ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ. ಕಥೆ ನಿರೂಪಣೆಯಲ್ಲಿ ಆಕರ್ಷಣೀಯವಾಗಿದ್ದು ಮಧ್ಯಮ ವರ್ಗದ ಕಾರ್ಮಿಕರ ಕೊಳಗೇರಿಯ ಜನರ ಬದುಕನ್ನು ವಸಂತಕುಮಾರ್ ಕಲ್ಯಾಣಿ ಅವರು ಸಮರ್ಥವಾಗಿ ಬರೆಯುತ್ತಾರೆ.
ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ

ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಚಂಪೂ ಕಾವ್ಯ, ಷಟ್ಪದಿ, ಹರಿಹರನ ರಗಳೆ.. ಇವುಗಳಿಂದ ಬರೆದ ಕಾವ್ಯಗಳೇ ಎದುರಾಗುತ್ತವೆ. ‘ವಡ್ಡಾರಾಧನೆ’ಯಂತಹ ಕಥೆ ಹೇಳುವ ಗದ್ಯ ಕೃತಿಗಳ ಸಂಖ್ಯೆ ಕಡಿಮೆ. ಈ ಮಹಾಕಾವ್ಯಗಳು ಕಥೆಯನ್ನೇ ಹೇಳುತ್ತವಾದರೂ ಅವು ಕಾವ್ಯ ಪ್ರಕಾರದ ಕೃತಿಗಳು. ಸಾಹಿತ್ಯದಲ್ಲಿ ಬರೀ ಕಾವ್ಯವೇ ತುಂಬಿದ್ದನ್ನು ಕಂಡು ಮುದ್ದಣ ‘ಪದ್ಯಂ ವಧ್ಯಂ, ಗದ್ಯಂ ಹೃದ್ಯಂ’ ಎಂದು ಹೇಳಿದ್ದಾನೆ.

ಗದ್ಯದಲ್ಲಿ ಕಥೆ ಹೇಳಿದವರು ‘ವಡ್ಡಾರಾಧನೆ’ ಶಿವಕೋಟ್ಯಾಚಾರ್ಯ ,’ಚಾವುಂಡರಾಯಪುರಾಣ’ದ ಚಾವುಂಡರಾಯ, ‘ಜೀವಸಂಬೋಧನಂ’ ಬರೆದ ಬಂಧುವರ್ಮ, ‘ಧರ್ಮಾಮೃತ’ ದ ನಯಸೇನ, ‘ಸಮಯ ಪರೀಕ್ಷೆ’ಯ ಬ್ರಹ್ಮಶಿವ.. ಹೀಗೆ ಕೆಲವು ಜನ ಮಾತ್ರ.

(ವಸಂತಕುಮಾರ್ ಕಲ್ಯಾಣಿ)

ಕಥೆಗಳಿಗೆ ತಮ್ಮದೇ ಆದ ವೈಶಿಷ್ಟ್ಯ, ಮೆಚ್ಚುವ ಓದುಗರು ಇದ್ದೇ ಇದ್ದಾರೆ. ‘ಜಾನಪದ ಕಥೆಗಳು’, ರಾಜಕುಮಾರರಿಗೆ ಶಿಕ್ಷಣ ನೀಡಿದ ‘ಪಂಚತಂತ್ರ’ ಕಥೆಗಳು, ತೆನಾಲಿ ರಾಮನ ಕತೆಗಳು, ಶಿವಶರಣರ ಕಥೆಗಳು.. ಇವೆಲ್ಲ ಕಥಾ ಸಾಹಿತ್ಯಕ್ಕೆ ಮೆರಗುಕೊಟ್ಟಿವೆ. ಆಧುನಿಕ ಕನ್ನಡ ಕಥಾ ಸಾಹಿತ್ಯ ಇಪ್ಪತ್ತನೆಯ ಶತಮಾನದಲ್ಲಿ ಒಂದು ನಿರ್ದಿಷ್ಟ ರೂಪವನ್ನು ತಾಳಿತು ಎನ್ನಬಹುದು. 1920ರಲ್ಲಿ ಪ್ರಕಟವಾದ ಮಾಸ್ತಿಯವರ ಸಣ್ಣ ಕತೆಗಳಿಂದ ಆಧುನಿಕ ಕಥಾ ಸಾಹಿತ್ಯದ ಬಾಗಿಲು ತೆರೆಯಿತು.

