ಕೇದಾರ್ ತಾಲ್ ನ ಸುಂದರ ನೋಟಋಷಿ ಮೂಲ ನದಿ ಮೂಲ ಹುಡುಕಬಾರದು ಎಂಬ ಮಾತಿದೆಯಾದರೂ ಗಂಗಾನದಿಯ ಮೂಲ ಸೆಲೆಯರಸಿ ಹಿಮಾಲಯ ಏರಿಳಿವ ಆಕರ್ಷಣೆ ಮನುಷ್ಯನನ್ನು ಸದಾ ಕಾಡುತ್ತಿದೆ. ಗಿರಿಕಂದರಗಳ ಅಲೆದಾಟದ ಆ ಸುಖದಿಂದ ಋಷಿಮುನಿಗಳು, ಸಾಧು ಸಂತರೇ ಮುಕ್ತರಾಗಲಿಲ್ಲ. ಆಧ್ಯಾತ್ಮ ಅನುಭೂತಿಗಾಗಿ, ಸೃಷ್ಠಿ ಸೌಂದರ್ಯದ ಸಾಕ್ಷಾತ್ಕಾರಕ್ಕಾಗಿ ಅಲ್ಲಿನ ಅನಂತ ಮೌನದ ರೋಮಾಂಚನಕ್ಕಾಗಿ ಜೀವದ ಹಂಗು ತೊರೆದು ಜನ ನಿರಂತರ ಹಿಮಾಲಯ ಏರುತ್ತಲೇ ಇರುತ್ತಾರೆ.

ಗಂಗಾನದಿಗೆ ಅನೇಕ ಉಪನದಿಗಳಿವೆ. ಅವುಗಳಲ್ಲಿ ಕೇದಾರ ಗಂಗಾ ಕೂಡ ಒಂದು. ಇದು ಕೇದಾರ್ ತಾಲ್‌ನಲ್ಲಿ ಹುಟ್ಟಿ ಪರ್ವತಗಳ ನಡುವಿನ ಪ್ರಪಾತಗಳಲ್ಲಿ ಬಂಡೆಗಲ್ಲುಗಳ ಮೇಲೆ ಬಿಳಿನೊರೆಯುಕ್ಕಿಸಿ ಹರಿದು ಗಂಗೋತ್ರಿಯಲ್ಲಿ ಗಂಗಾನದಿಯಲ್ಲಿ ಲೀನವಾಗುತ್ತದೆ. ಗಂಗೋತ್ರಿಯಿಂದ ೧೭ ಕಿ.ಮೀ. ದೂರದಲ್ಲಿ ೫೨೦೦ ಮೀಟರ್ ಎತ್ತರದಲ್ಲಿರುವ ಸ್ವರ್ಗ ಸದೃಶ ಕೇದಾರತಾಲ್‌ಗೆ ನಮ್ಮದು ಚಾರಣ.

