ನಮ್ಮ ಸುತ್ತಲೂ ಜಲಪಾತ ತುಂಬಿ ರೌದ್ರಾವತಾರದಿಂದ ನಮ್ಮ ಮೇಲೆ ಬಿದ್ದಂತೆ, ಸುತ್ತಲೂ ಕಪ್ಪೆಗಳು, ಜೀರುಂಡೆಗಳು ಒಂದೇ ಸಮನೆ ಮಳೆಗಿಂತಲೂ ಗಾಢವಾಗಿ ಬೊಬ್ಬೆ ಹಾಕಿದಂತೆ, ದೂರದ ಕುದುರೆಮುಖ ಪರ್ವತ ಶ್ರೇಣಿ ಕಡುಗಪ್ಪಾಗಿ ಅಲ್ಲಿಂದ ಮಿಂಚೊಂದು ಚಿಟ್ ಎಂದು ಹೊಳೆದು ಇಡೀ ಕಾಡು ಬೆಳಗಿದಂತೆ, ನಮ್ಮ ಪಕ್ಕದಲ್ಲೇ ಬೀಸುಗಾಳಿಗೆ ಬಾಗಿ ಬಾಗಿ ಮಾವಿನ ಮರದ ಗೆಲ್ಲೊಂದು ಢಮಾರ್ ಎಂದು ಮುರಿದು ಬಿದ್ದಂತೆ, ಸುರಿದು, ಸುರಿದು, ಕೊನೆಗೊಮ್ಮೆ ಮಳೆ ನಿಂತು ಇಡೀ ಕಾಡಿಗೇ ಕಾಡೇ ಮಹಾಮೌನಕ್ಕೆ ಶರಣಾದಂತೆ, ನಾವೀಗ ಬಿಸಿಲನ್ನೇ ತಿಂದುಕೊಂಡು ಕೂತಿದ್ದರೂ, ಈ ಕಾಡು ನೋಡುತ್ತ ಮಳೆಗಾಲವೇ ಕಣ್ಣ ಬೊಗಸೆಗೆ ಬಂದಂತಾಯಿತು.
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹದಿನಾರನೇ ಕಂತು

 

ತುಂಬಾ ದಿನಗಳ ನಂತರ ಮಾಳ ಕಾಡಿನ ದಾರಿ ಹಿಡಿದಾಗ ಬೇಸಿಗೆಯ ಬಿಸಿಗೆ ಬಾಗಿದ ತೆಂಗು, ಅಡಿಕೆ, ಮಾವು, ತೇಗ, ಹೊನ್ನೆ ಮರಗಳೆಲ್ಲಾ ನೆರಳು ನೆರಳಾಗಿ ದಾರಿ ತುಂಬೆಲ್ಲಾ ಬಿದ್ದಿದ್ದವು. ಈ ಕಾಡಲ್ಲಿ ಯುಗಾದಿ ಬರುವ ಮೊದಲಿನ ಈ ಹಿತವಾದ ನೆರಳು, ದಾರಿ ಮೇಲೆ ಎಷ್ಟು ಚೆನ್ನಾಗಿ ಬಿದ್ದಿರುತ್ತದೆಂದರೆ, ಮಾವಿನ ಮರದಲ್ಲಿ ಕೂತು ತಪಸ್ಸು ಮಾಡುವ ಕಾಜಾಣವೂ “ಇದ್ಯಾವುದಪ್ಪಾ ನನ್ ತರನೇ ಕಪ್ಪು ಹಕ್ಕಿ ರಸ್ತೆಗೆ ಬಿದ್ದಿದೆ ಅಲ್ಲಾ”? ಎಂದು ತನ್ನ ನೆರಳನ್ನೇ ನೋಡಿ ನಿಬ್ಬೆರಗಾಗುವಂತೆ, “ನಾನು ನಿಜವಾಗಿಯೂ ಇಷ್ಟೊಂದು ವಿಶಾಲವಾಗಿದ್ದೇನಾ?” ಎಂದು ಮಾವಿನ ಮರ ತನ್ನ ನೆರಳನ್ನೇ ನೋಡಿ ಪುಲಕವಾಗುವಂತೆ ಇರುತ್ತದೆ ಈ ಕಾಡ ನೆರಳಿನ ಚಂದ. ಅದು ಬಿಡಿ, ದಾರಿಯಲ್ಲಿ ಸಾಗುವ ನಮಗೇ ಆ ನೆರಳನ್ನು ತುಳಿದು ಮುಂದೆ ಸಾಗೋದೇ ಬೇಡವೆನ್ನಿಸುತ್ತದೆ. ಹಾಗಾದ್ರೆ ಎಷ್ಟು ಮಾದಕವಾಗಿರುತ್ತದೆ ಆ ಕಾಡಿನ ನೆರಳು ನೀವೇ ಯೋಚಿಸಿ. ನಾವು ಮುಂದೆ ಮುಂದೆ ಹೋಗುತ್ತಿದ್ದಂತೆಯೇ ಬರೀ ಒಂದು ಮರದ ನೆರಳಲ್ಲ, ಕಾಡಿನ ಎಲ್ಲಾ ಮರಗಳು ತಾವು ನೆರಳಾಗಿ, ಸಾಲು ಸಾಲಾಗಿ ತೂಕಡಿಸಿ ತೂಕಡಡಿಸಿ ಕೊನೆಗೆ ಮಲಗೇಬಿಟ್ಟವು. ಎಷ್ಟೆಂದರೂ ಈಗ ಬೇಸಿಗೆ ಝಳ ಕಾಡಿನ ನೆತ್ತಿಯನ್ನು ಸುಡುತ್ತಿರುತ್ತದೆ. ಮೊನ್ನೆ ಮೊನ್ನೆ ಕಾಡಿನ ಗಿಳಿ ಹುಸುರ ಬೆಟ್ಟಗಳನ್ನು ತಿಂದುಕೊಂಡು ಮಸ್ತಾಗಿ ಕಾಣುತ್ತಿದ್ದ ಮೋಡಗಳ ಹಿಂಡುಗಳಿಗೆ ಈಗ ಚೂರೂ ಹಸಿರು ತಾಕಿರಲಿಲ್ಲ. ಸುವರ್ಣ ನದಿ ಕೆಲವೇ ಕೆಲವು ಹನಿಗಳೊಂದಿಗೆ ತ್ರಾಸಪಟ್ಟು ಕಾಡಲ್ಲಿ ಇಳಿಯುತ್ತಿದ್ದಳು. ಒಮ್ಮೆ ಅರ್ಧ ಬಣಗಿದ ಕಾಡನ್ನೂ, ಕಷ್ಟಪಟ್ಟು ಹರಿಯುತ್ತಿರುವ ಸುವರ್ಣೆಯನ್ನೂ ನೋಡಿಕೊಂಡು ಮುಳ್ಳೂರು ಕಾಡ ಮನೆ ತಲುಪಿದಾಗ ಆ ಹಂಚಿನ ಮನೆಯ ಮೇಲೆ ಹಬ್ಬಿನಿಂತ ಕುದುರೆಮುಖದ ಪರ್ವತ ಶ್ರೇಣಿಗಳು ಭಯಾನಕವಾಗಿ ಕಾಣುತ್ತಿತ್ತು.