ಸಣ್ಣಕತೆಗಳನ್ನು ಅಪಾರ ಆಸಕ್ತಿಯಿಂದ ಓದುತ್ತಲೇ ಬೆಳೆದು, ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟವರು- ವಸಂತಕುಮಾರ ಕಲ್ಯಾಣಿ. ಇವರು ಮೂಲತಃ ಕರಾವಳಿಯ ಕಾರ್ಕಳದವರಾದರೂ, ಬೆಳೆಸಿ, ಬದುಕನ್ನು ಕಟ್ಟಿ ಕೊಟ್ಟ ಬೆಂಗಳೂರು ನಗರ, ಇವರ ಕಾರ್ಯಕ್ಷೇತ್ರ. ಜಯಂತ ಕಾಯ್ಕಿಣಿಯವರು, ಮುಂಬಯಿಯ ಮಧ್ಯಮ ವರ್ಗದ ಕಾರ್ಮಿಕರ ಬದುಕನ್ನು, ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟಂತೆ, ‘ವಸಂತಕುಮಾರ್ ಕಲ್ಯಾಣಿ’ ಯವರು ಬೆಂಗಳೂರು ನಗರದ, ಕಾರ್ಮಿಕ, ಮಧ್ಯಮ, ಕೆಳಮಧ್ಯಮ ಜನರ ಬದುಕನ್ನು ತಮ್ಮ ಕಥೆಗಳ ವಸ್ತುವಾಗಿಸಿಕೊಂಡಿದ್ದಾರೆ.

“ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗಿ…” ಎಂಬಂತೆ ಇವರು ಕಂಡ ಬದುಕೆಲ್ಲ ಚೆಂದದ ಕಥೆಗಳಾಗಿ ಅರಳಿವೆ. 2012ರಲ್ಲಿ’ ಕಾಂಚನ ಮಿಣಮಿಣ’ ಕಥಾ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಅವರು, ಇದೀಗ ಎರಡನೆಯ ಕಥಾಸಂಕಲನ ‘ಪರ್ಯಾಪ್ತ ಮತ್ತು ಇತರ ಕಥೆಗಳು…” ಕೃತಿಯನ್ನು ಹೊರತರುತ್ತಿದ್ದಾರೆ. ಇಪ್ಪತ್ತೊಂದು ಕಥೆಗಳು ಈ ಕಥಾಸಂಕಲನದಲ್ಲಿವೆ. ಬೆಂಗಳೂರು ನಗರದ ಕಾರ್ಮಿಕ ವರ್ಗ ಮಧ್ಯಮ ವರ್ಗ ಕೆಳ ಮಧ್ಯಮವರ್ಗ ಮತ್ತು ಕೊಳಗೇರಿಯ ಜನರ ಬದುಕನ್ನು ಅವರು ಅತ್ಯಂತ ಸಹಜವಾಗಿ ನಿರೂಪಿಸುತ್ತಾರೆ. ಅವರು ನಿರೂಪಕರಾಗಿ ಅವರ ಕಥೆಗಳ ಪಾತ್ರಗಳು ತಮ್ಮ ಬದುಕು, ಬವಣೆ, ಶೋಷಣೆ, ಹೋರಾಟ.. ಎಲ್ಲವನ್ನೂ ಸಹಜವಾಗಿ ತಾವಾಗಿ ಬಂದು ಹೇಳುತ್ತವೆ.

