ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ ಓದುಗನನ್ನು ಖಂಡಿತ ಕಾಡತ್ತೆ. ಅಲ್ಲಿ ಕಥೆ ಗೆಲ್ಲತ್ತೆ.
ದೀಪ್ತಿ ಭದ್ರಾವತಿ ಅವರ “ಗೀರು” ಕಥಾಸಂಕಲನಕ್ಕೆ ಎಸ್.ಎನ್.ಸೇತುರಾಮ್ ಅವರು ಬರೆದ ಮುನ್ನುಡಿ

 

ಕಥೆಗಾರ್ತಿ ದೀಪ್ತಿ ಭದ್ರಾವತಿಯವರ ಎರಡನೆಯ ಕಥಾ ಸಂಕಲನ “ಗೀರು” ಹದಿನಾಲ್ಕು ಕಾಡುವ ಕಥೆಗಳನ್ನು ಸಂಕಲನವಾಗಿಸಿ ಸ್ವತಃ ಪ್ರಕಟಣೆಯ ಹೊಣೆ ಹೊತ್ತಿದ್ದಾರೆ. ಶುಭಾಶಯಗಳು.

ಕಥೆಗಾರ್ತಿ ಅಂತಿದ್ದ ಹಾಗೆ ಮೊದಲಿಗೆ ಮನಸ್ಸಿಗೆ ಬರುವ ಭಾವ; ಸ್ವಂತದ್ದಾ? ಇದೊಂದು ಮನಸ್ಥಿತಿ. ಗಂಡಸು ಬರೆದರೆ ಲೋಕದ್ದು, ಹೆಣ್ಣು ಬರೆದರೆ ಸ್ವಂತದ್ದು! ಸ್ವಾನುಭವದ ಎಳೆಯಿಲ್ಲದೆ ಒಳ್ಳೆಯ ಕಥೆ ಕಷ್ಟ. ಎಲ್ಲರೂ ಓದುವ ಕಥೆ ಇನ್ನೂ ಕಷ್ಟ. ಪ್ರಾಯಶಃ ಬದುಕಿನ ಅನುಭವಗಳು ಪ್ರಜ್ಞೆ ಮತ್ತು ಸಾರ್ವತ್ರಿಕ ಸಂಸ್ಕಾರದ ಮೂಸೆಯಲ್ಲಿ ಹದವಾಗಿ ಭಿನ್ನರುಚಿಯ ಲೋಕಕ್ಕೆ ಒಂದು ರುಚಿ ಆಗುವುದಾದರೆ ಒಳ್ಳೆಯ ಕಥೆಯಾದೀತು.

ಇಲ್ಲಿ ಆ ಹದವಿದೆ.

(ದೀಪ್ತಿ ಭದ್ರಾವತಿ)

ಪ್ರತಿ ಕಥೆಯ ವಿವರಕ್ಕೆ ನಾನು ಹೋಗುವುದಿಲ್ಲ. ಹವ್ಯಾಸಿ ಓದುಗನಾಗಿ ನಾನು ಕಥೆಯನ್ನು ನನ್ನ ಕಣ್ಣು ಮತ್ತು ಭಾವಗಳ ಮೂಲಕವೇ ಆಸ್ವಾದಿಸಬಯಸುತ್ತೇನೆ. ಮುನ್ನುಡಿಕಾರನ ದಿಕ್ಸೂಚಿ ಮತ್ತು ವ್ಯಂಜನಗಳ ಪ್ರಭಾವವಿಲ್ಲದೆ ಕಥೆ ಓದಿದರೆ ಕಥೆಗಾರ/ಕಥೆಗಾರ್ತಿ ಮತ್ತು ಓದುಗನ ನಡುವೆ ನೇರ ಸಂಬಂಧ ಏರ್ಪಟ್ಟು ಸುಖ ಹೆಚ್ಚಿರುತ್ತೆ. ಓದುಗನಿಗೆ ರುಚಿಯಷ್ಟೇ ಮುಖ್ಯ; ಮುಗಿದ ನಂತರ ಅದು ಉಳಿಸುವ ಭಾವ ಮುಖ್ಯ. ಮುನ್ನುಡಿಕಾರನ ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಮತ್ತವನ ತುಲನಾತ್ಮಕ ಚೈತನ್ಯದಲ್ಲಿ ಸಂಪೂರ್ಣ ಜೀವಸತ್ವಗಳೇ ತುಂಬಿರಬಹುದು. ಆದರೆ ಓದುಗನಿಗೆ ಅದು ಬರೀ ತೌಡು, ರುಚಿಯಿಲ್ಲದ್ದು. ಹಾಗಾಗಿ ಕಥೆಗಳ ವಿವರಕ್ಕೆ ನಾನು ಹೋಗುವುದಿಲ್ಲ. ರುಚಿ ಪೂರ್ಣ ನಿಮಗೆ ದಕ್ಕಲಿ.

