ಇಷ್ಟೆಲ್ಲಾ ಆಗುವಷ್ಟರಲ್ಲಿ ಅವನ ಇಬ್ಬರು ಸ್ನೇಹಿತರು ವಾಪಸ್ ಹೈದರಾಬಾದಿನ ತಮ್ಮನೆಗೆ ವಾಪಸ್ಸಾಗಿದ್ದರು. ಇವನು ಆಶಾವಾದಿ, ದೇಶದ ಆರ್ಥಿಕತೆಗೆ ಅನುಕೂಲವಾಗುವ ಮತ್ತೊಂದು ಆರು ತಿಂಗಳ ಕೋರ್ಸಿಗೆ ಸೇರಿಕೊಂಡು ಪಾರ್ಟ್ ಟೈಮ್ ವಿದ್ಯಾರ್ಥಿಯಾದ. ಈಗ ಆ ಕೋರ್ಸನ್ನ ಮಾಡುತ್ತಲೇ ಜೀವನೋಪಾಯಕ್ಕಾಗಿ ಎರಡು ಕಡೆ ಕೆಲಸ ಮಾಡುತ್ತಿದ್ದಾನೆ. ಅವನ ಒಂದು ಉದ್ಯೋಗವಿರುವುದು ಪಿಜ್ಝಾ ಅಂಗಡಿಯಲ್ಲಿ. ಅಲ್ಲಿ ಮಾತಿಗೆ ಸಿಕ್ಕಾಗ ಅಷ್ಟೆಲ್ಲ ಕಥೆ ಹೇಳಿಕೊಂಡ. ಅವನ ಇಬ್ಬರು ಸ್ನೇಹಿತರು ಮನೆಗೆ ಮರಳಿದರೂ ಇವನು ಮಾತ್ರ ಇಲ್ಲಿ ಯಾಕಿರುವುದು, ಏನಾದರೂ ಪ್ರೀತಿಪ್ರಣಯ ಪ್ರಸಂಗ ನಡೀತಿದ್ಯಾ ಎಂದರೆ ನಾಚಿಕೊಂಡು ‘ಅಯ್ಯೋಯ್ಯೋ ಹಾಗೇನೂ ಇಲ್ಲ’ ಅಂದ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಆ ಹುಡುಗ ಹೈದರಾಬಾದಿನವನಂತೆ. ಊರಿನಲ್ಲೇ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಹೆಚ್ಚಿನ ಓದಿಗಾಗಿ ಆಸ್ಟ್ರೇಲಿಯಾಗೆ ಬಂದಿದ್ದ. ಇಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಐಟಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾದ ಮೇಲೆ ಇಲ್ಲೇ ಶಾಶ್ವತವಾಗಿ ನೆಲೆಸಲು ಪರ್ಮನೆಂಟ್ ರೆಸಿಡೆನ್ಸಿಗೆ ಅರ್ಜಿ ಹಾಕಿದ್ದ. ಅವನು ಅರ್ಜಿ ಸಲ್ಲಿಸುವ ಕಾಲಕ್ಕೆ ಸರಿಯಾಗಿ ಇಲ್ಲಿನ ಕೇಂದ್ರ ಸರ್ಕಾರ ಕೌಶಲ್ಯಾಧಾರಿತ ವೀಸಾಗಳಿಗೆ ಸಂಬಂಧಿಸಿದ ಕೆಲವು ಕಾನೂನುಕಾಯ್ದೆಗಳನ್ನು ಬದಲಿಸಿಬಿಟ್ಟಿತು. ಆಯಾ ದೇಶದ ರಾಜಕೀಯ ಚಿತ್ರಗಳು ತಾವು ಬದಲಾಗುವುದು ಮಾತ್ರವಲ್ಲದೆ ದೇಶದ ಕಾನೂನುಗಳನ್ನು ಕೂಡ ಬದಲಿಸಲು ಹಾತೊರೆಯುತ್ತವೆ ಅನ್ನೋದು ನಮ್ಮ ಚರ್ಮದ ಬಣ್ಣದಷ್ಟೇ ನಿಜ. ಪಾಪದ ಆ ಹುಡುಗ ಸಂಕಷ್ಟಕ್ಕೆ ಸಿಲುಕಿಬಿಟ್ಟ.

