ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ. ರೈತರಿಗೆ ಕೂಡ ಕಾಡು ಬೆಳೆಸಿ ಕಾಡಿನ ಉತ್ಪನ್ನದ ಲಾಭಗಳಿಕೆಗೆ ಅದು ಪ್ರೋತ್ಸಾಹಿಸುತ್ತದೆ. ಹಾಗಾಗಿಯೇ ಸಾಗುವ ಎಲ್ಲೆಡೆ ಅವರ ಹಸಿರು ಪರಿಸರ ಕಣ್ಣಿಗೆ ಕಾಣುತ್ತದೆ. ಪರಿಸರ, ಆರೋಗ್ಯ, ಸೌಲಭ್ಯ ಮತ್ತು ಸ್ವಚ್ಛತೆಗೆ ಇಲ್ಲಿನ ಸರಕಾರ ಹೆಚ್ಚು ಆದ್ಯತೆ ನೀಡುತ್ತದೆ. 
ಸುಜಾತಾ ತಿರುಗಾಟ ಕಥನ

 

ನಯಾಗರಕ್ಕೆ ನಾವು ತಲುಪಿದಾಗ ರಾತ್ರಿಯಾಗಿತ್ತು. ಅಲ್ಲಿ ನದೀ ತೀರದ ಮಲೆನಾಡಿನ ಒಂದು ಊರಿನ ಛಾಯೆಯಿತ್ತು. ಪ್ರವಾಸೋದ್ಯಮದ ಅಂಗವಾಗಿ ಎಲ್ಲ ದೇಶದ ಜನ ವ್ಯಾಪಾರಕ್ಕೆ ಕುಳಿತಿದ್ದರು. ಮಿನುಗುವ ದೀಪಾಲಂಕಾರದ ದಾರಿ ಸವೆಸಿ ಪಂಜಾಬಿಯ ಹೋಟೆಲ್ ನಲ್ಲಿ ಸರ್ವ್ ಮಾಡುತ್ತಿದ್ದ ನಮ್ಮ ಭಾರತದ ಎತ್ತರದ ಹುಡುಗಿಯೊಬ್ಬಳನ್ನು ಗಮನಿಸುತ್ತ ಊಟ ಸಾಗಿತ್ತು. ಕುಡಿದ ಪ್ರವಾಸಿಗನೊಬ್ಬ ಅವಳ ಅಂಡು ಚಿವುಟಿ ಖುಶಿ ಪಟ್ಟಿದ್ದನ್ನು ನೋಡಿ ಆ ಹುಡುಗಿ ಇವನ ಬಳಿ ಸುಳಿಯದೆ ಅವಳ ಗುಂಪಿನಲ್ಲೇ ಅಡ್ಡಾಡತೊಡಗಿದಳು.

ರಾತ್ರಿಯಲ್ಲಿ ಜಲಪಾತಕ್ಕೆ ಮಾಡಿದ ಬೆಳಕಿನ ವಿನ್ಯಾಸ ಬಹಳ ಸುಂದರವಾಗಿರುತ್ತದೆ ಎಂದು ಯಾರೋ ಹೇಳಿದ್ದರು. ಅದನ್ನು ನೆನೆದು ನಾವು ರೂಮಿಗೆ ಲಗೇಜ್ ಎಸೆದವರೇ ಹೊರಬಿದ್ದು ಓಡಿದೆವು. ಪಾರ್ಕಿನಿಂದ ಹಾದು ಬಂದವರೇ ಮೊದಲು ಜನ ನಿಂತಿರುವೆಡೆಗೆ ಸರಸರನೆ ಹೋದೆವು. ಬೀಳುವ ನೀರಿನುದ್ದಕ್ಕೂ ಬಣ್ಣ ಬಣ್ಣದ ದಾರವನ್ನು ನೆಲಕ್ಕೆ ಬಿಳಲು ಬಿಟ್ಟು ಹರಿದಾಡುವಂತೆ ಬಣ್ಣಬಣ್ಣದ ದೀಪದ ಬೆಳಕು ನೀರಲ್ಲಿ ತೋಯುತ್ತಿತ್ತು.

