“ಅವಳು ಮಲಗಬೇಕಿದ್ದರೆ ಆಕಾಶವಾಣಿಯವರು ನಮಸ್ಕಾರ ಹೇಳಿ… ಕೇಂದ್ರದ ಬಾಗಿಲು ಹಾಕಿ ಹೋಗಬೇಕು” ಎಂದು ನನ್ನ ಅಪ್ಪ ನನ್ನನ್ನು ಪ್ರೀತಿಯಿಂದ ಬೈಯುತ್ತಿದ್ದ ದಿನಗಳು ನೆನಪಾದರೆ… ನಗು ಉಕ್ಕಿ ಬರುತ್ತದೆ. ಈಗಲೂ ಟಿ.ವಿ ಯಲ್ಲಿ ಕ್ರಿಕೆಟ್ ನೇರ ಪ್ರಸಾರವಿದ್ದರೂ… ರೇಡಿಯೋದಲ್ಲಿ ಸ್ವಲ್ಪ ಹೊತ್ತಾದರೂ.. ವೀಕ್ಷಕ ವಿವರಣೆ ಕೇಳಿದರಷ್ಟೇ ಸಮಾಧಾನ. ಮೆಚ್ಚಿನ ಚಿತ್ರಗೀತೆಗೆ ಸಂದೇಶದ ಮೂಲಕ ಕೋರಿಕೆ ಸಲ್ಲಿಸಿ… ನನ್ನಿಷ್ಟದ ಹಾಡುಗಳನ್ನು ಆಲಿಸುತ್ತೇನೆ.. ಹೆಸರಿನ ಜೊತೆಗೆ ಹಾಡು ಕೂಡ. ಏನ್ ಪುಣ್ಯ ಗುರು?! ಎಂದು ಆಧುನಿಕ ಶೈಲಿಯಲ್ಲಿ ಹೇಳಬೇಕೆನಿಸುತ್ತದೆ.
ಹಲವು ವರ್ಷಗಳಿಂದ ಆಕಾಶವಾಣಿ ಕೇಳುವ ಅನುಭವದ ಕುರಿತು ಬರೆದಿದ್ದಾರೆ ಅರುಣಾ.ಜಿ. ಭಟ್. ಬದಿಕೋಡಿ

ಅರೆರೆ.. ಇದು ಯಾವ ಕಥೆಯಪ್ಪ? ಚಂದ ಮಾಮನ ಕಥೆ ಗೊತ್ತಿದೆ.
ಈ “ನಂದೂ ಮಾಮ” ಯಾರು? ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದೆ ತಾನೇ? ಇದು ಕಥೆಯಲ್ಲ ಆಯ್ತಾ. ನಿಜ.

ಈ ಮಾಮನ ಸುದ್ದಿ ಹೇಳ ಬೇಕಿದ್ದರೆ ಹಲವು ವರ್ಷ ಹಿಂದಕ್ಕೆ ಹೋಗಲೇ ಬೇಕು. “ಮಂಗಳೂರು ಆಕಾಶವಾಣಿ”ಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವೊಂದನ್ನು ಮತ್ತೆ ನೆನಪಿಸಬೇಕು.

ಆಕಾಶವಾಣಿಯ ಕುರಿತು ಯಾರಾದ್ದಾದರೂ ಲೇಖನ ಕಂಡಾಗ… ನನ್ನ ಬಾಲ್ಯದ ಈ “ನಂದೂ ಮಾಮನ” ಕುರಿತು ಯಾರಾದರೂ ಬರೆದಿದ್ದಾರೆಯೇ? ಎಂದು ಕುತೂಹಲ.. ಆದರೆ ಓದಿದಾಗ ನಿರಾಸೆಯಾಗುತ್ತಿತ್ತು. ನೊಂದುಕೊಳ್ಳುವ ಬದಲು ನಾನೇ ಹೇಳಿದರೆ ಹೇಗೆ?

