ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ. ರೂಮಿನ ಪೂರ್ವ ದಿಕ್ಕಿನ ಕಿಡಕಿ ತೆಗೆದರೆ ಸಾಕಿತ್ತು, ಇಂಗ್ಲೀಷ್ ನವನಾದ ಮಿಚಿಗನ್ ನ ಹರಕು ಮುರುಕು ಬಂಗ್ಲೋ ಕಾಣಿಸುತ್ತಿತ್ತು, ಕಿತ್ತುಹೋದ ಸಿಮೆಂಟು ಕಂಪೌಂಡು, ಒಳಗೆ ಈ ಹೂ ಬಿಡುತ್ತಿರುವ ಮಾವಿನ ಮಾದಕ ಘಮ….
ಡಾ. ಲಕ್ಷ್ಮಣ ವಿ.ಎ. ಬರೆಯುವ ಅಂಕಣ

 

ಸಟ್ಟ ಸರಹೊತ್ತಿನಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ನೆನಪಾಗುವ ನನ್ನ ಧಾರವಾಡದ ನೆತ್ತಿಯ ಮೇಲೆ ಆ ಮೊದಲಿನಂತೆಯೇ ಮಳೆ ಸುರಿಯುತ್ತದೆಯೇ? ಕರ್ನಾಟಕ ಕಾಲೇಜು ಹಿಂಭಾಗದ ಕಳ್ಳ ಕಿಂಡಿಯಂತಹ ದಾರಿಯ ಮರದ ನೆರಳಿಗೇ ಕತ್ತಲೆಯಾಗುವ ಕಾಲುದಾರಿಯಲ್ಲಿ ಆ ಹುಡುಗಿ ಅಂಜುತ್ತಲೇ ಬಾಟನೀ ಕ್ಲಾಸಿಗೆ ಬಂದು ಹಾಜರೀ ಹಾಕುತ್ತಾಳೆಯೇ? ಮಿಸ್ಕಿನ್ ಕಲರ್ ಲ್ಯಾಬಿನಲ್ಲಿ ಅದೇ ಆ ಮಾವುಗಲ್ಲದ ಹುಡುಗಿಯ ನೆಗೆಟಿವ್ ಫಿಲ್ಮಗಳು ಪಾಸಿಟವ್ ಮಾಡಿಸಿಕೊಂಡು ಹೋದಳೆ? ತಲೆ ಚಚ್ಚಿಕೊಂಡರೂ ತಿಮ್ಮನಗೌಡರ ಸರ್ ರ ಟ್ರಿಗ್ನಾಮೇಟ್ರೀ ಅರ್ಥವಾಗದೇ ಓದು ಅರ್ಧಕ್ಕೇ ನಿಲ್ಲಿಸಿದ ಮುಧೋಳದ ರಾಜಪ್ಪ ಬಿ.ಎ ಪಾಸುಮಾಡಿಕೊಂಡನೇ? ಅದೇ ಮಿಚಿಗನ್ ಕಂಪೌಂಡಿನ ಡಾ.ಪಾಂಡುರಂಗಿ ಆಸ್ಪತ್ರೆಗೆ ಕೆಲಗೇರಿಯಿಂದ ಬರಿಗಾಲಲ್ಲೇ ಬಂದು ಮಾವಿನಕಾಯಿ ಮಾರಿದ ದುಡ್ಡಿನಲ್ಲಿ ಗುಳಿಗೆ ತಗೊಂಡು ಹೋಗುತ್ತಿದ್ದ ಮಲ್ಲಪ್ಪನ ಹುಚ್ಚು ವಾಸಿಯಾಯಿತೆ?

