ಹುಲಿಮನೆ ಊರಿನ ಸುತ್ತ ಇರುವ ಬೆಟ್ಟಗಳಲ್ಲಿ ಸೀರೆಯನ್ನೇ  ಕಟ್ಟಿ, ರಂಗಸ್ಥಳ ಮಾಡಿಕೊಂಡು ಯಕ್ಷಗಾನ ಕುಣಿಯುತ್ತಿದ್ದ ಎಳೆಯ ಪೋರನನ್ನು ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು, ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ. ಮುಂದೆ ಗರುಡರ ಮಾರ್ಗದರ್ಶನದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ, ನಂತರ ಮಯಾಬಜಾರ್‌ನ ಹುಚ್ಚ, ಚೌತಿಚಂದ್ರದ ಬ್ರಾಹ್ಮಣ, ಎಚ್ಚಮ ನಾಯಕ ನಾಟಕದ ದುರ್ಗಸಿಂಹ, ಕೀಚಕವಧೆ ನಾಟಕದ ಭೀಮ ಪಾತ್ರಗಳ ಮೂಲಕ ಜನಪ್ರಿಯವಾಗುತ್ತ ಹೋದರು.
ವಿಶ್ವ ರಂಗಭೂಮಿಯ ದಿನಕ್ಕಾಗಿ  ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು

ಖ್ಯಾತ ನಾಟಕಕಾರ ಹುಲಿಮನೆ ಸೀತಾರಾಮ ಶಾಸ್ತ್ರಿಗಳೆಂದರೆ ಇಂದಿನ ತಲೆಮಾರಿನ ಬಹುತೇಕರು ಯಾರು ಎಂದು ಕೇಳುತ್ತಾರೆ. ಟಿಪ್ಪುಸುಲ್ತಾನ್ ಎಂದೇ ಪ್ರಸಿದ್ಧಿ ಪಡೆದಿದ್ದ ಸೀತಾರಾಮ ಶಾಸ್ತ್ರಿಯವರ ಕುರಿತು ಈಗ ಹಳೆ ತಲೆಮಾರಿನ ನಾಟಕಕಾರರು, ಊರಿನ ಹಿರಿಯರಿಗೆ ಮಾತ್ರವೇ ಗೊತ್ತು. ಹಾಗೆ ನೋಡಿದರೆ ಸೀತಾರಾಮ ಶಾಸ್ತ್ರಿಯವರ ಮೊಮ್ಮಕ್ಕಳಾದ ನಮಗೂ ಅವರ ನಾಟಕಗಳ ಕುರಿತು ಗೊತ್ತಿಲ್ಲ. ಯಾಕೆಂದರೆ ನಾವು ಮೊಮ್ಮಕ್ಕಳ್ಯಾರೂ ಅವರ ನಾಟಕಗಳನ್ನು ನೋಡಿದವರಲ್ಲ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ೧೨ ಕಿ.ಮೀ. ದೂರದಲ್ಲಿರುವ ಕುಮಟಾ ರಸ್ತೆಯ ಹೊದ್ದಿನಲ್ಲಿರುವ ಕೆಲವೇ ಕೆಲವು ಅಂಗಡಿಗಳಿರುವ ಬೇಡ್ಕಣಿಯಿಂದ ೩.ಕಿ.ಮೀ. ದೂರದಲ್ಲಿರುವ ಕುಗ್ರಾಮ ಹುಲಿಮನೆ. ಅಲ್ಲಿ ೧೯೦೬, ನವೆಂಬರ್ ೪ರಂದು ಹುಟ್ಟಿದ ಸೀತಾರಾಮ ಶಾಸ್ತ್ರಿಯವರು ಒಟ್ಟು ೫ ಜನ ಅಣ್ಣತಮ್ಮಂದಿರು. ಅಪ್ಪ ಅನಂತ ಹೆಗಡೆ, ತಾಯಿ ಮಂಜಮ್ಮ. ಕೃಷ್ಣ, ಲಕ್ಷ್ಮೀನಾರಾಯಣ, ಗಣಪತಿ, ಸೀತಾರಾಮ, ಪರಮೇಶ್ವರ. ಈ ಐವರು ಅಣ್ಣ-ತಮ್ಮಂದಿರು.

ಶಾಸ್ತ್ರಿಯವರಿಗೆ ಮದುವೆಯಾಗದಿರುವ ಕಾರಣಕ್ಕೆ ಅವರ ಅಣ್ಣನ ಮಕ್ಕಳನ್ನೇ ತನ್ನ ಮಕ್ಕಳೆಂಬಂತೆ ನೋಡುತ್ತಿದ್ದ. ಈ ಐವರು ಅಣ್ಣ-ತಮ್ಮಂದಿರಲ್ಲಿ ನಾಲ್ಕನೆಯವರಾದ ಸೀತಾರಾಮ ನೋಡಲು ಎತ್ತರ ಮತ್ತು ಅಜಾನುಬಾಹು ಆದ ಕಾರಣಕ್ಕೆ ಅವರಿಗೆ ದೊಡ್ಡಜ್ಜ ಎಂದು ನಾವು ಮೊಮ್ಮಕ್ಕಳೆಲ್ಲ ಕರೆಯುತ್ತಿದ್ದೆವು.