ಮಳೆಗಾಲದಲ್ಲಿ ಹಚ್ಚ ಹಸಿರು ರಾಮಪ್ಪ ಗಿಳಿಯಂತೆ ಕಾಣುತ್ತಿದ್ದ ಆ ಕುದುರೆಮುಖ, ಈ ಬೇಸಿಗೆಯಲ್ಲಿ, ಮೊನ್ನೆ ಮೊನ್ನೆ ಯಾರೋ ಫಟಿಂಗರು ಹಾಕಿದ್ದ ಬೆಂಕಿಗೆ ಅರ್ಧ ಸುಟ್ಟು ಹೋಗಿ ನಿತ್ರಾಣಗೊಂಡಂತೆ ಕಾಣುತ್ತಿತ್ತು. “ಬಾ ಮಳೆಯೇ ಬಾ, ನೀ ಬಂದರೆ ಮಾತ್ರ ನಂಗೆ ಜೀವ ಬರೋದು ಎಂದು ತನ್ನ ತಲೆ ಮೇಲೆ ತೇಲುತ್ತಿದ್ದ ಮೋಡಗಳಿಗೆ, ಬೇಗ ಬರುವಂತೆ ಅಪೀಲು ಮಾಡುತ್ತಿದ್ದ ಆ ಗಿರಿ ಶ್ರೇಣಿಗಳನ್ನು ನೋಡಿ ಅರೆಕ್ಷಣ ಅಯ್ಯೋ ಅನ್ನಿಸದೇ ಇರುತ್ತದಾ ಹೇಳಿ?

ಮುಳ್ಳೂರಿನ ಆ ಚೆಂದದ ಮನೆಯಲ್ಲಿ ನಮಗಾಗೇ ಕಾಯುತ್ತಿದ್ದ ಮಾಳದ ಹಿರಿಯ ಜೀವ ಯಶವಂತ ಜೋಶಿಯವರು ಭಾರೀ ಹುಮ್ಮಸ್ಸಲ್ಲಿ ಮನೆಯ ಎದುರೇ ನಿಂತಿದ್ದರು. ಸುತ್ತಲೂ ಅಡಿಕೆ ತೋಟದ ನೆರಳು, ಬೇಸಗೆಯಲ್ಲೂ ಗೆಜ್ಜೆಯಂತೆ ಸದ್ದು ಮಾಡುತ್ತ ಅಲ್ಲೆಲ್ಲೋ ಸುರಿಯುತ್ತಿರುವ ಹಳ್ಳ, ಅಂಗಳದ ಪೇರಳೆ ಮರದಲ್ಲಿ ಆಗ ತಾನೇ ಮೂಡಿದ ಕನಸಿನಂತೆ ತೂಗುತ್ತಿರುವ ಕೆಂಪು ಜಾತಿಯ ಚಂದ್ರ ಪೇರಳೆಗಳು, ದೂರದಲೊಂದು ದೊಡ್ಡ ಬೆಟ್ಟ, ನಮ್ಮನ್ನೆಲ್ಲಾ ನೋಡಿ ಗಾಭರಿಯಾದರೂ ಬೊಗಳುತ್ತಿದ್ದ ನಾಯಿ ಸದ್ದು, ಸುಯ್ ಅಂತ ಮನೆ ಅಂಗಳದಲ್ಲೇ ಹಾರಿ, ಬೇಗ ಬೇಗನೇ ಬೆಟ್ಟದತ್ತ ತಲುಪಿದ ಸಣ್ಣ ಜಾತಿಯ ಮಂಗಟ್ಟೆ ಹಕ್ಕಿಗಳು, ಇವೆಲ್ಲದರ ಜೊತೆ ಫ್ರೀಯಾಗಿ ಬರುವ ಬದುಕಿನ ಕಟ್ಟ ಕಡೆಯ ಶಬ್ದದಂತಿದ್ದ ಸುಯ್ಯನೇ ಗಾಳಿಯ ಕೋಲಾಹಲ, ಎಲ್ಲಾ ಸದ್ದುಗಳ ನಂತರ ಇಡೀ ಕಾಡಿಗೆ ಕಾಡೇ ಕವಿಯುತ್ತಿರುವ ಮಹಾ ಮೌನ, ಈ ಎಲ್ಲಾ ಸದ್ದು, ಸಡಗರಗಳ ಜೊತೆ ಹಬ್ಬದಂತೆ ನಿಂತಿದ್ದ ಮುಳ್ಳೂರು ಯಶವಂತ ಜೋಶಿಯವರ ಮನೆ, ಎಷ್ಟು ಚೆಂದ ಕಾಣುತ್ತಿತ್ತೆಂದರೆ, ಬದುಕಿನ ಸರಳ ಚೆಲುವೆಲ್ಲವನ್ನೂ ತಾನೇ ತೊಟ್ಟುಕೊಂಡ ಹಾಗೆ, ಮಾತು ಗೊತ್ತಿದ್ದರೂ ಮಿತ ಭಾಷೆಯೇ ಚೆಂದ ಅಂತ, ಜಾಸ್ತಿ ಮಾತಾಡದೇ ಸುಮ್ಮನೆ ನಗುವಿನಲ್ಲೇ ನಿರುಕಿಸುವ ಸರಳ, ಸಜ್ಜನ ಹುಡುಗಿಯಂತೆ ನಿಂತಿತ್ತು.

