ಮಂಗಳೂರು ತಾಲೂಕಿನ ಕಿನ್ನಿಕಂಬಳ ಎಂಬ ಹಳ್ಳಿಯಲ್ಲಿ ಬೆಳೆದ ಪೆಜತ್ತಾಯರು ಬಾಲ್ಯದ ಸುಂದರ ದೀಪಾವಳಿಗಳ ನೆನಪುಗಳನ್ನು ಬರೆದು ಕಳಿಸಿದ್ದಾರೆ.

ವರ್ಷ ಇಡೀ ದೀಪಾವಳಿಯ ಕನಸು ಕಾಣುತ್ತಾ ಪಟಾಕಿಯ ಬಗ್ಗೆಯೇ ಪುಡಿಕಾಸು ಸಂಗ್ರಹಿಸಿ ಒಟ್ಟುಹಾಕಿಟ್ಟ ನಮ್ಮ ಸೇವಿಂಗ್ಸ್ ಡಬ್ಬದ ಹಣವನ್ನು ಪೂರ್ತಾ ಬಳಸಿ, ದೀಪಾವಳಿಗೆ ಇನ್ನೂ ಒಂದು ವಾರ ಇದೆ -ಅನ್ನುವಾಗಲೇ ನಾವು ನಮ್ಮ ಪಟಾಕಿಗಳನ್ನು ಕೊಳ್ಳುತ್ತಾ ಇದ್ದೆವು. ಹೀಗೆ ಬಹಳ ಅಳೆದು ತೂಗಿ ತುಂಬಾ ಚೌಕಾಸಿ ಮಾಡಿಕೊಂಡ ವಿವಿಧ ರೀತಿಯ ಪಟಾಕಿಗಳನ್ನು ನಮ್ಮ ಶಾಲಾ ಪುಸ್ತಕಗಳ ಕಪಾಟಿನಲ್ಲೇ ಇಟ್ಟುಕೊಂಡು ಪದೇ ಪದೇ ಅವನ್ನು ಕೈಯ್ಯಲ್ಲಿ ಹಿಡಿದು ಅವುಗಳ ಅಂದ ಚಂದವನ್ನು ನೋಡಿ ಆನಂದಿಸುತ್ತಾ ಇದ್ದೆವು. ನಮ್ಮ ಪಟಾಕಿಯ ಸ್ಟಾಕ್ ಗಳನ್ನು ನಮ್ಮ ಚಡ್ಡಿದೋಸ್ತಿಗಳ ಪಟಾಕಿ ಸ್ಟಾಕಿನೊಂದಿಗೆ ಹೋಲಿಸಿಕೊಂಡು ಮಾತನಾಡುವುದೇ ಪ್ರತೀ ವರ್ಷದ ದೀಪಾವಳಿಯ  ಹಬ್ಬದ ಸಡಗರಕ್ಕೆ ಹೊಸಾ ಇಂಬು ನೀಡುತ್ತಾ ಇತ್ತು.

ದೊಡ್ದವರು ನಮ್ಮ ಈ ಪಟಾಕಿ ಗೀಳಿನ ಬಗ್ಗೆ ನಮ್ಮನ್ನು ಬಯ್ಯುತ್ತಿದ್ದರು. ಕೆಲವೊಮ್ಮೆ  ನಮ್ಮ ಅಕ್ಕಂದಿರು ನಮ್ಮನ್ನು ಈ ಬಗ್ಗೆ ಲೇವಡಿ ಮಾಡುತ್ತಾ ಇದ್ದರು. ಆ ಬಗೆಯ ಸಿಕ್ಕ ಪುಟ್ಟ ಸಂಗತಿಗಳ ಕುರಿತು ನಾವ್ಯಾರೂ ಚಿಂತೆ ಮಾಡುತ್ತಾ ಇರಲಿಲ್ಲ. ನಮ್ಮ ಶಾಲೆಗಳಿಗೆ ರಜಾ ಇರುತ್ತಿದ್ದ ಭಾನುವಾರದ ದಿನಗಳಲ್ಲಿ ನಾವು ನಮ್ಮ ಪಟಾಕಿಗಳ ಸ್ಟಾಕನ್ನು ಬಹು ಸಂಭ್ರಮದಿಂದ ಮಧ್ಯಾಹ್ನದ ಉರಿ ಬಿಸಿಲಿಗೆ ಒಡ್ದಿ, ಅವುಗಳ ಜತೆಗೆ ನಾವೂ ಮೈ ಸುಡಿಸಿಕೊಳ್ಳುತ್ತಾ, ಅವನ್ನು ಚೆನ್ನಾಗಿ ಕಾಸಿ, ಅವು ಚೆನ್ನಾಗಿ ಒಣಗಿ ಬಿಸಿ ಏರಿದೊಡನೆಯೇ, ಅವುಗಳ efficiencyಯನ್ನು ನೂರಕ್ಕೆ ನೂರರಷ್ಟು ಹೆಚ್ಚಿಸಿಬಿಟ್ಟೆವು -ಅಂತ ನಮ್ಮೊಳಗೇ ಹಿಗ್ಗಿ ಸಂಭ್ರಮಿಸುತ್ತಾ ಇದ್ದೆವು.

