“ಈ ದುರ್ಗದ ಜಲಪಾತ ಕೂಡ ತನ್ನ ಭೋರ್ಗರೆತದಲ್ಲಿಯೇ ಅಚಲವಾದದನ್ನೇನೋ ಸಾರಿ ಸಾರಿ ಹೇಳುತ್ತಿತ್ತು. ಅದನ್ನೆಲ್ಲಾ ಕಿವಿಗೆ ಹಾಕಿಕೊಳ್ಳುತ್ತಾ ನಾನು ಸೀದಾ ದುರ್ಗ ವೆಂಕಟರಮಣ ದೇವಸ್ಥಾನದತ್ತ ಬೈಕೇರಿಸಿದೆ. ಜಿಟಿ ಜಿಟಿ ಮಳೆ ಬೇರೆ ಬೀಳುತ್ತಿದ್ದುದರಿಂದ ಜಲಪಾತದ ಸದ್ದೂ, ಮಳೆಯ ಸದ್ದೂ ಒಟ್ಟಾಗಿ ಅಕ್ಕ-ತಂಗಿ ಜಗುಲಿಲಿ ಕೂತು ತಮ್ಮ ಹುಡುಗನ ಕನಸು ಕಾಣುತ್ತಿರುವಂತೆ ಇಡೀ ದುರ್ಗದ ಹಸಿರ ಕಾಡು ಏನೋ ಕನಸು ಕಾಣುತ್ತ ಬೆಚ್ಚಗೇ ತನ್ನ ಕ್ರಿಯಾಶೀಲತೆಯಲ್ಲೇ ಕಳೆದುಹೋಗಿತ್ತು.”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಆರನೇ ಕಂತು.

 

ಜುಲೈ ತಿಂಗಳ ಮಳೆ ಎಂದರೆ ಹುಚ್ಚಿಯಂತೆ ಪ್ರೀತಿಸುವ ಅವಳ ಹಾಗೇ. ಪುನರ್ವಸು ಮಳೆಯಂತೂ ಆಕೆ ಒಂದೇ ಸಮನೆ ಮೀಯಿಸುವ ಪ್ರೀತಿಯ ತರ ಧಾರೆಯಾಗುತ್ತ ಸುರಿಯುತ್ತಿರುತ್ತದೆ. ಇಂತಹ ಹೊತ್ತಲ್ಲಿ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಹಾಯಾಗಿ ಕಿಟಕಿಯಿಂದ ಮಳೆ ನೋಡುತ್ತಲೋ, ಏನೋ ಬರೆಯುತ್ತಲೋ ಕೂತುಬಿಡಬಹುದು. ಆದರೆ ಹೊರಗೆ ಅಷ್ಟೊಂದು ಚೆಂದದಿಂದ ಮಳೆ ಸಣ್ಣಗೆ ಹೆಜ್ಜೆ ಇಡುತ್ತಾ ಬರುತ್ತಿರುವಾಗ, ಕಿಟಕಿ ಅಂಚಲ್ಲಿ ಪಶ್ಚಿಮ ಘಟ್ಟದ ಸಣ್ಣ ಗುಡ್ಡವೊಂದು ಕಂಡು ಅದು ಮಳೆಯಲ್ಲೆಲ್ಲಾ ಮಿಂದು ಸಾಕಾಗಿ ಹೋಗಿ ಹಸಿರಿನ ನಶೆಯಲ್ಲೇ ಸೀನುತ್ತಿರುವಾಗ, ಹಳ್ಳದಿಂದ ಹಳ್ಳಕ್ಕೆ ಜಿಗಿಯುವ ಕಪ್ಪೆಯೂ, ಪುಳಕ್ ಪುಳಕ್ ಅಂತ ನೀರಿಗೆಲ್ಲಾ ಪುಳಕ ಕೊಡುವ ಹಳ್ಳೇಡಿಯೂ ಒಮ್ಮೆ ನೆನಪಾಗಿ ಕಾಡಿಗೋಡುವ ಆಸೆಯಾಗುತ್ತದೆ. ಒಂದೇ ಸಮನೆ ಅಮ್ಮ ತಣ್ಣಗೇ ಬೈಯ್ದಂತೆ ಸದ್ದು ಮಾಡುತ್ತಾ ಈ ಮಹಾ ಮಳೆ ನನ್ನನ್ನು ಆದರದಿಂದ ನಿಲ್ಲಿಸಿ- “ಸೀದಾ ಕಾಡಿಗೆ ಬಾ ಮಾರಾಯ, ಒಳಗೇ ಮಕ್ಕಳಂತೆ ಕೂತು ಏನ್ ಮಾಡ್ತೀಯಾ ಕರ್ಮ, ಬಾ ನನ್ನತ್ತ ಬಾ, ಮಣ್ಣಿನತ್ತ ಬಾ, ಹಸಿರಿನತ್ತ ಬಾ, ಕಾಡ ಹಕ್ಕಿಯನ್ನೊಮ್ಮೆ ನೋಡು, ಚೂರು ಇಣುಕಿ ನೋಡು ಅಲ್ಲಿ ಕಂಡೇ ಕಾಣುತ್ತೆ ನಿಂಗೆ ಹಕ್ಕಿ ಗೂಡು” ಅಂತೆಲ್ಲಾ ಹೇಳಿ ಆಸೆ ಹುಟ್ಟಿಸಿ, ಲಾಲಿಸಿ, ಮುದ್ದಿಸಿ ಸೀದಾ ಕಾಡಿನತ್ತ ಒಯ್ಯದೇ ಬಿಡುವುದೇ ಇಲ್ಲ.

