ಒಲುಮೆಯ ಕವಿ ಎಂದು ಹೆಸರಾದ ಕೆ.ಎಸ್. ನರಸಿಂಹಸ್ವಾಮಿಯವರ ಜನ್ಮದಿನದಂದು ಅವರ “ಮೌನದಲಿ ಮಾತ ಹುಡುಕುತ್ತ” ಸಂಕಲನದಿಂದ ಆರಿಸಿರುವ ಈ ಕವನ ಕೆಂಡಸಂಪಿಗೆಯ ಓದುಗರಿಗಾಗಿ.

ನವಿರಾದ ಛಂದಸ್ಸಲ್ಲಿ ಬದುಕಿನ ಚೆಲುವನ್ನ ಹಾಡಾಗಿ ಪೋಣಿಸಿಕೊಟ್ಟ ನರಸಿಂಹ ಸ್ವಾಮಿಯವರ ಕವಿತೆಗಳು ಜನಮನದ ಹಾಡಾಗಿ ಜನಪ್ರಿಯವಾದವು. ಸಾಹಿತ್ಯದಲ್ಲಿ ಬಗೆಬಗೆಯ ಕಾಲಮಾನವಿದ್ದ ಹಾಗೆ ನವ್ಯದ ಕಾಲ ಬಂದಾಗ ನರಸಿಂಹಸ್ವಾಮಿಯವರ ನವುರು ತಿಳಿದನಿಯ ಕವಿತ್ವ ಸವಾಲಿಗೆ ಸಿಕ್ಕಿತು. ಭಾಷೆ ಮತ್ತು ಭಾವದಲ್ಲಿ ಏನನ್ನೂ ಮಣಿಸುವ ಹುಟ್ಟು ಕವಿಗೆ ಈ ಸವಾಲೊಂದು ಆಟವೇ ಆಯಿತು. ಮಲ್ಲಿಗೆಯ ಬನದಿಂದ ಸಂತೆಬೀದಿಗೆ ಒಂದು ವಾಕ್ ಹೊರಟರು. ದಾರಿಯಲ್ಲಿ ಅಗೆದದ್ದು ಕುಂಕುಮ ಭೂಮಿ. ಗಡಿಯಾರದಂಗಡಿಯ ಮುಂದೆ ನಿಂತರೂ ರೈಲ್ವೆ ನಿಲ್ದಾಣದಲ್ಲಿ ಮಗಳಿಗೆ ಎಚ್ಚರಿಸಿದ ತಾಯಿಭಾವ ಶಿಲಾಲತೆಯಲ್ಲೂ ಘಮವನ್ನೆ ಮೂಸಿತು. ಎದೆ ತುಂಬ ನಕ್ಷತ್ರ ಕಾಣಲು ಕಣ್ಣು ಬೇಕು. ಅಷ್ಟೆ ಅಲ್ಲ ಭಾವನೆಯಲ್ಲಿಯೇ ಆದರೂ ನಕ್ಷತ್ರವಿರುವುದು ಆಕಾಶದಲ್ಲಿ, ವಿಶಾಲತೆಯಲ್ಲಿ ಎಂಬ ಅರಿವು ಬೇಕು. ಈ ಬಗೆಯ ಬದುಕಿನ ಹದದ ಹೊಳಹುಗಳು ಕೆ.ಎಸ್.ನ ಬರೆದ ಚೆಲುಸಾಲುಗಳಲ್ಲಿ ಅವರೆ ಬರೆದ ಹಾಗೆ “ಬಳ್ಳಿಯ ಬೆರಳಲಿ ಹೂವೊಂದಿತ್ತು ಉಂಗುರವಿಟ್ಟಂತೆ” ಎಂಬಂತೆ ಕಂಗೊಳಿಸುತ್ತವೆ.

ಬಯಲಿನ ಸುತ್ತಾಟ ಸಹಜ. ದಾರಿಯ ಹುಡುಕಾಟ ಸಹಜ. ಮತ್ತೆ ಮೊದಲಿನ ಮೂಲಭಾವದಲಿ ಒಲವೊಂದೆ ಮದ್ದು.. ಈ ನೋಯುವ ನೋಯಿಸುವ ಬದುಕನು ಬದುಕಲು, ಗಡಗಡಿಸುವ ಪಯಣದಲಿ ಹಾಯೆನಿಸಲು ಒಲವೊಂದೆ ಸರಿಯಾದ ಮದ್ದು ಎಂದು ಹೊಳೆದ ಕೆ.ಎಸ್. ನ ಬರೆದ ಕವಿತೆಯೊಂದು ಇಲ್ಲಿದೆ. ತಾನು ಖಚಿತ ಪಡಿಸಿಕೊಂಡ ಹಾದಿಯನ್ನು ಬಿಟ್ಟು ಬಯಲಿನಲಿ ಸುತ್ತಿ ಮತ್ತೆ ತನ್ನ ಖಚಿತವೇ ಸರಿ ಎಂದು ಮರಳಿದ ಧೈರ್ಯಶಾಲಿ ಕವಿ ಕೆ.ಎಸ್.ನರಸಿಂಹಸ್ವಾಮಿ. ಒಲವಿನ ಕವಿಯ ಕುರಿತ ಈ ಪುಟ್ಟ ಟಿಪ್ಪಣಿ ಸಿಂಧು ಬರೆದದ್ದು. ಕವಿಯ ಜನ್ಮದಿನ ಎಂದು ನೆನಪಿಸಿ ಅವರದೊಂದು ಛಾಯಾಚಿತ್ರ ಕಳಿಸಿಕೊಟ್ಟವರು ಮುಕುಂದ ಎ.ಎನ್.

