ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ.
ನಾಳೆ ರವಿ ಮಡೋಡಿ ಬರೆದ “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ ಹಾಗೂ ಪೂರ್ಣಿಮಾ ಹೆಗಡೆ ಬರೆದ “ಅಂತರ್ವೀಕ್ಷಣೆ” ಗೀತಾ ಕಥಾಯಾನ ಕೃತಿಗಳು ಬಿಡುಗಡೆಗೊಳ್ಳಲಿದ್ದು, ಎರಡೂ ಕೃತಿಗಳ ಆಯ್ದ ಭಾಗಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ.

 

ನಮ್ಮೂರಿನ ಬಸ್ಸುಗಳು: “ನಮ್ಮಲ್ಲೇ ಮೊದಲು”ಲಘು ಬರಹಗಳ ಸಂಕಲನದ ಒಂದು ಬರಹ

90ರ ದಶಕದ ಅಥವಾ ಅದಕ್ಕೂ ಹಿಂದಿನ ತಲೆಮಾರಿನ ಯಾವುದೇ ಹುಡುಗರಿಗಾಗಲಿ ಬಸ್ಸು ಎಂದರೆ ಏನೋ ಒಂದು ತರದ ಪುಳಕ. ಆ ಕಾಲದಲ್ಲಿ ತುಂಬಾ ಬಸ್ಸುಗಳು ನಮ್ಮೂರಿನಲ್ಲಿ ಓಡಾಡುತ್ತಿದ್ದವು. ಅಲ್ಲಿ ಸಂಚರಿಸುವ ಬಣ್ಣ ಬಣ್ಣದ, ಬೇರೆ ಬೇರೆ ಹೆಸರುಗಳನ್ನು ಹೊಂದಿದ ಖಾಸಗಿ ಬಸ್ಸುಗಳನ್ನು ನೋಡುವುದೇ ನಮಗೆಲ್ಲ ಹಬ್ಬವಾಗಿತ್ತು. ಆ ಬಸ್ಸುಗಳು ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಏರುತ್ತ, ಇಳಿಯುತ್ತ ಸಂಚರಿಸುವ ಬಗೆ ಇಷ್ಟವಾಗುತ್ತಿತ್ತು. ಕೇವಲ ಭೌತಿಕವಾದ ಬಸ್ಸುಗಳು ಮಾತ್ರ ಇಷ್ಟವಾಗುವುದಲ್ಲದೇ, ನಮ್ಮ ಕಲ್ಪನೆಯಲ್ಲಿಯೂ ಬಸ್ಸಿಗೆ ಪ್ರತ್ಯೇಕವಾದ ಸ್ಥಾನವಿತ್ತು. ನಾವು ಆಡುವ ಆಟಗಳಲ್ಲಿ ’ಬಸ್ ಆಟ’ ಎನ್ನುವುದೊಂದಿತ್ತು. ಅದಕ್ಕೆ ಮೂರು ನಾಲ್ಕು ಹುಡುಗರು ಬೇಕೆಂಬುದಿಲ್ಲ. ಒಬ್ಬರಿದ್ದರೂ ಈ ಆಟವನ್ನು ಆಡುವುದಕ್ಕೆ ಸಾಧ್ಯವಾಗುತ್ತದೆ. ಬಾಯಿಯಲ್ಲಿ ಬ್ರು.. ಬ್ರು ಎಂದು ಸೌಂಡ್ ಮಾಡುತ್ತ, ಗಲ್ಲದ ತುಂಬೆಲ್ಲ ಎಂಜಲಿನ ನೊರೆಯನ್ನು ಚೆಲ್ಲುತ್ತ, ಕೈಯನ್ನು ಸ್ಟೆರಿಂಗ್ ಎನ್ನುವಂತೆ ತಿರುಗಿಸುತ್ತ, ಪ್ಯೇ ಪ್ಯೇ ಎಂದು ಹಾರ್ನ್ ಮಾಡಿಕೊಳ್ಳುತ್ತ ನಮ್ಮ ಬಸ್ಸುಗಳು ನಮ್ಮ ಮನೆಯ ಅಂಗಳ, ತೋಟ, ಅಡುಗೆಮನೆ, ಜಗಲಿ ಎಲ್ಲ ಕಡೆಗಳಲ್ಲಿಯೂ ಚಲಿಸುತ್ತಿದ್ದವು. ಅಂತರಿಕ್ಷವನ್ನುಳಿದು ನಮ್ಮ ಬಸ್ಸುಗಳು ಚಲಿಸದ ಜಾಗವಿರುತ್ತಿರಲಿಲ್ಲ.