ಹಾಗೆ ಕಾಡಿನತ್ತ ಹೋಗುವ ಮೊದಲು ಕಾರ್ಕಳದ ಘೋರ ಮಳೆಗೂ ದಿವ್ಯನಾಗಿ ನಿಂತಿರುವ, ಸಿಡಿಲು, ಮಿಂಚನ್ನು ನುಂಗಿಕೊಂಡು, ಸುತ್ತಲಿರುವ ಹಸಿರನ್ನೂ, ಕಾಡು ಬೆಟ್ಟಗಳನ್ನೂ ತನ್ನ ಕಣ್ಣ ತಂಪಿನಲ್ಲಿಯೇ ಜೋಪಾನವಾಗಿಟ್ಟುಕೊಂಡ, ಒಮ್ಮೊಮ್ಮೆ ಥೇಟ್ ಮಳೆರಾಯನಂತೆಯೇ ಕಾಣುವ ಬಾಹುಬಲಿಯನ್ನೊಮ್ಮೆ ನೋಡಿ, ಅವನ ಜೊತೆಯಲ್ಲಿಯೇ ಮಳೆಯಲ್ಲಿ ಚೂರು ನೆನೆಯವ ಆಸೆ ಉಕ್ಕುತ್ತದೆ. ಹಾಗೇ ಸ್ವಲ್ವ ಹೊತ್ತು, ನಿಜದ ದೇವರಂತೆಯೇ ಕಾಣುವ ಅವನ ಜೊತೆಗೆ ಮೈಯೆಲ್ಲಾ ಒದ್ದೆಮಾಡಿಕೊಂಡು ಬಾಹುಬಲಿ ಬೆಟ್ಟವಿಳಿದರೆ ದುರ್ಗದ ಕಾಡು ದೂರದಿಂದಲೇ ಮಳೆ ಹನಿಯನ್ನೆಲ್ಲಾ ತುಂಬಿಕೊಂಡು ಕರೆಯುತ್ತಿರುತ್ತದೆ. ಅದು ಕರೆದ ಮೇಲೆ ಸುಮ್ಮನೇ ಅಲ್ಲಿಂದಲೇ ಆ ಕಾಡನ್ನು ನೋಡುತ್ತಾ ಕೂರೋದಕ್ಕೇನು ಹುಚ್ಚಾ ನಂಗೆ? ಕಾಡು, ನದಿ, ಕರೆದಾಗ ಓಗೊಡದೇ ಸುಮ್ಮನಿದ್ದರೆ ಅದಕ್ಕಿಂತ ದೊಡ್ಡ ಪಾಪ ಏನಾದರೂ ಇದೆಯಾ ಹೇಳಿ? ಮಳೆ ಮಾತ್ರ ಒಮ್ಮೆ ಅಮ್ಮ ಬಯ್ದಂತೆ, ಅಕ್ಕ ಕಿವಿಹಿಂಡಿದಂತೆ, ತಂಗಿ ಚಿವುಟಿದಂತೆ, ಹೆಂಡತಿ ಸಣ್ಣಗೆ ಕೆನ್ನೆ ನೇವರಿಸಿದಂತೆ ಸುರಿಯುತ್ತಲೇ ಇತ್ತು.

