ಎರಡನೇ ಪಾಳಿ

ಅಮ್ಮನ ನಿರ್ಲಿಪ್ತ ನಿರ್ಜೀವ
ಆಕಾಶಕ್ಕೀಗ ಫೇಶಿಯಲ್ ನ ಬೆಳಕು
ಕಪ್ಪು ದಟ್ಟ ಹೊಗೆಯ
ಅರಣ್ಯದಲಿ ಓವೆನ್ನಿನ ಗಾಳಿ

ಸೀರೆಯ ಹೂಗಳೆಲ್ಲ
ಪಳಪಳನೆ ಹೊಳೆಯುತ್ತಿವೆ
ಜೀನ್ಸ್ ಚೂಡಿದಾರದಲಿ
ಮೂಲೆ ಹಿಡಿಯುತ್ತಿದ್ದ ಬಿಕ್ಕುಗಳೆಲ್ಲ
ಲಿಪ್ ಸ್ಟಿಕ್ ನ ಸಂಗದಲಿ ರಂಗೇರಿವೆ

ಗಂಟು ಸಡಿಲಿಸಿ ಮುಗುಳು ನಕ್ಕಿವೆ
ನಾಜುಕು ಐಬ್ರೋಗಳು
ಕೈ ಹಿಡಿದು ನಡೆಸಿವೆ
ಬಿಂಕದ ಹೈ ಹೀಲ್ಡ್ ಗಳು
ವರ್ಗಗೊಂಡಿವೆ ಕಂಕುಳು, ಕೈಗಳ
ಜವಾಬ್ದಾರಿಗಳು

ವಾಹನದ ಚಕ್ರಗಳಿಗೆ
ಆಶೀರ್ವಾದವೂ ಹೊಸ್ತಿಲ ದಾಟಿ
ಗರಿಗೆದರಿವೆ ಬೇಬಿಯ
ಸ್ಕೂಲ್ ಮೀಟಿಂಗಿನಲ್ಲಿ

ಋತುಗಳೆಲ್ಲಾ ಮಿಂದು ಮಿರಗುತ್ತಿವೆ
ಮೊಂಮ್ ನ
ಕಪ್ಪು ಕನ್ನಡಕದ ಹಿಂದೆ

 

ನಾನು ಮತ್ತು ಹತ್ತು ಪೈಸೆ

ಹತ್ತು ವರ್ಷಗಳ ಹಿಂದೆ
ಹತ್ತು ಪೈಸೆಯೊಂದು ನನ್ನ
ತುಂಬಾ ಕಾಡಿತ್ತು
ಅಳಿಸಿ, ಅಲ್ಲಾಡಿಸಿ ಬೇರೆಲ್ಲೋ
ನಿಂತು ಛೇಡಿಸಿ ಸತಾಯಿಸಿತ್ತು.

ತೆರೆದ ಅಂಗಡಿಗಳ ತರಾವರಿ
ಮಿಠಾಯಿಗಳು
ಸರ್ ಬುರ್ ಎಂದು ಅತ್ತಿತ್ತಾ
ಓಡುತ್ತಾ ಕೆಂಪು ದೀಪವ
ಮಿಣಕಿಸುವ
ಆಟಿಕೆಗಳು ಕಣ್ಣೆವೆಗಳ ಕುಕ್ಕುತ್ತಾ
ಅಣಕಿಸುವಾಗ
ಮತ್ಯಾರದೋ ಜೇಬಿನಲ್ಲಿ ಕೂತು
ನನ್ನ ನೋಡಿ ಕಿಸಕ್ಕನೆ ನಕ್ಕಿತ್ತು.

ತೇಪೆ ಹಚ್ಚಿದ ಚಡ್ಡಿಯ ಕಿಸೆಯ
ಜೊತೆಗೆ ಎಂದೊ ದೋಸ್ತಿ ಮಾಡದ
ಗೋಲಿಗಳು
ದೊರದಲ್ಲಿಯೇ ನಿಂತು ತಿರುಗುವ
ಬಣ್ಣ ಬಣ್ಣದ ಬುಗುರಿಗಳು
ಗೋಳು ಹೊಯ್ದುಕೊಳ್ಳುವಾಗ
ಮೀಸೆ ತಿರುವುತ್ತಾ ಗತ್ತು ಹಾರಿಸಿ ಹಾರಿತ್ತು.

ಈಗ ಮತ್ತದೆ ಹತ್ತು ಪೈಸೆ
ನೆಲೆ ಕಳೆದುಕೊಂಡು
ಬಂಧು-ಬಾಂಧವರೊಡನೆ
ಬಂದು ನನ್ನೆದುರು ತಲೆ ತಗ್ಗಿಸಿ
ಕೂತಿದೆ ಥೇಟ್ ತಪ್ಪೊಪ್ಪಿಕೊಂಡ
ಅಪರಾಧಿಯಂತೆ.

ಮುಖಾಮುಖಿಯಾದರೂ
ಮೌನ ಮುರಿಯದ ನಮ್ಮಿಬ್ಬರ
ನಡುವೆ ಮಧ್ಯಸ್ಥಿಕೆ ಮಾಡಲಾಗದೆ
ಸಮಯ ಸಣ್ಣಗೆ ಬಿಕ್ಕುತ್ತಿದೆ.