ಹೆಚ್ಚಿನ ವರ್ಷಗಳಲ್ಲಿ ನಮ್ಮ ಪಟಾಕಿ ಟುಸ್ ಮಾಡಲು ದೀಪಾವಳಿ ದಿನವೇ ಒಂದು ಮಳೆ ತಪ್ಪದೆ ಬರುತ್ತಿತ್ತು. ಈ ದೀಪಾವಳಿಯ  ‘ಅಪ್ರಿಯ ಮಳೆ’ ಬರಬಾರದೆಂದು ಪಟಾಕಿ ಪ್ರೇಮಿಗಳಾದ ನಾವು ಕಂಡಕಂಡ ದೇವರಿಗೆ, ಇಗರ್ಜಿಗೆ ಮತ್ತು ಪಳ್ಳಿಗಳಿಗೆ ಪುಡಿಕಾಸಿನ ಹರಕೆ ಹೊರುತ್ತಾ ಇದ್ದೆವು. ನಾವು ಎಷ್ಟು ಹರಕೆ ಹೇಳಿಕೊಂಡರೂ, ಪ್ರತೀ ವರ್ಷ ತಪ್ಪದೇ ಈ ದೀಪಾವಳಿಯ ಮಳೆ ಬಂದು ನಮ್ಮ ಅರ್ಧಾಣೆ ಕಾಲಾಣೆಯ ಲಂಚದ ಹಣವನ್ನು ಉಳಿಸಿಯೇ ಬಿಡುತ್ತಿತ್ತು.

ಹರಕೆಯ ಹಣ ಉಳಿತಾಯ ಆದರೂ, ಈ  ಮಳೆಯು ನಮ್ಮ ಮನಸ್ಸನ್ನು ಮುದುಡಿಸಿಯೇ ಬಿಡುತ್ತಿತ್ತು. ಮಕ್ಕಳಾದ ನಮಗೆ ಬೇಡದೇ ಇದ್ದ ಈ ಮಳೆಯು ಉಂಟು ಮಾಡಿದ ಚಂಡಿ ನೆಲ ಮತ್ತು ಆರ್ದ್ರ ವಾತಾವರಣದಲ್ಲಿ ನಮ್ಮ ಅತ್ಯಮೂಲ್ಯ ಪಟಾಕಿಗಳನ್ನು ಸುಡಲು ನಾವು ಅಂಜುತ್ತಿದ್ದೆವು. ಅಷ್ಟು ಕಷ್ಟಪಟ್ಟುಕೊಂಡ ನಮ್ಮ ಪಟಾಕಿ ಟುಸ್ ಎಂದರೆ ನಮಗಾಗುವ ನಿರಾಸೆ ಎಷ್ಟೆಂದು ನೀವೇ ಯೋಚಿಸಿ ಹೇಳಿ.

