ಅವತ್ತು ಯಾವುದೋ ಸಿನೆಮಾ ನೋಡಲು ಹೋಗಿ ಟಿಕೆಟ್ ಸಿಗದೇ ‘ಸೀತಾ-ರಾಮು’ ಸಿನೆಮಾಗೆ ಹೋಗಿದ್ದೆ. ಹೋಗುವಾಗ ಅದರಲ್ಲಿ ಮಂಜುಳಾ ನಟಿಸಿದ್ದಾರೆ ಅನ್ನೋದೊಂದು ಮಾಹಿತಿ ಬಿಟ್ಟರೆ ಮತ್ತೊಂದು ವಿಷಯ ಗೊತ್ತಿಲ್ಲ. ಯಾವುದೋ ಒಂದು ಸಿನೆಮಾ ಅಂತ ಹೋಗಿ ಕೂತಿದ್ದೆ ಗೆಳತಿಯರ ಜೊತೆ. ಅದು ಶಂಕರ್ ನಟಿಸಿದ ಎರಡನೆಯ ಚಿತ್ರ ಅಂತ ಕೂಡಾ ನನಗೆ ಗೊತ್ತಿಲ್ಲ! ‘ಒಂದಾನೊಂದು ಕಾಲದಲ್ಲಿ’ ನಾನು ನೋಡಿರಲಿಲ್ಲ. ‘ಸೀತಾ ರಾಮು’ ವಿನ ಹೀರೋ ಶಂಕರ್ ನನಗೆ ಅದೆಷ್ಟು ಇಷ್ಟವಾಗಿಬಿಟ್ಟ ಅಂದರೆ ಅಲ್ಲೇ, ಆ ಕ್ಷಣದಲ್ಲೇ ನಾನು ಅವನ ಅಪ್ಪಟ ಫ್ಯಾನ್ ಆಗಿಬಿಟ್ಟೆ! ಆ ಸಿನೆಮಾದಲ್ಲಿನ ಅವನ ವಿಚಿತ್ರ ನಟನೆ ಆವರೆಗೆ ಎಂದೂ ನಾನು ಉಳಿದ ಯಾವ ನಟರಲ್ಲೂ ನೋಡಿರಲಿಲ್ಲ. ಬೆಣ್ಣೆ ಬೆಣ್ಣೆ ಹೀರೋಗಳ ಕಾಲ ಅದು. ಎಲ್ಲ ನಮ್ಮ ಕನ್ನಡದ ನಟರೂ ಮುದ್ದು ಮುದ್ದಾಗಿ ಅಲಂಕಾರ ಮಾಡಿಕೊಂಡು, ಎಷ್ಟೇ ಫೈಟ್ ಮಾಡಿದಾಗಲೂ ಕೂದಲು ಕೂಡಾ ಕೊಂಕದ ಹಾಗೆ ಇರುತ್ತಿದ್ದರು. ಮಿರು ಮಿರುಗುವ ಶೂ, ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ, ನೀಟಾಗಿ ಶೇವ್ ಮಾಡಿದ ನುಣುಪು ಗಲ್ಲ, ಮತ್ತೆ ತೆಳುವಾದ ಲಿಪ್ ಸ್ಟಿಕ್ ಕೂಡಾ ಹಾಕಿರುತ್ತಿದ್ದ ಹೀರೋಗಳ ಮಧ್ಯೆ ಅಡಸಾ ಬಡಸಾ ನಡೆಯುತ್ತಿದ್ದ, ನಯವಿಲ್ಲದ, ಒರಟು ಒರಟಾದ ಗಡ್ಡದ, ಒಂದಿಷ್ಟೂ traditional hero ನ ಚೌಕಟ್ಟಿಗೆ fit ಆಗದ ಶಂಕರ್ ನನ್ನ ಮನಸ್ಸು ಕದ್ದೇ ಬಿಟ್ಟ. ಅಲ್ಲಿಯವರೆಗೆ ಸಿನೆಮಾದಲ್ಲಿ ಗಡ್ಡ ಬಿಡುತ್ತಿದ್ದವರು ವಿಲನ್‌ಗಳು ಮಾತ್ರ! ಹೀರೊ ಗಡ್ಡ ಬಿಡುವುದು?! ಸ್ವಲ್ಪ ವಿಚಿತ್ರವಾಗಿದ್ದರೂ ಇಷ್ಟವಾಗಿ ಹೋದ ಈ ಶಂಕರ್…