ಕಾರ್ಕಳ, ಕುದುರೆಮುಖದ ಮಳೆ ಅಂದರೆ ಭಯಾನಕವೂ, ಭೀಭತ್ಸ್ಯವೂ, ರಮ್ಯವೂ ಆದ ಸ್ವರ್ಗಿಯ ಮನಃರಂಜನೆ, ಆ ಮಳೆಯಲ್ಲಿ ಸ್ನಾನ ಮಾಡುತ್ತಲೇ ಹಸಿರಿನ ದಾರಿ ಹಿಡಿದು ಹೆಸರಿಲ್ಲದ ಊರಿಗೆ ಸಾಗಿದರೂ ಚೆಂದವೇ. ಹಾಗೇ ಮಳೆ ತೋರಿಸಿದ ದಾರಿ ಹಿಡಿದು ಸಾಗಿದ್ದು ದುರ್ಗದ ಮಲೆಕಡೆಗೆ. ಮಾಳದಂತೆಯೇ ಕಾಡುವ ದುರ್ಗ ಎನ್ನುವ ಹಸಿರ ತೊಟ್ಟಿಲು ಕೂಡ, ಕಾಡು ಪ್ರೀತಿಸುವವರಿಗೆ ಬೆರಗಿನ ಬಟ್ಟಲು. ಕಾರ್ಕಳದ ಪುಟ್ಟ ಗ್ರಾಮವಾದ ದುರ್ಗ ಆಗಷ್ಟೇ ಆಟ ಮುಗಿಸಿಕೊಂಡು ಬಂದು ಅಂಗಳದಲ್ಲಿ ಕಾಲನ್ನೆಲ್ಲಾ ಮಣ್ಣು ಮಾಡಿಕೊಂಡು ಕೂತ ಪೋರ ಕೃಷ್ಣನ ಹಾಗೇ ಒಂಥರಾ ಮುಗ್ದ ಮತ್ತು ಅಮಾಯಕ. ಮಳೆಗಾಲದಲ್ಲಿ ಇದೇ ದುರ್ಗದ ಕಾಡಿನ ಪ್ರಕೃತಿ ರಾಣಿ, ಗಿಳಿ ಹಸುರು ಬಣ್ಣದ ಸೀರೆ ಉಟ್ಟುಕೊಂಡು ಮೆಲ್ಲ ಮೆಲ್ಲಗೇ ಬಾಗಿಲು ನೂಕಿ ಮೊದಲ ರಾತ್ರಿಯ ಕನಸನ್ನೆಲ್ಲಾ ಕಣ್ಣಲ್ಲೇ ಕಾಣಿಸಿಬಿಡುವ ನವವಧುವಿನಂತೆ ಹೊಳೆಯುತ್ತಾಳೆ. ಹಾಗೇ ಬೈಕೇರಿ ಹಸಿರ ದಾರಿಯನ್ನೊಂದು ಹಿಡಿದೆ. ಮೊದಲ ನೋಟದಲ್ಲಿಯೇ ಮುದ್ದಾಗಿ ಕಾಣುವ ಚಿತ್ಪಾವನರ ಮನೆಯ ಅಂಗಳದಲ್ಲೆಲ್ಲಾ ಪಾಚಿ ಹಬ್ಬಿ, ಅಲ್ಲೇ ನಿಂತ ನೀರಲ್ಲೆಲ್ಲಾ ಮೋಡದ ಪ್ರತಿಬಿಂಬ ಹೊಳೆದು ಎಷ್ಟು ರಮ್ಯವಾಗಿ ಕಾಣುತ್ತಿತ್ತೆಂದರೆ ನೋಡುವ ಮನಸ್ಸಿದ್ದವನಿಗೆ ಆ ಚಿತ್ರವೇ ನಿಜದ ಕಾವ್ಯವೆನ್ನಿಸಿ ಒಂದು ಕ್ಷಣ ಮಾಯಕದ ನಾಕದಲ್ಲಿಯೇ ಕಳೆದು ಹಾಕಿಬಿಡುವಷ್ಟು ಚೆಂದವಿತ್ತು ಆ ಚಿತ್ರ. ಸುತ್ತಲೂ ಹರಡಿದ ಬಿದಿರ ಬಿಳಲುಗಳು, ಅಡಿಕೆ ತೋಟಗಳು, ರುದ್ರಾಕ್ಷಿ ಹಲಸಿನ ಮರಗಳಿಂದ ಹೊಮ್ಮುವ ಘಮ ಘಮ ಪರಿಮಳ, ದುರ್ಗದ ಮಳೆಯದ್ದೇ ಆದ ಒಂದು ವಿಚಿತ್ರ ವಾಸನೆ, ಇವನ್ನೆಲ್ಲಾ ಆಸ್ವಾದಿಸುತ್ತಾ, ಹೋಗುತ್ತಿದ್ದಾಗ ದುರ್ಗದ ಜಲಪಾತ ತನ್ನ ರೌದ್ರ ಬೀಸಿನಲ್ಲಿ ಭೋರ್ಗರೆಯುತ್ತಾ, ಹಸಿರು ಕಣಿವೆಗಳ ನಡುವೆ ಕೆನೆಹಾಲಿನಂತೆ ಇಳಿಯುತ್ತಾ, ಸ್ವರ್ಣ ನದಿಯನ್ನು ಸೇರುವ ಹಂಬಲದಲ್ಲಿತ್ತು. ಈ ರೌದ್ರ ಬೀಸಿನ ಸದ್ದು ಆ ಸಂಜೆ ಕಾಡಿನ ತುಂಬೆಲ್ಲಾ ವಿಚಿತ್ರವಾದ ಲಯ ಸೃಷ್ಟಿ ಮಾಡಿ ಇತರೆ ಸದ್ದುಗಳನ್ನು ಮಾಯ ಮಾಡಿದ್ದರೂ, ಆ ನೀರ ಸಂಗೀತವೇ ಒಂದು ಮೌನದಂತಿತ್ತು. ಹೊಳೆ ಹರಿಯದೇ ಸುಮ್ಮನಿದ್ದರೂ ಮೌನ. ಭೋರ್ಗರೆದು ಚಿಮ್ಮಿದರೂ ಅದೂ ಒಂದು ಮೌನ. ಅಂತ ಈ ನದಿಯ, ಕಾಡಿನ ಹಕ್ಕಿಯ ಸದ್ದುಗಳನ್ನು ಕೇಳಿದಾಗೆಲ್ಲಾ ಅನ್ನಿಸುತ್ತದೆ.


