ಬೇಂದ್ರೆಯವರು ತಮ್ಮ ಕವನದಲ್ಲಿ ಭೂಮಿತಾಯಿಯನ್ನು ‘ಚಿಗರಿಗಂಗಳ ಚೆಲುವಿ’ ಎಂದು ಕರೆದಿದ್ದಾರೆ. ಚಂಚಲವಾಗಿ ಚಲಿಸುವ ಚಿಗರಿಯ ಕಣ್ಣುಗಳು ಸೌಂದರ್ಯಕ್ಕೆ ಹೆಸರಾದಂತಹವು. ಸಂಸ್ಕೃತ ಸಾಹಿತ್ಯದಲ್ಲಿಯೂ ಸಹ ಸುಂದರ ಕಣ್ಣುಗಳ ಸ್ತ್ರೀಯನ್ನು ‘ಮೃಗನಯನಿ’ ಎಂದೇ ಕರೆದಿದ್ದಾರೆ. ಆದರೆ ಈ ಕವನದಲ್ಲಿ ಭೂಮಿತಾಯಿಯು ಹೆದರಿದ ಹರಿಣಿ, ಅವಳ ಕಣ್ಣುಗಳು ಅತ್ತಿತ್ತ ಚಲಿಸುವ ಬೆದರಿದ ಕಣ್ಣುಗಳು.

‘ಚಿಗರಿಗಂಗಳ ಚೆಲುವಿ’ ಕವನವು ಮಾನವನ ವಿಕೃತ, ಜೀವಿರೋಧಿ ನಾಗರಿಕತೆಯ ದುರಂತವನ್ನು ಸೂಚಿಸುವ ಕವನವಾಗಿದೆ. ಮಾನವ-ನಾಗರಿಕತೆ ಪ್ರಾರಂಭವಾಗುವ ಮೊದಲು, ಈ ಸೃಷ್ಟಿಯು ಒಂದು ಸುಂದರವಾದ ಬನವಾಗಿತ್ತು. ಅಲ್ಲಿರುವ ಸಸ್ಯಸಂಕುಲ ಹಾಗು ಪ್ರಾಣಿವರ್ಗಗಳು ಸಾಮರಸ್ಯದಲ್ಲಿ ಜೀವಿಸುತ್ತಿದ್ದವು, (ಆದಮನ ಈಡನ್ ಉಪವನವನ್ನು ಈ ಪರಿಸ್ಥಿತಿಗೆ ಹೋಲಿಸಬಹುದು.)

ಮಾನವ-ನಾಗರಿಕತೆ ಪ್ರಾರಂಭವಾದಾಗಿನಿಂದ ನಿಸರ್ಗದಲ್ಲಿದ್ದ ಸಾಮರಸ್ಯ ಹಾಳಾಯಿತೆನ್ನಬಹುದು. ಮಾನವನ ಸ್ವಾರ್ಥ ಹಾಗು ದುರಾಸೆಯ ಮೊದಲ ಪೆಟ್ಟು ಬಿದ್ದದ್ದು ಸಸ್ಯಸಂಕುಲಕ್ಕೆ ಹಾಗು ಪ್ರಾಣಿವರ್ಗಕ್ಕೆ. ಬಳಿಕ ಭೂಮಿಗಾಗಿ, ಭೂಮಿಯ ಸಂಪತ್ತಿಗಾಗಿ ಮನುಷ್ಯವರ್ಗದಲ್ಲಿಯೇ ನಡೆದ ಆಂತರಿಕ ಹೊಡೆದಾಟಗಳಿಂದಾಗಿ ಸಂಕಷ್ಟಗಳ ಸರಪಳಿಯೇ ಪ್ರಾರಂಭವಾಯಿತು. ಇಂತಹ ಪರಿಸ್ಥಿತಿಯನ್ನು ಈ ಕವನದಲ್ಲಿ ಹಂತಹಂತವಾಗಿ ವರ್ಣಿಸಲಾಗಿದೆ. ಭೂಮಿತಾಯಿಯ ಸಂಕಟವನ್ನು ಕವಿಯು ತನ್ನ ಗೆಳೆಯನೊಡನೆ ತೋಡಿಕೊಳ್ಳುವ ರೀತಿಯಲ್ಲಿ ಕವನವನ್ನು ಬರೆಯಲಾಗಿದೆ. ಕವನದ ಪೂರ್ತಿಪಾಠ ಹೀಗಿದೆ:

ಚಿಗರಿಗಂಗಳ ಚೆಲುವಿ ಚೆದsರಿ ನಿಂತಾಳ ನೋಡೋ
ಬೆದsರಿ ನಿಂತಾಳ ||ಪಲ್ಲವಿ||


ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ
ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ.
ಅದನ ತಾ ಕಂಡು ಕೊರಗ್ಯಾsಳೊ
ಮರುಗ್ಯಾಳೊ
ಸೊರಗ್ಯಾಳೋ
ಹೂ ಕಾಯಿ ಹಣ್ಣು ತುಂಬಿದ ಬನದಾsಗ || ಚಿಗರಿಗಂಗಳ…


ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs
ದಿನ್ನಿ ಮಡ್ಡಿ ಗುಡ್ಡ ಅದರ್ಯಾವ;
ಅದನ ತಾ ಕಂಡು ನೊಂದಾsಳೊ
ಬೆಂದಾsಳೊ
ಅಂದಾsಳೋ
’ಇದು ಎಂಥಾ ಜೀವದ ಬ್ಯಾಟಿ ಹಾಡೇ ಹಗಲs’ || ಚಿಗರಿಗಂಗಳ….

 

 

 

 

 

 

 


ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿದ್ಹಾಂಗ ||ಚಿಗರಿಗಂಗಳ……


ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;
ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ || ಚಿಗರಿಗಂಗಳ…..

ಕವನ ಪ್ರಾರಂಭವಾಗುವುದು ಸಾಮರಸ್ಯದಿಂದ ಕೂಡಿದ ಸಮೃದ್ಧ ನಿಸರ್ಗದ ವರ್ಣನೆಯೊಂದಿಗೆ.
“ಹೊಳಿಹಳ್ಳ ತೊರೆದಾವೋ
ಗೆಣೆಹಕ್ಕಿ ಬೆರೆದಾವೋ”
ನಿಸರ್ಗದ ಸಂಪನ್ಮೂಲಗಳಾದ ಹಾಗು ಜೀವರಾಶಿಯ ಬೆಳವಣಿಗೆಗೆ ಅವಶ್ಯವಿರುವ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಈ ಸಂಪನ್ಮೂಲಗಳಿಂದ ಪೋಷಣೆಯನ್ನು ಪಡೆಯುವ ಜೀವಸಂಕುಲವು ಅಂದರೆ ಹಕ್ಕಿ ಮೊದಲಾದವುಗಳು ಬೆರೆದಿವೆ. ಈ ರೀತಿಯಾಗಿ ಸೃಷ್ಟಿಕ್ರಮವು ಮುಂದುವರೆದಿದೆ. (ಪ್ರೇಮವನ್ನು ಬಣ್ಣಿಸುವಾಗ ಪಕ್ಷಿಸಂಕೇತವನ್ನೇ ಬಳಸುವದು ರೂಢಿಯಾಗಿದೆ. ಗೆಣೆಹಕ್ಕಿ ಪದವನ್ನು ಸೃಷ್ಟಿಸುವ ಮೂಲಕ ಬೇಂದ್ರೆಯವರು ಎಷ್ಟು ನಿರಾಯಾಸವಾಗಿ ಛಂದಸ್ಸನ್ನು ಸಾಧಿಸಿದ್ದಾರೆ ಎನ್ನುವುದನ್ನು ಗಮನಿಸಬೇಕು.)

