಬೆಚ್ಚಗೆ ಉಪ್ಪುಪ್ಪಾಗಿ ಒಂದೊಂದೇ ಗುಟುಕು ಗಂಟಲಿಗೆ ಇಳಿಯುತ್ತಿದ್ದರೆ ಕಣ್ಣೀರನ್ನು ಕುಡಿಯುತ್ತಿದ್ದಂತಿದೆ ಮಾಬುನ್ನಿಗೆ.

ಗಟಗಟ ನೀರು ಕುಡಿದು ಲೋಟ ನಾಜಿಯಾ ಕೈಗಿತ್ತಳು. ನೀರು ಬೆಚ್ಚಗಿತ್ತೋ, ಉಪ್ಪಾಗಿತ್ತೋ ಆದರೆ ಆಕೆಗೆ ಸ್ವಲ್ಪ ದಾಹ ತೀರಿ ಮನಸ್ಸಿಗೆ ಸಮಾಧಾನವಾಯಿತು. ಆದರೆ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆಕಾಶವನ್ನು ಯಾವುದೋ ಮೋಡ ಕವಿದಂತಾಗಿ ಆಕೆಯ ತಾಯ ಹೃದಯಕ್ಕೆ ಒಂದು ಅನುಮಾನ ಕಾಡಲಾರಂಭಿಸಿತು.

“ಇಷ್ಟಕ್ಕೂ.. ಮನೋಹರ್ ಆದರೂ ಚಾಂದಿನಿಯನ್ನು ಗೋಷಾ ಇಡುತ್ತಾನಾ?”

ವೇಂಪಲ್ಲಿ ಷರೀಫ್
ವೇಂಪಲ್ಲಿ ಷರೀಫ್ ಆಂಧ್ರಪ್ರದೇಶದ ಕಡಪ ಜಿಲ್ಲೆಯ ವೇಂಪಲ್ಲಿಯಲ್ಲಿಯವರು. ಇದುವರೆಗೆ ಇವರ ಮೂರು ಕಥಾ ಸಂಕಲನಗಳು ಪ್ರಕಟಗೊಂಡಿವೆ. ಇವರ ‘ಜುಮ್ಮಾ’ ಕಥಾ ಸಂಕಲನಕ್ಕೆ 2012ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಂದಿದೆ. ಈ ಪುಸ್ತಕ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಿಗೆ ಅನುವಾದಗೊಂಡಿದೆ. ಜುಮ್ಮಾ ಪುಸ್ತಕಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ’ ಮತ್ತು ‘ಕುವೆಂಪು ಭಾಷಾ ಭಾರತಿ’ ಗೌರವಗಳು ಸಂದಿವೆ. ಇವರ ಕಥೆಗಳು ಹಿಂದಿ, ಕೊಂಕಣಿ, ಮೈಥಿಲಿ ಭಾಷೆಗಳಿಗೂ ಅನುವಾದಗೊಂಡಿವೆ. ಷರೀಫ್ ಜನಪ್ರಿಯ ರೇಡಿಯೋ ಜಾಕಿ, ಸುದ್ದಿ ವಾಚಕರೂ ಹೌದು. ಪ್ರಸ್ತುತ ಆಂಧ್ರ ಪ್ರದೇಶ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಕಟಗೊಳ್ಳುವ ದ್ವೈಮಾಸಿಕ ಪತ್ರಿಕೆ ‘ಕಸ್ತೂರಿ’ಯಲ್ಲಿ ಕಾರ್ಯನಿರತ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.