ಹಾಗೇ ಕಾಡಿನ ಮರವೊಂದನ್ನು ನೋಡುತ್ತಾ ಇದ್ದಾಗ ಹಚ್ಚ ಹಸಿರಿನ ಕುಟುರ ಹಕ್ಕಿಯೊಂದು ಇಂಪಾಗಿ ಕೂಗುತ್ತಿತ್ತು. ಕುವೆಂಪು ಮೈಸೂರಿನಲ್ಲಿರುವಾಗ ಇಂತದ್ದೇ ಹಸಿರು ಕುಟ್ರದ ಸ್ವರ ಕೇಳಿದಾಗೆಲ್ಲಾ ತಾವು ಏನೂ ಕೆಲಸ ಮಾಡುತ್ತಿದ್ದರೂ ಒಮ್ಮೆ ಧ್ಯಾನಸ್ಥರಾಗಿ ಕಣ್ಣು ಮುಚ್ಚಿಕೊಳ್ಳುತ್ತಿದ್ದರಂತೆ. ಒಂದೇ ಸಮನೆ ಕೂಗುವ ಅದರ ಸ್ವರದಿಂದಲೇ ಅವರಿಗೆ ಮಲೆನಾಡಿನ ಮಹಾರಣ್ಯ ನೆನಪಾಗುತ್ತಿತ್ತಂತೆ, ಮಲೆನಾಡಿನ ಕಾಡುಗಳಲ್ಲಿ ಅಲೆದಾಡುತ್ತಿರುವ ಹಾಗೇ ಅನ್ನಿಸುತ್ತಿತ್ತಂತೆ” ನೋಡಿ ಹಕ್ಕಿಯ ಸದ್ದು ಬರೀ ಸದ್ದಲ್ಲ, ಅದು ಬದುಕಿಗೆ ಬೇಕಾದ ವಿಶಿಷ್ಟ ಮೌನವನ್ನು, ಏಕಾಂತವನ್ನು ಕೊಡುವ ಸ್ವರ್ಗದಂತಹ ನಾದ. ಹಾಗೇ ಈ ದುರ್ಗದ ಜಲಪಾತ ಕೂಡ ತನ್ನ ಭೋರ್ಗರೆತದಲ್ಲಿಯೇ ಅಚಲವಾದದನ್ನೇನೋ ಸಾರಿ ಸಾರಿ ಹೇಳುತ್ತಿತ್ತು. ಅದನ್ನೆಲ್ಲಾ ಕಿವಿಗೆ ಹಾಕಿಕೊಳ್ಳುತ್ತಾ ನಾನು ಸೀದಾ ದುರ್ಗ ವೆಂಕಟರಮಣ ದೇವಸ್ಥಾನದತ್ತ ಬೈಕೇರಿಸಿದೆ. ಜಿಟಿ ಜಿಟಿ ಮಳೆ ಬೇರೆ ಬೀಳುತ್ತಿದ್ದುದರಿಂದ ಜಲಪಾತದ ಸದ್ದೂ, ಮಳೆಯ ಸದ್ದೂ ಒಟ್ಟಾಗಿ ಅಕ್ಕ-ತಂಗಿ ಜಗುಲಿಲಿ ಕೂತು ತಮ್ಮ ಹುಡುಗನ ಕನಸು ಕಾಣುತ್ತಿರುವಂತೆ ಇಡೀ ದುರ್ಗದ ಹಸಿರ ಕಾಡು ಏನೋ ಕನಸು ಕಾಣುತ್ತ ಬೆಚ್ಚಗೇ ತನ್ನ ಕ್ರಿಯಾಶೀಲತೆಯಲ್ಲೇ ಕಳೆದುಹೋಗಿತ್ತು. ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ದಾರಿಯೇ ಚೆಂದ. ಸುತ್ತಲಿರುವ ದಟ್ಟಡವಿಗಳ ನಡುವೆ ಸಾಗುವ ಹಸಿರು ಹಾಸಿನ ದಾರಿಗೆ ಇಲ್ಲಿ ಯಾವಾಗ ನೋಡಿದರೂ ಚಪ್ಪರ ಹಾಕಿದಂತೆ ಕಾಣಿಸುವ ಆಗರ್ಭ ಮರಗಳ ನೆರಳು, ಅಲ್ಲೇ ಒಂದು ಕ್ಷಣ ನಿಂತು ಸುಮ್ಮನೇ ಆಕಾಶ, ಮರ, ಬಂದ ದಾರಿ, ಪಾಚಿಗಟ್ಟಿದ ಮರದ ಕೊಂಬೆಗಳನ್ನೆಲ್ಲಾ ನೋಡುತ್ತಿದ್ದರೆ ಬದುಕಿನ ಜಂಜಢವೆಲ್ಲಾ ಕರಗಿಯೇ ಹೋಗಿ, ಜಗತ್ತಿನ ಸೌಂದರ್ಯವೆಲ್ಲಾ ಬೊಗಸೆಗೆ ಸಿಗುತ್ತದೆ.

