ಆಡಳಿತ ನಿರ್ವಹಣೆಯಲ್ಲಿ ತೊಡಗಿದ್ದ ಪುರುಷರು ಮನಸ್ಸು ಇಲ್ಲದ ಮಾರ್ಗದಂತೆ ದೇಸಾಯ್ತಿಯ ಕಾರ್ಯ ನಿರ್ವಹಿಸತೊಡಗಿದರು. 25 ಗ್ರಾಮಗಳ ಕಂದಾಯ ವಸೂಲಿ ಮಾಡುವಲ್ಲಿ ಸಮಸ್ಯೆಯಾಯಿತು. ಈ ಗ್ರಾಮಗಳಲ್ಲಿನ ದೇಶಗತಿಯ ವತನಿ ಭೂಮಿಯೆ 16 ಸಾವಿರ ಎಕರೆಗಳಷ್ಟಿತ್ತು! ಉತ್ತರಾಧಿಕಾರದ ಬಯಕೆಯಿಂದಾಗಿ ದಾಯಾದಿಗಳು ಕೂಡ ಅತೃಪ್ತರಾಗಿದ್ದರು. ಆದರೆ ಕಾಶೀಬಾಯಿ ಎದೆಗುಂದದೆ ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತದಲ್ಲಿ ಯಶಸ್ಸು ಸಾಧಿಸಿದರು. ಪುರುಷಪ್ರಧಾನ ವ್ಯವಸ್ಥೆಯ ಎಲ್ಲ ರೀತಿಯ ಅಡತಡೆಗಳನ್ನು ಎದುರಿಸುತ್ತ ಗ್ರಾಮೀಣ ಮಹಿಳೆ ಕೂಡ ದೇಸಗತಿಯ ವ್ಯವಹಾರವನ್ನು ಅಚ್ಚುಕಟ್ಟಾಗಿ ನಡೆಸಬಲ್ಲಳು ಎಂಬುದನ್ನು ತೋರಿಸಿಕೊಟ್ಟ ಈ ವೀರ ಮಹಿಳೆ “ಜೈನಾಪುರ ದೇಸಾಯ್ತಿ” ಎಂದು ಪ್ರಸಿದ್ಧರಾದರು.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂವತ್ತನೆಯ ಕಂತು

ವಿಜಾಪುರದಲ್ಲಿ ಗಾಂಧಿ ಚೌಕನ್ನು ಬಲಗಡೆ ಮಾಡಿಕೊಂಡು ಉತ್ತರಕ್ಕೆ ಸ್ವಲ್ಪ ದೂರ ಸಾಗಿದರೆ ಎಡಗಡೆ ದೊಡ್ಡದಾದ ರೋಡಾಸಿಂಗ್ ಹೋಟೆಲ್ ಕಾಣುತ್ತಿತ್ತು. ಅಲ್ಲಿನ ತಿಂಡಿ ತಿನಿಸುಗಳಿಗೆ ಕೈಗೆಟಕುವ ಬೆಲೆ ಇದ್ದ ಕಾರಣ ಅದು ಬಡವರಿಗೆ ಮತ್ತು ಕೆಳಮಧ್ಯಮ ವರ್ಗದವರಿಗೆ ಆಕರ್ಷಕವಾಗಿತ್ತು. ಅದರೊಳಗಿನ ಕುರ್ಚಿ, ಟೇಬಲ್, ಗಲ್ಲೆ ಮುಂತಾದವು ತಮ್ಮ ಗತವೈಭವವನ್ನು ಸಾರುತ್ತಿದ್ದವು. ಗಲ್ಲೆ ಮೇಲೆ ಭಾರಿ ದಪ್ಪನೆಯ ಹಿರಿಯ ವ್ಯಕ್ತಿ ರೋಡಾಸಿಂಗ್ ಕುಳಿತಿರುತ್ತಿದ್ದರು. ಅವರು ಪುಟ್ಟದಾದ ಬೆಳ್ಳನೆಯ ಮಾನವ ಬೆಟ್ಟದ ಹಾಗೆ ಕಾಣುತ್ತಿದ್ದರು.

ಅಲ್ಲಿನ ದೊಡ್ಡ ಶೋಕೇಸ್‌ನಲ್ಲಿ ಚಕ್ಕುಲಿ, ಶಂಕರಪಾಳೆ, ಸೇವು, ಚೂಡಾ, ಭಜಿ, ಮಿರ್ಚಿಭಜಿ, ಕಾಂದಾಭಜಿ ಮುಂತಾದ ತಿಂಡಿ ತಿನಿಸುಗಳನ್ನು ಇಟ್ಟಿರುತ್ತಿದ್ದರು. ಇನ್ನೊಂದು ಭಾಗದಲ್ಲಿ ಬಾಲುಶಾ, ಜಿಲೇಬಿ, ಜಾಂಗೀರ್, ಗುಲಾಬ ಜಾಮೂನ, ಮೈಸೂರು ಪಾಕ್, ಬೂಂದೆದುಂಡಿ, ಬೇಸನ್ ಉಂಡಿ ಮುಂತಾದ ಸ್ಟೀಟ್ಸ್ ಇರುತ್ತಿದ್ದವು. ನಾವು ಶಾಲಾ ಮಕ್ಕಳು ಸ್ವೀಟ್ ತಿನ್ನುವಷ್ಟು ಆರ್ಥಿಕ ಸಾಮರ್ಥ್ಯ ಹೊಂದಿರಲಿಲ್ಲ. ಆದರೆ ನಾಲ್ಕು ಜನ ಸೇರಿ ಚಿಲ್ಲರೆ ಕೂಡಿಸಿ, ಒಂದು ‘ಸಂಗೀತ’ ತೆಗೆದುಕೊಂಡು ಎಲ್ಲರೂ ಕೂಡಿ ತಿನ್ನುವ ಸಾಹಸ ಮಾಡುತ್ತಿದ್ದೆವು. ಹೀಗೆ ಹೋಟೆಲ್‌ಗೆ ಹೋಗುವುದನ್ನು ಮನೆಯವರು ಅಥವಾ ನಮ್ಮ ಗಲ್ಲಿಯವರು ನೋಡಿದರೆ ಏನು ಪರಿಸ್ಥಿತಿ ಎಂಬ ಭಯದಿಂದಲೇ ಹೋಟೆಲ್ ಪ್ರವೇಶಿಸುತ್ತಿದ್ದೆವು.

