ಅಂಗವಿಕಲರನ್ನು,ತೃತೀಯ ಲಿಂಗಿಗಳನ್ನು ಅಥವಾ ಯಾವುದೋ ಖಾಯಿಲೆಗೆ ತುತ್ತಾಗಿ ಕುರೂಪಗೊಂಡಿರುವ ಒಬ್ಬ ವ್ಯಕ್ತಿಯ ಭಾಗವನ್ನು ಮತ್ತೆಮತ್ತೆ ನೋಡುವುದು.ಕುಂಟುತ್ತಾ ನಡೆವ ವ್ಯಕ್ತಿಯ ಕಾಲನ್ನೇ ನಿಂತು ನೋಡುವುದು,ತೃತೀಯ ಲಿಂಗಿಗಳನ್ನು ಕೆಟ್ಟ ದೃಷ್ಟಿಯಿಂದಲೋ ಅಥವಾ ತುಚ್ಚವಾಗಿ ಕಾಣುವುದು,ಅಥವಾ ಬಹಳೇ ಅನುಕಂಪದಿಂದ ನೋಡುವುದು ಮನುಷ್ಯನ ಕೆಟ್ಟ ಚಾಳಿಗಳಲ್ಲಿ ಒಂದೆನ್ನಬಹುದು.ಎಲ್ಲವೂ ಸರಿಯಾಗಿದ್ದು ಮನಸ್ಸಿನ ಊನವೇ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವಂಥ ಉದಾಹರಣೆಗಳು ನಮ್ಮೆದುರಿಗಿರುವಾಗ,ತಮ್ಮದಲ್ಲದ ತಪ್ಪಿಗೆ, ಮಾನಸಿಕವಾಗಿ,ದೈಹಿಕವಾಗಿ ನೋವನುಭವಿಸುವ ವ್ಯಕ್ತಿಗಳನ್ನು ಚುಚ್ಚುವುದು ಎಷ್ಟರ ಮಟ್ಟಿಗೆ ಸರಿ?
ರೂಪಶ್ರೀ ಕಲ್ಲಿಗನೂರು ಬರೆಯುವ ಪಾಕ್ಷಿಕ ಅಂಕಣ.

ಆವತ್ತೊಂದು ದಿನ ಸಂಜೆ ಕೆಲಸ ಮುಗಿಸಿಕೊಂಡು ಮನೆಯ ಹಾದಿ ಹಿಡಿದಿದ್ದೆ. ಶಿವಾಜಿನಗರದಲ್ಲಿ ಮನೆಯ ಕಡೆಗೆ ಹೊರಡುವ ಬಸ್ ಹತ್ತಿ, ಕಿಟಕಿಗೆ ಮುಖ ಕೊಟ್ಟು ಕುಳಿತಿದ್ದೆ. ಎಂದಿನಂತೆ ಆ ಬಸ್ ಹತ್ತುವ ಮುನ್ನವೂ ಸೀಟ್ ಇದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಂಡೇ ಆ ಬಸ್ಸನ್ನು ಹತ್ತಿದ್ದು ನಾನು. ಸೀಟ್ ಖಾಲಿ ಇಲ್ಲದ ಬಸ್ಸನ್ನು ನಾನು ಹತ್ತಿದ ನೆನಪು ತೀರಾ ಕಡಿಮೆಯೇ. ಅದಕ್ಕೇ ಅದನ್ನು ಒತ್ತಿ ಹೇಳಿದ್ದು. ಮೊದಲು ನಾನು ಕುಳಿತಾಗ ಹೆಚ್ಚು ರಷ್ ಇಲ್ಲದ ಬಸ್ಸು, ಹೊರಗೆ ತುಂತುರು ಮಳೆ ಹನಿಯುತ್ತಲೇ ಕಾಲಿಡಲೂ ಜಾಗವಿಲ್ಲದಷ್ಟು ತುಂಬಿಹೋಯಿತು. ಅಲ್ಲಾ ಈ ಬೆಂಗಳೂರು ಜನ ಸಣ್ಣ-ಪುಟ್ಟ ಮಳೆಗೂ ತೀರಾ ಪ್ರವಾಹ ಬಂದವರಂತೆ ಆಡೋದು ಯಾಕೇಂತ ನನಗೆ ತಿಳಿಯೋದಿಲ್ಲ. ಬೇಕಿದ್ದರೆ ನೀವು ಒಮ್ಮೆ ಪರೀಕ್ಷಿಸಿ, ಒಂದು ಸಣ್ಣ ಮಳೆ ಬಿದ್ದರೆ, ಬೆಂಗಳೂರಿನ ರಸ್ತೆಗಳು ಅರ್ಧಕ್ಕರ್ಧ ಖಾಲೀ ಹೊಡೆಯಲಾರಂಭಿಸುತ್ತವೆ. ದೈತ್ಯ ರಾಕ್ಷಸನಂಥಾ ಟ್ರಾಫಿಕ್ಕಿನಲ್ಲಿ ರೇಸರ್ ಗಳಂತೆ ಗಾಡಿ ಓಡಿಸುವ ಈ ಜನ ಎದೆ ಹಗೂರ ಮಾಡುವ ಮಳೆಗೆ ಮಾತ್ರ ಹೆದರುವುದನ್ನು ಕಂಡರೆ ನನಗೆ ಎಲ್ಲಿಲ್ಲದ ನಗು.