ಕಥೆ ವಾಸ್ತವಕ್ಕೆ ಹತ್ತಿರವಾಗಿರಬೇಕು, ವರ್ತಮಾನದಲ್ಲಿರಬೇಕು. ಇದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಕಥೆಗೆ ಇಷ್ಟೇ ಸಾಕಾ? ಕೇವಲ ವಾಸ್ತವತೆಯ ದಾಖಲು ಕಥೆಯಲ್ಲ. ನಾಳೆಗೂ ಪ್ರಸ್ತುತ ಅಲ್ಲದ್ದು ಮತ್ತು ಇವತ್ತಿಗೆ ಸೀಮಿತವಾಗಿದ್ದು ಕಥೆ ಹೇಗಾದೀತು? ವಾಸ್ತವದ ಓರೆಕೋರೆಗಳು; ಸರಿ ತಪ್ಪುಗಳ ತುಲನೆ; ಪ್ರಚಲಿತ ಮನಸ್ಥಿತಿಯ ಬದುಕ ಮೇಲಿನ ಪ್ರಭಾವ; ಉಂಟಾಗುವ ದುರಂತಗಳು; ಭವಿಷ್ಯಕ್ಕೆ ಆಶಯ ಎಲ್ಲ ಸೇರಿದರೆ ಕಥೆಯಾದೀತೇನೋ! ತುಲನೆಗೆ ಮಾಪನ ಮತ್ತು ದೃಷ್ಟಿಗೆ ಮಸೂರ ಆದರ್ಶ. ಆದರ್ಶಗಳ ಹಂಗೇ ಇಲ್ಲದೆ ಸಾಹಿತಿಯಿಂದ ಒಳ್ಳೆಯ ಕಥೆ ಹೇಗೆ ಸಾಧ್ಯ? ಆದರ್ಶವಾಗಿ ಉದಾಹರಣೆಯಾಗಿ ಬದುಕುವುದು ಕಷ್ಟವಿರಬಹುದು, ಆದರೆ ಧಿಕ್ಕರಿಸಿ ವೈರುಧ್ಯದ ಬದುಕ ಮನಸ್ಥಿತಿಯಂತೂ ಇರಬಾರದೇನೋ? ದೀಪ್ತಿಯವರು ಸಭ್ಯರು; ಕಥೆಗಳಲ್ಲಿ ಸಭ್ಯತೆಯಿದೆ.