ಸ್ವರ್ಗದ ಹೆಬ್ಬಾಗಿಲು ಎನಿಸಿಕೊಂಡಿರುವ ಹರಿದ್ವಾರದಿಂದ ಸ್ವಲ್ಪ ಹೋದೊಡನೆಯೇ ಹಿಮಾಲಯಕ್ಕೆ ಪರ್ವತ ಶ್ರೇಣಿಗಳ ಕಡಿದಾದ ಮಾರ್ಗ ತೆರೆದುಕೊಳ್ಳುತ್ತದೆ. ಹೃಷಿಕೇಶ, ಉತ್ತರಕಾಶಿ ಹಾದು ಗಂಗೋತ್ರಿ ತಲುಪುವವರೆಗೂ ಅದೆಷ್ಟೋ ಪರ್ವತಗಳು ಕಂದಕಗಳನ್ನು ಹತ್ತಿಳಿವ ದಾರಿಯಲ್ಲಿ ಕ್ರಮಿಸಬೇಕು. ದಾರಿಗುಂಟ ಕಣಿವೆಯಲ್ಲಿ ಹರಿವ ಗಂಗಾನದಿಯ ಭೋರ್ಗರೆತದ ಅಲೌಕಿಕ ಶಬ್ಧ. ಪರ್ವತಗಳ ಮಗ್ಗುಲಲ್ಲಿ ಸುತ್ತುವ ಕಿರಿದಾದ ದಾರಿ. ಒಂದು ಶಿಖರ ಹತ್ತಿಳಿದು ಇನ್ನೊಂದಕ್ಕೆ ಸಾಗಬೇಕು. ಆಕಾಶಕ್ಕೆ ಮುಖ ಮಾಡಿ ನಿಂತ ಹಿಮಾಲಯದ ಪರ್ವತಗಳು ನಮ್ಮ ಸಹ್ಯಾದ್ರಿ ಪರ್ವತ ಮಾಲೆಯಂತಿರದೇ ಪ್ರತಿ ಪರ್ವತವನ್ನು ಇನ್ನೊಂದು ಪರ್ವತದಿಂದ ನಡುವಿನ ಆಳ ಕಣಿವೆ ಪ್ರತ್ಯೇಕವಾಗಿಟ್ಟಿದೆ. ಈ ಗಿರಿಶಿಖರಗಳು ನಮ್ಮ ಯಕ್ಷಗಾನದ ರಕ್ಕಸ ಪಾತ್ರಗಳು ರಂಗ ಸ್ಥಳದಲ್ಲಿ ಸೊಕ್ಕಿನಿಂದ ಮಲೆತು ನಿಂತಂತೆ ಭಾಸವಾಗುತ್ತದೆ.

ಕೇದಾರ್ ತಾಲ್ ನ ಹಾದಿಯಲ್ಲಿ ಲೇಖಕರುರಸ್ತೆ ಬದಿಗೆ ಪರ್ವತದ ಪಕ್ಕೆಯ ಇಳಿಜಾರಿನಲ್ಲಿ ಒತ್ತಿಕೊಂಡಿರುವ ಮನೆಗಳು ಸಿಕ್ಕರೆ ಅದು ಯಾವುದೋ ಊರೋ ಅಥವಾ ಪಟ್ಟಣವೋ ಆಗಿರುತ್ತದೆ. ಯಾವ ಊರೂ ಒಂದು ಕಿ.ಮೀ. ಉದ್ದ ಮತ್ತು ನೂರನ್ನೂರು ಮೀಟರ್ ಅಗಲಕ್ಕಿಂತ ಹೆಚ್ಚಿರುವುದಿಲ್ಲ. ಗುಡ್ಡ ಕಡಿದು ಮಾಡಿರುವ ಮೇಲಿಂದ ಕೆಳಗೆ ಮೆಟ್ಟಿಲುಗಳ ರೀತಿಯ ಗದ್ದೆಗಳಲ್ಲಿ ಕೂತು ಏನನ್ನೋ ಹುಡುಕುತ್ತಿರುವಂತೆ ಕಾಣುವ ಗಂಡು ಹೆಣ್ಣುಗಳು, ಕಾಲ್ತಪ್ಪಿದರೆ ಕಂದಕಕ್ಕೆ ಮುಟ್ಟುವ ಅಪಾಯವಿದ್ದರೂ ಹಾಳೆಗಳ ಮೇಲೆ ನಿರುಮ್ಮಳವಾಗಿ ಆಡಿಕೊಂಡಿರುವ ಮಕ್ಕಳು. ಹಾಳೆಯಂಚಿನ ಬಿಲಗಳಲ್ಲಿ ಎಲ್ಲಿಂದ ಎಲ್ಲಿಗೋ ಜುಳುಜುಳು ಹರಿಯುತ್ತಿರುವ ನೀರು.