ಹಾಗೆ ನಾನು ಹತ್ತಿದ ಬಸ್ ಆರ್. ಟಿ. ನಗರದ ಕಡೆಗೆ ಕಾಲು ಹಾಕಿತ್ತು. ಮಾರ್ಗದ ನಡುವೆ ಸಿಕ್ಕ ನೀರು ತುಂಬಿದ ಗುಂಡಿಗಳಲ್ಲಿ ತನ್ನ ಟಯರ್ ಇಳಿಸಿ, ನಡೆಯುತ್ತಿದ್ದವರ ಮೇಲೆ, ಮತ್ತು ಅಕ್ಕ ಪಕ್ಕ ಸಾಗುತ್ತಿದ್ದ ವಾಹನಗಳ ಮೇಲೆ ಕೆಸರಿನ ನೀರು ಎರಚುತ್ತ ಸಾಗುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಕಿಟಕಿ ಹಾಕಿ ಮಳೆನೋಡುತ್ತ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಲಿದ್ದೆ. ಇನ್ನೂ ಮೂರು ಸ್ಟಾಪ್ ದಾಟಿದರೆ ನನ್ನ ಮನೆಗೆ ಇಳಿದುಕೊಳ್ಳಬೇಕಾದ ನಿಲ್ದಾಣ ಬರುತ್ತಿತ್ತು. ಅಷ್ಟರಲ್ಲಿ, ನಾಲ್ಕೈದು ಮಂದಿ ಮಂಗಳ ಮುಖಿಯರು ನಮ್ಮ ಬಸ್ಸಿಗೆ ಹತ್ತಿ, ನಾನು ಕುಳಿತಿದ್ದ ಸೀಟಿನ ಮುಂದೆ ನಿಂತುಕೊಂಡರು. ಅದಾಗಲೇ ಬಸ್ಸು ಸುಮಾರು ದೂರ ಕ್ರಮಿಸಿದ್ದರಿಂದ, ಬಸ್ಸಿನ ಪ್ರಯಾಣಿಕರ ದಟ್ಟಣೆಯೂ ಕಡಿಮೆಯಾಗಿತ್ತು. ಹಾಗಾಗಿ ಅವರೆಲ್ಲ, ಅಲ್ಲಿಲ್ಲಿ ನಿಂತಿದ್ದ ಕಾಲೇಜು ಹುಡುಗಿಯರಂತೆ, ಅಕ್ಕತಂಗಿಯರಂತೆ ಏನೇನನ್ನೋ ಮಾತನಾಡಿಕೊಂಡು, ತಮಾಷೆ ಮಾಡಿಕೊಂಡು, ಮನಸ್ಸು ಬಿಚ್ಚಿ ಹರಟುತ್ತ ಪ್ರಯಾಣಿಸುತ್ತಿದ್ದರು.

ಅವರು ಬಸ್ ಹತ್ತಿದ ತೀರಾ ಮುಂದಿನ ನಿಲ್ದಾಣದಿಂದ ಬಸ್ ಹತ್ತಿದ್ದ ಯಾರೋ ಒಬ್ಬರು ಹುರಿದ ಮೀನನ್ನು ತಮ್ಮೊಟ್ಟಿಗೆ ಒಯ್ಯುತ್ತಿದ್ದರೆಂದು ಕಾಣುತ್ತೆ. ಸಸ್ಯಾಹಾರಿಯಾಗಿರುವ ನನಗೆ ಮೀನಿನ ವಾಸನೆಗೆ ಹೊಟ್ಟೆ ತೊಳಸಿದ ಅನುಭವವಾಗುತ್ತದೆ. ಅವತ್ತೂ ಹಾಗೇ ಅನ್ನಿಸಿತಾದರೂ ತಂದವರಿಗೆ ಹಾಗೆ ನಾನು ಮೂಗುಮುಚ್ಚಿಕೊಳುವುದನ್ನು ಕಂಡು ಬೇಸರ ಅಥವಾ ಸಿಟ್ಟು ಬರಬಹುದೆಂದು ಕಷ್ಟಪಟ್ಟು ಬಾಯಿಯಲ್ಲಿ ಉಸಿರಾಡುತ್ತ ಸುಮಾರು ಹೊತ್ತು ತಡೆದುಕೊಂಡಿದ್ದೆ. ಆದರೆ ಆಮೇಲೆ ಏಕೋ ತೀರಾ ಹೊಟ್ಟೆ ಉಬ್ಬರಿಸಿಬಿಡಬಹುದೆಂಬಂತಾಗಿ, ಕರ್ಚೀಪನ್ನು ಮೂಗಿಗೆ ಹಿಡಿದುಕೊಂಡು ಕುಳಿತೆ. ಹಾಗೆ ನಾನು ಕುಳಿತದ್ದನ್ನು ನೋಡಿದ ಮಂಗಳಮುಖಿಯರ ಗುಂಪಿನಲ್ಲಿದ್ದ ಒಬ್ಬರಿಗೆ ಏನೆನ್ನಿಸಿತೋ ಏನೋ, ನನ್ನನ್ನ ದುರುಗುಟ್ಟಿಕೊಂಡು ನೋಡತೊಡಗಿದರು. ಅವರು ನನ್ನನ್ನು ನೋಡುತ್ತಿರೋದಾ ಅಥವಾ ಬೇರೆಯವರನ್ನೋ ಅಂತ ಅತ್ತಿತ್ತ ತಿರುಗಿ, ಮತ್ತೆ ಅವರತ್ತ ನೋಡಿದಾಗ ಅವರ ದೃಷ್ಟಿ ನನ್ನ ಮೇಲೆಯೇ ನೆಟ್ಟಿತ್ತು. ಮೊದಲೆರೆಡು ನಿಮಿಷ ಅವರ ಸಿಟ್ಟಿಗೆ ಕಾರಣ ಗೊತ್ತಾಗಲಿಲ್ಲವಾದರೂ, ಆಮೇಲೆ ಹಾಗೆ ಮೀನಿನ ವಾಸನೆಗೆ ಮೂಗು ಮುಚ್ಚಿಕೊಂಡಿದ್ದ ನನ್ನನ್ನು ಕಂಡು, ಅವರ ಸಲುವಾಗಿ ಮೂಗು ಮುಚ್ಚಿಕೊಂಡಿದ್ದೀನೇನೋ ಅಂಥ ತಪ್ಪಾಗಿ ಗ್ರಹಿಸಿ ಬೇಸರಿಸಿಕೊಂಡಿದ್ದಾರೇನೋ ಅನ್ನಿಸಿತು. ಆಮೇಲೆ ಅವರು ಕೆಲ ಸಮಯದ ನಂತರ ಮೆಲ್ಲಗೆ ತಮ್ಮ ಅಕ್ಕಪಕ್ಕದವರಿಗೂ ಏನೋ ಹೇಳಿದ್ದೇ ತಡ, ಉಳಿದ ಮಂಗಳಮುಖಿಯರೂ ನನ್ನನ್ನೂ ಸಿಟ್ಟಿನಿಂದ ನೋಡಿದರು. ಅವರ ನೋಟ ಒಂದುಕ್ಷಣ ಭಯತರಿಸಿದ್ದರೂ, ಸಣ್ಣ ಅಪಾರ್ಥವೊಂದು ಇದಕ್ಕೆ ಕಾರಣ ಎಂದು ತಿಳಿಯಲು ನನಗೆ ಸಮಯ ಹಿಡಿಯಲಿಲ್ಲ. ಹಾಗಾಗಿ ತಮ್ಮತಮ್ಮಲ್ಲೇ ನನ್ನನ್ನು ಬೈದುಕೊಂಡು, ಮುಂದಿನ ನಿಲ್ದಾಣದಲ್ಲಿ ಇಳಿದುಕೊಂಡರು. ಅವರೂ ಕೇಳಲಿಲ್ಲ, ನನಗೂ ಪರಿಸ್ಥಿತಿಯ ಬಗ್ಗೆ ಅವರಿಗೆ ವಿವರಿಸಿ ಹೇಳಲಾಗಲಿಲ್ಲ. ತಪ್ಪು ಗ್ರಹಿಕೆಯಿಂದ ಅವರು ನೋವುಮಾಡಿಕೊಂಡರಲ್ಲ ಅನ್ನೋ ಬೇಸರ ನನ್ನದು. ಹಾಗಾಗಿ ಅದೊಂದು ಘಟನೆ ಇನ್ನೂ ನನ್ನ ಮನಸ್ಸಿನಲ್ಲುಳಿದಿದೆ.

ಅಂಗವಿಕಲರನ್ನು, ತೃತೀಯ ಲಿಂಗಿಗಳನ್ನು ಅಥವಾ ಯಾವುದೋ ಖಾಯಿಲೆಗೆ ತುತ್ತಾಗಿ ಕುರೂಪಗೊಂಡಿರುವ ಒಬ್ಬ ವ್ಯಕ್ತಿಯ ಭಾಗವನ್ನು ಮತ್ತೆಮತ್ತೆ ನೋಡಿ, ಅವರ ಮನಸ್ಸು ಹಾಳುಗೆಡವುವ ಜನರನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಕುಂಟುತ್ತಾ ನಡೆವ ವ್ಯಕ್ತಿಯ ಕಾಲನ್ನೇ ನಿಂತು ನೋಡುವುದು, ತೃತೀಯ ಲಿಂಗಿಗಳನ್ನು ಕೆಟ್ಟ ದೃಷ್ಟಿಯಿಂದಲೋ ಅಥವಾ ತುಚ್ಚವಾಗಿ ಕಾಣುವುದು, ಅಥವಾ ಬಹಳೇ ಅನುಕಂಪದಿಂದ ನೋಡುವುದು ಮನುಷ್ಯನ ಕೆಟ್ಟ ಚಾಳಿಗಳಲ್ಲಿ ಒಂದೆನ್ನಬಹುದು. ಎಲ್ಲವೂ ಸರಿಯಾಗಿದ್ದು ಮನಸ್ಸಿನ ಊನವೇ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವಂಥ ಉದಾಹರಣೆಗಳು ನಮ್ಮೆದುರಿಗಿರುವಾಗ, ತಮ್ಮದಲ್ಲದ ತಪ್ಪಿಗೆ, ಮಾನಸಿಕವಾಗಿ, ದೈಹಿಕವಾಗಿ ನೋವನುಭವಿಸುವ ವ್ಯಕ್ತಿಗಳನ್ನು ಚುಚ್ಚುವುದು ಎಷ್ಟರ ಮಟ್ಟಿಗೆ ಸರಿ?