ಸಾಹಿತ್ಯ ಸಾಹಿತಿಯ ವೈಯಕ್ತಿಕ ತುರ್ತೋ; ತಲ್ಲಣಗಳ ಆವಿಷ್ಕಾರವೋ ಅಥವಾ ಓದುಗನ ಭಾವ ತಲ್ಲಣಗಳ ಸಮತೋಲನಕ್ಕೆ ಇಂಬಾಗುವ ಒಂದು ಹತಾರವೋ; ಹೇಳುವುದು ಕಷ್ಟ. ಪ್ರತಿ ಓದುಗನ ರುಚಿ, ಸಾಹಿತ್ಯಾಭಿರುಚಿ ಅವನವನ ಬೌದ್ಧಿಕಮಟ್ಟ; ಪ್ರಜ್ಞೆ; ಆದರ್ಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿರತ್ತೆ. ಸಾಮಾನ್ಯ ಓದುಗನಿಗೆ ಜಾತಿ ಇಲ್ಲ ವರ್ಣ ಭೇದವಿಲ್ಲ; ವರ್ಗ ಭೇದವಿಲ್ಲ; ತರ್ಕಗಳ ಹಂಗಿಲ್ಲ, ಸಿದ್ಧಾಂತಗಳ ಸಂಕೋಲೆಯಿಲ್ಲ. ಅದೇ ಹೃದಯ, ಅದೇ ಮೆದುಳು, ಭಾವಗಳೂ ಅವೇ; ಹಸಿವು ಕೂಡ ಅದೇ! ಈ ಸಾರ್ವತ್ರಿಕ ಸ್ವಭಾವ ಮುಟ್ಟುವುದಾದರೆ ಒಳ್ಳೆಯ ಸಾಹಿತ್ಯವಾದೀತೇನೋ! ಅಲ್ಲಿಗೆ ಸಾಹಿತಿ ಸಾರ್ವತ್ರಿಕ ಸ್ವಭಾವದಲ್ಲಿರಬೇಕು, ಜಾತಿ, ವರ್ಣ, ವರ್ಗ, ಸಿದ್ಧಾಂತಗಳ ಮೀರಿ ನಿಲ್ಲಬೇಕು. ಪ್ರಾಯಶಃ ಅಲ್ಲಿ ಒಳ್ಳೆಯ ಕಥೆ ಇರುತ್ತದೆ.

ಸಾಹಿತ್ಯ ಸಮ್ಮೇಳನಗಳೇ ಜಾತ್ಯಾವಾರು ಅನ್ನುವುದಾದ್ರೆ, ಸಾಹಿತ್ಯ ಎಲ್ಲಿ ಜಾತ್ಯಾತೀತವಾದೀತು ಮತ್ತು ಜಾತ್ಯಾತೀತವಲ್ಲದ್ದು ಸಾಹಿತ್ಯ ಹೇಗಾದೀತು? ಸದ್ಯದ ಸಮ್ಮೇಳನಗಳ ಕೊಂಬು ಕಹಳೆ, ಹಾರ ತುರಾಯಿ, ಅಲಂಕಾರ ಮೆರವಣಿಗೆ, ಪಾರಿತೋಷಕ ಸವಲತ್ತುಗಳಿಂದ ಸಾಹಿತಿ ದೂರ ಉಳಿಯುವ ಅವಶ್ಯಕತೆ ಇದೆ. ಸಾಹಿತಿಗೆ ಇದೆಯೋ ಇಲ್ಲವೋ ಸಾಹಿತ್ಯಕ್ಕಂತೂ ಇದೆ. ನಿರಂತರ ದಿಬ್ಬಣದ ಸಾಹಿತಿಯಲ್ಲಿ ಕಥೆ ಗಬ್ಬ ಕಟ್ಟುವುದಾದರೂ ಹೇಗೆ? ಕಥೆಗಾರ/ಕಥೆಗಾರ್ತಿ ಅಬ್ಬರ ಆಡಂಬರಗಳ ವೇದಿಕೆಗಳನ್ನು ಬಿಟ್ಟು ಸಾಮಾನ್ಯ ಬದುಕ ಭಾಗವಾಗಿದ್ದುಕೊಂಡು ನೋವು ನಲಿವುಗಳಿಗೆ ಸ್ಪಂದಿಸುತ್ತ ಅಳುವಿನಲ್ಲಿ ಅತ್ತು ನಗುವಿನಲ್ಲಿ ನಗ್ತಾ; ಆತ್ಮಗೌರವಕ್ಕೆ ಚ್ಯುತಿ ಬರದ ಹಾಗೆ ಬದುಕಿದ್ರೆ ಬರೆದದ್ದು ಒಳ್ಳೆಯ ಕತೆಯಾದೀತೇನೋ? ರನ್ನ ಗೋಪುರದಲ್ಲಿ ವಿರಾಜಮಾನರಾದವರಿಗೆ ಭಿನ್ನ ಸ್ವರದ ಅರಿವೆಲ್ಲಿದ್ದೀತು? ವಿಭಿನ್ನ ಅಂತ ತೌಡು ಕುಟ್ಟಬಹುದು, ಪರಸ್ಪರ ಬೆನ್ನು ತುರಿಸಿಕೊಳ್ಳಬಹುದು, ಕೆಸರು ಎರಚಿಕೊಳ್ಳಬಹುದು, ಗ್ರಂಥಾಲಯ ತುಂಬಬಹುದು, ದತ್ತಿಗಳು ಕರಗಬಹುದು, ಇವರದ್ದಕ್ಕೆ ಅವರ ವಿಮರ್ಶೆ ಅವರದ್ದಕ್ಕೆ ಇವರ ಪಾರಿತೋಷಕ. ಕಾಲಾನುಕಾಲ ಪಟ್ಟಗಳ ಅದಲುಬದಲು ಸಾಹಿತಿಗೆ ಸುಖ; ಸರೀನೆ; ಸೊರಗಿದ್ದು ಸಾಹಿತ್ಯ; ಸತ್ತದ್ದು ಓದುಗ!

