ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ ನಾಟುವಂತೇ ಗುರಿಯಿಟ್ಟು ಕೈಯಲ್ಲಿದ್ದ ಕೋಲನ್ನು ಬಿಸಾಡಿದಳು.
ದೀಪಾ ಫಡ್ಕೆ ಬರೆದ ಕಥೆ “ಗಂಧವಿಲ್ಲದ ಹೂವು” ನಿಮ್ಮ ಈ ಭಾನುವಾರದ ಓದಿಗೆ

 

ನಿತ್ಯದಂತೇ ತೋಟದಿಂದ ತಾಜಾ ಪೇರಳೆಗಳನ್ನು ಕೊಯಿದು ಸೆರಗಿನೊಳಗೆ ಗಂಟು ಕಟ್ಟಿಕೊಂಡು ಚಂದ್ರಭಾಗಾ ಜೋಶಿ ಮನೆಯತ್ತ ನಡೆಯತೊಡಗಿದಳು. ತೋಡಿಗೆ ಅಡ್ಡ ಹಾಸಿದ್ದ ಅಡಿಕೆ ಮರದ ಸಣ್ಣ ಸಂಕ ದಾಟುತ್ತಿರುವಾಗ ಕಣ್ಣು ಅಚಾನಕ್ಕಾಗಿ ನೀರಿನೆಡೆಗೆ ಹೋಯಿತು. ಒಂದಡಿಯಷ್ಟೇ ನೀರು ಹರಿಯುತ್ತಿತ್ತು. ಚಂದ್ರಕ್ಕನಿಗೆ ಸರ್ರನೆ ಸಿಟ್ಟು ಏರಿತು. `ಓಹ್, ಮೇಲ್ಮನೆ ಮಹಾದೇವನೊ ಅಥವಾ ಶ್ರೀನಿವಾಸನೋ ಯಾರೋ ಒಬ್ರು ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಲೆಕ್ಕದಲ್ಲಿ ಇವತ್ತು ನನ್ನ ತೋಟಕ್ಕೆ ನೀರು ಹಾಯಿಸುವ ದಿನ’ ಎಂದುಕೊಂಡು ಮನೆಯತ್ತ ಸರಸರನೇ ನಡೆಯತೊಡಗಿದಳು. `ಇಲ್ಲಾ ಈಗಲೇ ಮಹಾದೇವನ ಮನೆಗೆ ಹೋಗಿ ಹೇಳಿ ಬರೋಳು’ ಎಂದುಕೊಂಡು ತೋಟದ ಗಡೀಗೆ ಬಂದು ಮಹಾದೇವನ ಹೆಂಡತಿ ಸುಶೀಲಳ ಹೆಸರು ಹಿಡಿದು ಕೂಗಿದಳು. ಹತ್ತು ಸಾರಿ ಕರೆದ ಮೇಲೆ ಸುಶೀಲ ಅಂಗಳದ ಅಂಚಿನಿಂದ `ಏನು’ ಎನ್ನುವಂತೆ ಕೈ ಮಾಡಿ ಕೇಳಿದಳು. `ನಿನ್ನ ಗಂಡನಿಗೆ ಹೇಳು. ನೀರಿನಲ್ಲಿ ಮೋಸ ಮಾಡಬಾರದು ಅಂತ. ಲೆಕ್ಕದಲ್ಲಿ ಇವತ್ತು ನನ್ನ ತೋಟಕ್ಕೆ ನೀರು ಹಾಯಿಸುವ ದಿನ. ತೋಡು ನೋಡಿದರೆ ಪಾದ ಮುಳುಗುವಷ್ಟೇ ನೀರು ಹರಿತಿದೆ. ಇನ್ನು ತೋಟಕ್ಕೆ ಹೇಗೆ ಬಿಡೋದು. ನಾನೂ ನಿನ್ನಷ್ಟೇ ಕಟ್ಟ ಕಟ್ಟಲು ಪಾಲು ಕೊಟ್ಟಿದ್ದೇನೆ. ನೀರು ಕಟ್ಟಲಿಕ್ಕೆ ಹೇಳು ಅವನಿಗೆ’ ಎಂದು ಒಂದೇ ಉಸಿರಿನಲ್ಲಿ ಕಿರುಚಿದಳು. ಸುಶೀಲಾ,`ಅಯ್ಯೋ ಚಂದ್ರಕ್ಕಾ. ಸುಮ್ನೆ ಇಲ್ಲದ್ದು ಹೇಳಬೇಡ. ಅವ್ರು ಪೇಟೆಗೆ ಹೋಗಿದ್ದಾರೆ, ಮತ್ತೆ ನೀರು ಹಾಯಿಸುವವರು ಯಾರು? ಮಾರ್ಚ್ ತಿಂಗಳು ಕಳೀತಲ್ವ. ತೋಡಿನಲ್ಲಿ ನೀರೇ ಕಮ್ಮಿಯಾಗಿದೆ’ ಅಷ್ಟು ಹೇಳುತ್ತಿದ್ದಂತೇ ಚಂದ್ರಕ್ಕ `ನಂಗೆಲ್ಲ ಗೊತ್ತುಂಟು. ನಂಗೆ ಯಾರೂ ಇಲ್ಲಾಂತ ಇದೆಲ್ಲ ನಿಮ್ಮ ಆಟ. ನಂಗೆ ಅನ್ಯಾಯ ಮಾಡಿದರೆ ಬರ್ಕತ್ತಾಗುವುದಿಲ್ಲ ಯಾರೂ’ ಗೊಣಗುತ್ತಾ ಮನೆ ಕಡೆ ನಡೆದಳು. ಇಂಥ ಘಟನೆ ನಡೆದಾಗೆಲ್ಲ ಚಂದ್ರಭಾಗಾಳಿಗೆ ವಠಾರದವರೆಲ್ಲ ಸೇರಿ ತನಗೆ ಮೋಸ ಮಾಡುತ್ತಿದ್ದಾರೆ ಎಂದೇ ಅನಿಸುತ್ತಿತ್ತು.

ಶಾಪ ಹಾಕಿಕೊಂಡು ಮನೆಯತ್ತ ನಡೆಯುತ್ತಿದ್ದಂತೇ ಹಸಿವಾಗಿ ಹೊಟ್ಟೆಯೊಳಗೆ ಸಣ್ಣ ಶಬ್ದ ಗುಂಯ್.. ಎಂದು. ನಿನ್ನೆಯ ಗಂಜಿ ಉಳಿದಿದ್ದು ನೆನಪಿಗೆ ಬಂತು. ಅಂಗಳದ ಅಂಚಿಗೆ ಬಂದು ಉಸ್ಸ್.. ಎಂದು ಉಸಿರು ಬಿಟ್ಟದ್ದಷ್ಟೇ; ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ ನಾಟುವಂತೇ ಗುರಿಯಿಟ್ಟು ಕೈಯಲ್ಲಿದ್ದ ಕೋಲನ್ನು ಬಿಸಾಡಿದಳು. ತರಕಾರಿಗಿಂತಲೂ ಅಬ್ಬಲಿಗೆಯ ಸಾಲು ಹಾಳಾಗಿದ್ದು ಚಂದ್ರಕ್ಕನಿಗೆ ಬೇಸರ ಹುಟ್ಟಿಸಿತ್ತು. ಪೇಟೆಯ ಕಮ್ತಿ ಮಾಮನ ಮಗಳಿಗೆ ಅಬ್ಬಲಿಗೆ ತಂದುಕೊಡುವೆನೆಂದು ಹೇಳಿದ್ದೂ ನೆನಪಾದಾಗ `ಕರ್ಮ, ಯಾರು ಬಂದಿದ್ರೋ! ಪಾಪಿಗಳು. ದಣಪೆಯನ್ನೂ ಹಾಕದೇ ಹೋಗಿದಾರೆ’ ಎಂದು ಗೊಣಗುಟ್ಟುತ್ತಾ ಮನೆಗೆ ಬಂದು ಬಾಗಿಲಿಗೆ ಹಾಕಿದ್ದ ಚಿಲಕ ತೆಗೆಯುವಾಗ ಮೇಲ್ಮನೆಯ ಸಾವಿತ್ರಿಯ ಮಕ್ಕಳು ನಾಲ್ಕು ದಿನದ ಹಿಂದೆ ಪೇರಳೆಗೆಂದು ಬಂದವರು ಬೀಗ ಹಾಕದೇ ಇದ್ದ ತನ್ನ ಮನೆಯ ಬಾಗಿಲನ್ನು ನೋಡಿ, `ಬೀಗ ಹಾಕಲ್ವ ಚಂದ್ರತ್ತೆ’ ಎಂದು ವಿಚಾರಿಸಿದ್ದೂ ನೆನಪಾಯ್ತು. `ಯಾವ ಮಹಾ ಕೊಪ್ಪರಿಗೆ ಇದೆ ನನ್ನ ಮನೆಯಲ್ಲಿ ಎಂದು ಬೀಗ ಹಾಕಬೇಕು’ ಎಂದುತ್ತರಿಸಿದ್ದೂ ನೆನಪಿಗೆ ಬಂದು `ಇವತ್ತು ಪೇಟೆಗೆ ಹೋಗ್ತಾ ಆ ಮಕ್ಕಳಿಗೂ ನಾಲ್ಕು ಪೇರಳೆ ಕೊಟ್ಟೇ ಹೋಗಬೇಕು’ ಎಂದುಕೊಂಡು ಸೀರೆಯ ಗಂಟಿನಲ್ಲಿದ್ದ ಪೇರಳೆಗಳಲ್ಲಿ ಸ್ವಲ್ಪ ಹಣ್ಣಾಗಿದ್ದನ್ನು ತುಲಸೀಕಟ್ಟೆಯ ಕಲ್ಲಿನ ಮೇಲೆ ರಕ್ತೇಶ್ವರಿ ಭೂತಸ್ಥಾನದ ದಿಕ್ಕಿಗೆ ಮುಖವಾಗಿ ಇರಿಸಿ ಕೈ ಮುಗಿದಳು…. ಮನೆಯ ಒಳ ಬಂದು ಅಲ್ಲಿಯೇ ಇದ್ದ ಗೋಣಿಯ ಮೇಲೆ ಸೆರಗಿನಲ್ಲಿದ್ದ ಪೇರಳೆಗಳನ್ನು ಸುರಿದು ನಿನ್ನೆ ಕೊಯ್ದಿಟ್ಟ ಪೇರಳೆಗಳನ್ನು ತಾನು ನಿತ್ಯ ಪೇಟೆಗೆ ತಗೆದುಕೊಂಡು ಹೋಗುವ ತಂಗೀಸಿನ ಚೀಲದಲ್ಲಿ ಹಾಕಿಟ್ಟಳು.