(ರವಿ ಮಡೋಡಿ)

ಆಗೆಲ್ಲ ತುಂಬಾ ಬಡತನ. ಎಲ್ಲರ ಕೈಯಲ್ಲಿ ಕಾಸು ಓಡಾಡುತ್ತಿರಲಿಲ್ಲ. ಹೀಗಾಗಿ ಬಸ್ಸುಗಳಿದ್ದರೂ ಐದರಿಂದ ಹತ್ತು ಕಿ.ಮಿ ವರೆಗೆ ಸಾಮಾನ್ಯ ಜನರು ಕಾಲು ನಡಿಗೆಯಲ್ಲಿಯೇ ಪಯಣವನ್ನು ಮಾಡುತ್ತಿದ್ದರು. ಅದಕ್ಕಿಂತಲೂ ಹೆಚ್ಚಿನ ದೂರ ಪ್ರಯಾಣ ಮಾಡುವುದಿದ್ದರೆ ಮಾತ್ರ ಬಸ್ಸುಗಳಿಗೆ ಹೋಗುತ್ತಿದ್ದರು. ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ. ಬಸ್ ನ್ನು ನೋಡಿದ ತಕ್ಷಣವೇ ಹಿರಿಹಿರಿ ಹಿಗ್ಗು. ಕೈಯನ್ನು ಅಗಲ ಮಾಡಿ ನಿಲ್ಲಿಸುವಾಗ ನಮ್ಮ ಶಕ್ತಿಯನ್ನು ಬಳಸಿ ಅದು ನಿಂತಿತು ಎಂಬಷ್ಟು ಆನಂದ. ಆ ಸಂತೋಷವನ್ನು ಬಣ್ಣಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲ. ಅಲ್ಲಿ ಎಲ್ಲ ಪ್ರಯಾಣಿಕರಿಗಿಂತ ನಾವೇ ಮೊದಲು ಬಸ್ ನ್ನು ಹತ್ತಬೇಕು ಎಂಬಂತಹ ಪೈಪೋಟಿಯೂ ಇರುತಿತ್ತು. ಬಸ್ಸು ನಿಲ್ಲಿಸುತ್ತಿದ್ದಂತೆ ಓಡಿ ಹೋಗಿ ಹತ್ತುತ್ತಿದ್ದೆವು. ಯಾರಾದರೂ ಇಳಿಯುವವರು ಇದ್ದರೂ ಅದು ನಮಗೆ ಲೆಕ್ಕಕ್ಕೆ ಇರಲಿಲ್ಲ. ಅವರ ಮಧ್ಯದಲ್ಲಿ ನುಸುಳಿ ಮುನ್ನುಗುತ್ತಿದ್ದೆವು. ಮೇಲೇರಿದ ಮೇಲೆ ಯಾವುದಾದರೂ ಕಿಟಕಿ ಪಕ್ಕದ ಸೀಟಿಗಾಗಿ ಕಣ್ಣನ್ನು ಹರಿಸುತ್ತ, ಆ ಕ್ಷಣವೇ ಆಕ್ರಮಿಸಿ ಬಿಡುವುದು ನಮ್ಮ ಜಾಯಮಾನ. ಆಹ.. ಕಿಟಿಕಿ ಪಕ್ಕ ಸೀಟು ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮಲೆನಾಡಿನ ತಂಗಾಳಿಗೆ ತಲೆಯನ್ನು ಒಡ್ಡಿ ತಲೆಕೂದಲನ್ನು ಹಾರಿಸಿಕೊಂಡರೆ ಅದರ ಮಜವೇ ಬೇರೆ. ಬಸ್ಸಿನಲ್ಲಿ ಜೊತೆಯಲ್ಲಿ ಹಿಂದೆ ಚಲಿಸುವ ಮರಗಿಡಗಳು, ಗಿಡಗೆಂಟೆಗಳ ಬಗ್ಗೆ ವಿಶೇಷ ಕುತೂಹಲ. ಆಗೆಲ್ಲ ಬಸ್ಸಿನಲ್ಲಿ ಧೂಮಪಾನಕ್ಕೆ ಅವಕಾಶವಿತ್ತು. ನಮ್ಮ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ತಾನು ಸೇದುವ ಬೀಡಿ ಬೇಗ ಮುಗಿಯುತ್ತದೆ ಎಂದು ನಾವು ಕುಳಿತ ಸೀಟಿನ ಕಿಟಕಿಯನ್ನು ಮುಚ್ಚುವುದಕ್ಕೆ ಹೇಳುತ್ತಿದ್ದ. ಒಂದೆರೆಡು ಬಾರಿ ಹೇಳಿದರೂ ಕೇಳದವರಂತೆ ಕುಳಿತಾಗ, ನಮ್ಮನ್ನು ಗದರಿಸಿ ಕಿಟಕಿಯನ್ನು ಮುಚ್ಚಿಸಿದಾಗ ಆಗುವ ದುಃಖ ಹೇಳತೀರದಾಗಿತ್ತು.

ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವುದು ನಮ್ಮ ಮೊದಲ ಆಯ್ಕೆಯಾಗಿರುತ್ತಿತ್ತು. ಒಂದೊಮ್ಮೆ ಅದು ಸಿಗದಿದ್ದರೆ ಡ್ರೈವರ್ ಸೀಟಿನ ಹಿಂಬದಿಯಲ್ಲಿ ನಿಲ್ಲುವುದು ಅಥವಾ ಅವರ ಎದುರಿನ ಉದ್ದ ಸೀಟ್ ನಲ್ಲಿ ಕೂರುವುದೆಂದರೆ ಎಲ್ಲಿಲ್ಲದ ಸಂತೋಷವೆಂದು ಹೇಳಬಹುದು. ಅಲ್ಲಿ ಕುಳಿತುಕೊಂಡು ಡ್ರೈವರ್ ಹೇಗೆ ಡ್ರೈವ್ ಮಾಡುತ್ತಾನೆ, ಎಷ್ಟು ಸ್ಪೀಡ್ ಆಗಿ ಓಡಿಸುತ್ತಾನೆ ಎಂದು ಸೂಕ್ಷ್ಮವಾಗಿ ನೋಡುತ್ತ, ನಮ್ಮ ಬೆಂಬಲವನ್ನು ಕೊಟ್ಟು ಅವನನ್ನು ಮನಸ್ಸಿನಲ್ಲಿಯೇ ಹುರಿದುಂಬಿಸುತ್ತಿದ್ದೆವು. ಇದರ ಜೊತೆಗೆ ಯಾರು ಎಲ್ಲಿ ಇಳಿಯುತ್ತಾರೆ ಎಂಬುದನ್ನು ಕಾಯುತ್ತ ಅಡ್ವಾನ್ಸ್ ಆಗಿ ಕಿಟಕಿ ಪಕ್ಕದ ಜಾಗಕ್ಕೆ ಹೊಂಚುಹಾಕುತ್ತಿದ್ದೆವು. ಅಂದಿನ ಹಳೆ ಬಸ್ಸುಗಳಲ್ಲಿ ಈಗಿನಂತೆ ಕಿಟಿಕಿಗೆ ಗಾಜುಗಳು ಇರಲಿಲ್ಲ. ಉದ್ದನೆಯ ಬಟ್ಟೆಯನ್ನು ಮಡಚಿ ಕಿಟಕಿ ಮೇಲೆ ಕಟ್ಟಿರುತ್ತಿದ್ದರು. ಒಂದೊಮ್ಮೆ ಮಳೆ ಬಂದರೆ ಆ ಬಟ್ಟೆಯನ್ನು ಕೆಳಕ್ಕೆ ಬಿಡಬೇಕಿತ್ತು. ಈ ವ್ಯವಸ್ಥೆಯಲ್ಲಿ ಅರ್ಧಕ್ಕೆ ಅರ್ಧ ಮಳೆಯ ನೀರು ಬಸ್ಸಿನೊಳಗೆ ಬಂದು ನಮ್ಮ ಬಟ್ಟೆಯನ್ನು ಒದ್ದೆಮಾಡುತ್ತಿತ್ತು. ಆದರೂ ಆ ಬಗ್ಗೆ ಆಕ್ಷೇಪಣೆಯನ್ನು ಮಾಡದೆ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ಎಂಬಂತೆ ಎಂತಹ ಚಳಿ, ಗಾಳಿ, ಮಳೆಗೂ ಹೆದರದೆ ಬಸ್ಸಿನಲ್ಲಿ ಕುಳಿತುಕೊಳ್ಳುತ್ತಿದ್ದರು.

ಬಸ್ಸು ನಿಲ್ದಾಣಗಳಲ್ಲಿ ಕಂಡಕ್ಟರ್ ಗಳು ಒಂದೇ ಉಸಿರಿನಲ್ಲಿ ಶಂಕರ್ ಮಹದೇವನ್ ತರ ಊರಿನ ಹೆಸರನ್ನು ಹೇಳುವುದನ್ನು ಕಾಣುವಾಗ ಆಶ್ಚರ್ಯವಾಗದೇ ಉಳಿಯುತ್ತಿರಲಿಲ್ಲ. ಅವರ ಹೇಳುವಿಕೆಯಲ್ಲಿ ಒಂದು ಲಯವಿದೆ. ತಾರಕದಲ್ಲಿ ಕೂಗುತ್ತಿದ್ದರೆ ಪ್ರಯಾಣಿಕರು ಒಂದು ಕಿ.ಮಿ ದೂರದಲ್ಲಿದ್ದರೂ ಓಡಿ ಬಂದು ಬಸ್ ನ್ನು ಹತ್ತುವಂತೆ ಆ ಧ್ವನಿ ಮಾಡುತ್ತದೆ. “ತಲ್ಲೂರು, ಹೆಮ್ಮಾಡಿ, ತ್ರಾಸಿ, ಮರವಂತೆ, ನಾವುಂದ, ಕಂಬದಕೋಣೆ, ಕಿರಿಮಂಜೇಶ್ವರ, ನಾಗೂರು, ಉಪ್ಪುಂದ, ಬೈಂದೂರ್ ಬೈಂದೂರ್ ಎನ್ನುತ್ತ ಕೂಗಿದರೆ ಆಗುವ ಥ್ರೀಲ್ ಅಷ್ಟಿಷ್ಟಲ್ಲ. ನಾವು ಯಾವುದೋ ಊರಿಗೆ ಹೋಗಿ, ಅಲ್ಲಿ ನಮ್ಮೂರಿನ ಹೆಸರನ್ನು ಕೂಗಿದರೆ ಒಂದು ಸಲ ತಲೆ ಎತ್ತಿ ಬಸ್ಸನ್ನು ನೋಡುವುದು ಗ್ಯಾರಂಟಿಯಾಗಿತ್ತು. ನಾವು ಚಿಕ್ಕವರಿರುವಾಗ ನಮ್ಮೂರಿನಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳ ಡ್ರೈವರ್, ಕಂಡಕ್ಟರ್ ಗಳ ಹೆಸರುಗಳು ನಮಗೆ ಬಾಯಿಪಾಠ. ಜೊತೆಗೆ ಇದು ನನ್ನ ಬಸ್ಸು ಎಂದು ನಮ್ಮಷ್ಟಕ್ಕೆ ನಾವು ಬಾಯಿ ಮಾತಿನಲ್ಲಿ ಖರೀದಿ ಮಾಡಿಕೊಂಡು ಮತ್ತೊಬ್ಬ ಸ್ನೇಹಿತನೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದೆವು. ನಮ್ಮ ಬಸ್ಸುಗಳ ವರ್ಣನೆಯಲ್ಲಿ ಮೇಲಾಟಗಳು ಇರುತ್ತಿದ್ದವು. ನಾವು ಆ ಬಸ್ಸಿನ ಬಗ್ಗೆ, ಅಲ್ಲಿನ ಡ್ರೈವರ್, ಕಂಡಕ್ಟರ್ ಗಳ ಗುಣಗಾನವನ್ನು ಮಾಡುತ್ತ, ನಮ್ಮ ಬಸ್ಸಿನ ಡ್ರೈವರ್ ಸ್ಟೈಲ್ ಚೆಂದ, ಸ್ಪೀಡ್ ಆಗಿ ಓಡಿಸುತ್ತಾನೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ, ನಮ್ಮದೆ ಕಂತೆ ಪುರಾಣಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನಮ್ಮ ರೂಟ್ ನಲ್ಲಿ ಬರುವ ಡ್ರೈವರ್ ಗಳಿಗೆ ಪ್ರತಿದಿನ ಬರುವಾಗ ಹೋಗುವಾಗ ವಿಶ್ ಮಾಡೋದು ಆ ಕಾಲದ ನಮ್ಮ ಪದ್ಧತಿಯಾಗಿತ್ತು. ಪಾಪ ಅವರುಗಳು ತಪ್ಪದೇ ನಮಗೂ ವಿಶ್ ಮಾಡುತ್ತಿದ್ದರು. ಏನೋ ಹುಡುಗರು ಎನ್ನುವಂತೆ ಅಸಡ್ಡೆ ತೋರದೆ ಇರುವುದು ನಮಗೆಲ್ಲ ಇಷ್ಟವಾಗಿರುತ್ತಿತ್ತು .