ನಾನೀಗ ಅಂದಿನ “ನಂದೂ ಮಾಮನ” ಸಂಗತಿ ಹೇಳುತ್ತೇನೆ ಆಯ್ತಾ.

ಮಂಗಳೂರು ಆಕಾಶವಾಣಿಯ ಆಗಿನ “ಬಾಲವೃಂದ” ಕಾರ್ಯಕ್ರಮ ಬಲು ಚಂದವಿತ್ತು. ಆದಿತ್ಯವಾರ ಬೆಳಗಿನ ಎಂಟೂವರೆ ಗಂಟೆ ಆಗಲು ಕಾದು ಕುಳಿತಿರುತ್ತಿದ್ದೆ.

ತಮ್ಮ, ತಂಗಿಯರನ್ನೂ ಹತ್ತಿರ ಕುಳಿತುಕೊಳ್ಳಲು ಹೇಳುತ್ತಿದ್ದೆ.

“ಬಾಲವೃಂದದ” ಸಿಗ್ನೇಚರ್ ಟ್ಯೂನ್ ಕೇಳುವಾಗಲೇ ಕುಣಿಯುವಷ್ಟು ಖುಷಿ.
ಮಕ್ಕಳನ್ನು ಮೋಡಿ ಮಾಡಿ, ಸೆಳೆವ ಧ್ವನಿ.

(ಅಬ್ದುಲ್ ರೆಹಮಾನ್ ಪಾಷ)

“ಮಕ್ಕಳೇ… ಕಾಫಿ, ತಿಂಡಿ ಮುಗಿಸಿ ರೇಡಿಯೋದ ಮುಂದೆ ಕುಳಿತಿದ್ದೀರಿ ತಾನೇ?” ಎನ್ನುತ್ತಾ ಮುದ್ದು ಮುದ್ದಾಗಿ ಮಕ್ಕಳ ಜೊತೆ ಮಾತನಾಡುವ ಪರಿ… ಓಹ್… ಹೇಳಿದರೆ ಅರ್ಥವಾಗದು. ಆ ಕ್ಷಣದ ಅನುಭವ ಇರಲೇಬೇಕು. ಮಕ್ಕಳು ಅವರೆದುರು ಇದ್ದಾರೆನೋ? ಎನ್ನುವ ಹಾಗೇ ಮಾತು.

ಅವರಿಗೆ ಅವರು ಇರಿಸಿಕೊಂಡ ಚಂದದ ಹೆಸರು “ನಂದು ಮಾಮ”. ಪ್ರೀತಿ ತುಂಬಿ ತುಳುಕುವ ಸ್ವರ. ಮಕ್ಕಳ ನಾಟಕಗಳಿಗೆ ಅವರೇ ನಿರ್ದೇಶಕರು. ಜೋಕ್ ಗಳನ್ನು ಬರೆದು ಕಳಿಸುವ ಅವಕಾಶ ಮಕ್ಕಳಿಗಿತ್ತು. ನಾನೂ ಬರೆದು ಕಳಿಸುತ್ತಿದ್ದೆ. ನಂದೂ ಮಾಮ ಅದನ್ನೋದುವಾಗ… ಮನೆ ತುಂಬಾ ಸಂಭ್ರಮ.

ಅಂಥ ಮುದ್ದಾದ ದನಿಯ ನಂದೂ ಮಾಮನ ಹೆಸರು “ಅಬ್ದುಲ್ ರೆಹಮಾನ್ ಪಾಷ” ಎಂದು ಗೊತ್ತಾಗುವಾಗ ಕೆಲವು ವರುಷಗಳಾಗಿದ್ದವು.