ಹೇಗಿವೆ ನನ್ನ ಕಾಲೇಜಿನ ಬೀದಿಗಳು? ಕಾಲಕಾಲಕ್ಕೆ ಡಾಂಬರು ಮೆತ್ತಿಕೊಂಡು ಹೇಮಾಮಾಲಿನಿಯ ಗಲ್ಲದಂತಾಗುತ್ತವೆಯೇ ಅಥವ ಆಗಿನಂತೆಯೇ ಹೈ ಹೀಲ್ಡ್ ಹುಡುಗಿಯ ಸೊಂಟ ಮುರಿಯುವ ಗುಂಡಿಗಳು ಹಾಗೆ ಇವೆಯೇ? ಬಸವೇಶ್ವರ ಮೆಸ್ಸಿನ ಉಪ್ಪಿನಕಾಯಿ ರುಚಿ ಬದಲಾಗಿದೆಯೇ? ಹೇಗಿರುವೆ ನನ್ನ ಪ್ರೀತಿಯ ಧಾರವಾಡವೇ…

ನಿನ್ನ ಸೀಮೆಯ ಸೊಂಟಕ್ಕೆ ಬಳಸಿಕೊಂಡಂತಹ ಮಾವಿನ ತೋಟಗಳೀಗ ಘಮಘಮಾಡಸತಿರಬೇಕಲ್ಲ? ಮತ್ತು ಆ ಆಕಾಶವಾಣಿ ರಸ್ತೆಯ ನೀಲಗಿರಿ ತೋಪಿನ ಕಸಗುಡಿಸುವ ಮುದುಕಿ ಈಗಲೂ ಬೆಳ್ ಬೆಳಿಗ್ಗೆ ತರಗೆಲೆಗೆ ಬೆಂಕಿ ಇಟ್ಟು ಬೆನ್ನು ಕಾಯಿಸಿಕೊಳ್ಳುತ್ತಾಳೆಯೇ?

ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ. ರೂಮಿನ ಪೂರ್ವ ದಿಕ್ಕಿನ ಕಿಡಕಿ ತೆಗೆದರೆ ಸಾಕಿತ್ತು, ಇಂಗ್ಲೀಷ್ ನವನಾದ ಮಿಚಿಗನ್ ನ ಹರಕು ಮುರುಕು ಬಂಗ್ಲೋ ಕಾಣಿಸುತ್ತಿತ್ತು, ಕಿತ್ತುಹೋದ ಸಿಮೆಂಟು ಕಂಪೌಂಡು, ಒಳಗೆ ಈ ಹೂ ಬಿಡುತ್ತಿರುವ ಮಾವಿನ ಮಾದಕ ಘಮ…. ಬಹುಶಃ ಬ್ರಿಟೀಷರ ಕಾಲಕ್ಕೆ ಇದೊಂದು ನಗರದ ಹೊರವಲಯದ ಮಿಚಿಗನ್ ನ ಗೆಸ್ಟ್ ಹೌಸ ಆಗಿದ್ದಿರಬಹುದು. ಜಮೀನು ಹಾಗೇ ಇದೆ.. ಉತ್ತಲಾರದೇ ಬಿತ್ತಲಾರದೇ ಮಾವಿನ ತೋಪುಗಳ ನಡು ನಡುವೆ.