ನಮ್ಮ ರಸ್ತೆಯಲ್ಲಿ ಹೊಸದಾಗಿ ಕುಂದಾಪುರದಿಂದ ಹೈದ್ರಾಬಾದ್ ಗೆ ಹೋಗುವ ಸೂಪರ್ ಡಿಲಕ್ಸ್ ಬಸ್ಸು ಬಿಟ್ಟಿದ್ದರು. ಅದು ನಾವು ಶಾಲೆ ಬಿಡುವ ಸಮಯಕ್ಕೆ ಬರುತ್ತಿತ್ತು. ನಮ್ಮ ಸ್ನೇಹಿತರಿಗೆ ಏನೋ ಒಂದು ಹುಡುಗಾಟಿಕೆ. ಒಂದು ದಿನ ಬಸ್ಸು ಸಂಚರಿಸುತ್ತಿರುವಾಗ ಸ್ನೇಹಿತರಿಬ್ಬರು ಗುಡ್ಡದ ಮೇಲೆ ನಿಂತು, ಅಲ್ಲಿಂದಲೇ ಬಸ್ಸಿಗೆ ಕಲ್ಲನ್ನು ಎಸೆದರು. ಅದು ಬಸ್ಸಿನ ಮುಂಬದಿಯ ಗ್ಲಾಸ್ ಗೆ ತಾಗಿ, ನೋಡು ನೋಡುತ್ತಿದ್ದಂತೆ ಗ್ಲಾಸ್ ಪುಡಿ ಪುಡಿಯಾಯಿತು. ಬಸ್ಸಿನಲ್ಲಿದ್ದವರು ಗಾಬರಿಯಾಗಿ ಹೊರಕ್ಕೆ ಬಂದು ನೋಡಿದರೆ, ಈ ಹುಡುಗ ಗುಡ್ಡದ ಮೇಲೆ ಓಡುತ್ತಿದ್ದ. ಸದ್ಯ ಯಾರಿಗೂ ಏನು ಗಾಯಗಳಾಗಿರಲಿಲ್ಲ. ಆದರೆ ನಮಗೆಲ್ಲ ಹೆದರಿಕೆಯಾಯಿತು. ಬಸ್ಸಿನವರು ನಮ್ಮನ್ನು ಎತ್ತಿಹಾಕಿಕೊಂಡು ಹೋದರೆ ಎಂಬ ಭಯದಲ್ಲಿ ಆ ರಸ್ತೆಯಲ್ಲಿ ಒಂದು ವಾರ ಸಂಚಾರವನ್ನೇ ಮಾಡಿರಲಿಲ್ಲ!