ಅವನ ಲೆಕ್ಕಾಚಾರದಂತೆ ಎಲ್ಲವೂ ಹಾಗೆಯೇ ನಡೆದಿದ್ದರೆ ಅವನಿಗೆ ಆರು ತಿಂಗಳೊಳಗೆ ಪರ್ಮನೆಂಟ್ ರೆಸಿಡೆನ್ಸಿ ಸಿಕ್ಕುವುದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವನದ್ದು ತ್ರಿಶಂಕು ಸ್ಥಿತಿಯಾಯ್ತು. ಅವನ ಅರ್ಜಿ ತಿರಸ್ಕೃತವಾಯ್ತು. ಅವನು ಅದನ್ನು ಪ್ರಶ್ನಿಸಿ ಅಪೀಲ್ ಸಲ್ಲಿಸಿದನಂತೆ. ತನ್ನ ಅರ್ಜಿಯನ್ನು ಮತ್ತಷ್ಟು ಬಲಪಡಿಸಲು, ಪಾಯಿಂಟ್ ಗಳನ್ನ ಹೆಚ್ಚಿಸಿಕೊಳ್ಳಲು ಸರ್ಕಾರ ಹೇಳಿದಂತೆ ಅವನು ಮತ್ತೊಂದು ಕೋರ್ಸಿಗೆ ಸೇರಿಕೊಂಡು ಕಾದ. ಕೋರ್ಸ್ ಮುಗಿಸಿ ಮರುಅರ್ಜಿ ಸಲ್ಲಿಸಿದ. ಅರ್ಜಿ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆರರಿಂದ ಎಂಟು ತಿಂಗಳು ತೆಗೆದುಕೊಳ್ಳಬಹುದು ಎಂದರಂತೆ. ಅಲ್ಲಿಯವರೆಗೂ ಅವನು ಇಲ್ಲಿನ ವಾಸವನ್ನು ಮುಂದುವರೆಸಲು ಅವನಿಗೆ ಬ್ರಿಡ್ಜಿಂಗ್ ವೀಸಾ ಕೊಟ್ಟು ಪೂರ್ಣಾವಧಿ ಉದ್ಯೋಗದಲ್ಲಿರಲೂ ಕೂಡ ಪರವಾನಗಿ ಸಿಕ್ಕಿತು.

ಇಷ್ಟೆಲ್ಲಾ ಆಗುವಷ್ಟರಲ್ಲಿ ಅವನ ಇಬ್ಬರು ಸ್ನೇಹಿತರು ವಾಪಸ್ ಹೈದರಾಬಾದಿನ ತಮ್ಮನೆಗೆ ವಾಪಸ್ಸಾಗಿದ್ದರು. ಇವನು ಆಶಾವಾದಿ, ದೇಶದ ಆರ್ಥಿಕತೆಗೆ ಅನುಕೂಲವಾಗುವ ಮತ್ತೊಂದು ಆರು ತಿಂಗಳ ಕೋರ್ಸಿಗೆ ಸೇರಿಕೊಂಡು ಪಾರ್ಟ್ ಟೈಮ್ ವಿದ್ಯಾರ್ಥಿಯಾದ. ಈಗ ಆ ಕೋರ್ಸನ್ನ ಮಾಡುತ್ತಲೇ ಜೀವನೋಪಾಯಕ್ಕಾಗಿ ಎರಡು ಕಡೆ ಕೆಲಸ ಮಾಡುತ್ತಿದ್ದಾನೆ. ಅವನ ಒಂದು ಉದ್ಯೋಗವಿರುವುದು ಪಿಜ್ಝಾ ಅಂಗಡಿಯಲ್ಲಿ. ಅಲ್ಲಿ ಮಾತಿಗೆ ಸಿಕ್ಕಾಗ ಅಷ್ಟೆಲ್ಲ ಕಥೆ ಹೇಳಿಕೊಂಡ. ಅವನ ಇಬ್ಬರು ಸ್ನೇಹಿತರು ಮನೆಗೆ ಮರಳಿದರೂ ಇವನು ಮಾತ್ರ ಇಲ್ಲಿ ಯಾಕಿರುವುದು, ಏನಾದರೂ ಪ್ರೀತಿಪ್ರಣಯ ಪ್ರಸಂಗ ನಡೀತಿದ್ಯಾ ಎಂದರೆ ನಾಚಿಕೊಂಡು ‘ಅಯ್ಯೋಯ್ಯೋ ಹಾಗೇನೂ ಇಲ್ಲ. ಪ್ರೀತಿಗೆ ಸಿಕ್ಕಿಕೊಂಡರೆ ಇನ್ನಷ್ಟು ಖರ್ಚು ಜಾಸ್ತಿ, ಸದ್ಯಕ್ಕೆ ಆ ಗೋಳು ಬೇಡ, ಎರಡು ಐಟಿ ಡಿಗ್ರಿಗಳನ್ನಿಟ್ಟುಕೊಂಡು ಇನ್ನೂ ಸರಿಯಾದ ಕೆಲಸವೇ ಸಿಕ್ಕಿಲ್ಲ, ನನ್ನ ಗೋಳೇ ಬೇರೆ ಥರದ್ದು,’ ಅಂದ. ‘ಈ ಊರಲ್ಲೇ ಯಾಕಿದೀಯ ಮಾರಾಯ, ಬೇರೆ ರಾಜ್ಯಗಳಿಗೆ ಹೋದರೆ ಹೊಸ ಅವಕಾಶಗಳು ಸಿಗಬಹುದೇನೋ’, ಅಂದೆ. ಇಲ್ಲಿ ಅವನ ಬಂಧುಗಳಿದ್ದಾರಂತೆ. ಅವರ ಮಕ್ಕಳನ್ನ ಅಂದರೆ ಇವನ ವಯಸ್ಸಿನ ಕಸಿನ್ಸ್ ಗಳನ್ನ ನೋಡಿದರೆ ಇವನಿಗೆ ದೇವರು ಯಾಕೀರೀತಿ ಅವನನ್ನ ಪರೀಕ್ಷಿಸುತ್ತಿದ್ದಾನೆ ಅನ್ನಿಸುತ್ತಂತೆ. ಆದರೆ ಸುಮಾರು ನಾಲ್ಕುವರ್ಷಗಳು ಪಟ್ಟ ಪಾಡನ್ನು ನೆನೆಸಿಕೊಂಡರೆ ಒಂದು ರೀತಿಯ ಹಠ ಮೂಡಿ ಅವರ ರೀತಿ ತಾನೂ ಇಲ್ಲೇ ಇದ್ದು ಜೀವನವನ್ನ ರೂಪಿಸಿಕೊಳ್ಳಬೇಕು ಅನ್ನೋ ಆಸೆ ಇನ್ನಷ್ಟು ಬಲವಾಗುತ್ತದಂತೆ.