ಹಾಗೇ ಮುಂದಕ್ಕೆ ಸಾಗುವಾಗ ಮಾವಿನ ಮರವೊಂದರಲ್ಲಿ ಪಶ್ಚಿಮಘಟ್ಟದ ಅಪರೂಪದ ಕೆಂಚಳಿಲೊಂದು ನನ್ನನ್ನು ಮುಸಿ ಮುಸಿ ನೋಡುತ್ತಾ, ನಾಚಿ ನೀರಾಗಿ ಕಾಡಿನ ಹಸಿರಲ್ಲಿ ಆವಿಯಾಗಿ ಹೋಯಿತು. ವೆಂಕಟರಮಣ ದೇವಸ್ಥಾನ ತಲುಪಿದಾಗ ಮೋಡ ಕವಿದ ಕತ್ತಲಿನಿಂದ ಸಂಜೆಯಾಯಿತಾ? ಇರುಳಾಯಿತಾ? ಗೊತ್ತಾಗಲಿಲ್ಲ. ವೆಂಕಟರಮಣ ದೇವಸ್ಥಾನ ದುರ್ಗದ ಒಂದು ಹಳೆಯ ದೇವಸ್ಥಾನ. ಚಿತ್ಪಾವನ ಬ್ರಾಹ್ಮಣರ ಕುಟುಂಬವೊಂದು ಈ ದೇವಸ್ಥಾನದಲ್ಲಿರುವ ವೆಂಕಟರಮಣನಿಗೆ ಪೂಜೆ ಮಾಡುತ್ತ, ಕಾಡ ನಡುವೆ ನೆಮ್ಮದಿಯಿಂದ ಬದುಕುತ್ತಿದೆ. ಇದು ಎಲ್ಲಾ ದೇವಸ್ಥಾನಗಳಂತೆ ಬರೀ ಆಡಂಭರದ, ಸಿಸಿ ಕೆಮರಾ ಕಣ್ಗಾವಲಿನ, ಚಿನ್ನ, ಬೆಳ್ಳಿ ತುಂಬಿದ ದೇವಸ್ಥಾನವಲ್ಲ, ಆಸೆಬುರುಕ ಅರ್ಚಕರ ಅರ್ಥವಾಗದ ಮಂತ್ರಗಳನ್ನು ಕೇಳಿಸಿಕೊಳ್ಳುವ ವಜ್ರದ ಕಿರೀಟ ಹಾಕಿದ ದೇವರೂ ಇಲ್ಲಿಲ್ಲ. ಕೆಂಬಣ್ಣದ ದಾಸವಾಳದಿಂದ, ನಿರಾಭರಣ ಸೌಂದರ್ಯದಿಂದ ಕಾಣಿಸುವ ಇಲ್ಲಿನ ವೆಂಕಟರಮಣ ದೇವರು, ಅಮ್ಮನಿಗೆ ಲಡ್ಡು ಮಾಡಿಕೊಡು ಎಂದು ಕಾಡಿಸುವ ನಮ್ಮದೇ ಮನೆಯ ಹುಡುಗನಂತೆ ಕಾಣಿಸುತ್ತಾನೆ. ಸಿಟಿಯ ದೇವಸ್ಥಾನಗಳಂತೆ ಟೈಮಿಂಗ್ಸ್ ಕೊಟ್ಟು ದರುಶನ ಕೊಡುವ ದೇವರು ಇವನಲ್ಲ. “ನೀವು ಯಾವಾಗೆಲ್ಲಾ ಕಾಡಿಗೆ ಬರುತ್ತೀರೋ ಆವಾಗೆಲ್ಲಾ ನನ್ನನ್ನು ಭೇಟಿಯಾಗಿ ಹೋಗಿ ಮಾರಾರ್ರೆ” ಎಂದು ನಯದಿಂದಲೇ ಹೇಳುವಂತಿರುವ ದೇವರು ಇವನು, ನಾನು ವೆಂಕಟರಮಣನ ಮನೆ ತಲುಪುವಾಗ, ಅವನನ್ನು ತಮ್ಮ ಮನೆ ಹುಡುಗನಂತೆಯೇ ರಕ್ಷಿಸುವ ಗೀತಕ್ಕ ಮತ್ತು ಜಾನಕಮ್ಮ ಕೆಲಸದವಳ ಜೊತೆಗೆ ದೊಡ್ಡದ್ದೊಂದು ಹಲಸಿನ ಹಣ್ಣನ್ನು ಬಿಡಿಸುತ್ತಾ ಕೂತಿದ್ದರು. ಆ ಹಣ್ಣಿನ ಸೊಗಸಾದ ಪರಿಮಳವೇ ದೇವರಂತೆ ಕಂಡಿತು ನನಗೆ. ಉಭಯ ಕುಶಲೋಪರಿಗಳೆಲ್ಲಾ ಆದ ಮೇಲೆ “ನೀನು ವೆಂಕಟರಮಣನ ಸನ್ನಿಧಿಗೆ ಆಗಾಗ ಬರುತ್ತಿರುವುದೇ ಖುಷಿ, ಅವನ ಅನುಗ್ರಹ ನಿಂಗೆ ಸಿಗಲಿ” ಎಂದರು ಗೀತಕ್ಕ.