ನಾನೊಮ್ಮೆ ಕುಂದಾಪುರದಿಂದ ಊರಿಗೆ ಬರುತ್ತಿದ್ದೆ. ಮಧ್ಯ ಕೊಲ್ಲೂರಿನಲ್ಲಿ ಟೀ ಗೆಂದು ಬಸ್ ನವರು ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲರು ಟೀ ಗೆಂದು ಬಸ್ಸಿನಿಂದ ಇಳಿದು ಹೊರಟರು. ಅವರ ಜೊತೆಗೆ ನಾನೂ ಹೊರಟೆ. ಟೀ ಕುಡಿದು ಮತ್ತೆ ಬಸ್ ನ್ನು ಏರಿದರೆ ನಾನು ಕುಳಿತಿದ್ದ ಜಾಗದಲ್ಲಿ ಮತ್ತೊಬ್ಬ ಬಂದು ಕುಳಿತಿದ್ದ. ನನಗೆ ನಖಶಿಖಾಂತ ಉರಿದುಹೋಯಿತು. ಅವರ ಬಗ್ಗೆ ಕೋಪವನ್ನು ತಳೆದು, ನನ್ನ ಜಾಗವನ್ನು ಆಕ್ರಮಿಸಿಕೊಂಡಿರುವುದಕ್ಕೆ ಆಕ್ಷೇಪವನ್ನು ಮಾಡಿ, ಯದ್ವಾತದ್ವ ಬೈಯುವುದಕ್ಕೆ ಪ್ರಾರಂಭಿಸಿದೆ. ಅವನಿಗೂ ಎಲ್ಲಿಲ್ಲಿದ ಕೋಪ ಬಂದಿರಬೇಕು. ತಾನು ಮೊದಲಿನಿಂದಲೂ ಇಲ್ಲಿ ಕುಳಿತಿರುವುದು. ಬೇಕಿದ್ದರೆ ಹಿಂದಿನ ಸೀಟ್ ನಲ್ಲಿ ಇರುವವರನ್ನು ಕೇಳಿ ಎಂದ. ಆತನು ಹೌದು ಎಂಬಂತೆ ಹೇಳಿದ. ಅಯ್ಯೋ ಇವರ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿಯನ್ನು ನಾನು ನಂಬುದಕ್ಕೆ ಸಾಧ್ಯವಾಗದೇ ಕಂಡಕ್ಟರ್ ನ್ನು ಕರೆದೆ. ನೋಡಿದರೆ ಮತ್ತೊಬ್ಬರು ಯಾರೋ ಬಂದರು. ಆದರೂ ನಾನು ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ಅವನು ಸಾವಕಾಶದಿಂದ “ರೀ ನೀವು ಎಲ್ಲಿಗೆ ಹೋಗ್ಬೇಕು. ಇದು ಕುಂದಾಪುರಕ್ಕೆ ಹೋಗುವ ಗಾಡಿ” ಎಂದ. ನಾನು ಊರಿಗೆ ಹೋಗುವ ವಿಚಾರವನ್ನು ತಿಳಿಸಿದೆ. ಅಲ್ಲಿಯವರೆಗೆ ತಾಳ್ಮೆಯಲ್ಲಿ ಕೇಳುತ್ತಿದ್ದ ಕಂಡಕ್ಟರ್ ಒಮ್ಮೆಲೇ ಕೋಪಗೊಂಡು “ರೀ..ನಿಮ್ಮ ಬಸ್ ಪಕ್ಕದಲ್ಲಿ ನಿಂತಿದೆಯಲ್ಲ. ಅಲ್ಲಿ ಹತ್ರಿ.. ಸುಮ್ಮನೆ ನೋಡಿಕೊಳ್ಳದೇ ಹತ್ತಿಬಿಟ್ಟು ಇಲ್ಲಿ ಬಂದು ಕೂಗಾಡುತ್ತಿರಾ ” ಎನ್ನುತ್ತ ಅವನೇ ಕೂಗಾಡಿದ. ನನಗೆ ಆಶ್ಚರ್ಯ. ಅರೇ ಹೌದಲ್ಲ. ಸೇಮ್ ಟು ಸೇಮ್ ಬಸ್ಸು. ಒಂದೇ ಖಾಸಗಿ ಕಂಪನಿಯ, ಒಂದೇ ಕಲ್ಲರಿನ ಬಸ್ಸು. ಬಸ್ಸಿನ ಬೋರ್ಡ್ ಮಾತ್ರ ಬೇರೆ ಎನ್ನುತ್ತ ವಿಧಿಯಿಲ್ಲದೇ ಅಂಡುಸುಟ್ಟ ಬೆಕ್ಕಿನಂತೆ ಕೆಳಗೆ ಇಳಿದೆ. ಇಳಿಯುವಾಗ ಮತ್ತೊಮ್ಮೆ ನನ್ನ ಸೀಟಿನಲ್ಲಿ ಕುಳಿತವನನ್ನು ಗುರಾಯಿಸುವುದನ್ನು ಮರೆಯಲಿಲ್ಲ!

ಒಂದು ಕಾಲದಲ್ಲಿ ಬಸ್ ನಮಗೆ ಆಪ್ತಮಿತ್ರನಾಗಿದ್ದ. ಅದರಲ್ಲಿಯೇ ನಮ್ಮ ಆಟ-ಪಾಠಗಳು ನಡೆಯುತ್ತಿತ್ತು. ಮೊಬೈಲ್/ಕಂಪ್ಯೂಟರ್ ಬಿಟ್ಟುಬರದ ಇಂದಿನ ಮಕ್ಕಳಿಗೆ ನೀವು ಬಸ್ ಆಟ ಆಡಿ ಎಂದರೆ ಗೊಳ್ಳೆಂದು ನಗೆಯಾಡಬಹುದು. ಬಸ್ಸು ಸಂತೋಷಕೊಟ್ಟಿತ್ತು ಎಂದರೆ ಅಪಹಾಸ್ಯ ಮಾಡಬಹುದು ಎಂಬ ಹೆದರಿಕೆಯಲ್ಲಿ ಈಗ ಆ ನೆನಪುಗಳು ಅಲೆಯುತ್ತಿವೆ!ಗ್ಗೆ ಹೇಳುತ್ತಿದ್ದವು.

