ನಾನು ಸುಮ್ಮನೆ ಶಾಂತವಾಗಿ, ಸ್ಥಬ್ಧವಾಗಿ ನಿಂತಿದ್ದೆ
ಸನಿಹದಲ್ಲಿ ಹರಿಯುತ್ತಿದ್ದ ಸಮುದ್ರದಲ್ಲಷ್ಟೆ
ತೂಫಾನಿನ ಗದ್ದಲ;
ದೇವರೆ ಬಲ್ಲ,
ಸಮುದ್ರಕ್ಕೆ ಅದೇನು ನೆನಪಾಯಿತೋ ಕಾಣೆ
ತೂಫಾನಿನ ಗಂಟೊಂದನ್ನು ಕಟ್ಟಿ
ನನ್ನ ಕೈಗಿತ್ತು ನಗುತ್ತ ಸರಿದುಹೋಯಿತು ದೂರ.

ಆಶ್ಚರ್ಯ, ಆಘಾತ
ಅದೊಂಥರ ಮಜಭರಿತ ಚಮತ್ಕಾರ
ಇಂದಹದ್ದೆಲ್ಲ ಯುಗಗಳಿಗೊಮ್ಮೆ ಸಂಭವಿಸುತ್ತದೆ
ನಿಕ್ಕಿಯಿತ್ತು ನನಗೆ;

ಲಕ್ಷಾಂತರ ಯೋಚನೆಗಳು ಅಪ್ಪಳಿಸಿದವು
ತಲೆಯೊಳಗೆ ತಲ್ಲಣಿಸಿದವು;

ನಿಂತುಬಿಟ್ಟೆ ಹೊತ್ತು
ಈಗ ನಡೆವುದಾದರು ಹೇಗೆ ನನ್ನೂರಿನೆಡೆಗೆ?

ನನ್ನೂರಿನ ಹಾದಿಗಳೆಲ್ಲ ಕಿರಿದು
ಮಾಡುಗಳೆಲ್ಲ ಕುಳ್ಳದ್ದು
ನನ್ನೂರಿನ ಗೋಡೆಗಳಿಗೆ ಹಿತ್ತಾಳೆ ಕಿವಿ

ಯೋಚಿಸಿದೆ ನೀನೆಲ್ಲಾದರು ಸಿಕ್ಕಿದ್ದರೆ
ಹೀಗೆ ಸಮುದ್ರದಂತೆ,
ಎದೆಗವಿತಿಕೊಂಡು
ಎರಡು ಕಿನಾರೆಗಳಂತೆ ನಗಬಹುದಿತ್ತು.

ಕುಳ್ಳ ಮಾಡಿನ
ಕಿರಿದಾದ ಹಾದಿಯ
ಊರಿನಲ್ಲಿ ತಂಗಬಹುದಿತ್ತು;

ಆದರೆ ಮಧ್ಯಾಹ್ನವಿಡಿ ನಿನ್ನ
ಹುಡುಕುವುದರಲ್ಲೆ ಕಳೆದೆ
ನಾನೆ ಕುಡಿದೆ
ನನ್ನೊಳಗಿನ ಸುಡು ಬೆಂಕಿಯ;

ನಾನೊಂದು ಒಂಟಿ ಕಿನಾರೆ
ಬಿದ್ದುಕೊಂಡೆ ತಡಿಯಂಚಲ್ಲಿ
ಮರಳಿಸಿಬಿಟ್ಟೆ
ಮತ್ತೆ
ಬೆಳಗಾಗುವ ಹೊತ್ತಿಗೆ ತೂಫಾನನ್ನು
ಕಡಲಿಗೆ;

ಈಗ ಕತ್ತಲಾವರಿಸುವ ಹೊತ್ತು ನೀನು ಸಿಕ್ಕಿಹೆ
ನೀನು ಖಿನ್ನ, ಮೌನ, ಶಾಂತ, ಸ್ಥಬ್ಧ
ನಾನು ಖಿನ್ನ ,ಮೌನ, ಶಾಂತ, ಸ್ಥಬ್ಧ
ದೂರದಲ್ಲೊಂದು ಸಮುದ್ರದಲ್ಲಿ ಮಾತ್ರ ತೂಫಾನು;