ಆದರೆ ಈ ಸಾಮರಸ್ಯದ ಪರಿಸ್ಥಿತಿಗೆ ಈಗ ಭಂಗ ಬಂದಿದೆ. ಇಂತಹ ಸಾಮರಸ್ಯವನ್ನು ಸಹಿಸಲಾರದ ಜೀವಿ ಇಲ್ಲೊಂದಿದೆ. ಅದು ಮಾನವ ಜೀವಿ. ಮಾನವನ ಹೊರತಾಗಿ ಉಳಿದೆಲ್ಲ ಪಶು, ಪಕ್ಷಿಗಳನ್ನು ನಾವು ಆದಿವರ್ಗದ ಜೀವಿಗಳು ಎನ್ನಬಹುದು. ಈ ಅಮಾಯಕ ಜೀವಿಗಳು ನಿಸರ್ಗದೊಡನೆ ಒಂದಾಗಿ ಬಾಳುತ್ತಿವೆ. ಆದರೆ ಮಾನವ ಎನ್ನುವ ಜೀವಿಗೆ ದುರಾಸೆ ಬಹಳ. ನಿಸರ್ಗದ ಸಂಪತ್ತನ್ನೆಲ್ಲ ತಾನೇ ಭೋಗಿಸುವ ಸ್ವಾರ್ಥ. ಬೇರೆ ಜೀವಿಗಳ ಸೌಖ್ಯವನ್ನು ಕಂಡರೆ ಸಹಿಸಲಾಗದ ಹೊಟ್ಟೆಕಿಚ್ಚು ಇವನಿಗೆ. ಅದಕ್ಕೆ ಬೇಂದ್ರೆ ಹೇಳುತ್ತಾರೆ:

“ಆಗದವರ ಹೊಟ್ಟಿ ಉರದಾವೋ
ಗೆಣೆಯಾ ಉರದಾವs
ಅಂಥವರ ದಿಟ್ಟಿ ಮನಿ ಮುರದಾವ.”

ಇಂಥವರ ಕೆಟ್ಟ ದೃಷ್ಟಿಯಿಂದಾಗಿ, ದುರಾಸೆಯ ನೋಟದಿಂದಾಗಿ ‘ಮನಿ ಮುರದಾವ’. ಇಲ್ಲಿಯವರೆಗೆ ಒಂದು ಕ್ರಮದಿಂದ ನಡೆಯುತ್ತಿದ್ದಂತಹ ಸಂಸ್ಥೆ, ಎಲ್ಲ ಜೀವಿಗಳಿಗೆ ನೆಲೆಯಾದ ನಿಸರ್ಗದ ಆಶ್ರಯ ಅಂದರೆ ‘ಮನಿ’ ಈಗ ಭಗ್ನವಾಗಿದೆ.

ಆದರೆ ಭೂಮಿತಾಯಿ ನಿಸ್ಸಹಾಯಕಳು. ತನ್ನ ಒಡಲೆಲ್ಲ ಹೂ, ಕಾಯಿ ಹಾಗು ಹಣ್ಣುಗಳಿಂದ ತುಂಬಿದೆ. ಅದನ್ನೆಲ್ಲ ದೋಚುತ್ತಿರುವ ಸ್ವಾರ್ಥಿಗಳನ್ನು ತಡೆಯುವದು ಹೇಗೆ?
ಹೀಗಾಗಿ ಅವಳು ಕೊರಗುತ್ತಿದ್ದಾಳೆ (ಪರಿಸ್ಥಿತಿಯ ಬಗೆಗೆ.)
ಮರಗುತ್ತಿದ್ದಾಳೆ (ದುರ್ಬಲರ ಬಗೆಗೆ.)
ಹಾಗು ಈ ಶೋಷಣೆಯಿಂದ ಸೊರಗುತ್ತಿದ್ದಾಳೆ (ಸ್ವತಃ.)