(ಕೃತಿ: “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ, ಲೇಖಕರು: ಪೂರ್ಣಿಮಾ ಹೆಗಡೆ, ಪ್ರಕಾಶನ: ಮಡಿಲು ಪ್ರಕಾಶನ, ಬೆಲೆ: 110/-)

*****

“ಅಂತರ್ವೀಕ್ಷಣೆ” ಗೀತಾ ಕಥಾಯಾನ ಅಧ್ಯಾಯದ ಭಾಗ

ಸಾಯಂಕಾಲದಿಂದ ಮಳೆ ಒಂದೇ ಸಮನೆ ರಚ್ಚೆ ಹಿಡಿದ ಮಗುವಿನಂತೆ ಗುಡುಗು ಸಿಡಿಲುಗಳೊಂದಿಗೆ ಒಂದೇ ಸಮನೆ ಸುರಿಯುತ್ತಿತ್ತು. ಶಹರದ ಪ್ರತಿಷ್ಠಿತ ಬಡಾವಣೆಯಲ್ಲೂ ಸಹ ಗಮ್ಯ ಸ್ಥಾನ ಸೇರಲು ದಾರಿ ತೋರದೆ ಗೊಂದಲಗೊಂಡು ಮಳೆ ನೀರು ಅಲ್ಲಲ್ಲೇ ನಿಂತಿತ್ತು. ರಾತ್ರಿ ಆದಂತೆ ಮಳೆಯ ಆರ್ಭಟ ಇನ್ನೂ ಹೆಚ್ಚಿತು. ಎಷ್ಟು ಮರಗಳು ಧರೆಗುರುಳಲಿವೆಯೋ, ಇನ್ನೆಷ್ಟು ಮನೆಗಳಿಗೆ ನೀರು ನುಗ್ಗಲಿದೆಯೋ, ಇನ್ನೇನು ಅನಾಹುತ ನೋಡಬೇಕಾಗುವುದೋ ಎಂಬ ಬಗ್ಗೆ ಚಿಂತಿಸುತ್ತಾ ಬಡಾವಣೆವಾಸಿಗಳು ನಿಧಾನವಾಗಿ ನಿದ್ದೆಗೆ ಜಾರುತ್ತಿರುವ ಸಂದರ್ಭ. ಇಂತಹ ಸಮಯದಲ್ಲಿ ಆ ಬಡಾವಣೆಯ ಪ್ರತಿಷ್ಠಿತರ ಮನೆಯೊಂದರಲ್ಲಿ ತಣ್ಣಗೆ ಕ್ರೌರ್ಯವೊಂದು ನಡೆದಿತ್ತು. ಗರ್ಜಿಸುತ್ತಿದ್ದ ಗುಡುಗಿನ ಸದ್ದಿನೊಂದಿಗೆ ಜೀವವೊಂದರ ಚೀತ್ಕಾರ ವಿಲೀನಗೊಂಡು ಮಿಂಚಿನ ಬೆಳಕು ಆ ರುಂಡವು ಮುಂಡದಿಂದ ಬೇರೆ ಆಗುತ್ತಿರುವುದಕ್ಕೆ ಸಾಕ್ಷಿ ಆಗಿತ್ತು.

(ಪೂರ್ಣಿಮಾ ಹೆಗಡೆ)

ಎರಡು ದಿನ ಮನಸೋ ಇಚ್ಛೆ ಸುರಿದ ಮಳೆಯ ಸುದ್ದಿಗಳು ಮಾಧ್ಯಮಗಳಲ್ಲಿ ಮಸುಕಾಗುತ್ತಾ ಈ ಹತ್ಯೆಯ ವಿಚಾರ ಮುನ್ನಲೆಯನ್ನು ಪಡೆದುಕೊಂಡಿತು. ಪ್ರತಿ ಮಾಧ್ಯಮದಲ್ಲೂ ಆತನ ಮೌಲ್ಯಯುತ ಬದುಕಿನ ಚಿತ್ರಣ ಕಟ್ಟಿಕೊಡಲಾಗುತ್ತಿತ್ತು. ಹೇಗೆ ಒಬ್ಬ ಸಾಧಾರಣ ಮನುಷ್ಯ ತನ್ನ ಸತತ ಪ್ರಯತ್ನ ಪರಿಶ್ರಮದಿಂದ ಸಾಧಕನಾದ ಬಗ್ಗೆ ಹಾಗೂ ಪ್ರತಿಷ್ಠಿತ ಕಂಪೆನಿಯ ಒಡೆಯನಾದರೂ ಯಾವ ಹಮ್ಮು ಬಿಮ್ಮುಗಳಿಲ್ಲದೇ ಜನರಿಗೆ ಕೆಲಸವನ್ನು ನೀಡಿ ಸಾವಿರಾರು ಮನೆಗಳಿಗೆ ಅನ್ನದಾತನಾಗಿದ್ದರ ಬಗ್ಗೆ ತೋರಿಸಲಾಗುತ್ತಿತ್ತು. ಎಷ್ಟೋ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾ, ಅನಾಥ ಮಕ್ಕಳ ರಕ್ಷಕನೂ ಆಗಿ ಸಮಾಜಮುಖಿ ಕಾರ್ಯಗಳಲ್ಲಿ ನಿರತನಾಗಿ ಆದರ್ಶಪ್ರಾಯನಾಗಿದ್ದರ ಬಗ್ಗೆ ಹೇಳುತ್ತಿದ್ದವು. ಸದಾ ಸತ್ಕರ್ಮವನ್ನೇ ನೆಚ್ಚಿಕೊಂಡವನನ್ನು ಯಾರೋ ದುಷ್ಕರ್ಮಿಗಳು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಹತ್ಯೆ ನಡೆಸಿದ್ದರ ಬಗ್ಗೆ ಕೆಲವು ವಾಹಿನಿಗಳು ಸುದ್ದಿ ತೋರಿಸುತ್ತಿದ್ದರೆ ಇನ್ನೂ ಕೆಲವು ವಾಹಿನಿಗಳು ಇಂತಾ ಸತ್ಕರ್ಮಿಗೆ ಈ ರೀತಿಯ ಸಾವು ನ್ಯಾಯವೇ ಎಂಬಂತೆ ಸುದ್ದಿಯನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿದ್ದವು. ಇತ್ತ ಈ ಸುದ್ದಿಯನ್ನು ನೋಡುತ್ತಿದ್ದವನೊಬ್ಬ ಮೀಸೆ ಅಡಿಯಲ್ಲಿ ನಗುತ್ತಿದ್ದ.