ನಟ್ಟ ನಡುವೆಯೊಂದು ಹುಣಸೇಮರ, ಅಪ್ಪಟ ಧಾರವಾಡ ಬಯಲು ಸೀಮೆಯ ಎಲ್ಲ ಜಮೀನುಗಳಂತೆ. ಆ ಹುಣಸೇ ಮರದ ಕೆಳಗೆ ಹಳೆಯ ಲಡಕಾಸಿ ಅಂಬಾಸಿಡರು ಕಾರು ನಿಂತಿರುತ್ತಿತ್ತು. ಅದರ ಮೇಲೊಂದು ಕಪ್ಪು ಬಣ್ಣದ ಕಾರ್ ಕವರ ಹೊದ್ದು, ರಾತ್ರಿ ತಕ್ಷಣ ದಾರಿ ಹೋಕರ ಗಮನ ಆ ಕಡೆ ಏನಾದರೂ ಹೋಗಿದ್ದರೆ ಅದು ಒಂದು ಆನೆ ಅಂತ ಭ್ರಮೆಗೊಳಪಡಿಸುವ ಚಿತ್ರವದು. ಇದರ ಅನತಿ ದೂರದಲ್ಲೇ ಪಾಳುಬಿದ್ದ ಒಂದು ಔಟ್ ಹೌಸು, ಈಗಲ್ಲಿ ಯಾರೂ ವಾಸ ಮಾಡುತ್ತಿರಲಲಿಕ್ಕಿಲ್ಲ ಬಹುಶಃ. ರಾಮಣ್ಣಾ ಅಂತ ಒಬ್ಬ ಕಾವಲುಗಾರನ ಹೊರತಾಗಿ, ಈ ರಾಮಣ್ಣಾ ಅದ್ಯಾವುದೊ ರಾತ್ರಿಯ ಆ ಗಳಿಗೆಯಲ್ಲಿ ಬಂದು ಅಲ್ಲಿ ಸಾಕಿದ್ದ ಎರಡು ನಾಯಿಗಳಿಗೆ ಊಟ ಹಾಕಿ ತಾನೂ ತಿಂದು, ಅದು ಹಾಡು ಹಾಡುತ್ತ ಸಿಳ್ಳೆ ಹಾಕುತ್ತ ಮಲಗುತ್ತಿದ್ದ. ಅವನು ಮಲಗಿದರೂ ನಾಯಿಗಳು ಬೊಗಳುತ್ತಲೇ ಇರುತ್ತಿದ್ದವು. ರಾತ್ರಿ ಎಷ್ಟೋ ಹೊತ್ತಿನ ತನಕ. ನನ್ನ ರೂಮಿನ ಕಿಡಕಿಯಿಂದ ಬೆಳದಿಂಗಳ ರಾತ್ರಿಯಲ್ಲಿ ಇದೊಂದು ಫಾರ್ಮಹೌಸು, ಪಾಳುಬಿದ್ದ ಬಂಗಲೆ ಹೂ ಬಿಟ್ಟ ಮಾವು.. ತೆಂಕಣ ಗಾಳಿ ಸೋಂಕಿದೊಡೆ ಘಮ್ಮೆನ್ನುವ ಹೂ ಅಮಲು… ಆ ಬೊಗಳುವ ನಾಯಿಗಳು.. ರಾಮಣ್ಣ… ಎಲ್ಲ ವಿಚಿತ್ರವಾಗಿ ಒಂದು ವಿಲಕ್ಷಣ ಪೇಂಟಿಂಗ್ ತರಹ ಕಾಣಿಸುತ್ತಿತ್ತು. ಏಕಾಂಗೀ ರೂಮಿನಲ್ಲಿ ಓದೆಲ್ಲ ಮುಗಿದ ಮೇಲೆ ಚಿಕ್ಕ ಟ್ರಾನ್ಸಿಸ್ಟರನಲ್ಲಿ ಯಾವುದೋ ಸ್ಟೇಷನ್ನಿನಲಿ ಹಿಂದಿ ಹಾಡು ಕೇಳುತ್ತ ಹಾಗೇ ಕಿಡಕಿಗೆ ತಲೆಯಾಣಿಸಿ ಮಲಗಿರುತ್ತಿದ್ದೆ.

ಎಲೆಯುದುರುವ ಕಾಲ ಅಂದೆನೆಲ್ಲ, ಬೆಳಿಗ್ಗೆ ಆರೂವರೆಗೆಲ್ಲಾ ಧಾರವಾಡ ಮುನ್ಸಿಪಲ್ ಕಾರ್ಮಿಕರು ಮಿಚಿಗನ್ ಕಂಪೌಂಡಿನ ರಸ್ತೆಯ ಮೇಲೆ ಬಿದ್ದಿದ್ದ ಮಾವು ಬೇವು ಇನ್ನಿತರ ಮರದ ತರಗೆಲೆಗಳ ಗುಡಿಸಿ ಬೆಂಕಿ ಹಚ್ಚುತ್ತಿದ್ದರು. ಆ ಬೆಂಕಿಯಿಂದೆದ್ದ ಹೊಗೆಯಲ್ಲೂ ಆ ಮಾಮರದ ಹೂ ಘಮ.