ಸಂಗೀತ ತಿನ್ನುವುದು ನಮ್ಮೂರಲ್ಲಿ ಮಾತ್ರ. ಬೇರೆಕಡೆ ಈ ಸಂಗೀತ ತಿನ್ನುವುದನ್ನು ನಾನು ನೋಡಲಿಲ್ಲ. ಶೋಕೇಸ್‌ನಲ್ಲಿನ ಸಿಹಿ ಪದಾರ್ಥಗಳನ್ನು ಬಿಟ್ಟು, ಸ್ವಲ್ಪ ಸಿಹಿಯಾಗಿರುವ ಶಂಕರಪಾಳಿ ಜೊತೆ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಚೂಡಾ ಮೇಲೆ ಹಾಕಿ ಕೊಡುತ್ತಿದ್ದರು. ಈ ರಾಶಿ ರದ್ದಿ ಪೇಪರ್ ಮೇಲೆ ಇರುತ್ತಿತ್ತು. ಅವುಗಳ ಕೂಡ ಹಸಿ ಮೆಣಸಿನಕಾಯಿ ಮತ್ತು ಉಳ್ಳಾಗಡ್ಡಿ ಕೂಡ ಇಡುತ್ತಿದ್ದರು. ಇವೆಲ್ಲ ಸೇರಿದ್ದಕ್ಕೆ ‘ಸಂಗೀತ’ ಎಂದು ಹೆಸರು ಬಿದ್ದಿತ್ತು.

ಈ ಸಂಗೀತ ನಾಲ್ಕು ಬಾಲಕರಿಗೆ ಸಾಕಾಗುವಷ್ಟಿರುತ್ತಿತ್ತು. ನಾವು ನಾಲ್ವರು ಕೂಡಿಸಿದ ಹಣದಲ್ಲಿ ಒಂದು ಸಂಗೀತ ಕೊಳ್ಳಲು ಮಾತ್ರ ಸಾಧ್ಯವಾಗುತ್ತಿತ್ತು. ಚಹಾ ಕುಡಿಯುವಷ್ಟು ಹಣ ಕೂಡಿಸಲಿಕ್ಕಾಗುತ್ತಿರಲಿಲ್ಲ. ಚೆನ್ನಾಗಿ ನೀರು ಕುಡಿದು ತೃಪ್ತಿಯಿಂದ ಆ ಕಡೆ ಈ ಕಡೆ ನೋಡುತ್ತ ಮನೆಯವರು, ಸಂಬಂಧಿಕರು ಮತ್ತು ಗಲ್ಲಿಯವರು ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮೆಲ್ಲನೆ ಹೋಟೆಲ್‌ನಿಂದ ಹೊರಬೀಳುತ್ತಿದ್ದೆವು.

ಹೋಟೆಲ್ ಹೊರಗಡೆ ರಸ್ತೆಯ ಮೇಲೆ ಕೆಲ ಹಳ್ಳಿಗರು ಬೆಳಿಗ್ಗೆ ಖೋವಾ ಮಾರಲು ಕೂಡುತ್ತಿದ್ದರು. ಗಿರಾಕಿಗಳಿಗೆ ಖೋವಾ ತೂಗಿ ಕೊಡುತ್ತಿದ್ದರು. ಇದೆಲ್ಲ ಒಂದು ಗಂಟೆಯ ವ್ಯಾಪಾರ. ಅವರಲ್ಲೊಬ್ಬ ತರುಣ ರೈತ ಎಚ್.ಎಂ.ಟಿ. ವಾಚ್ ಕಟ್ಟಿಕೊಂಡು ಕೂಡುತ್ತಿದ್ದ. ಆ ಕಾಲದಲ್ಲಿ ಕೈಯಲ್ಲಿ ವಾಚ್, ಮನೆಯಲ್ಲಿ ರೇಡಿಯೊ, ಉದ್ದನೆಯ ಛತ್ರಿ, ಗಾಗಲ್ ಮುಂತಾದವು ಐಷಾರಾಮಿ ವಸ್ತುಗಳಾಗಿದ್ದವು. ಕುಕ್ಕರಗಾಲಿನಲ್ಲಿ ಕುಳಿತಿರುತ್ತಿದ್ದ ಆ ಯುವ ರೈತ, ಹಾದಿಹೋಕರು ಮತ್ತು ಗಿರಾಕಿಗಳು ವಾಚ್ ನೋಡುವ ರೀತಿಯಲ್ಲಿ ಮೊಣಕಾಲ ಮೇಲೆ ಕೈ ಇಟ್ಟುಕೊಂಡಿರುತ್ತಿದ್ದ.

`ಕೆಲ ವರ್ಷಗಳ ನಂತರ ಆರ್ಥಿಕ ಅಡಚಣೆಯ ಕಾರಣದಿಂದ ರೋಡಾಸಿಂಗ್ ಆ ದೊಡ್ಡದಾದ ಹೋಟೆಲ್ ಮಾರುವ ಪ್ರಸಂಗ ಬಂದಿತು. ಆಗ ಅವರ ಒಬ್ಬ ಮಗ ತಳ್ಳುವ ಗಾಡಿಯಲ್ಲಿ ಚಹಾ ಮಾರತೊಡಗಿದ. ಆತ ಸುಂದರ ಪುರುಷನಾಗಿದ್ದ. ಅವನ ಹೆಂಡತಿ ಇನ್ನೂ ಸುಂದರವಾಗಿದ್ದಳು. ಅವರಿಬ್ಬರೂ ಅನ್ಯೋನ್ಯವಾಗಿದ್ದರು. ಆತ ಲವಲವಿಕೆಯಿಂದ ಚಹಾ ಮಾರುವುದನ್ನು ನೋಡಿದಾಗ ನನಗೆ ಅವನ ಬಗ್ಗೆ ಖುಷಿ ಎನಿಸುತ್ತಿತ್ತು. ಅಷ್ಟು ದೊಡ್ಡ ಅಂಗಡಿಯನ್ನು ಕಳೆದುಕೊಂಡ ದುಃಖ ಆತನ ಮುಖದಲ್ಲಿರಲಿಲ್ಲ. ಆತ ಎಷ್ಟು ಚೆನ್ನಾಗಿ ಚಹಾ ಮಾಡುತ್ತಿದ್ದನೆಂದರೆ, ಅಕ್ಕ ಪಕ್ಕದ ಹೋಟೆಲ್‌ಗಳಲ್ಲಿ ತಿಂಡಿ ತಿಂದನಂತರ ಈತನ ಬಳಿ ಬಂದು ಚಹಾ ಕುಡಿಯುವವರೂ ಇದ್ದರು. 10 ಪೈಸೆಗೆ ಟಿ ಸಿಕ್ಕರೆ, ನಾಲ್ಕಾಣೆಗೆ ಬೈಟು ಕೆ.ಟಿ. (ಸ್ಪೇಷಲ್ ಟಿ) ಸಿಗುತ್ತಿತ್ತು. (ನಾಯಿಟ್ಸ್ ಅಂದರೆ ಕುಲೀನರ ಟಿ ಎನ್ನುವುದರಿಂದ ಕೆ.ಟಿ. ಬಂದಿರಬಹುದು.)