ಇಲ್ಲಿನ ಕತೆಗಳು, ಅತ್ಯಂತ ಆಳಕ್ಕಿಳಿದು ಮಾನಸಿಕ ಹೋರಾಟ, ತುಮುಲಗಳನ್ನು ಹೇಳಿಕೊಳ್ಳುವುದಿಲ್ಲ. ಹೊಸಬಗೆಯ ಕಥಾತಂತ್ರ, ಧ್ವನಿ, ಇವುಗಳ ತಂಟೆಗೆ ಹೋಗದೆ, ಸಹಜವಾಗಿ ಮತ್ತು ನೇರವಾಗಿ, ತಮ್ಮ ಸುತ್ತಮುತ್ತಲಿನ, ಅಕ್ಕಪಕ್ಕದ ಮನೆಗಳ ಜನರ, ಬದುಕು, ಹೋರಾಟ, ಶೋಷಣೆ, ಬವಣೆಗಳನ್ನು ಚಿತ್ರಿಸುತ್ತಾ.. ಆಧುನಿಕ ಕಾಲದ, ಬೆಂಗಳೂರು ನಗರದ, ಇತ್ತೀಚಿನ ದಶಕಗಳ ಜನಸಾಮಾನ್ಯರ, ತವಕ-ತಲ್ಲಣಗಳನ್ನು, ಹೋರಾಟಗಳನ್ನು ಬಿಂಬಿಸಿವೆ. ಇದು ಅವರ ಕಥೆಗಳ ಮಹತ್ತ್ವವನ್ನು ಹೆಚ್ಚಿಸಿದೆ. ಕಥೆಗಳ ವಸ್ತು ಪ್ರಬುದ್ಧವಾಗಿದ್ದರೂ, ಕಥೆಗಾರರು ತಾವು ಪಾತ್ರವಾಗದೆ, ಹೊರಗೆ ನಿಂತು ಕತೆಗಳನ್ನು ಹೇಳುವ ಕ್ರಮ ಮೆಚ್ಚುಗೆಗೆ ಪಾತ್ರವಾದರೂ, ಇದರಿಂದ ‘ಆಳಕ್ಕಿಳಿಯದೆ ಶ್ರೇಷ್ಠ ಕಥೆಯಾಗುವ ಅವಕಾಶ ತಪ್ಪಿದೆ’ ಎನಿಸುತ್ತದೆ. ಆದರೂ ಈ ಕತೆಗಳು ಕಾರ್ಮಿಕ ಜನರ ಬದುಕನ್ನು, ಅವರ ಆಸೆ, ಬದುಕು, ಶೋಷಣೆ, ಸ್ವಾರ್ಥ, ಹೋರಾಟ.. ಎಲ್ಲವನ್ನೂ ಕಟ್ಟಿಕೊಡುವಲ್ಲಿ ಸಫಲವಾಗಿರುವುದು ಸತ್ಯ.

‘ಪರ್ಯಾಪ್ತ’ ಕಥೆ ಈ ಸಂಕಲನದ ಉತ್ತಮ ಕಥೆಗಳಲ್ಲೊಂದು. ಆಧ್ಯಾತ್ಮದ ಪುಸ್ತಕಗಳು, ರಾಮಕೃಷ್ಣಾಶ್ರಮದ ಪ್ರಭಾವಕ್ಕೊಳಗಾದ ವಿವೇಕಾನಂದ, ಹೆತ್ತವರಿಗಾಗಿ, ತಮ್ಮನಿಗಾಗಿ ದುಡಿಯುತ್ತಾ, ಬ್ರಹ್ಮಚಾರಿಯಾಗಿರಲು ನಿರ್ಧರಿಸಿದ್ದರೂ.. ಉನ್ನತಿಯ ಪರಿಚಯವಾದಾಗ ಅವಳನ್ನು ಲಗ್ನವಾಗಿ ಬಾಳು ಕೊಡಲು ಅಪೇಕ್ಷಿಸುತ್ತಾನೆ. ಇಬ್ಬರ ಹೆತ್ತವರು ಅವರ ಅನುಕೂಲಕ್ಕಾಗಿ ಸ್ವಾರ್ಥಿಗಳಾದಾಗ ಇವರಿಬ್ಬರೂ ತೆಗೆದುಕೊಂಡ ನಿರ್ಧಾರ ಮನಸೆಳೆಯುತ್ತದೆ.