ಈ ದುರಾಕ್ರಮಣಕ್ಕೆ ಹೆದರಿದ ಅವಳು ಸ್ಥೈರ್ಯವನ್ನು ಕಳೆದುಕೊಂಡಿದ್ದಾಳೆ. ಆದುದರಿಂದ ಧಾವಿಸಲು ಯತ್ನಿಸುವ ಹರಿಣಿಯಂತೆ ಚೆದರಿ (scattered) ನಿಂತಿದ್ದಾಳೆ. ಯಾವ ಗಳಿಗೆಯಲ್ಲಿ ಯಾರು ಆಕ್ರಮಣ ಮಾಡುತ್ತಾರೊ ಎಂದು ಬೆದರಿ ನಿಂತಿದ್ದಾಳೆ. ಸ್ಥೈರ್ಯ ಹಾಗು ಧೈರ್ಯವನ್ನು ಕಳೆದುಕೊಂಡ ಹರಿಣಿ ಇವಳು. ಇದು ಈ ಕವನದ ಪಲ್ಲವಿ.

ಮೊದಲನೆಯ ನುಡಿಯಲ್ಲಿ ಬೆದರಿ ನಿಂತ ಹರಿಣಿಯ ಸ್ತಬ್ಧ ಚಿತ್ರವಿದೆ. ಎರಡನೆಯ ನುಡಿಯಲ್ಲಿ ಅವಳ ಮೇಲಾಗುತ್ತಿರುವ ಆಕ್ರಮಣದ ಚಿತ್ರಣವಿದೆ.

ಬ್ಯಾಟಿ ನಾಯೊದರ್ಯಾವೋ
ಹಸುಜೀವ ಬೆದರ್ಯಾವೋ
ಗಳಗಳನೆ ಗಿಡದೇಲಿ ಉದರ್ಯಾವೋ
ಗೆಣೆಯಾ ಉದರ್ಯಾವs

ಬೇಂದ್ರೆಯವರು ಈ ನುಡಿಯಲ್ಲಿ ಪಳಗಿಸಿದ ಬೇಟೆಯ ನಾಯಿಗಳ ಸಂಕೇತವನ್ನು ಬಳಸುತ್ತಿದ್ದಾರೆ. ಮಾನವನ ನಾಗರಿಕತೆಯಲ್ಲಿ ಪ್ರಗತಿಯಾಗಿದೆ. ಆತನೀಗ ತಾನೇ ಕಲ್ಲು ಬೀಸುವ ಶಿಲಾಯುಗದ ಮಟ್ಟವನ್ನು ದಾಟಿದ್ದಾನೆ. ಬೇಟೆಯಲ್ಲಿ ಬಳಸಲು ನಾಯಿಗಳನ್ನು ಬಳಸುವ ಮಟ್ಟಕ್ಕೇರಿದ್ದಾನೆ. ಅವನ ವಿಧ್ವಂಸಕ ಬುದ್ಧಿಶಕ್ತಿ ಬೆಳೆದಿದೆ. ಇಂತಹ ಬೇಟೆಗೆ ‘ಹಸುಜೀವ’ ಬೆದರ್ಯಾವೊ! ಹಸುಜೀವ ಅಂದರೆ ಸಾಧುಪ್ರಾಣಿಗಳು. ಅಪರೋಕ್ಷವಾಗಿ ಬೇಂದ್ರೆಯವರು ‘ದಾಳಿಗಾರ ಜನಾಂಗ’ವನ್ನು ಹಾಗು ದಾಳಿಗೆ ತುತ್ತಾಗುವ ಸಭ್ಯ ಜನಾಂಗವನ್ನು ಸೂಚಿಸುತ್ತಿದ್ದಾರೆ. ಸಮರಸ ಬಾಳನ್ನು ಪ್ರತಿನಿಧಿಸುವ ಪ್ರಕೃತಿಯೂ ಸಹ ಈ ಅತ್ಯಾಚಾರದಿಂದ ಕಂಪಿಸಿದೆ. ವನರಾಶಿಯು ಬರಗಾಲಕ್ಕೆ ತುತ್ತಾದರೆ, ಭೂಮಿಯು ಭೂಕಂಪನದಿಂದ ನಡುಗಿದೆ.

