ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ. “ಕಾಡಿತು” ಎಂದು ಬಳಸಲಾರೆ, ನನಗೇನೋ ಪುಸ್ತಕಗಳು “ಕಾಡುವುದು” ಅನ್ನುವುದನ್ನ ಒಪ್ಪಿಕೊಳ್ಳಲಾಗುವುದಿಲ್ಲ. ಕಾಡುವುದಂದರೆ ತೊಂದರೆ ಕೊಡುವುದು, ಅನ್ನಿಸುವ ಹಾಗ ಕೇಳಿಸುತ್ತದೆ. ಬಹುಶಃ ಆ ಪದವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಯೇ ಬೇರೆಯಿದೆಯೇನೋ. ಬದಲಾಗಿ ತಿಂಗಳಾನುಗಟ್ಟಲೆ “ಮಿಂದಿದ್ದೆ” ಎನ್ನಬಲ್ಲೆ.
ಮಧುಸೂದನ್ ವೈ.ಎನ್ ಬರಹ

 

ಸುಮಾರು ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಮಳೆಗಾಲದಲ್ಲಿ ನನ್ನ ಶಾಲಾ ಸ್ನೇಹಿತರೊಂದಿಗೆ ಮಡಿಕೇರಿ ಕಡೆ ಪ್ರವಾಸಕ್ಕೆ ಹೋಗಿದ್ದೆ. ಆಗೆಲ್ಲ “ಕ್ವಾರ್ಟರ್ಲಿ” ಅಂದರೆ ಮೂರು ತಿಂಗಳಿಗೊಮ್ಮೆಯಾದರೂ ತಿರುಗಾಟಕ್ಕೆ ಹೊರಟು ಬಿಡುತ್ತಿದ್ದೆವು. ಕೂತಲ್ಲೇ ಹೊಡರೋಣವೆಂದುಕೊಂಡರೆ ತಕ್ಷಣ ಹೊರಟುಬಿಡುತ್ತಿದ್ದೆವು. ನಮ್ಮಲ್ಲಿ ಆಗ ಇದ್ದದ್ದು ನನ್ನದೊಂದೇ ಕಾರು. ಅದರಲ್ಲೇ ಹೋಗುತ್ತಿದ್ದೆವು. ಸ್ನೇಹಿತರಲ್ಲಿ ಮೊದಲು ಕಾರು ಕೊಂಡವರಿಗೆ ವಿಶೇಷ ಅನುಭವಗಳ ಔತಣ ಸಿಕ್ಕಿರುತ್ತದೆ. ಒಂದು, ಯಾರು ಎಲ್ಲಿ ಹೊರಟರೂ ನಿಮ್ಮನ್ನು ತಪ್ಪದೆ ಕರೆಯುತ್ತಾರೆ. ನನ್ನನ್ನು ಕರಿಲೇ ಇಲ್ಲ ಎಂದು ಮುನಿಸಿಕೊಳ್ಳಲು ಅಲ್ಲಿ ಆಸ್ಪದವೇ ಇರುವುದಿಲ್ಲ. ಅವರ ಕರೆಯುವುದಕ್ಕೆ ಕಾರಣ ನಿಮ್ಮ ಮೇಲಿನಷ್ಟೇ ನಿಮ್ಮ ಕಾರಿನ ಮೇಲಿನ ಪ್ರೀತಿಯೂ ಹೌದು ಅನ್ನುವುದನ್ನು ನೀವು ಒಪ್ಪಬೇಕು. ಎರಡು ನೀವು ಎಲ್ಲಿಗೆ ಹೋಗಬೇಕೆನಿಸಿದರೂ ಕೂಡ ಬರಲು ಸದಾ ಸಿದ್ಧ ಸ್ನೇಹಿತರಿರುತ್ತಾರೆ. ಗೆಳೆಯ ಕರಿತಿದ್ದಾನೆ ಬೇಡ ಅನ್ನಲಾಗದು ಎಂಬ ಪ್ರೀತಿಯೊತ್ತಡವೂ ಹೌದು, ಖರ್ಚಿಲ್ಲದೆ ಹೋಗಿಬರಬಹುದಾದ ಸದಾವಕಾಶ ಎಂತಲೂ ಹೌದು. ಹೀಗಾಗಿ ನನ್ನ ಬಳಗದಲ್ಲಿ ನನ್ನ ಕಾರು “ಟ್ಯಾಕ್ಸಿ”ಯೆಂದೇ (ಅಪ)ಖ್ಯಾತಿ ಒಳಗಾಗಿರುವುದು ಸುಳ್ಳಲ್ಲ. ಬೇಜಾರು ಮಾಡ್ಕೊತೀನಿ ಅಂತ ಯಾರೂ ಎದುರಿಗೆ ನನ್ನನ್ನು “ಡ್ರೈವರ್” ಅಂದಿಲ್ಲವಷ್ಟೆ, ನನ್ನ ಸ್ನೇಹಿತರು ತುಂಬ ಒಳ್ಳೆಯವರು.