ಆಗ ತಾನೆ ನಾವು ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದ ಕಾಲ. ನನಗೆ ಯಾರೂ ಗೆಳತಿಯರೇ ಇರಲಿಲ್ಲ. ಎಲ್ಲರ ಜೊತೆ ಸುಮ್ಮನೆ ನಕ್ಕು, ಎರಡು ಮಾತಾಡುತ್ತಿದ್ದೆನಾದರೂ ಗೆಳತಿ ಅಂತ ಹೇಳಿಕೊಳ್ಳುವವಳು ಒಬ್ಬಳೇ ಒಬ್ಬಳಿಲ್ಲ. ಸೀತಾ ರಾಮು ನೋಡಿ ಬಂದೆನಲ್ಲ .. ಆಗೊಂದು ದಿನ ನೀರು ಕುಡಿಯುತ್ತಾ ನಿಂತಿದ್ದ ನನ್ನ ಪಕ್ಕ ನನ್ನ ಕ್ಲಾಸಿನ ಹುಡುಗಿ ಒಬ್ಬಳು ಬಂದು ನಿಂತಳು. ಅವಳೂ ನೀರು ಕುಡಿಯುವಾಗ ನಾನು ನನ್ನಷ್ಟಕ್ಕೇ ಎಂಬ ಹಾಗೆ, ಅತೀವ ಸಂಕೋಚದಿಂದ ‘ಸೀತಾ ರಾಮು’ ಸಿನೆಮಾಗೆ ಹೋಗಿದ್ದೆ’ ಅಂದೆ. ನೀರು ಕುಡಿಯುತ್ತಿದ್ದ ಅವಳ ಕೈ ಅರೆ ಕ್ಷಣ ತಡೆಯಿತು. ಮೆಲ್ಲನೆ ‘ನಾನೂ ನೋಡಿದೆ’ ಅಂದಳು. ಮತ್ತೆ ನೀರು ಕುಡಿಯುವುದನ್ನು ಮುಂದುವರೆಸಿದೆವು. ಅಷ್ಟರಲ್ಲಿ ಅವಳು ಮೆಲ್ಲಗೆ ‘ಅದರ ಹೀರೋ ನೋಡಿದ್ಯಾ?’ ಅಂದಳು. ಈಗ ನಾನು ಸ್ವಲ್ಪ ತಡೆದು ‘ಹೂ .. ನನಗೆ ತುಂಬ ಇಷ್ಟವಾದ’ ಅಂದೆ ಸಂಕೋಚದಿಂದ .. ಅಷ್ಟು ಹೇಳುವಷ್ಟರಲ್ಲಿ ಬೆವರು! (ಅಯ್ಯೋ ಭಗವಂತಾ ಎಷ್ಟೊಂದು ಹಿಂದುಳಿದಿದ್ದೆವಲ್ಲ!) ಅವಳು ಸ್ವಲ್ಪ ಮೈ ಛಳಿ ಬಿಟ್ಟು ‘ನನಗೂ ಇಷ್ಟವಾದ ಕಣೇ’ ಅಂದಳು … ಆಗ, ಆ ಕ್ಷಣದಲ್ಲಿ ಇಬ್ಬರೂ ಆತ್ಮೀಯರಾಗಿ ಹೋದೆವು. ಅಲ್ಲಿಂದ ಮುಂದೆ ನಾವಿಬ್ಬರೂ ಆತ್ಮೀಯ ಗೆಳತಿಯರಾದೆವು. ಅಲ್ಲಿಂದ ಮುಂದೆ ನಾನು, ಅವಳು ಶಂಕರನ ಒಂದೇ ಒಂದು ಸಿನೆಮಾ ಬಿಡಲಿಲ್ಲ. ಮುಂದೆ ಶಂಕರ್ ಎಷ್ಟೊಂದು mediocre ಸಿನೆಮಾಗಳಲ್ಲೆಲ್ಲ ನಟಿಸಿದರೂ ನಮಗೆ ಮಾತ್ರ ಅವನ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಇಬ್ಬರೂ ಎಲ್ಲ ಸಿನೆಮಾ ನೋಡುವುದಲ್ಲದೇ, ಅದು ಚೆನ್ನಾಗಿದೆ ಅಂತ ಉಗ್ರ ಪ್ರತಿಪಾದನೆ ಕೂಡಾ ಮಾಡುತ್ತಿದ್ದೆವು. ಮನಸಿನಲ್ಲಿ ಗೊತ್ತಿರುತ್ತಿತ್ತು ಅದು ಒಂದು ಚೂರೂ ಚೆನ್ನಾಗಿಲ್ಲ ಅಂತ. ಆದರೂ ಶಂಕರನ ಸಿನೆಮಾ ಸುಮಾರಾಗಿತ್ತು ಅನ್ನುವ ದ್ರೋಹಿಗಳು ನಾವಾಗಲಿಲ್ಲ! ಮೂಗನಸೇಡು, ಆಟೋ ರಾಜ, ಆರದ ಗಾಯ, ಹದ್ದಿನ ಕಣ್ಣು, ಐ ಲವ್ ಯೂ, ಪ್ರೀತಿ ಮಾಡು ತಮಾಷೆ ನೋಡು, ಮಿಂಚಿನ ಓಟ … ಅಯ್ಯೋ ಸುಮ್ಮನೇ ಎಲ್ಲ ಹೆಸರು ಬರೆಯುತ್ತ ಕೂತುಕೊಳ್ಳುವ ಬದಲು ಅವನು ನಟಿಸಿದ ಎಲ್ಲ, ಎಲ್ಲ ಸಿನೆಮಾ ಮೂರು, ಮೂರು ಸಲ ನೋಡಿ ನುಂಗಿ ನೀರು ಕುಡಿದೆವು ನಾನು, ನನ್ನ ಗೆಳತಿ. ನವರಂಗ್ ಥಿಯೇಟರ್‌ನಲ್ಲಿ ಮೊದಲ ದಿನ ಅವನ ಸಿನೆಮಾಗೆ ನಾವು ಖಾಯಂ ಗಿರಾಕಿಗಳು.

ಒರಟು ಒರಟು, ಉರುಟು ಉರುಟು ಹೀರೋ ಹುಚ್ಚು ಹಿಡಿಸಿ ಬಿಟ್ಟಿದ್ದ!

ಆಗೆಲ್ಲ (ಈಗಲೂ ಇದೆಯೋ, ಏನೋ ಗೊತ್ತಿಲ್ಲ) ಹೀರೋಗಳ ಪಾಸ್‌ಪೋರ್ಟ್ ಸೈಜಿನ ಫೋಟೋಗಳ ಕಾಲ. ಈ ಶಂಕರನದ್ದಂತೂ ಅದೆಷ್ಟು ಬಂದವೋ ನನಗೇ ನೆನಪಿಲ್ಲ. ನನ್ನ ಅಪ್ಪನಿಗೆ ಸದಾ ಇದೇ ಕೆಲಸ. ಎಲ್ಲ ಅಂಗಡಿಗಳಿಗೆ ಹೋಗಿ ಹೊಸ, ಹೊಸ ಫೋಟೋ ಹೊತ್ತು ತರುತ್ತಿದ್ದರು. ಅದನ್ನು ನನ್ನ ಮುಂದೆ ಇಟ್ಟು, ನಾನು ಖುಷಿ ಪಡ್ತಿದ್ದನ್ನು ನೋಡಿ ಅವರು ಖುಷಿ ಪಡ್ತಿದ್ದರು. ನನ್ನ ಎಲ್ಲ ಪುಸ್ತಕಗಳ ಮಧ್ಯೆ ಅವನ ಫೋಟೋಗಳೇ. (ಇದು ಎಲ್ಲರೂ ಮಾಡುತ್ತಿದ್ದ ಕೆಲಸವೇ ಇದ್ದಿರಬಹುದು .. ಆದರೆ ನಾನು ಒಂದು ಹೀರೋನ ಫೋಟೋ ಹೀಗೆ ಇಟ್ಟಿದ್ದು ಮೊದಲನೆಯದು ಮತ್ತು ಕೊನೆಯದ್ದು ಎರಡೂ ಶಂಕರನದ್ದೇ) ನನ್ನ ವಾರ್ಡ್‌ರೋಬಿನ ಒಳಗೆಲ್ಲ ಅವನ ಫೋಟೋ ಅಂಟಿಸಿ ಇಟ್ಟಿರುತ್ತಿದ್ದೆ. ಸಂಜೆ ಮನೆಗೆ ಬಂದ ಕೂಡಲೆ ಒಂದು ಸಲ ಅದನ್ನು ತೆಗೆದು ನೋಡಿದರೆ ಸಾಕು ಮನಸ್ಸು ಫ್ರೆಷ್! ನನ್ನ ಅಮ್ಮನಿಗಂತೂ ಈ ರೀತಿ ಫೋಟೊ ಅಂಟಿಸುತ್ತಿದ್ದುದು ಚೂರೂ ಇಷ್ಟವಾಗುತ್ತಿರಲಿಲ್ಲ. ಅದನ್ನು ಅಂಟಿಸುತ್ತಿದ್ದ ನನ್ನನ್ನು ಮತ್ತು ತಂದುಕೊಡುತ್ತಿದ್ದ ನನ್ನ ಅಪ್ಪನನ್ನು ಒಟ್ಟಿಗೇ ರುಬ್ಬಿ ಒಗ್ಗರಣೆ ಹಾಕುತ್ತಿದ್ದಳು .. ‘ಒಳ್ಳೇ ಸಲೂನ್‌ ನೋಡಿದ ಹಾಗಾಗತ್ತೆ ಕಣೇ ನಿನ್ನ ವಾರ್ಡ್‌ರೋಬ್ ನೋಡಿದರೆ .. ಅಸಹ್ಯ, ಕಿತ್ತು ಬಿಸಾಕು’ ಅಂತ ದಿನಕ್ಕೆ ಹತ್ತು ಸಲ ಬೈದರೂ ನನ್ನ ಪ್ರತಿಕ್ರಿಯೆ ಮಾತ್ರ ದಿವ್ಯ ನಿರ್ಲಕ್ಷ್ಯ!

ವಿಜಯಚಿತ್ರ ಅಂತ ಒಂದು ಸಿನೆಮಾ ಪತ್ರಿಕೆ ಬರುತ್ತಿತ್ತು .. ಈಗ ಇದೆಯೋ, ಇಲ್ಲವೋ ಗೊತ್ತಿಲ್ಲ, ಅದರ ಮಧ್ಯ ಪುಟದಲ್ಲಿ ಒಂದು ಅವನ ಬ್ಲೋ ಅಪ್ ಬಂದಿತ್ತು. ಎದೆಯವರೆಗೆ ಜಿಪ್ ತೆರೆದು ನಿಂತ ಅವನ ಫೋಟೋ ಅದರಲ್ಲಿ ಬಂದಿತ್ತು. ಅಬ್ಬಾ! ಅದೆಷ್ಟು ಇಷ್ಟವಾಗಿ ಹೋಯಿತೆಂದರೆ ಅದನ್ನು ನಾನು ಮತ್ತು ನನ್ನ್ ಗೆಳತಿ ಕಟ್ ಮಾಡಿ ಅವನ ಅಡ್ರೆಸ್‌ಗೆ ಕಳಿಸಿದೆವು ‘ಇದರ ಮೇಲೆ ಆಟೋಗ್ರಾಫ್ ಹಾಕಿ ಕಳಿಸಿ’ ಅನ್ನುವ ಬೇಡಿಕೆಯ ಜೊತೆಗೆ. ನಮ್ಮ ಆಶ್ಚರ್ಯಕ್ಕೆ ನನ್ನ ಗೆಳತಿಗೆ ಶಂಕರ ಅದರ ಮೇಲೆ ಸಹಿ ಗೀಚಿ ‘ಪ್ರೀತಿಯ ಶೈಲಾಗೆ’ ಅಂತ ಬೇರೆ ಬರೆದಿದ್ದ! ಅಂದು ಆದ ರೋಮಾಂಚನ ಬಹುಶಃ ಇನ್ನೆಂದೂ ಆಗಿಲ್ಲವೇನೋ. ಆದರೆ ದುರಂತವೆಂದರೆ ನನ್ನ ಫೋಟೊ ಬರಲೇ ಇಲ್ಲ ಮತ್ತು ನಾನು ಅದಕ್ಕಾಗಿ ಶಂಕರನನ್ನು ತುಂಬ ದಿನಗಳ ಕಾಲ ಕ್ಷಮಿಸಿರಲಿಲ್ಲ!

