ದೀಪಾವಳಿ ಬಂತಂದ್ರೆ ದಿನಪತ್ರಿಕೆಯ ಸಾಪ್ತಾಹಿಕಗಳಲ್ಲಿ ದೀಪಾವಳಿಯ ಸಾಂಕೇತಿಕ ಅರ್ಥ, ಆಚರಣೆಗಳು, ಆಚರಣೆಗೆಳ ಹಿಂದಿರುವ ಕತೆ ಎಲ್ಲವೂ ದೀಪಾವಳಿಮಯವಾಗಿರುತ್ತದೆ. ಪ್ರತಿ ಬಾರಿಯೂ ಬಂದಿದ್ದೇ ಬರುತ್ತಲ್ಲ ಅನ್ನಿಸುವ ಹೊತ್ತಿಗೆ ದೀಪಾವಳಿ ವಿಶೇಷಾಂಕಗಳು ಮಾತ್ರ ಹೊಸ ಕತೆಗಳನ್ನು, ಕವನಗಳನ್ನು, ಲೇಖನಗಳನ್ನು ಹೊತ್ತುತರುತ್ತೆ. ಹಬ್ಬದ ಗಲಾಟೆ ತಪ್ಪಿಸಿಕೊಂಡು ಕಡುಬೊ, ಹೋಳಿಗೆಯೊ ಜೀರ್ಣಿಸಿಕೊಳ್ಳುತ್ತಾ, ಸೋಮಾರಿಯಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡು ವಿಶೇಷಾಂಕದೊಳಗೆ ಮೈ ಮರೆಯುವುದಕ್ಕಿಂತ ಸುಖ ಇನ್ಯಾವ ಆಚರಣೆಗಳಲ್ಲಿದೆ ಅನ್ನಿಸಿಬಿಡುತ್ತೆ.

ಸಿಟಿಯಲ್ಲಿ ಜೀವಿಸುವವರಿಗೆ ಸೇಲ್ಸು, ಗಿಫ್ಟು, ಪಟಾಕಿಗಳ ಶಬ್ದ, ಹೊಗೆ, ಇತ್ಯಾದಿ ದೀಪಾವಳಿ ಸುಖವಾದರೆ ನಮಗೆ ಗೋಪೂಜೆ, ಕಾಯಿ ಬೆಲ್ಲ ತಿನ್ನುತ್ತಾ ಮನೆಮನೆಗೆ ಹೋಗುವುದು, ದನಕರುಗಳ ಪ್ರಸಾದದ ಸರ ಹರಿಯುವುದು, ರಾತ್ರಿ ಹಬ್ಬ ಕಳಿಸುವುದು ಕೊನೆಗೆ ಸರಿರಾತ್ರಿಯಲ್ಲಿ ಹಬ್ಬಾಡುವವರು (ಅಂಟಿಗೆ ಪಂಟಿಗೆ) ಬಂದು ನಿದ್ದೆಗಣ್ಣಲ್ಲಿ ಸಮಾ ಏರಿಸಿಕೊಂಡು ಹಾಡುವಲ್ಲಿಗೆ ನಮ್ಮ ಹಬ್ಬ ಮುಕ್ತಾಯವಾಗುತ್ತದೆ.

ಮಲೆನಾಡಿನ ಹಬ್ಬಗಳ ಆಚರಣೆಗಳ ಬಗ್ಗೆ ಪತ್ರಿಕೆಗಳಿಗೆ ಏನು ವ್ಯಾಮೋಹವೊ ತಿಳಿಯದು. ಅಂತು ಪ್ರತಿ ಹಬ್ಬದಲ್ಲೂ ಒಂದು ಪೇಪರಲ್ಲಾದ್ರೂ ಕೃಷಿ ಕುಟುಂಬದ ಆಚರಣೆಯ ವಿವರಗಳನ್ನು, ಒಂಥರಾ ನಾಸ್ಟಾಲ್ಜಿಯ ದಾಟಿಯಲ್ಲಿ ಬರೆದಿರ್ತಾರೆ. ಈಗ ಯೋಚಿಸಿದ್ರೆ ಕೃಷಿ ಕುಟುಂಬದಲ್ಲಿ ಹಬ್ಬಗಳ ನಿಜವಾದ ಅರ್ಥ `ಜಾಸ್ತಿ ಕೆಲಸ’ನೇನೊ ಅಂತ ಒಂದು ಗುಮಾನಿ ಬರ್ತಿದೆ. ಹುಡುಗ್ರಿಗೆ ಮಾತ್ರ ಹೊಸಬಟ್ಟೆ, ಪಟಾಕಿ, ಶಾಲೆಗೆ ರಜ. `ಕುರಿ ರೇಟು ಜಾಸ್ತಿಯಾಗಿ ಇಡಿ ಊರಿಗೆ ಒಂದು ಕುರಿ ಕಡಿಯೋದಕ್ಕೆ ಬಂದು ನಿಂತಿದೆ.