******

ಅದು ನನ್ನ ಹೊಸ ಕೆಲಸದ ಮೊದಲನೆಯ ದಿನ. ಇಂಟರ್ ನ್ಯಾಷನಲ್ ಶಾಲೆಯೊಂದಕ್ಕೆ ಚಿತ್ರಕಲಾ ಶಿಕ್ಷಕಿಯಾಗಿ ನೇಮಕವಾಗಿದ್ದೆ. ಮಕ್ಕಳೊಂದಿಗೆ ಕೆಲಸ ಮಾಡಬೇಕೆಂಬ ಹಲವು ವರ್ಷಗಳ ಕನಸು ನನಸಾಗುತ್ತಿದ್ದ ಸಮಯ. ಹಾಗಾಗಿ ರಾತ್ರಿಯೆಲ್ಲ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಶಾಲೆಯಾದ್ದರಿಂದ ಅಲ್ಲಿ ಕನಿಷ್ಠ 8 ಬೇರೆಬೇರೆ ದೇಶದ ಮಕ್ಕಳು ಓದುತ್ತಿದ್ದರು. ಇಲ್ಲೇ ನ್ಯಾಷನಲ್ ಮತ್ತು ಲೋಕಲ್ ಶಾಲೆಯ ಮಕ್ಕಳ ಉಪಟಳದ ಬಗ್ಗೆ ಕೇಳಿಯೇ ಸುಸ್ತು ಹೊಡೆದಿದ್ದ ನಾನು, ಹೀಗೆ ಬೇರೆಬೇರೆ ದೇಶದ ಮಕ್ಕಳನ್ನು ನಿಭಾಯಿಸೋದು ಹೇಗೆ ಎಂಬ ಆತಂಕ ಬೇರೆ ನನಗೆ. ತೀರ ಮಕ್ಕಳೆನಿಸುವ ಮಕ್ಕಳನ್ನು ನಿಭಾಯಿಸುವುದು ಒಂಥರಾ ಖುಷಿ ಮತ್ತು ಇಷ್ಟದ ಕೆಲಸವಾದರೆ ಹೈಸ್ಕೂಲು ಮತ್ತು ಅದರ ನಂತರದ ಮಕ್ಕಳನ್ನು ನಿಭಾಯಿಸುವ ಕೆಲಸ ಬೇರೆ ತೆರನಾದದ್ದು. ಅದಕ್ಕಿಂತ ಮೊದಲು ಬೇರೆಲ್ಲೂ ಮಕ್ಕಳಿಗೆ ಪಾಠ ಮಾಡಿ ಗೊತ್ತಿಲ್ಲದ ನನಗೆ, ಸೀದಾಸೀದಾ 8ನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗೆ ಪಾಠ ಮಾಡುವ ಜವಾಬ್ದಾರಿ ಸಿಕ್ಕದ್ದೇ ಇಂಥ ಆತಂಕಕ್ಕೆ ಕಾರಣವಾಗಿತ್ತು.

ಹಾಗೆ ಆವತ್ತು ಭಯ ಮತ್ತು ಸಂತೋಷದ ಸಮ್ಮಿಶ್ರ ಭಾವದಲ್ಲೇ ಆ ಶಾಲೆಗೆ ಕಾಲಿಟ್ಟಿದ್ದೆ. ನನ್ನ ಗಾಡಿಯನ್ನ ಪಾರ್ಕ್ ಮಾಡಿ, ಮುಖ್ಯ ಕಟ್ಟಡದಲ್ಲಿದ್ದ ಸಹಿ ಪುಸ್ತಕದಲ್ಲಿ ಸಹಿ ಮಾಡಿ, ನನಗೆ ಕೊಟ್ಟಿದ್ದ ಕೋಣೆಯಿದ್ದ ಕಟ್ಟಡದತ್ತ ಕಾಲು ಹಾಕಿದ್ದೆ. ತುಂಬಾ ವಿಶಾಲವಾಗಿದ್ದ ಆ ಶಾಲೆಯ ಮುಂಭಾಗದ ತುಂಬಾ ಹಲವು ಮಕ್ಕಳು ಓಡಾಡಿಕೊಂಡಿದ್ದರು. ಓಡಾಡಿಕೊಂಡಿದ್ದರು ಅನ್ನುವುದಕ್ಕಿಂತ ಇಬ್ಬರು ಮೂವರು, ಹುಡುಗ-ಹುಡುಗಿಯರು ಗುಂಪು ಗುಂಪಾಗಿ ಅಲ್ಲಲ್ಲಿ ಕುಳಿತುಕೊಂಡಿದ್ದರು ಎಂದರೆ ಸರಿಯಾದೀತು. ಸಾಮಾನ್ಯವಾಗಿ ಶಾಲೆಗಳ ಮಕ್ಕಳಲ್ಲಿ ಕಾಣುವಂಥಾ ಜೀವನೋತ್ಸಾಹದ ಕಳೆಯನ್ನು ಅವರಲ್ಲಿ ನಾನು ಕಂಡಿರಲಿಲ್ಲ. ಅದಕ್ಕೆ ಮೊದಲು ಕಾರಣ ತಿಳಿಯುತ್ತಿರಲಿಲ್ಲವಾದರೂ ಆಮೇಲಾಮೇಲೆ ಅಂದರೆ ಅವರೊಡನೆ ಮಾತನಾಡುತ್ತಾ ಹೋದಂತೆ ಅವರ ಚಿತ್ರ-ವಿಚಿತ್ರ ನಡುವಳಿಕೆಯ ಬಗ್ಗೆ ಕಾರಣ ಸಿಗುತ್ತಾ ಹೋಯಿತು. ಮುಖ್ಯವಾಗಿ ಏನೆಲ್ಲವನ್ನು ಕೊಂಡುಕೊಳ್ಳಲು ಅವರ ಕೈಯಲ್ಲಿ ಹಣವಿರುವಾಗ, ಕಂಡದ್ದೆಲ್ಲದರ ಬಗ್ಗೆಯೂ ಅವರಿಗೆ ನಿರಾಸಕ್ತಿಯೇ. ಏನನ್ನು ನೋಡಿದರೂ ಅವರ ಆಸಕ್ತಿ ಪುಟಿಯುವುದಿಲ್ಲ. ಎಂಥಾ ಮಹಾನ್ ಕೆಲಸ ಅಥವಾ ಅಮೇಜಿಂಗ್ ಅನ್ನುವ ವಿಷಯದ ಬಗ್ಗೆ ಹೇಳಿದಾಗಲೂ ಅವರು “ಓಹ್ ಓಕೆ” ಎನ್ನುವ ಮೂಲಕ ಅವರ ಆಸಕ್ತಿಯ ಮಟ್ಟವನ್ನು ಶಿಕ್ಷಕರೆದುರಿಗೆ ಪ್ರದರ್ಶಿಸಿಬಿಡುತ್ತಾರೆ. ಅದರ ಬಗ್ಗೆ ಮತ್ತೊಮ್ಮೆ ಎಂದಾದರೂ ಬರೆಯುವೆ.