(ಚಿತ್ರಗಳು: ಪ್ರಸಾದ್ ಶೆಣೈ)

ಕಾರ್ಕಳದ ಪುಟ್ಟ ಗ್ರಾಮವಾದ ದುರ್ಗ ಆಗಷ್ಟೇ ಆಟ ಮುಗಿಸಿಕೊಂಡು ಬಂದು ಅಂಗಳದಲ್ಲಿ ಕಾಲನ್ನೆಲ್ಲಾ ಮಣ್ಣು ಮಾಡಿಕೊಂಡು ಕೂತ ಪೋರ ಕೃಷ್ಣನ ಹಾಗೇ ಒಂಥರಾ ಮುಗ್ದ ಮತ್ತು ಅಮಾಯಕ. ಮಳೆಗಾಲದಲ್ಲಿ ಇದೇ ದುರ್ಗದ ಕಾಡಿನ ಪ್ರಕೃತಿ ರಾಣಿ, ಗಿಳಿ ಹಸುರು ಬಣ್ಣದ ಸೀರೆ ಉಟ್ಟುಕೊಂಡು ಮೆಲ್ಲ ಮೆಲ್ಲಗೇ ಬಾಗಿಲು ನೂಕಿ ಮೊದಲ ರಾತ್ರಿಯ ಕನಸನ್ನೆಲ್ಲಾ ಕಣ್ಣಲ್ಲೇ ಕಾಣಿಸಿಬಿಡುವ ನವವಧುವಿನಂತೆ ಹೊಳೆಯುತ್ತಾಳೆ.

“ಹೌದು ಪೇಟೆಯ ದೇವಸ್ಥಾನಗಳ ಅಸಹಜತೆಗಳ ನಡುವೆ, ಕೃತಕ ಆಡಂಭರಗಳ ನಡುವೆ, ಹಣವೇ ಭಕ್ತಿ, ಭಕ್ತಿಯೇ ಹಣವೆಂದು ಭಾವಿಸಿ ದೇವರನ್ನು ಐಪಿಎಲ್ ಆಟಗಾರರಂತೆ ಕೊಂಡುಕೊಳ್ಳುವ ಮಂದಿಗಳ ನಡುವಿದ್ದು ಸಾಕಾಗಿದೆ ನಂಗೆ, ಇಲ್ಲಾದ್ರೆ ಸರಳ ಮೂರ್ತಿ, ನಮ್ಮಂತೆಯೇ ಅವನು, ಅವನಂತೆಯೇ ನಾವು ಅನ್ನಿಸಿ ನಿಜಕ್ಕೂ ಭಕ್ತಿ ಉಂಟಾಗುತ್ತದೆ” ಎಂದೆ. ಮುಂದುವರಿದು, “ಇಲ್ಲಿನ ಕಾಡಿನಲ್ಲಿ ಕೇಳಿಸುವ ಹಕ್ಕಿ ಹಾಡನ್ನು, ಜಲಪಾತಗಳ ಧ್ವನಿಯನ್ನು, ಕೆಂಚಳಿಲುಗಳ ನಾಚಿಕೆಯನ್ನು, ಮಿಣುಕುಹುಳಗಳ ಬೆಳಕನ್ನು ಮೀರಿದ ಬೇರೆ ದೇವರಿದ್ದಾನಾ ಗೀತಕ್ಕಾ?” ಎಂದೆ. “ಹೌದು ನಿಜ. ಅದಕ್ಕೆ ಅಲ್ವಾ ನಾನು ಈ ಕಾಡು ಬಿಡದೇ ಇಲ್ಲೇ ಬದುಕಿರೋದು, ಯಾರಿಗೆ ಬೇಕು ಪೇಟೆ, ಇಲ್ಲಿನ ಮೌನದಲ್ಲಿಯೇ ಸಿಗುವ ಖುಷಿ ಅಲ್ಲಿ ಸಿಗೋದಿಲ್ಲ.ಇಲ್ಲಾದರೆ ರಟ್ಟೆ ಮುರಿಯುವಂತೆ ಕೆಲಸ ಮಾಡಿದರೆ ಏನೋ ತೃಪ್ತಿ. ಇಂತಹ ಪರಿಸರದಲ್ಲಿ ಬದುಕೋದೇ ಈ ಕಾಲದ ದೊಡ್ಡ ಅದೃಷ್ಠ ಅಲ್ವಾ? ಆ ಅದೃಷ್ಠ ನಂಗೆ ಸಿಕ್ಕಿದೆ. ಕಾಡು, ಹಸಿರನ್ನು ಪ್ರೀತಿಸುತ್ತಾ ಬದುಕುತ್ತಿರುವೆ ನೋಡು, ಈ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ದೇವಸ್ಥಾನದಲ್ಲಿ ವೆಂಕಟರಮಣನಿರುತ್ತಾನೆ. ಹಣಕ್ಕೋಸ್ಕರ ಕಾಡು ಕಡಿದು, ಆ ಹಣದಲ್ಲೇ ದೇವರಿಗೆ ಆಭರಣ ಕೊಡುವ ಮೂಡ ಭಕ್ತರಿಗೆ ದೇವರು ಒಲಿಯಲು ಸಾಧ್ಯವೇ ಇಲ್ಲ, ಪರಿಸರವೇ ದೇವರು, ಅದನ್ನು ಉಳಿಸಿಕೊಂಡರೆ ಈ ದೇವರು” ಎಂದು ಅರಳುಗಣ್ಣು ಬಿಡುತ್ತಾ ಉದ್ವೇಗದಿಂದ ಹೇಳುತ್ತಲೇ ಇದ್ದರು ಗೀತಕ್ಕ.