ಸುಮ್ಮನೆ ಕೆಂಪಗೇ ಹೊಳೆಯುವ ಮನೆಯ ನೆಲವನ್ನು, ಗೋಡೆಗೆ ತೂಗು ಹಾಕಿದ ಪಟಗಳನ್ನು ನೋಡುತ್ತ ಕೂತಾಗ “ಅದೆಲ್ಲಾ ಆ ಮೇಲೆ ನೋಡೋಣ, ನಾವೀಗ ಬೇಗ ದೇವರ ಗುಂಡಿಗೆ ಹೋಗಿ ಬಂದರೆ ಹೇಗೆ?” ಎಂದು ರಾಧಾಕೃಷ್ಣ ಜೋಶಿಯವರು ಹೇಳಿದ್ದೇ ತಡ, “ಹೋಗೋಣ ಅದಕ್ಕೇನಂತೆ ನಡೀರಿ, ನಾ ಬಂದೆ ಎನ್ನುತ್ತಲೇ ಯಶವಂತಜ್ಜ ಒಳಗೆ ಹೋಗಿ ಕತ್ತಿ ತಗೊಂಡು ಬಂದರು. “ಕಾಡಿಗೆ ಹೋಗುವಾಗ ಕತ್ತಿ ಒಂದು ಬೇಕೇ ಬೇಕು ನೋಡಿ” ಎನ್ನುತ್ತಾ ನಮಗೆ ದಾರಿಯಾಗಿ ಮುಂದಕ್ಕೆ ಹೋಗಿಬಿಟ್ಟರು. ದೊಡ್ಡದೊಂದು ಕನ್ನಡಕ ತೊಟ್ಟು ಚುರುಕು ಚುರುಕಾಗಿದ್ದ, ಯಶವಂತಜ್ಜನ ಕಣ್ಣುಗಳಲ್ಲಿ ಅನುಭವಗಳು ದಟ್ಟವಾಗಿದ್ದಂತೆ ಕಂಡಿತು. ವಯಸ್ಸು ಎಪ್ಪತ್ತು ದಾಟಿದರೂ ಅವರ ಮುಖದಲ್ಲಿನ ನಿರ್ಲಿಪ್ತತೆ, ಕಣ್ಣಿನ ತೇಜಸ್ಸು, ನಡಿಗೆಯಲ್ಲಿನ ಹುಮ್ಮಸ್ಸನ್ನು ನೋಡಿ, ಇಡೀ ಕಾಡೇ ಸಂಭ್ರಮ ಪಡುವಂತಿತ್ತು.

ದೇವರಗುಂಡಿ ಕಾಡ ದಾರಿ ಹಿಡಿಯುವ ಮೊದಲು ನಮಗೆ ಪೇರಳೆ ತಿನ್ನುವ ಮನಸ್ಸಾಯ್ತು, ಸೀದಾ ಹೋಗಿ ಮರದಿಂದ ಅಷ್ಟಿಷ್ಟು ಪೇರಳೆಗಳನ್ನು ಕಿತ್ತು, ಅದನ್ನು ಬಾಯಿಗಿಟ್ಟಾಗ, ಆಹಾ ಕಾಡ ಪೇರಳೆಯ ಸ್ವಾದ, ಪರಿಮಳ ಅದೆಷ್ಟು ಮೋಹಕವಾಗಿತ್ತು, ಬೇರೆಲ್ಲಾ ರುಚಿಗಳನ್ನು ನಾವು ತಯಾರು ಮಾಡೋದು, ಆದರೆ ಯಾರೂ ನೆಡದೇ ಹಕ್ಕಿಗಳಿಂದ ಬೀಜೋತ್ಪತ್ತಿಯಾಗಿ ಚಿಗುರಿ, ಹಣ್ಣು ಕೊಡುವ ಈ ಪ್ರಕೃತಿಯ ರುಚಿಯನ್ನೂ ಮೀರಿದ ರುಚಿ ಬೇರಾವ ಲೋಕದಲ್ಲಿ ಸಿಗುತ್ತದೆ ಹೇಳಿ?.

