ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.
ಎಡೆಯೂರು ಪಲ್ಲವಿ ಬರೆದ “ಭೂಮ್ತಾಯಿ ಅಜ್ಜಿ ಆದ್ಲಾ..?” ಮಕ್ಕಳ ಕಥಾಸಂಕಲನದ ಕುರಿತು ಕಲ್ಲೇಶ್‌ ಕುಂಬಾರ್‌, ಹಾರೂಗೇರಿ ಬರೆದ ಲೇಖನ

 

ಮಕ್ಕಳಿಗೆ ಕಥೆಗಳು ಬೇಕು. ಆ ಕಥೆಗಳು ಅವರ ಮನಸ್ಸನ್ನು ಅರಳಿಸಿ, ಮುದಗೊಳಿಸುವುದರೊಂದಿಗೆ ಮನರಂಜಿಸುವಂತಿರಬೇಕು. ಜೊತೆಗೆ ತನ್ನ ಸುತ್ತಣ ವಸ್ತುಪ್ರಪಂಚದಲ್ಲಿನ ಸಂಗತಿಗಳನ್ನು ವೈಜ್ಞಾನಿಕವಾಗಿ ಅವಲೋಕಿಸುವಂಥ ಹರಿತವಾದ ಆಲೋಚನಾಕ್ರಮವನ್ನು ಸ್ವಯಂ ತಾವೇ ರೂಢಿಸಿಕೊಳ್ಳುವುದಕ್ಕೆ ಅವು ಪೂರಕವಾಗಿರುವಂತಿರಬೇಕು. ಆ ಮೂಲಕ ನಿತ್ಯದ ಬದುಕಿನಲ್ಲಿ ಮಕ್ಕಳ ಗಮನಕ್ಕೆ ಬರುವ ಮತ್ತು ಅವರ ಕುತೂಹಲಕ್ಕೆ ಕಾರಣವಾಗುವ ಪ್ರತಿಯೊಂದು ವಸ್ತು ಮತ್ತು ಸಂಗತಿಗಳ ಕುರಿತಾಗಿ, ಇದು ಏನು? ಇದು ಏಕೆ? ಇದು ಹೇಗೆ?- ಎಂದೆಲ್ಲ ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಕಂಡುಕೊಂಡ ಮೇಲಷ್ಟೇ ನಂಬುವಂಥ ಗುಣವನ್ನು ಬೆಳೆಸುವಂತಿರಬೇಕು. ಇಂಥ ಕಥೆಗಳು ಮಾತ್ರ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತವೆ ಎನ್ನಬೇಕು.

ಈ ಮಾತಿಗೆ ಸಾಕ್ಷಿಯಾಗಿ ಮಕ್ಕಳ ಕುರಿತಾದ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಲೇಖಕಿ ಎಡೆಯೂರು ಪಲ್ಲವಿ ಅವರು ಬರೆದಿರುವ ಪರಿಸರ, ಜೀವ ವಿಜ್ಞಾನ, ಖಗೋಳ ವಿಜ್ಞಾನ ಮತ್ತು ವೈವಿಧ್ಯಮಯವಾದ ಜೀವ ಜಗತ್ತಿಗೆ ಸಂಬಂಧಿಸಿದ ರೋಚಕ ಸಂಗತಿಗಳನ್ನಿಟ್ಟುಕೊಂಡು ಬರೆದಿರುವ ಕುತೂಹಲಕಾರಿಯಾದ ಸುಮಾರು ಇಪ್ಪತ್ಮೂರು ಕಥೆಗಳನ್ನು ಒಳಗೊಂಡಿರುವ ‘ಭೂಮ್ತಾಯಿ ಅಜ್ಜಿ ಆದ್ಲಾ..?’ ಎಂಬ ಮಕ್ಕಳ ಕಥಾಸಂಕಲನ ವಿಶಿಷ್ಟವಾಗಿದ್ದು ದೊಡ್ಡವರೂ ಸಹ ಓದಬಹುದಾದ ಕೃತಿಯಾಗಿದೆ. ಹಾಗೆಯೇ, ‘ಭೂಮ್ತಾಯಿ ಅಜ್ಜಿ ಆದ್ಲಾ..??’ ಎಂಬ ಶೀರ್ಷಿಕೆಯೂ ಕೂಡ ಅದೆಷ್ಟು ಅರ್ಥಪೂರ್ಣವಾಗಿದೆಯೆಂದರೆ ಮಕ್ಕಳಲ್ಲಿ, ಭೂಮ್ತಾಯಿಯೂ ಅಜ್ಜಿ ಆಗುತ್ತಾಳೆಯೆ!?, ಆಕೆ ಏಕಾಗಿ ಅಜ್ಜಿ ಆಗುತ್ತಾಳೆ? ಹೇಗೆ ಅಜ್ಜಿ ಆಗುತ್ತಾಳೆ?- ಎಂಬೆಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುವುದರ ಮೂಲಕ ಇಲ್ಲಿರುವ ಕಥೆಗಳನ್ನು ಓದುವಂತೆ ಮಾಡುತ್ತದೆ.