ರೋಡಾಸಿಂಗ್ ಹೋಟೆಲ್‌ನಿಂದ ತ್ರಿಪುರಸುಂದರಿ ಟಾಕೀಜ್ ಕಡೆ ಹೋಗುವಾಗ ಜೈನಾಪುರ ದೇಸಾಯರ ವಾಡೆ ಕಾಣುತ್ತಿತ್ತು. ವಾಡೆಯಲ್ಲಿ ಹಳೆಯದಾದ ಕಾರೊಂದು ನಿಂತ ಜಾಗದಲ್ಲೇ ನಿಂತಿತ್ತು. ಆ ಕಡೆಯಿಂದ ಹೋಗುವಾಗಲೆಲ್ಲ ಆ ಕಾರನ್ನು ನೋಡುತ್ತಿದ್ದೆ. ಆ ಕಾರಿನ ಹಿಂದೆ ರೋಮಾಂಚನಕಾರಿಯಾದ ಇತಿಹಾಸವಿದ್ದುದು ಬಹಳ ವರ್ಷಗಳ ನಂತರ ತಿಳಿಯಿತು.

ವಿಜಾಪುರ ದೇಸಗತಿಗಳಲ್ಲಿ ಈಗಿನ ಬಬಲೇಶ್ವರ ತಾಲ್ಲೂಕಿನ ಜೈನಾಪುರ ದೇಸಗತಿ ಕೂಡ ಪ್ರಸಿದ್ಧವಾಗಿತ್ತು. ಕೃಷ್ಣಾ ನದಿ ದಂಡೆಯಲ್ಲಿರುವ ಜೈನಾಪುರದ ಈ ದೇಸಗತಿ 25 ಇನಾಂ ಗ್ರಾಮಗಳನ್ನು ಹೊಂದಿತ್ತು. ಇವುಗಳ ಕಂದಾಯ ವಸೂಲಿ ಮತ್ತು ನ್ಯಾಯಪಾಲನೆ ಈ ದೇಸಗತಿಯ ವಂಶಪಾರಂಪರ್ಯದ ಹಕ್ಕುಗಳಾಗಿದ್ದವು. ಪಟೇಲ, ಕುಲಕರ್ಣಿ, ಮುಲ್ಕಿ ಪಾಟೀಲ, ಶೇಕದಾರ, ದಳವಾಯಿ, ಹುದ್ದಾರ, ಗುಮಾಸ್ತ, ವಾಲೀಕಾರ ಮುಂತಾದವರು ಕಂದಾಯ ವಸೂಲಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಜೈನಾಪುರ ದೇಸಗತಿಯ ಸಂಗಪ್ಪ ದೇಸಾಯಿ ಅವರ ಪತ್ನಿ ಪಾರ್ವತಿಬಾಯಿ ಸಣ್ಣ ವಯಸ್ಸಿನಲ್ಲೇ ನಿಧನರಾದರು. ನಂತರ ಸಂಬಂಧಿಕರಾದ ಈಗಿನ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದ ದೇಸಗತಿಯ ಬಸಪ್ಪ ಮತ್ತು ರುಕುಮಾಬಾಯಿ ಅವರ ಮಗಳು ಕಾಶೀಬಾಯಿ (1890-1958) ಜೊತೆ ಸಂಗಪ್ಪ ದೇಸಾಯಿ ಅವರ ಮದುವೆಯಾಯಿತು. ಕಾಶೀಬಾಯಿ ಆ ಕಾಲದಲ್ಲಿ ಮುಲ್ಕಿ ಪರೀಕ್ಷೆ (7ನೇ ಇಯತ್ತೆ) ವರೆಗೆ ಓದಿದವರಾಗಿದ್ದರು. ಸೊನ್ನ ದೇಸಗತಿಯ ಮನೆತನದಲ್ಲಿ ಬೆಳೆದದ್ದರಿಂದ ಆಡಳಿತ ವ್ಯವಸ್ಥೆಯನ್ನು ಕಂಡವರಾಗಿದ್ದರು.

(ಜೈನಾಪುರ ದೇಸಾಯ್ತಿ ಕಾಶೀಬಾಯಿ ಅವರು ವಿಜಾಪುರದಲ್ಲಿ ಕಟ್ಟಿಸಿದ ಲಕ್ಷ್ಮೀ ನಿವಾಸ ವಾಡೆ. ಈ ಸುಂದರ ವಾಡೆ ಈಗ ನೆನಪು ಮಾತ್ರ. ಇದನ್ನು ಬೀಳಿಸಿ ದೊಡ್ಡ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ.)

ಸಂಗಪ್ಪ ಕಾಶೀಬಾಯಿ ದಂಪತಿಗೆ ಮದುವೆಯಾಗಿ ವರ್ಷ ತುಂಬುವುದರೊಳಗೆ ಗಂಡು ಕೂಸು ಹುಟ್ಟಿತು. ಆದರೆ ಜನಿಸಿದ ದಿನವೇ ಅಸುನೀಗಿತು. ಇನ್ನೊಂದು ವರ್ಷ ಕಳೆಯುವುದರೊಳಗಾಗಿ ಮತ್ತೊಂದು ಗಂಡು ಕೂಸಿನ ಜನನವಾಯಿತು. ಮುಂದೆ ವರ್ಷ ಕಳೆಯುವುದರೊಳಗಾಗಿ ಆ ಕೂಸು ಕೂಡ ತೀರಿಕೊಂಡಿತು. ನಂತರ ಸಂಗಪ್ಪ ದೇಸಾಯಿ ಕೂಡ ಅಕಾಲ ಮರಣಕ್ಕೆ ತುತ್ತಾದರು. ‘ಇದೆಲ್ಲ ಯಾರದೋ ಶಾಪದ ಫಲ’ ಎಂದು ಕಾಶೀಬಾಯಿ ಭಾವಿಸಿದರೂ ಎದೆಗುಂದದೆ ದೇಸಗತಿಯ ವಾರಸುದಾರಿಕೆಯನ್ನು ವಹಿಸಿಕೊಂಡರು.