ಹಾಗೆ ನೋಡಿದರೆ ನಮಗೆಲ್ಲ ಅಜ್ಜನ ನೆನಪುಗಳೆಂದರೆ ಬೇರೆಯದೇ ರೀತಿಯದ್ದು. ನನಗೆ ದೊಡ್ಡಜ್ಜನೆಂದರೆ ನೆನಪಿರುವುದು ಸಿದ್ದಾಪುರದಲ್ಲಿ ನಡೆಯುತ್ತಿದ್ದ  ಪ್ರತಿ ಬುಧವಾರದ ಸಂತೆಗೆ ಬಂದು ಹೋಗುವ ನೆಂಟ. ಸಂತೆಗೆ ಬಂದು, ಒಂದಿಷ್ಟು ಶೇಂಗಾವನ್ನು ತಂದು ಅಮ್ಮನ ಹತ್ತಿರ ಶೇಂಗಾ ಚಟ್ನಿ ಮಾಡಿಸಿಕೊಂಡು ಪ್ರೀತಿಯಿಂದ ಊಟ ಮಾಡಿ ಹೋಗುವವ. ಜೊತೆಗೆ ನಮ್ಮನ್ನೆಲ್ಲ ಬೈದು, ಹೋಗುವವ. ಇದಕ್ಕೂ ಮುಂಚೆ ನಾಟಕ ಕಂಪನಿಗೆ ರಜೆ ಇದ್ದಾಗಲೆಲ್ಲ ಅಜ್ಜನ ಮನೆಗೆ ಬಂದು ಹೋಗುವವ. ಬರುವಾಗಲೆಲ್ಲ ಬುಟ್ಟಿಗಟ್ಟಲೆ ಸೇಬುಹಣ್ಣುಗಳನ್ನು ತರುವವ, ಅದುವರೆಗೆ ಗೇರುಹಣ್ಣು, ಮುಳ್ಳಹಣ್ಣು, ಪರಿಗೆ ಹಣ್ಣು, ಪೇರಲೇ ಹಣ್ಣು ಮಾತ್ರ ಗೊತ್ತಿದ್ದ ನಮಗೆ ಈ ಸೇಬುಹಣ್ಣಿನ ರುಚಿ ಹತ್ತಿಸಿದವರು ದೊಡ್ಡಜ್ಜ. ಜೊತೆಗೆ ನಮಗೆಲ್ಲ ನಾಲ್ಕಾರು ಜಡೆ ಹೆಣೆದು ಖುಷಿಪಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಭಾಷೆಯಲ್ಲಿ ಒಂದು ಸಣ್ಣ ವ್ಯತ್ಯಾಸವನ್ನೂ ಸಹಿಸುತ್ತಿರಲಿಲ್ಲ. ಅಲ್ಪ ಪ್ರಾಣ, ಮಹಾ ಪ್ರಾಣ ಸರಿಯಾಗಿ ಹೇಳಲೇಬೇಕಿತ್ತು. ಅದಿಲ್ಲದಿದ್ದರೆ ತೊಡೆಯನ್ನು ಚಿವುಟಿ ಮೇಲೆತ್ತುತ್ತಿದ್ದ. ಅದನ್ನು ನೋಡಿಯೇ ಇತರರಿಗೆ ಭಾಷೆ ಭಯದಿಂದಲೇ ಬಂದುಬಿಡುತ್ತಿತ್ತು. ಇದಲ್ಲದೆ ನಮಗೆ ಅಜ್ಜ ಎಂದರೆ ಮಹಾ ಕುಡುಕ, ಸಿಡುಕ, ಗುಂಡು ಹೊಡೆದ ಹಾಗೆ ಮಾತನಾಡುವವರು. ಹೀಗೆ ಏನೆಲ್ಲ. ದೊಡ್ಡಜ್ಜ ಸಾಯುವವರೆಗೂ ಇವರೊಬ್ಬ ಇಷ್ಟು ದೊಡ್ಡ ಕಲಾವಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಾಟಕಕಾರರು ಎಂದೆಲ್ಲ ನಮಗೆ ಗೊತ್ತಿರಲಿಲ್ಲ. ಯಾಕೆಂದರೆ ನಾವು ಮೊಮ್ಮಕ್ಕಳ್ಯಾರೂ ಅವರ ನಾಟಕಗಳನ್ನು ನೋಡಿದವರಲ್ಲ. ದೊಡ್ಡಜ್ಜನವರ ಬಗ್ಗೆ ಅಜ್ಜ, ಮಾವ, ಅಪ್ಪ, ಅಮ್ಮ, ದೊಡ್ಡಮ್ಮ, ಊರಿನ ಹಿರಿತಲೆಗಳು, ನೆಂಟರಿಷ್ಟರೆಲ್ಲ ಹೇಳಿದ್ದನ್ನು ಕೇಳಿ ಕೇಳಿಯೇ ಅವರ ನಾಟಕಗಳನ್ನು ನಾವು ಚಿತ್ರಿಸಿಕೊಳ್ಳುತ್ತಿದ್ದೆವು.

ಕಲಾವಿದರಿಗೆಂದು ತನ್ನ ನಾಟಕಕಂಪನಿಯಲ್ಲಿ ಎಮ್ಮೆ ಸಾಕಿದ ಏಕೈಕ ಕಲಾವಿದ. ಟಿಪ್ಪೂ ಸುಲ್ತಾನ, ವರದಕ್ಷಿಣೆ, ಸಂದೇಹ ಸಾಮ್ರಾಜ್ಯ, ಪನ್ನಾದಾಸಿ, ಕಂಸವಧೆ, ಚಂದ್ರಹಾಸದ ದುಷ್ಟಬುದ್ಧಿ ಇವೆಲ್ಲ ಪ್ರಸಿದ್ಧ ನಾಟಕಗಳಾಗಿದ್ದವು. ನಾಟಕಗಳ ರಚನೆ ಕೂಡ ಮಾಡಿದ್ದವರು. ವರದಕ್ಷಿಣೆ, ಪುತ್ರಾಪೇಕ್ಷೆ, ಕುಲವಧು, ನಾಟ್ಯಾಚಾರ್ಯ, ಹೀಗೆ ೧೧ ನಾಟಕಗಳನ್ನು ಸ್ವತಃ ರಚಿಸಿದವರು ಶಾಸ್ತ್ರಿಗಳು. ಈ ಪೈಕಿ ೯ ಮಾತ್ರ ಲಭ್ಯವಿದೆ. ಅವರ ಸಮಗ್ರ ನಾಟಕಗಳು ೨ ಸಂಪುಟಗಳಲ್ಲಿ ಪ್ರಕಟಿತವಾಗಿವೆ. ಶಾಸ್ತ್ರಿಗಳ ಜೀವನ ಚರಿತ್ರೆ ‘ಹುಲಿಮನೆ’ ಎಂಬ ಹೆಸರಿನ ಪುಸ್ತಕದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಕಟಗೊಂಡಿದೆ.

ಅವರು ಸ್ಟೇಜಿಗೆ ಬಂದು ನಿಂತರೆ ಇಡೀ ರಂಗಸ್ಥಳಕ್ಕೊಂದು ಕಳೆಯೆಂತೆನಿಸುತ್ತಿತ್ತು. ಇಡೀ ಪ್ರೇಕ್ಷಕ ವರ್ಗ ಸ್ತಬ್ದವಾಗುತ್ತಿತ್ತು. ಪ್ರೇಕ್ಷಕ ವರ್ಗದಿಂದ ವಾಹ್ ಎಂಬ ಪದ ದೊಡ್ಡಜ್ಜನವರ ಕಿವಿಗೆ ಬಿದ್ದರೇನೇ ಅಭಿನಯಿಸಲು ಅವರಿಗೊಂದು ಸ್ಫೂರ್ತಿ ಬರುತ್ತಿತ್ತು. ಹೀಗೆ ಅವರ ಕುರಿತು ಕತೆಗಳನ್ನೆಲ್ಲ ಒಂದು ತಲೆಮಾರು ನಮಗೆ ದಾಟಿಸುತ್ತಿತ್ತು.

ನಂತರ ನಾನು ಮಾಧ್ಯಮಕ್ಕೆ ಬಂದಮೇಲೆ ಹಿರಿಯ ನಟಿ ಲೀಲಾವತಿ, ಅನಂತನಾಗ್, ಮಾ.ಹಿರಣ್ಣಯ್ಯ, ಹಂಸಲೇಖ, ಮುಖ್ಯಮಂತ್ರಿ ಚಂದ್ರು ಮುಂತಾದವರನ್ನೆಲ್ಲ ಸಂದರ್ಶನ ಮಾಡುವ ಸಮಯದಲ್ಲಿ ಅವರೆಲ್ಲ ಸೀತಾರಾಮ ಶಾಸ್ತ್ರಿಯವರ ಮೊಮ್ಮಗಳಾ? ಅವರೆಂಥ ಕಲಾವಿದರಾಗಿದ್ದರು, ಅವರ ಹಾಗೆ ಟಿಪ್ಪುಸುಲ್ತಾನ್‌ನನ್ನು ಮಾಡುವವರೇ ಇಲ್ಲ ಎಂದು ಹೇಳಿದಾಗಲೆಲ್ಲ ಛೇ! ನಾನು ಅವರ ನಾಟಕಗಳನ್ನು ನೋಡದೇ ಹೋದೆನಲ್ಲ ಎಂದು ಚಡಪಡಿಸಿದ್ದಿದೆ. ಗಿರೀಶ್ ಕಾರ್ನಾಡ್ ಅವರು ತಮ್ಮ ‘ಆಡಾಡ್ತ ಆಯುಷ್ಯ’ ಪುಸ್ತಕದಲ್ಲಿ, ತಾನಿದುವರೆಗೆ ಬರೆದ ಪೌರಾಣಿಕ ನಾಟಕಗಳಿಗೆ ಹುಲಿಮನೆ ಶಾಸ್ತ್ರಿಯವರ ನಾಟಕಗಳು ಪ್ರೇರಣೆಯಾಗಿತ್ತು ಎಂಬುದನ್ನು ಸ್ಮರಿಸಿಕೊಂಡಿದ್ದಲ್ಲದೆ, ದೊಡ್ಡಜ್ಜನವರ ನಾಟಕಗಳ ಕುರಿತು ವಿವರಿಸಿದ್ದಾರೆ ಕೂಡ.

ಹೀಗೆ ಒಂದು ಕುಗ್ರಾಮದಿಂದ ಯಾವ ಬೆಂಬಲವಿಲ್ಲದೆ ರಾಷ್ಟ್ರಮಟ್ಟದವರೆಗೆ ಬೆಳೆದ ದೊಡ್ಡಜ್ಜನವರ ಯಶೋಗಾಥೆಯ ಹಿಂದೆ ಅನೇಕ ಹೋರಾಟಗಳಿವೆ. ದುರಂತಮಯ ಬದುಕಿನ ಪುಟಗಳಿವೆ. ಯಕ್ಷಗಾನ ಗಟ್ಟಿಯಾಗಿ ತಳವೂರಿದ್ದಂತ ಉತ್ತರಕನ್ನಡ ಜಿಲ್ಲೆಯಲ್ಲಿ. ಇಡೀ ಜಿಲ್ಲೆ ಹೆಮ್ಮೆ ಪಡುವಂಥ ನಾಟಕಕಾರರಾಗಿ ಬೆಳೆದದ್ದರ ಹಿಂದೆ ಒಂದಷ್ಟು ಕತೆಗಳಿವೆ.

ಯಕ್ಷಗಾನ, ಬಯಲಾಟ, ಬಿಂಗಿ ಪದಗಳು ತುಂಬ ದಟ್ಟವಾಗಿ ಹರವಿಕೊಂಡಿದ್ದ ಕಾಲವದು. ಆ ಕಾಲದಲ್ಲಿ ಅಷ್ಟೇ ಏಕೆ ತೀರಾ ಇತ್ತೀಚೆಗಿನವರೆಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಮನೆಮನೆಗೊಬ್ಬ ಯಕ್ಷಗಾನ ಕಲಾವಿದನಿರುತ್ತಿದ್ದ. ಅಂಥದ್ದೇ ವಾತಾವರಣ ಸೀತಾರಾಮ ಎಂಬ ಎಳೆಯ ಹುಡುಗನ ಮೇಲೆ ಪ್ರಭಾವ ಬೀರಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ. ಇವರಿಗೆ ಸಂಗೀತ, ಯಕ್ಷಗಾನದಲ್ಲಿ ಅತೀವ ಆಸಕ್ತಿ ಇತ್ತು.