ಆದರೆ ಆಸೆಯ ಜೊತೆಗೆ ಸಂಕಟ ಕೂಡ ಇದ್ದೇಇದೆ. ‘ಅವರುಗಳು ಇಲ್ಲಿನ ಪ್ರಜೆಗಳು, ಏನೆಲ್ಲಾ ಸವಲತ್ತುಗಳು ಸಿಗುತ್ತವೆ. ಓದಲು ಕೂಡ ಸರ್ಕಾರ ಅವರಿಗೆ ಲೋನ್ ಕೊಡುತ್ತದೆ. ಬರಿ ಪಾಕೆಟ್ ಮನಿಗಾಗಿ ಅವರು ಪಾರ್ಟ್ ಟೈಮ್ ಕೆಲಸ ಮಾಡ್ತಾರೆ. ನನ್ನಂತಲ್ಲ … ‘ ಎಂದು ದುಃಖ ತೋಡಿಕೊಂಡ. ಯಾಕೋ ಇವನದ್ದು ಸ್ವಲ್ಪ ವಿಚಿತ್ರ ಕಥೆ – ಆ ಕಡೇನೂ ಇಲ್ಲ, ಈ ಕಡೇನೂ ಇಲ್ಲ. ಆದರೆ ಎರಡೂ ಕಡೆ ಒಂದೊಂದು ಕಾಲಿಟ್ಟು ತನ್ನನ್ನ ಪರೀಕ್ಷಿಕೊಳ್ಳುತ್ತಿದ್ದಾನೆ ಅನ್ನಿಸಿತು.

ನನಗೊಂದು ಪಿಜ್ಜಾವನ್ನ ಆರ್ಡರ್ ಮಾಡಿ, ಭಾರತೀಯನಲ್ಲವಾ ಕೇಳೋಣ ಎಂದುಕೊಂಡು, ‘ಮಾರಾಯ, ಸ್ವಲ್ಪ ಉಪ್ಪು ಖಾರ ಹಾಕಿ ಪಿಜ್ಜಾ ಮಾಡಿಕೊಡು,’ ಎಂದರೆ ‘ನೀವ್ಯಾಕೆ ಇನ್ನೂ ಆಸ್ಸೀ (Aussie) ಆಗಿಲ್ಲ? ಇಲ್ಯಾರೂ ಉಪ್ಪು ಖಾರ ತಿನ್ನೋಲ್ಲ. ನೋಡಿ, ನಮ್ಮ ಸ್ಟೋರಿನಲ್ಲಿ ಉಪ್ಪು ಅನ್ನೋ ಪದಾರ್ಥವೇ ಇಲ್ಲ. ಕೇವಲ ಭಾರತೀಯರು ಮಾತ್ರ ಯಾವಾಗಲೂ ಪಿಜ್ಜಾ ಮೇಲೆ ಉಪ್ಪು ಹಾಕಿ ಉಪ್ಪು ಕೊಡಿ ಅಂತ ಸಾಯ್ತಾರೆ ಎಂದು ನನ್ನ ಮ್ಯಾನೇಜರ್ ಸಿಡುಕುತ್ತಾರೆ. ನಮ್ಮಲ್ಲಿ ನಿಲ್ ಸಾಲ್ಟ್ ಪಾಲಿಸಿ ಇದೆ. ಬೇಕೆಂದರೆ ಪಿಜ್ಜಾ ಮೇಲೆ ಒಣ ಮೆಣಸಿನಕಾಯಿ ಪುಡಿಯನ್ನ ಉದುರಿಸುತ್ತೀನಿ. ಆಸ್ಟ್ರೇಲಿಯಾಗೆ ಬಂದ ಮೇಲೆ ಆಸ್ಟ್ರೇಲಿಯನ್ನರಾಗಿ ಬದುಕಬೇಕು,’ ಎಂದೆಲ್ಲ ಒಣ ಒಗ್ಗರಣೆ ಹಾಡಿದ. ನಗು ಬಂತು. ಇಲ್ಲಿ ಬದುಕಲು ಇವನು ಲಾಯಕ್ಕಾಗಿದ್ದಾನೆ, ಅದ್ಯಾಕೆ ಸರ್ಕಾರ ಮೀನಮೇಷ ಎಣಿಸುತ್ತಿದೆಯೋ ಅನ್ನಿಸಿತು.