ನೀರು ಬೀಳುವ ಸದ್ದು…. ಅಂಬರದ ಚಿಕ್ಕಿಯ ಕಣ್ಣಂಚಲ್ಲಿ … ಹಬೆಯಾಡುವ ನೀರ ಮೈಯೇ ಸ್ನಾನಕ್ಕಿಳಿದಿತ್ತು. ಏಳುತಿದ್ದ ನೀರಿನ ಹೊಗೆಯನ್ನು ನೋಡುತ್ತ ನಿಂತಾಗ ಆಚೆ ದಡದಲ್ಲಿ ಕಾಣುತಿದ್ದ ಕ್ಯಾಸಿನೋಗಳು ಝಗಮಗಿಸುವ ದೀಪದ ಬೆಳಕಿನಲ್ಲಿ ಕಣ್ಣು ಮಿಟುಕಿಸಿ ‘ಮೊಜುಗಾರರೇ…. ವೆಲ್ಕಮ್ ಟು ಕ್ಯಾನಡಾ’ ಎಂದು ಕರೆಯುತ್ತಿದ್ದವು.

ಅಮೇರಿಕಾ ಹಾಗೂ ಕೆನಡಾದ ನಡುವಿನ ಸಂಪರ್ಕಸೇತುವೆ ಎಬ್ಬಿಸುವರಿಲ್ಲದೆ ತಣ್ಣಗೆ ಸದ್ದಿಲ್ಲದೆ ಮೈಮರೆತು ಮಲಗಿತ್ತು. ನೋಡಿ ದಣಿದ ನಾನು ಇಷ್ಟು ಹತ್ತಿರ ಬಂದೂ… ಕೆನಡಾ ಕಡೆಯಿಂದ ನಯಾಗರದ ಜಗದಚ್ಚರಿಯನ್ನು ಪೂರ್ಣವಾಗಿ ನೋಡಲಾಗುವುದಿಲ್ಲವಲ್ಲ ಅನ್ನುವ ನನ್ನ ಅರೆ ತಿಳುವಳಿಕೆಯಲ್ಲಿ ಬೇಸರಿಸಿದೆ.

ಆದರೆ ಮಾರನೇ ದಿನ ನೀರಿಗಿಳಿದು ಕೆನಡಾ ದಿಕ್ಕಿನಿಂದ ನಯಾಗರಾ ನೋಡಿ ಬಂದ ಮೇಲೆ ಸಮಾಧಾನವಾಗಿ “ನಯಾಗರ ಅಬ್ಬಿಯಚ್ಚರಿ ನೋಡಾಯ್ತಲ್ಲ. ಬಿಡು, ಕೆನಡಾವನ್ನು ನಂತರ ನೋಡಿದರಾಯಿತು” ಅಂದು ಸಮಾಧಾನವಾಗಿ ಹಿಂತಿರುಗಿ ಬಂದೆ. ಮತ್ತೆ ಬೆಳಿಗ್ಗೆ ಎದ್ದು ಇತ್ತ ಬರಬೇಕು, ನೀರಿನಾಳ ಇಳಿದು ನೋಡುವ ಸಾಹಸಕ್ಕೆ ರೆಡಿಯಾಗಿ… ಎಂದು ಗಂಟೆ ನೋಡಿದರೆ ೧೧. ೩೦ ಆಗಿತ್ತು.

ಸರಿ! ತಿರುಗಿ ರೂಮಿನತ್ತ ಬರುವಾಗ, ಮೈಲುಗಟ್ಟಳೆಯಿಂದ ಹಾದು ಬರುತಿದ್ದ ನದಿ, ನೆಲಮಟ್ಟದಲ್ಲೇ ಹರಿಯುವುದನ್ನು ಕಂಡೆವು. ಕಲ್ಲಿನ ಹಾಸಿನ ಮೇಲೆ ಮುಂದೆ ಮುಂದೆ, ಹೈಜಂಪ್ ಹಾಗೂ ಲಾಂಗ್ ಜಂಪಿಗೆ ತಯಾರಾಗಲು ನೀರ ನಿರಿಯ ಮಡಿಕೆಗಳನ್ನು ಜೋಡಿಸುತ್ತ ಹೆಜ್ಜೆಯನ್ನು ಹಿಂದಕ್ಕೆ ತಳ್ಳುತ್ತ ನೀರುಸಿರ ಜುಳುಜುಳು ನಿನಾದದೊಂದಿಗೆ ಜಲಪಾತದ ಕಡೆಗೆ ಭರದಿಂದ ಸಾಗುವ ನದಿಯ ವೇಗವನ್ನು ನೋಡುತ್ತ ಅದರ ಪಕ್ಕದಲ್ಲೇ ನಡೆದೆವು. ನಂತರ ಹೊರಳಿ ಹತ್ತಿರದಲ್ಲೇ ಇದ್ದ ಹೋಟೆಲಿನ ರೂಮು ಸೇರಿ ನಿದ್ದೆಯ ಸೆಳವಿಗೆ ಸಿಕ್ಕಿ ಹಾಕಿಕೊಂಡು ಮೈ ಮರೆತೆವು.

