ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಈ ದಿನ ಇಲ್ಲಿ ಕನ್ನಡದ ಅಗ್ರ ಪಂಕ್ತಿಯ ಬರಹಗಾರ ದೇವನೂರ ಮಹಾದೇವ ಬರೆದ ಲಾಲೀಪದವೊಂದಿದೆ. ತಮ್ಮ ಮೊಮ್ಮಗಳು ರುಹಾನಾಳನ್ನು ತೊಟ್ಟಿಲು ತೂಗಿ ಮಲಗಿಸಲು ಮಹಾದೇವ ಬರೆದ ಈ ಲಾಲೀಪದ ಕೆಂಡಸಂಪಿಗೆಯ ಇವತ್ತಿನ ಕವಿತೆ…

ಒಂದು ಲಾಲೀ ಪದ
ದೂರೀ ದೂರಿ | ದೂರೀ ದೂರಿ
ದೂರೀ ದೂರೀ| ದೂರಮ್ಮಾ ದೂರಿ
ದೂರು ಬಂತಮ್ಮಾ | ದೂರೀ ದೂರಿ
ದೂರು ಯಾರ ಮೇಲೆ| ದೂರೀ ದೂರಿ
ದೂರು ನಿನ್ನ ಮೇಲೆ| ದೂರೀ ದೂರಿ
ದೂರು ಕೊಟ್ಟವರಾರು| ದೂರೀ ದೂರಿ
ಕೃಷ್ಣ ಬಲರಾಮರು| ದೂರೀ ದೂರಿ
ಆ ಗೊಲ್ಲಾರ ಹುಡುಗಾರು| ದೂರೀ ದೂರಿ
ಬಲು ಪುಂಡು ಹುಡುಗಾರು| ದೂರೀ ದೂರಿ
ಓ ದೂರು ಕೊಟ್ಟವರೇ| ದೂರೀ ದೂರಿ
ಆ ದೂರಿಗೆ ಕಾರಣ| ದೂರೀ ದೂರಿ
ನೀ ಕ್ ಮೇಲೆ ಹೋಗುತಿದ್ದೆ| ದೂರೀ ದೂರಿ
ನೀ ಸ್ಪೀಡಾಗಿ ಹೋಗುತಿದ್ದೆ| ದೂರೀ ದೂರಿ
ಆ ಸ್ಪೀಡಿಗೆ ಗಾಳಿ ಎದ್ದ್ದೂ| ದೂರೀ ದೂರಿ
ಆ ಕೃಷ್ಣಾನ ನವಿಲುಗರೀ| ದೂರೀ ದೂರಿ
ಮೇಲಕ್ಕೆ ಹಾರೀತು | ದೂರೀ ದೂರಿ
ನಿನ ಕ್ ಮೇಲೆ ಕೂತಿತು | ದೂರೀ ದೂರಿ
ಇದು ದೂರಿಗೆ ಕಾರಣಾ

ದೂರೀ ದೂರಿ
ನಿನ ಮೇಲೆ ದೂರ್ ಕೇಳೀ ನಿಮ್ಮವ್ವ | ದೂರೀ
ದುಕ್ಕಳಿಸಿ ಅಳುತಾಳೆ| ದೂರೀ ದೂರಿ
ನಿಂತವ್ನೆ ಜಗಳಕ್ಕೆ ನಿಮ್ಮಣ್ಣ | ದೂರೀ

ದೂರದ ಊರಿಂದ | ದೂರೀ ದೂರಿ
ನಿಮ್ಮ ದೊಡ್ಡಮ್ಮ ಬಂದವ್ಳೆ| ದೂರೀ ದೂರಿ
ನೀ ದೂರು ಕೊಡು ಅಂತವ್ಳೆ| ದೂರೀ ದೂರಿ
ಆ ಕೃಷ್ಣನ ನವಿಲುಗರಿ| ದೂರೀ ದೂರಿ
ನನ ಬೈಕ್ ಮೇಲೆ ಕೂತಿತು| ದೂರೀ ದೂರಿ
ಈ ದೂರು ಕೊಡು ಅಂತವ್ಳೆ| ದೂರೀ ದೂರಿ
ಈ ನಿಮ್ಮಾಟ ಕಂಡೂ | ದೂರೀ ದೂರಿ
ನಿಮ್ಮಜ್ಜಿ ನಗುತವುಳೆ| ದೂರೀ ದೂರಿ
ನಗು ತುಂಬಿ ನಗುತವಳೆ| ದೂರೀ ದೂರಿ
ದೂರೀ ದೂರಿ | ದೂರಿ ದೂರೀ
ದೂರಮ್ಮ ದೂರಿ| ದೂರೀ ದೂರಿ
ದೂರು ಬಂದರೆ ಬರಲಿ| ದೂರೀ ದೂರಿ
ದೂರು ನೂರೇ ಇರಲಿ| ದೂರೀ ದೂರಿ
ನೀ ನಿದ್ದೆಯ ಮಾಡವ್ವಾ| ದೂರೀ ದೂರಿ

 

(ಚಿತ್ರ: ರೂಪಶ್ರೀ ಕಲ್ಲಿಗನೂರ್)