ಸ್ವಲ್ಪ ರೇಗಿಸೋಣ ಅಂತ ನಾನು ‘ಯಾಕೆ, ನಿಮ್ಮ ಸ್ಟೋರಿಗೆ ಸ್ಪಾನಿಷ್, ಪೋರ್ಚುಗಲ್, ಬ್ರೆಝಿಲ್, ಚಿಲಿ ದೇಶದವರು, ಈ ಬಡಾವಣೆಯಲ್ಲಿ ವಾಸಿಸುವ ಅನೇಕ ಮಧ್ಯಪ್ರಾಚ್ಯ ದೇಶದವರು ಬರೋಲ್ವಾ? ಅವ್ರೆಲ್ಲಾ ಉಪ್ಪು ತಿನ್ನೋ ಜಾತಿನೇ,’ ಅಂದ್ರೆ ಅವನ ಮ್ಯಾನೇಜರಮ್ಮ ಬಂದಳು. ಅವಳು ಒಳಗಡೆ ಕೂತು CCTV ಪರದೆಯ ಮೇಲೆ ಈ ನನ್ನ ತಲೆಹರಟೆಯನ್ನ ನೋಡಿರಬೇಕು ಅಂದೆನಿಸಿತು. ‘ನೋ ನೋ, ದೇ ಡೋಂಟ್ ಆಸ್ಕ್ ಫಾರ್ ಸಾಲ್ಟ್. ಓನ್ಲಿ ಇಂಡಿಯನ್ಸ್ ಆಸ್ಕ್. ವೀ ಹ್ಯಾವ್ ಗಾಟ್ ಚಿಲ್ಲಿ ಫ್ಲೇಕ್ ಫಾರ್ ಯು, ಬಟ್ strictly ನೋ ಸಾಲ್ಟ್’, ಅಂದಳು. ಆಹಾರದಲ್ಲಿ ಉಪ್ಪುಖಾರ ಮಿಶ್ರಣದ ಹದದ ಬಗ್ಗೆ ಜಲಾಲುದ್ದೀನ್ ರೂಮಿ ಹೇಳಿದಂತೆ ನಾನೂ ಕೂಡ ಪಾಠ ಹೇಳಬೇಕೆನ್ನಿಸಿದರೂ ಹೇಳಲಿಲ್ಲ. ರೂಮಿ ಮಹಾನುಭಾವನನ್ನ ಅನುಕರಣೆ ಮಾಡಲು ಸುಲಭಸಾಧ್ಯವೇ?!

ತನ್ನ ಅರ್ಜಿಯನ್ನು ಮತ್ತಷ್ಟು ಬಲಪಡಿಸಲು, ಪಾಯಿಂಟ್ ಗಳನ್ನ ಹೆಚ್ಚಿಸಿಕೊಳ್ಳಲು ಸರ್ಕಾರ ಹೇಳಿದಂತೆ ಅವನು ಮತ್ತೊಂದು ಕೋರ್ಸಿಗೆ ಸೇರಿಕೊಂಡು ಕಾದ. ಕೋರ್ಸ್ ಮುಗಿಸಿ ಮರುಅರ್ಜಿ ಸಲ್ಲಿಸಿದ. ಅರ್ಜಿ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆರರಿಂದ ಎಂಟು ತಿಂಗಳು ತೆಗೆದುಕೊಳ್ಳಬಹುದು ಎಂದರಂತೆ. ಅಲ್ಲಿಯವರೆಗೂ ಅವನು ಇಲ್ಲಿನ ವಾಸವನ್ನು ಮುಂದುವರೆಸಲು ಅವನಿಗೆ ಬ್ರಿಡ್ಜಿಂಗ್ ವೀಸಾ ಕೊಟ್ಟು ಪೂರ್ಣಾವಧಿ ಉದ್ಯೋಗದಲ್ಲಿರಲೂ ಕೂಡ ಪರವಾನಗಿ ಸಿಕ್ಕಿತು.