ಇದ್ದಕ್ಕಿಂದ್ದಂತೆ ಬದಲಾಗುವ ಹವಾಮಾನ. ಈ ಕಡೆ ಬಿಸಿಲು ದಾಟಿ ಆ ತಿರುವಿಗೆ ಬಂದರೆ ಮೋಡ ಗಾಳಿ ಮಳೆ. ರಸ್ತೆಗೆ ಅಡ್ಡ ಬಿದ್ದ ದೇವದಾರು ಮರಗಳು. ರಸ್ತೆಗುಂಟ ಬಾಲ ಬೆಳೆಸುವ ವಾಹನಗಳು. ಮರ ಅಡ್ಡ ಬೀಳೋದು ಮಣ್ಕುಸಿತ ಇಲ್ಲೆಲ್ಲ ಸಾಮಾನ್ಯವಂತೆ. ಉತ್ತರ ಕಾಶಿ ದಾಟಿ ಭೈರವಘಾಟ್‌ನಲ್ಲಿ ಬಿಸಿನೀರು ಬುಗ್ಗೆಯಲ್ಲಿ ಮಿಂದು ಸುಂದರ ಹರ್ಷಿಲ್ ಹಾದು ಗಂಗೋತ್ರಿ ತಲುಪುವಾಗ ಕೊರೆವ ಚಳಿ. ಗಂಗೋತ್ರಿಯಲ್ಲಿ ವಾಹನ ರಸ್ತೆ ಕೊನೆಗೊಳ್ಳುತ್ತದೆ.

ಭಗೀರಥ ಗಂಗಾವತರಣಕ್ಕಾಗಿ ತಪಸ್ಸುಗೈದ ಶಿಲೆ ಮೇಲೆ ಅವನ ಶಿಲಾಮೂರ್ತಿ ಸ್ಥಾಪಿಸಿದ್ದಾರೆ. ಸುತ್ತಲೂ ಹಸಿರು ತುಂಬಿರುವ ಮುಗಿಲೆತ್ತರದ ಪರ್ವತಗಳು ದೂರದಲ್ಲಿ ಸಂಜೆಯ ಇಳಿ ಬಿಸಿಲಲ್ಲಿ ಚಿನ್ನದ ವರ್ಣದಲ್ಲಿ ಕಂಗೊಳಿಸುವ ಹಿಮಾಚ್ಛಾದಿತ ಶಿಖರ. ನಡುವೆ ಗಂಗಾಮಾತೆಗೆ ಅಮೃತಶಿಲೆಯ ಪುಟ್ಟ ಮಂದಿರ. ಬದಿಯಲ್ಲಿ ಹರಿದ ಗಂಗೆಯಲ್ಲಿ ಆ ಚಳಿಯಲ್ಲೂ ಮುಳುಗಿ ಸಂಜೆ ಆರತಿ ದರ್ಶನ ಪಡೆದು ಪಾವನರಾಗುವ ಭಕ್ತರು. ಆ ಆಳ ಕಣಿವೆಯಲ್ಲಿ ಕತ್ತಲು ಕವಿಯುವಾಗ ಬೆಳಗುವ ಆರತಿ ಹೆಪ್ಪುಗಟ್ಟಿದ ಮೌನದಲ್ಲಿ ಮೊಳಗುವ ಗಂಟೆಯ ಅಲೌಕಿಕ ಲೋಕ.