“ಮನುಷ್ಯ ತನ್ನ ಸ್ವಾರ್ಥಕ್ಕೆ ಕಾಡು ಕಡಿಯೋದು, ನಾವೆಲ್ಲ ಹಳಬರು, ನಾವಿರುವ ತನಕ ಈ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಉಳಿಸಿಕೊಳ್ತೇವೆ” ಎಂದು ಅಲ್ಲೇ ಕೂತಿದ್ದ ಜಾನಕಮ್ಮ ತಮ್ಮದೂ ಒಂದು ಅಭಿಮತ ಸೇರಿಸಿದರು. ಆ ಎರಡೂ ಜೀವಗಳನ್ನು ನೋಡಿದಾಗ ಅವರ ಕಣ್ಣಲ್ಲೇ ಅನುಭವದ ಹಸಿರ ಪ್ರಪಂಚವೊಂದನ್ನು ಕಂಡಂತಾಯ್ತು. ಇಂತಹ ಅದೆಷ್ಟೋ ಮಳೆಗಾಲವನ್ನು ಕಾಡಿನಲ್ಲಿಯೇ ಕಳೆದ ಇವರ ಕಾಲುಗಳಿಗೆ ಅದೆಷ್ಟು ಇಂಬಳಗಳು ಚುಚ್ಚಿದ ಅನುಭವವಿರಬಹುದು? ಅದೆಷ್ಟು ಕೆಂಚಳಿಲುಗಳು ಇವರನ್ನು ನೋಡಿ ನಾಚಿ ಹೋದ ಪ್ರಸಂಗಗಳಿರಬಹುದು? ಇಷ್ಟು ವರ್ಷ ಕಾಡಲ್ಲಿ ಕಾಡು ಪ್ರಾಣಿಗಳಿದ್ದರೂ ಅವುಗಳಿಂದ ಏನೂ ಕಾಟವಾಗದೇ ಆರಾಮಾಗಿ ಅವುಗಳ ಜೊತೆಗೆ ಸಹಬಾಳ್ವೆ ಹೂಡಿದ ಇವರ ಬಾಳಿಗೆ, ಏಕಾಏಕಿ ಪ್ರವೇಶ ಕೊಡುವ ರಾಜಕೀಯದ ಪುಂಡರು ಕಾಡಲ್ಲಿ ಕಾಡುಪ್ರಾಣಿಗಳ ಹಾವಳಿ ಅತಿಯಾಗಿದೆ ಎಂದು ಗುಲ್ಲೆಬ್ಬಿಸಿ, ಅದಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿ ಅದರಲ್ಲಿ ಅರ್ಧದಷ್ಟು ನುಂಗಿ ನೀರು ಕುಡಿದುಬಿಡುತ್ತಾರೆ. ಹಾಳಾದವರು ಕಾಡಿನಲ್ಲಿ ಕಾಡುಪ್ರಾಣಿಗಳಿರದೇ ಇವರ ಮಾವನ ಮಕ್ಕಳಿರಬೇಕಿತ್ತಾ? ಹಾವಳಿಯಂತೆ ಹಾವಳಿ. ಕಾಡಂಚಿನ ಜನರು ಕಾಡು ಪ್ರಾಣಿಗಳ ಜೊತೆಗೆ ಇಷ್ಟು ವರ್ಷ ಬದುಕಿಲ್ಲವಾ?” ಅಂತೆಲ್ಲಾ ನಂಗೆ ಒಂದೇ ಸಮನೆ ಸಿಟ್ಟು ಬಂತು. ಅದೇ ಸಿಟ್ಟಿನಲ್ಲಿ ಏನೇನೋ ಯೋಚಿಸುತ್ತಿದ್ದಾಗ, ಶಾಲೆಯಿಂದ ಸುಸ್ತಾಗಿ ಬಂದ ಪುಟ್ಟನ್ನೊಬ್ಬ ಪಾಚಿಮೆಟ್ಟಿಕೊಂಡು ಭಾರೀ ಖುಷಿಯಲ್ಲಿ ಮನೆಯತ್ತ ಹೋಗುತ್ತಿದ್ದ, ಈ ಪುಟ್ಟ ದೇವರ ಚಿತ್ರ ತೆಗೆಯದಿದ್ದರೆ ಏನೋ ಕಳೆದುಕೊಳ್ತೇನೆ ಅನ್ನಿಸಿ ಅವನ ಚಂದದ್ದೊಂದು ಚಿತ್ರ ತೆಗೆದೆ. ಆತನಿಗೆ ಫೋಟೋ ತೆಗೆದ ವಿಷಯ ಗೊತ್ತಾಗಿ ಹಿಂತಿರುಗಿ ನೋಡಿ ನಸುನಕ್ಕ, ಮತ್ತೊಂದಿಷ್ಟು ಪೋಸು ಕೊಟ್ಟ. ನಂಗೆ ಖುಷಿಯಾಯಿತು.