ದೀಪಾವಳೀ ದಿನದ ಪಟಾಕಿಯ ಪ್ರೋಗ್ರಾಮನ್ನು ಮುಂದೂಡಿ ನಾವು ಅವನ್ನು ಮರುದಿನದ ಮೊದಲನೇ ತುಳಸೀ ಪೂಜೆಯ ದಿನವೇ ಸುಡುತ್ತಾ ಇದ್ದೆವು. ಹನ್ನೆರಡನೇ ದಿವಸದ ತುಳಸೀ ಪೂಜೆ ಉತ್ಥಾನ ದ್ವಾದಶೀ ದಿನದ ಓದು ಬರುತ್ತದೆ. ಈ ಫೈನಲ್ ತುಳಸೀ ಪೂಜೆಗೆ ಪಟಾಕಿ ಇಲ್ಲದೇ ಇದ್ದರೆ ಹೇಗೆ? -ಅಂತ ನಾವೆಲ್ಲರೂ ನಮ್ಮ ನಮ್ಮ ಪಟಾಕಿಗಳ ಸಂಗ್ರಹದ ಶೇಕಡಾ ಇಪ್ಪತ್ತೈದರ ಭಾಗವನ್ನು ಕೊನೆಯ ತುಳಸೀ ಪೂಜೆಗೆ “ರಿಜರ್ವ್” ಆಗಿ ಕಾದಿರಿಸುತ್ತಾ ಇದ್ದೆವು. ಯಾಕೆಂದರೆ, ನಮ್ಮ ಹಳ್ಳಿಯಲ್ಲಿ ಕೊನೆಯ ತುಳಸೀ ಪೂಜೆಯ ಸಮಯ ಪಟಾಕಿ ದೊರೆಯುತ್ತಾ ಇರಲಿಲ್ಲ.

ಪಟಾಕಿ ಕೊಂಡ ದಿನದಿಂದಲೂ ಪ್ರತೀದಿನ ಎಂಬಂತೆ, ನಮ್ಮಲ್ಲಿ ಇರುವ ಐದೋ ಆರೋ ರೂಪಾಯಿಯ ಪಟಾಕಿಗಳ ಖಜಾನೆಯನ್ನು ಪದೇಪದೇ ಕೈಯ್ಯಲ್ಲಿ ಹಿಡಿದು ನಾವು ಪರೀಕ್ಷಿಸುತ್ತಾ ಇರುತ್ತಿದ್ದುದರಿಂದ ನಮ್ಮ ಕೈಗಳು ದೀಪಾವಳಿಯ ಸಮಯ ಸದಾ ಪಟಾಕಿಯದೇ ಪರಿಮಳ. ಈ ಗಂಧಕದ ವಾಸನೆಯು ನಮಗೆ ಹಮ್ಮೆಯ ಸಂಗತಿ! ಈ ವಿಶಿಷ್ಟ ಪರಿಮಳದ ಬಗ್ಗೆ ನನಗೆ ಇಂದಿಗೂ ಹೆಮ್ಮೆ ಇದೆ.