ಕಾಲ ಮುಂದೋಡಿದೆ, ಈಗ ನಮ್ಮಲ್ಲಿ ಪ್ರತಿಯೊಬ್ಬರ ಬಳಿಯೂ ಕಾರಿದೆ. ವರ್ಷವಾದರೂ ನಾವು ಯಾರೂ ಎಲ್ಲಿಗೂ ಪ್ರವಾಸ ಹೋಗುವುದಿಲ್ಲ. ಮೊನ್ನೆ ಕಟ್ಟ ಕಡೆಯ ಆಟ ಎಂಬಂತೆ ಒಬ್ಬನ ಮದುವೆ ಇತ್ತು ಚಿತ್ರದುರ್ಗದಲ್ಲಿ. ಐವರು ಬೇರೆ ಬೇರೆ ದಿಕ್ಕಿನಿಂದ ತಂತಮ್ಮ ಕಾರುಗಳಲ್ಲಿ ಮದುವೆಗೆಂದು ಹೋಗಿದ್ದೆವು. ವಾಪಸ್ಸು ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯ ಒಳದಾರಿಯಲ್ಲಿ ಮಾರಿ ಕಣಿವೆ ಡ್ಯಾಮ್ ಸಿಗುವುದರಿಂದ ಅದನ್ನೂ ನೋಡಿಕೊಂಡು ಹೋಗೋಣ ಎಂದು ನಿರ್ಧರಿಸಿದೆವು. ಐದು ಜನ ಮೂರು ಕಾರು. ಮೂವರಲ್ಲಿ ಒಬ್ಬನಾದರೂ ಒಂಟಿ ಡ್ರೈವ್ ಮಾಡಬೇಕು. ಎಂತಹ ಸಂಕಟದ ಸಂದರ್ಭವದು. ತಲೆ ಕೆಟ್ಟು ಎರಡು ಕಾರುಗಳನ್ನು ರಸ್ತೆ ಬದಿ ಮರದ ನೆರಳಿನಲ್ಲಿ ನಿಲ್ಲಿಸಿ ಒಂದು ಕಾರಿನಲ್ಲೆ ಐವರೂ ಖುಷಿಯಾಗಿ ಡ್ಯಾಮ್ ನೋಡಿಕೊಂಡು ಹಿನ್ನೀರಿನಲ್ಲಿ ಈಜಿ ಆಟವಾಡಿಕೊಂಡು ಮತ್ತೆ ಹೆದ್ದಾರಿಗೆ ಮರಳಿದಾಗ ಮತ್ತದೇ ಸ್ಥಿತಿ, ಒಬ್ಬನಾದರೂ ವಾಪಸ್ಸು ಒಂಟಿ ಡ್ರೈವ್ ಮಾಡಲೇಬೇಕಿತ್ತು. ಅಲ್ಲಿಂದ ತುಮಕೂರಿನವರೆಗೆ, ತುಮಕೂರಿಂದ ಬೆಂಗಳೂರಿನವರೆಗೆ ಎಂಬಂತೆ ಕಾರು ಬದಲಾಯಿಸಿಕೊಂಡು ಒದಗಿದ ಸಂಕಷ್ಟವನ್ನು ತೂಗಿಸಿದೆವು.

ಮಡಿಕೇರಿ ಟ್ರಿಪ್ಪಿನ ಸಮಯದಲ್ಲಿ ಯಾರಿಗೂ ಡ್ರೈವಿಂಗ್ ಬರುತ್ತಿರಲಿಲ್ಲವಾದ್ದರಿಂದ ಪ್ರವಾಸದುದ್ದಕ್ಕೂ ನಾನೇ ಡ್ರೈವರ್ ಸೀಟಿನಲ್ಲಿದ್ದೆ. ನವ ಕಾರಿನ ಉತ್ಸಾಹ, ದಣಿವಾಗದೆ ಓಡಿಸುತ್ತಿದ್ದೆ. ರಸ್ತೆ ಮೇಲೆ ಗಮನ ಇಡಬೇಕಾದ್ದರಿಂದ ಸಂಪೂರ್ಣವಾಗಿ ಸ್ನೇಹಿತರ ಹರಟೆಯಲ್ಲಿ ತೊಡಗಿಸಿಕೊಳ್ಳಲಾಗದಿರುವ ಕೊರಗೂ ಇರುತ್ತಿತ್ತು. ಮತ್ತು ವಾಪಸ್ಸು ಬರುವಾಗ ಅದು ಇನ್ನೂ ಹಿಂಸೆ ಅನಿಸುತ್ತಿತ್ತು, ಕಾರಣ ಹಿಂದಿರುವ ಸೀಟಿನಲ್ಲಿರುವವರೆಲ್ಲರೂ ಅರ್ಧ ದಾರಿಗೆ ಕುಡಿದು ಕುಣಿದು ದಣಿದು ಮಲಗಿಬಿಡುತ್ತಿದ್ದರು. ಮುಂದಿರುವ ಸೀಟಿನಲ್ಲಿ ಯಾರೇ ಕುಳಿತಿರಲಿ, ಎದ್ದಿದ್ದು ಸಾಂಗತ್ಯ ಒದಗಿಸುತ್ತಿದ್ದರು. ನಾನೂ ದಣಿದಿರುತ್ತಿದ್ದೆನಲ್ಲವೇ, ಸ್ವಯಂ ಜಾಗರೂಕತೆ. ಅಂತಹ ಸಂದರ್ಭಗಳಲ್ಲಿ ನಮ್ಮಿಬ್ಬರ ನಡುವೆ ಎಂತೆಂತದೋ ಅಸಂಬದ್ಧ ಮಾತುಕತೆಗಳು ಜರುಗುತ್ತಿದ್ದವು. ಅದಕ್ಕೆ ದಿಕ್ಕು ದೆಸೆ ಇದ್ದಿಲ್ಲ, ಅರ್ಥವೂ ಇರುತ್ತಿರಲಿಲ್ಲ. ತೂಕಡಿಸುವ ಇಬ್ಬರು ಮಾತಾಡ ಹತ್ತಿದರೆ ಹೇಗೆ ಕಾಣಿಸುತ್ತದೆ?