” ‘ಅನಾಯಾಸೇನ ಮರಣಂ’ ಎಂದು ದಿನಾಲೂ ಬೇಡಿಕೊಳ್ಳುತ್ತಿದ್ದ ನಿನ್ನ ಪ್ರಾರ್ಥನೆ ಏನೂ ಫಲ ನೀಡಲಿಲ್ಲವೇ!? ನಾನು ಮಾಡುತ್ತಿರುವ ಸತ್ಕರ್ಮಗಳೇ ನನಗೆ ರಕ್ಷಣೆ ಎನ್ನುತ್ತಿದ್ದ ನೀನು ಅತೀ ಬರ್ಬರವಾಗಿ ಸಾಯುತ್ತಿದ್ದಾಗ ಆ ಸತ್ಕರ್ಮಗಳು ಯಾವವೂ ನಿನ್ನ ರಕ್ಷಣೆಗೆ ಬರಲೇ ಇಲ್ಲಾ ಅಲ್ಲವೇ? ಎರಡು ದಿನ ನಿನ್ನ ದೇಹ ಹುಳು ಹುಪ್ಪಟಿಗಳ ಆಹಾರವಾದ ಮೇಲೆ ನಿನ್ನ ಸಾವಿನ ಸುದ್ದಿ ಈ ಜಗತ್ತಿಗೆ ತಿಳಿಯಿತು. 46 ವರ್ಷ!! ಸಾಯುವ ವಯಸ್ಸು ಖಂಡಿತವಾಗಿಯೂ ಅಲ್ಲ. ನನ್ನನ್ನು ನೋಡು ನಿನಗಿಂತ ಹೆಚ್ಚು ಬೆಳೆದಿದ್ದೇನೆ, ಎಲ್ಲಾ ವಿಧದಲ್ಲೂ. ನಾವಿಬ್ಬರೂ ಒಂದೇ ಸಲ ಈ ಶಹರಕ್ಕೆ ಕಾಲಿಟ್ಟವರು. ಅಸೂಯೆ, ದ್ವೇಷ, ಅನ್ಯಾಯ, ಅಡ್ಡದಾರಿ ಯಾವುದೂ ಬೇಡ, ಒಳ್ಳೆಯ ಕೆಲಸದಿಂದ ಕೂಡ ಅತಿ ಎತ್ತರಕ್ಕೆ ಬೆಳೆಯಬಹುದು ಎಂದು ಹೇಳುತ್ತಿದ್ದ ನಿನ್ನ ನೈತಿಕ ಮೌಲ್ಯಗಳು ನಿನ್ನನ್ನು ಬದುಕಲು ಬಿಡಲಿಲ್ಲ ನೋಡು! ಸಾಯಿಸಲೇ ಬೇಕಾಯಿತು, ನನ್ನ ದಾರಿಗೆ ಅಡ್ಡ ಬಂದೆಯಲ್ಲ. ನಾನು ಬೆಳೆಯಬೇಕು ಯಾವ ದಾರಿ ಆದರೇನು, ಮರಣಕಾಲದಲ್ಲಿ ನಾವು ಮಾಡಿದ ದುಷ್ಕರ್ಮಗಳು ನಮ್ಮನ್ನು ಚುಚ್ಚುತ್ತವೆ ಎಂದು ಹೇಳುತ್ತಿದ್ದೆ ಈಗ ನೋಡು ನಿನ್ನ ಸತ್ಕರ್ಮಗಳು ಆರಾಮಾದಾಯಕ ಮರಣ ಕೊಡಲಿಲ್ಲ ” ಎಂದು ಮನಸ್ಸಲ್ಲೇ ಮಾತಾನಾಡಿಕೊಳ್ಳುತ್ತಾ ನಗುತ್ತಾ ಸುದ್ದಿಯನ್ನು ವೀಕ್ಷಿಸುತ್ತಿದ್ದನು.