ದೀಪ್ತಿಯವರ ವೃತ್ತಿ ವೈದ್ಯಕೀಯ ಇಲಾಖೆಯ ಕಾರಕೂನಿಕೆ! ಮೀರಿ ಗೃಹಿಣಿ! ಎರಡೂ ಪೂರ್ತ ಸಮಯದ ಬೇಡಿಕೆಯ ಜವಾಬ್ದಾರಿಗಳು. ಒಂದರಲ್ಲಿ ಉಸಿರೆಳೆದುಕೊಂಡರೆ ಮತ್ತೊಂದರಲ್ಲಿ ಬಿಡುವುದು, ಮಧ್ಯದ ಕ್ಷಣದಲ್ಲಿ ಸಾಹಿತ್ಯ. ಕಾಡಿದ ಭಾವಗಳನ್ನ ಕಂಡ ಸನ್ನಿವೇಶಗಳನ್ನು ಕೆಣಕಿದ ಪಾತ್ರಗಳನ್ನು ಹಸಿ ಹಸಿಯಾಗಿ ಹೆತ್ತು ಹಗುರಾಗ್ತಾರೆ. ಇವ್ರ ಕಥೆಗಳ ವಸ್ತು ವಿಷಯ ಚೌಕಟ್ಟಿನಲ್ಲಿ ನಿರ್ದಿಷ್ಟ ಆಕಾರವಿಲ್ಲ. ನದಿ ಹರಿದ ಹಾಗೇ, ಓಟ ಸಿಕ್ಕಲ್ಲಿ ಓಡತ್ತೆ. ತೊಡಕಿನಲ್ಲಿ ನಿಧಾನವಾಗಿ ಅವಕಾಶವಾದಷ್ಟು ನಿಂತು ಸುಧಾರಿಸಿಕೊಂಡು ಮತ್ತೆ ಸಾವಕಾಶವಾದಾಗ ಹರಿಯತ್ತೆ. ಸ್ವಚ್ಛ ಮತ್ತು ತಿಳಿ. ಇಲ್ಲಿ ಭಾವಗಳೇ ಪಾತ್ರಗಳು; ಸನ್ನಿವೇಶದ್ದೇ ಚೌಕಟ್ಟು, ಅಲಂಕಾರಗಳಿಲ್ಲ, ಸಹಜ ಸೌಂದರ್ಯ, ಮೆಚ್ಚಿಸುವ ಹಪಾಹಪಿಯಿಲ್ಲ. ಕೆಣಕುವ ಚೈತನ್ಯ ಇಚ್ಛೆ ಇದೆ; ಕೆಣಕತ್ತೆ, ಆದರೆ ಧಾಷ್ಟ್ರ್ಯವಿಲ್ಲ. ಸನ್ನಿವೇಶಗಳು ಘಟನೆಗಳು ಬದುಕಿನ ಪರಿಸ್ಥಿಯನ್ನು ನೈಜವಾಗಿ ಬಿಂಬಿಸಿ ವಿಷಾದ ಹುಟ್ಟಿಸತ್ವೆ, ಅಲ್ಲಲ್ಲಿ ಕಣ್ಣು ತುಂಬಿದರೆ ಆಶ್ಚರ್ಯವಿಲ್ಲ. ಪಾತ್ರಗಳೂ ಕಾಡಿ ಅನುಕಂಪ ಮತ್ತು ಅನುಕರಣೆಯನ್ನು ಬೇಡತ್ವೆ. ಅವರು ಹೆತ್ತು ಹಗುರಾಗುವುದನ್ನು ಹೊತ್ತು ತಿರುಗುವುದು ಸುಲಭವೂ ಹೌದು, ಸುಖವೂ ಹೌದು ಮತ್ತು ಸಂಭ್ರಮ ಕೂಡ. ಅಲ್ಲದೆ ಓದುಗರನ್ನ ವಿಷಾದದ ಭಾವ ಕಾಡಿ ಕ್ಷಣ ನಿರಹಂಕಾರಿಯಾಗಿಸತ್ತೆ! ಅದೂ ಸತ್ಯ.