ಎಷ್ಟೋ ವರ್ಷಗಳ ನಂತರ ದೂರದರ್ಶನದಲ್ಲಿ ಅವರ ಸಂದರ್ಶನ ಕಾರ್ಯಕ್ರಮ ನೋಡಿದ್ದೆ. ಆಗ ಅವರು ಮಕ್ಕಳ ಚಲನಚಿತ್ರಗಳ ನಿರ್ದೇಶಕರಾಗಿದ್ದರು. ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ಕೆಲವು ವರ್ಷಗಳ ಹಿಂದೆ ವಿವಿಧ ಭಾರತಿ ಕೇಂದ್ರದಲ್ಲಿ ಅವರ ಧ್ವನಿ ಮತ್ತೆ ಆಲಿಸಿದ್ದೆ.. ಅಲ್ಲಿನ ವಿಳಾಸಕ್ಕೆ ಅವರಿಗೆ ಒಂದು ಪತ್ರವನ್ನೂ ಬರೆದಿದ್ದೆ. ಬಹುಶಃ ಅದು ಅವರ ಕೈ ಸೇರಲೇ ಇಲ್ಲ ಎಂದು ಕಾಣಿಸುತ್ತೆ. ಅವರೀಗ ಎಲ್ಲಿರುವರೆಂದು ಗೊತ್ತಿಲ್ಲ ನನಗೆ. ಆದರೆ ಅವರ ಕುರಿತು ನನ್ನ ನೆನಪುಗಳನ್ನು ಹಂಚಿಕೊಳ್ಳಲು ಮನ ಬಯಸಿತು.

ಆ “ನಂದೂ ಮಾಮನಿಗೆ” ನನ್ನ ವಂದನೆಗಳು. ನನ್ನ ಬಾಲ್ಯದಲ್ಲಿ ಚಂದದ ಕ್ಷಣಗಳನ್ನು ಒದಗಿಸಿದ್ದನ್ನು ಎಂದೂ ಮರೆಯಲಾರೆ. ಅವರಿಗೆ ತುಂಬು ಮನದ ಧನ್ಯವಾದಗಳು.

ಹಲವು ವರ್ಷಗಳ ಹಿಂದಿನ ಕಥೆ ಹೇಳಿ ಮುಗಿಸಿದೆ.

“ಮಕ್ಕಳೇ… ಕಾಫಿ, ತಿಂಡಿ ಮುಗಿಸಿ ರೇಡಿಯೋದ ಮುಂದೆ ಕುಳಿತಿದ್ದೀರಿ ತಾನೇ?” ಎನ್ನುತ್ತಾ ಮುದ್ದು ಮುದ್ದಾಗಿ ಮಕ್ಕಳ ಜೊತೆ ಮಾತನಾಡುವ ಪರಿ… ಓಹ್… ಹೇಳಿದರೆ ಅರ್ಥವಾಗದು. ಆ ಕ್ಷಣದ ಅನುಭವ ಇರಲೇಬೇಕು. ಮಕ್ಕಳು ಅವರೆದುರು ಇದ್ದಾರೆನೋ? ಎನ್ನುವ ಹಾಗೇ ಮಾತು.

ನಾನು ಅಂದಿನಂತೆಯೇ… ಇಂದೂ ಆಕಾಶವಾಣಿಯ ಕೇಳುಗಳು. ಅಂದಿಗೂ.. ಇಂದಿಗೂ ಬಹಳ ವ್ಯತ್ಯಾಸವಿದೆ. ಮನೆಯ ಹಳೆಯ ಎರಡು “ರೇಡಿಯೋಗಳು” ರಿಪೇರಿಯಾಗದ ಸ್ಥಿತಿ ತಲುಪಿತ್ತು.

ಮೊಬೈಲ್ ನಲ್ಲಿ ರೇಡಿಯೋ ಕೇಳುವ ಸೌಲಭ್ಯವಿದ್ದರೂ… ನನಗೆ ಅದು ಅಷ್ಟು ಇಷ್ಟವಿಲ್ಲ. ಹಾಗಾಗಿ ನನ್ನವರು ಎರಡು ವರ್ಷದ ಹಿಂದೆ ಹೊಸ ರೇಡಿಯೋ ತಂದಿದ್ದರು.