(ಎಡೆಯೂರು ಪಲ್ಲವಿ)

ಈ ಸಂಕಲನದ ‘ಆಗಸಕ್ಕೆ ಸೇರಿದ ಚಂದ್ರ’ ಕಥೆಯನ್ನೇ ನೋಡಿ. ಮಕ್ಕಳ ಮನೋವಯಸ್ಸನ್ನು ಗಮನದಲ್ಲಿಟ್ಟುಕೊಂಡು ಈ ಕಥೆಯನ್ನು ಹೆಣೆದಿದ್ದರೂ ಸಹ, ಇಲ್ಲಿ ಲೇಖಕಿಯು ತನ್ನ ಕಲ್ಪನೆಯಲ್ಲಿ ವಾಸ್ತವವನ್ನು ತೋರಿಸುವ ನಿಟ್ಟಿನಲ್ಲಿ ಇಲ್ಲಿನ ವಸ್ತುವನ್ನು ಕಥೆಗೆ ಅಳವಡಿಸಿರುವುದು ವಿಶೇಷವಾಗಿದೆ. ಲೇಖಕಿ ಪಲ್ಲವಿಯವರ ಕಲ್ಪನೆಯಲ್ಲಿ ಹಿಂದೊಮ್ಮೆ ಚಂದ್ರ ಭೂಮಿಯ ಮೇಲೆ ನಮ್ಮೊಂದಿಗೇನೆ ವಾಸಿಸುತ್ತಿದ್ದ ಎಂಬುದಾಗಿದೆ. ಆದರೆ, ಮನುಷ್ಯನೊಳಗೆ ಮನೆ ಮಾಡಿರುವ ದುರಾಶೆಗಳ ಕಾರಣವಾಗಿ ನಮ್ಮನ್ನೆಲ್ಲ ತೊರೆದು, ದೂರ ಬಹು ದೂರದ ಆಗಸದಲ್ಲಿ ಹೋಗಿ ನೆಲೆಸಿದ. ಇದು ಲೇಖಕಿಯಾಗಿ ಪಲ್ಲವಿಯವರು ಸರಳವಾದ ಸಂಗತಿಯೊಂದನ್ನು ಮಕ್ಕಳ ಕುತೂಹಲಕ್ಕೆ ಕಾರಣವಾಗುವಂತೆ ಹೀಗೆಲ್ಲ ಸಂಕೀರ್ಣವಾಗಿ ಗ್ರಹಿಸುವ ಕ್ರಮವಾಗಿದೆ. ಮತ್ತು, ಇದೇ ಅವರ ಕಥೆಗಳನ್ನು ಯಾಕೆ ಇಷ್ಟಪಟ್ಟು ಓದಬೇಕು..?- ಎಂಬ ಪ್ರಶ್ನೆಗೆ ಉತ್ತರವೂ ಆಗಿದೆ.