ಇನ್ನೇನು ಬೈಕೇರಿ ದೇವರ ಗುಂಡಿ ಕಾಡಿನತ್ತ ಹೊರಡಬೇಕು ಎನ್ನುವಷ್ಟರದಲ್ಲಿ ಐದನೇ ಕ್ಲಾಸು ಓದುತ್ತಿರುವ ಯಶವಂತಜ್ಜನ ಮೊಮ್ಮಗಳು ಅನುಷಾ, “ನಾನೂ ಬರ್ತೇನಜ್ಜ, ನಂಗೂ ಕಾಡು ನೋಡ್ಬೇಕು, ನದಿ ನೋಡ್ಬೇಕು ಅಂತ ಅರಳುಗಣ್ಣು ಬಿಡುತ್ತಲೇ ನುಡಿದಾಗ, ಆ ಪುಟ್ಟಿಯ ಕಣ್ಣಲ್ಲಿರುವ ಪುಟ್ಟ ಬೆಳಕನ್ನು, ಬೆಕ್ಕಿನ ಮರಿಯಂತಹ ಅವಳ ಮುಗ್ದ ಕಣ್ಣುಗಳನ್ನು ನೋಡಿ, ಆಹಾ ಎಷ್ಟು ಮುದ್ದಾಗಿದ್ದಾಳೆ ಈ ತಂಗಿಯಂತಹ ಪುಟ್ಟಿ, ಎಂದು ಅವಳನ್ನು ನೋಡಿ ಖುಷಿಯಾಯಿತು. ಅವಳ ಅಣ್ಣನೂ ನಾನು ನಡೆದೇ ಬರುತ್ತೇನೆ, ನೀವೆಲ್ಲ ಮುಂದುವರೆಯಿರಿ ಅಂತ ಹೇಳಿದ. ನಾವು ಏರು ದಾರಿಯನ್ನು ಹಿಡಿಯುತ್ತಾ, ಸುತ್ತಲೂ ಜಿಗ್ ಅಂತ ಹೊಳೆಯುವ ಬಿಸಿಲನ್ನು, ಮತ್ತೊಮ್ಮೆ ನೆರಳೆಲ್ಲಾ ಒಂದಾಗಿ ಇಡೀ ಕಾಡಿಗೇ ಕಾಡೇ ಮಬ್ಬಾಗುವುದನ್ನು, ದೊಡ್ಡ ದೊಡ್ಡ ಮರಗಳ ಮೇಲೆ ಅಷ್ಟೊತ್ತು ನಿರ್ಭಯವಾಗಿ ಕೂತ ಕಾಡು ಮೈನಾ ಹಕ್ಕಿಗಳು ಸುಯ್ ಅಂತ ಮತ್ಯಾವುದೋ ಮರದತ್ತ ಹೋಗಿ ಕಣ್ಮರೆಯಾಗುವುದನ್ನು ನೋಡುತ್ತ, ಇನ್ನು ನಾವು ಮಣ್ಣಾಗುತ್ತೇವೆ ಎಂದು ದುರದುರನೇ ಹಾರಿ ನಮ್ಮೆದುರೇ ಜೀವಬಿಡಲಿದ್ದ ತರಗೆಲೆಗಳ ಕಟ್ಟಕಡೆಯ ಮಾತನ್ನು ಕೇಳುತ್ತ ದೇವರ ಗುಂಡಿಯತ್ತ ಸಾಗಿದೆವು.

ಅಲ್ಲಿ ನಮಗಿಂತಲೂ ಮೊದಲು ತಲುಪಿದ್ದ ಯಶವಂತಜ್ಜ ಮತ್ತು ರಾಧಾಕೃಷ್ಣ ಜೋಶಿಯವರು, ನಾವು ತಲುಪಿದ್ದೇ “ನೋಡಿ ಇದೇ ದೇವರ ಗುಂಡಿ, ಹಿಂದೆ ಇಲ್ಲಿ ಒಂದು ದೇವಸ್ಥಾನದ ಅವಭೃತ ಉತ್ಸವ ನಡೆಯುತ್ತಿದ್ದಾಗ ದೇವರ ಮೂರ್ತಿ ಇಲ್ಲಿನ ಗುಂಡಿಯೊಳಗೆ ಸಿಕ್ಕಿ ಹಾಕಿಕೊಂಡಿತು. ಆ ನಂತರವೇ ಇದಕ್ಕೆ ದೇವರಗುಂಡಿ ಅನ್ನೋ ಹೆಸರು ಬಂತು. ಆ ಘಟನೆಯ ಬಳಿಕ ಇಲ್ಲಿ ದೇವರಿಗೆ ಅವಭೃತ ಸ್ನಾನ ಮಾಡುವುದನ್ನು ನಿಲ್ಲಿಸಲಾಗಿದೆ. ಸ್ವಲ್ಪ ಕೆಳಕ್ಕೋದರೆ ಹರಿಯುತ್ತಾ ಸುವರ್ಣ ನದಿಯನ್ನು ಕೂಡಿಕೊಳ್ಳುವ ಜಲಪಾತ ಸಿಗುತ್ತದೆ, ಬೇಸಿಗೆ ಅಲ್ವಾ ನೀರೆಲ್ಲಾ ಕಡಿಮೆಯಾಗಿದೆ, ಆದರೂ ಚೆಂದದ ತಾಣ ಇದು, ನಮ್ಮ ಚಿಕ್ಕಪ್ಪ ಇಲ್ಲಿ ತುಂಬಾ ವರ್ಷಗಳ ಹಿಂದೆ ಬೇಟೆಯಾಡುತ್ತಿದ್ದರು. ಅವರು ಎಷ್ಟು ಗಟ್ಟಿ ಇದ್ದರೆಂದರೆ, ನಿಜಕ್ಕೂ ಅಪ್ರತಿಮ ಬೇಟೆಗಾರರು, ಈಗಲೂ ಇಲ್ಲಿ ಕಾಡುಕೋಣಗಳು, ಚಿರತೆಗಳು ಬರ್ತವೆ, ತುಂಬಾ ಸಮಯದ ಹಿಂದೆ ಕರಡಿಗಳೂ ಬರುತ್ತಿದ್ದವು ಎಂದರು. ಒಮ್ಮೆ ಅಜ್ಜನನ್ನೂ, ಮತ್ತೊಮ್ಮೆ ಅಜ್ಜನ ಮಾತನ್ನೇ ಕೇಳುತ್ತಿದ್ದ ನಮ್ಮನ್ನು ಒಂದೇ ಸಮನೆ ನೋಡುತ್ತಿದ್ದ ಪುಟ್ಟಿ ಅನುಷಾಳ ಕಣ್ಣುಗಳಲ್ಲಿ ಈಗ ಸ್ವಲ್ಪ ಭಯ ಮೂಡಿತ್ತೆಂದು ತೋರುತ್ತದೆ. “ಕರಡಿಯಾ?” ಅಂದಳು, “ಹೌದೌದು, ಕರಡಿ ಉಂಟಿಲ್ಲಿ, ಅದಕ್ಕೆ ಸಣ್ಣ ಹುಡುಗಿಯರು ಅಂದ್ರೆ ಇಷ್ಟಾಂತೆ, ಆಡಲಿಕ್ಕೆ ಜನ ಬೇಕಂತೆ, ಅದೂ ಸ್ಕೂಲು ಹುಡ್ಗಿರೇ ಬೇಕಂತೆ” ಯಶವಂತಜ್ಜ ಹೆದರಿಸಿದರು. ಅವಳ ಕಂಗಳು ಅಜ್ಜ ಸುಮ್ಮನೇ ಚೇಷ್ಟೆಗೆ ಹೇಳಿದ್ದೆಂದು ನಗಾಡಿತಾದರೂ, ಒಳಗೊಳಗೇ “ಕರಡಿ ಬಂದ್ರೆ ಎಂತಾ ಮಾಡೋದು” ಅಂತ ಚಿಂತೆ ಆಯ್ತು ಪುಟ್ಟಿಗೆ,  ನಮ್ಮೆದುರು ಈಗ ದೇವರ ಗುಂಡಿಯ ಜುಳುಜುಳು ಧಾರೆ ಹರಿಯುತ್ತಿತ್ತು. ಮನಮೋಹಕ ನುಳುಪು ಕಲ್ಲುಗಳು ಗುಹೆಯಂತೆ ನಿಂತಿತ್ತು. ಒಂದೆಡೆ ಕಿತ್ತಳೆಯಂತೆ ಉರುಟಾದ ಗುಂಡಿಯೊಳಗೆ ನೀರು ಸುರಿಯುತ್ತಿತ್ತು. ಸುಮ್ಮನೇ ಇವನ್ನೆಲ್ಲಾ ಮೌನದಿಂದ ನೋಡುತ್ತಲೇ ನಿಲ್ಲುವುದು, ಹಾಗೆ ನಿಂತಾಗ ಆ ದೇವರ ಗುಂಡಿಯ ಸದ್ದು ಮತ್ತಷ್ಟು ಏರುವುದನ್ನು ಕೇಳುವುದು ಇವೆಲ್ಲಾ ಬದುಕಿಗೆ ಬೇಕಾದ ರಾಶಿ ರಾಶಿ ಚೈತನ್ಯವನ್ನೆಲ್ಲಾ ಒಂದೇ ಕ್ಷಣಕ್ಕೆ ಕೊಟ್ಟುಬಿಡುತ್ತವೆ.