ನನ್ನ ಗೆಳತಿಯೊಬ್ಬಳ ಮನೆ ಶಂಕರನ ಮನೆಯ ಹಿಂದಿನ ರೋಡಿನಲ್ಲಿತ್ತು. ಅವಳನ್ನು ಆ ಕಾರಣಕ್ಕಾಗೇ ಸ್ನೇಹಿತಳನ್ನಾಗಿ ಮಾಡಿಕೊಂಡಿದ್ದೆವು ಕೂಡಾ. ಅವನ ಮನೆಯ ಬಾಲ್ಕನಿಗೆ ಬಂದು ನಿಂತರೆ ಇವಳ ಮನೆಯಿಂದ ಕಾಣುತ್ತಿತ್ತು.ಅವಳು ನಮ್ಮ ಹುಚ್ಚನ್ನು ಕಂಡೋ ಏನೋ ದಿನಾ ಒಂದೊಂದು ಕಥೆ ಹೇಳುತ್ತಿದ್ದಳು. ‘ಇವತ್ತು ಬಾಲ್ಕನಿಗೆ ಬಂದು ನಿಂತಿದ್ದವನು ನನ್ನ ಕಂಡು ಕೈ ಬೀಸಿದ’ ಅಂತ ಒಂದು ದಿನ ಅಂದರೆ ಮರುದಿನ ‘ಇವತ್ತು ಕಾರಿನಲ್ಲಿ ನಮ್ಮ ಮನೆ ಮುಂದೆಯೇ ಹೋದ .. ಟಾಟಾ ಮಾಡಿದ’ ಅನ್ನುತ್ತಿದ್ದಳು. ‘ಇವತ್ತು ನೀಲಿ ಲುಂಗಿ ಉಟ್ಟು ಕೂತಿದ್ದ’ ಅಂತ ಒಂದು ದಿನ ಅಂದರೆ ಇನ್ನೊಂದು ದಿನ ‘ಇವತ್ತು ನೀಲಿ ಜೀನ್ಸ್ ಮತ್ತೆ ಬಿಳಿ ಶರ್ಟ್’ ಅನ್ನುತ್ತಿದ್ದಳು. ನನಗೆ ಮತ್ತು ನನ್ನ ಗೆಳತಿಗೆ ಹೊಟ್ಟೆಯಲ್ಲೆಲ್ಲ ಸಂಕಟ! ಕೊನೆ ಕೊನೆಗೆ ಶನಿವಾರ ಸ್ಕೂಲು ಬಿಟ್ಟ ಮೇಲೆ ಅವಳ ಮನೆಗೆ ದೌಡಾಯಿಸುತ್ತಿದ್ದೆವು ಶಂಕರನ ನೆರಳು ಕಂಡರೂ ಸಾಕು ಅನ್ನುವ ಹಾಗೆ. ಅದ್ಯಾರ್ಯಾರೋ ಓಡಾಡುತ್ತಲೇ ಇರುತ್ತಿದ್ದರು ಅವನ ಮನೆಯಲ್ಲಿ. ಅವಳು ಕೂಡಾ ಇದ್ದಕ್ಕಿದ್ದ ಹಾಗೆ ಕಿರುಚುತ್ತಿದ್ದಳು ‘ನೋಡ್ರೇ ನೋಡ್ರೇ ಶಂಕರ್ ನಾಗ್ ಬಂದ’ ಅಂತ. ನಾವು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು. ಅವನು ಎಂದೂ ಶಂಕರ ಅಂತ ಅನ್ನಿಸುತ್ತಲೇ ಇರಲಿಲ್ಲ. ಒಟ್ಟಿನಲ್ಲಿ ಒಂದು ಗಂಡು ಆಕಾರ ಅನ್ನುವುದೊಂದು ಬಿಟ್ಟರೆ ಮತ್ತೇನೋ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದರೂ ಬೆತ್ತಲೆಯಿದ್ದ ರಾಜನ ಮೈ ಮೇಲೆ ಬಟ್ಟೆ ಇದೆ ಅಂತ ನಟಿಸುವ ರಾಜನ ಕಥೆಯಲ್ಲಿದ್ದ ಹಾಗೆ ನಾವು ಕೂಡಾ ‘ಹೌದು, ಹೌದು ಕಣೆ .. ಕಂಡ .. ಅಲ್ಲೇ ಇದ್ದಾನಲ್ಲ ಬಿಳಿ ಜುಬ್ಬ, ಪೈಜಾಮ’ ಅನ್ನುತ್ತಿದ್ದೆವು ಪೆದ್ದುಪೆದ್ದಾಗಿ! ಅವಳು ನಮ್ಮನ್ನು ಫೂಲ್ ಮಾಡಿದಳೋ, ನಾವು ಅವಳನ್ನು ಫೂಲ್ ಮಾಡಿದೆವೋ ಗೊತ್ತಿಲ್ಲ .. ನಿರಂತರವಾಗಿ ನಮ್ಮ ಈ ನಾಟಕ ಮುಂದುವರೆಯಿತು…

