ಗಾಂಧಿ ಹೆಸರಿಟ್ಟ ಕವಿತೆ

ಆಗಷ್ಟೆ
ಭಜನೆ ಮುಗಿದಿತ್ತು
ವೈಷ್ಣವ ಜನತೋ‌ ನಾದ
ಅಂಗಳದಲ್ಲೆಲ್ಲ ಹಬ್ಬಿತ್ತು
ಕವಿದ ಮಂಜಿನಲಿ
ಆಶ್ರಮದ ಚಿತ್ರ
ಇನ್ನೂ ಅಸ್ಪಷ್ಟ

ಒಂದೆಡೆ
ದಟ್ಟ ಮರಗಳ ಮರೆಯಿಂದ
ಎಳೆ ಬಿಸಿಲಿನ ಕಿರಣಗಳು
ನೆಲವ ಸ್ಪರ್ಷಿಸುತ್ತಿದ್ದರೆ
ಇನ್ನೊಂದೆಡೆ
ಸಾಬರಮತಿ‌ ನದಿಯ
ದೈತ್ಯ ಹರಿವು

ಸುತ್ತಲೂ ನೂರಾರು
ಖಾದೀಧಾರಿಗಳು
ಬಹುಶಃ
ದಂಡಿ ಯಾತ್ರೆಯ
ತಯಾರಿ ನಡೆದಿರಬೇಕು

ಅಷ್ಟರಲಿ ಲಾಠಿ ಹಿಡಿದ
ಬಾಪುವಿನಾಗಮನ
ಸ್ಮಿತವದನ
ಗಂಭೀರ ನಡಿಗೆ

ನಿಧಾನವಾಗಿ ಸಾಗುತ್ತ ಬಾಪೂ
ಚರಕದತ್ತ ಹೋಗುತಿರುವಾಗ
ನಿರಾಕಾರ ವಸ್ತುವೊಂದು
ಹಾರುತ್ತ-ಹಾರುತ್ತ
ಬಾಪುವಿನ ಎದುರು ಬಂದು ಬಿತ್ತು

ನೋಡಿದರೆ
ಅರೆಸತ್ತ ಕವಿತೆ..!!
ದೇಹ ರಕ್ತಸಿಕ್ತ
ಗಾಯಗಳಿಂದ
ಕೀವು ಒಸರುತ್ತಿತ್ತು
ಛಿದ್ರಗೊಂಡ ದೇಹ
ಗಬ್ಬೆದ್ದು ಹೋಗಿತ್ತು

ಹಲ್ಲೆಗೊಳಗಾಗಿದ್ದ ಕವಿತೆಯ‌ ಮೇಲೆ
ಚಾಕು-ಚೂರಿ-ತಲವಾರುಗಳ
ಇರಿತದ ನಿಶಾನೆಗಳು

ಬಿದ್ದ ಕವಿತೆಯನೆತ್ತಿದ
ಗಾಂಧಿಯ ಹಣೆಮೇಲೆ
ಒಂದು‌ ಕ್ಷಣದ ಚಿಂತೆ
ಕವಿತೆಯನೊಮ್ಮೆ
ಮೇಲಿಂದ ಕೆಳಗೆ
ದಿಟ್ಟಿಸಿ‌ ನೋಡಿ
ದೀರ್ಘ ನಿಟ್ಟುಸಿರು

ಕವಿತೆಯ ಒಳಹೊಕ್ಕಿದಂತಿದ್ದ ಬಾಪೂ
ಈಗ ಅಂತರ್ಮುಖಿ

ಏನೋ ಹೊಳೆದಂತಾಗಿ
ಥಟ್ಟನೇ ಕಣ್ತೆರೆದು
ಸಾಹಿತಿಯನು ಹುಡುಕಿದ ಬಾಪೂ
ಬಾನಿನತ್ತ ಮುಖಮಾಡಿ
ಹೇ ರಾಮ್ ಉದ್ಗರಿಸಿ
ಕವಿತೆಯ ಮೇಲೆ
“ಸ್ವಾತಂತ್ರ್ಯ” ಎಂದು ಬರೆದು
ನಿರುಮ್ಮಳವಾದರು

ಯಾವ ಗಾಳಿಯಲಿ ತೇಲಿ ಬಂದಿತ್ತೋ ಕವಿತೆ
ಅದೇ ಗಾಳಿಯಲಿ ಮತ್ತೆ ಹಾರಿಹೋಯಿತು

ಚಿಂತಾಕ್ರಾಂತವಾಗಿದ್ದ ಬಾಪೂವಿನ ಮೊಗ
ಈಗ ಮಂದಸ್ಮಿತ