ಜನವರಿ ಫೆಬ್ರುವರಿ ತಿಂಗಳ ಆಸುಪಾಸಿನಲ್ಲಿ ಕಾಲೇಜಿನ ಎಲ್ಲ ಸಿಲೆಬಸ್ ಬಹುತೇಕ ಮುಗಿದು ವಿದ್ಯಾರ್ಥಿಗಳಲ್ಲಿ ಸಣ್ಣ ಪರೀಕ್ಷಾ ದುಗುಡ. ಯಾರ ಮುಖ ನೋಡಿದರೂ ಆತಂಕ, ಎಲೆಯುದುರಿಸಿದ ಬೋಳು ಮರದಂತೆ ಬಾಡಿದ ಮುಖ. ಕಾಲೇಜಿನ ಖಾಲೀ ಬೆಂಚುಗಳು ಭಯ ಹುಟ್ಟಿಸುತ್ತಿದ್ದವು. ಕಾಲೇಜು ಆರಂಭದ ಗಿಜುಗುಡುವಿಕೆ ಆಷಾಢದ ಮಳೆಯಲ್ಲಿ ಕೊಡೆಯ ಅಡಿ ಅಲ್ಲಿಂದ ಇಲ್ಲಿಗೆ ಕ್ಲಾಸ್ ರೂಮಿನಿಂದ ಲ್ಯಾಬಿಗೆ ಶ್ರಾವಣದ ಆ ಜಡಿ ಮಳೆ ಸಂಜೆಯ ಹೂ ಬಿಸಿಲು ಈಗ ಕೇವಲ ಅಟೋಗ್ರಾಫ್ ಪುಸ್ತಕಗಳ ಮೇಲಿನ ಕಚ್ಚಾ ಕವಿತೆಗಳಾಗಿ ಊರೆಂಬೋ ಊರು ಇಡೀ ಕಾಲೇಜೆಂಬೋ ಕಾಲೇಜಿನಲ್ಲಿ ಪರೀಕ್ಷಾ ಭಯ ಆವರಿಸಿ ಎಲ್ಲರ ಹೆಜ್ಜೆಗಳೂ ಈಗ ಅವಸರದ ಹೆಜ್ಜೆಗಳಾಗಿ….. ಇವರೆಲ್ಲ ನನ್ನ ಬಿಟ್ಟು ಎಲ್ಲೋ ಓಡಿ ಹೋಗುತ್ತಿದ್ದಾರಿವರು. ಇಲ್ಲ ಈ ಆತಂಕವನ್ನು ನಾನು ಮೆಟ್ಟಿ ನಿಲ್ಲಲಾರೆ ಎನ್ನಿಸಿ, ಪ್ರೀತಿಯ ಪೈಥಾಗೋರಸಾ… ಇದೊಂದು ಸಲ ನನ್ನ ಮನ್ನಿಸಿಬಿಡು… ಮುಂದಿನ ಬಾರಿಯಿಂದ ಚೆನ್ನಾಗಿ ಓದುವೆಯೆಂದು ಮನದೊಳಗಿನ ದೇವರಿಗೆ ಕೈ ಮುಗಿದು, ಕಾಲೇಜಿನ ಹಿಂಬದಿಯ ಅಡ್ಡದಾರಿ ಹಿಡಿದು ಸೀದಾ ಸಪ್ತಾಪೂರದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಲಂಕೇಶ್ ಪತ್ರಿಕೆಯ ಮೂಲೆಯಲ್ಲಿ ಪ್ರಕಟವಾಗುವ ನೀಲು ಚಿತ್ರ ನೋಡಿ ಉದ್ರೇಕಿತನಾಗಿ ರೂಮಿನ ಮೂಲೆ ಸೇರುತ್ತಿದ್ದೆ.