ಸಪ್ಪೆ ಪಿಜ್ಜಾ ಹಿಡಿದು ಹೊರಬಂದು ಕೂತು ತಿನ್ನುವಾಗ ಮ್ಯಾನೇಜರಮ್ಮ ಹೇಳಿದ ಮಾತು ನಿಜವೇನೇ ಹೌದು ಅನ್ನಿಸಿಬಿಟ್ಟಿತು. ಖಾರವೇ ಇಲ್ಲದ ಮೆಣಸಿನಕಾಯಿಪುಡಿಯನ್ನ ಕೊಟ್ಟರೆ ತಿನ್ನುವವರ ಆರೋಗ್ಯವೇನೋ ಹಾಳಾಗುವುದಿಲ್ಲ. ಬರಿ ಅದರ ಕೆಂಪು ಬಣ್ಣವನ್ನ ನೋಡಿಯೇ ಮೆದುಳಿಗೆ ಆನಂದವಾಗಿಬಿಡುತ್ತದೆ. ಆದರೆ ಉಪ್ಪಿನಂಶವೇ ಇಲ್ಲದ ಉಪ್ಪನ್ನು ಎಲ್ಲಿಂದ ಹೇಗೆ ಸೃಷ್ಟಿ ಮಾಡುವುದು? ಹೆಚ್ಚಿನ ಉಪ್ಪನ್ನು ತಿಂದರೆ ಆರೋಗ್ಯ ಸಮಸ್ಯೆ ಬಂದೇಬರುತ್ತದೆ ಅನ್ನೋದನ್ನ ಬೇಕಾದಷ್ಟು ಅಭ್ಯಸಿಸಿ ಸಾಕ್ಷಿಪುರಾವೆಯನ್ನ ಮುಖಕ್ಕೆ ಬಡಿಯುವ ಆಸ್ಟ್ರೇಲಿಯನ್ ಆಹಾರದಂಗಡಿಗಳಲ್ಲಿ ನಾನು ಹೋಗಿ ಸ್ವಲ್ಪ ಜಾಸ್ತಿ ಉಪ್ಪು ಹಾಕಿ ಅಂದರೆ ಅವರು ನನ್ನ ಪುಣ್ಯಕ್ಕೆ ಬರೀ ಮುಖ ಸಿಂಡರಿಸಿ ಮೂಗು ಕೊಂಕಿಸುತ್ತಾರೆ. ಹೆಚ್ಚು ಉಪ್ಪು ತಿನ್ನಬಾರದು ಎಂದು ಪಾಠ ಹೇಳುವ ಅವರು ನನ್ನಂಥವರ ಪಾಲಿಗೆ ಅವಧೂತರೇ ಸರಿ ಅಂತ ಸಪ್ಪೆ ಪಿಜ್ಜಾ ತಿನ್ನುತ್ತಾ ಕೂತಿದ್ದ ಆ ಕ್ಷಣದಲ್ಲಿ ಯುರೇಕಾ ಧಾಟಿಯಲ್ಲಿ ಹೊಸ ಜ್ಞಾನೋದಯವಾಯಿತು. ಉಳಿದಿದ್ದ ಕಟ್ಟಕಡೆಯ ಪಿಜ್ಜಾ ತುಂಡು ದೇವತೆಯೊಬ್ಬಳು ನನ್ನ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಲು ಕೊಟ್ಟ ದಿವ್ಯ ವರದಂತೆ ಕಾಣಿಸಿಬಿಟ್ಟಿತು.