ಹಿತ್ತಲಿಗೆ ಬಂದು ಕೈ ಕಾಲು ತೊಳೆದು ಮುಖಕ್ಕೆ ನೀರೆರೆದುಕೊಂಡಾಗ ಹಿತವೆನಿಸಿತು. ಎಣ್ಣೆ ಕಾಣದ ತಲೆಕೂದಲಿಗೆ ಜೇಡರ ಬಲೆ ಸುತ್ತಿಕೊಂಡಿತ್ತು. ಕೂದಲಿನ ಗಂಟನ್ನು ಬಿಚ್ಚಿಸಿ ಮತ್ತೆ ಮುರುಟಿ ಗಂಟು ಹಾಕಿಕೊಳ್ಳುವಾಗ ಕೈಗೆ ಜೇಡರ ಬಲೆಯ ಅಂಟು ತಾಗುತ್ತಿದ್ದಂತೇ ಹಿತ್ತಲಿನ ಗೋಡೆಗೆ ನೇತು ಹಾಕಿದ್ದ ಕನ್ನಡಿಯನ್ನೊಮ್ಮೆ ನೋಡಿದಳು. ಮಾಸಿದ್ದ ಕನ್ನಡಿಯಲ್ಲಿ ಕಂಡಷ್ಟು ಬಲೆ ತೆಗೆದು ಕೈಯಲ್ಲೇ ಬಾಚಿದಂತೆ ಮಾಡಿ ಮತ್ತೆ ಕೂದಲ ಗಂಟು ಕಟ್ಟಿಕೊಂಡಳು. ಪಕ್ಕದ ಕೋಣೆಯಿಂದ ಸರಸರ ಹರಿದಂತಹ ಸದ್ದು. `ಹೆಗ್ಗಣವೋ ಹಾವೋ ಇರಬೇಕು, ಮಲಗುವ ಕೋಣೆಗೆ ಬರದಿದ್ರೆ ಸಾಕು’ ಎಂದುಕೊಂಡಳು. ಒಂದು ಕಾಲದಲ್ಲಿ ದೊಡ್ಡ ಮನೆಯೇ ಆಗಿದ್ದ ಚಂದ್ರಕ್ಕನ ಮನೆ, ವರ್ಷಗಳು ಉರುಳಿದಂತೇ ಒಂದೊಂದೇ ಬದಿಯಿಂದ ಜರಿದು ಹೋಗುತ್ತಾ ಈಗ ಉಳಿದ ಎರಡು ಕೋಣೆಗಳಲ್ಲಿ ಒಂದು ತೆಂಗಿನಕಾಯಿ, ತೆಂಗಿನ ಗರಿ, ಕತ್ತಿ ಪಿಕ್ಕಾಸು ಹಾಕುವ ಕೋಣೆಯಾಗಿದ್ದರೆ ಇನ್ನೊಂದು ಕೋಣೆ ಅವಳ ವಾಸಕ್ಕೆ. ಕತ್ತಿ ಪಿಕ್ಕಾಸು ಇಡುವ ಕೋಣೆಯ ಗೋಡೆ ಜರಿದು ಬಿದ್ದು ಹಾವು ಗೀವೂ ಬಂದು ಸೇರಿಕೊಂಡು ದಿನಗಟ್ಟಲೆ ವಾಸ ಮಾಡುವುದೂ ಇತ್ತು. ಒಂದು ವರ್ಷ ಸುರಿದಭಾರೀ ಮಳೆನೀರಿನಲ್ಲಿ ತೇಲಿಕೊಂಡು ಬಂದ ಕಾಳಿಂಗಸರ್ಪ ದಿನಗಟ್ಟಳೇ ಚಂದ್ರಕ್ಕನ ಪಕ್ಕದ ಕೋಣೆಯಲ್ಲಿ ಇದ್ದು ಸಿಕ್ಕಿದ್ದ ಹೆಗ್ಗಣ ತಿಂದುಕೊಂಡು ಇದ್ದಾಗಲೂ ಅವಳು ಹೆದರಿರಲಿಲ್ಲ. ಅದನ್ನು ಕೇಳಿಯೇ ವಠಾರದ ಜನರಿಗೆ ಗರ್ಭದಲ್ಲಿ ಚಳಿ ಕೂತಂತೆ ಆಗಿತ್ತು. `ಅದೊಂದು ನಮೂನಿ ಮರ್ಲು ಹೆಂಗಸಪ್ಪಾ’ ಎಂದು ಮಾತಾಡುತ್ತಿದ್ದರು.