 ನನ್ನ ರೂಮಿನ ಕಿಡಕಿಯಿಂದ ಬೆಳದಿಂಗಳ ರಾತ್ರಿಯಲ್ಲಿ ಇದೊಂದು ಫಾರ್ಮಹೌಸು, ಪಾಳುಬಿದ್ದ ಬಂಗಲೆ ಹೂ ಬಿಟ್ಟ ಮಾವು.. ತೆಂಕಣ ಗಾಳಿ ಸೋಂಕಿದೊಡೆ ಘಮ್ಮೆನ್ನುವ ಹೂ ಅಮಲು… ಆ ಬೊಗಳುವ ನಾಯಿಗಳು.. ರಾಮಣ್ಣ… ಎಲ್ಲ ವಿಚಿತ್ರವಾಗಿ ಒಂದು ವಿಲಕ್ಷಣ ಪೇಂಟಿಂಗ್ ತರಹ ಕಾಣಿಸುತ್ತಿತ್ತು.

ಸನ್ ಸಾವಿರದೊಂಬೈನೂರ ತೊಂಬತ್ತು ಮೂರನೇ ಇಸ್ವಿಯ ಜೂನ್ ತಿಂಗಳ ಒಂದು ಇಳಿಸಂಜೆ. ಧಾರವಾಡದ ಬಸ್ ಸ್ಟ್ಯಾಂಡಿನಲಿ ಇಳಿದುಕೊಂಡಾಗ ಸಣ್ಣಗೆ ಮಳೆ ಹುಯ್ಯುತಿತ್ತು. ಅರೆ!! ಸದ್ಯ ಇಲ್ಲಾದರೂ ಮಳೆಯಾಗುತ್ತಿದೆಯಲ್ಲ ಎಂಬ ಸಂತಸವೂ ಆಗಿ ಇಲ್ಲಿ ಹುಯ್ಯವ ಒಂದು ಮಳೆಯಾದರೂ ನನ್ನ ಊರಿನ ನೆತ್ತಿಯ ಮೇಲೆ ಸುರಿಯಬಾರದೆ ಎಂದು ಗೊಣಗುತ್ತ, ಕೈಯಲ್ಲಿರುವ ಪಿಸವಿ ತಲೆಗೆ ಅಡ್ಡ ಇಟ್ಟುಕೊಂಡು ಬಸ್ ಸ್ಟ್ಯಾಂಡಿನಿಂದ ಸಿ.ಬಿ.ಟಿಯತ್ತ ನಡೆದಿದ್ದೆ. ಜಿಟಿ ಜಿಟಿ ಮಳೆಗೆ ಮೈ ನೆನೆಯುತ್ತಿತ್ತು.

ಪ್ಯಾರಾಗನನ ರಬ್ಬರ ಚಪ್ಪಲಿ ಚಟ್ ಪಟ್ ಎಂದು ಸದ್ದು ಮಾಡಿ ಹಿಂಬದಿಯ ಪ್ಯಾಂಟಿನ ಮೇಲೆ ಧಾರವಾಡದ ಕೆಂಪು ರಾಡಿಯಿಂದ ಚಿತ್ತಾರ ಬರೆಯುತ್ತಿತ್ತು. ಸಪ್ತಾಪೂರದ ಮಿಚಿಗನ್ ಕಂಪೌಂಡಿಗೆ ನಡೆಯುತ್ತ ಹೋದರೆ ಅರ್ಧಗಂಟೆಯ ದಾರಿ. ಮೈಯಲ್ಲಿ ಕಸುವಿದೆ, ಆದರೆ ಊರಿಂದ ತಂದ ಬುತ್ತಿ ಮಳೆಗೆ ನೆನೆದು ಹಾಳಾಗುತ್ತದೆ. ಎರಡು ರೂಪಾಯಿ ಖರ್ಚಾದರೂ ಪರವಾಗಿಲ್ಲ, ಬಸ್ಸಿನಲ್ಲೇ ಹೋದರಾಯ್ತು ಎಂದು ಪಾವಟೆನಗರ ಬಸ್ಸು ಹತ್ತಿದ್ದೆ. ಬಸ್ಸು ತುಂಬಿದ್ದರಿಂದ ನಿಂತುಕೊಂಡೇ ಪ್ರಯಾಣಿಸಬೇಕಿತ್ತು. ಕಂಡಕ್ಟರ್ ಸ್ಟಾಪು ಬಂದ ತಕ್ಷಣ ಆಯಾ ಸ್ಟಾಪಿನ ಹೆಸರು ಕೂಗುತ್ತಿದ್ದ. ಬಸ್ಸಿನಿಂದ ನಿಂತು ನೋಡುವ ನನಗೆ ಹೊರಗೆ ಏನೆಂದರೆ ಏನೂ ಕಾಣದೆ ಕೇವಲ ಒಳಗೆ ಯಾತ್ರಿಕರ ಮುಖ ಹೊರಗೆ ಹುಯ್ಯುತ್ತಿರುವ ಮಳೆ ಮತ್ತು ಮಳೆಯಲ್ಲಿ ನೆನೆಯುತಿರುವ ಮರಗಳು ಮಾತ್ರ ಕಾಣುತ್ತಿದ್ದವು.