ಹುಲಿಮನೆ ಊರಿನ ಸುತ್ತ ಇರುವ ಬೆಟ್ಟಗಳಲ್ಲಿ ಸೀರೆಯನ್ನೇ  ಕಟ್ಟಿ, ರಂಗಸ್ಥಳ ಮಾಡಿಕೊಂಡು ಯಕ್ಷಗಾನ ಕುಣಿಯುತ್ತಿದ್ದ ಎಳೆಯ ಪೋರನನ್ನು ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು, ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ. ಊರಿನಲ್ಲಿ ಓದಿದ್ದು ಕೇವಲ ೪ನೇ ಇಯತ್ತೆವರೆಗೆ ಮಾತ್ರ. ಮುಂದೆ ಹುಡುಗನ ಕಲೆಯ ಕನಸು ಬೆಂಗಳೂರಿನ ತನಕ ಎಳೆದು ತಂದಿತು. ಒಂದು ದಿನ ಮನೆಯಲ್ಲಿ ಅಪ್ಪನ ಬಳಿ ಜಗಳವಾಡಿಕೊಂಡು ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಯಾರದೋ ಮಂಕಿ ಗಾಡಿಯಲ್ಲಿ ಊರು ಬಿಟ್ಟು ಬ್ಯಾಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದು ಎಲ್ಲಿ ಹೋಗಬೇಕೆಂದು ತಿಳಿಯದೆ ಎರಡು ದಿನ ಊಟ, ತಿಂಡಿಯಿಲ್ಲದೆ, ಹಸಿವಿನಿಂದ ಕಂಗಾಲಾಗಿ ಕರ್ಪೂರ ಶ್ರೀನಿವಾಸರಾಯರು ಎಂಬುವರ ಕುದುರೆ ಸಾರೋಟಿನಲ್ಲಿ  ಮಲಗಿದ್ದ. ಬೆಳಗ್ಗೆ ಹುಡುಗನನ್ನು ನೋಡಿದ ರಾಯರು ಇವನನ್ನು ಮನೆಗೆ ಕರೆದು ಊಟ ಹಾಕಿ, ಇವನ ಕತೆ ಕೇಳಿ, ಜಯಚಾಮರಾಜೇಂದ್ರ ಶಾಲೆಯಲ್ಲಿ ಸಂಸ್ಕೃತ ಕಲಿಯಲು ವ್ಯವಸ್ಥೆಯನ್ನೂ ಮಾಡಿದರು. ಹೀಗೆ ಅಲ್ಲಿ ಸಂಸ್ಕೃತ ಅಧ್ಯಯನ ಮಾಡಿದರು. ಅಲ್ಲಿಯೇ ಸೀತಾರಾಮ ಶಾಸ್ತ್ರಿಯಾದ. ಸಂಸ್ಕೃತ ಕಲಿಯುತ್ತಿರುವಾಗಲೇ ನಾಟಕಗಳ ಗೀಳು ಹತ್ತಿಸಿಕೊಂಡರು. ಸೀತಾರಾಮ ಹೆಗಡೆ ಮುಂದೆ ವರದಾಚಾರ್ಯರ ನಾಟಕ ಕಂಪನಿಯ ನಾಟಕಗಳತ್ತ ಆಕರ್ಷಿತರಾದರು. ಅಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ ನಂತರ ಗರುಡ ಸದಾಶಿವರಾಯರ ದತ್ತಾತ್ರೇಯ ನಾಟಕ ಮಂಡಳಿಯಲ್ಲಿ ಗೇಟಕೀಪರ್ ಆಗಿ ಕೆಲಸ ಮಾಡಿದರು. ನಂತರ ಅಲ್ಲಿಯೇ ಇದ್ದು ನಾಟಕಗಳ ಮ್ಯಾನೇಜರ್ ಆದರು. ಗರುಡರ ಮಾರ್ಗದರ್ಶನದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿ, ನಂತರ ಮಯಾಬಜಾರ್‌ನ ಹುಚ್ಚ, ಚೌತಿಚಂದ್ರದ ಬ್ರಾಹ್ಮಣ ಮುಂತಾದ ನಾಟಕಗಳ ಮೂಲಕ ಬೆಳೆಯುತ್ತ ಹೋದ ಶಾಸ್ತ್ರಿಗಳು ಮುಂದೆ ಎಚ್ಚಮ ನಾಯಕ  ನಾಟಕದ ದುರ್ಗಸಿಂಹ, ಕೀಚಕವಧೆ ನಾಟಕದ ಭೀಮ ಪಾತ್ರಗಳ ಮೂಲಕ ಜನಪ್ರಿಯವಾಗುತ್ತ ಹೋದರು.  ಗರುಡರ ಗರಡಿಯಲ್ಲಿ ಪಳಗಿ ಶ್ರೇಷ್ಠ ನಟನೆನಿಸಿಕೊಂಡರು.

ಒಮ್ಮೆ ಹೀಗಾಯಿತು. ಕೀಚಕವಧೆಯಲ್ಲಿ ಸದಾಶಿವರಾಯರದ್ದು ಕೀಚಕ, ದೊಡ್ಡಜ್ಜನವರದ್ದು ಭೀಮ. ಭಾವಾವೇಶದ ಅಭಿನಯಕ್ಕೆ ಹೆಸರುವಾಸಿಯಾಗಿದ್ದ ದೊಡ್ಡಜ್ಜ ಕೀಚಕನನ್ನು ಅನಾಮತ್ತಾಗಿ ಎತ್ತಿ ಗಿರಗಿರನೆ ತಿರುಗಿಸುವ ಸನ್ನಿವೇಶ. ಅವರ ಭಾವಾವೇಶವನ್ನು ನೋಡಿ ಸ್ವತಃ ಗರುಡ ಸದಾಶಿವರಾಯರು ಭಯಗೊಂಡು “ಲೇ… ಶಾಸ್ತ್ರಿ… ಸ್ವಲ್ಪ ನಿಧಾನಕ್ಕೆ ತಿರುಗಿಸಿ ನಿಧಾನಕ್ಕೆ ಕೆಳಗಿಳಿಸು ಮಾರಾಯಾ…” ಎಂದು ಪಿಸುಗುಟ್ಟಿದ್ದನ್ನು ಕೇಳಿಸಿಕೊಂಡು ಮೀಸೆಯಡಿಯಲ್ಲೇ ನಕ್ಕಿದ್ದೂ ಇದೆ.. ಜೋರಾಗಿ ನಗುವಂತೆಯೂ ಇರಲಿಲ್ಲ ಎಂದು ನಂತರದ ದಿನಗಳಲ್ಲಿ ದೊಡ್ಡಜ್ಜನವರೇ ಮೊಮ್ಮಕ್ಕಳೆದುರಲ್ಲಿ ಹೇಳಿಕೊಂಡಿದ್ದಿದೆ.