ಸಾಹಿತ್ಯದ ವಿಚಾರ ಮಾತಾಡಬಹುದಿತ್ತು. ಆದರೆ ನನ್ನ ಸ್ನೇಹಿತರೆಲ್ಲರೂ ಸಾಹಿತ್ಯೇತರ ಆಸಕ್ತಿಯುಳ್ಳವರು. ಅಪ್ಪಿ ತಪ್ಪಿಯೂ ನಾನು ಅಂತವರೊಂದಿಗೆ ಸಾಹಿತ್ಯಿಕ ಚರ್ಚೆಗಿಳಿಯುವುದಿಲ್ಲ. ಒಂದೆರಡು ಸಲ ಪ್ರಯತ್ನಿಸಿ ಅನುಭವಿಸಿ ತಲೆ ಚಚ್ಚಿಕೊಳ್ಳೋಣ ಎಂದೆನಿಸಿಬಿಟ್ಟಿದೆ. ಅವರ ಆಲೋಚನೆಗಳು ಎತ್ತಲೋ ನಮ್ಮ ಆಲೋಚನೆಗಳು ಇನ್ನೆತ್ತಲೋ. ಇನ್ನೂ ನೇರವಾಗಿ ಹೇಳಬೇಕಂದರೆ ಅವರ ಭಾಷೆಗೂ ನಮ್ಮ ಭಾಷೆಗೂ ಭಾರೀ ಬಿಡುತ್ತೆ. ನಿಜವೇನಂದರೆ ಅವರ ಭಾಷೆ ಎಂದಿನಂತೆಯೇ ಇರುತ್ತೆ, ನಮ್ಮದೇ ಕಾಲಾನಂತರ ಮಾರ್ಪಾಡು ಹೊಂದಿರುತ್ತೆ. ಹಾಗಾಗಿ “ಸಣ್ಣೋನಿದ್ದಾಗ ಚನ್ನಾಗೇ ಇದ್ದ ಪುಸ್ತಕಗಳನ್ನ ಓದೋಕೆ ಶುರುಮಾಡಿದ ಮೇಲೆ ಕೆಟ್ಟೋದ” ಅಂತ ಅವರೆಲ್ಲ ಬೈಕೊಳ್ಳೋದರಲ್ಲಿ ಆಶ್ಚರ್ಯಪಡುವಂತದ್ದೇನಿಲ್ಲ. ಚಾಲ್ತಿಯಲ್ಲಿರುವ “ಕಾಮನ್ ಸೆನ್ಸ್” ನಮ್ಮ ಸಾಹಿತ್ಯದಲ್ಲಿಲ್ಲ ಅನ್ನೋದು ನನ್ನ ಅನಿಸಿಕೆ ಹಾಗೂ ವಿಷಾದಕರ ಸತ್ಯ. ಆದರೆ ಅದೇ ಹೊತ್ತಲ್ಲಿ ಸಾಹಿತ್ಯೇತರ ಮಂದಿಯನ್ನು ಒಪ್ಪಿಸಲೋಸುಗ ಜನಜ್ಜನಿತ ಕಾಮನ್ ಸೆನ್ಸನ್ನು ಸಾಹಿತ್ಯದಲ್ಲಿ ತುರುಕಿಬಿಟ್ಟು ಅವರಿಗೆ ಓದಲು ಕೊಟ್ಟರೆ… ಅವರು ಅವರಿಗೆ ಬೇಕಾದಂತೆಯೇ ಓದಿಕೊಳ್ಳಬಹುದು, ಹೇಗಿದ್ದರೂ ಅವರು ಎಂದಿಗೂ “ಸಾಹಿತ್ಯೇತರ” ವಿಧವೇ ಅಲ್ಲವೇ. ಇದು ನನ್ನ ಜಿಜ್ಞಾಸೆ. ಹಾಗೆ ನೋಡಿದರೆ ಎರಡನ್ನೂ ತೂಗಿಸಿಕೊಂಡು ಗೆದ್ದವರು ಕೆಲವೇ ಕೆಲವರು. ಉದಾಹರಣೆಗೆ ತೇಜಸ್ವಿ. ಸೋತಿರುವವರು ಹಲವಾರು. ಅವರನ್ನೆಲ್ಲ ಉದಾಹರಿಸಬೇಕಿಲ್ಲ. ಅಲ್ಲಲ್ಲಿ ತೇಜಸ್ವಿಯವರನ್ನೂ ಮಂದಿ ತಮಗೆ ಹ್ಯಾಗೆ ಬೇಕೋ ಹಾಗೆ ಓದಿಕೊಂಡದ್ದಿದೆ. ಇರಲಿ, “ಕಾಮನ್ ಮ್ಯಾನ್’ ಗೋಸ್ಕರ ಬರೆಯುವಂತಿದ್ದರೆ “ಕಾಮನ್ ಸೆನ್ಸ್” ಯುಕ್ತ ಸಾಹಿತ್ಯ ರಚಿಸಬೇಕು, ಗಂಭೀರ ಓದುಗರಿಗೆ ಅವರನ್ನು ಮತ್ತೇರಿಸುವ ಕಠಿಣ “ವ್ಯಾಕರಣ” ಬಳಸಬೇಕು ಅನ್ನೋದು ನನ್ನ ಅಭಿಮತ. ಮತ್ತು ಜಗತ್ತಿನಲ್ಲಿ ಹ್ಯಾಗೆ ಎಲ್ಲರದ್ದೂ ಒಂದೊಂದು ಬಗೆಯ ಮುಖಚರ್ಯೆಯೋ ಹಾಗೆ ಬರವಣಿಗೆಯಲ್ಲೂ ಬರೆಯುವ ಅಷ್ಟೂ ಮಂದಿ ತಮ್ಮದೇ ಚರ್ಯೆಯಿಂದ ಬರೆಯಬೇಕೆಂಬುದು ನನ್ನ ಆಸೆ. ನೂರೆಕರೆಗೂ ಜೋಳ ಚೆಲ್ಲಿದರೆ ಹುಚ್ಚ ಅಂತಾರೆ. ಹುಚ್ಚನೇ ಇರ್ತಾನೆ ಅವನು.