ಪ್ರತಿ ಓದುಗನ ರುಚಿ, ಸಾಹಿತ್ಯಾಭಿರುಚಿ ಅವನವನ ಬೌದ್ಧಿಕಮಟ್ಟ; ಪ್ರಜ್ಞೆ; ಆದರ್ಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿರತ್ತೆ. ಸಾಮಾನ್ಯ ಓದುಗನಿಗೆ ಜಾತಿ ಇಲ್ಲ ವರ್ಣ ಭೇದವಿಲ್ಲ; ವರ್ಗ ಭೇದವಿಲ್ಲ; ತರ್ಕಗಳ ಹಂಗಿಲ್ಲ, ಸಿದ್ಧಾಂತಗಳ ಸಂಕೋಲೆಯಿಲ್ಲ. ಅದೇ ಹೃದಯ, ಅದೇ ಮೆದುಳು, ಭಾವಗಳೂ ಅವೇ; ಹಸಿವು ಕೂಡ ಅದೇ!

ಒಪ್ಪಿ, ಬಿಡಿ; ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಕುಟುಂಬಗಳು ಇನ್ನು ಒಂದು ಅವಿಭಾಜ್ಯ ಅಂಗವೇ, ಗಂಡು, ಹೆಣ್ಣು ಸಮ ಅಂತ ಎಷ್ಟೇ ಬೊಬ್ಬೆ ಹೊಡೆದ್ರೂ ಸಮನಾಗಿ ಸಮಚಿತ್ತದಿಂದ ನೋಡುವ ಮನಸ್ಥಿತಿ ಇನ್ನೂ ಬಂದಿಲ್ಲ. ಹೆಣ್ಣೇ ಕೆಡೋದು, ಗಂಡಲ್ಲ! ತಪ್ಪು; ಆದರೆ ಮನಸ್ಥಿತಿ ಅದೇ! ಸ್ತ್ರೀ ಸ್ವಾತಂತ್ರ್ಯದ ಘೋಷಣೆ ಕೂಗಿ ಸಾಂಸಾರಿಕ ಸಂಬಂಧಗಳನ್ನು ಧಿಕ್ಕರಿಸಿ ಸ್ವತಂತ್ರವಾಗಿ ಬದುಕಿ ಕಲೆ ಸಾಂಸ್ಕೃತಿಕ ವಲಯದ ಮುಂಚೂಣಿಯಲ್ಲಿರುವ ಎಷ್ಟೋ ತಾಯಂದಿರು ಕೂಡ ಸ್ವಂತ ಹೆಣ್ಣು ಮಕ್ಕಳಿಗೆ ಕಾಲವೂ ಊರ್ಜಿತವಾಗುವ ಕುಟುಂಬವನ್ನೇ ಹಂಬಲಿಸುವುದೇ ಹೆಚ್ಚು. ಸ್ವಂತಕ್ಕೆ ಧಿಕ್ಕರಿಸಿದ್ದು ಮಗಳಿಗೆ ಯಾಕೆ?

ಅವರ ಬರಹ ಕೃತಿಗಳಿಂದ ಪ್ರೇರೇಪಿತರಾಗಿ ಪ್ರೋತ್ಸಾಹ ಪಡೆದ ಎಷ್ಟೋ ಹೆಣ್ಣು ಮಕ್ಕಳು ಇವರನ್ನು ಆದರ್ಶವಾಗಿಸಿ ಸಂಸಾರ ಮುರಿದುಕೊಂಡ್ರೆ, ಇವರ ಸ್ವಂತ ಮಕ್ಕಳು ಇವರದ್ದೇ ಪ್ರೋತ್ಸಾಹ ಆಸರೆಯಿಂದ ಸಾಂಸಾರಿಕ ಬಂಧನದಲ್ಲಿರ್ತಾರೆ. ಸ್ವಂತ ಮಗಳೆದುರಿಗೆ ಓದಲಾಗದ ಮತ್ತು ಆಕೆಗೆ ಪಥ್ಯವಾಗದ ಸಾಹಿತ್ಯದ ಸೃಷ್ಟಿಯಾದರೂ ಯಾಕೆ? ಸಾಹಿತ್ಯ ಬದುಕನ್ನ ಕಟ್ಟಿ ಕೊಡಬೇಕು. ಇರುವುದನ್ನ ಹಳತು ಅಂತ ಸುಡುವುದಕ್ಕೆ ಸೀಮಿತವಾದರೆ, ಹೊಸತನ್ನು ಕಟ್ಟುವುದರ ಜವಾಬ್ದಾರಿಯಿಂದ ವಿಮುಖರಾದರೆ ಬದುಕು ಮಸಣವಾದೀತು, ಲೆಕ್ಕವಿಲ್ಲದಷ್ಟು ಅತೃಪ್ತ ಮುಕ್ತಿ ಕಾಣದ ಆತ್ಮಗಳು ದಿಕ್ಕು ದೆಸೆಯಿಲ್ಲದೆ ಅಂಡಲೆದಾವು.

ಮುಕ್ತ ಸಮಾಜದ ಅವಶ್ಯಕತೆ ಇದೆ. ಕಸದಿಂದ ಮುಕ್ತವಾದ ಸಮಾಜದ ಅವಶ್ಯಕತೆ ಇದೆ. ಎಲ್ಲ ವ್ಯವಸ್ಥೆಗಳೂ ಉಂಟಾಗುವುದು ಸ್ವಚ್ಛ ಮತ್ತು ಮುಕ್ತ ಸಮಾಜದ ಆಶಯದಿಂದಲೇ. ಕ್ರಿಯೆಯಲ್ಲಿ ಅದರದ್ದೇ ಆದ ಕಸವನ್ನು ಹುಟ್ಟು ಹಾಕತ್ವೆ. ಕಸದಿಂದ ಸಮಾಜವನ್ನು ಮುಕ್ತವಾಗಿಸುವ ಭ್ರಮೆಯಲ್ಲಿ ವ್ಯವಸ್ಥೆಯನ್ನೇ ತೊಳೆದರೆ ಕಸದ್ದೇ ವ್ಯವಸ್ಥೆಯಾಗಿ ಬದುಕು ಅಸಹನೀಯವಾಗುತ್ತದೆ. ವ್ಯವಸ್ಥೆ ಬೇಕು. ಆದರೆ ಕಾಲಕಾಲಕ್ಕೆ ಬದಲಾಗುವ ಚೈತನ್ಯದ ವ್ಯವಸ್ಥೆ ಬೇಕು. ದೀಪ್ತಿಯವರ ಕಥೆಗಳಲ್ಲಿ ಈ ಆಶಯ ದಟ್ಟವಾಗಿ ವ್ಯಕ್ತವಾಗಿದೆ.