ಗರುಡರ ಕಂಪನಿಯಲ್ಲಿ ಹೊಸಬರಿಗೆ ತರಬೇತಿ ಕೊಡುವ ಕೆಲಸವೂ ಶಾಸ್ತ್ರಿಯವರಿಗೇ ಹೊರಿಸಿದ್ದರು. ವರದಕ್ಷಿಣೆ ಎಂಬ ನಾಟಕವನ್ನು ಸ್ವತಃ ಬರೆದು ಆಡಿದರು. ಅದು ಲಕ್ಷ್ಮೀಪತಿರಾಯ ಶಾಸ್ತ್ರಿಗಳಿಗೆ ಅಪಾರ ಹೆಸರು ತಂದುಕೊಟ್ಟಿತು.

ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳ ಪ್ರಭುತ್ವ ಇದ್ದುದರಿಂದ ಮತ್ತು ಸಾಹಿತ್ಯದ ಕುರಿತು ಒಲವಿದ್ದುದರಿಂದ ಅನೇಕ ಸಾಹಿತಿಗಳ ಒಡನಾಟವೂ ದೊರೆಯಿತು. ಟಿಪ್ಪೂ ಸುಲ್ತಾನ, ಕಂಸವಧೆಯ ಕಂಸ, ಪನ್ನಾದಾಸಿಯ ಬನಬೀರ, ಸಂದೇಹ ಸಾಮ್ರಾಜ್ಯ, ವರದಕ್ಷಿಣೆ ಮುಂತಾದ ನಾಟಕಗಳನ್ನು ಆಡಿದರು, ಬರಿಗೈಯ್ಯಲ್ಲಿ ಬಂದು ಕಂಪನಿ ಕಟ್ಟಿದರು…

ಶಾಸ್ತ್ರಿಗಳು ನಟರು ಮಾತ್ರವಾಗಿರದೆ, ಕಂಪನಿಯ ಮ್ಯಾನೇಜರ್ ಕೂಡ ಆಗಿದ್ದರು. ಆದರೆ ಕೆಲವರ ಪಿತೂರಿಗಳಿಂದ ಕಂಪನಿಯಿಂದ ಬರಿಗೈಯ್ಯಲ್ಲಿ ಹೊರಬರಬೇಕಾಯಿತು. ನಂತರ ಅವರು ೧೯೩೫ರಲ್ಲಿ ಡಿಸೆಂಬರ್ ಒಂದರಂದು ತಮ್ಮದೇ ಹೊಸ ಕಂಪನಿಯನ್ನು ಕಟ್ಟಿದರು. ‘ಜಯಕರ್ನಾಟಕ ನಾಟ್ಯ ಸಂಘ’ ಎಂಬ ಕಂಪನಿ ಉದಯವಾಯಿತು. ಇದು ಉತ್ತರ ಕನ್ನಡ ಜಿಲ್ಲೆಯ ಮೊದಲ ವೃತ್ತಿ ನಾಟಕ ಕಂಪನಿ ಎಂದೆನಿಸಿಕೊಂಡಿತು. ಇದು ಆ ಜಿಲ್ಲೆಯ ಮೊದಲನೆಯದು ಮತ್ತು ಕೊನೆಯದು ಕೂಡ ಹೌದು. ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ವೃತ್ತಿ ನಾಟಕ ಕಂಪನಿ ಉದಯವಾಗಲೇ ಇಲ್ಲ. ನಾಟಕ ಕಂಪನಿಯೆಂದರೆ ಆರ್ಥಿಕ ಸಂಕಟವಿದ್ದದ್ದೇ. ಸಾಕಷ್ಟು ರೀತಿಯಲ್ಲಿ ತೆವಳುತ್ತ ಸಾಗಿತು ಈ ಕಂಪನಿ. ಇದೇ ವೇಳೆ ಅವರೇ ಬರೆದ ಟಿಪ್ಪು ಸುಲ್ತಾನ ನಾಟಕ ಅವರ ಕೈ ಹಿಡಿಯಿತು. ರಂಗದ ಮೇಲೆ ಜಯಭೇರಿ ಬಾರಿಸಿತು. ಕರ್ನಾಟಕದಾದ್ಯಂತ ಹೆಸರು ಮಾಡಿತು. ಅದೇ ಹೊತ್ತಿಗೆ ಮೂಡಗೋಡು ಶಾಂತ್‌ಕುಮಾರ್ ಎಂಬ ಮತ್ತೊಬ್ಬ ಮಹಾನ್ ಹಾಸ್ಯ ನಟ ಶಾಸ್ತ್ರಿಗಳ ಕಂಪನಿ ಸೇರಿದ್ದು ಶಾಸ್ತ್ರಿಗಳಿಗೆ ನೂರಾನೆ ಬಲಬಂದಂತಾಯಿತು. ಟಿಪ್ಪು ಸುಲ್ತಾನ ನಾಟಕದಲ್ಲಿ ಶಾಸ್ತ್ರಿಗಳು ಟಿಪ್ಪು ಮಾಡಿದರೆ ಶಾಂತ್‌ಕುಮಾರ್ ಮೀರ್‌ಸಾಧಕ, ವರದಕ್ಷಿಣೆ ನಾಟಕದಲ್ಲಿ ಶಾಸ್ತ್ರಿಗಳು ಲಕ್ಷ್ಮೀಪತಿರಾಯನಾದರೆ, ಗುಲಾಬಿಯಾಗಿ ಶಾಂತ್‌ಕುಮಾರ್. ಹೀಗೆ ಈ ಇಬ್ಬರ ಜೋಡಿ ಜನಪ್ರಿಯವಾಗಿ ‘ಜಯಕರ್ನಾಟಕ ನಾಟ್ಯ ಸಂಘ’ ಹೋದಲ್ಲೆಲ್ಲ ಜಯಭೇರಿ ಬಾರಿಸತೊಡಗಿತು.