ಗಂಗೋತ್ರಿ ಸಮುದ್ರ ಮಟ್ಟದಿಂದ ೯೨೦೦ ಅಡಿ ಎತ್ತರಲ್ಲಿದೆ. ಅಲ್ಲಿಂದ ಕೇದಾರ್‌ತಾಲ್ ೧೭ ಕಿ.ಮೀ. ದೂರವಿದ್ದು ೧೭೦೬೦ ಅಡಿ ಎತ್ತರದಲ್ಲಿದೆ. ಅಲ್ಲಿಗೆ ನಮ್ಮ ನಾಲ್ಕು ದಿನಗಳ ಚಾರಣ. ಉತ್ತರಕಾಶಿಯಿಂದಲೇ ನಮ್ಮ ಜೊತೆಗೆ ಬಂದಿದ್ದ ಗೈಡ್ ಹರೀಶ ರಾಣಾ ನಮ್ಮನ್ನು ಮುನ್ನಡೆಸುತ್ತಿದ್ದ. ಜೊತೆಯಲ್ಲಿ ಟೆಂಟ್ ಸಾಮಗ್ರಿ ಊಟೋಪಚಾರ ಸಾಮಗ್ರಿ ಹೊತ್ತೊಯ್ಯಲು ಮೂವರು ಪೋರ್ಟರ್‌ಗಳು. ಮುಗಿಲೆತ್ತರಕ್ಕೆ ನೇರ ನಿಂತಿರುವ ಖೈರ್ ಮತ್ತು ದೇವದಾರ್ ಗಿಡಗಳ ನಡುವಿನ ಕಿರು ಕಾಲ್ದಾರಿಯಲ್ಲಿ ಏರಬೇಕು. ಅವೆರಡೂ ವೃಕ್ಷಗಳು ಒಂದೇ ರೀತಿ ಕಾಣುತ್ತಾದರೂ ಸೂಜಿ ಮೊನೆಯಂತಹ ಎಲೆಗಳಲ್ಲಿ ವ್ಯತ್ಯಾಸವಿದೆ. ಮುಂದೆ ಸಾಗಿದಂತೆ ಖೈರ್ ಮತ್ತು ದೇವದಾರ್ ವೃಕ್ಷಗಳು ವಿರಳವಾಗಿ ಭೋಜ ವೃಕ್ಷದ ಕಾಡು ಸ್ವಾಗತಿಸುತ್ತದೆ. ಆ ವೃಕ್ಷದ ಕಾಂಡದ ಸಿಪ್ಪೆ ಸುಲಿದು ಭೋಜ ಪತ್ರ ಮಾಡಿ ಬರೆಯಲು ಬಳಸುತ್ತಿದ್ದರಂತೆ.

ನೇರ ಪರ್ವತಗಳ ಏರಬೇಕು. ಕೆಳಗೆ ಸಾವಿರಾರು ಅಡಿಯಲ್ಲಿ ಭಯ ಹುಟ್ಟಿಸುವ ಕಣಿವೆ. ಹೆಜ್ಜೆ ಜಾರಿದರೆ ನೇರ ಪಾತಾಳ ಲೋಕಕ್ಕೆ. ಆಮ್ಲಜನಕ ಕಡಿಮೆಯಾಗುತ್ತ ಹೋಗುವುದರಿಂದ ಒಂದಿಷ್ಟು ನಡೆಯುವುದು ನಿಲ್ಲುವುದು ಮಾಡಬೇಕು. ಸಡಿಲು ಮಣ್ಣಿನ ಮೇಲಿಂದ ಕಲ್ಲು ಮಣ್ಣು ಉದುರುವ ಕೆಲವಡೆಯಲ್ಲಿ ಕೈ ಕಾಲು ನಡುಕ ಶುರುವಾಗುತ್ತದೆ. ನಾವೇನು ತರಬೇತಿ ಪಡೆದ ಚಾರಣಿಗರಾಗಿರಲಿಲ್ಲ. ಆರಂಭದ ಉತ್ಸಾಹ ಕ್ರಮೇಣ ಕರಗಿ ಭಯ ಆವರಿಸಿಕೊಂಡು ಯಾರಲ್ಲೂ ಮಾತೆ ಇರಲಿಲ್ಲ.