ಗೋಪೂಜೆ: ಗೋಪೂಜೆಯ ದಿನದಂದು ಬೆಳಗ್ಗೆ ಗೋವುಗನ್ನು ಬಿಸಿನೀರಿನಿಂದ ಮೀಯಿಸಿ, ಅವಕ್ಕೆ ಹಿಂಡ್ಲೆಕಾಯಿ ಚೆಂಡು ಹೂವಿನ ಸರ ತೊಡಿಸುತ್ತಾ ಇದ್ದರು. ಅವಕ್ಕೆ ಮೈತುಂಬಾ ಸೇಡಿ ಮಣ್ಣಿನ ಅಲಂಕಾರಿಕ ನಾಮ ಮತ್ತು ರಿಂಗ್ಸ್ ಬರೆಯುತ್ತಿದ್ದರು. ಕೆಲವು ದನಗಳು ಒಂದರ ಮಾಲೆಗೆ ಇನ್ನೊಂದು ದನ ಬಾಯಿ ಹಾಕುತ್ತಾ ಚೆಂಡು ಹೂವು ತಿನ್ನುತ್ತಾ ಇದ್ದುವು. ದನಗಳಿಗೆ ಆರತಿ ಎತ್ತಿ, ಅವಕ್ಕೆ ಬೆಲ್ಲ ತೆಂಗಿನಕಾಯಿ ಮತ್ತು ಅವಲಕ್ಕಿಯ ಪಂಚಕಜ್ಜಾಯ ತಿನ್ನಿಸುತ್ತಾ ಇದ್ದರು. ಬಾಳೆ ಹಣ್ಣು ತಿನ್ನಿಸುತ್ತಾ ಇದ್ದರು. ಮನೆಯ ಯಜಮಾನತಿಯರು ತಮ್ಮ ಮನೆಯ  ದನಗಳಿಗೆ ಚೀನಿಕಾಯಿ ಕಡುಬು ಮಾಡಿ ತಿನ್ನಿಸುತ್ತಾ ಇದ್ದರು. (ಆ ಮೇಲೆ ನಮಗೆ ಬೆಳಗಿನ ತಿಂಡಿಗೂ ಅದೇ ಚೈನೀಸ್ ಕಡುಬು ಬಡಿಸುತ್ತಾ ಇದ್ದರು) ಮಲೆನಾಡಿನ ಗಿಡ್ಡ ತಳಿಯ ದನಗಳ ಕುತ್ತಿಗೆಗೆ ಕಟ್ಟಿರುತ್ತಿದ್ದ  ಬಿದಿರಿನ ಗಂಟೆಗಳ ನಿನಾದವನ್ನೂ ನಾನು ಇಂದಿಗೂ ಮರೆತಿಲ್ಲ. ನಮ್ಮ ಮನೆಯ ದನ ಮೇಯಿಸುವ ಆಳುಮುದರ ಮಹಾ ಬುದ್ಧಿವಂತ! ಬೇಲಿ ಹಾರಿ ಊರ ಮಂದಿಯ ತೋಟ ಮೇಯುವ ಕೆಲವು ತುಂಟು ದನಗಳ ಕೊರಳಿಗೆ ಆತ ಒಂದು ಮರದ ಬಡಿಗೆಯನ್ನು ಬಿಗಿದು ಅವು ಯಾರ ತೋಟದ ಬೇಲಿಯನ್ನೂ ಬೇಲಿಹಾರದಂತೆ ಮಾಡುತ್ತಿದ್ದ. ಪ್ರತೀ ಗೋಪೂಜೆಯ ಕಾಲದಲ್ಲೂ ಬಾಲಕನಾಗಿದ್ದಾಗ ನನಗೊಂದು ಕಗ್ಗಂಟಿನಂತಹಾ ಪ್ರಶ್ನೆ ತಲೆಯಲ್ಲಿ ಮೂಡುತ್ತಾ ಇತ್ತು.

ಪೂಜೆ ದನಗಳಿಗೆ ಮಾತ್ರ ಯಾಕೆ? ಎಮ್ಮೆಗಳಿಗೆ ಏಕಿಲ್ಲ? -ಅಂತ. ಅವಕ್ಕೆ ಸಮಾನ ನ್ಯಾಯ ಒದಗಿಸಲು ನನ್ನ ಮನ ತುಡಿಯುತ್ತಾ ಇತ್ತು. ಚೋಟುದ್ದದ ಹುಡುಗನಾದ ನನಗೆ ದೊಡ್ದ ಗಾತ್ರದ ಎಮ್ಮೆಗಳ ಬಳಿಗೆ ಹೋಗಲು ಹೆದರಿಕೆ. ನಮ್ಮ ಮನೆಯ ಎಮ್ಮೆಯ ಕರುಗಳಿಗೆ ಸ್ನಾನ ಮಾಡಿಸಿ ಅವಕ್ಕೆ ಸೇಡಿ ಮಣ್ಣಿನ ನಾಮ ಬಳಿಯುತ್ತಿದ್ದೆ. ಮಾಲೆ ಹಾಕುತ್ತಾ ಇದ್ದೆ. ನನ್ನ ಜತೆಗಾರನಾದ ನಮ್ಮ ಮನೆಯ ನಾಯಿ ಸೀಜರ್‍ಗೂ ಸ್ನಾನ ಮಾಡಿಸಿ ಅವನಿಗೂ ನಾಮ ಬಳಿದು ಮಾಲೆ ಹಾಕುತ್ತಾ ಇದ್ದೆ. ಅಜ್ಜಿಯನ್ನು ಬೇಡಿ ಚೀನೀ ಕಡುಬು ಮತ್ತು ಅವಲಕ್ಕಿ ಪಂಚಕಜ್ಜಾಯ ತಂದು ಅವಕ್ಕೂ ತಿನ್ನಿಸಿದಾಗಲೇ ನನಗೆ ಸಮಾಧಾನ! ಊರವರಿಗೆಲ್ಲಾ ನನ್ನ ಎಮ್ಮೆಕರುಗಳ ಪೂಜೆ ಮತ್ತು ನಾಯಿ ಪೂಜೆ ಕುಚೋದ್ಯದ ಸಂಗತಿ! ನನ್ನ ಪ್ರೀತಿಯ ಅಜ್ಜಿ ಮತ್ತು ಅಜ್ಜ ಮಾತ್ರ ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಕುಚೋದ್ಯ ಮಾಡುತ್ತಾ ಇರಲಿಲ್ಲ. ಹಿರಿಯರೇ ನನ್ನ ಪಾರ್ಟಿಯಲ್ಲಿ ಇದ್ದಾಗ ನಾನು ಉಳಿದವರ ತಮಾಷೆಯ ಮಾತುಗಳಿಗೆ ಸೊಪ್ಪುಹಾಕದೇ ನಿಶ್ಚಿಂತನಾಗೇ ಇರುತ್ತಿದ್ದೆ.