ಬೆಳಿಗ್ಗೆ ಎದ್ದು ಮತ್ತೆ ನಯಾಗರದ ಒಡಲಿಗೆ ಬಂದರೆ ಜನಗಳೆಲ್ಲ ಧುಢದುಡನೆ ಅಡ್ಡಾಡಿ ಟಿಕೇಟ್ ಖರೀದಿಸುವಾಗ ಸಿಕ್ಕ ಒಂದೆರಡು ಕನ್ನಡ ಜನರ ಜೊತೆ ಮಾತುಕತೆಯನ್ನಾಡಿದೆವು. ಒಬ್ಬರು ಗಿರಿನಗರ. ಮತ್ತೊಬ್ಬರು ಜಯನಗರ, ಇನ್ನೊಬ್ಬರು ಕೆ. ಆರ್. ನಗರ . ಎಲ್ಲರೂ ತಮ್ಮ ಮಕ್ಕಳೊಡನೆ ನಯಾಗರವನ್ನು ಕಣ್ತುಂಬಿಕೊಳ್ಳಲು ಕಾದು ನಿಂತಿದ್ದರು. ಒಬ್ಬ ನಡುವಯಸ್ಸಿನವರು ಮೊದಲನೆ ಬಾರಿಗೆ ಸ್ಕಿನ್ ಟೈಟ್ ಪ್ಯಾಂಟನ್ನು ತೊಟ್ಟಿದ್ದರೇನೋ… ಮೊಮ್ಮಗುವಿನ ತುಂಟಾಟದಲ್ಲಿ ಮೇಲೆ ಸರಿದ ಮೇಲಂಗಿಯನ್ನು ಜಗ್ಗಿ ಎಳೆದು ಸರಿ ಮಾಡಿಕೊಳ್ಳುತ್ತ ಫಜೀತಿ ಪಟ್ಟುಕೊಳ್ಳುತಿದ್ದರು.

ಅವರು ಆ ಗಮನದಲ್ಲಿರುವಾಗಲೇ ಅಳತೆ ಮೀರಿದ ಊರಗಲ ಮೈ ಹೊತ್ತು, ತನ್ನ ಟೂ ವೀಲರ್ನಲ್ಲಿ ತನ್ನ ಮೈಗೂ ಬಟ್ಟೆಗೂ ಸಂಬಂಧವೇ ಇಲ್ಲದಂತೆ ಹಾಲಿನಲ್ಲಿದ್ದ ಅಮೇರಿಕನ್ ಒಬ್ಬಳು ಮುಖಕ್ಕೆ ಢಾಳಾಗಿ ಮೇಕಪ್ ಹೊಡೆದು ಒಂದು ಪಿಡ್ಚೆ ಇದ್ದ ತನ್ನ ಮುದ್ದಿನ ನಾಯನ್ನು ಮುದ್ದಿಸುತ್ತ ಟಿಕೇಟ್ಟಿಗೆ ಕಾದು ಕುಳಿತಿದ್ದಳು. ಅದರ ನಡುವೆ ಒಬ್ಬ ಯುವಕ ನನ್ನ ಕಾಲುಸರದ ವಿನ್ಯಾಸಕ್ಕೆ ಬೆರಳು ಸನ್ನೆಯಲ್ಲಿ ‘ಫೈನ್’ ಎಂದ. ಅವನ ಸಂಗಾತಿ “ಓ” ಎಂದು ಹುಬ್ಬೇರಿಸಿ ಬಣ್ಣದ ತುಟಿಯನ್ನು ಒಳಲೆಯಂತೆ ಮಾಡಿ ನನ್ನ ಕಾಲನ್ನು ದಿಟ್ಟಿಸಿದಳು.