ಈ ಕಥೆಯಲ್ಲಿ, ಕೇವಲ ತಿಂಗಳೊಪ್ಪತ್ತಿಗಷ್ಟೇ ಹಾಲಿನಂಥ ಬೆಳದಿಂಗಳನ್ನು ಚೆಲ್ಲುವ ಚಂದ್ರ, ಹಿಂದೊಮ್ಮೆ ವರ್ಷವಿಡೀ ಈ ಭೂಮಿಯನ್ನು ರಾತ್ರಿಯೆಲ್ಲ ಬೆಳದಿಂಗಳಲ್ಲಿ ಮಿಂದೇಳಿಸುತ್ತಿದ್ದ! ಆದರೆ ಇದ್ದಕ್ಕಿದ್ದಂಗೆ ಚಂದ್ರ ತನ್ನ ಈ ನಿಯಮವನ್ನು ಮುರಿದು, ಈಗ ಬರೀ ತಿಂಗಳೊಪ್ಪತಿಗಷ್ಟೇ ಬೆಳದಿಂಗಳನ್ನು ಚೆಲ್ಲುವುದಕ್ಕೆ ಸೀಮಿತವಾಗಿದ್ದಾನೆ ಎಂದರೆ ಅದಕ್ಕೆ ಮನುಷ್ಯನ ಅತಿಯಾದ ಆಶೆಯೇ ಕಾರಣವಾಗಿದೆ ಎಂದು ಲೇಖಕಿ ಕಲ್ಪಿಸಿರುವುದು ಸರಿಯಾಗಿಯೇ ಇದೆ. ಈ ಸೃಷ್ಟಿಯಲ್ಲಿ ಅಮೂಲ್ಯವಾಗಿರುವ ಎಲ್ಲವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಮನುಷ್ಯನ ದುರಾಶೆಯೇ ಈ ಭೂಮಿಯ ಮೇಲಿನ ಅಮೂಲ್ಯ ವಸ್ತುಗಳನ್ನೆಲ್ಲ ನಮ್ಮ ಕೈಗೆಟುಕದಂತೆ ಪ್ರಕೃತಿಯೇ ದೂರ ಬಲು ದೂರವಾಗಿಸಿದೆ ಎಂಬುದನ್ನು ಈ ಕಥೆಯಲ್ಲಿ ಪಲ್ಲವಿ ಹೇಳಲು ಬಯಸಿದ್ದಾರೆ. ಮತ್ತು ಇದು ನಮಗೆಲ್ಲ ಸತ್ಯದ ಮಾತು ಎಂದು ಪಟಾಯಿಸುತ್ತದೆ ಕೂಡ! ಮಕ್ಕಳಿಗೆ ಹೀಗೆಲ್ಲ ವಿಚಾರಗಳು ಅನುಭವಕ್ಕೆ ಬರುವಂತೆ ಆಲೋಚಿಸಿ ಕಥೆ ಬರೆದಿರುವುದು ಒಂದು ರೀತಿಯಲ್ಲಿ ಪಲ್ಲವಿಯವರಿಗೆ ವಿಶಿಷ್ಟವಾಗಿ ಕಥೆ ಹೇಳಲು ಬರುತ್ತದೆ ಎಂಬ ಮಾತನ್ನು ಸಾಬೀತು ಪಡಿಸುತ್ತದೆ.

ಇನ್ನು, ಈ ಕಥೆಯಲ್ಲಿ ಬರುವ ದಂಪತಿಗಳು ಚಂದ್ರನನ್ನು ಮಂಚಕ್ಕೆ ಕಟ್ಟಿ ಹಾಕುವ ಸನ್ನಿವೇಶವು ಒಂದು ಗಹನವಾದ ವಿಚಾರವನ್ನು ಕಥೆಯೊಳಗೆ ರಂಜನೀಯವಾಗಿ ಹೇಗೆ ತರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಮತ್ತು ಕಥೆಯಲ್ಲಿ ಬರುವ ರಾಜಕುಮಾರಿಯ ಸನ್ನಿವೇಶ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ. ಒಂದಾನೊಮ್ಮೆ ಹೀಗೂ ನಡೆದಿರಬಹುದೆ? ಎಂಬ ವಿಸ್ಮಯವನ್ನು ಅವರೊಳಗೆ ಹುಟ್ಟು ಹಾಕುತ್ತದೆ.