ಅವತ್ತೊಂದು ದಿನ ಪೇಪರ್‌ನಲ್ಲಿ ಒಂದು ಆಘಾತಕಾರಿ ಸುದ್ದಿ .. ಶಂಕರನ ಮದುವೆಯಾಗಿತ್ತು! ಬೆಳಗೆದ್ದು ಶಂಕರ್ ಮತ್ತು ಅರುಂಧತಿ ಮದುವೆ ಫೋಟೋ ನೋಡಿ ಮನಸ್ಸು ದಿಗ್ಭ್ರಾಂತವಾಗಿತ್ತು. ಈಗ ನಗು ಬರುತ್ತದೆ ‘ಇನ್ನೇನು ಶಂಕರ ನಮ್ಮನ್ನು ಮದುವೆಯಾಗುತ್ತಾನೆ ಅಂತ ಭ್ರಮಿಸಿದ್ದೆವೇ’ ಎಂದು! ಅದೂ ಒಂದು ಸಣ್ಣ ಫೋಟೋ .. ಅರುಂಧತಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಚೆಂದಕ್ಕೇ ಇದ್ದ ಅರುಂಧತಿಯನ್ನು ನೋಡಿ ‘ಒಂಚೂರೂ ಚೆನ್ನಾಗಿಲ್ಲ’ ಅಂತ ಸಮಾಧಾನ ಮಾಡಿಕೊಂಡಿದ್ದೆ ನನಗೆ ನಾನೇ! ಆಮೇಲಂತೂ ಒಂದಿಷ್ಟು ದಿನ ಎಲ್ಲ ಸಿನೆಮಾ ಪತ್ರಿಕೆಗಳಲ್ಲಿ ಅವರ ಪ್ರೇಮ ಬೆಳೆದು ಬಂದ ಬಗೆ, ಅವರ ಬದುಕು, ಸಾಂಗತ್ಯ ಇವುಗಳೆಲ್ಲದರ ಕುರಿತು ಇಂಟರ್‌ವ್ಯೂ ಮಾಡುತ್ತಲೇ ಇರುತ್ತಿದ್ದರು. ಅರುಂಧತಿ ಗಂಡನನ್ನು ‘ಅವನು- ಇವನು’ ಅಂತ ಮಾತಾಡುತ್ತಿದ್ದುದನ್ನು ಕಂಡು ಆಗೆಲ್ಲ ನಮ್ಮ ಮನೆಗಳಲ್ಲಿ ಯಾವ ಹೆಂಡತಿಯೂ ಹಾಗೆ ಕರೆಯುತ್ತಿರಲಿಲ್ಲವಾದ್ದರಿಂದ ಮನಸಲ್ಲೇ ಸ್ವಲ್ಪ ಮೆಚ್ಚುಗೆ, ಸ್ವಲ್ಪ ಅಸೂಯೆಯಿಂದ ಓದುತ್ತಿದ್ದೆ. ಮತ್ತೆ ದಿನ ಕಳೆದ ಹಾಗೆ ಸ್ವಲ್ಪ ಬುದ್ದಿಯೂ ಬೆಳೆದು ಈಗ ಅವರಿಬ್ಬರ ಮದುವೆಯನ್ನು ಈಗ ನಾನು ಒಪ್ಪಿಕೊಂಡಿದ್ದೆ! ಅವರ ಬದುಕನ್ನು ಕಣ್ಣರಳಿಸಿ ಬೆರಗಿನಿಂದ ನೋಡಲಾರಂಭಿಸಿದ್ದೆ ನಾನು. ಅವರಿಬ್ಬರ ರಂಗಭೂಮಿಯ ಪ್ರೀತಿ ಮತ್ತು ಒಟ್ಟಿಗೇ ನಾಟಕಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದ ಅವರನ್ನು ಕಂಡು ಆಗೆಲ್ಲ ನಾಟಕದಲ್ಲಿ ಆಸಕ್ತಿ ಅಂತೆಲ್ಲ ಇರದಿದ್ದರೂ ಕೂಡಾ ‘ಗಂಡ ಹೆಂಡತಿ ಅಂದರೆ ಹೀಗಿರಬೇಕು .. ಸಮಾನ ಆಸಕ್ತಿ, ಸಮಾನ ಅಭಿರುಚಿ, ಸಮಾನ ಕನಸು..’ ಅಂತೆಲ್ಲ ಮೆಚ್ಚುತ್ತಿದ್ದೆ.