ಒಳ ಬಂದು ಗಂಜಿಯನ್ನು ಬಿಸಿ ಮಾಡಿಕೊಳ್ಳಲೂ ಉದಾಸೀನವೆನಿಸಿತು. ಬಟ್ಟಲಿಗೆ ಸುರಿದುಕೊಂಡು ಉಪ್ಪಿನಕಾಯಿಯೊಂದಿಗೆ ತಿನ್ನಲಾರಂಭಿಸಿದಳು. ಡಬ್ಬಿಯಲ್ಲಿ ಉಳಿದಿದ್ದ ಸ್ವಲ್ಪ ಉಪ್ಪಿನಕಾಯಿ ನೋಡಿ `ಸಾವಿತ್ರಿಯತ್ರ ಸ್ವಲ್ಪ ಉಪ್ಪಿನಕಾಯಿ ಕೇಳಬೇಕು’ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇದ್ದ ಹಾಗೇ ನೆತ್ತಿಗೇರಿ ಕೆಮ್ಮು ಶುರುವಾಯ್ತು. ಗಟಗಟನೆ ನೀರು ಕುಡಿದು ಸುಮ್ಮನೇ ಗೋಡೆಗೊರಗಿ ಕೂತಳು. ಹೀಗೆ ಕೂತಾಗೆಲ್ಲ ಗಂಡನ ಅಣ್ಣನ ಮಗ ಮಾಧವನ ಮಾತು ನೆನಪಿಗೆ ಬರೋದು. ಗಂಡ ಸತ್ತ ವರ್ಷದಲ್ಲಿ ಚಂದ್ರಕ್ಕ ಒಂಟಿಯೆಂದು ಭಾವ ಮಗನನ್ನು ಕಳಿಸಿದ್ದ. ಇನ್ನೂ ಮೀಸೆ ಸರಿ ಬಾರದಿದ್ದ ಮಾಧವ, ಆಳಿನತ್ರ `ಈ ಕಾಕಿಗೆ ತೋಟದ ವ್ಯವಹಾರ ಏನೂ ಗೊತ್ತಿಲ್ಲ. ಸ್ವಲ್ಪ ಪಿರ್ಕಿ ಹೆಂಗ್ಸು ಬೇರೆ. ಮುಂದೆ ಹೇಗಿದ್ರೂ ಈ ಆಸ್ತಿ ನಂಗೇ ಬರೋದು, ಹಾಗೆ ಬಂದೆ ಅಷ್ಟೇ. ನನ್ನ ತಮ್ಮ ಕೇಶವನೂ ಚೊಟ್ಟ, ಕಾಲು ಸರಿಯಿಲ್ಲ ಅವನಿಗೆ, ಇನ್ಯಾರಿಗೆ ಇದೆಲ್ಲ. ಇಲ್ಲಿ ನೋಡಿದ್ರೆ ಇದು ಮನೆಯಾ ಹಟ್ಟಿಯಾ ಗೊತ್ತಾಗುವುದಿಲ್ಲ. ಹಾಗೆ ಇಟ್ಕೊಂಡಿದಾಳೆ…’ ಎಂದಿದ್ದೆಲ್ಲ ನೆನಪಿಗೆ ಬಂದು ನಾಳೆ ಕಮ್ತಿ ಮಾಮನತ್ರ ಮಾತಾಡಬೇಕು ಎಂದುಕೊಂಡು ಒತ್ತಿ ಬರುತ್ತಿದ್ದ ಕೆಮ್ಮು ನಿಲ್ಲದೇ ಹೋದಾಗ ಎದ್ದುಉಳಿದ ಸ್ವಲ್ಪ ಗಂಜಿಯನ್ನು ಹೊರಗಡೆ `ಕುಂಯಿ..ಕುಂಯಿ’ ಎಂದು ಬೊಬ್ಬೆ ಹೊಡೆಯುತ್ತಿದ್ದ ನಾಯಿಗೆ ಹಾಕಿದಳು.

******

ದಕ್ಷಿಣಕನ್ನಡದ ಮಂಜಾಡಿಯ ಒಂದು ಸಣ್ಣ ಗ್ರಾಮ, ನೀರ್ಸಾಲು. ಮಂದಾಕಿನಿಯಂಥ ನದಿಯೊಂದು ಅಲ್ಲಿ ವರ್ಷಪೂರ್ತಿ ಝುಳಝಳವೆಂದು ಹರಿಯುತ್ತಿತ್ತು. ಆ ನದಿತೀರದ ಗ್ರಾಮಕ್ಕೆ ಅಡಿಕೆ ತೋಟದ ಕೃಷಿಗಾಗಿ ನದಿಗೆ ಅಡ್ಡ ಕಟ್ಟ ಕಟ್ಟಿ ನೀರಿನ ಹಂಚಿಕೆ ಮಾಡುತ್ತಿದ್ದುದರಿಂದ ಈ ನೀರ್ಸಾಲು ಎಂಬ ಹೆಸರು ಬಂತೋ ಏನೋ! ಆ ನೀರು ಹಂಚಿಕೆಯಾಗುವ ಎಂಟ್ಹತ್ತು ಮನೆಗಳಲ್ಲಿ ಕೊನೆಯ ಮನೆ ಚಂದ್ರಭಾಗಾ ಜೋಶಿಯದು. ಅಡಿಕೆ ತೋಟಗಳದ್ದೇ ಕಾರುಬಾರಿನ ವಠಾರದಲ್ಲಿ, ಗಂಡ ಸತ್ತು ಮಕ್ಕಳೂ ಇಲ್ಲದ ಚಂದ್ರಕ್ಕಳಿಗೆ ಅಡಿಕೆಗಿಂತಲೂ ತೋಟದಲ್ಲಿದ್ದ ನೂರಾರು ಪೇರಳೆ ಗಿಡಗಳೇ ಜೀವನಾಧಾರವಾಗಿದ್ದವು. ಅಡಿಕೆ ಕೊಯಿಲು, ವರ್ಷಕ್ಕೆರಡು ಬಾರಿ ಮರಗಳಿಗೆ ಬಿಡುವ ಔಷಧಿಗೆ ಆಗುವ ಖರ್ಚು ಲೆಕ್ಕ ಹಾಕಿದಾಗ ಅಡಿಕೆ ಮಾರಿ ಬರುವ ದುಡ್ಡಿಗಿಂತ ಖರ್ಚೇ ಹೆಚ್ಚು ಎಂದು, ಅಡಿಕೆ ಕೃಷಿಗಿಂತ ಪೇರಳೆ ಪೇಟೆಗೆ ಕೊಂಡೊಯ್ದು ಮಾರುವುದೇ ಸುಲಭ ಎನಿಸಿತ್ತು. ತೋಟ ಗೇಣಿಗೆ ತೆಗೆದುಕೊಂಡ ಇಸ್ಮಾಯಿಲ್ ವರ್ಷದಿಂದ ವರ್ಷಕ್ಕೆ ಕೊಡುತ್ತಿದ್ದ ಪುಡಿಕಾಸು ಕಮ್ಮಿಯಾದಾಗ ಪೇರಳೆ ಫಸಲನ್ನು ಬಿಟ್ಟು ಅಡಿಕೆಯನ್ನು ಮಾತ್ರ ಗೇಣಿಗೆ ಕೊಟ್ಟಿದ್ದಳು.

ಚಂದ್ರಕ್ಕನ ದಿನಚರಿ ಬೆಳಗಿನ ಎಳೆ ಬಿಸಿಲು ಎಚ್ಚರಿಸುತ್ತಿದ್ದಂತೇ ತೋಟಕ್ಕೆ ಹೋಗಿ ಪೇರಳೆ ಕೊಯ್ಯುವುದರಿಂದಲೇ ಆರಂಭ. ಗೊಂಚಲು ತುಂಬ ಹಣ್ಣಿದ್ದ ಮರದಲ್ಲಿ ಹಕ್ಕಿಗಳು ತಿಂದು ಉಳಿಸಿದ ಪೇರಳೆ ನೋಡಿದಾಗ ಹಕ್ಕಿಗಳ ಮೇಲೆ ಕೋಪ ಬರುವುದಿತ್ತು. ಅವುಗಳನ್ನು ಓಡಿಸಿ ಕೈಗೆ ಸಿಗದೇ ಆಟವಾಡಿಸುವ ಎತ್ತರದ ಪೇರಳೆ ಕೊಂಬೆಯನ್ನು ಕೊಕ್ಕೆಯಿಂದ ಹಗುರವಾಗಿ ಬಾಗಿಸಿ ಪೇರಳೆ ಕಿತ್ತು ಉಳಿದ ಸಣ್ಣಸಣ್ಣ ಕಾಯಿಗಳಿಗೆ ಏಟಾಗದಂತೆ ಕೊಯ್ಯುತ್ತಿದ್ದಳು. ಅಷ್ಟೇ ಪ್ರೀತಿ ಅವಳಿಗೆ ಅಬ್ಬಲಿಗೆ ಮೇಲೆ. ಕೈಗೆಟುವ ಪೇರಳೆ ಅವಳ ನಿತ್ಯದ ಗಂಜಿ ಖರ್ಚಿಗೂ ಜೊತೆಯಲ್ಲಿ ವಾರಕ್ಕೊಮ್ಮೆ ಐದಾರು ದೊಡ್ಡ ಮಾಲೆಗಾಗುವಷ್ಟು ಸಿಗುತ್ತಿದ್ದ ಅಬ್ಬಲಿಗೆಯಿಂದ ಕಾಪಿಪುಡಿಗಾಗುವಷ್ಟು ದುಡ್ಡು ಸಿಗುತ್ತಿತ್ತು. ಉಳಿದ ಹೂಗಳಂತೇ ಸಂಜೆಯಾಗುತ್ತಿದ್ದಂತೇ ಗಿಡದಲ್ಲಿ ಬಾಡದ, ವಾರಗಟ್ಟಲೇ ಬಿಸಿಲಿಗೆ ಮೈಯೊಡ್ಡಿ ನಿಂತರೂ ಸ್ವಲ್ಪವೂ ಬಣ್ಣಗೆಡದೇ ಗಿಡದಲ್ಲಿ ತೂಗಿಕೊಂಡಿರುವ ಅಬ್ಬಲಿಗೆ ಎಂದರೆ ಚಂದ್ರಕ್ಕನಿಗೆ ಅಕ್ಕರೆ. ಪುರುಸೊತ್ತು ಸಿಕ್ಕಾಗ ಕೊಯಿದು, ರಾತ್ರೆ ದೀಪದ ಬೆಳಕಿನಲ್ಲಿ ಮಾಲೆ ಕಟ್ಟಿ ಬಾಳೆಎಲೆಯಲ್ಲಿ ಸುತ್ತಿಟ್ಟರೆ ನಾಲ್ಕು ದಿನದವರೆಗೂ ಹಾಳಾಗದು ಎನ್ನುವ ಯೋಚನೆಯಿಂದ ಅಬ್ಬಲಿಗೆಯೂ ಅವಳಿಗೆ ಪೇರಳೆಯಂತೇ ಜೀವನಾಧಾರವಾಗಿತ್ತು. ಹಾಗೇ ಎರಡು ಕೊಡ ಹೆಚ್ಚು ಅಬ್ಬಲಿಗೆ ಬುಡಕ್ಕೆ ನೀರು ಸುರಿಯುವುದೂ ಇತ್ತು.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಎಣ್ಣೆ ಕಾಣದ ತಲೆಕೂದಲಿಗೆ ಜೇಡರ ಬಲೆ ಸುತ್ತಿಕೊಂಡಿತ್ತು. ಕೂದಲಿನ ಗಂಟನ್ನು ಬಿಚ್ಚಿಸಿ ಮತ್ತೆ ಮುರುಟಿ ಗಂಟು ಹಾಕಿಕೊಳ್ಳುವಾಗ ಕೈಗೆ ಜೇಡರ ಬಲೆಯ ಅಂಟು ತಾಗುತ್ತಿದ್ದಂತೇ ಹಿತ್ತಲಿನ ಗೋಡೆಗೆ ನೇತು ಹಾಕಿದ್ದ ಕನ್ನಡಿಯನ್ನೊಮ್ಮೆ ನೋಡಿದಳು.