ಇವರ ಮುಂದೆ ನಮ್ಮ ಚೈನೀಸ್ ಜನರನ್ನು ನಿಲ್ಲಿಸಿದರೆ ತಣ್ಣಗೆ ನಗು ಚೆಲ್ಲುತ್ತಿದ್ದರೇನೋ ಅನ್ನಿಸಿತು. ಅಲ್ಲಿ ಭರ್ತಿ ಚೈನಾದ ಜನಗಳಿದ್ದರು. ಅಷ್ಟರಲ್ಲಿ ಇನ್ನೂ ರಾತ್ರಿಯ ಮೂಡಿನಲ್ಲಿಯೇ ಇದ್ದ ಒಬ್ಬ ತರುಣಿ ತನ್ನ ಹುಡುಗನ ಎದೆಯಲ್ಲಿ ಮುಸುಗರೆಯುತ್ತ ದೂರು ಹೇಳುವಂತೆ ಎದೆಗೆ ಎದೆ ಸೇರಿಸಿ ನಿಂತೇ ಇದ್ದ ಕ್ಯೂ ನೋಡಿ ಬೇಸರಿಸಿದಳು. ಅವನು ತಬ್ಬಿ ಬೆನ್ನು ಸವರುತ್ತ ಸಮಾಧಾನ ಮಾಡಿದ. ಕೊನೆಗೆ ತುಟಿ ಸೇರಿಸಿ ಸಮಾಧಾನ ಮಾಡಿದ. ಥೇಟ್ ಮಗುವನ್ನು ರಮಿಸುವಂತೆ. ಮನುಷ್ಯ ತನ್ನ ಸಂಗಾತಿಯೊಡನೆ ಹೀಗೆ ರಮಿಸಿಕೊಳ್ಳಲೆಂದೇ ಹುಟ್ಟಿ ಬರುತ್ತಾನೇನೋ? ಆ ಕ್ಷಣ ನನ್ನಲ್ಲಿ ಹಾಗೆ ಉಳಿಯಿತು.

ಅಷ್ಟರಲ್ಲಿ ಒಂದು ಬ್ಯಾಚ್ ಜನ ಅಬ್ಬಿಯನ್ನು ನೋಡಲು ಹೋಗಿದ್ದವರು ತಿರುಗಿ ದುಡದುಡನೆ ಬಂದರು. ಟಿಕೇಟ್ ಕೌಂಟರ್ ಚುರುಕಾಯಿತು. ನಮ್ಮ ಜಲಪಾತಕ್ಕೆ ಹೋಗುವ ಸರದಿ ಮತ್ತೆ ಮುಂದಕ್ಕೆ ಹೋದ ಕಾರಣ ನಾವು ನಯಾಗರದ ಡಾಕ್ಯುಮೆಂಟರಿ ನೋಡಲು ಥಿಯೇಟರ್ ಕಡೆಗೆ ಹೋದೆವು. ನಾಲ್ಕೇ ಜನಕ್ಕೆ ಒಂದು ಶೋ ಆಯಿತು. ಕೆಲವು ಮಾಹಿತಿಯನ್ನು ತಲೆತುಂಬಿಕೊಂಡು ಅಕ್ವೇರಿಯಂ ಕಡೆಗೆ ಸಾಗಿದೆವು.