ಮುಖ್ಯ ಕಟ್ಟಡದಿಂದ ನನ್ನ ಕೊಠಡಿಯಿದ್ದ ಕಡೆಗೆ ಹೊರಟಿದ್ದ ನನ್ನ ಮನಸ್ಸನ್ನು ಆ ದಿನದ ತರಗತಿ, ಮಕ್ಕಳನ್ನು ನಿಭಾಯಿಸುವ ಬಗ್ಗೆ ಹತ್ತು ಹಲವು ಆಲೋಚನೆಗಳು ತುಂಬಿಕೊಂಡಿದ್ದವು. ಹಾಗೇ ಏನನ್ನೋ ನೆನೆಯುತ್ತಾ ಅತ್ತಿತ್ತ ನೋಡಿಕೊಂಡು ಇನ್ನೇನು ನಮ್ಮ ಕಟ್ಟಡದ ಮೆಟ್ಟಿಲೇರಬೇಕು ವಿಚಿತ್ರವಾದ ಮುಖಚರ್ಯೆಯುಳ್ಳ ಹುಡುಗಿಯನ್ನು ಕಂಡು ಒಂದುಕ್ಷಣ ಎದೆ ನಡುಗಿದಂತಾಗಿತ್ತು. ಅವಳನ್ನು ಕಂಡು ಮುಖದ ಭಾವ ಬದಲಿಸಬಾರದೆಂದು ಬಹಳ ಜಾಗರೂಕಳಾಗಿ, ನಡೆಯುತ್ತಿದ್ದ ವೇಗವನ್ನು ತೀರಾ ಕಡಿಮೆಯೆಂಬಂತೆ ಹೆಚ್ಚಿಸಿ, ಮತ್ತೊಮ್ಮೆ ಅವಳನ್ನು ನೋಡದೇ ನನ್ನ ಕೋಣೆಯತ್ತ ನಡೆದಿದ್ದೆ. ಆ ಶಾಲೆಯಲ್ಲಿ ಆಯಾ ತರಗತಿಗಳಿಗೆ ಅಂಥ ಕೊಠಡಿಗಳು ಇರುವುದಿಲ್ಲ. ಬದಲಾಗಿ ಒಬ್ಬೊಬ್ಬ ಶಿಕ್ಷಕರಿಗೆ ಒಂದೊಂದು ಕೋಣೆ. ಅದನ್ನು ಅವರ ವಿಷಯಕ್ಕೆ ತಕ್ಕಂತೆ ಮಾರ್ಪಾಡಿಸಿಕೊಳ್ಳುವ ಅವಕಾಶವಿರುತ್ತೆ. ನಮ್ಮ ವಿಷಯ ತೆಗೆದುಕೊಳ್ಳುವ ಮಕ್ಕಳು ಪಿರೀಯಡ್ ಗೆ ತಕ್ಕಂತೆ ತಾವೇ ಶಿಕ್ಷಕರ ಕೋಣೆಗೆ ಹೋಗಿ ಪಾಠ ಕೇಳುತ್ತಾರೆ. ಹಾಗಾಗಿ ನಾನು ನನಗೆ ಕೊಟ್ಟ ಕೊಠಡಿಗೆ ಹೋಗಿ ಬಾಗಿಲು ಹಾಕಿ ಕೂತು ನಿಟ್ಟುಸಿರುಬಿಡತೊಡಗಿದೆ. ಯಾಕೋ ಒಂದುಕ್ಷಣ ಆ ಹುಡುಗಿ ನನ್ನ ಕ್ಲಾಸಿಗೆ ಬರದೇಹೋದರೆ ಒಳ್ಳೆಯದೇನೋ ಅಂತ ಒಂದು ಕ್ಷಣ ಅನ್ನಿಸಿದ್ದೇ ತಡ, ನೂರು ಬಾರಿ ನನ್ನನ್ನು ಹಳಿದುಕೊಂಡುಬಿಟ್ಟೆ.

ಅದು ಶಾಲೆಯ ಮೊದಲ ದಿನವಾದ್ದರಿಂದ ಹೆಡ್ ಮಾಸ್ಟರ್ ಸ್ವತಃ ವಾರಕ್ಕೆ ಟೈಂ ಟೇಬಲ್ ಸಿದ್ಧಪಡಿಸಿ, ಆಯಾ ತರಗತಿಗೆ ಯಾರೆಲ್ಲ ಬರುವರೆಂಬ ಪಟ್ಟಿಯನ್ನು ಕಳಿಸಿಕೊಟ್ಟಿದ್ದರು. ಅದನ್ನು ತೆರೆದು ನೋಡಿ, ನನ್ನ ತರಗತಿಗೆ ಬರಲಿರುವ ಮೊದಲ ಇಬ್ಬರು ವಿದ್ಯಾರ್ಥಿಗಳಿಗಾಗಿ ನಾನು ನನ್ನ ಕೋಣೆಯನ್ನು ಸಿದ್ಧಮಾಡಿಕೊಂಡೆ. ಮೊದಲೇ ತಂದಿಟ್ಟುಕೊಂಡಿದ್ದ ಪೇಪರ್ ಕಟ್ಟಿಂಗ್ಸ್, ಕೆಲವು ಹಾಳಾದ ಬ್ರಶ್ಶುಗಳು, ಹಳೆಯ ಮಣ್ಣಿನ ಮಡಿಕೆಗಳನ್ನು ಬಳಸಿಕೊಂಡು ಆ ಕೊಠಡಿಗೆ ಕಲಾತ್ಮಕ ಸ್ಪರ್ಶವನ್ನು ಕೊಟ್ಟು, ವಿದ್ಯಾರ್ಥಿಗಳಿಗಾಗಿ ಕಾಯುತ್ತ ಕುಳಿತುಕೊಂಡೆ. ಎರಡನೇ ಪೀರಿಯಡ್ಡಿಗೆ ನನಗೆ ತರಗತಿ ಇದ್ದುದರಿಂದ, ಸ್ವಲ್ಪ ಕಾದು ಕೈಯಲ್ಲಿದ್ದ ವಾಚ್ ನೋಡಿಕೊಂಡಾಗ ಸಮಯ 9.15 ಆಗಿತ್ತು. ಅದೇ ಹೊತ್ತಿಗೆ ಬಾಗಿಲ ಬಳಿ ವಿದ್ಯಾರ್ಥಿಗಳ ಮಾತಿನ ಸದ್ದು ಕೇಳಿ, ಮೈ ಕಣ್ಣಾಗಿ ಕುಳಿತಾಗ ಪಟ್ಟಿಯಲ್ಲಿದ್ದ ನಿಶಾ ಮತ್ತು ಮೈಕ್ (ಅಥವಾ ಬೇರೆ ಏನೋ ಹೆಸರಿರಬೇಕು ಅವನದ್ದು) ನನ್ನ ತರಗತಿಗೆ ಕಾಲಿಟ್ಟರು. ಮೈಕ್ ದಕ್ಷಿಣ ಕೊರಿಯಾದ ಹುಡುಗ ಮತ್ತು ನಿಶಾ… ಅದೇ ಬಾಗಿಲಲ್ಲಿ ಸಿಕ್ಕ ಹುಡುಗಿ!

ಏನೆಲ್ಲವನ್ನು ಕೊಂಡುಕೊಳ್ಳಲು ಅವರ ಕೈಯಲ್ಲಿ ಹಣವಿರುವಾಗ, ಕಂಡದ್ದೆಲ್ಲದರ ಬಗ್ಗೆಯೂ ಅವರಿಗೆ ನಿರಾಸಕ್ತಿಯೇ. ಏನನ್ನು ನೋಡಿದರೂ ಅವರ ಆಸಕ್ತಿ ಪುಟಿಯುವುದಿಲ್ಲ. ಎಂಥಾ ಮಹಾನ್ ಕೆಲಸ ಅಥವಾ ಅಮೇಜಿಂಗ್ ಅನ್ನುವ ವಿಷಯದ ಬಗ್ಗೆ ಹೇಳಿದಾಗಲೂ ಅವರು “ಓಹ್ ಓಕೆ” ಎನ್ನುವ ಮೂಲಕ ಅವರ ಆಸಕ್ತಿಯ ಮಟ್ಟವನ್ನು ಶಿಕ್ಷಕರೆದುರಿಗೆ ಪ್ರದರ್ಶಿಸಿಬಿಡುತ್ತಾರೆ.