ನೀರ್ಸಾಲಿನಲ್ಲಿ ಚಂದ್ರಕ್ಕನ ಅಸ್ತಿತ್ವ, ಪೇರಳೆ ಮಾರುವ ಹೆಂಗಸಾಗಿತ್ತೇ ಹೊರತು ಸ್ವಂತದ ಜಂಜಾಟಗಳಲ್ಲೇ ಬಿದ್ದಿದ್ದ ಉಳಿದವರಿಗೆ ಮತ್ತೇನೂ ವಿಶೇಷವಾಗಿರಲಿಲ್ಲ. ಗಂಡನಿದ್ದಾಗ ಉಳಿದ ಮನೆಗಳ ಜಂಬರಗಳಿಗೆ ಒಂದು ಆಮಂತ್ರಣವಾದರೂ ಬರುತ್ತಿತ್ತು. ಗಂಡ ಹೋದ ಹಾಗೆ ಅದೂ ನಿಂತು ಹೋಗಿತ್ತು. ಕೀರಲು ಕಂಠದಲ್ಲಿ ಮಾತಾಡುವ ಕಚ್ಚೆ ಸೀರೆಯ ಒಂದು ಹೆಂಗಸಾಗಿತ್ತು ಅಷ್ಟೇ. ಎದುರು ಕಣ್ಣಿಗೆ ಬಿದ್ದಾಗ `ಹೊ, ಏನು ಚಂದ್ರಕ್ಕ’ ಅಂತನೋ ಅಥವಾ ಕೆಲವರಿಗೆ `ಚಂದ್ರಿ’ ಅಷ್ಟೇ ಆಗಿದ್ದಳು. ಒಮ್ಮೊಮ್ಮೆ ಯಾವುದಾದರೂ ಮನೆಗೆ ಪೇರಳೆ ಕೊಡಲೆಂದು ಹೋಗಿದ್ದಾಗ ಅಲ್ಲಿ ಮರುದಿನ ಜಂಬರವೆಂದು ಚಂದ್ರಕ್ಕನಿಗೆ ಅರಿವಾಯಿತು ಎಂದೊಡನೇ, ಆ ಮನೆಯೊಡತಿ, `ನೋಡು ಚಂದ್ರಕ್ಕಾ, ಎಲ್ಲಾ ಮನೆಗಳಿಗೆ ನಿಜಕ್ಕೂ ಹೇಳಲಿಲ್ಲ. ನೀನು ಮಾತ್ರ ಸಂಜೆ ಪೇಟೆಗೆ ಹೋಗುವಾಗ ಬಂದು ಹೋಗು’ ಎಂದೂ ಉದಾರವಾಗಿ ಹೇಳುವುದಿತ್ತು. ಆಗೆಲ್ಲ ಭಾರೀ ಅವಮಾನ, ಬೇಸರವಾಗಿ ಅವಳೂ ತಿರುಗಿ, `ತುಂಬಾ ಜನರಿಗೆ ಹೇಳಲಿಲ್ಲ ಅಂದ್ರೂ ಚಪ್ಪರದ ಅಟ್ಟಣಿಗೆ ಭಾರೀ ಜೋರಲ್ಲೇ ಉಂಟು’ ಎಂದು ಹೇಳಿಯೇ ಬಿಡುತ್ತಿದ್ದಳು. ಆ ಮಾತನ್ನು ಮನೆಯೊಡತಿ ಕೇಳಿಸದವಳಂತೇ ಒಳ ಹೋಗಿ ಬಿಟ್ಟಾಗ `ನಾನೂ ಬಿಡಲಿಲ್ಲ, ಮಾತು ವಾಪಾಸು ಕೊಟ್ಟೇ ಬಿಟ್ಟೆ’ ಎನ್ನುವ ಖುಷಿಯಲ್ಲಿ ಚಂದ್ರಕ್ಕ ಅಲ್ಲಿಂದ ಹೊರಡುತ್ತಿದ್ದಳು.

ಒಂದು ಕಾಲಕ್ಕೆ ಬಿಳುಪೇ ಆಗಿದ್ದವಳ ಚರ್ಮ ಬಿಸಿಲಿಗೆ ಪೇರಳೆ ಕೊಯ್ಯಲು ಹೋಗಿ ಕಂದು ಬಣ್ಣಕ್ಕೆ ತಿರುಗಿತ್ತು. ಮುಖದ ಮೇಲೆಲ್ಲ ಬಿಸಿಲಿಗೆ ಸುಟ್ಟ ಕಲೆಗಳು. ಒಂಭತ್ತು ಗಜದ ಕಚ್ಚೆ ಸೀರೆಯಲ್ಲಿ ನಾಲ್ಕುವರೆ ಅಡಿಯ ಪುಟ್ಟದೇಹ ಮುಳುಗಿ ಹೋದಂತೇ ಕಾಣುತ್ತಿತ್ತು. ಒಮ್ಮೊಮ್ಮೆ ಈ ಕಾಸ ಹಾಕಿ ಉಡುವುದನ್ನು ಬಿಟ್ಟು ಉಳಿದವರಂತೇ ಸೀರೆಯುಡಬೇಕು ಎಂದುಕೊಂಡರೂ ಚಂದ್ರಕ್ಕನಿಂದ ಅದೊಂದು ಸಾಧ್ಯವಾಗಿರಲಿಲ್ಲ. ಸಾವಿತ್ರಿ ಆಗಾಗ `ನೀನೂ ಸೀರೆಯುಡು ಚಂದ್ರಕ್ಕ, ಈ ಕಾಸ ಕಷ್ಟ ಅಲ್ವಾ’ ಎಂದರೆ `ಕಾಸ ಅಭ್ಯಾಸ ಆಗಿದೆ… ಈ ಕಷ್ಟದ ಹಾಗೇ.. ಅದನ್ನೂ ಬಿಡು ಅಂದ್ರೆ…… ಮತ್ತೇನಿದೆ ಬದುಕಲಿಕ್ಕೆ’ ಪಟ್ಟೆಂದು ಮಾತು ಬರುತ್ತಿತ್ತು. ಪೇಟೆಯಲ್ಲಿ ಯಾರಾದ್ರೂ ನೀರ್ಸಾಲು ವಠಾರದವರ ಬಳಿ `ಪೇರಳೆ ಚಂದ್ರಮ್ಮಾ ನಿಮ್ಮ ವಠಾರವೇ ಅಲ್ವಾ, ಅದೇ ಕಚ್ಚೆ ಸೀರೆಯುಡ್ತಾರಲ್ವ’ ಎಂದರೆ ನೀರ್ಸಾಲಿನ ಜನ ಕೊಂಕಿಂದ `ಹು ಅದೊಂದು.. ವೇಷ ಅದರದ್ದು’ ಎಂದು ಚಂದ್ರಕ್ಕನ ಪರಿಚಯ ಇದೆ ಅಂದ್ರೆ ಎಲ್ಲಿ ಅವರ ಗೌರವಕ್ಕೆ ಧಕ್ಕೆ ಆಯ್ತೋ ಎನ್ನುವಂತೆ ಸಿಡುಕುತ್ತಿದ್ದರು.