‘ತಾಯತ’ ಕಥೆ, ಅಪರೂಪದ ಕಥಾವಸ್ತು. ನಿವೃತ್ತರಾದ ಶ್ರೀನಿವಾಸಮೂರ್ತಿಗಳಿಗೆ ಪಾರ್ಕನಲ್ಲಿ ಗೆಳೆಯರು ಜೊತೆಯಾದರು. ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಶ್ರೀನಿವಾಸಮೂರ್ತಿಗಳು ಸ್ಥಿತಪ್ರಜ್ಞರು. ಗೆಳೆಯರಿಗೆ ತಾಯಿತಗಳನ್ನು ಕೊಟ್ಟು, ಹೇಳುವ ಪರಿಹಾರವು, ಕೊನೆಯಲ್ಲಿ ಕಥೆಗೊಂದು ತಿರುವು ನೀಡಿ ಕಥೆ ಮನಮುಟ್ಟುತ್ತದೆ.

‘ಕಾಲಿಂಗ್ ಬೆಲ್’ ಕಥೆಯಲ್ಲಿ, ಮಧ್ಯಮವರ್ಗದ ‘ಚಲಪತಿ’ ಕಾಲಿಂಗ್ ಬೆಲ್ ನ ‘ಡಿಂಗ್- ಡಾಂಗ್’ ಶಬ್ದಕ್ಕೆ ಆಸೆಪಟ್ಟರೂ, ಎಲ್ಲಿಯೂ ಆಶಿಸಿದ ಧ್ವನಿಯ ‘ಕಾಲಿಂಗ್ ಬೆಲ್’ ಸಿಗದೆ, ನಿರಾಶನಾಗುತ್ತಾನೆ. ಕೊನೆಗೆ ಅವನು ಕೆಲಸಕ್ಕೆ ಹೋದಾಗ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಕಾಲಿಂಗ್ ಬೆಲ್ ಅಳವಡಿಸಿ ಹೋಗುತ್ತಾರೆ. ನಂತರ ಚಲಪತಿಯ ಚಿಕ್ಕ ಆಸೆಗೂ ವಿಷಾದದ ಅಂತ್ಯ ಎದುರಾಗುವುದು ಅನಿರೀಕ್ಷಿತ.

“ಸ್ವಾಮಿಯೇ ಶರಣಂ..” ಕಥೆಯಲ್ಲಿ, ನಿಖಿಲ್ ಗೆಳೆಯ ಜಗ್ಗಿ, ಕುಡಿತದ ಮತ್ತಿನಲ್ಲಿ ರಾಜಕೀಯ, ಸಿನಿಮಾ.. ಮಾತಾಡುತ್ತಾ ಆಡಿದ ಅಶ್ಲೀಲವಾದ ಮಾತಿಗೆ ಕೆರಳಿದ ಜಗ್ಗಿ, ನಿಖಿಲ್ ನ ಕೊಲೆಗೆ ರೆಡಿಯಾಗಿ ಮಾರೇನಹಳ್ಳಿಯ ಕೆರೆಯ ದಂಡೆಯ ಬಳಿ ಕಾದು ಕೂರುತ್ತಾನೆ. ಆದರೂ, ಗೆಳೆಯರ ನಡುವೆ ಉಂಟಾಗುವ ಒಡಕುಗಳಿಗೆ ಸಿಗುವ, ಆಕಸ್ಮಿಕ ತಿರುವು ಮುದ ನೀಡುತ್ತದೆ. ಹೀಗೆ ವಸಂತಕುಮಾರ್ ಕತೆ ನಿರೂಪಿಸುವಲ್ಲಿ ಗೆಲ್ಲುತ್ತಾ ಹೋಗುತ್ತಾರೆ.