ಜೋಗದ ಸಮೀಪದ ಕೊಳಚಗಾರು ಎಂಬ ಊರಿನಲ್ಲಿ ಸೀತಾರಾಮ ಶಾಸ್ತ್ರಿಯವರ ಅಣ್ಣ ಲಕ್ಷ್ಮೀ ನಾರಾಯಣಪ್ಪನವರ ಮನೆ ಇತ್ತು. ಅಲ್ಲಿನ ಸಖ್ಯ ಶಾಸ್ತ್ರಿಗಳಿಗೆ ಹೆಚ್ಚು. ಅಲ್ಲಿಗೆ ಬಂದಾಗಲೆಲ್ಲ ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್, ರಾಜ್‌ಕುಮಾರ್, ಲೀಲಾವತಿ, ಮೈನಾವತಿ, ಪಂಡರಿಬಾಯಿ ಮುಂತಾದ ನಟ-ನಟಿಯರೆಲ್ಲ ಚಿಕ್ಕಪ್ಪನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡದ್ದನ್ನು ಸ್ವತಃ ನಾನು ಕಂಡಿದ್ದೇನೆಂದು ಅವರ ಅಣ್ಣನ ಮಗ ಜಯರಾಂ ಹೆಗಡೆಯವರು ಸೀತಾರಾಮ ಶಾಸ್ತ್ರಿಗಳ ಜನ್ಮಶತಮಾನೋತ್ಸವದ ಸಮಯದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಬರೆದಿದ್ದಾರೆ.

೧೯೩೩ ರಿಂದ ೧೯೪೮ರವರೆಗೆ ನಿರಂತರವಾಗಿ ನಾಟಕಗಳನ್ನಾಡಿದ ಕಂಪನಿಯಿದು. ಮುಂದೆ ೧೯೪೮ರಲ್ಲಿ ರಾಯಚೂರಿನಲ್ಲಿ ರಜಾಕಾರರ ಆಂದೋಲನದ ಬಿರುಗಾಳಿಗೆ ಸಿಕ್ಕ ಇಡೀ ಕಂಪನಿ ಸುಟ್ಟು ಹೋಯಿತು. ನಟರನ್ನೆಲ್ಲ ಊರಿಗೆ ಕಳಿಸಿ ತಾವು ಹೇಗೋ ಬಚಾವಾಗಿ ಊರಿಗೆ ಮರಳಿದರು ಶಾಸ್ತ್ರಿಗಳು. ಬಹುಶಃ ಆಗಲೇ ದೊಡ್ಡಜ್ಜ ಸತ್ತು ಹೋಗಿದ್ದನೆನಿಸುತ್ತದೆ. ತಾನೇ ಕಟ್ಟಿ ಬೆಳೆಸಿದ ಕಂಪನಿಯೊಂದು ಅದೂ ೧೯-೨೦ ವರ್ಷಗಳ ಕಾಲ ಮೇರು ಶಿಖರಕ್ಕೇರಿದ ಕಂಪನಿಯೊಂದು ತಮ್ಮ ಕಣ್ಣಮುಂದೆಯೇ ಸುಟ್ಟು ಬೂದಿಯಾಗಿದ್ದನ್ನು ನೋಡಿದ ಮಹಾನ್ ನಟನ ದುರಂತ ಪುಟಗಳು ಮುಂದೆ ತೆರೆದುಕೊಳ್ಳುತ್ತಾ ಹೋಯಿತು.

ಹೀಗಿದ್ದೂ ದೊಡ್ಡಜ್ಜನವರ ನಾಟಕದ ಗೀಳು ಬಿಟ್ಟಿರಲಿಲ್ಲ. ಅಲ್ಲಿ ಇಲ್ಲಿ ನಾಟಕಗಳನ್ನಾಡುತ್ತಿದ್ದರು. ದೆಹಲಿಗೆ ಹೋಗಿ, ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದರ ಎದುರು ಟಿಪ್ಪು ಸುಲ್ತಾನ ಏಕಪಾತ್ರಾಭಿನಯ ಮಾಡಿ ಮೆಚ್ಚುಗೆ ಗಳಿಸಿದರು. ಅವರಿಂದ ಬೆಳ್ಳಿಜರಿಯ ಕುಸುರಿಯಿದ್ದ ಶಾಲನ್ನು ಮತ್ತು ನಟರಾಜ ಮೂರ್ತಿಯನ್ನಿತ್ತು ಸನ್ಮಾನಿಸಲ್ಪಟ್ಟರು. ಬೆಳ್ಳಿ ಜರಿಯ ಕುಸುರಿಯ ಆ ಶಾಲನ್ನು ಅಣ್ಣ ಲಕ್ಷ್ಮೀನಾರಾಯಣಪ್ಪನವರ ಪ್ರೀತಿಯ ಮಗಳಾದ ಮೀನಾಕ್ಷಿಗೆ ಅಂದರೆ ನನ್ನ ಅಮ್ಮನಿಗೆ ಕೊಟ್ಟಿದ್ದರು. ಈಗಲೂ ಈ ಶಾಲು ಅಮ್ಮನ ಮನೆಯಲ್ಲಿದೆ.