ಬಸ್ಸು ಕಲಾಭವನ, ಜ್ಯೂಬಲಿ ಸರ್ಕಲ್, ಎಲೈಸಿ, ಕರ್ನಾಟಕ ಕಾಲೇಜು, ಸಪ್ತಾಪೂರ ಭಾವಿಗೆ ಬಂದಾಗ ಇಳಿದುಕೊಂಡೆ. ಸ್ವಂತಕ್ಕೊಂದು ರೂಮಿನ ವ್ಯವಸ್ಥೆ ಆಗುವವರೆಗೆ ನಾನು ನನ್ನ ಗೆಳೆಯನ ರೂಮಿನಲ್ಲಿ ಉಳಿಯಬೇಕಿತ್ತು. ಬಸ್ಸು ಇಳಿದಾಗ ಆಕಾಶ ತಿಳಿಯಾಗಿತ್ತು. ಮಳೆಗೆ ರಸ್ತೆ ಸ್ವಚ್ಛವಾಗಿ ತೊಳೆದಂತಿತ್ತು. ಅಕ್ಕಪಕ್ಕದ ಮಳೆ ನೀರು ಚರಂಡಿಯಪಾಲಾಗಿ ಒಂದು ಚಿಕ್ಕ ತೊರೆಯೆ ಹರಿದಂತಿತ್ತು.

ಸ್ನೇಹಿತರೆ ಪದೆ ಪದೆ ಈ ಧಾರವಾಡದ ಮಳೆ ಪ್ರಸ್ತಾಪ ಮಾಡಲು ಕಾರಣವೂ ಇದೆ. ನಾನು ಈ ಊರಿಗೆ ಪ್ರವೇಶ ಪಡೆದ ವರ್ಷದ ಆ ಕ್ಷಣದಲ್ಲಿ ನಮ್ಮ ಊರಿನಲ್ಲಿ ಒಂದೇ ಒಂದು ಹನಿಯೂ ಮಳೆಯಾಗಿರಲಿಲ್ಲ. ಇದೊಂದೇ ವರ್ಷ ಅಲ್ಲ, ಸತತ ಮೂರು ವರ್ಷಗಳ ಬರಗಾಲದಿಂದ ನನ್ನ ಊರು ತತ್ತರಿಸುತಿತ್ತು. ನೆಲಕೆ ಬಿದ್ದ ಬೀಜ ಮೊಳಕೆಯೊಡೆದು ಚಿಗುರುವಷ್ಟರಲ್ಲಿ ಉರಿಬಿಸಿಲಿಗೆ ಕಮರಿ ಹೋಗುತ್ತಿದ್ದವು. ದನ ಕರುಗಳ ಮಾತು ಒತ್ತಟ್ಟಿಗಿರಲಿ, ಮನುಷ್ಯನಿಗೆ ಕೂಡ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಇರುತ್ತಿತ್ತು. ಊರ ಜನ ಕೂಲಿ ಹುಡುಕಿ ಮುಂಬೈ ಗೋವಾ ಕೊಲ್ಲಾಪುರ, ಸಾತಾರಾ ಸಾಂಗ್ಲಿಗೆ ಗುಳೆ ಹೊರಟ ಸಮಯದಲ್ಲಿ ನಾನು ನನ್ನ ಎಸ್. ಎಸ್. ಎಲ್. ಸಿ. ಮಾರ್ಕ್ಸ್ ಕಾರ್ಡು ಇಟ್ಟುಕೊಂಡು ಇಲ್ಲಿ ಓದಲು ಬಂದಿದ್ದು ಒಂದು ವ್ಯಂಗ್ಯವೆ ಆಗಿತ್ತು.