ಧನಧಾನ್ಯ ಲಕ್ಷ್ಮೀ ಪೂಜೆ: ಬುದ್ಧಿವಂತರಾದ ನಮ್ಮ ಊರ ರೈತರು ಈ ದೀಪಾವಳಿಯ ಮಳೆಯ ಬಗ್ಗೆ ಹೋಷಿಯಾರ್ ಆಗಿ ಇರುತ್ತಿದ್ದರು. ಈ ಹಬ್ಬದ ಮಳೆ ಬರುವ ಒಂದು ವಾರದ ಮೊದಲೇ ತಮ್ಮ ತಮ್ಮ ಗದ್ದೆಗಳ ಕೊಯ್ಲನ್ನು ಪೂರೈಸಿ, ಪೈರನ್ನು ಪಡಿಮಂಚಕ್ಕೆ ಬಡಿದು ಹೊಸ ಭತ್ತವನ್ನು ಸಂಗ್ರಹಿಸಿ, ತಮ್ಮ ತಮ್ಮ ಕಣಜಗಳಿಗೆ ತುಂಬಿಸುತ್ತಾ  ಇದ್ದರು.

ನಮ್ಮ ಮನೆಯ ದೇವರ ಕೋಣೆಯಲ್ಲಿ ಹೊಸಾ ಭತ್ತ ತುಂಬಿದ ಹರಿವಾಣದಲ್ಲಿ ಲಕ್ಷ್ಮೀದೇವಿಯ ಪಟ. ಆ ಲಕ್ಷ್ಮೀದೇವಿಯ ಪಟಕ್ಕೆ ಮನೆಯ ಹೆಂಗಸರ ಬಂಗಾರದ ಸರ! ದೇವಿಯ ಕಾಲ ಬುಡದಲ್ಲಿ ಮನೆಯಲ್ಲಿದ್ದ ಹಣ. ಬ್ಯಾಂಕಿನ ಪಾಸ್ ಬುಕ್. ಅದರ ನಡುವೆ ನಮ್ಮ ಖಾಲಿ ಚಿಲ್ಲರೆ ಹಾಕುವ ಡಬ್ಬಿ! ಅಜ್ಜಿ ನಮ್ಮ ಖಾಲಿಯಾದ ಪಟಾಕಿ ಫಂಡಿನ ಸೇವಿಂಗ್ಸ್ ಡಬ್ಬಿಗೆ ಸ್ವಲ್ಪ ಚಿಲ್ಲರೆ ಹಾಕಿ ಇಡುತ್ತಾ ಇದ್ದರು. ಆ ಹಣ ಮುಂದಿನ  ವರುಷದ ದೀಪಾವಳಿಯ ಪಟಾಕಿಗೆ ಬೋಣಿಗೆ ಹಣ ಅಂತ ನಾವು ಸಂತಸಪಡುತ್ತಿದ್ದೆವು.