ಅವತ್ತೇನಾಯಿತೋ ನನ್ನ ಸ್ನೇಹಿತ ಇದ್ದಕ್ಕಿದ್ದಂತೆ, “ನೀನು ಓದಿರುವ ಯಾವುದಾದರೂ ಒಂದು ಪುಸ್ತಕದ ಕತೆ ಹೇಳು” ಎಂದುಬಿಟ್ಟ. ನನ್ನೊಳಗೆ ಕ್ರಮವಾಗಿ ಆಶ್ಚರ್ಯ, ಉದ್ವೇಗ, ಉತ್ಸಾಹ! ಮತ್ತೆ ಹಿಂದುಮುಂದೂ ಯೋಚಿಸದೆ ತಕ್ಷಣಕ್ಕೆ ಯಾವ ಕತೆ ಹೇಳಬೇಕೆಂದು ಹೊಳೆದು ಬಿಟ್ಟಿತ್ತು. ಸರಿಯಾಗಿ ನೆನಪಿಲ್ಲ ಆ ಪುಸ್ತಕವನ್ನು.. ಅದೇ ತಾನೆ ಓದಿ ಮುಗಿಸಿದ್ದೆನೋ ಅಥವಾ ಅದಾದ ನಂತರ ಇನ್ಯಾವುದಾದರೂ ಓದಿದ್ದೆನೋ ಎಂದು. ಆದರೆ ಓದಿ ಕನಿಷ್ಟ ಒಂದೆರಡು ತಿಂಗಳುಗಳಾದರೂ ಕಳೆದಿತ್ತು. ಆದರೂ ಕತೆಯಿನ್ನೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿತ್ತು. ಪರ್ಲ್ .ಎಸ್. ಬಕ್ ಅವರ “ದ ಗುಡ್ ಅರ್ಥ್” ಅನ್ನೋ ಕಾದಂಬರಿ ಅದು. ಅಲ್ಲಿವರೆಗೆ ನನಗೆ ಆಕೆಯ ಪರಿಚಯವೇ ಇರಲಿಲ್ಲ. ಆ ಪುಸ್ತಕವನ್ನ ಓದೋಕೆ ಯಾರೂ ಸೂಚಿಸಿರಲಿಲ್ಲ. ಅದು ಹ್ಯಾಗೋ ಏನೋ ಎತ್ತಿಕೊಂಡಿದ್ದೆ, ಓದಿ ನನಗೆ ಸಿಕ್ಕ ಸುಖ ಅಷ್ಟಿಷ್ಟಲ್ಲ. ನಾನು ಬರೆವ ಕಥೆಗಳಲ್ಲಿ ಬಿಟ್ಟು ನನಗೆ ಎಲ್ಲೂ ಉತ್ಪ್ರೇಕ್ಷೆಯ ಅಲಂಕಾರಿಕ ಮಾತುಗಳನ್ನು ಆಡಲಿಕ್ಕೆ ಬೇಕೆಂದರೂ ಬರಲ್ಲ. ತಿಣುಕುತ್ತೇನೆ. ಹಾಗಾಗಿ ಆ ಕಾದಂಬರಿ ಬಗ್ಗೆ ನಾನಿಲ್ಲಿ ಅಭಿವ್ಯಕ್ತಿಸುತ್ತಿರುವ ಭಾವನೆ ನನಗಾದ ಅನುಭವಕ್ಕಿಂತ ಅರ್ಧಕ್ಕರ್ಧ ಕಡಿಮೆ. ಓದಿದಾದನಂತರ ಮನಸ್ಸು ಒಂಥರ ಸಮೃದ್ಧವಾಗಿತ್ತು. ತುಂಬಿ ಬಂದಿತ್ತು. ಒಳ್ಳೆ ಮಳೆ ಆದಾಗ ನೆಲವೆಲ್ಲ ಹಸಿರಾಗುತ್ತಲ್ಲ ಹಾಗೆ. “ಕಾಡಿತು” ಎಂದು ಬಳಸಲಾರೆ, ನನಗೇನೋ ಪುಸ್ತಕಗಳು “ಕಾಡುವುದು” ಅನ್ನುವುದನ್ನ ಒಪ್ಪಿಕೊಳ್ಳಲಾಗುವುದಿಲ್ಲ. ಕಾಡುವುದಂದರೆ ತೊಂದರೆ ಕೊಡುವುದು, ಅನ್ನಿಸುವ ಹಾಗ ಕೇಳಿಸುತ್ತದೆ. ಬಹುಶಃ ಆ ಪದವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಯೇ ಬೇರೆಯಿದೆಯೇನೋ. ಬದಲಾಗಿ ತಿಂಗಳಾನುಗಟ್ಟಲೆ “ಮಿಂದಿದ್ದೆ” ಎನ್ನಬಲ್ಲೆ. ಈಜುಕೊಳದಲ್ಲಿ ಸುಮಾರು ಹೊತ್ತು ಸುಮ್ಮನೆ ಎಮ್ಮೆ ತರ ಮಲಗಿರುವ ಸುಖವಿದೆಯಲ್ಲ, ಕೈಕಾಲು ಶರೀರ ಚಲಿಸದೆ, ತೇಲಿಕೊಂಡು…. ಆ ಬಗೆ.

