ಸೋನೆ ಹನಿಗಳು

ಒಂದು ಹನಿ ಜೇನೂ
ಒಂದು ತುಂಡುರೊಟ್ಟಿಯೂ
ಅದ್ದಿಕೊಳುವುದಷ್ಟೇ ಮುಖ್ಯ.
ಒಲವೆಂಬುದು ಈ ಕ್ಷಣದ ಸತ್ಯ.

*****

ನಾನು ಬಲಿತಿದ್ದೆ
ಅವನು ನೆರೆತಿದ್ದ.
ಆಗಷ್ಟೇ ಎಲೆ ಮೂಡಿಸಿಕೊಂಡ
ಸಸಿಯೊಂದು
ಬೆಳಕ ನೋಡಿ ಪುಳಕಗೊಂಡಿತು.

*****

ವಾದಿಸಿ, ಛೇದಿಸಿ
ಶೋಧಿಸಿ, ರೋಧಿಸಿ
ಏನನ್ನೊ ಸಮರ್ಥಿಸಿ
ಮುಚ್ಚಿ ಹಾಕಿ, ಬಿಚ್ಚಿ ತೋರಿ
ನೊಂದೂ ನೋಯಿಸಿ
ನೋಯಿಸಿದ್ದಕ್ಕೇ ಬೇಸರಿಸಿ…!!!
ಗೆಳೆಯಾ
ಜಗದ ಗೋಜು ಯಾಕೆ ಬೇಕು ನಮಗೆ?
ತಿಳಿಯದೇ ನಿನಗೆ;
ಒಡೆಯುತ್ತದೆ ಆಗಾಗ
ಒಲವಿನಲಿ ಅತೀ ತೋಯ್ದ ಎದೆ

*****

ಈ ಇಂದಿನ ಕೊನೆಯಲ್ಲಿ ಶ್ರಮವಿರಿಸು ಪ್ರಭುವೇ..
ಬಾಳಿನ ನಾಳೆಗಳು
ಬೆಳಕ ಕೊಳದೊಳಗೆ ಅದ್ದಿಕೊಳಲಿ.
ಸುಖವೆಂದರೆ …
ಮುಗಿಯದ ಈ ನಡಿಗೆ…

*****

ಅವನ ಹಣೆಯನ್ನೇ ಗಮನಿಸಿದೆ.
ಹೊಸದೊಂದು ಸಣ್ಣ ಕಲೆ,
ನನ್ನಂತ ಪ್ರೇಯಸಿಯರು
ನೀಡಿರಬಹುದಾದ
ಸಿಹಿ ಮುತ್ತು
ಆಗಾಗ ತಾಗುವ ತಲೆಗೂದಲು,
ಹೊರತು ಮತ್ತೇನೂ ಇಲ್ಲವೆನಿಸಿದರೆ
ನಂಬಬೇಡಿ ನೀವು.

*****

ಕಣ್ಣು ಕೂಡಿಸಿ ಮುದ್ದುಗರೆವಾಗೆಲ್ಲಾ
ಅವನ ಹಣೆಯ ಚುಂಬಿಸುವೆ
ಹಣೆಯ ಬರಹದಲ್ಲಿ ನಾನಿರುವೆನಂತೆ
ನನ್ನ
ತುಟಿಗಂಟಿದ ನನ್ನದೆ ಹೆಸರು
ಅವನ ತುಟಿ ಸೇರುವುದ ಬಿಡಿಸಿ ಹೇಳಲಾರೆ..

******

ಅವರು ಪ್ರೀತಿಯ ಮಾತಿಗಾಗಿ ಹಂಬಲಿಸುತ್ತಾರೆ.
ನಾನು ನಾಕು ಮಾತಾಡಿ ಮುಗಿಸುತ್ತೇನೆ..
ಅವರು
ಇನ್ನಷ್ಟು ತುಂಬಿಕೊಂಡು ಮತ್ತೆ ಸುರಿಯುವಾಗ ನಾನು ಚುಚ್ಚು ಮಾತನಾಡಿ ನೋಯಿಸುತ್ತೇನೆ.
ಅವರಾಗ ಹೊರಡುವ ಮಾತಾಡುತ್ತಾರೆ
ನಾನು ಬೆದರಿ ಮುದ್ದಿಸುತ್ತೇನೆ..
ಸೋತರೂ ಗಟ್ಟಿಯಾಗಿ ನಿಂತವರಂತೆ ನಟಿಸುತ್ತಾರೆ.
ನಾನು ಸುರಿದು ಖಾಲಿಯಾದಾಗ ಅವರು ತೋಯ್ದು ತೃಪ್ತರಾಗುತ್ತಾರೆ..
ನಾಳೆ ಹೊಸದಾಗಿ ಜಗಳ ಶುರುವಾಗುತ್ತದೆ.
ಅಸಲಿಗೆ ನಾವು ಪ್ರೇಮಿಸಿದ್ದೇ ಇಲ್ಲ.
ಬರಿಯ ಒಬ್ಬರೊಳಗೊಬ್ಬರು ಬದುಕಿದ್ದು.

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.