ಮನೆಗೊಂದು ಕೋಳಿ ಕೊಯ್ಯೋದು ಕಷ್ಟವಾಗ್ತಿದೆ. ಇಂತದ್ರಲ್ಲಿ ಏನು ಹಬ್ಬ ಮಾಡದ್ರಿ’ ಅಂತ ಕೆಲವರು ಗೊಣಗ್ತಿರ್ತಾರೆ.  ಹೊಸ ಮದುಮಕ್ಕಳು ಮೊದಲಸಲ ತವರುಮನೆಗೆ ಹಬ್ಬಕ್ಕೆ ಬರೋದಕ್ಕೆ `ಹಬ್ಬಗಾಣಿಕೆ` ಅಂತ ಹೇಳ್ತಾರೆ. ಅಳಿಯನಿಗೆ ಮಗಳಿಗೆ ಉಡುಗೊರೆ ಕೊಡ್ಬೇಕು. ಶ್ರೀಮಂತರ ಮನೆಗಳಲ್ಲಿ ಪೇಟೆಯಲ್ಲಿರೊ ಅಳಿಯ ಮಗಳು ಹೊಸತರದ ದೊಡ್ಡ ಕಾರು ತಂದು ಮನೆಮುಂದೆ ನಿಲ್ಲಿಸಿದ್ರಲ್ಲ ಸ್ವಲ್ಪ ಬೀಗೊಣ ಅಂತ ಹೊರಗೆ ಬಂದ್ರೆ – ಎಲ್ಲರ ಮನೆಯ ಮುಂದೂ ಒಂದಕ್ಕಿಂತ ಒಂದು ವಿಶೇಷವಾದ ಕಾರು ನಿತ್ಕೊಂಡಿರುತ್ತೆ.

`ಏನ್ರಿ ಹಬ್ಬದ್ದಿನ ಬರೀ ಸಿನಿಕ್ರಾಗಿ ಬರಿತೀದಿರಲ್ಲ` ಅಂತ ಬೈಯ್ಕೊಬೇಡಿ. ಒಲೆ ಮುಂದೆ ಬೆವರು ಸುರಿಸುಸ್ತಾ, ಹೊಗೆ ತಿಂತಾ ಹೋಳಿಗೆ ಮಾಡ್ಬೇಕು, ದನಕ್ಕೆ ಅಡಿಕೆ, ಪಚ್ಚೆತೆನೆ, ಚಂಡುಹೂ ಸಿಂಗಾರದ ಸರ ಮಾಡ್ಬೇಕು, ಕೊಟ್ಟಿಗೆ ತೊಳಿಬೇಕು, ಅಂಗಳ ಬಳಿಬೇಕು ಅಂತೆಲ್ಲ ನಾಳಿನ ಕೆಲಸ ನೆನಪು ಮಾಡ್ಕೊಳ್ತಾ ಇದನ್ನು ಬರೀತಾ ಇದ್ರೆ ಇನ್ನೇನಾಗುತ್ತೆ ಹೇಳಿ. ಮಕ್ಕಳ ಜೊತೆ ಮಕ್ಕಳಾಗುವುದು, ಪಟಾಕಿಯ ಸೌಂದರ್ಯ, ಪೂಜೆಯ ಮಧ್ಯೆ ಮುದನೀಡುವ ಗೋಕಂಬದಲಂಕಾರ, ಮನೆ ಮನೆಯಲ್ಲಿ ದೀಪಕ್ಕೆ ಎಣ್ಣೆ ಹಾಕಿಸಿಕೊಳ್ಳುವ ಹಬ್ಬಾಡುವವರ ಹಾಡುಗಳು, ಎಣ್ಣೆಸ್ನಾನ ಇವುಗಳೆಲ್ಲ ಸೊಗಸಾದ ವಿಷಯಗಳೇ.

ಪೂಜೆ, ಅಡುಗೆ ಕೆಲಸ, ಪಟಾಕಿಯ ಮಧ್ಯೆ ಯಾವುದೋ ಇದಕ್ಕಾಗಿಯೇ ಅಂತ ಹೇಳೋಕೆ ಬರದ ಕ್ಷಣಗಳಲ್ಲಿ ಮನಸ್ಸು ಹಬ್ಬಕ್ಕೆ ಸಂಭ್ರಮಿಸಿ, ಕತ್ತಲು ತೊಳಿಯೋ ದೀಪ, ನರಕಾಸುರನಂತ ನಮ್ಮೊಳಗಿನ ವಿಲನ್‌ನ ವಧೆ ಮಾಡುವುದು ಮುಂತಾದ ಅರ್ಥಗಳಿಗೆ ತಾಗಿಕೊಂಡಿರೊ ಯಾವುದೊ ಒಂದು ಭಾವ ಸುಳಿಯುತ್ತೆ. ಅದೇ ಹಬ್ಬದ ಖುಷಿ.