ನಿಜವೇನಂದರೆ ಅವರ ಭಾಷೆ ಎಂದಿನಂತೆಯೇ ಇರುತ್ತೆ, ನಮ್ಮದೇ ಕಾಲಾನಂತರ ಮಾರ್ಪಾಡು ಹೊಂದಿರುತ್ತೆ. ಹಾಗಾಗಿ “ಸಣ್ಣೋನಿದ್ದಾಗ ಚನ್ನಾಗೇ ಇದ್ದ ಪುಸ್ತಕಗಳನ್ನ ಓದೋಕೆ ಶುರುಮಾಡಿದ ಮೇಲೆ ಕೆಟ್ಟೋದ” ಅಂತ ಅವರೆಲ್ಲ ಬೈಕೊಳ್ಳೋದರಲ್ಲಿ ಆಶ್ಚರ್ಯಪಡುವಂತದ್ದೇನಿಲ್ಲ. ಚಾಲ್ತಿಯಲ್ಲಿರುವ “ಕಾಮನ್ ಸೆನ್ಸ್” ನಮ್ಮ ಸಾಹಿತ್ಯದಲ್ಲಿಲ್ಲ ಅನ್ನೋದು ನನ್ನ ಅನಿಸಿಕೆ ಹಾಗೂ ವಿಷಾದಕರ ಸತ್ಯ.

ನನ್ನ ಸ್ನೇಹಿತ ಸರಿಯಾದ ಸಮಯದಲ್ಲಿ ನನ್ನನ್ನು ಕತೆ ಹೇಳು ಅಂತ ಕೇಳಿದ್ದ. ಕತೆಯು ಹದವಾಗಿ ಮನಸ್ಸಿಗೆ ಇಳಿದು ಕ್ರಮೇಣ ತಿಳಿಯಾಗಿತ್ತು, ದಾರಿಯುದ್ದಕ್ಕೂ ಇಂಚಿಂಚೂ ಬಿಡದೆ ಕಾದಂಬರಿಯನ್ನು ಮೌಖಿಕವಾಗಿ ವಾಚಿಸುತ್ತ ಬಂದೆ. ಮೈಸೂರಿನಿಂದ ತುಮಕೂರು ತಲುಪುವವರೆಗೂ…. ಮಡಿಕೇರಿಯಿಂದ ಹೊರಟು ಮೈಸೂರಿನ ತನಕ ಬೇಗ ತಲುಪಿದರೆ ಸಾಕಪ್ಪ ಎಂದು ಉಸಿರುಗಟ್ಟಿ ಕಾರು ಓಡಿಸಿದ್ದವನು ಎಕ್ಸಲೇಟರ್ ತುಳಿದರೆ ಎಲ್ಲಿ ತುಮಕೂರು ಸಿಕ್ಕಿಬಿಡುವುದೋ ಅನ್ನುವ ಆತಂಕದಿಂದ ನಿಧಾನಗತಿಯಲ್ಲಿ ಬಂದೆ. ಮತ್ತು ತುಮಕೂರು ತಲುಪಿದ ಮೇಲೆ ಯೋಚಿಸುತ್ತೀನಿ, ಎಲ್ಲಿಂದ ಬಂದೆ, ಯಾವ ರಸ್ತೆಯಲ್ಲಿ ಬಂದೆ, ಹ್ಯಾಗೆ ಬಂದೆ ಯಾವ ಯಾವ ಊರು ದಾಟಿದೆ, ಒಂದೂ ತಿಳಿಯುತ್ತಿಲ್ಲ. ಅಷ್ಟರ ಮಟ್ಟಿಗೆ ವಾಚನದಲ್ಲಿ ಪರವಶನಾಗಿಬಿಟ್ಟಿದ್ದೀನಿ.