ನಯಾಗರದ ಜೀವ ವೈವಿದ್ಯಗಳು

ಅಲ್ಲಿ ನಮಗೆ ಕಾಲೇಜು ದಿನಗಳಲ್ಲಿ ಓದಿ ಸಂಪೂರ್ಣ ಮರೆತೇ ಹೋಗಿದ್ದ ಜೂವಾಲಜಿ ಹಾಗೂ ಬಾಟನಿಯ ಪುಸ್ತಕದಲ್ಲಿದ್ದ species ಗಳು ತಮ್ಮ ವಿವಿಧ ಚಲನವಲನಗಳಲ್ಲಿ ಮರು ನೆನಪನ್ನು ಹುಟ್ಟು ಹಾಕುವಂತೆ ಅನಾವರಣಗೊಂಡಿದ್ದವು. ಅಲ್ಲಿ ಸುತ್ತಲೂ ಜೋಡಿಸಿದ್ದ, ನೀರ ಬರಸಿಗೆ ಕೊರೆದ ಶಿಲಾ ರಚನೆಗಳು, ಪಳೆಯುಳಿಕೆಗಳು, ಮಿಸ್ಸಿಂಗ್ ಲಿಂಕ್ ಆಗಿ ಉಳಿದಿರುವ ಜೀವಿಗಳು, ತಮ್ಮ ಅಕರಾಳ ವಿಕರಾಳ ರೂಪದಲ್ಲಿ, ದಶಾವತಾರದ ಮಾಡೆಲ್ಲುಗಳಂತೆ ತಮ್ಮ ಚಿತ್ರವಿಚಿತ್ರ ಚಲನೆಯಲ್ಲಿ, ಆಕಾರದಲ್ಲಿ ಅಕ್ವೇರಿಯಂನಲ್ಲಿ ಚಲಿಸುತ್ತಿದ್ದಂತೆ ಕಂಡವು.

ವರ್ಣಾತೀತ ಕಾಮನಬಿಲ್ಲನ್ನೂ ನಾಚಿಸುವಂಥ ಹವಳ ದಿಬ್ಬಗಳು, ಸಮುದ್ರ ಕುದುರೆ ಎಂಬ ಒಂದು ಚೋಟುದ್ದವಿರುವ ಕುದುರೆಯಾಕಾರದ ಜೀವಿ, ಅಂಗಾತ ಮಗುಚಿ ಬಿದ್ದ ನಕ್ಷತ್ರ ಮೀನಿನ ಮೈಲಿ ತೆರೆದುಕೊಂಡ ಗಾಳಿಕೊಳವೆಗಳು, ಮುದುಕರಂತೆ ಗೂನು ಬೆನ್ನಿರುವ water monster, ವೈವಿಧ್ಯಮಯ ಬಣ್ಣವೇ ಮೈವೆತ್ತು ಸಣ್ಣಾಕಾರದಿಂದ ಬೃಹದಾಕಾರವಾಗಿ ಈಜುತ್ತಿದ್ದ ಮೀನುಗಳು, ಆಮೆಗಳು, ಚೂರಿ ಮೂಗಿನ, ಮೊಂಡು ಮೂಗಿನ, ಮೀಸೆಹೊತ್ತ ಎಷ್ಟೊಂದು ಆಕಾರಗಳು.

ಅಲ್ಲಿ ಸುತ್ತಲೂ ಜೋಡಿಸಿದ್ದ, ನೀರ ಬರಸಿಗೆ ಕೊರೆದ ಶಿಲಾ ರಚನೆಗಳು, ಪಳೆಯುಳಿಕೆಗಳು, ಮಿಸ್ಸಿಂಗ್ ಲಿಂಕ್ ಆಗಿ ಉಳಿದಿರುವ ಜೀವಿಗಳು, ತಮ್ಮ ಅಕರಾಳ ವಿಕರಾಳ ರೂಪದಲ್ಲಿ, ದಶಾವತಾರದ ಮಾಡೆಲ್ಲುಗಳಂತೆ ತಮ್ಮ ಚಿತ್ರವಿಚಿತ್ರ ಚಲನೆಯಲ್ಲಿ, ಆಕಾರದಲ್ಲಿ ಅಕ್ವೇರಿಯಂನಲ್ಲಿ ಚಲಿಸುತ್ತಿದ್ದಂತೆ ಕಂಡವು.

