ಪ್ರಭುವೆ

ಹಚ್ಚಿಕೊಂಡ ನಂಬಿಕೆಯೊಂದು
ಕಾಯುವ ಬಯಕೆ ಹುಟ್ಟಿಸುತ್ತದೆ ಪ್ರಭುವೇ.

ಕಾಲ ಭಾವಗಳ ಮಾಗಿಸಬಹುದು
ಬಾಗಬಹುದು ಬಲು ಗಟ್ಟಿ
ಎನಿಸಿದ್ದ ಒಳಗಿನ ಒಣ ಅಹಮ್ಮು.

ಬರಡು ಎದೆಯಲ್ಲೂ ಕಳೆಹೂವುಗಳು
ಅರಳಿ ಅಸಡ್ಡೆಯಲ್ಲಿ ಬಿಗಿದ ಈ
ತುರುಬಿಗಿಡುವ ಆಸೆಯುದಿಸಬಹುದು.

ಭೂತದ ಬೇತಾಳ ಈ ಹೆಗಲಿಂದ
ಜಿಗಿದು ನೇತಾಡಿದ ಮರದಡಿಯಲ್ಲೇ
ಕುಳಿತು ಹೊಸ ಮಾದರಿ ಕನಸ
ಹೆಣೆಯಬಹುದು.

ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ
ಕುರಿತು ತಡವಾಗಿಯಾದರೂ
ಅರಿವಾಗಬಹುದು.
ನಾಳಿನ ಸೂರ್ಯನೆದೆಯಲ್ಲಿ
ಬಾಳಿನ ಬಣ್ಣ ತುಳುಕಾಡಬಹುದು.

ಹಣೆಯ ಹಳೆ ಬರಹ ಬರೆದವ
ಬದಲಿಸಿ ಶುಭವಾಗಲಿ ಎಂದಾಗ
ಹೊಸದಾಗಿ ಸಪ್ತಪದಿ ಬಯಕೆ
ಮೂಡಬಹುದು..

ಅತಿಯೆಂದು ಹಂಗಿಸದಿರು ಪ್ರಭುವೇ…

ಮರಳುಗಾಡಿಗೂ ಆಗಾಗ ಅತಿವೃಷ್ಟಿ
ಯೋಗವಿದೆ.
ನಡುದಾರಿಯಲ್ಲೂ ಬೀಜವೊಂದು
ಕುಡಿಯೊಡೆದ ಕುರುಹಿದೆ.

ಎದೆ ಕಿಟಿಕಿಯ ಗಾಜು ಒರೆಸಿಡುತ್ತೇನೆ ನಾನೇ
ಬೆಳಕು ಬಾಗಿ ಒಳಗಿಳಿಯಲು
ತುಸುವಾದರೂ ಸಹಕರಿಸು ಪ್ರಭುವೆ.

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.