ಲೇಖಕಿ ಪಲ್ಲವಿಯವರು ಯಾವುದೇ ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದರಿಂದ ಉಂಟಾಗುವ ಲಾಭದ ಕುರಿತಾಗಿಯೇ ‘ರಾಗಿ ರೊಟ್ಟಿ’ಯನ್ನು ಕೇಂದ್ರವಾಗಿರಿಸಿಕೊಂಡು ‘ಬೆಳ್ಳಗಿನ ಭೂತ ಮತ್ತು ಅಜ್ಜಿ ಕಥೆ’ ಎಂಬ ಕಥೆಯನ್ನು ಹೊಸೆದಿದ್ದಾರೆ. ಈ ಕಥೆ, ಮನುಷ್ಯ ಕೀಳರಿಮೆಯನ್ನು ತೊರೆದು, ತಾನು ಪಡೆದುಕೊಂಡು ಬಂದುದರಲ್ಲೇ ಸುಖವನ್ನು ಅನುಭವಿಸಬೇಕು, ಮತ್ತು ಎಲ್ಲದರ ಕುರಿತು ಧನಾತ್ಮಕವಾಗಿ ಆಲೋಚಿಸುವ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು ಎಂಬ ನೀತಿಯನ್ನು ಹೇಳುತ್ತದೆ. ಯಾರಿಗಾದರೂ ಸರಿಯೇ ಮೈಬಣ್ಣವಾಗಲಿ, ದೇಹದ ಸೌಂದರ್ಯವಾಗಲಿ ಮುಖ್ಯವಾಗಬಾರದು. ಬದಲಿಗೆ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು. ಅದು ಯಾವತ್ತಿಗೂ ಕೂಡ ಮಲೀನವಾಗಿರಬಾರದು. ಒಂದು ವೇಳೆ ಮನಸ್ಸು ಮಲೀನವಾದಲ್ಲಿ ಅನ್ಯರ ದೃಷ್ಟಿಯಲ್ಲಿ ನಾವು ನಂಬಿಕೆಯನ್ನು ಕಳೆದುಕೊಂಡ ವ್ಯಕ್ತಿಗಳಾಗಿ ಬಿಡುತ್ತೇವೆ.

ಇಲ್ಲಿ, ಕಥೆಯ ಮುಖ್ಯ ಪಾತ್ರ ನವೀನನ ಚಂಚಲ ಮನಸ್ಥಿತಿಯೇ ಆತನ ಹಳವಂಡಗಳಿಗೆ ಕಾರಣವಾಗಿರುತ್ತದೆ. ಆತ ಕಪ್ಪನೆಯ ರಾಗಿ ರೊಟ್ಟಿಯನ್ನು ನಿರಾಕರಿಸುವುದಕ್ಕೆ ಆತನ ಚಂಚಲ ಸ್ವಭಾವವೇ ಕಾರಣ ಎನ್ನಬೇಕು. ಆದರೆ, ಪುಟ್ಟಮ್ಮ ಅಜ್ಜಿಯ ಕಥೆ ಕೇಳಿ ಆತನ ಮನಸ್ಸು ತಿಳಿಯಾಗುತ್ತದೆ. ಅವನಲ್ಲಿ ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ ಎನ್ನುವಲ್ಲಿಗೆ ಮಕ್ಕಳ ಮನಸ್ಸು ಇಂಥ ವಿಚಾರಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು ಎಂಬ ಸಂದೇಶವನ್ನು ದಾಟಿಸುತ್ತದೆ.

ಈ ಸಂಕಲನದಲ್ಲಿ ‘ಬಾಟಲಿ ತೂತು ಮಾಡಿದ್ದು ಯಾರು?’ ಎಂಬ ಕಥೆ ಇದೆ. ಈ ಕಥೆಯಲ್ಲಿ ಮಕ್ಕಳಲ್ಲಿ ಸುಪ್ತಸ್ಥಿತಿಯಲ್ಲಿರುವ ಸೃಜನಶೀಲ ಚಟುವಟಿಕೆಗಳನ್ನು ಉದ್ದೀಪನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು ಎಂಬುದನ್ನು ಪಲ್ಲವಿಯವರು ನಿದರ್ಶನದೊಂದಿಗೆ ಹೇಳಲು ಪ್ರಯತ್ನಿಸುತ್ತಾರೆ. ಶಿಕ್ಷಕರು ಸದಾ ಮಕ್ಕಳ ಒಳಿತನ್ನೇ ಬಯಸುತ್ತಿರಬೇಕು. ಅವರ ಏಳ್ಗೆಯಲ್ಲಿ ತಮ್ಮ ಸುಖ, ಸಂತೋಷವನ್ನು ಕಾಣಬೇಕು. ಅವರೊಳಗಿನ ಸೃಜನಶೀಲ ಚಟುವಟಿಕೆಗಳನ್ನು ಹೊರಹಾಕಲು ಪ್ರೋತ್ಸಾಹದ ಮಾತುಗಳನ್ನಾಡುತ್ತಿರಬೇಕು. ಹಾಗೊಂದು ವೇಳೆ ಶಿಕ್ಷಕರು ಪ್ರೋತ್ಸಾಹದ ಮಾತುಗಳನ್ನಾಡದೇ ಮಕ್ಕಳ ಉತ್ಸಾಹವನ್ನು ಕಳೆಗುಂದಿಸುವ ಮಾತುಗಳನ್ನಾಡತೊಡಗಿದರೆ ಅವರೊಳಗಿನ ಕ್ರಿಯಾಶೀಲತೆಯೇ ಕಳೆದುಹೋಗಬಹುದಾದ ಅಪಾಯವಿದೆ. ಅದು, ಒಂದರ್ಥದಲ್ಲಿ ತೂತು ಮಾಡಿದ ಬಾಟಲ್ ನಿಂದ ನೀರು ಸೋರಿದಂತೆಯೇ ಸರಿ.