***
ಒಂದು ನೋವಿತ್ತು;
ಸಿಗರೇಟಿನ ತರಹ
ನಾನು ಸುಮ್ಮನೆ ಸೇದುತ್ತಿದ್ದೆ
ಸಿಡಿಸಿದ ಬೂದಿಯಿಂದ
ಕೆಲವಷ್ಟೆ ಪದ್ಯಗಳು ಉಳಿದವು;

*****

ಇದು ಬೆಂಕಿಯ ಮಾತು
ನೀನೆ ಹೇಳಿದ ಮಾತು
ಜೀವನವೆಂಬ ಸಿಗರೇಟು
ಹಚ್ಚಿಹೋಗಿದ್ದೆ ನೀನೆ ಅಂದು

ನೀನು ಕಿಡಿಹಚ್ಚಿದೆ
ಹೃದಯ ಶಾಶ್ವತವಾಗಿ ಉರಿಯುತ್ತಿತ್ತು;
ಸಮಯ ಪೆನ್ನು ಹಿಡಿದುಕೊಂಡು
ಲೆಕ್ಕ ಬರೆಯುತ್ತಿತ್ತು;

ನಿಮಿಷಗಳು ಹದಿನಾಲ್ಕು
ಲೆಕ್ಕ ನೋಡು
ಕೇವಲ ಹದಿನಾಲ್ಕು ವರ್ಷಗಳು
ಈ ಪೆನ್ನನ್ನು ಕೇಳು;

ನನ್ನ ಈ ಉಸಿರೊಳಗೆ
ನಿರಂತರ ನಿನ್ನ ಉಸಿರಾಟ;
ಹೊಗೆ ಹೊರಹೊಮ್ಮುತ್ತಿತ್ತು
ಭೂಮಿ ಸಾಕ್ಷಿಯಾಗಿತ್ತು.

ಆಯುಷ್ಯದ ಸಿಗರೇಟು ಉರಿದುಹೋಯಿತು
ನನ್ನ ಪ್ರೇಮದ ಗಂಧ
ಒಂದಷ್ಟು ನಿನ್ನಲ್ಲಿ
ಮತ್ತಷ್ಟು ಗಾಳಿಯಲ್ಲಿ ಲೀನವಾಯಿತು.

ನೋಡು ಇದು ಕೊನೆಯ ತುಂಡು
ಬೆರಳುಗಳನ್ನು ಸಡಿಲಿಸು
ನನ್ನ ಅನುರಾಗದ ಕಿಡಿ
ನಿನ್ನ ಬೆರಳುಗಳಿಗೆ ತಾಗದಿರಲಿ.

ಇನ್ನು ಜೀವಿಸುವ ಹಂಗಿಲ್ಲ
ಈ ಬೆಂಕಿಯನ್ನು ಸಂಭಾಳಿಸು
ನಿನ್ನ ಕೈಗಳ ಸೌಖ್ಯವನ್ನು ಬಯಸುತ್ತೇನೆ
ಈಗ ಹೆಚ್ಚೆಚ್ಚು ಸಿಗರೇಟು ಸುಡು.

 

ನಜ್ಮಾ ನಜೀರ್ ಚಿಕ್ಕನೇರಳೆ ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆಯವರು
ಸದ್ಯ ವೈದ್ಯಕೀಯ ಕಲಿಕೆಗಾಗಿ ಬೆಂಗಳೂರಿನಲ್ಲಿ ವಾಸ.
ರೇಡಿಯೋ ಜಾಕಿಯಾಗಿಯು ಕೆಲಸ ನಿರ್ವಹಿಸಿರುವ ಇವರಿಗೆ ಕಾರ್ಯಕ್ರಮಗಳ ನಿರೂಪಣೆ ಮತ್ತು ಸಿನೆಮಾಗಳಿಗೆ ಕಂಠದಾನ ಮಾಡುವುದು ಪ್ರವೃತ್ತಿ.
ಪದ್ಯ ಬರೆಯುವುದು, ಅನುವಾದ, ಪುಸ್ತಕ ಓದು ಇವರ ಹವ್ಯಾಸ