ಇದನ್ನೆಲ್ಲ ಚಂದ್ರಕ್ಕನ ಮುಂದೆ ಹೇಳುವ ದಮ್ಮೂ ಯಾರಿಗೂ ಇರಲಿಲ್ಲ. ಪಟಾಕಿಯಂತೇ ಮಾತು ಸಿಡಿಸಿ ಮುಖಕ್ಕೆ ಮಂಗಳಾರತಿ ಮಾಡಿ ಬಾಯಿ ಮುಚ್ಚಿಸಿಬಿಡುತ್ತಿದ್ದಳು. ಕ್ಷಣದಲ್ಲೇ ಕಣ್ಣು ತುಂಬಿಕೊಂಡು ಸೊರಸೊರ ಎಂದು ಮೂಗೊರೆಸುತ್ತಾ ಕೈಯಾಡಿಸುತ್ತಾ ಗೊಣಗುಟ್ಟಿಕೊಂಡು ಹೋಗುವುದಿತ್ತು. ನದಿಗೆ ವರ್ಷಕ್ಕೊಮ್ಮೆ ಅಡ್ಡ ಕಟ್ಟುವ ಕಟ್ಟದ ಖರ್ಚನ್ನು ವಠಾರದ ಎಲ್ಲ ಮನೆಗಳೂ ಭಾಗ ಮಾಡಿ ದುಡ್ಡು ಹಾಕುವಾಗ, ತಾನೂ ತನ್ನ ಪಾಲಿನ ದುಡ್ಡನ್ನು ವಠಾರದ ಯಾರೊಬ್ಬರೂ ಅವಳಲ್ಲಿ ಕೇಳದಿದ್ದರೂ, `ನಿಮ್ಮ ಋಣ ನಂಗೆ ಬೇಡ’ ಎಂದು ಯಾರದಾದರೂ ಒಬ್ಬರ ಮನೆಯ ಮೇಜಿನ ಮೇಲೆ ಟಪ್ಪೆಂದು ಇರಿಸಿಯೇ ಹೋಗುತ್ತಿದ್ದಳು. ನೀರ್ಸಾಲಿನಲ್ಲಿ ಅವಳದ್ದು ಕೊನೆಯ ಮನೆಯಾದ್ದರಿಂದ ಉಳಿದೆಲ್ಲರ ತೋಟಗಳನ್ನು ದಾಟಿ ಅವಳ ತೋಟದ ತೋಡಿಗೆ ನೀರು ಬರುವಷ್ಟರಲ್ಲಿ ಅದು ಸಣ್ಣ ಹರಿವಾಗಿ ಬಂದಾಗ ತಾನೂ ಕಟ್ಟ ಕಟ್ಟಲು ಪಾಲು ಕೊಟ್ಟಿದ್ದೆನೆಂದು ಮುಲಾಜಿಲ್ಲದೇ ಜಗಳವಾಡಿ ಬರುತ್ತಿದ್ದಳು. ನಾಲ್ಕುವರೆ ಅಡಿ ಎತ್ತರದ ಜೀವಕ್ಕೆ ಸಾವಿತ್ರಿಯ ಮೈದುನ, ಸುಧೀರ, ಸಾವಿತ್ರಿಯೊಂದಿಗೆ ಅವಳು ಮಾತಾಡುತ್ತಿದ್ದಾಗ ನಡುವೇ ಬಂದು, `ಏನು ಕುಂಟ್ಯಮ್ಮಾ. ಒಳ್ಳೆ ಪೇರಳೆ ಇದ್ರೆ ಕೊಡು ನೋಡುವಾ’ ಎಂದರೆ ಸಾಕು, ಸಿಟ್ಟು ಭುಗಿಲೇಳುತ್ತಿತ್ತು. ಅವನು ಮಾತು ಮುಗಿಸುವ ಮೊದಲೇ, ಚಂದ್ರಕ್ಕ, `ಕುಂಟ್ಯಮ್ಮಾ ನಿನ್ನ ಅಜ್ಜಿ. ನಿನ್ನ ಅತ್ತಿಗೆ ಸಾವಿತ್ರಿಯೇನು ಭಾರೀ ಉದ್ದ ಇದ್ದಾಳಾ? ಬಡವ್ರು, ಯಾರೂ ಹಿಂದಿಲ್ಲ ಮುಂದಿಲ್ಲ ಅಂದ ಕೂಡಲೇ ನಿಮ್ಗೆ ತಾತ್ಸಾರ, ಸಸಾರ ಅಷ್ಟೇ’ ಎಂದು ಬಿಡದೇ ಅನ್ನುತ್ತಿದ್ದಳು. ಇವರ ಜಗಳ ನೋಡಿ ಸಾವಿತ್ರಿ, `ಅಲ್ಲಾ ಚಂದ್ರಕ್ಕ, ನಿಮ್ಮ ಗಲಾಟೆಯಲ್ಲಿ ನನ್ನನ್ನು ಯಾಕೆ ನಡುವೆ ಹೊರಳಾಡಿಸೋದು’ ಎಂದರೆ ಸುಮ್ಮನೆ ಏನೋ ಕೆಣಕಿದ ಖುಷಿಯಿಂದ ಚಂದ್ರಕ್ಕ ನಗುತ್ತಿದ್ದಳು. `ನೋಡು ಸಾವಿತ್ರಿ, ಮನುಷ್ಯನಿಗೆ ಒಂದೋ ತಾಯಿ ಬೇಕು, ಇಲ್ಲಾ ಬಾಯಿ ಬೇಕು. ಎರಡೂ ಇಲ್ಲದಿದ್ರೆ ಸಾಯಬೇಕು. ನಂಗೆ ತಾಯಿ ಇಲ್ಲ, ನಂಗೆ ಎಂಟ್ಹತ್ತು ವರ್ಷವಿದ್ದಾಗಲೇ ಸತ್ತು ಹೋದ್ಲು. ಹಾಗೇ ಮಲತಾಯಿ ನನ್ನನ್ನು ಈ ಕೊಂಪೆಗೆ ಮದುವೆ ಮಾಡಿ ಕೊಟ್ಟದ್ದು. ಇಲ್ಲದಿದ್ರೆ ಈ ಚೊಟ್ಟನಿಗೆ ಯಾರು ಹುಡುಗಿ ಕೊಡ್ತಿದ್ರು. ಈಗ ನೋಡು ಬಾಯಿಬಲ ಇದ್ದ ಕಾರಣನೇ ಬದುಕ್ತಾ ಇದೇನೆ’ ಎನ್ನುತ್ತಾ ಸಾವಿತ್ರಿ ಕೊಟ್ಟ ದುಡ್ಡು ತೆಗೆದುಕೊಂಡು ಹೊರಡಲು ಅನುವಾಗುತ್ತಿದ್ದಳು.