ಮೊದಲೇ ನಿಶಾಳನ್ನು ಕಂಡಿದ್ದೆನಾದ್ದರಿಂದ ನನ್ನ ಮನಸ್ಸೀಗ ತಿಳಿಯಾಗಿತ್ತು. ಮೈಕ್ ಗಿಂತ ನಿಶಾಳೇ ಹೆಚ್ಚು ಲವಲವಿಕೆಯಿಂದ “ಹಾಯ್ ಮಿಸ್” ಎನ್ನುತ್ತ ಮುಗುಳ್ನಗೆಯೊಂದಿಗೆ ತರಗತಿಗೆ ಬಂದಿದ್ದಳು. ವಯಸ್ಸಿಗಿಂತ ಹೆಚ್ಚಾಗಿ ಸುಕ್ಕುಸುಕ್ಕಾದ ಹಾಗೂ ಸದಾ ಒಣಗಿ, ಪದರ ಬಿಡುವಂಥ ಚರ್ಮದ ನಿಶಾಳ ಕಣ್ಣು ಸದಾ ಕೆಂಪಗಿರುವ ಕಣ್ಣಿನ ನಿಶಾ ಯಾರೊಟ್ಟಿಗೂ ಥಟ್ಟನೇ ಸ್ನೇಹಮಾಡುಕೊಳ್ಳುವಂಥ ಪಾದರಸದಂಥ ಹುಡುಗಿ. ಮೊದಲ ನೋಟದಲ್ಲಿ ಅವಳನ್ನು ಕಂಡು ಕೊಂಚ ಅದೀರಳಾಗಿದ್ದ ನನಗೆ ಆಮೇಲೆ ಅವಳೇ ಒಳ್ಳೆಯ ಸ್ನೇಹಿತೆಯಾಗಿಬಿಟ್ಟಳು. ತನಗೆ ಬೇರೆ ಯಾವ ತರಗತಿ ಇಲ್ಲದಾಗೆಲ್ಲ ನನ್ನನ್ನು ಹುಡುಕಿಕೊಂಡು ಬರಲಾರಂಭಿಸಿದಳು. ಅವಳ ಮನೆಯಲ್ಲಿ ತಮಿಳು ಮಾತನಾಡುವುದರಿಂದ ಅಲ್ಪಸ್ವಲ್ಪ ಬರುತ್ತಿದ್ದ ಕನ್ನಡದಲ್ಲೇ ನನ್ನೊಟ್ಟಿಗೆ ಮಾತನಾಡುತ್ತ, ಇನ್ನಷ್ಟು ಕನ್ನಡ ಕಲಿಸಿ ಎನ್ನುತ್ತಿದ್ದಳು. ಊಟದ ಹೊತ್ತಿಗಂತೂ ನಾವಿಬ್ಬರೂ ಒಟ್ಟಿಗೆ ಇರದಿದ್ದ ದಿನಗಳೇ ಇಲ್ಲ. ನನ್ನಮ್ಮ ಮಾಡಿದ ಊಟ ಅವಳಿಗೆ ಬಹಳ ಇಷ್ಟವಾಗುತ್ತಿತ್ತು ಹಾಗಾಗಿ ” ಮಿಸ್ ಏನಿದು? ಟ್ರೈ ಮಾಡ್ಲಾ” ಅಂತ ಕನ್ನಡ, ತಮಿಳು, ಇಂಗ್ಲಿಷ್ ಒಟ್ಟಿಗೆ ಸೇರಿಸಿ ಮಾತನಾಡುತ್ತಿದ್ದಳು. ಅದೇನೋ ಸ್ವಲ್ಪವೇ ಸಮಯದಲ್ಲಿ ಇಬ್ಬರಲ್ಲೂ ಸಲುಗೆ ಬೆಳೆದಿತ್ತು. ಹೀಗೆ ನಮ್ಮ ಮಾತುಕತೆ ಪಾಠ-ಊಟಗಳೆಲ್ಲ ಜೋರಾಗಿ ನಡೆದ ನಂತರವಷ್ಟೇ ಒಮ್ಮೆ ಅವಳಿಗೆ ಅವಳ ಚರ್ಮದ ಬಗ್ಗೆ ಕೇಳಿದ್ದೆ. (ಅವಳು ಪ್ರಾಕ್ಟಿಕಲ್ ಮತ್ತೂ ಬಿಂದಾಸ್ ಹುಡುಗಿ ಎಂದು ಮನದಟ್ಟಾಗುವವರೆಗೂ ನಾನದರ ಬಗ್ಗೆ ಕೇಳಲು ಧೈರ್ಯ ಮಾಡಿರಲೇ ಇಲ್ಲ) ಆಗವಳು ಹೇಳಿದ್ದ ಕಥೆಗೆ ಮನಸ್ಸು ಕಣ್ಣು ಎರಡೂ ಒದ್ದೆಯಾಗಿಬಿಟ್ಟಿತ್ತು.

ನಿಶಾಳಿಗೆ ಈ ಕಾಯಿಲೆ ಬಂದದ್ದು ಅನುವಂಶಿಕವಾಗಿ. ಅವಳ ಅಕ್ಕತಂಗಿಯರಿಗೂ ಇಂಥದ್ದೇ ಖಾಯಿಲೆಯಿತ್ತು ಎಂದು ಹೇಳಿದ್ದ ನೆನಪು. ಹಾಗೆ ಹಳ್ಳಿಗಳಲ್ಲಿ ಈ ಥರದ ಕಾಯಿಲೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ವೈದ್ಯೆಯೊಬ್ಬರು ಬಂದಿದ್ದರಂತೆ. ಆ ವೈದ್ಯೆಯ ಪತಿ ಹೆಸರಾಂತ ಬಿಸಿನೆಸ್ ಮ್ಯಾನ್. ಅದಾಗಲೇ ನಾಲ್ಕು ಮಕ್ಕಳಿದ್ದ ಅವರು ಪುಟ್ಟ ನಿಶಾಳನ್ನು ಕಂಡು, ದತ್ತುಪಡೆದುಕೊಂಡಿದ್ದರು. ಅವರೇ ನಿಶಾಳ ಈಗಿನ ತಾಯಿ-ತಂದೆ. ಈಗ ನಿಶಾ, ದೊಡ್ಡಮನೆಯ, ದೊಡ್ಡ ಮನಸ್ಸಿನ ಮನೆತನದ ಕೂಸಾಗಿ ಬೆಳೆಯುತ್ತಿದ್ದಾಳೆ. ಅವಳು ತನ್ನ ಮೊಬೈಲಿನಲ್ಲಿ ತೋರಿಸಿದ ಕೆಲವೊಂದು ಚಿತ್ರಗಳು ಅವರೆಲ್ಲ ಅವಳನ್ನು ಎಷ್ಟರಮಟ್ಟಿಗೆ ತಮ್ಮವಳನ್ನಾಗಿ ಮಾಡಿಕೊಂಡಿದ್ದಾರೆ ಅಂತ ಸಾರಿ ಹೇಳುತ್ತಿದ್ದವು.