`ಹನಿ’ಯಲ್ಲಿ ಒಂದು ಹೊಳೆಯ ಕಾಣಿಸುವ ಕವಿ ಕೆ.ಎಸ್. ನ ಅವರ ನೆನಪಲ್ಲಿ ಈ ಕವಿತೆ.

 

 

 

 

 

 

 

 

ಹೂವು-ಹೆಣ್ಣು 

ಹೂವ ಚುಂಬಿಸಲಾರೆ, ಚುಂಬಿಸದೆ ಇರಲಾರೆ,
ಮೂಸುತ್ತ ಅದನೊಮ್ಮೆ ಬೇಲಿಗೆಸೆದೆ;
ಹೂವಾಡಿಗರ ಹುಡುಗಿ ನನ್ನ ಕೇಳಿದಳಿಂತು;
‘ಏಕೆ ದೊರೆ, ನಾ ಕೊಟ್ಟ ಹೂವು ಹಳತೆ?’
ಊರ ಬೇಲಿಯ ಮೇಲೆ ಹೂ ಅರಳುವುದ ಕಂಡೆ,
ನೆನಪಾಯಿತೆನಗೆ ಹೂವದಂಡೆ:
ಜಾಜಿ ಮಲ್ಲಿಗೆ ಪಾರಿಜಾತ ಬಿಳಿಯ ಗುಲಾಬಿ –
ಕಂಬನಿಯ ಸುರಿಸುತ್ತ ಚೆಲುವ ಕಂಡೆ.
ಹೂವೆ ಮುನ್ನುಡಿ ನನ್ನ ಎಲ್ಲ ಕವಿತೆಗೆ, ಕತೆಗೆ,
ಹೂವ ಸಹವಾಸವನು ಮರೆಯಲಾರೆ;
ಚೆಲುವೆಯರ ಚೆಲುವೆ ಕಿಲಕಿಲನೆ ನಕ್ಕುದ ಕಂಡೆ,
ಬೈಗು ಬೆಳಗುಗಳಲ್ಲಿ ಅದನೆ ಕಂಡೆ.
ಹೂವಿನಧ್ಯಾಯ ಮುಗಿಯಿತು ಎಂದು ನಾ ನಡೆದೆ,
ಮನದಲ್ಲೆ ಅಮೃತವನು ಕಡೆದೆ, ನಗದೆ;
ಕೊನೆಯ ನುಡಿಯಾಗಿ ಹೂವ ಕಂಡವನು
ಹೆಣ್ಣ ನೋಡುತ್ತ ಹೂವನ್ನು ಎಸೆದೆ.
ಮಾಘಮಾಸದ ಗಾಳಿ ತಂಪಾಗಿ ಬೀಸಿತ್ತು,
ನಾನಂತು ಒಲವನ್ನು ಮರೆಯಲಾರೆ;
ಬಳ್ಳಿ ಬಳ್ಳಿಗಳಲ್ಲಿ ಹೂವರಳುವುದು ಸಹಜ;
ಹೂವಿಲ್ಲದೆಯೆ ನಾವಿಲ್ಲ ಲೋಕದಲ್ಲಿ.
ಮೊಗ್ಗರಳಿ ಹೂವಾಗಿ ನನ್ನ ಕರೆದುದ ಕಂಡೆ,
ಸೇವಂತಿಗೆಯ ಹತ್ತು ಹೊಲಗಳೊಳಗೆ;
ದೂರದೂರದ ನೆನಪು ನನ್ನ ಹತ್ತಿರ ಬಂತು,
ತುಂಬ ಹತ್ತಿರ ಬಂತು ನನ್ನ ಒಲವು.
ತಲೆಯ ತಗ್ಗಿಸಿ ನಾನು ಹೂಗಳ ಸೀಮೆಯಿಂದ
ಮರಳಿ ಬಂದೆನು ಮನೆಗೆ ಸಂಜೆಯಲ್ಲಿ;
ಹೂವಾಡಿಗರ ಹುಡುಗಿ ‘ಅಲ್ಲಿಗೆ ಹೋದುದೇಕೆ”‘
ಎಂದು ಕೇಳಿದಳಾಗ ಸಂತಸದಲಿ.
ಗಿಡದ ಹೂಗಳ ಕಂಡೆ, ಮುಡಿದ ಹೂಗಳ ಕಂಡೆ,
ಬಿಳಿಗುಲಾಬಿಯ ಕನಸು ತಣ್ಣಗಿತ್ತು;
ಅವಳ ಕೈಕುಲುಕಿದೆನು ಚೆಲುವಿನಾವರಣದಲಿ,
ಅವಳಿತ್ತ ಮುತ್ತೊಂದು ಬೆಚ್ಚಗಿತ್ತು.

 

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರ್)