ಕ್ಯಾಮರಾ ಕಂಡ ಇನ್ನೂ ಕೆಲ ಪುಟ್ಟ ದೇವರುಗಳು ಒಮ್ಮೆಗೇ ದೇವಸ್ಥಾನದ ಎದುರು ಡಿಢೀರಂತ ಪ್ರತ್ಯಕ್ಷರಾಗಿ ತಮ್ಮದೂ ಒಂದು ಫೋಟೋ ತೆಗಿಯೆಂದು ದೂರದಿಂದಲೇ ನಸುನಕ್ಕರು. ನಾನು ಖುಷಿಯಾಗಿ ಫೋಟೋ ತೆಗೆಯಲು ರೆಡಿಯಾಗುತ್ತಿದ್ದಾಗ, ಜೋರಾಗಿ ಬೊಬ್ಬೆ ಹಾಕಿ ಓಡಿ ಹೋಗುತ್ತಿದ್ದರು. ಮತ್ತೆ ಬರುತ್ತಿದ್ದರು, ಮತ್ತೆ ಫೋಟೋ ತೆಗೆಯಲು ಶುರುಮಾಡಿದಾಗ ಓಡುತ್ತಿದ್ದರು. ದುರ್ಗದ ಮಳೆಯೂ ಹೀಗೇ, ಒಮ್ಮೆ ಬಂದು, ಮತ್ತೊಮ್ಮೆ ಓಡಿ ಹೋಗಿ ಆಟವಾಡುತ್ತಿತ್ತು. ಈ ದೇವರಂತಹ ಮಕ್ಕಳು ಓಡಿ ಹೋಗುವಾಗಲೂ ಕಲಾತ್ಮಕವಾಗಿ ಕಂಡು ಅವರ ಫೋಟೋ ತೆಗೆಯದೇ ಸುಮ್ಮನಿರಲು ಸಾಧ್ಯವೇ ಇರಲಿಲ್ಲ. ಅಷ್ಟೊತ್ತಿಗೆ ಇನ್ನೊಬ್ಬ ಹುಡುಗ ಮನೆಗೆ ಹೋಗಿ ಚಂದದ ಪ್ಯಾಂಟು, ಕನ್ನಡಕ, ಶರ್ಟ್ ಎಲ್ಲಾ ಹಾಕಿ ಫೋಟೋಗೆ ಮುಗ್ದವಾಗಿ ಪೋಸು ಕೊಡಲು ಬಂದ. ಅವನದ್ದೂ ಒಂದು ಫೋಟೋ ಹೊಡೆದು ತೋರಿಸಿದಾಗ ಅವನ ಮುಖ ಕುಂಬಳಕಾಯಿಯಂತಾಯಿತು. ನಿಜವಾದ ಖುಷಿ, ಬೆರಗು, ಆಪ್ತತೆ ಸಿಗೋದು ಚೇಷ್ಟೆ ಮಾಡುತ್ತ ಕಾಡುವ ಈ ಕಾಡಿನ ಪುಟ್ಟ ದೇವರಂತಹ ಮಕ್ಕಳ ಜೊತೆಯೇ ಅಂತ ಖಾತ್ರಿಯಾಗಿಹೋಯಿತು. ಕೊಂಚ ಕೊಂಚವೇ ಇರುಳು ಕವಿಯುತ್ತಿರುವಾಗ ಅಷ್ಟೊತ್ತು ನನ್ನನ್ನು ಮಗುವಿನಂತೆ ಮಾಡಿದ್ದು ಆ ಕಾಡಿನ ಮಕ್ಕಳಾ? ಆ ಕಾಡಿನ ಮೌನವಾ? ಜಲಪಾತದ ಭೋರ್ಗರೆತವಾ? ಅಥವಾ ಗೀತಕ್ಕನ ಮಾತಾ? ಅಂತ ಗೊತ್ತಾಗದೇ ದುರ್ಗದ ಕಾಡನ್ನು ಮತ್ತೊಂದಿಷ್ಟು ಪ್ರೀತಿಸುತ್ತಾ ಸಾಗಿದಾಗ ಮಳೆ ಮತ್ತೆ ಧೋ ಧೋ ಅಂತ ಓಡಿ ಬಂದು ದೇವಸ್ಥಾನದ ಸುತ್ತಲೆಲ್ಲಾ ಪ್ರದಕ್ಷಿಣೆ ಬಿದ್ದು ವೆಂಕಟರಮಣ ದೇವಸ್ಥಾನದಲ್ಲಿ ನಿಜಕ್ಕೂ ದೇವರಿದ್ದಾನೆ ಅನ್ನಿಸುವಂತೆ ಮುದ್ದಾಗಿ ಕಾಣುತ್ತಿತ್ತು.