‘ಝಂಡಾ ಊಂಚಾ..’ ಕತೆಯಲ್ಲಿ, ರಾಜಧಾನಿಯ ಕೊಳಗೇರಿಯಲ್ಲಿ ಗೆಳೆಯ ಫಣಿರಾಜನ ಆಹ್ವಾನಕ್ಕೆ ಒಪ್ಪಿ, ‘ಸ್ವಾತಂತ್ರ್ಯ ದಿನಾಚರಣೆ’ಗೆ ಅತಿಥಿಯಾಗಿ ಹೋದ ಸದಾಶಿವನಿಗೆ, ಕೊಳಗೇರಿಯಲ್ಲಿನ ರಾಜಕೀಯ ಡ್ರಾಮಾದ ಪರಿಚಯವಾಗುತ್ತದೆ. ‘ಮಾಯೆ ನಿನ್ನೊಳಗೋ..’ ಕಥೆಯಲ್ಲಿ ಮೆತ್ತನೆಯ ಮನಸ್ಸಿನ, ದೈವಭೀರು ನಾಯಕ, ಹೆಣ್ಣುಮಗಳೊಬ್ಬಳಿಗೆ ಅನಿವಾರ್ಯವಾಗಿ ಡ್ರಾಪ್ ಕೊಡಬೇಕಾಗಿ ಬಂತು. ಅದು ನಿತ್ಯವೂ ಮುಂದುವರೆದು, ಅಭ್ಯಾಸವಾಗಿ, ಅವನಲ್ಲಿ ತಾಕಲಾಟ, ತಳಮಳ.. ಕೊನೆಗೆ ಸಮಸ್ಯೆಗೆ ಹೇಗೋ ಸಿಗುವ ಪರಿಹಾರ, ಕಥೆಗೆ ಸೂಕ್ತ ಅಂತ್ಯ ಒದಗಿಸುತ್ತದೆ.

(ಜಿಎಸ್ ಸುಶೀಲಾದೇವಿ ಆರ್ ರಾವ್)

ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ. ಕಥೆ ನಿರೂಪಣೆಯಲ್ಲಿ ಆಕರ್ಷಣೀಯವಾಗಿದ್ದು ಮಧ್ಯಮ ವರ್ಗದ ಕಾರ್ಮಿಕರ ಕೊಳಗೇರಿಯ ಜನರ ಬದುಕನ್ನು ವಸಂತಕುಮಾರ್ ಕಲ್ಯಾಣಿ ಅವರು ಸಮರ್ಥವಾಗಿ ಬರೆಯುತ್ತಾರೆ. ಆದರೆ ಅವರು ವರದಿಯಂತೆ ನಿರೂಪಿಸುತ್ತಾ ಹೋಗುತ್ತಾರೆ. ಓದುಗರ ಗಮನ ಸೆಳೆದು ಮೆಚ್ಚುಗೆ ಪಡೆದರೂ ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರಿಸಬಹುದಾದ ಅವಕಾಶದಿಂದ ಕಥೆಗಳು ವಂಚಿತವಾಗುತ್ತವೆ. ದಟ್ಟವಾದ ಜೀವನಾನುಭವ ಇದ್ದರೂ, ಸರಳವಾದ ನಿರೂಪಣೆಯಿಂದ ‘ಇದೇ ಕಥಾವಸ್ತು ಇನ್ನಷ್ಟು ಪರಿಣಾಮಕಾರಿಯಾಗಿ ಬರಬಹುದಿತ್ತು’ ಎನಿಸುತ್ತದೆ.