ನಾನೂ ಬರ್ತೇನಜ್ಜ, ನಂಗೂ ಕಾಡು ನೋಡ್ಬೇಕು, ನದಿ ನೋಡ್ಬೇಕು ಅಂತ ಅರಳುಗಣ್ಣು ಬಿಡುತ್ತಲೇ ನುಡಿದಾಗ, ಆ ಪುಟ್ಟಿಯ ಕಣ್ಣಲ್ಲಿರುವ ಪುಟ್ಟ ಬೆಳಕನ್ನು, ಬೆಕ್ಕಿನ ಮರಿಯಂತಹ ಅವಳ ಮುಗ್ದ ಕಣ್ಣುಗಳನ್ನು ನೋಡಿ, ಆಹಾ ಎಷ್ಟು ಮುದ್ದಾಗಿದ್ದಾಳೆ ಈ ತಂಗಿಯಂತಹ ಪುಟ್ಟಿ, ಎಂದು ಅವಳನ್ನು ನೋಡಿ ಖುಷಿಯಾಯಿತು.

ಮಾಳ ಕಾಡುಗಳು ಬೇಸಿಗೆಯ ಬಿಸಿಗೆ ಕೊಂಚ ಕೊಂಚವೇ ಬಾಡಿದ್ದರೂ, ಬೇಸಿಗೆಯಲ್ಲೂ ದೂರದ ಬೆಟ್ಟದತ್ತ ಕಾಣುತ್ತಿದ್ದ ಬಿಸಿಲ ವಿಲಕ್ಷಣ ಸೌಂದರ್ಯ, ತರಗೆಲೆಗಳೆಲ್ಲಾ ಹರಡಿ ಗಾಳಿಗೆ ಪಿಸುಗುಡುತ್ತಿದ್ದ ಕಾಡಿನ ನವಿರಾದ ಹಾಡು, ಇವನ್ನೆಲ್ಲ ಅನುಭವಿಸುತ್ತ ಅಲ್ಲಿಯೇ ಕುಳಿತುಬಿಟ್ಟೆವು. ಯಶವಂತಜ್ಜನೂ ತನ್ನ ಸರಿದ ಯೌವ್ವನದ ಮರು ಕನಸು ಕಾಣುತ್ತಾ, “ನಾನು ಸಣ್ಣವನಿದ್ದಾಗ ಇದ್ದ ಕಾಡು ಇಲ್ಲಿ ಈಗಿಲ್ಲವೆಂದೂ, ಆ ದಿನಗಳ ಸೊಗಸೇ ಬೇರೆಯೆಂದೂ, ಹೇಳುತ್ತಿದ್ದರು. ಅಷ್ಟೊತ್ತಿಗೆ ಕಾಡಿನ ಮಂಗಟ್ಟೆ ಹಕ್ಕಿಗಳು ತಮ್ಮ ಉದ್ದಾದ ಕೊಕ್ಕುಗಳನ್ನು ಅಲ್ಲಿನ ಯಾವುದೋ ಮರಕ್ಕೆ ಕುಟುಕುತ್ತಾ, ದೂರದಲ್ಲಿ ಕಂಡ ನಮ್ಮನ್ನೊಮ್ಮೆ ನೋಡಿ, ಹ್ಯಾಗೋ ಕೂಗಿ ಹಾರಿಹೋಯ್ತು.