ಇಲ್ಲಿ, ರಾಜುವಿನಲ್ಲಿದ್ದ ಕಥೆ ಬರೆಯುವಂಥ ಸೃಜನಶೀಲ ಕಲೆಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸದೇ ಸಿದ್ದೇಶ್ ಮಾಸ್ತರರು. ಯಾವಾಗಲೂ ವಿರೋಧಿಸುತ್ತಲೇ ಬರುವುದರ ಮೂಲಕ ಆತನೊಳಗಿನ ಕಥೆ ಬರೆಯುವ ಕಲೆಯನ್ನು ಕಮರಿಸಲು ಪ್ರಯತ್ನಿಸುವುದು ನಿಜದಲಿ ಇಂಥ ಘಟನೆಗಳನ್ನು ನಾವು ಕಂಡು ಕೇಳಿಯೂ ಇರುತ್ತೇವೆ. ಆದರೆ ಅದು ಹಾಗಾಗಬಾರದು. ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ತಮ್ಮ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಬೇರೆ ಯಾರಾದರೂ ಸರಿಯೇ ಶಿಕ್ಷಕರ ಮನಸ್ಥಿತಿ ಬದಲಾಗುವಂತೆ ಮಾಡುತ್ತಾರೆ.

ಇಲ್ಲಿ, ಕಥೆಯಲ್ಲೂ ಸಹ ರಾಜುವಿನ ವಿಚಾರದಲ್ಲಿನ ಸಿದ್ದೇಶ ಮಾಸ್ತರರ ಮನಸ್ಥಿತಿಯನ್ನು ಖುದ್ದು ಅವರ ಮಗ ಲತೇಶನೇ ಬದಲಾಗುವಂತೆ ಮಾಡುತ್ತಾನೆ. ಆಗ ತಮ್ಮ ತಪ್ಪನ್ನು ಅರಿತ ಅವರು ರಾಜುವಿನಲ್ಲಿ ಕ್ಷಮೆಯಾಚಿಸುವುದಷ್ಟೇ ಅಲ್ಲದೇ ಆತನಿಗೆ ಒಳ್ಳೆಯ ಕಥೆ ಪುಸ್ತಕಗಳನ್ನು ನೀಡಿ ಬರವಣಿಗೆಗೆ ಪ್ರೋತ್ಸಾಹಿಸತೊಡಗುತ್ತಾರೆ.

ಇಡಿಯಾಗಿ ಕಥೆ ಒಳ್ಳೆಯದು ಬೆಳಗಲು ಗುರುವಿನ ಪ್ರೋತ್ಸಾಹ ಅವಶ್ಯಕ ಎಂಬ ನೀತಿಯನ್ನು ಹೇಳುತ್ತದೆ. ಪಲ್ಲವಿಯವರು ಈ ಕಥೆಯನ್ನು ಇನ್ನಷ್ಟು ತಾಳ್ಮೆಯಿಂದ ಬೇರೆ ಬೇರೆ ನೆಲೆಯಲ್ಲಿ ಆಲೋಚಿಸಿ, ಪಾತ್ರ, ಸನ್ನಿವೇಶಗಳ ಬಂಧ ಬಿಗಿಯಾಗಿರುವಂತೆ ಕಟ್ಟಿಕೊಡಬಹುದಿತ್ತು.