ಇದು ನನ್ನ ಕತೆಯಾದರೆ ನನ್ನ ಸ್ನೇಹಿತನ ಕತೆ ಕೇಳಿ. ಜೀವನದಲ್ಲಿ ಎಂದೂ ಒಂದೂ ಪುಸ್ತಕ ಓದದವನು ಅವನು. ಸಾಹಿತ್ಯದ ಸ್ಪರ್ಷವೇ ಇಲ್ಲದವನು. ಅದಾದ ಮೇಲೆಯೂ ಅವನು ಬೇರೆ ಪುಸ್ತಕ ಓದಿರಲಿಕ್ಕಿಲ್ಲ. ಕಾರಣ ಅದು ಅವನ ಆಸಕ್ತಿಯ ವಿಷಯವಲ್ಲ ಹಾಗೂ ಅವನ ಬದುಕಿನ ಆದ್ಯತೆಗಳು ಬೇರೆ. ಅವತ್ತು ಮಾತ್ರ ನನ್ನಷ್ಟೇ ಅಥವಾ ನನಗಿಂತ ಹೆಚ್ಚು ಮಗ್ನನಾಗಿ ಆ ಕತೆಯನ್ನು ಕೇಳಿಸಿಕೊಂಡಿದ್ದ. ತುಮಕೂರು ತಲುಪಿದ ನಂತರ ಅವನಲ್ಲೂ ಅದೇ ಪರವಶತೆಯ ಅನುಭವ. ನಾವಿಬ್ಬರೂ ಮುಖ ಮುಖ ನೋಡಿಕೊಳ್ಳುತ್ತಿದ್ದೇವೆ. ಹ್ಯಾಗೆ ಬಂದೆವು ಅಂತ. ಅದಾದ ನಂತರ ನಾವು ಹಲವಾರು ಪ್ರವಾಸಗಳಲ್ಲಿ ಭಾಗಿಯಾಗಿದ್ದೇವೆ, ಪ್ರತಿ ಪ್ರವಾಸದಲ್ಲೂ ಆ ನೆನಪನ್ನು ಮೆಲುಕು ಹಾಗಿದ್ದೇವೆ, ಮತ್ತು ಪ್ರತಿ ಸಲವೂ ಅವನು ನಾನು ಹೇಳಿದ ಕತೆಯಲ್ಲಿ ಅರ್ಧದಷ್ಟಾದರೂ ನೆನಪಿಸಿಕೊಂಡು ಇನ್ನೊಬ್ಬರಿಗೆ ಹೇಳಿದ್ದಾನೆ. ಮತ್ತು ಸುಮಾರು ಪ್ರವಾಸಗಳಲ್ಲಿ ಅಂಥದೇ ಇನ್ನೊಂದು ಕತೆ ಇದ್ದರೆ ಹೇಳೋ ಎಂದು ಕೇಳಿದ್ದಾನೆ, ನಾನು ಸೋತಿದ್ದೇನೆ. ಒಮ್ಮೆ ಹೊರತಾಗಿ. ಅದೊಂದು ಸಲ ಕಾಮೂನ “ಔಟ್ ಸೈಡರ್” ವಾಚಿಸಿದ್ದೆ. ಆಗಲೂ ಅಷ್ಟೇ ತಾದ್ಯಾತ್ಮದಿಂದ ಆಲಿಸಿದ್ದ. ಆ ಕತೆಯ ಎಳೆಯನ್ನೂ ಆತ ಈಗ ಕೇಳಿದರೆ ನೆನಪಿಸಿಕೊಳ್ಳಬಲ್ಲ. ಆದರೆ ಔಟ್ ಸೈಡರ್ ವಾಚಿಸುವಾಗ ನಡುನಡುವೆ ನಾನು ಅವನ ಮನಸ್ಥಿತಿಯನ್ನು “ಸೆಟ್” ಮಾಡುತ್ತಿದ್ದೆ, ಆಳಕ್ಕಿಳಿಯಲು. ಕತೆಯನ್ನು ಸುಖಿಸಲು. “ದ ಗುಡ್ ಅರ್ಥ್” ಗೆ ಅದರ ಅಗತ್ಯವಿರಲಿಲ್ಲ.

ಸರಿ, “ದ ಗುಡ್ ಅರ್ಥ್” ನಲ್ಲಿ ಅಂಥದ್ದೇನಿದೆ? ಚೈನಾ ದೇಶ, ತುಂಬಾ ಹಿಂದೆ, ಅಂದರೆ ಜಪಾನ್ ಚೈನಾ ನಡುವೆ ಯುದ್ಧ ನಡೆಯುತ್ತಿದ್ದಂತ ಕಾಲ. ಒಂದೂರಲ್ಲಿ ಒಂದು ಶ್ರೀಮಂತ ಕುಟುಂಬವಿರುತ್ತದೆ. ಮನೆಯ ಒಡತಿ ವೃದ್ಧೆ, ಮಕ್ಕಳು ಸೋಂಬೇರಿಗಳು, ಓಪಿಯಂ(ಮಾದಕ) ಸೇವಿಸುತ್ತಿರುವವರು. ಮನೆಯಲ್ಲಿ ಯಾರೂ ಕೆಲಸ ಮಾಡದಂತ ಕುಟುಂಬ ಕ್ರಮೇಣ ತನ್ನ ಶ್ರೀಮಂತಿಕೆ ಕಳೆದುಕೊಳ್ಳುತ್ತದೆ. ಅವರ ಮನೆಯಲ್ಲಿ ಓ-ಲಾನ್ ಅನ್ನೋ ಸೇವಕಿ, ಅದೇ ಊರಲ್ಲಿರುವ ವಾಂಗ್ ಲಂಗ್ ಅನ್ನೋ ಬಡವ ಪ್ರೀತಿಸಿ ಮದುವೆ ಆಗ್ತಾರೆ. ಕಷ್ಟ ಪಟ್ಟು ದುಡಿತಾರೆ. ಶ್ರೀಮಂತ ಕುಟುಂಬ ತನ್ನ ಪತನದ ಹಾದಿಯಲ್ಲಿ ಮಾರಲಿಟ್ಟ ಹೊಲದ ಚೂರು ಭಾಗವನ್ನು ದಂಪತಿ ಕೊಂಡುಕೊಂಡು ಇನ್ನೂ ದುಡಿಯುತ್ತಾರೆ. ಆದರೆ ಅಷ್ಟರಲ್ಲಿ ಬರಗಾಲ ಬಂದುಬಿಡುತ್ತದೆ. ಓ ಲಾನ್ ತನಗೆ ಎರಡನೇ ಮಗುವಾಗುವಾಗ ಹೊಟ್ಟೆ ತೊಳಸಿಕೊಂಡುಬಿಡುತ್ತಾಳೆ, ಬದುಕಿರುವವರಿಗೇ ಅನ್ನ ಇಲ್ಲ ಅಂತ. ಕೊನೆಗೆ ಅವರು ಹಳ್ಳಿ ಬಿಟ್ಟು ನಗರ ಸೇರಬೇಕಾದ ಪ್ರಸಂಗ ಬರುತ್ತದೆ. ನಗರದಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಾರೆ, ವಾಂಗ್ ಲಂಗ್ ರಿಕ್ಷಾ ಸೈಕಲ್ ತುಳಿಯುತ್ತಾನೆ, ಓ ಲಾನ್ ಮನೆಗೆಲಸ ಮಾಡ್ತಾಳೆ. ಬಡತನ ತೀರಲ್ಲ. ನಗರದ ರೀತಿರಿವಾಜಿಗೆ ಹೊಂದಿಕೊಳ್ಳಲು ತುಂಬ ಕಷ್ಟ ಪಡುತ್ತಾರೆ.