ಮೈದುನ ಆಚೆ ಹೋದದ್ದು ತಿಳಿದೊಡನೇ ಸಾವಿತ್ರಿ, `ಹೌದಾ ಚಂದ್ರಕ್ಕ. ಹೀಗೆ ಕೇಳ್ತೆನೆ ಅಂತ ಬೇಜಾರು ಮಾಡ್ಕೊಬೇಡ. ನಿಂಗೆ ಮೊದಲೇ ಮೂಗಿನ ಮೇಲೆ ಕೋಪ. ಮೊನ್ನೆ ನಡುಮನೆ ಜಂಬರದಲ್ಲಿ ಮಾತಾಡ್ತಿದ್ರು. ಆ ಇಸ್ಮಾಯಿಲ್ ಬ್ಯಾರಿ, ಅದೇ ನೀನು ಅಡಿಕೆ ಫಸಲು ಗೇಣಿಗೆ ಕೊಟ್ಟಿದ್ದಿಯಲ್ವ ಅವನು, ರಾತ್ರೆ ಕೂಡ ನಿನ್ನ ಮನೆಯಲ್ಲಿ ಇದ್ದ ಅಂತ. ಬೆಳಿಗ್ಗೆ ಅವ ಎದ್ದು ಹೋದಾಗ ಯಾರೋ ನೋಡಿದ್ರಂತೆ’. ಸಾವಿತ್ರಿ ಮಾತು ಮುಗಿಸುವಷ್ಟರಲ್ಲಿ `ಯಾವ ಬೋಳಿ ಮಗ ಹಾಗೆ ಹೇಳಿದ್ದು. ಯಾರದು ನನ್ನನ್ನು ಪ್ರಶ್ನೆ ಕೇಳುವ ಹಕ್ಕು ಇಟ್ಕೊಂಡವ? ಒಬ್ಬ ಕೂಡ, ಚಂದ್ರಕ್ಕ ನಿಂಗೆ ಊಟಕ್ಕೆ ಅಕ್ಕಿ ಇದೆಯಾ, ನಿಂಗೇನಾದ್ರೂ ತೊಂದರೆ ಇದ್ರೆ ಹೇಳು ಅಂತ ಕೇಳದವ ನನ್ನ ಮನೆಗೆ ಯಾರು ಬರ್ತಾರೆ ಹೊಗ್ತಾರೆ ಅಂತ ಹೇಗೆ ಕೇಳಿದ? ಚಂದ್ರಿ.. ಚಂದ್ರಿ ಅಂತ ತಮಾಷೆ ಮಾಡ್ತಾರೆ. ಇಲ್ಲಿ ವಠಾರದ ಹೆಚ್ಚಿನ ಗಂಡಸರಿಗಿಂತ ನಂಗೇ ಪ್ರಾಯ ಜಾಸ್ತಿ ಆಗಿದೆ. ಒಬ್ಬನ ಬಾಯಿಂದ ಚಂದ್ರಕ್ಕ ಅಂತ ಒಮ್ಮೆ ಕೂಡಾ ಬರೂದಿಲ್ಲ. ನನ್ನ ಹೆಸರು ಚಂದ್ರಭಾಗಾ ಅನ್ನೋದೂ ನಂಗೆ ಮರ್ತು ಹೋಗಿದೆ. ಅದೇ ಆ ಸಾದಿಬೈಲು ಪೊರ್ಬು ದುಬೈಯಿಂದ ಬಂದ ಕೂಡಲೇ ಹೇಗೆ ನಿಮ್ಮೆಲ್ಲರ ನಾಲಗೆ ತಿರುಗ್ತದೆ ನೋಡು. ಮೊನ್ನೆ ನಿನ್ನ ಮೈದುನ ಕೂಡ `ಎನು ಜೋಸೆಫಣ್ಣ’ ಅಂತ ಮಾತಾಡಿದ್ದು ನಾನೇ ಕೇಳಿದ್ದೇನೆ. ಅವ ಯಾವಾಗ ಇವನಿಗೆ ಅಣ್ಣ ಆದ’. ಕೊಖ್ ಕೊಖ್ ಚಂದ್ರಕ್ಕನಿಗೆ ಕೆಮ್ಮು ಶುರುವಾಯ್ತು. ಮತ್ತೆ ಕಣ್ಣೊರೆಸಿಕೊಂಡು `ನಿಂಗೊತ್ತಾ ಸಾವಿತ್ರಿ ಈ ವಠಾರದಲ್ಲಿ ನಿನ್ನ ಮಾವ ಮಾತ್ರ ನನ್ನನ್ನು ಬಾಯಿತುಂಬ ಚಂದ್ರಭಾಗಾ ಅಂತ ಕರಿಯೋದು. ಚಂದ್ರಭಾಗಾ ಅನ್ನೋದು ನದೀ ಹೆಸರಂತೆ. ಆಯಿ ಒಂದು ಹಾಡು ಹಾಡ್ತಾ ಇದ್ದದು ಇನ್ನೂ ನೆನಪಿದೆ ನಂಗೆ, ಪಂಡರೀಚಾ ವಾಸ…. ಚಂದ್ರಭಾಗೆ ಸ್ನಾನ..’ ಅಂತ.

ಸಮಾಧಾನಗೊಳಿಸುವಂತೆ ಸಾವಿತ್ರಿ, `ಬಿಡು ಚಂದ್ರಕ್ಕ. ನಾನು ನಿನ್ನ ಒಳ್ಳೆದಕ್ಕೆ ಹೇಳಿದೆ ಅಷ್ಟೇ. ಊರಿನವ್ರ ಬಾಯಿಗೆ ಬೀಳಬೇಡ ಅಂತ. ಇರು ಸ್ವಲ್ಪ ಕಷಾಯ ಏನಾದ್ರೂ ಮಾಡಿ ತರ್ತೇನೆ. ಎಷ್ಟು ಕೆಮ್ಮುತ್ತಾ ಇದ್ದೀಯಾ’ ಅಂದದ್ದಕ್ಕೆ `ರಾತ್ರೆ ಒಮ್ಮೊಮ್ಮೆ ಹಸಿವಾದಾಗ ಹಣ್ಣು ಪೇರಳೆ ತಿಂದು ಮಲಗ್ತೇನೆ ಸಾವಿತ್ರಿ. ಅದೇ ಶೀತ. ಒಂದೊಂದು ಸಾರಿ ಕೆಮ್ಮು ಶುರುವಾದ್ರೆ ದಮ್ಮು ಕಟ್ಟಿ ಬಿಡ್ತದೆ. ಹಾಗೇ ಸತ್ತು ಹೋದ್ರೆ ಚಿಂತೆಯಿಲ್ಲ. ನಂಗೆ ಯಾವ ಊರಿನವ್ರು, ವಠಾರದವರೂ ಇಲ್ಲ ಸಾವಿತ್ರಿ. ಹೌದು, ಆವತ್ತು ಇಸ್ಮಾಯಿಲ್ ಇದ್ದ. ನಾಲ್ಕು ಅಡಿಕೆ ಕೊಯಿದು ಹೊರಟಾಗ ವಿಪರೀತ ಮಳೆ ಶುರು ಆಯ್ತು. ಅವನತ್ರ ಕೊಡೆ ಇರಲಿಲ್ಲ, ಅದೂ ಅಷ್ಟು ದೂರದ ಮಂಜಾಡಿ ಪೇಟೆಗೆ ಹೇಗೆ ಹೋಗುವುದು? ಹಾಗೇ ಉಳಿದುಕೊಂಡ. ನನ್ನ ಮನೆಯಲ್ಲಿ ಕೊಟ್ಟಿಗೆ ಅಂತ ಬೇರೆ ಜಾಗವೂ ಇಲ್ಲ. ಹಾಗೇ ಮನೆಯೊಳಗಿನ ಚಾವಡಿಯ ಮೂಲೆಯಲ್ಲಿ ಮಲಗು ಅಂತ ನಾನೇ ಹೇಳಿದ್ದು. ಬದುಕಿದ್ಯಾ ಸತ್ತಿದ್ಯಾ ಅಂತ ಕೇಳೊ ಯೋಗ್ಯತೆ ಇಲ್ಲದ ಯಾವ ಮಗ ಅವ್ನು ನನ್ನ ಮನೆಯಲ್ಲಿ ಬ್ಯಾರಿ ಮಲಗಿ ಹೋಗ್ತಾನೆ ಅಂತ ಹಬ್ಬಿಸಿದ್ದು ಹೇಳು ಸಾವಿತ್ರಿ. ಕೊನೇ ಪಕ್ಷ ಪೇಟೆಯ ಕಮ್ತಿ ಮಾಮನ ಮಕ್ಕಳು ಬಾಯಿ ತುಂಬಾ ಪೇರಳೆ ಅಜ್ಜಿ ಅಂತ ಕರೀತಾರೆ, ಇವ್ರಿಗೆ ಅದಕ್ಕೂ ನಾಲಗೆ ಹೊರಳಲ್ಲ’ ಎಂದು ತನ್ನ ಕೀಚಲು ದನಿಯಲ್ಲಿ ಹೇಳುತ್ತಾ ಕಣ್ಣೊರೆಸಿಕೊಂಡಳು. `ನಾನು ಯಾರ ಉಪಕಾರಕ್ಕೂ ಕಾದುಕೊಂಡಿಲ್ಲ. ಸತ್ತು ಹೋದ್ರೆ ಅಂತ ಕಟ್ಟಿಗೆ ಕೂಡಾ ಒಟ್ಟು ಮಾಡಿಟ್ಟಿದ್ದೇನೆ. ಸತ್ತದ್ದು ಸುದ್ದಿ ಗೊತ್ತಾದ್ರೆ ಯಾರಾದ್ರು ಬೆಂಕಿ ಕೊಟ್ರೆ ಸಾಕು. ವಠಾರದವರೇ ಕೊಡಬೇಕೂ ಅಂತಿಲ್ಲ. ನೋಡು ನಾನು ಸತ್ತ ಸುದ್ದಿ ಕೇಳಿದ ಕೂಡಲೇ ಅಷ್ಟು ದೂರದ ನೆಂಟರೆಲ್ಲ ಕಾಗೆಗಳ ಹಾಗೆ ಬರ್ತಾರೆ. ಈ ಆಸ್ತಿ ಒಂದು ಉಂಟಲ್ಲ. ಯಾವ ಬೋಳಿ ಮಗನಿಗೂ ನಾನು ಉಯಿಲು ಬರೆಯೋದಿಲ್ಲ. ಜಗಳಾಡಿ ಸಾಯಲಿ’ ಎಂದು ಹೇಳುತ್ತಾ ಸಾವಿತ್ರಿ ಕೊಟ್ಟ ಕಷಾಯವನ್ನೂ ಕುಡಿದು ಕಚ್ಚೆ ಸರಿಪಡಿಸಿಕೊಂಡು ಮಂಜಾಡಿ ಪೇಟೆಯತ್ತ ಹೊರಟಳು. ಮತ್ತೆ ಏನೋ ನೆನಪಾದವಳಂತೇ ಚೀಲದಿಂದ ಅಬ್ಬಲಿಗೆ ಮಾಲೆಯಿಂದ ಒಂದು ತುಂಡನ್ನು ತೆಗೆದು ಸಾವಿತ್ರಿಯ ಕೈಗೆ ಕೊಟ್ಟು `ಮುಡ್ಕೊ, ಅಬ್ಬಲಿಗೆಗೆ ಕುಸುಮ ಇಲ್ಲಂತಾ ದೇವರಿಗೆ ಏರಿಸಲ್ಲ. ಹೂವಿನಲ್ಲೂ ಭೇದ ನೋಡ್ತಾರೆ. ಸಾಯಲಿ ಬಿಡು, ಉಪ್ಪಿನಕಾಯಿ ಇದ್ರೆ ಸ್ವಲ್ಪ ಕೊಡು ನಾಳೆ ಬರ್ತೇನೆ’ ಎಂದೆನ್ನುತ್ತಾ ಹೊರಟಳು. ಸಾವಿತ್ರಿ ಕೈಯಲ್ಲಿ ಅಬ್ಬಲಿಗೆ ಮಾಲೆ ಹಿಡಿದುಕೊಂಡು ಆ ಜೀವವನ್ನು ಸುಮ್ಮನೆ ನೋಡುತ್ತಾ ನಿಂತಳು. ಮತ್ತೆ ಅಬ್ಬಲಿಗೆ ಮಾಲೆಯನ್ನು ಅಕ್ಕರೆಯಿಂದ ತಲೆಗೇರಿಸಿಕೊಂಡಳು.