ಆಕಾರವನ್ನೇ ನಿರಾಕರಿಸಿದ ಅಕಶೇರುಕಗಳು, ಆಕ್ಟೋಪಸ್, ಹೀಗೆ ನಮ್ಮ ಕಾಲೇಜು ದಿನಗಳಲ್ಲಿ ರೆಕಾರ್ಡಿನ ಒಂದೇ ಅಳತೆಯ ಹಾಳೆಗಳಲ್ಲಿ, ಶೇರುಕ-ಅಕಶೇರುಕ ಜೀವಿಗಳನ್ನು ಅಂಕ ಪಡೆಯಲೆಂದೇ ಸುಂದರವಾಗಿ ಕಾಣುವಂತೆ ಒಂದೇ ಅಳತೆಯಲ್ಲಿ ಅಂಧಕಾರದಲ್ಲಿ ಚಿತ್ರಿಸುತ್ತಿದ್ದ ನಾವು ಈಗ ಅದರ ಆಕಾರ ರೂಪ ಅಳತೆಯ ವೈವಿಧ್ಯದಲ್ಲಿ ಕೊಚ್ಚಿಹೋದೆವು. ನಮ್ಮ ಅಜ್ಞಾನಕ್ಕೆ ಎಷ್ಟೇ ಅಚ್ಚರಿಯಾದರೂ ಪಠ್ಯದ ಚಿತ್ರಗಳು, ವಿವರಗಳು ಇಂದು ನೆನಪಾಗಿ, ಇದನ್ನು ನಾವು ಮೊದಲೇ ನೋಡಿದ್ದೇವೆ ಎಂಬ ಹೆಮ್ಮೆ ತರಿಸುತಿತ್ತು. ಏನಾದರಾಗಲಿ… ಓದಿನ ಅರಿವೇ ಹೆಮ್ಮೆಯಲ್ಲವೇನು?

ಬೇಗ ಬೇಗ ನೋಡಿ ಬರಲೆಂದು ಹೋದವರು ಅವುಗಳ ಅಂದಚೆಂದಕ್ಕೆ, ಸುಣ್ಣಬಣ್ಣಕ್ಕೆ, ಆಕಾರವಿಕಾರದ ಸೆಳೆತಕ್ಕೆ, ನೋಟವನ್ನು ಹೊಂದಿಸುತ್ತ ನಿಮಿಷಗಳು ಉರುಳಿ ಗಂಟೆಯನ್ನಾಗಿಸಿತ್ತು. ಜಗತ್ತನ್ನೇ ಅಚ್ಚರಿಗೊಳಿಸುವಂತೆ ನೀರು ಸುರಿಯುವ ಸುರಿದಷ್ಟೂ ಮುಗಿಯದ ಈ ನಯಾಗರದಲ್ಲೂ ಅನೇಕ ಜೀವಿಗಳು ಮಿಸ್ಸಿಂಗ್ ಲಿಂಕ್ ಆಗಿ ಉಳಿದಿವೆ ಎಂಬುದನ್ನು ಅಲ್ಲಿ ಓದಿ ಅಚ್ಚರಿಯಾಯ್ತು.

ಮನುಷ್ಯ ಕಾಲಿಟ್ಟೆಡೆಯಲ್ಲೆಲ್ಲ ಇಂಥದೇ ಸಮಸ್ಯೆ ಹುಟ್ಟಿಕೊಳ್ಳುತ್ತದೆ ನಿಜ! ಅವನ ಬುದ್ಧಿಯೇ ಇದಕ್ಕೆ ಕಾರಣವಿರಬಹುದು. ಹೊಸಹೊಸ ಆವಿಷ್ಕಾರದ ಹಾದಿಯಲ್ಲಿ ತೊಡಗಿಕೊಳ್ಳುವ ಅವನ ಕುತೂಹಲ ನೈಜ ಪ್ರಕೃತಿಗೆ ಮಾರಕ ಎಂಬುದನ್ನು ನಾವು ಮರೆಯುವಂತಿಲ್ಲ.

ಇದೊಂದೇ ಅಲ್ಲ. ಪ್ರಕೃತಿಯ ಬದಲಾವಣೆಯಲ್ಲೂ ಒಮ್ಮೊಮ್ಮೆ ಈ ವಿಕಾಸವಾದ ಹಾಗೂ ಅಳಿವಿನ ಹಾದಿಗಳು ತೆರೆದುಕೊಳ್ಳುತ್ತವೆ. ಭೂಕಂಪ, ಹಿಮಪಾತ, ಜ್ವಾಲಾಮುಖಿ, ಅಳತೆ ಮೀರಿದ ಜೀವಿಗಳ ಆಹಾರದ ಕೊರತೆಯಲ್ಲಾಗುವ ಬಡಿದಾಟಗಳು, ಹೀಗೆ ಹತ್ತು ಹಲವು ಕಾರಣವೂ ಇರುತ್ತವೆ ಎಂಬುದೂ ದಿಟವೇ! ಆಗಿದೆ.