ನಾನು ಬಯಸಿದ ಹಳೇ ರೇಡಿಯೋದ “ರೂಪ” ಅಲ್ಲಿ ಇರಲಿಲ್ಲ. ಎರಡು, ಮೂರು ಅಂಗಡಿ ಸುತ್ತಿ… ಕೊನೆಗೊಂದು ರೇಡಿಯೋ ತಂದಿದ್ದರು.

ಅದನ್ನು “ರೇಡಿಯೋ” ಎಂದು ನನ್ನ ಮನ ಒಪ್ಪಲೇ ಇಲ್ಲ. ಒಂದು ಚಾರ್ಜರ್ ಪೆಟ್ಟಿಗೆ ಥರ ಇತ್ತು. ಅದನೊಪ್ಪದ ಕಣ್ಮನಸುಗಳನ್ನು ಗದರಿಸಿದೆ. ಶ್.. ತೆಪ್ಪಗಿರಿ.. ಎಂದೆ. ಮನ ಸಮಾಧಾನಕ್ಕೆ ಹಳೆಯ ಚಂದದ ರೂಪದ ರೇಡಿಯೋವನ್ನೊಮ್ಮೆ ನೋಡುವೆ. ಮತ್ತೇನು ಮಾಡಲು ಸಾಧ್ಯ ಅಲ್ಲವೇ?

ಕೆಲವು ವಿಷಯಗಳಲ್ಲಿ ಅಂದಿನ ಆಕಾಶವಾಣಿಯ.. ಅಶರೀರ ವಾಣಿಯ ಕಾಲವೇ.. ಸೊಗಸಿತ್ತು ಎಂದೆನಿಸುತ್ತದೆ.

ಶ್ರೋತೃಗಳಿಗೂ.. ಆಕಾಶವಾಣಿಗು ಕೇವಲ ಪತ್ರ ಮುಖೇನವಷ್ಟೇ ಪರಿಚಯವಿತ್ತು. ಪ್ರತಿಭೆಗೆ ಹೆಚ್ಚು ಅವಕಾಶವಿತ್ತು.

ಈಗ ಯಾರದ್ದೋ ಶಿಫಾರಸಿನ ಮೂಲಕ ಕಥೆ, ಕವನ ವಾಚನಕ್ಕೆ ಅವಕಾಶ ಪಡೆಯುವ ಮಂದಿಯೂ ಇದ್ದಾರೆಂದರೆ ತಪ್ಪಲ್ಲ! ಹಲವು ಬಳಗಗಳಲ್ಲಿ ಸುತ್ತಿ ಬಂದ ಕಥೆಗಳನ್ನೇ ಅಲ್ಲಿ ಹೋಗಿ ವಾಚಿಸುವವರೂ ಇದ್ದಾರೆ. ಹೊಸದೇ ಆಗ ಬೇಕಿಲ್ಲ.

ಕಥೆ ಪ್ರಸಾರಕ್ಕೂ ಮೊದಲೇ… ಕೆಲವು ಲೇಖಕರು ಜಾಲ ತಾಣಗಳಲ್ಲಿ ಫೋಟೋ ಹಾಕುತ್ತಾರೆ. ಸುದ್ದಿ ಹಂಚುತ್ತಾರೆ. ಆಕಾಶವಾಣಿಯ ಕುರಿತು “ಉತ್ಪ್ರೇಕ್ಷೆ” ಎನಿಸುವಂತಹ ನಾಲ್ಕು ಸಾಲು ಬರೆಯುತ್ತಾರೆ. ಕಥೆಯ ಧ್ವನಿ ಮುದ್ರಣ ಜಾಲತಾಣಗಳಲ್ಲಿ ಜೋರಾಗಿ ಓಡುತ್ತದೆ. ಆಮೇಲೆ ರೇಡಿಯೋದಲ್ಲಿ ಯಾವ ಕಾರ್ಯಕ್ರಮ ಪ್ರಸಾರವಾಯಿತು ಅಂತ ಅವರಿಗೆ ಗೊತ್ತೇ ಇರುವುದಿಲ್ಲ! ಆಲಿಸುವುದೂ ಇಲ್ಲ. ಪ್ರಚಾರ ಬಯಸುವ ಕೆಲವು ಜನರು ಮಾತ್ರ ಈ ರೀತಿ ಇರುತ್ತಾರೆನೋ?