*****

ಪೇಟೆಯಿಂದ ಬಂದ ಚಂದ್ರಕ್ಕನಿಗೆ ದಣಪೆ ತೆರೆದಿದ್ದನ್ನು ನೋಡಿ ಕೋಪ ಉಕ್ಕಿತು.`ಯಾರೋ ಮಕ್ಕಳು ಪೇರಳೆಗೆ ಬಂದಿರಬೇಕು’ ಗೊಣಗುತ್ತಾ ದಣಪೆ ಹಾಕಿ, ಮನೆಯ ಚಿಲಕ ತೆಗೆಯುತ್ತಲೇ ಸಾವಿತ್ರಿಯ ಮಾತುಗಳು ನೆನಪಾಗಿ ಎಂದೂ ಇಲ್ಲದ ದುಃಖ ಉಕ್ಕಿತು. ಅಲ್ಲೇ ಜಗಲಿ ಮೇಲೆ ಕೂತು ಬಿಟ್ಟಳು. `ನಾಲ್ಕೂವರೆ ಅಡಿಯ ನನ್ನನ್ನು ಒಂದು ಕಾಲು ಚೊಟ್ಟಾಗಿದ್ದ, ನನ್ನಿಂದ ಇಪ್ಪತ್ತು ವರ್ಷ ದೊಡ್ಡವನಾಗಿದ್ದ ಮಾಧವ ಜೋಶಿಗೆ ಮದುವೆ ಮಾಡಿ ಕೊಟ್ಟರು. ಹೋಗಲಿ, ಒಂದು ಮಗುವಾದರೂ ಆಯಿತೇ! ಒಂದು ಹುಳನೂ ಹುಟ್ಟಲಿಲ್ಲ ನನ್ನ ಹೊಟ್ಟೆಯಲ್ಲಿ. ಚಂದ್ರಭಾಗಾ ಇದ್ದಾಳಾ ಸತ್ತು ಹೋದ್ಲಾ ಅಂತ ಅಣ್ಣ, ತಮ್ಮ ಯಾರೂ ತಿರುಗಿಯೂ ನೋಡಲಿಲ್ಲ.’……. ಸಾವಿತ್ರಿಯ ಮಕ್ಕಳು ಇಲ್ಲಿ ಬಂದಾಗ ಕೇಳುತ್ತಿದ್ದುದೂ ನೆನಪಾಯ್ತು. `ಚಂದ್ರತ್ತೆ, ನಿಂಗಿಲ್ಲಿ ಒಬ್ಬಳಿಗೇ ಹೆದರಿಕೆ ಆಗುವುದಿಲ್ವಾ’…… `ಹಾ ಹಾ ಹೆದರಿಕೆ ಆಗ್ತದೆ. ಹಾಗೆ ಹೇಳಿದ್ರೆ ಯಾರು ಬರ್ತಾರೆ ನನ್ನ ಜೊತೆಯಲ್ಲಿ ಇರಲು’…… ಕಣ್ಣುಗಳು ತುಂಬಿದವು…… `ಕತ್ತಲೆ ಆಗುತ್ತಿದ್ದಂತೇ ಜಗಲಿ ಮೇಲೆ ಕೂತಿದ್ದಾಗ ಮನೆ ಮುಂದೆ ಬೇತಾಳನಂತೆ ನಿಂತಿರುವ ಉದ್ದುದ್ದ ಅಡಿಕೆ ಮರಗಳೂ ವಿಚಿತ್ರವಾಗಿ ಕಂಡು ಹೆದರಿಕೆ ಹುಟ್ಟಿಸುತ್ತಿದ್ದವು. ಅಡಿಕೆ ಮರದ ಮೇಲೆ ಮೂಡುವ ಬಿಳಿಯ ಕಲೆಗಳು ಹಗಲಿನಲ್ಲಿ ಕಾಣದೇ ಇದ್ದರೂ, ಕತ್ತಲಾಗುತ್ತಿದ್ದಂತೇ ಮನುಷ್ಯರ ಮುಖದಂತೇ ಬೆದರಿಸಲು ಶುರುಮಾಡುತ್ತಿದ್ದವು. ಒಮ್ಮೊಮ್ಮೆ ತನ್ನನ್ನು ನೋಡಿ ಪಕಪಕನೆ ನಕ್ಕಂತೇ ಅನಿಸಿದರೆ ಇನ್ನೊಮ್ಮೆ ದುರುಗುಟ್ಟಿಕೊಂಡು ನೋಡಿದಂತೇ…. ಅದಕ್ಕಾಗಿಯೇ ಕಣ್ಣ ಮುಂದೆ ಕಾಣಿಸುವ ಅಡಿಕೆ ಮರಗಳನ್ನು ಇಸ್ಮಾಯಿಲ್‌ಗೆ ಹೇಳಿ ಕಡಿಸಿ ಹಾಕಿದ್ದು. ಮುರುಕು ಮನೆಯ ಬಾಗಿಲು ಹಾಕಿ ಕೂತರೇನು? ಎಲ್ಲೋ ದೂರದಿಂದ ಕೇಳುವ ಎಂಥದ್ದೋ ಹಕ್ಕಿಯ ಕೂಗೂ ನಡುಕ ಹುಟ್ಟಿಸುತ್ತಿತ್ತು… ಮತ್ತೆ ಕಣ್ಣು ಮುಚ್ಚಿ ಮನೆ ಮುಂದೆ ದಾರಿ ದಾಟಿದೊಡನೇ ಸಿಗುವ ಜಾಗದಲ್ಲಿರುವ ರಕ್ತೇಶ್ವರಿಯನ್ನು ನೆನಪಿಸಿಕೊಳ್ಳೊದು ಅಷ್ಟೇ! `ಅಲ್ಲಿ ಭೂತಸ್ಥಾನದಲ್ಲಿ ಒಬ್ಬಳೆ ಅಲ್ವ ಅವಳೂ ಇರೋದು ಅಂತ ಧೈರ್ಯ ತಂದುಕೊಂಡು ಇರೋದು ಅಭ್ಯಾಸ ಮಾಡಿಕೊಂಡಿದ್ದೇನೆ’ಎಂದು ಸಾವಿತ್ರಿಯ ಮಕ್ಕಳಿಗೆ ಹೇಳಬೇಕು. ಎಂದುಕೊಂಡಳು, `ಹಾಗೆ ನೋಡಿದರೆ ನನ್ನ ನಿಜವಾದ ನೆರೆಹೊರೆ ಅಂದ್ರೆ ರಕ್ತೇಶ್ವರಿಯೇ’.. ನಗುವಿನೊಂದಿಗೇ ಕೆಮ್ಮು ಶುರುವಾಯ್ತು. ಒಳ ಹೋಗಿ ನೀರು ಕುಡಿದರೂ ಒತ್ತಿ ಒತ್ತಿ ಕೆಮ್ಮು ಬರುತ್ತಿತ್ತು ಕಫ ಕಟ್ಟಿದಂತೇ ಉಸಿರಾಡಲೂ ಕಷ್ಟ ಎನಿಸಿತು… ಕತ್ತಲು ಹಿರಿದಾಗುತ್ತಾ ಹಿರಿದಾಗುತ್ತಾ ಆ ಮೂಲೆಮನೆಯನ್ನು ಸಂಪೂರ್ಣ ಆವರಿಸಿಕೊಂಡಿತು.