ನಯಾಗರದ ಸರೋವರದ ಪರಿಸರದಲ್ಲಿ 3500 species ನಷ್ಟು ಪ್ರಾಣಿ ಹಾಗೂ ಸಸ್ಯ ಜೀವಿಗಳಿವೆ. ಇಲ್ಲಿ ನಶಿಸಿ ಹೋಗುತ್ತಿರುವ ಕೆಲವು ಜೀವಿಗಳ ಉಳಿವಿಗೆ ನ್ಯೂಯಾರ್ಕ್ ಸ್ಟೇಟ್ ನ ಪರಿಸರ ಶಾಖೆ ಶ್ರಮ ವಹಿಸಿ ಇವುಗಳನ್ನು ಕಾಪಾಡಿಕೊಳ್ಳುತ್ತಿದೆ. ಕೆಲವು ನದಿಗಳಲ್ಲಿ ಹೀಗೆ ಕಾಪಾಡಿಕೊಳ್ಳುವ ದಿಸೆಯಲ್ಲಿ 5000 ದಷ್ಟು fingerlings ಮೀನುಮರಿಗಳನ್ನು ಪ್ರತಿ ವರುಷ ಕೆಲವು ನದಿಗಳಲ್ಲಿ ಕಾಪಾಡಿಕೊಂದು ನಂತರ ನೀರ ಹರಿವಿಗೆ ಬಿಡಲಾಗುತ್ತದೆ.

ಆ ನಂತರ ಅವುಗಳೇ ವಂಶಾಭಿವೃದ್ಧಿ ಮಾಡುವಷ್ಟು ಗಟ್ಟಿಯಾಗಿ, ಅವು ಉಳಿದುಕೊಳ್ಳುವಂತೆ ಮಾಡಲಾಗುತ್ತದೆ. ಇವು ಏಳು ಅಡಿಯವರೆಗೂ ಬೆಳೆಯುತ್ತವೆ. Sturgeon ಸರೋವರ ಈ ಮೀನಿನ ವಂಶಾಭಿವೃದ್ಧಿಯನ್ನು ಮಾಡಲು ಅತ್ಯಂತ ಸೂಕ್ತ ಪರಿಸರವನ್ನು ಹೊಂದಿದೆ. Brook trout ಎಂಬ ಮೀನ ತಳಿಯೊಂದೀಗ ಇಂಥದ್ದೇ ಸಂರಕ್ಷಣೆಯಲ್ಲಿದೆ.

ಹೀಗೆ ಹತ್ತಾರು ತಳಿಗಳನ್ನು, ಸಸ್ಯ ಸಂಕುಲವನ್ನು ಕಾಪಾಡಿಕೊಳ್ಳುವ ಶಿಸ್ತು, ಶ್ರದ್ಧೆ, ಅಮೇರಿಕಾ ದೇಶದ ಹೆಚ್ಚುಗಾರಿಕೆಯೇ ಅನ್ನಬಹುದು. ಮುಂದಿನ ಮೂವತ್ತು ವರ್ಷದ ಯೋಜನೆಯನ್ನಿಟ್ಟುಕೊಂಡೆ ಈ ದೇಶ ರಸ್ತೆಗಳನ್ನು ರೂಪಿಸುತ್ತದೆ. ಎಲ್ಲಿ ಮರಗಳನ್ನು ಕಡಿಯಲಾಗುತ್ತದೋ ಅಲ್ಲಿ ಎಚ್ಚರದಿಂದ ಮರ ನೆಡುತ್ತದೆ. ರೈತರಿಗೆ ಕೂಡ ಕಾಡು ಬೆಳೆಸಿ ಕಾಡಿನ ಉತ್ಪನ್ನದ ಲಾಭಗಳಿಕೆಗೆ ಅದು ಪ್ರೋತ್ಸಾಹಿಸುತ್ತದೆ. ಹಾಗಾಗಿಯೇ ಸಾಗುವ ಎಲ್ಲೆಡೆ ಅವರ ಹಸಿರು ಪರಿಸರ ಕಣ್ಣಿಗೆ ಕಾಣುತ್ತದೆ. ಪರಿಸರ, ಆರೋಗ್ಯ, ಸೌಲಭ್ಯ ಮತ್ತು ಸ್ವಚ್ಛತೆಗೆ ಇಲ್ಲಿನ ಸರಕಾರ ಹೆಚ್ಚು ಆದ್ಯತೆ ನೀಡುತ್ತದೆ.