ಪುರುಷಪ್ರಧಾನ ವ್ಯವಸ್ಥೆಯ ದಿನಗಳವು. ಆಡಳಿತ ನಿರ್ವಹಣೆಯಲ್ಲಿ ತೊಡಗಿದ್ದ ಪುರುಷರು ಮನಸ್ಸು ಇಲ್ಲದ ಮಾರ್ಗದಂತೆ ದೇಸಾಯ್ತಿಯ ಕಾರ್ಯ ನಿರ್ವಹಿಸತೊಡಗಿದರು. 25 ಗ್ರಾಮಗಳ ಕಂದಾಯ ವಸೂಲಿ ಮಾಡುವಲ್ಲಿ ಸಮಸ್ಯೆಯಾಯಿತು. ಈ ಗ್ರಾಮಗಳಲ್ಲಿನ ದೇಶಗತಿಯ ವತನಿ ಭೂಮಿಯೆ 16 ಸಾವಿರ ಎಕರೆಗಳಷ್ಟಿತ್ತು! ಉತ್ತರಾಧಿಕಾರದ ಬಯಕೆಯಿಂದಾಗಿ ದಾಯಾದಿಗಳು ಕೂಡ ಅತೃಪ್ತರಾಗಿದ್ದರು. ಆದರೆ ಕಾಶೀಬಾಯಿ ಎದೆಗುಂದದೆ ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತದಲ್ಲಿ ಯಶಸ್ಸು ಸಾಧಿಸಿದರು. ಪುರುಷಪ್ರಧಾನ ವ್ಯವಸ್ಥೆಯ ಎಲ್ಲ ರೀತಿಯ ಅಡತಡೆಗಳನ್ನು ಎದುರಿಸುತ್ತ ಗ್ರಾಮೀಣ ಮಹಿಳೆ ಕೂಡ ದೇಸಗತಿಯ ವ್ಯವಹಾರವನ್ನು ಅಚ್ಚುಕಟ್ಟಾಗಿ ನಡೆಸಬಲ್ಲಳು ಎಂಬುದನ್ನು ತೋರಿಸಿಕೊಟ್ಟ ಈ ವೀರ ಮಹಿಳೆ “ಜೈನಾಪುರ ದೇಸಾಯ್ತಿ” ಎಂದು ಪ್ರಸಿದ್ಧರಾದರು.

ಕಾಶೀಬಾಯಿ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೃಷ್ಣಾ ನದಿ ದಂಡೆಯ ಗ್ರಾಮಗಳು ನೀರಾವರಿಯಿಂದಾಗಿ ಪ್ರಗತಿ ಸಾಧಿಸಿದ್ದವು. ಉತ್ತಮ ಮಳೆ ಬೆಳೆಯಿಂದಾಗಿ ಇನಾಂ ಗ್ರಾಮಗಳ ಮತ್ತು ವತನಿ ಗ್ರಾಮಗಳ ರೈತರಿಂದ ಬರಬೇಕಾದ ಕಂದಾಯ ಸರಿಯಾದ ಸಮಯಕ್ಕೆ ಬರುವಂತಾಯಿತು. ಹೀಗೆ ಕಾಶೀಬಾಯಿಯವರ ಯಶಸ್ಸಿಗೆ ಪ್ರಕೃತಿಯೂ ಸಹಕರಿಸಿತು.

(ಜೈನಾಪುರ ದೇಸಾಯಿ ವಾಡೆ)

ನಾವು ನಾಲ್ವರು ಕೂಡಿಸಿದ ಹಣದಲ್ಲಿ ಒಂದು ಸಂಗೀತ ಕೊಳ್ಳಲು ಮಾತ್ರ ಸಾಧ್ಯವಾಗುತ್ತಿತ್ತು. ಚಹಾ ಕುಡಿಯುವಷ್ಟು ಹಣ ಕೂಡಿಸಲಿಕ್ಕಾಗುತ್ತಿರಲಿಲ್ಲ. ಚೆನ್ನಾಗಿ ನೀರು ಕುಡಿದು ತೃಪ್ತಿಯಿಂದ ಆ ಕಡೆ ಈ ಕಡೆ ನೋಡುತ್ತ ಮನೆಯವರು, ಸಂಬಂಧಿಕರು ಮತ್ತು ಗಲ್ಲಿಯವರು ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮೆಲ್ಲನೆ ಹೋಟೆಲ್‌ನಿಂದ ಹೊರಬೀಳುತ್ತಿದ್ದೆವು.

ಆದರೆ ಜೈನಾಪುರದಲ್ಲೇ ಉಳಿದು ಆಡಳಿತ ನಡೆಸುವುದು ಗಂಡಾಂತರಕಾರಿ ಎಂಬ ಭಾವನೆ ಅವರಲ್ಲಿ ಉಂಟಾಯಿತು. ಆ ದಿನಗಳಲ್ಲಿ ಕೆಲವೆಡೆ ವತನದಾರಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ವಿಧವಾ ಮಹಿಳೆಯರ ಕೊಲೆಗಳಾದ ಬಗ್ಗೆ ಅವರಿಗೆ ಅರಿವಿತ್ತು. ಹೀಗಾಗಿ ಕಾಶೀಬಾಯಿಯವರು ತಮ್ಮ ದೇಸಗತಿಯ ಕೇಂದ್ರಸ್ಥಾನವನ್ನು ಜಿಲ್ಲಾ ಕೇಂದ್ರವಾದ ವಿಜಾಪುರಕ್ಕೆ ವರ್ಗಾಯಿಸಲು ನಿರ್ಧರಿಸಿದರು. ಶತಮಾನದಿಂದ ನಡೆದುಕೊಂಡು ಬಂದ ದೇಸಗತಿಯ ಆಡಳಿತವನ್ನು ಜೈನಾಪುರ ವಾಡೆಯಿಂದ ವಿಜಾಪುರಕ್ಕೆ ವರ್ಗಾಯಿಸುವುದು ಸುಲಭದ ಮಾತಾಗಿರಲಿಲ್ಲ. ಕಾಶೀಬಾಯಿಯವರು ಚಾಣಾಕ್ಷತದಿಂದ ಚಕ್ಕಡಿಗಟ್ಟಲೆ ತುಂಬಿದ ಆಡಳಿತ ದಾಖಲೆಗಳು ಮತ್ತು ಸಕಲ ಸರಂಜಾಮಿನ ಸಮೇತ ವಿಜಾಪುರಕ್ಕೆ ಬಂದುಳಿದರು. ಒಟ್ಟು 15 ಸವಾರಿ ಗಾಡಿಗಳಲ್ಲಿ ಎಲ್ಲ ಮಹತ್ವದ ವಸ್ತುಗಳನ್ನು ಜೈನಾಪುರದಿಂದ ವಿಜಾಪುರಕ್ಕೆ ಸಾಗಿಸಲಾಯಿತು. ವ್ಯವಹಾರ ಚತುರತೆಯಿಂದ ಕೃಷಿ ಚಟುವಟಿಕೆಗಳ ಕಡೆಗೆ ಗಮನವಿಡುತ್ತಲೇ ವಿಜಾಪುರ ನಗರದಲ್ಲಿ 20 ಅಂಗಡಿ, ಸ್ಟೇಷನ್ ರೋಡಲ್ಲಿರುವ ಬಂಗ್ಲೆ, ನಗರ ಮಧ್ಯೆ ಆರು ಎಕರೆ ತೋಟ ಮತ್ತು ಆದಿಲಶಾಹಿ ಕಾಲದ ಬೃಹತ್ ನೀರಾವಾರಿ ಬಾವಿ ಮುಂತಾದವುಗಳನ್ನು ಖರೀದಿಸಿದರು.