******

ಬೆಳಿಗ್ಗೆ ಸಾವಿತ್ರಿ ನೀರು ದೋಸೆ ಹೊಯ್ಯುತ್ತಿದ್ದಾಗ ಕೆಲಸದ ಮಂಗಳಿ ಓಡೋಡಿ ಬಂದವಳು `ಓ, ಅಮ್ಮ, ಒಮ್ಮೆ ಹೊರಗೆ ಬನ್ನಿ..’ ಬೊಬ್ಬೆ ಹೊಡೆದಾಗ ಸಾವಿತ್ರಿ ಹೊರ ಬಂದು ನೋಡಿದರೆ ಮಂಗಳಿ. `ಚಂದ್ರಮ್ಮ ಹೋದ್ರು ಅಂತ ಕಾಣ್ತದೆ…… ನಾಯಿ, ಓ ಅಂತ ಭಾರೀ ಬೊಬ್ಬೆ ಹೊಡೀತಿತ್ತು ಅಮ್ಮ. ಅದಕ್ಕೇ ಸುಮ್ನೆ ಹೋಗಿ ಕಿಟಕಿಯಿಂದಲೇ ನೋಡಿದಾಗ ಅಂಗಾತ ಮಲಗಿದಂತೆ ಇದ್ರು. ಹಿತ್ತಲಿನ ಬಾಗಿಲಿಂದ ಒಳ ಹೋಗಿ ಮೈ ಮುಟ್ಟಿ ನೋಡಿದಾಗ ತಣ್ಣಗಾಗಿತ್ತು ಅಮ್ಮ’ ಎಂದಳು…….

ನೀರ್ಸಾಲು ವಠಾರದವರು ಮೊದಲ ಬಾರಿಗೆ ಚಂದ್ರಕ್ಕನ ಮನೆಯಲ್ಲಿ ಸೇರಿದರು. ಚಂದ್ರಭಾಗಾಳ ಅಂತ್ಯಸಂಸ್ಕಾರದ ಜವಾಬ್ದಾರಿ ಯಾರು ಹೊರುವುದೆಂದು ಗುಸುಗುಸು. ವಠಾರದ ತೀರ್ಮಾನದಂತೇ ಶಂಕರಣ್ಣ, ಜೋಶಿ ಪರಿವಾರಕ್ಕೆ ದೂರದ ಸಂಬಂಧಿಯೂ ಆಗಿದ್ದರಿಂದ ಮುಂದಿನ ಸಿದ್ಧತೆ ನಡೆಸತೊಡಗಿದ. ಚಂದ್ರಕ್ಕನ ಗಂಡನ ಅಣ್ಣನ ಮಗ ಮಾಧವನಿಗೆ ಸುದ್ದಿ ಸಿಕ್ಕಿದೊಡನೇ ತಂದೆಯನ್ನು ಕರೆದುಕೊಂಡು ಬಂದು ಯಜಮಾನನಂತೆ ಒಳ ಹೊರಗೆ ಓಡಾಡುತ್ತಿದ್ದ. ತಯಾರಿ ನಡೆಸುತ್ತಿದ್ದ ಶಂಕರಣ್ಣನ ಬಳಿ ಉಡಾಫೆಯಿಂದ, `ಕುಟುಂಬ ಅಲ್ವಾ, ಬಿಟ್ಟು ಹಾಕಲಿಕ್ಕೆ ಆಗ್ತದಾ! ಒಂದ್ಹತ್ತು ವರ್ಷದ ಹಿಂದೆ ನನ್ನ ಕೈಗೆ ಈ ಆಸ್ತಿ ಸಿಕ್ಕಿದ್ರೆ ಇಲ್ಲಿ ಚಿನ್ನ ಬೆಳಿತಿದ್ದೆ. ಈಗ ಈ ಜಾಗದ ರಿಪೇರಿಗೇ ನಾನು ದುಡ್ಡು ಸುರೀಬೇಕು. ನೋಡ್ಲಿಕ್ಕೆ ಇಷ್ಟೇ ಇದ್ರೂ ಯಾರನ್ನೂ ನಂಬುತ್ತಿರಲಿಲ್ಲ ಈ ಕಾಕಿ. ಎಲ್ಲಾ ಕರ್ಮ’ ಎಂದು ತೋಳೇರಿಸಿಕೊಂಡು ಮಾತಾಡುತ್ತಿದ್ದ.

ತಾನೇ ಒಟ್ಟು ಮಾಡಿಟ್ಟಿದ್ದ ಕಟ್ಟಿಗೆಯಲ್ಲಿ ಚಂದ್ರಭಾಗಾ ಜೋಶಿ ಭಗಭಗನೆ ಉರಿದು ಬೂದಿಯಾಗುತ್ತಿದ್ದಳು. ಒಣಗಿದ್ದ ಕಟ್ಟಿಗೆ, ಬೆಂಕಿಯೊಡನೆ ಸೆಣಸುವಂತೆ ಕಿಡಿಗಳನ್ನು ಹಾರಿಸುತ್ತಿತ್ತು. ಇಸ್ಮಾಯಿಲ್ ದೂರದಿಂದ ನೋಡಿ ಕಣ್ಣೊರೆಸಿಕೊಂಡು ಹೋದರೆ, ಸಂಸ್ಕಾರ ಮುಗಿಸಿ ಒಳಬಂದ ಶಂಕರಣ್ಣ ಮತ್ತಿತರರ ಕಣ್ಣಿಗೆ ದೇವರ ಗೂಡಿನಲ್ಲಿದ್ದ ಕಾಗದ ಪತ್ರಗಳು ಕಂಡವು.. ಶಂಕರಣ್ಣ ಕುತೂಹಲದಿಂದ ತೆರೆದು ನೋಡಿದ, `ನಾನು ಚಂದ್ರಭಾಗಾ ಜೋಶಿ ಸದ್ರಿ ಆಸ್ತಿಯನ್ನು ನನ್ನ ಗಂಡನ ಅಣ್ಣನ ಎರಡನೇ ಮಗ ಕೇಶವನಿಗೆ ಬರೆದಿರುತ್ತೇನೆ…..’.