ಧನ ಧಾನ್ಯ ಲಕ್ಷ್ಮಿಯರ ಪೂಜೆಯ ನಂತರ ಮನೆಯ ಭತ್ತದ ಪಣಿತದ ಪೂಜೆ! ಮನೆಯ ಸುತ್ತಲೂ ಕಾಕಡದ ದೀಪ! ಮನೆಯೊಳಗೆ ಹಣತೆಯ ದೀಪ. ಕ್ಯಾಂಡಲ್ ಹಚ್ಚಲು ಹೋದರೆ, ಈ ಕ್ಯಾಂಡಲ್ ಹಚ್ಚ ಬೇಡ! ಕ್ಯಾಂಡಲ್ ನಿಮ್ಮ ಪಟಾಕಿ ಹಚ್ಚಲು ಮಾತ್ರ ಸರಿ! -ಅಂತ ದೊಡ್ದವರು ಅನ್ನುತ್ತಾ ಇದ್ದರು.

ತುಳಸೀ ಮತ್ತು ಬಲೀಂದ್ರ ಪೂಜೆ: ಅಜ್ಜನಮನೆಯ ದೊಡ್ಡ ತುಳಸೀ ಕಟ್ಟೆಯ ಬಳಿ ಬಲೀಂದ್ನನ ಅಲಂಕೃತ ಕಂಬ ಇರುತ್ತಾ ಇತ್ತು.  ಸಾಯಂಕಾಲ ಹೊತ್ತು ಅವನನ್ನು ಅವಲಕ್ಕಿ ಬೀರಿ ಸ್ವಾಗತಿಸಿ ಕರೆದು ಪೂಜಿಸುವ ಕ್ರಮ ಇತ್ತು. ಇಂದಿಗೆ ನಾನು ಪೇಟೆವಾಸಿ.

ಇಂದು ನನ್ನ ಮನೆಯಲ್ಲಿ ಪೇಪರ್ ಬಲೀಂದ್ರ. ನನ್ನ ಮನೆಯಲ್ಲಿ ನಿನ್ನೆ ಕೊಂಡ ಪಾಟಿನ ತುಳಸಿ ಗಿಡ ಮತ್ತು ಅದರ ಬಳಿ ಒಂದು ಬಿಳೇ ಹಾಳೆಯ ಮೇಲೆ ನಾನೇ ಚಿತ್ರಿಸಿದ ಬಲಿಯೇಂದ್ರನ ಚಿತ್ರ! (ಇದು ನಮ್ಮ ಮೊಮ್ಮಕ್ಕಳಿಗೆ ಮೀಸೆ ಮಾಮ!! -ಎಂಬ ತಮಾಷೆಯ ಸಂಗತಿ!) ಇಂದಿನ ದೀಪಾವಳಿಯ ಸೊಡರಿನ ಬದಲಿಗೆ ನಮಗೆ ಕ್ಯಾಂಡಲೇ ಗತಿ! ಕಾಲ ಬದಲಾಗುತ್ತಿದೆ.

ನಿನ್ನೆ ನಮ್ಮ ಪಕ್ಕದ ಮನೆಯ ಹತ್ತು ವರ್ಷ ಪ್ರಾಯದ ಹುಡುಗ ಹೀಗೆ ಹೇಳುತ್ತಾ ಇದ್ದ. ದೀಪಾವಳಿಗೆ ಈ ದೇವರುಗಳ ಪೂಜೆ ಯಾಕೆ? ಅಂಕಲ್! ಸಂತೋಷದ ಈ ದೀಪಾವಳಿಗೆ ನಿಮ್ಮ ಈ ದೇವರನ್ನು ಯಾಕೆ ಬೆರೆಸುತ್ತೀರಿ? ಹಬ್ಬ ಅಂದರೆ ತಿಂದು ಉಂಡು ಹೊಸಾ ಬಟ್ಟೆ ಹಾಕಿಕೊಂಡು ಪಟಾಕಿ ಬಿಡುವುದಲ್ಲವಾ? -ಅಂತ! ಅವನಿಗೆ ನಾನೇನು ಉತ್ತರ ಕೊಡಲಿ? ಮುಂದೊಂದು ದಿನ ದೇವರ ಹೆಸರೇ ಇಲ್ಲದ ದೀಪಾವಳೀ ಹಬ್ಬ ಆಚರಿಸಲ್ಪಡಬಹುದೇ?

ಶುಭಾಶಯಗಳು
ಹೀಗೆ ನಾನು ನನ್ನ ನೆನಪುಗಳೊಂದಿಗೆ ಜೀವಿಸುತ್ತಾ ಇದ್ದೇನೆ.