ಬೇಂದ್ರೆಯವರು ಈ ವರ್ಣನೆಯಲ್ಲಿ ಮಾಡುವ ಶ್ರೇಣೀಕರಣವನ್ನು ಗಮನಿಸಬೇಕು. ಮೊದಲು ಸಾಧುಪ್ರಾಣಿಗಳಿಗಾದ ಆಘಾತವನ್ನು ಬಣ್ಣಿಸಲಾಗಿದೆ. ಬಳಿಕ ಸಸ್ಯಗಳಿಗಾದ ಆಘಾತವನ್ನು ವರ್ಣಿಸಿದ್ದಾರೆ. ಆನಂತರ ನಿರ್ಜೀವ ವಸ್ತುಗಳಿಗಾದ
ಆಘಾತವನ್ನು ಹೇಳಿದ್ದಾರೆ. ಅಲ್ಲೂ ಸಹ ಮೊದಲು ‘ದಿನ್ನಿ’, ಬಳಿಕ ಅದಕ್ಕಿಂತ ದೊಡ್ಡದಾದ ‘ಮಡ್ಡಿ’, ಬಳಿಕ ಅದಕ್ಕೂ ದೊಡ್ಡದಾದ ‘ಗುಡ್ಡ’ ವನ್ನು ಚಿತ್ರಿಸಿದ್ದಾರೆ. ಈ ರೀತಿಯಾಗಿ ಕಲ್ಪನೆಯಲ್ಲೂ ಸಹ ಕ್ರಮಬದ್ಧತೆಯನ್ನು ಪಾಲಿಸುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ.

ಇಷ್ಟೆಲ್ಲ ಹಿಂಸೆಯನ್ನು ಅನುಭವಿಸುತ್ತಿರುವ ಭೂತಾಯಿ ನಿರ್ಜೀವ ವಸ್ತುವಲ್ಲ. ಆದುದರಿಂದಲೇ ‘ಇದು ಎಂಥಾ ಜೀವದ ಬ್ಯಾಟಿ ಹಾಡುಹಗಲೇ’ ಎಂದು ಅವಳು ಉದ್ಗರಿಸುತ್ತಾಳೆ. ವಸುಂಧರೆಗೆ ಪ್ರತಿ ಜೀವಿಯೂ… ಸಸ್ಯವೇ ಇರಲಿ ಅಥವಾ ಚಿಕ್ಕ ಪ್ರಾಣಿಯೇ ಇರಲಿ… ತನ್ನ ಮಗುವೇ. ಹೀಗಾಗಿ ಇಲ್ಲಿ ನಡೆಯುತ್ತಿರುವ ‘ಜೀವದ ಬೇಟೆ’ಯನ್ನು ಕಂಡು ಅವಳು ಶೋಕಿಸುತ್ತಿದ್ದಾಳೆ.

ಮೂರನೆಯ ನುಡಿಯಲ್ಲಿ ಮಾನವ-ನಾಗರಿಕತೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯಾಗಿದೆ. ಇದೀಗ ಆತ ರಾಜ್ಯಗಳನ್ನು ಕಟ್ಟಿಕೊಂಡಿದ್ದಾನೆ. ಪರರಾಜ್ಯಗಳನ್ನು ದೋಚಿ, ಆಕ್ರಮಿಸಿ ಚಕ್ರವರ್ತಿಯಾಗುತ್ತಿದ್ದಾನೆ. ಆದರೆ ನಾಗರಿಕತೆಯ ಈ ಆಟದಲ್ಲಿ ಸ್ವತಃ ಮಾನವನೇ ಬಲಿಯಾಗುತ್ತಿದ್ದಾನೆ.

ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿದ್ಹಾಂಗ

ಹೋರಾಟ, ರಾಜ್ಯವಿಸ್ತಾರ ಇವೆಲ್ಲ ಆಳುವವರ ಆಟ. ಆದರೆ ಹೋರಾಟದಲ್ಲಿ ತೊಡಗಿದ ಆಳುಗಳಿಗೆ ಹಾಗು ಅಮಾಯಕ ಪ್ರಜೆಗಳಿಗೆ ಈ ಹೋರಾಟವೆನ್ನುವುದು ಒಂದು ದುಃಸ್ವಪ್ನವಿದ್ದಂತೆ. ಕೌರವ-ಪಾಂಡವರ ಯುದ್ಧವೇ ಆಗಲಿ, ಜಾಗತಿಕ ಸಮರವೇ ಆಗಲಿ, ಸಾಮಾನ್ಯ ಜನತೆಗೆ ಬೇಕಾಗಿಲ್ಲ. ಅವರು ಗಾಳಕ್ಕೆ ಸಿಕ್ಕ ಮೀನಿನಂತೆ ಅನಿವಾರ್ಯವಾಗಿ ಈ ಹೋರಾಟದಲ್ಲಿ ಸಿಲುಕಿ ಘಾಸಿಯಾಗುತ್ತಾರೆ.

ಈ ಹೋರಾಟದಲ್ಲಿ ಗೆದ್ದವರು ಹಾಗು ಬದುಕುಳಿದವರು ಸತ್ತವರ ಮೇಲೆ ಬಾವುಟ ಹಾರಿಸುತ್ತಾರೆ. ಸೋತು ಬದುಕುಳಿದವರ ಪಾಡು ನಾಯಿಪಾಡು. ಅವರು ಅರೆಸತ್ತಂತೆ. ಅವರ ಬದುಕು ಕೊಳೆತು, ಹುಳತು ಹೋಗುತ್ತದೆ. ದಿನನಿತ್ಯದ ಅಳುವೊಂದೆ ಅವರಿಗೆ ಉಳಿದ ಬದುಕು. ಇದೆಲ್ಲವನ್ನು ಕಂಡ ಭೂಮಿತಾಯಿಗೆ ಹೇಗೆನ್ನಿಸುತ್ತದೆ? ನಾನಾ ಜೀವಿಗಳಿಗೆ ಜನ್ಮ ಕೊಡುತ್ತಿರುವ, ಅನ್ನ ಕೊಡುತ್ತಿರುವ ತಾಯಿ ವಸುಂಧರೆಗೆ ಹೇಗೆನ್ನಿಸುತ್ತದೆ?…’ ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿದ್ಹಾಂಗ’! Her womb is a repeated burial ground of her babies…. ಬೇಂದ್ರೆಯವರು ಕಲ್ಪಿಸಿದ ರೂಪಕಗಳಲ್ಲಿಯೆ ಅತಿ ಕಠೋರವಾದ ರೂಪಕವಿದು ಎನ್ನಬಹುದು. ಇದರಲ್ಲಿ ಶೋಕವಷ್ಟೇ ಅಲ್ಲ, ಕ್ರೌರ್ಯವೂ ಇದೆ.

ಕೊನೆಯ ನುಡಿಯಲ್ಲಿ ಭೂಮಿತಾಯಿಯ ಈ ಬವಣೆ ಕೊನೆಯಿಲ್ಲದ ಬವಣೆ ಎನ್ನುವ ಭಾವನೆಯನ್ನು ಕವಿ ವ್ಯಕ್ತಪಡಿಸುತ್ತಾನೆ:

ತನ್ನ ತಾ ಸುತ್ತ್ಯಾಳೊ
ಹೊತ್ತಿನ ಬೆನ್ಹತ್ತ್ಯಾಳೊ
ತಿಂಗಳನ ಬಗಲಾಗೆತ್ತ್ಯಾಳೊ
ಗೆಣೆಯಾ ಎತ್ತ್ಯಾಳೊ
ಉಕ್ಕುಕ್ಕುವ ದುಃಖ ಒಳಗೊತ್ತ್ಯಾಳೊ;