ಕೇದಾರ್ ತಾಲ್ ನ ಹಾದಿಯಲ್ಲಿ ಲೇಖಕರು‘ಇದು ನಮ್ಮ ದಾರಿಯ ಕೊನೆಯ ವೃಕ್ಷ’ ಅಂದ ಹರೀಶ ರಾಣಾ. ಅಲ್ಲಿಂದ ಮುಂದೆ ಕಾಣ ಸಿಗುವುದು ಕೆಂಪು ಹೂವಿನ ಯಾವುದೋ ಕಿರು ಸಸ್ಯ ಮತ್ತು ಒಂದಿಷ್ಟು ಗರಿಕೆ ತರದ ಹುಲ್ಲು. ನಮ್ಮ ಚಾರಣದ ಮೊದಲ ಹಂತವಾದ ಭೋಜ್ ಖರ್ಕ್ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಹವಾಮಾನದಲ್ಲೂ ಬದಲಾವಣೆ ಉಂಟಾಯಿತು. ಬೆಳ್ಳಯಂತೆ ಹೊಳೆಯುತ್ತಿದ್ದ ಮೋಡಗಳು ಕಪ್ಪಾಗಿ ಗಾಳಿ ಮಳೆ ಪ್ರಾರಂಭವಾಗೇ ಬಿಡ್ತು. ಆ ಗಾಳಿಯಲ್ಲೇ ಟೆಂಟ್ ಬಿಗಿದು ನಡಗುವ ಚಳಿಯಲ್ಲಿ ಟೆಂಟ್ ಒಳಗೆ ಸ್ಲೀಪಿಂಗ್ ಬ್ಯಾಗ್‌ನಲ್ಲಿ ಮುದುಡಿಕೊಂಡೆವು. ಟೆಂಟ್‌ ಅನ್ನು ಕಿತ್ತೆಸೆಯುವಂತಹ ಕುಳಿರ್ಗಾಳಿ. ನಿರ್ಜನ ಪ್ರದೇಶ. ಸುರಿಯುವ ಮಳೆ. ಮೈ ನಡುಕ ನಾವು ದುಸ್ಸಾಹಸಕ್ಕೆ ಕೈ ಹಾಕಿದೆವೆ? ಓ ದೇವರೇ ಹೇಗಾದರೂ ರಾತ್ರಿ ಬೆಳಗಾಗಿಸಪ್ಪ! ಬೆಳಗೆದ್ದು ವಾಪಸಾಗುವುದೇ ಸರಿ!! ನಮ್ಮ ಮುಖದಲ್ಲಿ ತುಂಬಿದ ದುಗುಡ ಕಂಡು ರಾಣಾ ನಮ್ಮಲ್ಲಿ ಧೈರ್ಯ ತುಂಬುವ ಏನೇನೋ ಮಾತಾಡುತ್ತಿದ್ದ.

೨೪-೨೫ ವಯಸ್ಸಿನ ತರುಣ ಹರೀಶ ರಾಣಾ ಹರ್ಷೀಲ್ ಎಂಬ ಸುಂದರ ಊರಿನವನು. ಈತ ಸಣ್ಣವನಿರುವಾಗಲೇ ತಂದೆ ತಾಯಿ ತೀರಿಹೋದರು. ಅಣ್ಣ – ಅತ್ತಿಗೆಯರ ಆಶ್ರಯದಲ್ಲಿ ಮೆಟ್ರಿಕ್ ವರೆಗೆ ಕಲಿತ. ಮುಂದೆ ಓದಲಾಗದೇ ಅಲ್ಲಿ ಇಲ್ಲಿ ಪೋರ್ಟರ್ ಕೆಲಸಕ್ಕೆ ಸೇರಿಕೊಂಡ. ಈ ನಡುವೆ ತನ್ನದೇ ಊರಿನ ಚಂದದ ಹುಡುಗಿ ಜೊತೆ ಪ್ರೇಮ ಉಂಟಾಗಿ ಹುಡುಗಿ ಮನೆಯವರ ವಿರೋಧದ ನಡುವೆ ಅವಳ ಕೈ ಹಿಡುದು ಸಂಸಾರ ಹೂಡಿದ. ಎರಡು ವರ್ಷದ ಮಗನಿದ್ದಾನೆ. ಹತ್ತಾರು ಸೇಬು ಗಿಡ ನೆಟ್ಟು ಅವನ್ನೂ ಮಕ್ಕಳಂತೆ ನೋಡಿಕೊಳ್ಳುತ್ತಾನೆ. ಸೇಬು ವ್ಯಾಪಾರಕ್ಕಿಳಿವ ಕನಸು ತುಂಬಿಕೊಂಡಿದ್ದಾನೆ. ಫಡವಾಲೀ ಪ್ರೇಮ ಗೀತೆಗಳನ್ನು ಹಾಡಿ ನಮ್ಮ ಆತಂಕ ಕಡಿಮೆ ಮಾಡಲು ಪ್ರಯತ್ನಿಸಿದ. ಕಳೆದ ಚಳಿಗಾಲದಲ್ಲಿ ತರುಣಿಯರೂ ಇದ್ದ ತಂಡದ ಜೊತೆ ಟ್ರೆಕ್ಕಿಂಗ್‌ಗೆ ಬಂದಾಗ ಆಕಸ್ಮಾತ್ ಭಾರಿ ಹಿಮಪಾತವಾಗಿ ಮುಂದಕ್ಕೆ ಹೋಗಲಾಗದೇ ತನ್ನ ಜೊತೆಯುಳಿದ ತರುಣಿಯೊಡನೆ ರಾತ್ರಿಯಿಡಿ ಕಳೆದ ಪ್ರಸಂಗ ಹೇಳಿ ನಮ್ಮನ್ನು ಬೆಚ್ಚಗಾಗಿಸಿದ. ಚಳಿಗೆ ವೈನ್ ಕುಡಿದು ಅಮಲಿನಲ್ಲಿ ತೂರಾಡುತ್ತಿದ್ದ ಅವಳನ್ನು ಮಿನುಗುವ ನಕ್ಷತ್ರಗಳ ಬೆಳಕಲ್ಲೇ ಬೆನ್ನ ಮೇಲೆ ಹೊತ್ತು ಭರ್ಫ್ ತುಂಬಿದ ದಾರಿಯಲ್ಲಿ ನಡೆದು ಸುರಕ್ಷಿತ ದಾರಿ ಮುಟ್ಟಿಸಿದ್ದ ಕಥೆ ಕೇಳಿ ನಮ್ಮ ಕಣ್ಣಿಗೆ ಹೀರೋನಂತೆ ಕಂಡ.

ಕೇದಾರ್ ತಾಲ್ ಪರ್ವತದ ಒಂದು ನೋಟಕೊರೆವ ಚಳಿ, ಮನದಲ್ಲಿಯ ಆತಂಕ ನಿದ್ದೆ ಬರಲು ಬಿಡಲಿಲ್ಲ, ಹರೀಶನೇ ನಮ್ಮನ್ನೂ ಹೇಗೋ ಆ ರಾತ್ರಿ ಪಾರುಮಾಡಿದ. ಮುಂಜಾನೆ ಸೂರ್ಯ ಮೂಡುವ ಹೊತ್ತಿಗೆ ಹೊರ ಬಂದರೆ ಎಲ್ಲವೂ ಶುಭ್ರ, ಆಕಾಶ ನೀಲಿಗಟ್ಟಿದೆ. ಸೂರ್ಯನ ಎಳೆಯ ಕಿರಣಗಳಿಗೆ ಗಿರಿಶಿಖರಗಳು ಹಿತವಾಗಿ ಮೈಯೊಡ್ಡಿ ನಿಂತಿವೆ. ಅವೇ ಕಿರಣಗಳು ನಮ್ಮ ಮೈಯನ್ನು ಬೆಚ್ಚಗಾಗಿಸಿ ಚೈತನ್ಯ ತುಂಬುತ್ತಿವೆ. ಬಿಸಿಲೇರಿದಂತೆ ರಾತ್ರಿ ಹೆಪ್ಪುಗಟ್ಟಿದ ಪಕ್ಕದ ಝರಿ ಹನಿಗೂಡಿ ಜುಳುಜುಳು ಹರಿಯುವ ನಾದವು ಅಖಂಡ ಮೌನವನ್ನು ಮೀಟುತ್ತಿದೆ. ನಮಗರಿವಿಲ್ಲದೇ ನಾವು ಮುಂದಿನ ಚಾರಣಕ್ಕೆ ತಯಾರಾಗಿ ನಿಂತಿದೆವು!