ನಿಶಾಳ ತಾಯಿ ಬಿಡವು ಸಿಕ್ಕಾಗ ಅವಳನ್ನು ಹೊರಗೆ ಕರೆದುಕೊಂಡು ಹೋಗುತ್ತಿರುತ್ತಾರಂತೆ. ಆಗೆಲ್ಲ ಕೆಲವು ಜನ ಬಿಟ್ಟ ಬಾಯಿ ಬಿಟ್ಟಂತೆ ನೋಡುವುದು, ಅವಳ ಮುಖವನ್ನು ನೋಡಿ ಅಸಹ್ಯಿಸಿಕೊಳ್ಳುವಂಥ ಘಟನೆಗಳು ನಡೆದಿದ್ದವಂತೆ. ಅದರಲ್ಲೂ ಕೆಲವೊಬ್ಬರು ‘ಯಾಕ್ರೀ ಇಂಥ ಮಕ್ಕಳನ್ನ ಮನೆಯಿಂದ ಹೊರಗೆ ಕರ್ಕೊಂಡು ಬರ್ತೀರಾ, ಬೇರೆ ಮಕ್ಕಳಿಗೆ ಭಯವಾಗೋಲ್ವಾ’ ಎಂದೇ ಹೇಳಿಬಿಟ್ಟಿದ್ದರಂತೆ. ಅಂಥವನ್ನೆಲ್ಲ ನೋಡಿ ಕೇಳಿ ಗೊತ್ತಿದ್ದ ನಿಶಾ ತಲೆ ಕೆಡಿಸಿಕೊಳ್ಳದಿದ್ದರೂ, ಅವಳ ವೈದ್ಯೆ ತಾಯಿಗೆ ಸಹಿಸಿಕೊಳ್ಳಲಾಗದೇ ಒಮ್ಮೆ ಹಾಗಂದವರೊಟ್ಟಿಗೆ ಜೋರು ಜಗಳಕ್ಕೇ ನಿಂತುಬಿಟ್ಟರಂತೆ. ಆಗ ನಿಶಾಳೇ ಅಮ್ಮನ್ನನ್ನು ಸಮಾಧಾನಿಸಿ, ಜಗಳ ಬಿಡಿಸಿ “ಪಾಪ ಅವರಿಗೆಲ್ಲ ನನ್ನ ಬಗ್ಗೆ ಗೊತ್ತಿಲ್ದೆ ಇರೋದ್ರಿಂದ ಹಾಗೆ ಮಾತಾಡ್ತಾರೆ. ಇಂಥದಕ್ಕೆಲ್ಲ ನಾವು ಹೆಚ್ಚು ತಲೆಕೆಡಿಸಿಕೊಳ್ಳಬಾರ್ದು. ಇದ್ದದ್ದನ್ನ ಅಕ್ಸೆಪ್ಟ್ ಮಾಡಿಕೊಂಡು ನಡೀಬೇಕಲ್ವಾ ಅಮ್ಮ” ಅಂದಿದ್ದಳಂತೆ. ಇವೆಲ್ಲವನ್ನೂ ಮಾತಿನಲ್ಲಿ ಯಾವುದೇ ಏರಿಳಿತವನ್ನೂ ತರದೇ ಹೇಳಿದ ರೀತಿಗೆ ನಾನು ಮೂಕವಿಸ್ಮಿತಳಾಗಿದ್ದೆ. ಕೇವಲ 8ನೇ ತರಗತಿಯಲ್ಲಿ ಓದುತ್ತಿರುವ ಮಗುವಿನ ಆತ್ಮಸ್ಥೈರ್ಯ, ತಿಳುವಳಿಕೆ ನನ್ನಲ್ಲಿ ಅಗಾಧ ಅಚ್ಚರಿಯನ್ನುಂಟು ಮಾಡಿತ್ತು.

ನಾನು ಆ ಶಾಲೆಯಲ್ಲಿ ಕೆಲಸ ಬಿಟ್ಟು ನಾಲ್ಕು ವರ್ಷ ಕಳೆದರೂ ಅವಳೊಟ್ಟಿಗೆ ಹರಟಿದ ಮಾತುಗಳೆಲ್ಲವೂ ನನ್ನ ನೆನಪಲ್ಲಿವೆ. ನಾಲ್ಕು ವರ್ಷವಲ್ಲ, ನಲವತ್ತು ವರ್ಷವಾದರೂ ಅವಳನ್ನು ನಾನು ಮರೆಯಲು ಅಸಾಧ್ಯವೇ. ಬದುಕೆಂದರೆ ಸುಖ ದುಃಖ ಮಿಶ್ರಣ. ಹಾಗಿದ್ದಾಗ ಎಲ್ಲರಿಗೂ ಒಂದಲ್ಲಾ ಒಂದು ಪೆಟ್ಟು ಬೀಳುವುದು ಸಹಜವೇ. ಹಾಗಂತ ಅದನ್ನೇ ಗುಡ್ಡಮಾಡಿಕೊಂಡು ಕುಳಿತರೆ ಓಡುವ ಜಗತ್ತಿನಲ್ಲಿ ಕಾಲೂರಿ ನಿಲ್ಲುವುದಾದರೂ ಹೇಗೆ.