ವಾಸ್ತವತೆ ಹಾಗು ಕಲ್ಪನೆಗಳನ್ನು ಕರಗಿಸಿ ಒಂದಾಗಿಸುವ ಬೇಂದ್ರೆ ಪ್ರತಿಭೆಯನ್ನು ಇಲ್ಲಿ ಮತ್ತೊಮ್ಮೆ ಕಾಣುತ್ತೇವೆ. ಓರ್ವ ಅಸಹಾಯಕ ಸ್ತ್ರೀ, ಸಂಕಟಗಳಿಂದ ಪಾರಾಗಲು ತನ್ನ ಸೀಮಿತ ಪರಿಧಿಯಲ್ಲಿ ಸುತ್ತುವಳು ಎನ್ನುವ ಅರ್ಥವನ್ನು ಕೊಡುವ ಮೊದಲ ಸಾಲು, ಭೂಮಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವಾಸ್ತವವನ್ನೂ ಹೇಳುತ್ತದೆ. ಅದರಂತೆ ‘ಹೊತ್ತಿನ ಬೆನ್ಹತ್ತ್ಯಾಳೊ’ ಎನ್ನುವ ಸಾಲು ಅವಳು ತನ್ನ ದುಃಖಗಳನ್ನು ನಿವಾರಿಸಲು ಸಮಯವನ್ನು ನಿರೀಕ್ಷಿಸುತ್ತಿದ್ದಾಳೆ ಎನ್ನುವ ಅರ್ಥದ ಜೊತೆಗೇ, ಸೂರ್ಯನ (ಹೊತ್ತಿನ) ಸುತ್ತಲೂ ತಿರುಗುವ ಭೂಮಿಯನ್ನು ಸಹ ಸೂಚಿಸುತ್ತದೆ. ‘ತಿಂಗಳನ ಬಗಲಾಗೆತ್ತ್ಯಾಳೊ’ ಎನ್ನುವ ಸಾಲು, ಭೂಮಿತಾಯಿ ಹಸುಗೂಸನ್ನು ಅಂದರೆ ಹೊಸ ಅಮಾಯಕ ಜೀವಿಗಳನ್ನು ಎತ್ತಿಕೊಂಡಿರುವ ಹೆಂಗಸಿನ ಚಿತ್ರವನ್ನು ಕೊಡುತ್ತದೆ. ಅದೇ ಸಮಯದಲ್ಲಿ ಚಂದ್ರನು ಭೂಮಿಯ ಸುತ್ತಲೂ ತಿರುಗುವ ವಾಸ್ತವವನ್ನೂ ಒಳಗೊಂಡಿದೆ.

ಇಂತಹ ಭೂಮಿತಾಯಿ ತನ್ನ ದುಃಖವನ್ನು ಒಳಗೊಳಗೇ ಒತ್ತಿ ಹಿಡಿದುಕೊಂಡು ತನ್ನ ಬುದ್ಧಿಶಾಲಿ (!) ಮಕ್ಕಳಿಗೆ ಅಂದರೆ ಮಾನವರಿಗೆ ಅಂಗಲಾಚುತ್ತಿದ್ದಾಳೆ:

ನಿಂತ ನೆಲವೆಂದು ಕಡಿಲಾsಕೊ
ಬಡಿಲಾsಕೊ
ಒಡಿಲಾsಕೊ
ಒಡವ್ಯಲ್ಲೋ ಮಗನೇ ಉಸಿರಿದ್ದೊಡಲಂತಾsಳೋ.

ಆಳುವವರಿಗೆ ಹೆಣ್ಣು, ಹೊನ್ನು, ಮಣ್ಣು ಇವು ತಮ್ಮ ವೈಭವದ ಒಡವೆಗಳು, ತಮ್ಮ ಘನತೆಯ ಸಂಕೇತಗಳು. ಆದರೆ ಯಾವ ಭೂಮಿಯನ್ನು ಒಡವೆ ಎಂದು ಆಳುವವರು ಭಾವಿಸುತ್ತಾರೊ, ಆ ಭೂಮಿಯು ಸಾವಿರಾರು ಜೀವಿಗಳಿಗೆ ಅನ್ನ ಹಾಗು ಆಶ್ರಯ ನೀಡುವ ತಾಯಿ. ಅವಳ ಉಸಿರಿನಿಂದಲೆ ಎಲ್ಲ ಜೀವಿಗಳು ಬದುಕಬೇಕು.

ಭೂತಾಯಿಯ ಮರುಗು ಮಾನವನಿಗೆ ಮುಟ್ಟೀತೆ?