ಇಂತಹ ವಿಷಮ ಪರಿಸ್ಥಿಯಲ್ಲಿ ನಾನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಎಂಬ ಗ್ರಾಮದಿಂದ ಕಾಲು ಕಿತ್ತೆನೆಲ್ಲಾ… ಅದು ನನ್ನ ಮಟ್ಟಿಗೆ ಒಂದು ಕ್ರಾಂತಿಕಾರಿ ಹೆಜ್ಜೆಯೇ ಆಗಿತ್ತು.

ಗೊಂದಲ ಮೂಡಿಸುವ ನಗರದ ವ್ಯಾಕರಣಗಳು, ಅರ್ಥವಾಗದ ಪಾಠಗಳು, ಅಷ್ಟು ಸುಲಭವಾಗಿ ಒಳಕ್ಕೆ ಯಾರನ್ನೂ ಬಿಟ್ಟುಕೊಳ್ಳದ ಮಹಾನಗರದ ನಾಜೂಕುತನ… ಬಚ್ಚಿಟ್ಟುಕೊಳ್ಳಲಾಗದ ನನ್ನ ಬಡತನ, ನಿಯಂತ್ರಿಸಲಾಗದ ಕಣ್ಣ ಹನಿ, ಬೆಂಬಿಡದೆ ಕಾಡುವ ಅನಾಥ ಪ್ರಜ್ಞೆ, ಎಷ್ಟೊತ್ತಾದರೂ ನಿದ್ದೆ ಬರದೆ ಕಾಡುವ ಊರ ನೆನಪು….

ಇಂದಿಗೂ ಅಥಣಿ, ಬಿಜಾಪೂರ, ಬಾಗಲಕೋಟೆ, ಬಾದಾಮಿ ಕಡೆಯಿಂದ ಸುರಿವ ಮಳೆಯಲ್ಲಿ ಧಾರವಾಡದಲ್ಲಿಳಿದು ನನ್ನ ತರನೇ ಧಾರವಾಡದ ಸುರಿಮಳೆಯಿಂದ ತಪ್ಪಿಸಿಕೊಳ್ಳಲು ಕೊಡೆಯಿಲ್ಲದೆ ಊರಿಂದ ತಂದ ಕೈ ಚೀಲವನ್ನೆ ತಲೆಯ ಮೇಲೆ ಹೊತ್ತು ಬಸ್ ಚಾರ್ಜ ಉಳಿಸಲು ಸಿ.ಬಿ.ಟಿ.ಯಿಂದ ಸಪ್ತಾಪುರದವರೆಗೆ ನಡೆಯುತ್ತ ಹೋಗುವ ನನ್ನ ತಮ್ಮಂದಿನಂತವರು ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಸಾವಿರಾರು ಜನ ಧಾರವಾಡದ ಮಡಿಲಿಗೆ ಬಂದು ಬೀಳುತ್ತಾರೆ. ಅಂತಹ ನನ್ನ ಪ್ರೀತಿಯ ತಮ್ಮಂದಿರು ಎಂದಿಗೂ ಯಾವಕಾರಣಕ್ಕೂ ಎದೆಗುಂದದೆ, ನಿಮ್ಮ ಕಣ್ಣುಗಳಲ್ಲಿ ಕನಸುಗಳನ್ನು ಕಾಪಿಟ್ಟುಕೊಳ್ಳಿ…..

ನನ್ನ ಮೇಲಾಣೆ ಈ ಧಾರವಾಡ ತಾಯಿಯಂತಹ ಕರಳು ಉಳ್ಳದ್ದು. ಯಾರನ್ನೂ ಕೈ ಬಿಡುವವಳಲ್ಲ.