ಮನುಷ್ಯನೊಳಗೆ ಮನೆ ಮಾಡಿರುವ ದುರಾಶೆಗಳ ಕಾರಣವಾಗಿ ನಮ್ಮನ್ನೆಲ್ಲ ತೊರೆದು, ದೂರ ಬಹು ದೂರದ ಆಗಸದಲ್ಲಿ ಹೋಗಿ ನೆಲೆಸಿದ. ಇದು ಲೇಖಕಿಯಾಗಿ ಪಲ್ಲವಿಯವರು ಸರಳವಾದ ಸಂಗತಿಯೊಂದನ್ನು ಮಕ್ಕಳ ಕುತೂಹಲಕ್ಕೆ ಕಾರಣವಾಗುವಂತೆ ಹೀಗೆಲ್ಲ ಸಂಕೀರ್ಣವಾಗಿ ಗ್ರಹಿಸುವ ಕ್ರಮವಾಗಿದೆ.

ಪಲ್ಲವಿಯವರಿಗೆ ಪರಿಸರ ಸಂರಕ್ಷಣೆಯ ಬಗ್ಗೆ ವಿಶೇಷವಾದ ಕಾಳಜಿ ಇದ್ದಂತಿದೆ. ಮತ್ತು ಆ ಕಾಳಜಿ ಮಕ್ಕಳಲ್ಲೂ ಮೂಡಿಬರಲೆಂಬ ಆಶೆಯೂ ಅವರಿಗಿದೆ. ಈ ಮಾತಿಗೆ ಸಾಕ್ಷಿಯಾಗಿ ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಭೂಮ್ತಾಯಿ ಅಜ್ಜಿ ಆದ್ಲಾ..?’ ಎಂಬ ಕಥೆಯೊಂದು ಇಲ್ಲಿದೆ.

ಈ ಕಥೆ, ಕೇವಲ ಮಕ್ಕಳ ಮನಸ್ಸನ್ನು ರಂಜಿಸುವುದಷ್ಟೇ ಅಲ್ಲ, ಅವರೊಂದಿಗೆ ಹಿರಿಯರಿಗೂ ಸಹ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ದಾಟಿಸುತ್ತದೆ. ಈ ಕಥೆಯಲ್ಲಿ ಮುಗ್ಧ ಮಕ್ಕಳಿಗೆ ಸೂರ್ಯ, ಚಂದ್ರ ಮತ್ತು ಭೂಮಿ- ಎಲ್ಲವೂ ಏಕಕಾಲದಲ್ಲಿಯೇ ಸೃಷ್ಟಿಯಾದರೂ ಸಹ ಭೂಮ್ತಾಯಿಯೊಬ್ಬಳೇ ಅಜ್ಜಿ ಏಕಾದಳು..!? ಎಂಬುದನ್ನು ಲೇಖಕಿ ರಂಜನೀಯವಾಗಿ‌ ಹೇಳುತ್ತಲೇ ಆ ಮೂಲಕ ಪರಿಸರ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಸಹಜವಾಗಿಯೇ ಆ ಎಳೆ ಮಕ್ಕಳ ತಿಳುವಳಿಕೆಗೆ ಎಟುಕುವಂತೆ ವಿವರಿಸಿದ್ದಾರೆ.

ನಾವೆಲ್ಲ ನಾನಾ ವಿಧದಲ್ಲಿ ಭೂಮ್ತಾಯಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದಲೇ ನೆಲ, ಜಲ, ವಾಯು- ಎಲ್ಲ ಮಲೀನವಾಗುವುದರ ಮೂಲಕ ಪರಿಸರ ನಾಶವಾಗಿ ಈ ಭೂಮಿಯೇ ಬರಡಾಗಿ ಹೋಗುತ್ತಿದೆ. ಕಾಡೆಲ್ಲ ನಾಶವಾಗಿ ಈ ನೆಲದ ಹಸಿರಷ್ಟೇ ಅಲ್ಲ, ವನ್ಯಜೀವಿಗಳ ಸಂತತಿಯೂ ಸಹ ಇಲ್ಲವಾಗುತ್ತಿದೆ!

ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ.

ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ. ಕಥೆಯಲ್ಲಿ ಆಕಸ್ಮಿಕವಾಗಿ ಮುಖಾಮುಖಿಯಾಗುವ ನಿರ್ಮಲೆ ಮತ್ತು ವಿದರ್ಭರಾಜ ಎಂಬ ಎರಡು ಪಾತ್ರಗಳು ಕಥೆಯ ಅಂತ್ಯದಲ್ಲಿ ಮೋಡ ಹಾಗೂ ಮರವಾಗಿ ರೂಪಾಂತರವಾಗುವ ಘಟನೆಯ ಮೂಲಕ ನೈಸರ್ಗಿಕವಾದ ಕ್ರಿಯೆಯೊಂದಕ್ಕೆ ದೈವೀಕತೆಯ ಭಾವವನ್ನು ಬರೆಸಲು ಲೇಖಕಿ ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆಲೋಚಿಸುವ, ತರ್ಕಿಸುವ ಕ್ರಮವನ್ನು ಅಳವಡಿಸಿಕೊಳ್ಳುವಂತೆ ಉದ್ದೀಪನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಥೆಯನ್ನು ಓದುತ್ತ ಹೋದಂತೆ ಪರೋಕ್ಷವಾಗಿ ದುಶ್ಯಂತ ಮತ್ತು ಶಕುಂತಲೆಯ ಕಥೆಯೂ ಕೂಡ ನೆನಪಾಗುತ್ತದೆ.

ಇಲ್ಲಿ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿರುವ ‘ಚಿಂಟಿ ಮಿಂಟಿ ಸಾಂಟಾ ವಂಡರ್ ಗೆ ಹೋಗಿದ್ದು…’ ಎನ್ನುವ ಕಥೆಯೊಂದಿದೆ. ಈ ಕಥೆ, ಪ್ರಕೃತಿ ವಿಸ್ಮಯಗಳ ಕುರಿತಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ತೀರ ಸಹಜವಾಗಿಯೂ, ಅವರಿಗೆ ತಿಳಿಯುವಂತೆ ಆಕರ್ಷಕವಾಗಿಯೂ ಮತ್ತು ರಂಜನೀಯವಾಗಿಯೂ ಚಿತ್ರದಂತೆ ಕಣ್ಮುಂದೆ ತೆರೆದಿಡುತ್ತದೆ.

ಇದೇನು ಕನಸೊ ಅಥವಾ ಭ್ರಮೆಯೊ ಎಂದುಕೊಳ್ಳುವ ಚಿಂಟಿ ಮಿಂಟಿ ಇಬ್ಬರೂ ಇವೆರಡರ ಆಚೆ ತಾವು ಇದೆಲ್ಲವನ್ನೂ ಕನಸೊಳಗೇನೆ ಅನುಭವಿಸುತ್ತಿದ್ದೇವೆ ಎಂಬುದನ್ನೇ ಮರೆಯುತ್ತಾರೆ. ಇದೆಲ್ಲವೂ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಕಥೆಯೊಳಗೆ ಬಂದಿವೆ. ಈ ಕಥೆ, ಕಲ್ಪನೆ ಮತ್ತು ವಾಸ್ತವವನ್ನು ಬೆಸೆದು, ರೋಚಕವಾದ ಮಕ್ಕಳಿಗೆ ಹೇಳಲು ಪ್ರಯತ್ನಿಸುತ್ತದೆ.

ಈ ಸಂಕಲನದಲ್ಲಿ ಇನ್ನಷ್ಟು ಹೆಸರಿಸಬಹುದಾದ ಕಥೆಗಳು ಇವೆ. ಅವುಗಳಲ್ಲಿ, ‘ಗುಬ್ಬಿ ಹಕ್ಕಿ’ ಕಥೆ ಮನುಷ್ಯನ ದುರಾಶೆಯ ದೆಸೆಯಿಂದಾಗಿ ಸಸ್ಯ, ಪಶು, ಪಕ್ಷಿ ಮತ್ತು ಪ್ರಾಣಿ ಸಂಕುಲ ಹೇಗೆ ನಾಶವಾಗುತ್ತದೆ ಎಂಬುದನ್ನು ಹೇಳಿದರೆ, ‘ಮೊನಾರ್ಕ್ ಚಿಟ್ಟೆ ಮತ್ತು ಮೂರು ಅಡಕತ್ತರಿ’ ಕಥೆ ಮನುಷ್ಯನ ಪ್ರಾಮಾಣಿಕತೆಯೆಂಬುದು ಬದುಕಿಗೆ ಬಹುಮುಖ್ಯ ಎಂಬುದನ್ನು ವಿವರಿಸುತ್ತದೆ. ಹಾಗೆಯೇ, ‘ಪ್ರಗತಿಯ ಜಾಣತನ’ ಕಥೆ ಅರಿತು ಬಾಳಿದರೆ ಸುಖ ಜೀವನ ಸಾಧ್ಯ ಎಂದು ವಿವರಿಸಿದರೆ, ‘ಹಾವನ್ನು ಸಾಯಿಸಿದ್ದು ಯಾರು?’ ಕಥೆ, ಹುಸಿ ಕೋಪ, ಮುನಿಸು ಇವೆಲ್ಲ ಬಾಲ್ಯದಲ್ಲಿ ಸಹಜವೇ ಹೌದು. ಮತ್ತು ಈ ಜಗಳಗಳೇ ಮತ್ತೆ ಮತ್ತೆ ಅವರನ್ನು ಒಂದು ಮಾಡುತ್ತಿರುತ್ತವೆ ಎಂಬುದನ್ನು ವಿವರಿಸುತ್ತದೆ.