ಯುರೋಪಿಯನ್ ರಾಷ್ಟ್ರಗಳು ಏಷಿಯಾ ಹಾಗು ಆಫ್ರಿಕಾ ಖಂಡಗಳನ್ನು ಶೋಷಿಸಿದ ಪರಿಯನ್ನು ಬೇಂದ್ರೆಯವರು ಕಂಡಿದ್ದಾರೆ. ಜಾಗತಿಕ ಸಮರವನ್ನು ನೋಡಿದ್ದಾರೆ. ಓದುಗರೊಬ್ಬರು ತಮ್ಮ ಪ್ರತಿಕ್ರಿಯೆಯಲ್ಲಿ ಸೂಚಿಸಿದಂತೆ ಈ ಎಲ್ಲ ಮಾನವ ಘರ್ಷಣೆಗಳು ಅವರ ಕೆಲವು ಕವಿತೆಗಳಿಗೆ ಪ್ರೇರಕವಾಗಿವೆ. ಮನುವಿನ ಮಕ್ಕಳು, ಮೊದಲಗಿತ್ತಿ ಹಾಗು ಚಿಗರಿಗಂಗಳ ಚೆಲುವಿ ಕವನಗಳನ್ನು ಈ ಪ್ರಕಾರಕ್ಕೆ ಸೇರಿಸಬಹುದು. ‘ಕರಡಿ ಕುಣಿತ’ವನ್ನು ಅವರು ಮಕ್ಕಳಿಗಾಗಿಯೇ ಬರೆದರು ಎಂದು ಹೇಳಲಾಗುತ್ತಿದ್ದರೂ, ಅಲ್ಲಿಯೂ ಸಹ ಮಾನವನ ದುರಾಕ್ರಮಣವೇ ಕವನದ ತಿರುಳಾಗಿದೆ.

ಈ ಕವನದ ಪ್ರತಿಯೊಂದು ನುಡಿಯಲ್ಲಿ ಒಂಬತ್ತು ಸಾಲುಗಳಿವೆ. ಮೊದಲ ನಾಲ್ಕು ಸಾಲುಗಳು ಭೂಮಿತಾಯಿಯ ಒಂದು ವಿಶಿಷ್ಟ ಸ್ಥಿತಿಯನ್ನು ಬಣ್ಣಿಸುತ್ತವೆ. ಕೊನೆಯ ನಾಲ್ಕು ಸಾಲುಗಳು ಅವಳ ದುಃಖದ ಉದ್ಗಾರವಾಗಿವೆ. ಮೊದಲನೆಯ ನುಡಿಯಿಂದ ಕೊನೆಯ ನುಡಿಯವರೆಗೆ ವಸುಂಧರೆಯ ದುಃಖವು ಗಂಭೀರವಾಗುತ್ತ ಹೋಗುವದನ್ನು ವರ್ಣಿಸಲಾಗಿದೆ. ಈ ಕವನದ ರಚನೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇಂಗ್ಲಿಶ್ ಕವನಗಳಲ್ಲಿ ಬಳಸಲಾಗುವ enjambment. ಪ್ರತಿ ನುಡಿಯ ಮೊದಲ ನಾಲ್ಕು ಸಾಲುಗಳ ಹಾಗು ಕೊನೆಯ ನಾಲ್ಕು ಸಾಲುಗಳ ನಡುವೆ ಬರುವ ಸಾಲು ಕೊಂಡಿಯಂತೆ ಬಳಕೆಯಾಗಿದೆ. ಇದು ಕೆಲವು ಇಂಗ್ಲಿಶ್ ಕವನಗಳ ರಚನಾತಂತ್ರವಾಗಿದೆ.

(‘ಚಿಗರಿಗಂಗಳ ಚೆಲುವಿ’ ಕವನವು ಬೇಂದ್ರೆಯವರ ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ. ‘ಸಖೀಗೀತ’ವು ೧೯೩೭ರಲ್ಲಿ ಪ್ರಕಟವಾಯಿತು)

 

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರ್)