1930ರಲ್ಲಿ ಬೃಹತ್ತಾದ ಮತ್ತು ಆಕರ್ಷಕವಾದ ಅರಮನೆಯಂಥ ಲಕ್ಷ್ಮೀ ನಿವಾಸ ವಾಡೆಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. 1934ರಲ್ಲಿ ನಿರ್ಮಾಣಕಾರ್ಯ ಪೂರ್ತಿಗೊಂಡಿತು. ಕಂದಾಯ ಕಚೇರಿಗಾಗಿ ನೆಲಮನೆಯನ್ನು ನಿರ್ಮಿಸಲಾಗಿತ್ತು. ದೇಸಗತಿಯ ವ್ಯವಹಾರವೆಲ್ಲ ಅಲ್ಲಿಂದಲೇ ನಡೆಯುತ್ತಿತ್ತು.

ಜೈನಾಪುರದಿಂದ 30 ಮೈಲ್ ದೂರದ ವಿಜಾಪುರಕ್ಕೆ ವಾಸ್ತವ್ಯ ಸ್ಥಳಾಂತರವಾದರೂ ಹಬ್ಬ ಜಾತ್ರೆ ಉತ್ಸವ ಮುಂತಾದ ಮಂಗಲ ಕಾರ್ಯಗಳ ಸಂದರ್ಭದಲ್ಲಿ, ದೇಸಗತಿಯ ಹಕ್ಕು ಬಾಬ್ತುಗಳ ನಿರ್ವಹಣೆಗಾಗಿ ಸವಾರಿ ಗಾಡಿ ಇಲ್ಲವೆ ಮೇಣೆಯಲ್ಲಿ ಜೈನಾಪುರಕ್ಕೆ ಹೋಗಬೇಕಾಗಿತ್ತು. ಈ ಪ್ರಯಾಣ ಪ್ರಯಾಸದಾಯಕವಾಗಿದ್ದರಿಂದ ಮತ್ತು ವಿಜಾಪುರ ವಾಡೆಗೆ ಕಾರು ಬೇಕು ಎಂಬ ಭಾವದಿಂದ ಕಾಶೀಬಾಯಿಯವರು ಐಷಾರಾಮಿ ಕಾರು ಖರೀದಿಸಲು ನಿರ್ಧರಿಸಿದರು. ಇಂಗ್ಲೆಂಡಿನ ಪ್ರಖ್ಯಾತ ರೋಲ್ಸ್ ರಾಯ್ಸ್ ಕಾರನ್ನೇ ಖರೀದಿಸಿದರು. ನಮ್ಮ ನಾಡಿನಲ್ಲಿ ಮೈಸೂರು ಮಹಾರಾಜರು ಬಿಟ್ಟರೆ ಈ ಪ್ರತಿಷ್ಠಿತ ಕಾರು ಇನ್ನಾರ ಬಳಿಯೂ ಇರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಾರನ್ನು ಕೊಂಡ ಮೊದಲಿಗರಾಗಿದ್ದರು ಜೈನಾಪುರ ದೇಸಾಯ್ತಿ!

ಬ್ರಿಟಿಷ್ ಕಲೆಕ್ಟರ್ ಕೂಡ ಪ್ರವಾಸಕ್ಕೆ ಕುದುರೆ ಬಳಸುವ ಕಾಲ ಅದಾಗಿತ್ತು. ಮೇಲಧಿಕಾರಿ ವಿಜಾಪುರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಳ್ಳಲು ರೋಲ್ಸ್ ರಾಯ್ಸ್ ಕಾರನ್ನು ಬಳಸುವ ಇಂಗಿತವನ್ನು ಆ ಕಲೆಕ್ಟರ್ ವ್ಯಕ್ತಪಡಿಸಿದರು. ಹಾಗೆಂದು ಕಾಶೀಬಾಯಿಯವರಿಗೆ ಹೇಳಿ ಕಳುಹಿಸಿದರು. ಆದರೆ ಕಾಶೀಬಾಯಿಯವರು ಕಾರು ಕೊಡಲು ನಿರಾಕರಿಸಿದರು. ಆ ಕಾಲದಲ್ಲಿ ಬ್ರಿಟಿಷ್ ಕಲೆಕ್ಟರ್ ಸರ್ವಾಧಿಕಾರಿಯ ಹಾಗೆ ಇದ್ದರು. ಅದಕ್ಕೆ ವಿಜಾಪುರ ಕಲೆಕ್ಟರ್ ಕೂಡ ಹೊರತಾಗಿರಲಿಲ್ಲ. ಇದು ತನಗೆ ಮಾಡಿದ ಭಾರಿ ಅಪಮಾನ ಎಂದು ಆ ಕಲೆಕ್ಟರ್ ಭಾವಿಸಿದರು. ಕಾರು ಕೊಡದೇ ಹೋದರೆ ರೋಡ್ ಪರ್ಮಿಟ್ ವಾಪಸ್ ಪಡೆಯಲಾಗುವುದೆಂದು ಎಂದು ಕಲೆಕ್ಟರ್ ಹೇಳಿಕಳುಹಿಸಿದ. ದೇಸಾಯ್ತಿ ಇದಕ್ಕೆ ಜಪ್ ಎನ್ನಲಿಲ್ಲ.

ರೋಲ್ಸ್ ರಾಯ್ಸ್ ಕಂಪನಿ ತನ್ನ ಕಾರು ಮಾರುವಾಗ ಕೆಲವೊಂದು ಕರಾರುಗಳನ್ನು ಹಾಕುತ್ತಿತ್ತು. ಕಾರು ಕೊಳ್ಳುವವರ ಸಾಮಾಜಿಕ ಘನತೆಯನ್ನೂ ಆ ಕಂಪನಿ ಪರಿಗಣಿಸುತ್ತಿತ್ತು. ಇದಾದ ನಂತರ ಗಿರಾಕಿಗಳು ಹಣವನ್ನು ಸಂಪೂರ್ಣ ಪಾವತಿ ಮಾಡಿದ ಮೇಲೆಯೆ ಕಾರು ಸಿದ್ಧಪಡಿಸುವ ಕೆಲಸ ಪ್ರಾರಂಭವಾಗುತ್ತಿತ್ತು. ಹತ್ತಾರು ತಿಂಗಳುಗಳವರೆಗೆ ಗಿರಾಕಿಗಳು ಕಾರಿಗಾಗಿ ಕಾಯಬೇಕಿತ್ತು. ಕಾರನ್ನು ಡಾಂಬರು ರಸ್ತೆಯ ಮೇಲೆ ಓಡಿಸಬೇಕೆಂಬ ಸೂಚನೆಯನ್ನೂ ಕಂಪನಿ ಕೊಟ್ಟಿತ್ತು. ಆಗ ವಿಜಾಪುರದಲ್ಲಿ ಕಲ್ಲು ಮಣ್ಣಿನ ರಸ್ತೆಗಳೇ ಇದ್ದವು. ಕಂಪನಿಯ ಈ ಒಂದು ಸೂಚನೆಯನ್ನೇ ಆ ಕಲೆಕ್ಟರ್ ನೆಪವಾಗಿಟ್ಟುಕೊಂಡು ರೋಲ್ಸ್ ರಾಯ್ಸ್ ಕಾರಿನ ಸಂಚಾರದ ಪರವಾನಗಿಯನ್ನು ರದ್ದುಪಡಿಸಿದ. ಕಾಶೀಬಾಯಿ ದೇಸಾಯ್ತಿ ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಅದನ್ನು ವಾಡೇಯಲ್ಲೇ ಇಟ್ಟು ಅದಕ್ಕೆ ಕುಳ್ಳು ಬಡಿಯಲು ಕೆಲಸದವರಿಗೆ ತಿಳಿಸಿದರು! ಈ ಘಟನೆ ದೇಸಾಯ್ತಿಯ ಸ್ವಾಭಿಮಾನದ ಪ್ರತೀಕವಾಗಿ ಪ್ರಸಿದ್ಧಿ ಪಡೆದು ಇಂದಿಗೂ ದಂತಕಥೆಯಂತೆ ಜನಮನದಲ್ಲಿ ಉಳಿದಿದೆ.