ಇನ್ನು, ಈ ಕಥೆಗಳ ಮಿತಿಯ ಬಗ್ಗೆ ಹೇಳುವುದಾದರೆ, ಬರಹಗಾರನು ತನ್ನ ಅನುಭವಗಳನ್ನು, ಆಲೋಚನೆಗಳನ್ನು ದಾಖಲಿಸಲು ಭಾಷೆ ಮುಖ್ಯ. ಈ ಭಾಷೆಯನ್ನು ಹೇಗೆ ಅಚ್ಚುಕಟ್ಟಾಗಿ ಬಳಸಬೇಕೆಂಬುದನ್ನು ಲೇಖಕ ಅರಿತಿರಬೇಕು. ಭಾಷೆಯನ್ನು ಅದೆಷ್ಟು ಮಿತವಾಗಿ, ಚೆಂದಾಗಿ ಬಳಸುವುದನ್ನು ಕರಗತಮಾಡಿಕೊಳ್ಳುತ್ತೇವೆಯೋ ಅಷ್ಟು ನಮ್ಮ ಬರಹಕ್ಕೆ ಹೊಳಪು ಬರುತ್ತದೆ ಎಂಬುದನ್ನು ಮರೆಯಬಾರದು. ಅಲ್ಲದೇ, ಬರಹಗಾರನ ಅನುಭವಕ್ಕೆ ಬರುವ ಸಂಗತಿಗಳನ್ನು ಸೂಕ್ಮವಾಗಿ ಅವಲೋಕಿಸುವ ಮತ್ತು ಅದನ್ನು ಕಥೆಗೆ ಅಳವಡಿಸುವ ಕ್ರಮವನ್ನು ಅರಿತಿರಬೇಕು. ಇವೆಲ್ಲವೂ ಬರಹಗಾರನಿಗೆ ಒಂದು ಶಕ್ತಿಯಾಗಿ ಒದಗಿ ಬರಬೇಕಾದರೆ ಆತ ನಿರಂತರವಾಗಿ ಅಧ್ಯಯನಶೀಲನಾಗಿರಬೇಕು.


ಈ ಸಂಕಲನದಲ್ಲಿನ ಬಹಳಷ್ಟು ಕಥೆಗಳು ನಿರೂಪಣೆಯಲ್ಲಿ ಸೊರಗಿದಂತಿವೆ. ಈ ಕಾರಣವಾಗಿ ಧ್ವನಿಪೂರ್ಣವಾಗಬೇಕಾಗಿದ್ದ ಕಥೆಗಳು ಸುಮ್ಮನೆ ತೇಲಿಕೊಂಡು ಹೋಗುತ್ತವೆ ಎಂದೆನಿಸುತ್ತದೆ. ಈ ಎಲ್ಲ ಅಂಶಗಳನ್ನು ಪಲ್ಲವಿಯವರು ಗಮನದಲ್ಲಿಟ್ಟುಕೊಂಡು ಮುನ್ನಡೆದಲ್ಲಿ ಅವರಿಂದ ಇನ್ನಷ್ಟು ಸಶಕ್ತ ಬರಹಗಳು ಹೊರಬರುವುದರಲ್ಲಿ ಅನುಮಾನವಿಲ್ಲ.


(ಕೃತಿ: ಭೂಮ್ತಾಯಿ ಅಜ್ಜಿ ಆದ್ಲಾ..??(ಮಕ್ಕಳ ಕಥಾಸಂಕಲನ), ಲೇಖಕರು: ಎಡೆಯೂರು ಪಲ್ಲವಿ, ಪ್ರಕಾಶನ: ವಸಂತ ಪ್ರಕಾಶನ, ಬೆಂಗಳೂರು, ಪ್ರಕಟಣೆ: 2020; ಪುಟಗಳು: 96; ಬೆಲೆ: 100)