ನಮ್ಮ ಮುಂದಿನ ಹಂತದ ಚಾರಣ ಕೇದರ್ ಖರ್ಕ್‌ವರೆಗೆ, ಸುಮಾರು ೬ ಕಿ.ಮೀ. ದೂರ. ಮೊದಲ ದಿನದ ಅನುಭವ ಎರಡನೇ ದಿನದ ಚಾರಣವನ್ನು ಕೊಂಚ ಹಗುರಗೊಳಿಸಿತ್ತು. ದಾರಿ ನಡುವೆ ಕಂಡ ಕಾಡು ಕುರಿಗಳ ಹಿಂಡು ಪರ್ವತದ ಓರೆಯಲ್ಲಿ ಸಮತೋಲನ ಕಾದುಕೊಂಡು ಸುರಳಿತ ಮೇಯುತ್ತಿದ್ದ ಅವನ್ನು ನೋಡುವದೇ ಚೆಂದ. ಅಲ್ಲಲ್ಲಿ ನಮ್ಮ ಕಡೆಯ ಮಂಡ ಕಾಗೆಗಳಂತೆ ಕಾಣುತ್ತಿದ್ದ ಮೈನಾ ಹಕ್ಕಿಗಳು, ಕಡು ಕಪ್ಪು ಮೈ ಹಳದಿ ಚುಂಚು. ಪರ್ವತಗಳೆರಡರ ನಡುವೆ ಹಾಸಿರುವ ಗ್ಲೇಸಿಯರ್ ಮೇಲೆ ನಡೆದಾಗ ಮಕ್ಕಳಂತಾದೆವು. ಕೇದಾರ್ ಖರ್ಕ್‌ ಅನ್ನು ಮಧ್ಯಾಹ್ನದ ಹೊತ್ತಿಗೆ ತಲುಪಿ ಟೆಂಟ್ ಹುಗಿದು ಒಳಸೇರುತ್ತಿದ್ದಂತೆಯೇ ಮೋಡ ಕವಿದು ತಂಪು ಬೀಸತೊಡಗಿತು. ಸಂಜೆ ಹೊತ್ತಿಗೆ ಹಿಮಪಾತ ಶುರುವಾಯ್ತು. ಚಹ ಮಾಡಲು ನೀರಿಟ್ಟರೆ ಅದು ಬಿಸಿ ಮಾಡಲು ಅದೆಷ್ಟೋ ಸಮಯ ಹಿಡಿಯುತ್ತಿತ್ತು. ರಾತ್ರಿ ಹೊತ್ತಿಗೆ ಹೊರಗೆ ಇಣುಕಿದಾಗ ಶುಭ್ರ ಆಕಾಶ ಹಣತೆ ಹಚ್ಚಿಟ್ಟಂತೆ ನಕ್ಷತ್ರಗಳು, ಕೈಗೆ ಸಿಗುವಷ್ಟು ಎತ್ತರದಲ್ಲಿದ್ದಂತೆ ಕಂಡವು ಸುತ್ತಲಿನ ಪರ್ವತಗಳು ಕಂದಕಗಳು ಹಿಮಚ್ಛಾದಿತ ಶಿಖರಗಳು ಆ ಬೆಳಕಲಿ, ಆ ಅನಂತೆಯಲ್ಲಿ, ತಮ್ಮ ಅಸ್ತಿತ್ವವನ್ನು ಸಾರುತ್ತಿದ್ದವು. ಮೂರ್ತ ಮತ್ತು ಅಮೂರ್ತ ಸಂಗಮದಲ್ಲಿ ಮೌನ ಉಯ್ಯಾಲೆಯಾಡುತ್ತಿತ್ತು.