ಭಾವವಿರಬಹುದು ಅಥವಾ ಬತ್ತಲಿರಬಹುದು! ಅವಶ್ಯಕ ಅನಿವಾರ್ಯ ಅನ್ನುವುದಷ್ಟನ್ನೇ ಮುಚ್ಚಿಕೊಂಡ್ರೆ ಸಾಕಾ? ಅದು ನಾಗರಿಕತೆಯಾ? ಅವಶ್ಯಕ ಅನಿವಾರ್ಯ ಅನ್ನುವುದಷ್ಟನ್ನೇ ಬಿಚ್ಚಿಕೊಳ್ಳುವುದು ನಾಗರೀಕತೆಯೇನೋ? ಮುಚ್ಚಿಕೊಳ್ಳುವುದರ ಮಿತಿ ಅಲ್ಲ; ಬಿಚ್ಚಿಕೊಳ್ಳುವುದರ ಮಿತಿ. ಪ್ರಪಂಚಕ್ಕೆ ಎಷ್ಟು ಪ್ರದರ್ಶಿಸ್ತೀವಿ ಅನ್ನೋದು ನಾವು ಪ್ರಪಂಚವನ್ನ ಎಷ್ಟು ಗೌರವಿಸ್ತೀವಿ ಮತ್ತು ಪ್ರಪಂಚ ನಮ್ಮನ್ನು ಎಷ್ಟು ಗೌರವಿಸಬೇಕು ಅಂತ ಅಪೇಕ್ಷಿಸ್ತೀವಿ ಅನ್ನುವುದರ ಮೇಲಿದೆ. ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ ಓದುಗನನ್ನು ಖಂಡಿತ ಕಾಡತ್ತೆ. ಅಲ್ಲಿ ಕಥೆ ಗೆಲ್ಲತ್ತೆ.

(ಎಸ್.ಎನ್.ಸೇತುರಾಮ್)