ಕಮ್ಯೂನಿಸ್ಟ್ ದೊಂಬಿಯೊಂದು ನಗರದ ಶ್ರೀಮಂತನೊಬ್ಬನ ಮನೆ ಮೇಲೆ ದಾಳಿ ಮಾಡಿದಾಗ ಆ ಶ್ರೀಮಂತ ಹೆದರಿ ದೊಂಬಿಯಲ್ಲಿ ಅದು ಹೆಂಗೋ ಸೇರಿಕೊಂಡ ವಾಂಗ್ ಗೆ ತನ್ನ ದುಡ್ಡನ್ನೆಲ್ಲ ಕೊಡುತ್ತಾನೆ. ಇನ್ನೊಂದು ಮನೆಯ ಧ್ವಂಸದಲ್ಲಿ ಹೆಂಡತಿಗೆ ಒಡವೆ ಸಿಗುತ್ತವೆ. ಎಲ್ಲವನ್ನೂ ಎತ್ತಿಕೊಂಡು ಅವರು ಹಳ್ಳಿಗೆ ಮರಳಿ ಪತನದಲ್ಲಿದ್ದ ಕುಟುಂಬದ ಮನೆ ಕೊಂಡುಕೊಳ್ಳುತ್ತಾರೆ. ಕ್ರಮೇಣ ವಾಂಗ್ ಗೆ ಲೋಟಸ್ ಅನ್ನೋ ಸೂಳೆ ಸಿಗುತ್ತಾಳೆ. ಖರ್ಚು ಮಾಡುತ್ತಾನೆ. ಹೆಂಡತಿ… ಮಕ್ಕಳೂ… ಪುನಃ ನಗರ ಸೇರುವುದೂ… ಕತೆ ಹೀಗೆ ಸಾಗುತ್ತದೆ. ಮತ್ತು ಬಕ್ ಅದೆಷ್ಟು ಸುಂದರವಾಗಿ ಕತೆಯನ್ನು ಕಟ್ಟಿದ್ದಾಳೆಂದರೆ ಒಂದಕ್ಷರ ತಪ್ಪಿಸಿದರೂ ಏನೋ ಕಳಕೊಂಡ ಭಾವ ಉಂಟಾಗುತ್ತದೆ. ನಾನು ವಾಚಿಸಿದ ಮೇಲಿನ ನಾಲ್ಕು ಸಾಲು ಆ ಕಾದಂಬರಿ ಅಲ್ಲವೇ ಅಲ್ಲ. ಅದರೊಳಗೆ ಇನ್ನೇನೋ ಬೇರೆ ಇದೆ. ಕಾದಂಬರಿ ಓರ್ವ ಹಳೆಯ ಮುದುಕಿ ಹಜಾರದಲ್ಲಿ ಕೂತು ಹೇಳಿದ ಕತೆಯಂತೆ ರಸವತ್ತಾಗಿ ಓದಿಸಿಕೊಳ್ಳುತ್ತದೆ. ಬಕ್ ಹಳೆಕಾಲದ ಅಜ್ಜಿಯಂತೆಯೇ ಕಾಣುತ್ತಾಳೆ. ಪ್ರತಿಯೊಂದು ಘಟನೆಯೂ ಇಲ್ಲೇ ನಮ್ಮ ಸುತ್ತ ಮುತ್ತಲೇ ಜರುಗಿದಂತೆ ಭಾಸವಾಗುತ್ತದೆ. ಎಲ್ಲೂ ನಿಮಗೇನೋ ಅಜ್ಜಿ ಒಳಾರ್ಥ ಸಿದ್ಧಾಂತ ತಲುಪಿಸುತ್ತಿದ್ದಾಳೆ ಅನ್ನಿಸುವುದೇ ಇಲ್ಲ. ನಿರೂಪಕಿಯಾಗಿ ಎಲ್ಲೂ ತನ್ನ ಅಭಿಪ್ರಾಯ ಮಂಡಿಸುವುದಿಲ್ಲ. ಮತ್ತು ನೆನಪಿರಲಿ, ಈ ಕಾದಂಬರಿ ಅವಳಿಗೆ ಮುಂದೆ ನೋಬೆಲ್ ಪುರಸ್ಕಾರ ಕೊಡಿಸುತ್ತದೆ. ಪುಲಿಟ್ಜರ್ ಕೊಡಿಸುತ್ತದೆ.