ಈ ಪ್ರಸಂಗ ನಡೆದದ್ದು 1942ರ ಚಲೇಜಾವ್ ಚಳವಳಿಯ ಸಂದರ್ಭದಲ್ಲಿ. ದೇಶದೆಲ್ಲಡೆ ಬ್ರಿಟಿಷರ ವಿರುದ್ಧ ಜನ ಚಳವಳಿ ಹೂಡಿದ್ದರು. ಜೈನಾಪುರ ದೇಸಾಯ್ತಿಯ ಈ ನಿರ್ಧಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿತು.

1857ರ ವೇಳೆಗಾಗಲೆ ಬಿಟಿಷ್ ಸರ್ಕಾರ ‘ದಿ ಆರ್ಮ್ಸ್‌ ಯಾಕ್ಟ್’ ಎಂಬ ಶಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆ ತಂದರು. ಆಗ ಮುಧೋಳ ತಾಲ್ಲೂಕಿನ ಹಲಗಲಿ ಬೇಡರು ತಮ್ಮ ಹೊಟ್ಟೆಪಾಡಿನ ಉಪಕರಣಗಳಾದ ಬಿಲ್ಲು ಬಾಣಗಳನ್ನು ಒಪ್ಪಿಸಲು ಮುಂದಾಗಲಿಲ್ಲ. ಬ್ರಿಟಿಷರ ಸೈನಿಕರು 1857ನೇ ನವೆಂಬರ್ 29ರಂದು ರಾತ್ರಿ ಹಲಗಲಿಗೆ ಹೋಗಿ, ಅವರಿದ್ದ ಪ್ರದೇಶಕ್ಕೆ ಬೆಂಕಿ ಹಚ್ಚಿ ಕೊಂದರು. ಸೆರೆಸಿಕ್ಕ ಬೇಡರಿಗೆ ಗಲ್ಲುಶಿಕ್ಷೆ ವಿಧಿಸಿದರು. ಆದರೆ ಆ ಸಂದರ್ಭದಲ್ಲಿ ದೇಶದ ಸಂಸ್ಥಾನಗಳ ರಾಜರು ಬ್ರಿಟಿಷ್ ಸರ್ಕಾರಕ್ಕೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದರು.

19ನೇ ಶತಮಾನದ ಸಂಸ್ಥಾನಿಕರ ಹಾಗೆ 20ನೇ ಶತಮಾನದ ಜೈನಾಪುರ ದೇಸಾಯ್ತಿ ಕಾಶೀಬಾಯಿ ಅವರು ಬ್ರಿಟಿಷ್ ಆಡಳಿತಕ್ಕೆ ತಲೆಬಾಗಲಿಲ್ಲ. ಸ್ವಾಭಿಮಾನಕ್ಕಾಗಿ ಮಹತ್ವದ್ದನ್ನು ಕಳೆದುಕೊಳ್ಳುವ ನಿರ್ಧಾರ ಸಾಮಾನ್ಯವಾದುದಲ್ಲ. ‘ಒಂದು ದಿನ ಕಾರು ಕೊಟ್ಟಿದ್ದರೆ ಏನಾಗುತ್ತಿತ್ತು’ ಎಂದು ವಾದಿಸುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ.
ಜೈನಾಪುರ ದೇಸಾಯ್ತಿ ಹೇಳಿಕೊಳ್ಳುವಂಥ ಸಾಮಾಜಿಕ ಸಂಸ್ಥೆಗಳನ್ನೇನೂ ಕಟ್ಟಲಿಲ್ಲ. ಹಾಗೆ ಮಾಡುವಂಥ ವಾತಾವರಣ ಕೂಡ ಅವರಿಗಿರಲಿಲ್ಲ. ಚಾಣಾಕ್ಷತನದಿಂದ ಒಳಗಿನವರನ್ನು ಮತ್ತು ಹೊರಗಿನವರನ್ನು ಸಂಭಾಳಿಸುವುದರಲ್ಲೇ ಅವರ ಸಮಯ ವ್ಯಯವಾಗುತ್ತಿತ್ತು. ಆದರೂ ಅವರು ಬಡವರಿಗೆ ಮತ್ತು ಬಡವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತಿದ್ದರು. ಕೆಲವರು ಅವರ ಸಹಾಯದಿಂದಾಗಿ ಅಧಿಕಾರಿಗಳೂ ಆಗಿದ್ದಾರೆ ಎಂಬುದು ತಿಳಿದುಬರುತ್ತದೆ. ಅವರು ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.

ಇಷ್ಟೆಲ್ಲ ಧೈರ್ಯ, ಸಾಹಸ ಮತ್ತು ಚಾಣಾಕ್ಷತನದಿಂದ ಜೈನಾಪುರ ದೇಸಗತಿಯನ್ನು ಉಚ್ಛ್ರಾಯ ಸ್ಥಿತಿಗೆ ತಂದ ಕಾಶೀಬಾಯಿ ಕೊನೆಯ ದಿನಗಳಲ್ಲಿ ಮಾನಸಿಕವಾಗಿ ಬಳಲಿದರು. ಸಂಬಂಧಿಕರ ಬಗ್ಗೆ ವಿಶ್ವಾಸ ಕಳೆದುಕೊಂಡರು. ಹೀಗಾಗಿ ಕೊನೆಯ ದಿನಗಳನ್ನು ಏಕಾಂಗಿಯಾಗಿ ಕಳೆದರು. ವಿಶ್ವಾಸದ ಸೇವಕರನ್ನು ಮಾತ್ರ ತಮ್ಮ ಆರೈಕೆಗೆ ನೇಮಿಸಿದ್ದರು.