ಆಮೇಲಿನ ಅವನ ಬಗೆಗಿನ ಮೆಚ್ಚುಗೆ ಸ್ಕೂಲ್ ಹುಡುಗಿಯ ಹಂತ ದಾಟಿ ಮುಂದುವರೆಯಿತು. ಅವನ ಬೌದ್ಧಿಕತೆ, ರಾಜಕೀಯದಲ್ಲಿನ ಆಸಕ್ತಿ, ಅವನ ಮೆಟ್ರೋ ಕನಸು, ಅವನ traditional mould ಗೆ ಹೊಂದಿಕೊಳ್ಳದ ಮಿಂಚಿನ ಓಟ, ಗೀತಾ, ನೋಡಿ ಸ್ವಾಮಿ ನಾವಿರೊದು ಹೀಗೆ ಸಿನೆಮಾಗಳು ಎಲ್ಲ, ಎಲ್ಲ ನನಗೆ ತುಂಬ ಮೆಚ್ಚುಗೆಯಾಗುತ್ತಿದ್ದವು. ಅವನ malgudi days ಮತ್ತು ಸ್ವಾಮಿ ಸೀರಿಯಲ್‌ಗಳು ಕೂಡಾ ಆವರೆಗಿನ ಯಾವುದೇ ಚೌಕಟ್ಟಿಗೆ ಒಗ್ಗದಂತವು. ಒಟ್ಟಿನಲ್ಲಿ ಶಂಕರ ನನ್ನ ದೃಷ್ಟಿಯಲ್ಲಿ ಹೊಸ ಹೊಸತನ್ನು ಕನಸುವ ಅದ್ಭುತ ವ್ಯಕ್ತಿಯಾದ. ನನ್ನ ದೃಷ್ಟಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ‘ಹೀರೋ’ ಆಗೇ ಉಳಿದ ..

ಆ ವರ್ಷ ನಾನು ಮಡಿಕೇರಿಗೆ ಹೋಗಿದ್ದೆ. ಮಡಿಕೇರಿ ನನ್ನ ಪಾಲಿಗೆ ಭೂಮಿಯ ಮೇಲಿನ ಸ್ವರ್ಗ. ಮಡಿಕೇರಿಯ ಆ ಚುಮುಚುಮು ಛಳಿ, ಆ ಮಂಜು, ಆ ಸಣ್ಣ ಜಿಟಿ ಜಿಟಿ ಮಳೆಯ ಪ್ರತಿ ಕ್ಷಣವನ್ನೂ ನಾನು ಮೋಹಿಸುತ್ತಿದ್ದೆ. ಆ ಮಳೆಯಲ್ಲಿ ಸಣ್ಣಗೆ ನೆನೆದುಕೊಂಡು ಊರ ಮಧ್ಯದ ಹೋಟೆಲ್‌ಗೆ ಊಟಕ್ಕಾಗಿ ಹೋಗುವ ಆ romantic ಕ್ಷಣಗಳು, ರಾಜಾ ಸೀಟ್‌ನ ಸುತ್ತ ಬೆಳಗಿನ ನಮ್ಮ ಸುತ್ತಾಟ ಎಲ್ಲ ಮತ್ತು ತರಿಸುವ ಹಾಗಿದ್ದವು. ‘ಎಷ್ಟು ಚೆನ್ನಾಗಿದೆ ಅಲ್ವೇನೋ’ ಅಂತ ಕ್ಷಣಕ್ಕೊಮ್ಮೆ ಕಣ್ಣರಳಿಸಿ ಹೇಳುತ್ತಿದ್ದೆ ನನ್ನ ಗಂಡನಿಗೆ. ಒಂದು ದಿನ ಬೆಳಗ್ಗೆ ಬೆಳಗ್ಗೆಯೇ ಪೇಪರ್ ತೆಗೆದವಳು ಶಾಕ್ ಆಗಿ ಕೂತು ಬಿಟ್ಟಿದ್ದೆ .. ಶಂಕರ ಸತ್ತ ಸುದ್ದಿ ಬಂದಿತ್ತು ಪೇಪರಿನಲ್ಲಿ! ನನಗೆ ಆ ವಿಷಯ ಅರಗಿಸಿ ಕೊಳ್ಳುವುದು ಆಗಲೇ ಇಲ್ಲ. ನಾನು ಅಳುತ್ತ ಕೂತ ಆ ಘಳಿಗೆಯಲ್ಲಿ ಗೊತ್ತಿರುವವರು ಯಾರಾದರೂ ಕಂಡಿದ್ದರೆ ನನ್ನ ಮನೆಯವರಿಗೆ ಯಾರಿಗೋ ಏನೋ ಆಗಿರಬೇಕು ಅಂತ ಎಣಿಸುವ ಹಾಗಿತ್ತು ಆ ಸನ್ನಿವೇಶ. ನನಗೆ ಅದೆಷ್ಟೊಂದು ದುಃಖವಾಗಿ ಹೋಗಿತ್ತು ಅಂದರೆ ಸ್ವರ್ಗ ಕೂಡಾ ಬೇಡವೆನ್ನಿಸುವ ಹಾಗೆ ಆಗಿಹೋಯಿತು .. ಕನಸಿನ ಮಡಿಕೇರಿ ಕೂಡಾ ಬೇಕಾಗಲಿಲ್ಲ. ನನ್ನ ಗಂಡನಿಗೆ ಇವೆಲ್ಲ ವಿಚಿತ್ರ ಅನ್ನಿಸಿತ್ತು ‘ಹೌದು ಮಾರಾಯ್ತಿ , ಬೇಜಾರೇನೊ ಆಗತ್ತೆ ನಿಜ. ಆದ್ರೆ ಈ ಥರ ಆಡೋದು ತೀರಾ ಅತಿಯಾಯ್ತು’ ಅಂದಿದ್ದ. (ಮದುವೆಯಾದ ಹೊಸತು ಅಂತ ಇಷ್ಟು ನಯವಾಗಿ ಅಂದಿರಬೇಕು .. ಈಗಾಗಿದ್ದರೆ .. !) ಅವನಿಗೆ ಗೊತ್ತಿರಲಿಲ್ಲ ಶಂಕರನ ಬಗೆಗಿನ ನನ್ನ ಪ್ರೀತಿ ಗೊತ್ತಿದ್ದರೆ ಹೀಗೆ ಹೇಳುತ್ತಿರಲಿಲ್ಲ ಪಾಪ ..

ಇದೆಲ್ಲ ಆಗಿ ಎಷ್ಟೊಂದು ವರ್ಷಗಳು ಆಗಿಹೋಗಿವೆ! ಇಂದು ಶಂಕರ್ ನಾಗ್ ಹುಟ್ಟಿದ ದಿನ ಮನಸಿನಲ್ಲಿ ಅದೆಷ್ಟೊಂದು ನೆನಪುಗಳ ಸಂತೆ! ಎಲ್ಲ ಪಟ್ಟಾಗಿ ಬೀಡು ಬಿಟ್ಟು ಕೂತು ಬಿಟ್ಟವು ಅಲ್ಲಲ್ಲೇ … ನನ್ನನ್ನು ಬರೆಯಲು ಒತ್ತಾಯಿಸುತ್ತಾ .. ಬರೆದು ಮುಗಿಸುವಾಗ ಕಣ್ಣಲ್ಲಿ ಚೂರು ನೀರು ಯಾಕೋ …