ಈಗ ಮೊದಲು ಮಾತಾಡುತ್ತಿದ್ದ “ಸಾಹಿತ್ಯ”ದ ಬಗೆಗೆ ಬರೋಣ. ಈ ಕತೆ ಓರ್ವ ಸಾಹಿತ್ಯೇತರ ಸ್ನೇಹಿತನಿಂದ ಕೇಳಿಸಿಕೊಂಡಿತು, ಅವನ ಮನಸ್ಸಿನೊಳಗೆ ಇಳಿಯಿತು. ಮತ್ತು ಗಂಭೀರ ಸಾಹಿತ್ಯದ ಮೌಲ್ಯವನ್ನೂ ಪಡೆಯಿತು. ಹ್ಯಾಗೆ? ನನಗನ್ನಿಸುತ್ತದೆ, ಇದು ನಮ್ಮ ಸುತ್ತ ಮುತ್ತ ಜರುಗುವ ಸ್ವಾಭಾವಿಕ ಕತೆ. ಕತೆಯಲ್ಲೇ ಹೇಳುವುದೆಲ್ಲವೂ ಇದೆ. ನಿರೂಪಕ ಹೊಸತಾಗಿ ಏನನ್ನೂ ಹೇಳಬೇಕಿಲ್ಲ. ಬಹುಶಃ ಈ ಕಾದಂಬರಿ ನನ್ನ ಮೇಲೆ ಪ್ರಭಾವಿಸಿದ್ದಿರಬೇಕು, ಹಾಗಾಗಿ ನನ್ನ ಮೊದಲ ಕಥಾಸಂಕಲನದಲ್ಲಿ ನಿರೂಪಕನ ಅಭಿಪ್ರಾಯ ಕಡಿಮೆಯಿದೆ. ಆದರೆ ಸಹೃದಯ ಹಿತೈಷಿಗಳು ಗುರುತಿಸಿದಂತೆ ಅಲ್ಲಲ್ಲಿ ನಿರೂಪಕನ ಮಧ್ಯಸ್ಥಿಕೆ ಇರಬೇಕಿತ್ತು, ಅದಿಲ್ಲದೆ ಕೆಲವು ಕಡೆ ಗೊಂದಲ ಸೃಷ್ಟಿಸಿದೆ. ಅಂದರೆ ಅಂತಹ ಸ್ಥಳಗಳಲ್ಲಿ ನನ್ನ ಪ್ರಯತ್ನ ಸೋತಿದೆ. ಕಮೂನ “ಔಟ್ ಸೈಡರ್” ಕೂಡ, ಓರ್ವ ಸಾಹಿತ್ಯೇತರನಿಗೆ ವಾಚಿಸುವಂತಹ ಕತೆ. ಎಂದೂ ಸಾಹಿತ್ಯ ಓದದವನಲ್ಲೂ ಅದು ಗಮನಿಸುವಂತಹ ಭಾವವನ್ನು ಹುಟ್ಟಿಸುತ್ತದೆ. ಅವನ “ದ ಫಾಲ್” ಕೂಡ ಹಾಗೆಯೇ. ಎಷ್ಟೋ ಜನ “ದ ಫಾಲ್” ಗಂಭೀರ ಸಾಹಿತ್ಯದ ಪೈಕಿಗೆ ಸೇರಿಸಿಬಿಡುತ್ತಾರೆ. ಆದರೆ ನನಗಂತೂ ಅದು ಅದೆಷ್ಟು “ಎಂಗೇಜಿಂಗ್” ಆಗಿತ್ತು ಅಂದರೆ… ಕೇವಲ ನಲವತ್ತು ಐವತ್ತು ಪೇಜು, ಗಂಭೀರ ಸಾಹಿತ್ಯದಂತೆ ನಿಧಾನವಾಗಿಯೆ ಓದಿಸಿಕೊಂಡಿತು, ಆದರೆ ಕಥನಾ ಪ್ರಭಾವ ಇದೆಯಲ್ಲ, ಆ ಪರಿಣಾಮ ಅಗಾಧವಾಗಿತ್ತು.

ಯಾವ ಭಟ್ಟನಾದರೂ ಸರಿ ಪ್ರತಿದಿನ ಅದೇ ಅಡಿಗೆ ಬಡಿಸುತ್ತಾನೆಯೇ? ಇಲ್ಲ. ಜೀವನ ನಿಜಕ್ಕೂ ಬೋರ್ ಅನಿಸುತ್ತಿರಬೇಕು. ಆಗ ಮಾತ್ರ ನಾವು ಬೇರೇನಾದರೂ ಮಾಡಲು ಸಾಧ್ಯ. ಯಥಾಸ್ಥಿತಿಯಲ್ಲಿ ಸುಖ ಕಾಣುವವನು, ಜೀವನ ಪೂರ್ತಿ ಒಂದೇ ತರ ಅಂಗಿ ತೊಡುವವನು (ಸ್ಟೀವ್ ಜಾಬ್ಸ್ ಒಂದೇ ಅಂಗಿ ತೊಟ್ಟರೂ ತನ್ನ ಬೋರ್ ಡಮ್ ಅನ್ನು ತಾನು ತಯಾರಿಸುವ ಪ್ರಾಡಕ್ಟ್ ಗಳ ವೆರೈಟಿಗಳಲ್ಲಿ ತೀರಿಸಿಕೊಳ್ಳುತ್ತಿದ್ದ) ಒಂದೇ ಬಣ್ಣಕ್ಕೆ ಹೊಂದಿಕೊಂಡವನು ಕ್ರಮೇಣ ಕಟ್ಟರ್ ವಾದಿಯಂತಾಗಿಬಿಡುತ್ತಾನೆ.