ಈಗ ಎಲ್ಲಿದ್ದರೂ ರೇಡಿಯೋ ಕೇಳುವ ಸೌಭಾಗ್ಯ ನಮಗಿದೆ. ಸ್ಪಷ್ಟವಾಗಿ ಕೇಳುತ್ತದೆ. ಅಂದಿನ ಹಾಗೇ.. ಅದನ್ನು ಎತ್ತಿಕೊಂಡು ಸುತ್ತಬೇಕಿಲ್ಲ. ಹಠ ಹೂಡಿದರೆ ಎರಡು ತಟ್ಟ ಬೇಕಿಲ್ಲ. ಬ್ಯಾಟರಿ ಖಾಲಿಯಾಗುವ ಹೆದರಿಕೆಯಿಲ್ಲ. ಇಪ್ಪತ್ತನಾಲ್ಕು ಗಂಟೆಯು ರೇಡಿಯೋ ಮಾತನಾಡುತ್ತಲೇ ಇರುವ ಕಾಲ.

“ಅವಳು ಮಲಗಬೇಕಿದ್ದರೆ ಆಕಾಶವಾಣಿಯವರು ನಮಸ್ಕಾರ ಹೇಳಿ… ಕೇಂದ್ರದ ಬಾಗಿಲು ಹಾಕಿ ಹೋಗಬೇಕು” ಎಂದು ನನ್ನ ಅಪ್ಪ ನನ್ನನ್ನು ಪ್ರೀತಿಯಿಂದ ಬೈಯುತ್ತಿದ್ದ ದಿನಗಳು ನೆನಪಾದರೆ… ನಗು ಉಕ್ಕಿ ಬರುತ್ತದೆ.

ಈಗಲೂ ಟಿ.ವಿ ಯಲ್ಲಿ ಕ್ರಿಕೆಟ್ ನೇರ ಪ್ರಸಾರವಿದ್ದರೂ… ರೇಡಿಯೋದಲ್ಲಿ ಸ್ವಲ್ಪ ಹೊತ್ತಾದರೂ.. ವೀಕ್ಷಕ ವಿವರಣೆ ಕೇಳಿದರಷ್ಟೇ ಸಮಾಧಾನ.

ಮೆಚ್ಚಿನ ಚಿತ್ರಗೀತೆಗೆ ಸಂದೇಶದ ಮೂಲಕ ಕೋರಿಕೆ ಸಲ್ಲಿಸಿ… ನನ್ನಿಷ್ಟದ ಹಾಡುಗಳನ್ನು ಆಲಿಸುತ್ತೇನೆ.. ಹೆಸರಿನ ಜೊತೆಗೆ ಹಾಡು ಕೂಡ. ಏನ್ ಪುಣ್ಯ ಗುರು?! ಎಂದು ಆಧುನಿಕ ಶೈಲಿಯಲ್ಲಿ ಹೇಳಬೇಕೆನಿಸುತ್ತದೆ.

ಹಲವು ವರ್ಷಗಳ ಅನುಬಂಧವಿದ್ದವರಿಗೆ ರೇಡಿಯೋ ಮೇಲಿನ ಪ್ರೀತಿ ಹಾಗೆಯೇ ಇದೆ. ಅದು ತೋರಿಕೆಯದಲ್ಲ. ಇಂದಿಗೂ ಅಪಾರವಾದ ಶ್ರೋತೃ ಬಳಗವಿದೆ. ಅದು ಬೆಳೆಯುತ್ತಲೇ ಇದೆ. ಅಂತೂ.. ಇಂತೂ ನಂದೂ ಮಾಮನ ಕಾಲದಿಂದ, ಇಂದಿನ ವರೆಗಿನ ಸಂಗತಿ ಹಂಚಿಕೊಂಡೆ. ಮನಸು ಹಗುರವಾಗಿದೆ.