‘ಮಳೆರಾಯನ ಸ್ವಗತ’ ಅಪರೂಪದ ಥೀಮ್. ಕಥೆ ಕಾಳಿದಾಸನ ‘ಮೇಘಸಂದೇಶ’ವನ್ನು ನೆನಪಿಸುತ್ತದೆ. ಮಳೆರಾಯ ಬೆಂಗಳೂರಿನ ಬೀದಿಗಳಲ್ಲಿ ವಾಕಿಂಗ್ ಹೊರಟಿದ್ದಾನೆ. ಹಲವರಿಗೆ ಮಳೆಬೇಕು, ಹಲವರಿಗೆ ಮಳೆ ಬೇಡ, ಕೊನೆಗೆ ಮಳೆರಾಯ ತಬ್ಬಿಬ್ಬಾಗಿ ಹೈಕಮಾಂಡ್ ಆದೇಶದಂತೆ ನಡೆಯಲು ನಿರ್ಧರಿಸುತ್ತಾನೆ. ಇದೊಂದು ಸಫಲವಾದಕಥೆ. ‘ಕಳ್ಳರ ಸಂತೆ’ ಕಥೆಯಲ್ಲಿ, ಪ್ರಾಮಾಣಿಕ ಆಟೊ ಡ್ರೈವರ್, ಪ್ರಯಾಣಿಕರು ಬಿಟ್ಟುಹೋದ ಕಿಟ್ ಬ್ಯಾಗ್ ಹಿಂದಿರುಗಿಸಲು ಹೋದಾಗ, ನಡೆದ ಘಟನೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಿದೆ.

ಈ ಕಥಾಸಂಕಲನದ ಇಪ್ಪತ್ತೊಂದು ಕಥೆಗಳು ವಸ್ತು ವೈವಿಧ್ಯತೆಯಿಂದ ಓದುಗರ ಮನ ಗೆಲ್ಲುವತ್ತ ಸಾಗಿವೆ. ‘ವಸಂತಕುಮಾರ್ ಕಲ್ಯಾಣಿ’ ಯವರ ಕಥಾಶೈಲಿ ಸರಳವಾದುದು. ‘ನೇರವಾಗಿ ಕಥೆ ಹೇಳಬೇಕು’ ಎಂಬುದು ಅವರ ಆಶಯ. ಹಾಗಾಗಿ ಅವರ ಕಥೆಗಳು ಸರಳವಾಗಿ ಓದುಗರ ಮನಸ್ಸನ್ನು ತಟ್ಟುತ್ತವೆ, ರಂಜಿಸುತ್ತವೆ, ಆದರೆ ಆಳಕ್ಕೆ ಇಳಿಯುವುದಿಲ್ಲ. ಇದು ಅವರ ಕತೆಗಳ ಮಿತಿಯೂ ಹೌದು. ಅವರ ಅನುಭವ, ಕಂಡ ಜಗತ್ತು, ಜನರ ತವಕ- ತಲ್ಲಣಗಳು ಇಲ್ಲಿಯ ಕಥೆಗಳ ಎಲ್ಲ ಪಾತ್ರೆಗಳಲ್ಲಿ ತುಂಬಿ ಕೊಂಡಿವೆ. ಅಲ್ಲದೆ ಸಮರ್ಥವಾಗಿ ನಿರೂಪಿಸಲ್ಪಟ್ಟಿವೆ. ಮುಂದಿನ ಅವರ ಹೆಜ್ಜೆಗಳಲ್ಲಿ, ಇನ್ನಷ್ಟು ಉತ್ತಮ ಕಥೆಗಳನ್ನು ಬರೆದು, ಮಹತ್ವದ ಕಥೆಗಾರರಾಗಿ ಹೆಸರು ಪಡೆಯಲಿ, ಎಂದು ಹಾರೈಸುತ್ತೇನೆ.

(ಕೃತಿ: ಪರ್ಯಾಪ್ತ ಮತ್ತು ಇತರೆ ಕತೆಗಳು (ಕಥಾ ಸಂಕಲನ), ಲೇಖಕರು: ವಸಂತಕುಮಾರ್ ಕಲ್ಯಾಣಿ, ಪ್ರಕಾಶನ: ಸಹನಾ ಪಬ್ಲಿಕೇಷನ್ಸ್‌,  ಬೆಲೆ: 150/- )