ಸ್ವರ್ಗ ಸದೃಶ ಕೇದಾರ್ ತಾಲ್ ನಲ್ಲಿ ಲೇಖಕರುಮುಂಜಾನೆ ಮೊದಲೇ ತಯಾರಾಗಿ ನಿಂತಿವು ಕೊನೆಯ ಹಂತದ ಚಾರಣಕ್ಕೆ. ಕೇದಾರಖರ್ಕನಿಂದ ಕೇದಾರತಾಲ್ ಗೆ ಸುಮಾರು ೬ ಕಿ. ಮೀ. ಕೇದಾರತಾಲ್ ತಲುಪಿ ಅದೇ ದಿನ ಅಲ್ಲಿಗೇ ತಿರುಗಿ ಬರಬೇಕಾದ್ದರಿಂದ ಟೆಂಟ್ ಅಲ್ಲೇ ಬಿಟ್ಟು ನಡೆದೆವು. ಆಮ್ಲಜನಕದ ಕೊರತೆಯಿಂದಾಗಿ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಬಂಡೆಗಲ್ಲುಗಳು, ಗ್ಲೇಸಿಯರಗಳು ಬರ್ಫ್ ಹಾಸಿನಲ್ಲೆಲ್ಲ ನಡೆಯುತ್ತ ಮಧ್ಯಾಹ್ನದ ಹೊತ್ತಿಗೆ ಕೇದಾರ್ ತಾಲ್ ಸಮೀಪಿಸಿದೆವು. ಇನ್ನೇನು ಇದೊಂದೇ ಏರು ಹತ್ತಿಳಿದರಾಯಿತು ಅಂದ ಹರೀಶ ರಾಣಾ. ಆ ಪರ್ವತದ ತುದಿ ತಲುಪಿದಾಗ ಕಂಡ ದೃಶ್ಯಕ್ಕೆ ಬೆರಗಾಗಿ ನಿಂತೆವು. ವಿಸ್ತಾರವಾದ ಸರೋವರ. ಮೂರು ದಿಕ್ಕಿಗೆ ಗಗನ ಮುಖಗಳಾಗಿರುವ ಬಿಸಿಲಿಗೆ ಫಳಗುಟ್ಟುತ್ತಿರುವ ಹಿಮಶಿಖರಗಳು. ನೀಲಿ ನೀರಿನ ಸರೋವರವನ್ನು ತಮ್ಮ ಬಾಹುಗಳಲ್ಲಿ ಎತ್ತಿ ಹಿಡಿದಿರುವಂತೆ ಕಾಣುತ್ತಿದೆ. ಸ್ತಬ್ಧ ಸರೋವರದಲ್ಲಿ ಮೂಡಿರುವ ಶಿಖರಗಳ ಪ್ರತಿಬಿಂಬ. ಅದು ಥಲೆಸಾಗರ, ಇದು ಭಿರ್ಗು ಪಂಥ್, ಈಚೆ ಮಂದಾಕಿನಿ ಪರ್ವತ ಶೃಂಖಲೆಗಳು ಎಂದು ಹರೀಶ್ ಅವನ್ನು ನಮಗೆ ಪರಿಚಯಿಸಿದ. ೧೭,೦೬೦ ಅಡಿ ಎತ್ತರದಲ್ಲಿ ಹಿಮಾಚ್ಛಾದಿತ ಶಿಖರಗಳ ಮಡಿಲಲ್ಲಿರುವ ಈ ಸರೋವರ ದೇವಲೋಕದ ಕನ್ನಡಿಯೇ? ಆ ಹೆಪ್ಪುಗಟ್ಟಿದ ಮೌನಕ್ಕೆ ಅದೆಲ್ಲಿ ಧಕ್ಕೆಯಾದೀತೋ ಎಂಬ ಭಯದಲ್ಲಿ ನಾವು ಮಾತು ಮರೆತು ನಿಂತೆವು.

[ ಚಿತ್ರಗಳು-ಲೇಖಕರು ಮತ್ತು ಸಂಗ್ರಹದಿಂದ]