ದೇವರ ಗುಂಡಿಯ ಕಾಡನ್ನು, ಹರಿಯೋ ನೀರನ್ನು ಅನುಭವಿಸುತ್ತಿದ್ದಾಗ ಮಳೆಗಾಲ ನೆನಪಾಯ್ತು. ಅದ್ಯಾಕೋ ಗೊತ್ತಿಲ್ಲ, ಬೇಸಿಗೆಯಲ್ಲಿ ಮಾಳ ಕಾಡು ಸುತ್ತಿದರೆ ಒಮ್ಮೆ ಜೋರಾಗಿ ಮಳೆ ಬರಬೇಕು ಅನ್ನಿಸುತ್ತದೆ. “ಇಲ್ಲಿ ಮಳೆಗಾಲದಲ್ಲಿ ಕಾಲಿಡೋಕಾಗಲ್ಲ, ಎಲ್ಲಿ ನೋಡಿದ್ರೂ ಇಂಬಳ, ಮುಳುಗಿಸಿಯೇ ಬಿಡುತ್ತೆ ಎನ್ನುವಷ್ಟು ನೀರು, ಆದ್ರೂ ಮಳೆಗಾಲಕ್ಕೆ ಇಲ್ಲಿ ಬಂದ್ರೆ, ಇಲ್ಲಿನ ಸೌಂದರ್ಯಕ್ಕೆ ಮನಸ್ಸು ಒಮ್ಮೆ ದಂಗಾಗಬೇಕು ಅಷ್ಟು ಚಂದಿರುತ್ತದೆ” ಎಂದು ಜೋಶಿಯವರು ಬಿರು ಬೇಸಿಗೆಯಲ್ಲಿಯೂ ಮಳೆಯಂತೆ ಮಾತಾಡಿದರು.

ನಮ್ಮ ಸುತ್ತಲೂ ಜಲಪಾತ ತುಂಬಿ ರೌದ್ರಾವತಾರದಿಂದ ನಮ್ಮ ಮೇಲೆ ಬಿದ್ದಂತೆ, ಸುತ್ತಲೂ ಕಪ್ಪೆಗಳು, ಜೀರುಂಡೆಗಳು ಒಂದೇ ಸಮನೆ ಮಳೆಗಿಂತಲೂ ಗಾಢವಾಗಿ ಬೊಬ್ಬೆ ಹಾಕಿದಂತೆ, ದೂರದ ಕುದುರೆಮುಖ ಪರ್ವತ ಶ್ರೇಣಿ ಕಡುಗಪ್ಪಾಗಿ ಅಲ್ಲಿಂದ ಮಿಂಚೊಂದು ಚಿಟ್ ಎಂದು ಹೊಳೆದು ಇಡೀ ಕಾಡು ಬೆಳಗಿದಂತೆ, ನಮ್ಮ ಪಕ್ಕದಲ್ಲೇ ಬೀಸುಗಾಳಿಗೆ ಬಾಗಿ ಬಾಗಿ ಮಾವಿನ ಮರದ ಗೆಲ್ಲೊಂದು ಢಮಾರ್ ಎಂದು ಮುರಿದು ಬಿದ್ದಂತೆ, ಸುರಿದು, ಸುರಿದು, ಕೊನೆಗೊಮ್ಮೆ ಮಳೆ ನಿಂತು ಇಡೀ ಕಾಡಿಗೇ ಕಾಡೇ ಮಹಾಮೌನಕ್ಕೆ ಶರಣಾದಂತೆ, ನಾವೀಗ ಬಿಸಿಲನ್ನೇ ತಿಂದುಕೊಂಡು ಕೂತಿದ್ದರೂ, ಈ ಕಾಡು ನೋಡುತ್ತ ಮಳೆಗಾಲವೇ ಕಣ್ಣ ಬೊಗಸೆಗೆ ಬಂದಂತಾಯಿತು. ಏನೇ ಹೇಳಿ ಬೇಸಿಗೆಯಲ್ಲಿ ಮಳೆ ಕಾಡುತ್ತದೆ, ಮಳೆಗಾಲದಲ್ಲಿ ಚೂರು ಚೂರೇ ಬಿಸಿಲು ಕಾಡುತ್ತದೆ, ಹೀಗೆಲ್ಲಾ ಅನ್ನಿಸುವುದು ನನಗೆ ಮಾತ್ರವಾ? ಅಥವಾ ನಿಮಗೂ ಅನ್ನಿಸುತ್ತದಾ ನಂಗೆ ಗೊತ್ತಿಲ್ಲ.

“ಅಲ್ಲಿ ನೋಡಿ, ಏಷಿಯನ್ ಫೇರಿ ಬ್ಲೂ ಹಕ್ಕಿ” ಎಷ್ಟು ಚೆಂದಾಗಿ ಹೊಳೆಯುತ್ತಿದೆ, ಅದು ಬಿಸಿಲಿಗೆ ಹೊಳೆಯೋದಲ್ಲ, ಅದರ ಬಣ್ಣವೇ ಅಷ್ಟು ಗಾಢ ನೀಲಿ, ಜೋಡಿ ಹಕ್ಕಿಗಳಿವೆ ಅಲ್ಲಿ, ಬಹುಷಃ ಗೂಡು ಕಟ್ಟುವ ಪ್ಲಾನ್ ಹಾಕುತ್ತಿರಬೇಕು” ಎಂದು ಗೆಳೆಯ ಅಮಿತ್, ದೂರದ ಕೊಂಬೆಯೊಂದರಲ್ಲಿ ಕೂತ ನೀಲಿ ಬಣ್ಣದ ಹಣ್ಣದ ಹಕ್ಕಿಗಳನ್ನು ತೋರಿಸಿದ.