ಇವತ್ತು ಬೆಳಗ್ಗೆ ಒಳ್ಳೆ ಗಳಿಗೆಯಲ್ಲಿ ಎದ್ದಿದ್ದೀನಿ ಅನ್ನೋದು ಖಾತ್ರಿಯಾಯ್ತು. ಪಿಜ್ಜಾ ತುಂಡಿನ ಸುತ್ತಲೂ ಬೆಳಕಿನ ಕಿರಣಗಳು ಹಬ್ಬಿರುವಂತೆ, ಅದಕ್ಕೆ ಏನೋ ದಿವ್ಯದೃಷ್ಟಿ ಇರುವಂತೆ, ಅದು ನನಗೆ ಶತಾಯುಸ್ಸು ಎಂದು ಆಶೀರ್ವಾದ ಮಾಡಿದಂತೆ ಭಾಸವಾಯ್ತು. ಈ ಭಾವನೆಗಳನ್ನ ಈಗಾಗಲೇ ಎಲ್ಲೋ ‘ನೋಡಿದಂತಿದೆಯಲ್ಲ’ ಅಂದೂ ಕೂಡ ಅದೇ ಕ್ಷಣದಲ್ಲೇ ಹೊಳೆಯಿತು. ಹೌದಲ್ಲ, Ice Age ಚಲನಚಿತ್ರಗಳಲ್ಲಿ ಕಥೆಯ ರೂಪವನ್ನೇ ಬದಲಿಸಿಬಿಡುವ ಅಳಿಲು ತನ್ನ ಏಕಾರ್ನ್ (acorn) ನೋಡಿದಾಗಲೆಲ್ಲ ಹೀಗೇ ಕನಸುಕಂಡು ನಲಿದಾಡುತ್ತದೆ, ಮುಂದಿರುವ ಪಿಜ್ಜಾ ತುಂಡನ್ನು ದಿಟ್ಟಿಸುತ್ತಾ ಕುಳಿತ ನನ್ನಂತೆಯೇ ಅಳಿಲು ಕೂಡ ಕಣ್ಣಗಲಿಸಿಸುವುದು ನೆನಪಾಯಿತು. ಮುಂದಿನ ಕೆಲಸವನ್ನು ನೋಡು ಹೋಗು ಅಂತ ನನಗೆ ನಾನೇ ಗದರಿಕೊಂಡೆ.

ಅಂಗಡಿ ಒಳಹೋಗಿ ಪಿಜ್ಜಾ ತುಂಬಾ ಚೆನ್ನಾಗಿತ್ತು ಅಂತ ಹುಡುಗನಿಗೆ ಹೇಳಿದರೆ, ಅವನು ಮತ್ತು ಅವನ ಮ್ಯಾನೇಜರಮ್ಮ ಮುಖಮುಖ ನೋಡಿಕೊಂಡದ್ದು ನನಗೆ ಕಾಣಿಸಲಿಲ್ಲ ಅನ್ನೋಥರ ಮುಗುಳ್ನಗುತ್ತಾ ಆಚೆ ಬಂದೆ.

ಆ ಹುಡುಗನ ಮುಂದುವರೆದ ಕಥೆ ಏನಾಯ್ತು ಅನ್ನೋದನ್ನ ವಿಚಾರಿಸಬೇಕು ಅನ್ನೋ ಮನಸ್ಸೇನೋ ಇದೆ. ಆದರೆ ಹಾಗೆ ವಿಚಾರಣೆ ಮಾಡಲು ಅವನಿಗೆ ಶಿಫ್ಟ್ ಇರುವ ಸಮಯವನ್ನ ಕಂಡುಹಿಡಿದು ಅದೇ ಸಮಯಕ್ಕೆ ಹೋಗಿ ನಾನು ಪುನಃ ಪಿಜ್ಜಾ ಕೊಳ್ಳಬೇಕು. ಪಿಜ್ಜಾವನ್ನ ಆರ್ಡರ್ ಮಾಡುತ್ತಾ ಅವನ ಜೊತೆ ಹರಟಬೇಕು. ಹರಟೆ ಹೊಡೆಯಲು ಏನಾದರೂ ನೆಪ ಹುಡುಕಬೇಕು. ಮತ್ತೆ ಭಾರತೀಯರು ಮತ್ತು ಉಪ್ಪು ಎಂಬ ಕಥೆಯನ್ನ ತಿರುವಿಹಾಕಬಾರದು. ಅವನಿಗೆ ಸಂಶಯ ಬರುತ್ತದೆ. ಈ ಹೆಂಗಸೇನಾದರೂ ಸೈಡ್ ಹೊಡೆಯುತ್ತಿದ್ದಾಳಾ ಅನ್ನೋ ಪ್ರಶ್ನೆ ಅವನಲ್ಲಿ ಏನೇಯಾದರೂ ಖಂಡಿತವಾಗಿಯೂ ಏಳಬಾರದು. ಹಾಗೇನಾದರೂ ಆದರೆ ಅದು ಮಹಾತಪ್ಪು. ಒಂದು ಪಕ್ಷ ಸಂಶಯ ಬರದಿದ್ದರೆ, ನಮ್ಮ ಮುಂದುವರೆದ ಹರಟೆಯಲ್ಲಿ ಸೂಕ್ಮವಾಗಿ ಏನಪ್ಪಾ ನಿನ್ನ ಕಥೆ ಎಲ್ಲಿಗೆ ಬಂತು ಅಂತ ಕೇಳಬೇಕು. ನಾನು ಹಾಗೆ ಕೇಳುವದನ್ನು ಅವನ ಮ್ಯಾನೇಜರಮ್ಮ ಕೇಳಿಸಿಕೊಳ್ಳಬಾರದು. ಕೇಳಿಸಿಕೊಂಡರೆ ಅವಳಿಗೆ ಕೆಂಡಾಮಂಡಲ ಸಿಟ್ಟು ಬಂದು ನನ್ನನ್ನ ಅಂಗಡಿಯಿಂದ ಓಡಿಸಿ ಹುಡುಗನ ಕೆಲಸಕ್ಕೆ ಕೊಕ್ಕೆ ಬಿದ್ದರೆ ಅಯ್ಯೋ ಶಾಂತಂ ಪಾಪಂ …

ಇಷ್ಟೆಲ್ಲಾ ಕಷ್ಟ ನನಗ್ಯಾಕೆ ಬಂತು, ಬೆಳಗ್ಗೆ ಎದ್ದ ಗಳಿಗೆ ಸರಿಯಿಲ್ಲವೇ? ಇರುವ ಕೆಲಸ ಸಾಲದೇ? ಅಥವಾ, ಬರುಬರುತ್ತಾ ನಾನೂ ಕೂಡ Ice Age ಕಥೆಯ ಅಳಿಲು ಮತ್ತು acorn ಆಗಿ ಪರಿವರ್ತನೆ ಹೊಂದುತ್ತಿದ್ದೀನಾ ಗೊತ್ತಾಗುತ್ತಿಲ್ಲ. ಪ್ರೈಮರಿ ಶಾಲೆಯಲ್ಲಿ ಕಲಿತ ‘ಆಸೆಯೇ ದುಃಖಕ್ಕೆ ಮೂಲ’ ಅನ್ನೋ ಪ್ರಾಥಮಿಕ ಮೂಲಪಾಠವನ್ನ ಮೆಲುಕು ಹಾಕುತ್ತಾ ಧ್ಯಾನಿಯಾದರೆ ಮಾತ್ರ ಅಳಿಲು ಮತ್ತು acorn ಆಗದೇ ಮನುಷ್ಯಳಾಗಿ ಉಳಿಯುವುದು ಸಾಧ್ಯ ಅನ್ನೋದನ್ನ ನೆನಪಿಸಿಕೊಳ್ಳಬೇಕು. ಕಟ್ಟಕಡೆಯ ಚಿಂತನೆಯೆಂದರೆ ಸಪ್ಪೆ ಪಿಜ್ಜಾ ತಿನ್ನಲು ಹೋಗಬಾರದು.