ಜೈನಾಪುರದ ವಾಡೆಯಲ್ಲಿನ ದೇವರುಗಳ ಪೂಜೆಗಾಗಿ ಹಿಂದೊಮ್ಮೆ ಇಬ್ಬರು ಯುವ ಪೂಜಾರಿಗಳನ್ನು ನೇಮಿಸಿದ್ದರು. ಅವರಿಬ್ಬರು ಸೇರಿ ಒಂದು ರಾತ್ರಿ ಸಾಧ್ಯವಾದಷ್ಟು ಬಂಗಾರ ಕಳ್ಳತನ ಮಾಡಿಕೊಂಡು ಮುಂಬೈ ಕಡೆ ಓಡಿಹೋದರು. ಹೀಗಾಗಿ ಕಾಶೀಬಾಯಿಯವರು ತಮ್ಮ ಆರೈಕೆಗೆ ಬಹಳ ಎಚ್ಚರಿಕೆಯಿಂದ ಸೇವಕರ ಆಯ್ಕೆ ಮಾಡಿದ್ದರು.

ಪತಿಯನ್ನು ಮತ್ತು ಮಕ್ಕಳನ್ನು ಕಳೆದುಕೊಂಡ ಅನಾಥ ಭಾವ, ಕೊನೆಯವರೆಗೂ ಮಾನಸಿಕವಾಗಿ ಉಳಿದ ಮಕ್ಕಳ ನೆನಪು, ಸಂಬಂಧಿಕರ ಬಗೆಗಿನ ಸಂಶಯಭಾವ ಮತ್ತು ಯಾರು ಯಾವಾಗ ಏನು ಮಾಡುತ್ತಾರೋ ಎಂಬ ಖಿನ್ನತೆಯ ಮನಸ್ಥಿತಿಯಿಂದಾಗಿ ಬಳಲಿದರು. ಇಂದಿನ ಕಾಲದಲ್ಲಿ ಸಾವಿರ ಕೋಟಿಯಷ್ಟು ಬೆಲೆಬಾಳುವಷ್ಟು ಆಸ್ತಿಯಿದ್ದರೂ ಅನಾಥ ಪ್ರಜ್ಞೆಯೊಂದಿಗೆ ಕಾಶೀಬಾಯಿ ಅವರು 1958ನೇ ಜನವರಿ ಒಂದರಂದು ಉತ್ತರಾಧಿಕಾರಿ ನೇಮಿಸದೆ ತೀರಿಕೊಂಡರು. ಆದರೆ ಪುರುಷಪ್ರಧಾನ ವ್ಯವಸ್ಥೆ ಗಾಢವಾಗಿದ್ದ ಸಂದರ್ಭದಲ್ಲಿ ಎಲ್ಲವನ್ನೂ ನಿಭಾಯಿಸುವ ಅವರ ಕಾರ್ಯತತ್ಪರತೆ ಮತ್ತು ಆತ್ಮಗೌರವದ ಇತಿಹಾಸ ಇಂದಿಗೂ ಜೀವಂತವಿದೆ.

ಕಾಶೀಬಾಯಿಯವರ ಮರಣದ ನಂತರ ಸಂಬಂಧಿಕರು ದೇಸಗತಿಗೆ ಉತ್ತರಾಧಿಕಾರಿಯಾಗಲು ಮುಂದೆ ಬಂದರು. ಈ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತು. ಕೋರ್ಟ್ ತೀರ್ಪು ಬರುವವರೆಗೆ ದೇಸಗತಿಯ ಆಡಳಿತ ವಿಜಾಪುರದ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿ ನಡೆಯಿತು. 1964ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆಸ್ತಿಯನ್ನು ಆರು ಮಂದಿ ವಾರಸುದಾರರ ಮಧ್ಯೆ ಹಂಚಲಾಯಿತು.

ವಿಜಾಪುರ ದೇಸಗತಿಗಳ ಕುರಿತು ವಿಜಯಕುಮಾರ ಶೇಕದಾರ ಅವರು 12 ವರ್ಷಗಳ ಹಿಂದೆಯೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಅವರು ಜೈನಾಪುರ ದೇಸಗತಿಯ ಕುರಿತೂ ಬರೆದಿದ್ದಾರೆ. ಆದರೆ ಇನ್ನೂ ಪ್ರಕಟಿಸಿಲ್ಲ.

( ಕಾಶೀಬಾಯಿ ದೇಸಾಯ್ತಿ ಹೆಸರಿನಲ್ಲಿ ಅಭಿಮಾನಿ ಶಿವಾನಂದ ರೂಗಿ ಅವರು ಜೈನಾಪುರದಲ್ಲಿ ಸ್ಥಾಪಿಸಿದ ನ್ಯೂ ಪಬ್ಲಿಕ್ ಸ್ಕೂಲ್)

ಶಿವಾನಂದ ರೂಗಿ ಅವರು ಕಾಶೀಬಾಯಿ ದೇಸಾಯ್ತಿ ಅವರ ಮೇಲಿನ ಅಭಿಮಾನದ ಕಾರಣ ಇಂಡಿ ತಾಲ್ಲೂಕಿನ ನಿಂಬಾಳದಿಂದ ಬಂದು ಜೈನಾಪುರದಲ್ಲಿ ‘ಶ್ರೀಮತಿ ಕಾಶೀಬಾಯಿ ಸಂಗಪ್ಪ ದೇಸಾಯಿ ನ್ಯೂ ಪಬ್ಲಿಕ್ ಸ್ಕೂಲ್’ ಪ್ರಾರಂಭಿಸಿದ್ದಾರೆ.