“ಎಲ್ಲಿದೆ ನಂಗೆ ಕಾಣ್ತಿಲ್ಲ?” ಅನುಷಾ ತನ್ನ ಪುಟ್ಟ ಕಣ್ಣುಗಳನ್ನು ದೊಡ್ಡದು ಮಾಡಿ ಹಕ್ಕಿ ಹುಡುಕುತ್ತಿದ್ದಳು, ಹಾಗೆ ನೋಡುತ್ತ ಕೊನೆಗೊಮ್ಮೆ “ಹೋ ಹೋ ಸಿಕ್ತು ಸಿಕ್ತು, ಚಂದ ಉಂಟು ಅಲಾ ಹಕ್ಕಿ?, ಅದು ಎಂತ ಮಾಡ್ತದೆ ಕೂತ್ಕೊಂಡು? ಎಂದಾಕೆ ಪ್ರಶ್ನೆ ಕೇಳುವಷ್ಟರಲ್ಲಿ ಅದು ಅಲ್ಲಿಂದ ಬೇರೆ ಮರದತ್ತ ಪರಾರಿಯಾಯ್ತು. ಅಷ್ಟಾಗಿ ಕಾಡು ಸುತ್ತಿ, ಹಕ್ಕಿಗಳನ್ನು ಹತ್ತಿರದಿಂದ ನೋಡಿ ಅಭ್ಯಾಸವಿಲ್ಲದ ಈ ಪುಟ್ಟ ಹುಡುಗಿಗೆ ನಾವು ಹಕ್ಕಿ ತೋರಿಸಿದ್ದು, ಅದರ ಗುಲಕ್ಷಣಗಳನ್ನು ವರ್ಣಿಸಿದ್ದು ಕೇಳಿ ಬೆರಗಾಗಿದ್ದು ಅವಳ ಕಣ್ಣಿನ ಮಿನುಗಿನಲ್ಲಿಯೇ ಗೊತ್ತಾಗುತ್ತಿತ್ತು. ಮಕ್ಕಳಿಗೆ ಪರಿಸರದ ಬಗ್ಗೆ ಕುತೂಹಲ ಮೂಡಿಸುವುದು, ಕಾಡಿನ ಸಹಜ ಕೌತುಕಗಳ ಜೊತೆ ಉಲ್ಲಾಸದಿಂದಿರುವಂತೆ ನೋಡಿಕೊಳ್ಳುವುದು ಇವೆಲ್ಲಾ ನಾವು ಮಾಡಲೇಬೇಕಾದ ಜರೂರು ಕೆಲಸ ಅನ್ನಿಸಿತು.

ಅಷ್ಟೊತ್ತು ಅಲ್ಲೇ ಕೂತಿದ್ದ ಯಶವಂತಜ್ಜ, “ನೋಡಿ ಅಲ್ಲಿ ದೂರದಲ್ಲಿ ಏನೋ ಕಪ್ಪಾಗಿದ್ದು ಕೂತಂತೆ ಕಾಣಿಸುತ್ತಿದೆಯಾ ನಿಮಗೆ?” ಅಂದರು.

ನಾವೂ ಸೋಜಿಗದಿಂದ ಏನಪ್ಪ ಅದು? ಎಂದು ನೋಡುತ್ತಲೇ ಇದ್ದಾಗ “ಅಲ್ಲೊಂದು ದೊಡ್ಡ ಕರಿಬಂಡೆ ಬಿಮ್ಮಗೇ ನಿಂತಿತ್ತು. “ಸರಿಯಾಗಿ ನೋಡಿ, ಅದು ಕರಡಿಯಂತೆಯೇ ಕಾಣಿಸುತ್ತಿದೆ ಅಲ್ವಾ, ಹೊಂಚು ಹಾಕಿ ಕೂತ ಕರಡಿಯಂತೆ” ಎಂದರು ಯಶವಂತಜ್ಜ.

ನಿಜಕ್ಕೂ ಆ ಕಲ್ಲು ಕರಡಿ ಕೂತಂತಯೇ ಕೂತಿತ್ತು. ಕಾಡಿನ ಗಂಧಗಾಳಿ ಇದ್ದವರೂ ಕೂಡ, ಒಮ್ಮೆ ತಬ್ಬಿಬ್ಬಾಗಿ “ಅದು ಕರಡಿಯಾ? ಎಂದು ಪ್ರಶ್ನೆ ಮಾಡುವಂತೆಯೇ ಆ ಕಲ್ಲುಕರಡಿಯ ಕಪ್ಪು ಹೊಳೆಯುತ್ತಿತ್ತು.

“ಕರಡಿ ಎಂದದ್ದೇತಡ, ಅನುಷಾ ಒಮ್ಮೆ ಬೆದರಿದಳು. ಮತ್ತೆ ಕಲ್ಲುಕರಡಿ ಎಂದು ತಿಳಿದದ್ದೇ ಬಾಯ್ತುಂಬಾ ನಗಾಡಿದಳು. ಸಂಜೆಯ ಕೆಂಬಣ್ಣದ ಬಿಸಿಲು ಕಾಡಿನ ತುಂಬಾ ಸುರಿದು ಸುವರ್ಣಾ ನದಿಗೆ ಧುಮುಕುವ ದೇವರ ಗುಂಡಿಯೂ ಕೆಂಪಾಗಿತ್ತು. “ಬಿಸಿಲಿಗೆ ನನ್ನ ಚೆಲುವನ್ನು ನೋಡಿದಿರಿ. ಮಳೆಗಾಲದಲ್ಲಿ ನನ್ನ ಆಳವನ್ನು, ಹಸಿರನ್ನು, ಕಪ್ಪೆಗಳ ಸೊಗಸನ್ನು, ನನ್ನ ಮೈ ಮೇಲೆ ಇಳಿಯುವ ಪಾಚಿಯ ಚಂದವನ್ನು ಅನುಭವಿಸಲು ಈ ಮಳೆಗಾಲಕ್ಕೆ ನೀವು ಬಂದೇ ಬರಬೇಕು” ಎಂದು ದೇವರ ಗುಂಡಿ ಈಗಲೇ ಆಹ್ವಾನ ಕೊಡುವಂತೆ ಧುಮುಕುತ್ತಿತ್ತು.

(ಚಿತ್ರಗಳು: ಪ್ರಸಾದ್ ಶೆಣೈ)

“ಕತ್ತಲಾಗುವ ಮುಂಚೆ ಮನೆ ಸೇರೋಣ, ಅಲ್ಲೊಂದಿಷ್ಟು ಮಾತಾಡ್ತಾ ಕೂರೋಣ” ಎಂದ ಯಶವಂತಜ್ಜ, ಮನೆಯತ್ತ ಪಯಣ ನಡೆಸಿದರು. ಸಂಜೆಯ ಬಿಸಿಲಿಗೆ ಬೆಚ್ಚಗಿದ್ದ ಯಶವಂತಜ್ಜನ ಮನೆ, ಆ ಇರುಳಲ್ಲಿ ಭಾರೀ ತಂಪಗಿತ್ತು. ಒಂದಷ್ಟು ಮಾತು, ಅನುಭವ, ತಮಾಷೆ, ಮೌನದ ನಡುವೆ ಯಶವಂತಜ್ಜನ ಸೊಸೆ ಚಪಾತಿಗೆ ಸಕ್ಕರೆ, ತುಪ್ಪ ಹಾಕಿ ಉಪಹಾರ ತಂದಿಟ್ಟರು, ಚಪಾತಿಗೆ ಸಕ್ಕರೆ, ತುಪ್ಪ ಹಾಕಿ ತಿನ್ನೋದು ಚಿತ್ಪಾವನ ಮನೆಗಳಲ್ಲಿ ಸಾಮಾನ್ಯ ಎಂದು ತಿಳಿದು, ಚಪಾತಿ ಚಪ್ಪರಿಸಿದೆವು. ಕಾಡಿನಷ್ಟೇ ಹಿತವಾಗಿದ್ದ ಅದರ ರುಚಿ ಅನನ್ಯವಾಗಿತ್ತು. ಉಪಾಹಾರ ಮುಗಿಸಿ ಯಶವಂತಜ್ಜನ ಮಗ ರಾತ್ರಿಯ ಕತ್ತಲಲ್ಲೇ ಟಾರ್ಚು ಬೆಳಕಿನಲ್ಲಿ ದಾರಿ ಮಾಡಿ ತೋಟದ ಹಳ್ಳ, ಬಾವಿ ಎಲ್ಲಾ ಸುತ್ತಿಸಿದರು. ಬೆಳಕಿನಲ್ಲಿ ನೋಡುವುದಕ್ಕಿಂತ ಕತ್ತಲಲ್ಲಿ ನೋಡುವ ನೋಟವೇ ಚೆಂದ, ಗಾಢ ಕತ್ತಲಲ್ಲಿ ಮೂಡುವ ಸದ್ದು, ನಮ್ಮ ಮನಸ್ಸನ್ನು ಬಹಳ ದೂರದವರೆಗೂ ಕರೆದುಕೊಂಡು ಹೋಗುತ್ತದೆ. ಈಗ ಕತ್ತಲಲ್ಲಿ ತೋಟ ನೋಡಿದಾಗಲೂ ನಾನು ನೋಡಿದ್ದು ಬರೀ ತೋರಿಸಿದ ಬೆಳಕನ್ನಲ್ಲ, ಅದರಾಚೆಯ ನೋಟಗಳನ್ನೂ ನೋಡಿದ್ದೇನೆ ಅನ್ನಿಸಿಬಿಟ್ಟಿತು.

ಹೊರಗೇ ಕತ್ತಲು ಗಾಢವಾಗುತ್ತಿದ್ದಂತೆಯೇ ನಾವು ಹೊತ್ತಾಯಿತೆಂದು, ಅಷ್ಟೊತ್ತು ಪ್ರೀತಿ ಕೊಟ್ಟ ಮನೆಯವರನ್ನೆಲ್ಲಾ ಬೀಳ್ಕೊಟ್ಟು ಹೊರಟಾಗ, ಪುಟ್ಟಿ ಅನುಷಾಳ ಕಿವಿಯೋಲೆ ಆಕಾಶದಲ್ಲಿ ಮಿನುಗುತ್ತಿದ್ದ ಚುಕ್ಕಿಗಳಂತೆಯೇ ಮಿಂಚುತ್ತಿತ್ತು. ಕಾಡಿನಲ್ಲಿ ಮತ್ತೆ ಬೈಕೇರಿ ಹೊರಟಾಗ ನಾವು ಕತ್ತಲಲ್ಲಿ ಹೋಗುತ್ತಿಲ್ಲ, ಕಾಡಿನ ರಮ್ಯವಾದ ಬೆಳಕಿನಲ್ಲೇ ಹೋಗುತ್ತಿದ್ದೇವೆ, ಅನ್ನೋ ಭಾವವನ್ನು, ನಮ್ಮೊಳಗೂ ಬೆಳಕಿನ ಪುಂಜವನ್ನು, ಹುಟ್ಟಿಸಿಬಿಟ್ಟಿತು ಮಾಳದ ಕತ್ತಲೆಕಾಡು.