ನಂತರ ಸಿದ್ದಾಪುರದಲ್ಲಿ ವಡ್ಡಿನಗದ್ದೆ ಎಂಬಲ್ಲಿ ಜಮೀನು ಖರೀದಿಸಿ, ತನ್ನ ಅಣ್ಣನ ಮಗ ಚಂದ್ರಶೇಖರನನ್ನು ದತ್ತು ತೆಗೆದುಕೊಂಡು ರೈತಾಪಿ ಜೀವನವನ್ನು ನಡೆಸತೊಡಗಿದರು. ಆದರೆ ವಿಧಿ ದೊಡ್ಡಜ್ಜನನ್ನು ಬಗ್ಗಿಸಲು ಇಲ್ಲಿಯೂ ಹೊಂಚುಹಾಕಿ ಕಾಯುತ್ತಿತ್ತು. ಚಂದ್ರುವೂ ಅಕಾಲ ಮರಣಕ್ಕೆ ತುತ್ತಾದ. ಇದು ಅಜ್ಜನ ಬದುಕಿನಲ್ಲಾದ ಎರಡನೇ ಆಘಾತ. ಅಷ್ಟರ ನಂತರವೆಲ್ಲ ದೊಡ್ಡಜ್ಜನವರ ಅವಸಾನದ ದಿನಗಳು ತೆರೆಯತೊಡಗಿದವು. ಕುಡಿತಕ್ಕೆ ದಾಸನಾದರು. ಮುಂದೆ ಯಾವತ್ತೂ ಅದರಿಂದ ಹೊರಬರಲೇ ಇಲ್ಲ. ಬದುಕಿನ ಕೊನೆಯ ದಿನಗಳನ್ನು ಅವರು ಕಳೆದದ್ದು ಅಂದರೆ ೭೦ನೇ ವಯಸ್ಸಿನಲ್ಲಿ ಅದೇ ಅಣ್ಣನ ಮನೆಯಲ್ಲಿ. ಅಣ್ಣ ಲಕ್ಷ್ಮೀನಾರಾಯಣಪ್ಪನವರು ಆಗ ಸಾಗರ ಸಮೀಪ ಬೇಡರಕೊಪ್ಪ ಎಂಬಲ್ಲಿ ಒಂದಷ್ಟು ಜಮೀನು ತೆಗೆದುಕೊಂಡು ಅಲ್ಲಿ ರೈತಾಪಿ ಜೀವನ ನಡೆಸುತ್ತಿದ್ದರು. ಅಲ್ಲಿಗೆ ಬಂದು ನೆಲೆಸಿ, ೧೯೮೫, ಮೇ ೧೬ರಂದು ಅಲ್ಲಿಯೇ ಕೊನೆಯುಸಿರೆಳೆದರು.

ಮುಂದೆ ೧೯೪೮ರಲ್ಲಿ ರಾಯಚೂರಿನಲ್ಲಿ ರಜಾಕಾರರ ಆಂದೋಲನದ ಬಿರುಗಾಳಿಗೆ ಸಿಕ್ಕ ಇಡೀ ಕಂಪನಿ ಸುಟ್ಟು ಹೋಯಿತು. ನಟರನ್ನೆಲ್ಲ ಊರಿಗೆ ಕಳಿಸಿ ತಾವು ಹೇಗೋ ಬಚಾವಾಗಿ ಊರಿಗೆ ಮರಳಿದರು ಶಾಸ್ತ್ರಿಗಳು. ಬಹುಶಃ ಆಗಲೇ ದೊಡ್ಡಜ್ಜ ಸತ್ತು ಹೋಗಿದ್ದನೆನಿಸುತ್ತದೆ. ತಾನೇ ಕಟ್ಟಿ ಬೆಳೆಸಿದ ಕಂಪನಿಯೊಂದು ಅದೂ ೧೯-೨೦ ವರ್ಷಗಳ ಕಾಲ ಮೇರು ಶಿಖರಕ್ಕೇರಿದ ಕಂಪನಿಯೊಂದು ತಮ್ಮ ಕಣ್ಣಮುಂದೆಯೇ ಸುಟ್ಟು ಬೂದಿಯಾಗಿದ್ದನ್ನು ನೋಡಿದ ಮಹಾನ್ ನಟನ ದುರಂತ ಪುಟಗಳು ಮುಂದೆ ತೆರೆದುಕೊಳ್ಳುತ್ತಾ ಹೋಯಿತು.

ದೊಡ್ಡಜ್ಜ ತೀರಿಕೊಂಡ ಅದೆಷ್ಟೋ ದಿನಗಳ ನಂತರ ಅವರ ಡೈರಿಯನ್ನು ಓದಿದೆ. ಅದರಲ್ಲಿ ತಾನು ನಾಟಕ ಕ್ಷೇತ್ರಕ್ಕೆ ಬಂದ ಬಗೆ, ತಾನೇ ಕಟ್ಟಿದ ನಾಟಕ ಕಂಪನಿ ಬಗ್ಗೆ ಹೇಳುತ್ತ ಕೆಲವು ನಾಟಕಗಳ ಕುರಿತೂ ಬರೆದುಕೊಂಡಿದ್ದಾರೆ.

ದಾವಣಗೆರೆಯಲ್ಲೊಮ್ಮೆ ನಾಟಕ ಕಂಪನಿ ಬೀಡುಬಿಟ್ಟಾಗಿನ ಘಟನೆ… “ಅಂದು ನನ್ನದು ಪನ್ನಾದಾಸಿಯ ಬನಬೀರನ ಪಾತ್ರ. ನನ್ನ ಆರ್ಭಟ, ನನ್ನ ಕಣ್ಣುಗಳಲ್ಲಿನ ಕ್ರೌರ್ಯವನ್ನು ನೋಡಿದ ನಾಲ್ಕಾಣೆ ಕೊಟ್ಟು ಚಾಪೆಯಲ್ಲಿ ಕುಳಿತ ಪ್ರೇಕ್ಷಕನೊಬ್ಬ ಕವಳಹಾಕುತ್ತಿದ್ದವ, ಅಯ್ಯೋ ಇವನೀಗ ಆ ಮಗುವನ್ನು ಕೊಂದೇಬಿಡುತ್ತಾನೆಂದು ಹೆದರಿ, ಆಕ್ರೋಶದಿಂದ ಅಡ್ಡಕತ್ತರಿಯನ್ನು ಎತ್ತಿ ನನ್ನೆಡೆಗೆ ಹೊಡೆದ. ಅದು ನನ್ನ ತಲೆಗೆ ಬಿದ್ದು ಗಾಯವಾಗಿ ನಾನು ಮೂರ್ಛೆ ತಪ್ಪಿತು. ಕೆಲವು ಘಂಟೆಗಳ ಕಾಲ ನಾಟಕವನ್ನು ನಿಲ್ಲಿಸಬೇಕಾಯಿತು. ಇದು ನನ್ನ ಕಲೆಗೆ ಆ ನಾಲ್ಕಾಣೆಯ ಪ್ರಭು ಕೊಟ್ಟ ಬೆಲೆ ಎಂದೇ ಭಾವಿಸಿದ್ದೇನೆ…”