ಆಸ್ತಿಯನ್ನೆಲ್ಲ ಹರಿದು ಹಂಚಿ ಆದಮೇಲೆ ದೇಸಾಯ್ತಿಯ ನೂರಾರು ಬೆಲೆಬಾಳುವ ರೇಷ್ಮೆ ಸೀರೆಗಳನ್ನು ವಿಜಾಪುರ ಬಜಾರದಲ್ಲಿನ ದೊಡ್ಡ ಹಾಲ್‌ನಲ್ಲಿ ಮಾರಾಟಕ್ಕೆ ಇಡಲಾಯಿತು. ಅವುಗಳಲ್ಲಿ ಕಲಾತ್ಮಕವಾದ ಇಳಕಲ್ ರೇಷ್ಮೆ ಸೀರೆಗಳೂ ಇದ್ದವು. ಬಹಳಷ್ಟು ಮಂದಿ ಶ್ರೀಮಂತ ಮಹಿಳೆಯರು ಕೂಡ ಅವುಗಳ ಖರೀದಿಗೆ ಬಂದಿದ್ದರು. ಅವೆಲ್ಲ ಹಳೆಯ ಸೀರೆಗಳ ಹಾಗೆ ಕಾಣುತ್ತಿರಲಿಲ್ಲ. ಆದರೆ ಉದ್ದನೆಯ ನೌ-ವಾರಿ ಸೀರೆಗಳನ್ನು ಉಡುವ ಪದ್ಧತಿ ಆಗ ಕಡಿಮೆಯಾಗಿತ್ತು. ಕಲಿತ ಮಹಿಳೆಯರು ಸಾ-ವಾರಿ ಸೀರೆಗಳನ್ನು ಉಡತೊಡಗಿದ್ದರು. ಹೀಗಾಗಿ ಹಳೆಯ ತಲೆಮಾರಿನ ಮಹಿಳೆಯರೇ ಅವುಗಳ ಗಿರಾಕಿಗಳಾದರು. ಅಷ್ಟೊಂದು ಸೀರೆಗಳು ಕಡಿಮೆ ದರದಿಂದಾಗಿ ಬೇಗ ಮಾರಾಟವಾದವು.

(ಕರಿಚಂದ್ರಕಾಳಿ ಸೀರೆ)

ನಮ್ಮ ಮನೆಯ ಹತ್ತಿರದ ಹಡಪದ ಶಿವಪ್ಪನ ಹೆಂಡತಿ ಕೂಡ ಕಸೂತಿ ಹಾಕಿದ ಕರಿಚಂದ್ರಕಾಳಿ ಸೀರೆಯೊಂದನ್ನು ಖರೀದಿಸಿ ತಂದಿದ್ದಳು. ಆ ಬಡವಿ ಅದೆಷ್ಟೋ ಕಷ್ಟಪಟ್ಟು ಆ ಸೀರೆಯನ್ನು ಕೊಂಡಿರಬಹುದು. ಆದರೆ ಅದನ್ನು ಅವಳು ಉಟ್ಟುಕೊಳ್ಳುವಂಥ ಪ್ರಸಂಗವೇ ಬರಲಿಲ್ಲ. ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದಾಗಿ ಆ ಸೀರೆಗೆ ಸರಿಹೊಂದುವಂಥ ಕುಬುಸಕ್ಕಾಗಿ ಗುಳೇದಗುಡ್ಡ ಖಣವನ್ನೇ ಕೊಳ್ಳಬೇಕಾಗಿತ್ತು. ಅದಕ್ಕಾಗಿ ಹಣ ಕೂಡಿಸಬೇಕಿತ್ತು. ಎರಡನೆಯದಾಗಿ ಹರಕು ಸೀರೆ ಉಟ್ಟು ತಲೆಗೆ ಎಣ್ಣೆ ಮತ್ತು ಕಾಲಿಗೆ ಚಪ್ಪಲಿ ಇಲ್ಲದೆ ದುಡಿಯಲು ಹೋಗುವ ಹೆಣ್ಣುಮಕ್ಕಳು ದೇಸಾಯ್ತಿಯ ರೇಷ್ಮೆ ಸೀರೆ ಉಡಲು ನಾಚಿಕೊಳ್ಳುವುದು ಸ್ವಾಭಾವಿಕವಾಗಿತ್ತು. ಹೀಗಾಗಿ ಶಿವಪ್ಪನ ಹೆಂಡತಿ (ಹೆಸರು ಮರೆತಿದ್ದೇನೆ) ಆ ಸೀರೆಯನ್ನು ನೋಡುವ ಮತ್ತು ವಾರಿಗೆಯವರಿಗೆ ತೋರಿಸುವ ಖುಷಿಯನ್ನು ಮಾತ್ರ ಪಡೆದಳು. ಆ ಕರಿಚಂದ್ರಕಾಳಿ ಸೀರೆಯ ಮೇಲೆ ಕಸೂತಿಯಿಂದ ಬಿಡಿಸಿದ ಹೂಗಳು, ಗಿಳಿಗಳು, ಆನೆಗಳು, ಕುದುರೆಗಳು ಅವಳ ಮನಸ್ಸಿಗೆ ಎಷ್ಟೊಂದು ಮುದ ನೀಡಿದವೋ ಕಲ್ಪಿಸಲಿಕ್ಕಾಗದು. ಸೀರೆಯನ್ನು ನೋಡುವುದು, ಗೆಳತಿಯರಿಗೆ ತೋರಿಸುವುದು, ನಂತರ ನೀಟಾಗಿ ಗೂಟಕ್ಕೆ ಸಿಗಿಸುವುದು ನಡೆದೇ ಇತ್ತು.

ಆ ಸೀರೆ ಕೊಂಡ ನಾಲ್ಕಾರು ತಿಂಗಳಲ್ಲಿ ಅವಳು ಬೇನೆ ಬಿದ್ದಳು. ರೋಗ ಉಲ್ಬಣಗೊಂಡಿತು. ಮನೆಮದ್ದು ಮತ್ತು ಗಾಂವಟಿ ಔಷಧಗಳಿಗೆ ರೋಗ ಕಡಿಮೆಯಾಗಲಿಲ್ಲ. ಅವಳಿದ್ದ ಚಾಳದ ಜನ ಜೋರಾಗಿ ಅಳತೊಡಗಿದಾಗಲೆ ಅವಳು ಸತ್ತಿದ್ದು ಗೊತ್ತಾಯಿತು. ನಾನೂ ಹೋದೆ ಆ ಬಡಪಾಯಿ ಹೆಣ್ಣುಮಗಳ ಬಗ್ಗೆ ಗಲ್ಲಿಯ ಮಹಿಳೆಯರು ಕಣ್ಣೀರಿಡುತ್ತಿದ್ದರು. ನಾನು ಗೂಟದ ಮೇಲೆ ಇದ್ದ ಸೀರೆಯನ್ನೇ ನೋಡುತ್ತಿದ್ದೆ. ಆ ಸೀರೆಯ ಮೇಲಿನ ಆನೆಗಳು, ಕುದುರೆಗಳು, ಗಿಳಿಗಳು ಅವಳ ಜೊತೆಗೂಡಿ ಹೋಗುತ್ತಿರುವಂತೆ ಭಾಸವಾಯಿತು. ಬಡವರ ಸಾವು ಬಹಳ ಸೋವಿ ಅನಿಸಿತು. ‘ಸದ್ಯ ಮಕ್ಕಳಾಗದಿದ್ದುದು ಒಳ್ಳೆಯದಾಯಿತು’ ಎಂದು ನೋವಿನಿಂದಲೇ ಬಡ ಹೆಣ್ಣುಮಗಳು ಕಣ್ಣೊರೆಸಿಕೊಳ್ಳುತ್ತ ಗುಣುಗಿದಳು.