ತಟ್ಟನೇ ಅದೊಂದು ಹೊಸ ಸುದ್ದಿ ಅವನನ್ನು ಅಚ್ಚರಿಗೊಳಿಸಿತು. “ಹತ್ಯೆಗೊಳಗಾದ ಆ ಸಜ್ಜನ ಒಂದು ವಾರದ ಮೊದಲೇ ತನ್ನೆಲ್ಲಾ ಆಸ್ತಿಯನ್ನು ಎಲ್ಲಾ ಆಶ್ರಮಗಳಿಗೆ ಹಾಗೂ ಕಂಪನಿಯನ್ನು ತುಂಬಾ ವಿಶ್ವಾಸಾರ್ಹ, ದಕ್ಷ, ನಿಷ್ಠಾವಂತ ಅಧಿಕಾರಿಯ ಹೆಸರಿಗೆ ಬರೆದಿಟ್ಟಿದ್ದ. ತನ್ನ ಖಾಸಗಿ ಡೈರಿಯಲ್ಲಿ ಈ ವಿವರಗಳ ಉಲ್ಲೇಖ ಮಾಡಿ ತನ್ನ ಸಾವಿನ ದಿನವನ್ನು ಹಾಗೂ ಸಮಯವನ್ನು ನಿಖರವಾಗಿ ತಿಳಿಸಿದ್ದ. ಇದು ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಡುತ್ತಿದೆ ” ಎಂಬ ಸುದ್ದಿ ಬಿತ್ತರಗೊಳ್ಳುತ್ತಿರುವಾಗ ಈತನಿಗೆ ಪಾತಾಳಕ್ಕೆ ಇಳಿಯುತ್ತಿರುವ ಭಾವನೆ ಉಂಟಾಯಿತು. ಆ ಸಜ್ಜನ ತನ್ನ ಸತ್ಕರ್ಮದ ಫಲದಿಂದ ಅನಾಯಾಸವಾಗಿ ಮರಣವನ್ನು ಅಪ್ಪಿಕೊಳ್ಳುವ ಮನಸ್ಥಿತಿ ಹೊಂದಿದ್ದ. ದೇಹ ನೂರಾರು ಹಿಂಸೆ ಸಹಿಸಿದರೂ ಮನಸ್ಸು ತೃಪ್ತಿಯಿಂದ ಸಾವನ್ನು ಸಹಜವಾಗಿ ನಿರಾತಂಕವಾಗಿ ಒಪ್ಪಿಕೊಂಡಿತ್ತು.ಅನಾಯಾಸೇನ ಮರಣಂ ಎಂಬ ಪ್ರಾರ್ಥನೆ ಸಫಲವಾಗಿತ್ತು.ಕೊನೆಗೂ ಆತನ ಎತ್ತರ ಹಾಗೂ ಚಿಂತನೆ ಈತನಿಗೆ ಅರ್ಥವಾಯಿತು.

ಇಂತಹ ಎಷ್ಟೋ ಸಜ್ಜನರು ನಮ್ಮ ನಡುವೆ ಆಗಿಹೋಗಿದ್ದಾರೆ. ರಾಮಕೃಷ್ಣ ಪರಮಹಂಸರ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಅವರು ಕ್ಯಾನ್ಸರ್ ನಿಂದ ಬಳಲಿ ನೋವುಂಡಿದ್ದರೂ ಅವರ ಮನಸ್ಸು ಸಾವಿಗೆ ಹೆದರಲಿಲ್ಲ. ಸಾವನ್ನು ಸಹಜವಾಗಿಯೇ ಸ್ವೀಕರಿಸಿ ಭಗವಂತನ ನಾಮ ಸ್ಮರಣೆಯಲ್ಲಿ ಕೊನೆಯುಸಿರೆಳೆದರು. ಮರಣ ಕಾಲದ ಅರಿವು ಎಲ್ಲರಿಗೂ ಆಗುವಂತಹದ್ದಲ್ಲ. ಅದಕ್ಕೆ ಅಂತಹ ಮೌಲ್ಯಯುತ ಬದುಕು ಬದುಕಿರಬೇಕು. ಕೊನೆಯ ಗಳಿಗೆಯ ಅರಿವಿರುವವನು ಮಾತ್ರ ಆ ನಂಬುವ ದೈವಿ ಶಕ್ತಿಯನ್ನು ಮನದಲ್ಲಿ ನೆನೆದು ಈ ದೇಹ ಬಿಡಲು ಸಾಧ್ಯ ಹಾಗೂ ಆ ದೈವಿ ಶಕ್ತಿಯನ್ನು ಸೇರಲು ಸಾಧ್ಯ. ಇದು ಜೀವನವನ್ನು ಸುಂದರವಾಗಿಸುತ್ತಾ ಮರಣವನ್ನೂ ಸುಂದರವಾಗಿಸುವ ಬಗೆ. ಏಕೆಂದರೆ ಹುಟ್ಟು ಹಾಗೂ ಸಾವು ಎರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಜೀವನವೇ ನಮ್ಮ ಅರಿವಿಲ್ಲದೆ ಕಳೆದು ಹೋದರೆ ಮರಣದ ಅರಿವು ಹೇಗೆ ಉಂಟಾಗಲು ಸಾಧ್ಯ?

(ಕೃತಿ: “ಅಂತರ್ವೀಕ್ಷಣೆ” ಗೀತಾ ಕಥಾಯಾನ, ಲೇಖಕರು: ಪೂರ್ಣಿಮಾ ಹೆಗಡೆ, ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಲೆ: 135/-)