ಅದೇರೀತಿ ಮೈಸೂರಿನಲ್ಲಿ ಸತ್ಯವಾನ ಸಾವಿತ್ರಿ ನಾಟಕದ ಯಮನ ಪಾತ್ರ ನೋಡಿದ ಕಲೆಕ್ಟರರ ಪತ್ನಿ ಮೂರ್ಛೆ ತಪ್ಪಿ, ನಾಟಕವನ್ನು ನಿಲ್ಲಿಸಬೇಕಾಗಿ ಬಂದದ್ದೆಲ್ಲ ನನ್ನ ಕಲೆಗೆ ಕೊಟ್ಟ ಬೆಲೆ.

ಶಾಸ್ತ್ರಿಗಳ ನೆನಪಲ್ಲಿ ಅವರ ಅಣ್ಣನ ಮಗ ಶ್ರೀಧರ ಹೆಗಡೆ ಹುಲಿಮನೆ ಅವರು ಸೀತಾರಾಮ ಶಾಸ್ತ್ರಿ ಪ್ರತಿಷ್ಠಾನವನ್ನು ಸ್ಥಾಪಿಸಿ ಆ ಮೂಲಕ ನಾಟಕಗಳನ್ನು ಆಡುತ್ತಿದ್ದರು. ನಂತರ ಅವರ ಮಗ ಗಣಪತಿ ಹೆಗಡೆ ಹುಲಿಮನೆ ಅದನ್ನೇ ರಂಗಸೌಗಂಧ ಎಂದು ಬದಲಾಯಿಸಿ ಈ ಮೂಲಕ ಸಿದ್ದಾಪುರದಲ್ಲಿನ ಹುಡುಗರಿಗೆ ರಂಗ ತರಬೇತಿ ನೀಡುವುದಲ್ಲದೆ ರಾಜ್ಯಾದ್ಯಂತ ನಾಟಕ ಪ್ರಯೋಗಗಳನ್ನು ಮಾಡುತ್ತ ಬಂದಿದ್ದಾರೆ.

ಹಾಗೆಯೇ ಮತ್ತೊಂದು ಕಡೆ; ನನಗೀಗ ೭೦ ವರ್ಷ. ಈಗಲೂ ನನಗೆ ನಾಟಕವಾಡಬೇಕೆಂಬ ಚಟವಿದೆ. ಜನ ನಿನಗೀಗ ವಯಸ್ಸಾಯಿತು. ನಿನ್ನಿಂದ ನಾಟಕ ಮಾಡಲು ಸಾಧ್ಯವಿಲ್ಲ. ಸುಮ್ಮನೆ ಮನೀಲಿರು ಎನ್ನುತ್ತಾರೆ. ಆದರೆ ನನ್ನ ಪ್ರಕಾರ ನಾಟಕ ಮಾಡಲು ಇದುವೇ ಸಕಾಲ. ಯೌವನದ ಯಾವುದೇ ಚಂಚಲತೆ, ಯಾವುದೇ ಆರ್ಭಟಗಳು ಇಂದು ನನ್ನಲ್ಲಿಲ್ಲ. ನನ್ನೊಳಗಿನ ಕಲಾವಿದ ಈಗ ಹೆಚ್ಚು ಮಾಗಿದ್ದಾನೆ. ಹೆಚ್ಚು ಹದಗೊಂಡಿದ್ದಾನೆ. ಹಾಗಾಗಿ ನಾಟಕವಾಡಲು ಇದು ಸಕಾಲ…. ದೊಡ್ಡಜ್ಜ ಈ ಮಾತನ್ನು ೫೦ ವರ್ಷಗಳ ಹಿಂದೆ ಬರೆದಿರಬಹುದು. ಆದರೆ ಆ ಮಾತು ಆಗಿನಿಗಿಂತಲೂ ಈಗ ಹೆಚ್ಚು ಪ್ರಸ್ತುತ ಎಂದು ನನಗನಿಸುತ್ತದೆ. ಯಾಕೆಂದರೆ ದೇಹಪ್ರಜ್ಞೆಯನ್ನೇ ಹೆಚ್ಚು ಹೆಚ್ಚು ಪ್ರಚುರಪಡಿಸುತ್ತಿರುವ ಸಮೂಹ ಮಾಧ್ಯಮಗಳಿರುವಾಗ, ಯೌವನವೇ ಸತ್ಯ ಎಂದು ಸಾರಿ ಸಾರಿ ಹೇಳುವ ಸಮೂಹ ಮಾಧ್ಯಮಗಳ ನಡುವೆ ೭೦ ವರ್ಷದ ನನ್ನೊಳಗಿನ ಕಲಾವಿದ ಹೆಚ್ಚು ಹದಗೊಂಡಿದ್ದಾನೆ. ಹಾಗಾಗಿ ನಾಟಕವಾಡಲು ಇದುವೇ ಸಕಾಲ ಎಂದು ಹೇಳಿದ ದೊಡ್ಡಜ್ಜನವರ ಮಾತುಗಳು ಸಾರ್ವಕಾಲಿಕವಾಗಿ ನಿಲ್ಲುವಂಥವು. ರಾಜ್ಯ ಪ್ರಶಸ್ತಿ ಪುರಸ್ಕೃತರು. ರಾಷ್ಟ್ರಪತಿಗಳಿಂದ ಸನ್ಮಾನಿಸಲ್ಪಟ್ಟ ಮಹಾನ್ ನಾಟಕಕಾರನ ದುರಂತಮಯ ಬದುಕಿನ ಪುಟಗಳಿವು.