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಬಿಡುಬೀಸಾಗಿ ವ್ಯಕ್ತವಾಗುವ ಅವಕಾಶ ಮತ್ತು ಪರಿಸ್ಥಿತಿ ಕಡಿಮೆ. ಸ್ತ್ರೀ ಪ್ರಾಧಾನ್ಯದ್ದೇ ಸಮ್ಮೇಳನವನ್ನು ಸ್ತ್ರೀಯರೇ ಯಶಸ್ವಿಯಾಗಿ ನಡೆಸಿ “ನಾವು ಗಂಡಸರಿಗೇನು ಕಮ್ಮಿ ಇಲ್ಲ” ಅಂತಂದು ಗಂಡಸರನ್ನ ಮತ್ತೆ ಮುಖ್ಯವಾಗಿಸಿದ್ದೇ ಹೆಚ್ಚು. ಹಾಗಿದ್ದಾಗ ಸ್ತ್ರೀ ಸಾಹಿತ್ಯದ ದಾಖಲಾತಿಯ ಅವಕಾಶಗಳು ಕಮ್ಮಿ. ದೀಪ್ತಿಯವರ ಮೊದಲ ಕಥಾಸಂಕಲನ “ಆ ಬದಿಯ ಹೂವು” ಇದರ ಕಥೆಗಳಲ್ಲಿ ಹಿಂಜರಿಕೆ ಇದೆ. ಆದರೆ ಈ ಸಂಕಲನದಲ್ಲಿ ರೆಕ್ಕೆ ಬಲಿತಿದೆ. ಗರಿಗೆದರಿ ಪುಕ್ಕ ಒದರಿ ಹಿಗ್ಗಿಸಿ ಸ್ವಚ್ಛಂದವಾಗಿದ್ದಾರೆ. ಹೆಣ್ಣು ಪಾತ್ರಗಳು ಗಟ್ಟಿ ಇವೆ. ವಾಸ್ತವಕ್ಕೆ ಹತ್ತಿರವಾಗಿದೆ ಮತ್ತು ಸ್ಪಷ್ಟವಾಗಿದೆ. ಅವಶ್ಯವಾದ ಎಲ್ಲ ಹೊಂದಾಣಿಕೆಗಳನ್ನು ಇಷ್ಟವಿಲ್ಲದಿದ್ದರೂ, ಮನಸ್ಸಿಗೆ ನೋವಾದರೂ, ತುಟಿ ಕಚ್ಚಿ ಮಾಡಿಕೊಳ್ಳುವ ಪಾತ್ರಗಳು ಸ್ವಂತ ಅಸ್ತಿತ್ವಕ್ಕೆ ಧಕ್ಕೆಯಾದಾಗ ಸಿಡಿದು ನಿಲ್ಲುತ್ತವೆ. ಅತಿಯಾದ ಸಂಯಮ ಹೌದು; ಆದರೆ ಕಟ್ಟೆ ಒಡೆದಾಗ ಮಿತಿ ಮೀರಿದ ಶಕ್ತಿಯಲ್ಲಿ ಝಾಡಿಸುತ್ತವೆ. ಗೆದ್ದು ಸೋಲಿಸಲಾಗದ ಅನಿವಾರ್ಯತೆಯಲ್ಲಿ ನಿರಾಕರಿಸಿ, ನಿಕೃಷ್ಟಗೊಳಿಸಿ ಕ್ರಿಯೆಯಲ್ಲಿ ಎಷ್ಟೋ ಬಾರಿ ತಾವೇ ನಶಿಸಿ ಅಪರಾಧಿ ಮನೋಭಾವವನ್ನು ಬಿತ್ತಿ ಸೋಲಿಸುತ್ತವೆ. ಕಥೆಗಳನ್ನು ಓದಿ ಮುಗಿಸಿದ ಮೇಲೆ ಹೆಣ್ತನದ ಬಗ್ಗೆ ಹೆಮ್ಮ ಅನ್ನಿಸಿದರೂ ವಸ್ತು, ಸ್ಥಿತಿ, ಪರಿಸ್ಥಿತಿಯ ಅರಿವಿನಲ್ಲಿ ವಿಷಾದದ ಛಾಯೆ ಢಾಳಾಗಿ ಕಾಡತ್ತೆ.

ಭವಿಷ್ಯದ ಬದುಕು ಹೇಗಿರಬೇಕು, ತನ್ನ ನಂತರದ ಪೀಳಿಗೆಯ ಸುಖ ಸೌಕರ್ಯಕ್ಕೆ ಏನು ಅವಶ್ಯಕ ಅನ್ನುವುದನ್ನು ಮಹಿಳೆಗಿಂತ ಹೆಚ್ಚು ಯಾರು ಬಲ್ಲರು? ಹಾಗಾಗಿ ಬದುಕನ್ನಪ್ಪಿ ಬೀಡುಬಿಟ್ಟು ಚಿಗುರುವ ಚಿಗುರಿಸುವ ಹೆಣ್ಣು ಮಕ್ಕಳ ಸಾಹಿತ್ಯ ಮುಖ್ಯವೇನೋ? ಅದು ಪ್ರಸ್ತುತ ಕೂಡ. ಕಥೆಗಳು ಈ ನಿಟ್ಟಿನಲ್ಲಿ ಪ್ರಸ್ತುತವಾಗುತ್ತವೆ. ಹಿಂದೆ ಹೇಳಿದಂತೆ ಪ್ರತಿ ಕಥೆಯ ಹಂದರ ಪಾತ್ರ ವಿವರಣೆಗಳಿಗೆ ಹೋಗುವುದಿಲ್ಲ. ಮುನ್ನುಡಿಕಾರನಾಗಿ ಓದುಗನ ಕುತೂಹಲ ಕೊಲ್ಲುವುದಿಲ್ಲ ಕೂಡ. ಈ ತರಹದ ಸಾಹಿತ್ಯ ಇನ್ನಷ್ಟು ಬರಲಿ ಅಂತ ಆಶಿಸುತ್ತೇನೆ.