ನಯಾಗರ ನದಿಯ ಪರಿಸರದಲ್ಲಿ ಮುಂಗುಸಿಗಳು, ತೋಳಗಳು, ಪರ್ವತ ಕರಡಿ ಸಿಂಹಗಳಂಥ ದೊಡ್ಡ ಜೀವಗಳು, ವಿವಿಧ ಹಕ್ಕಿಪಕ್ಷಿಗಳು, ನೀರ ಹಕ್ಕಿಗಳು, ದೊಡ್ದ ಹದ್ದು ಗರುಡಗಳು ಇರುವುದರ ಜೊತೆಗೆ ಅಪರೂಪದ ಝರಿ ಸಸ್ಯಗಳು ಹಾವಸೆಯ ತಂಪಲ್ಲಿ ಅರಳುವ ಹೂವಿನ ಪ್ರಭೇದಗಳು ವಿಶಿಷ್ಟವಾಗಿವೆ.

ಇಲ್ಲಿನ Hamboldt penguins ಉತ್ತರದ ಅಂಟಾರ್ಕಟಿಕಾದಿಂದ Hamboldt current ನಲ್ಲಿ ಈಜಿ ತೇಲುತ್ತ ಬಂದು ದಕ್ಷಿಣ ಅಮೇರಿಕಾದ ಪೆಸಿಫಿಕ್ ಸಾಗರವನ್ನು ಸೇರುತ್ತವೆ. ಹಾಗಾಗಿ ಅದು ತೇಲಿ ಬರುವ ನೀರ ಹರಿವಿನ ಹೆಸರನ್ನೇ ಅದಕ್ಕೆ ಇಡಲಾಗಿದೆ.

ಹಳೆ ಕಾಲದಿಂದ ಇವತ್ತಿಗೂ ಅತ್ಯಂತ ಚಳಿ ಪ್ರದೇಶದಿಂದ ಹಿಮ ಬೀಳುವ ಕಾಲದಲ್ಲಿ ತಮ್ಮ ಉಳಿವಿಗಾಗಿ ಹೀಗೆ ಸಾಗಿ ಬಂದು ತಮ್ಮ ಹೊಟ್ಟೆ ಸಾಕಿಕೊಂಡು ನೆಲೆ ಕಂಡುಕೊಳ್ಳುವುದು ಮನುಷ್ಯನಿಗೂ ಹೊರತಾಗಿಲ್ಲ. ನಾವೂ ಇಲ್ಲಿ ಬದುಕುವ ಎಲ್ಲ ಜೀವಿಗಳಂತೇ ಅನ್ನಿಸಿತು. ಸಣ್ಣ ಗುಹೆಯಾಕಾರದ ಒಡಲಲ್ಲಿ ಪೆಂಗ್ವಿನ್ ಆಚೆ ಬಂದು ನಿಂತಿದ್ದವು. ಬಿಸಿಲು ಬಿದ್ದರೆ ಅದರ ಕಾಲು ಕೈ ತುದಿಗಳು ಕೆಂಪಾಗುತ್ತವೆ ಅಲ್ಲವೇ? ಎಂದೋ ಓದಿದ್ದು ನೆನಪು ಬಂತು. ಆಗ ಅವು ಮತ್ತೆ ನೀರು ಮುಳುಗಿ ತನ್ನ ದೇಹದ ತಾಪಮಾನವನ್ನು ಕಾಪಾಡಿಕೊಳ್ಳುತ್ತವೆ.

ದೊಡ್ದ ಕೊಳವೊಂದರಲ್ಲಿ ಡಾಲ್ಫಿನ್ ಈಜುವುದನ್ನು ನಾವು ನೋಡುತ್ತ ನಿಂತೆವು. ಅತ್ಯಂತ ಸೋಜಿಗದ ಕಣ್ಣಲ್ಲಿ ನೋಡುತ್ತಿದ್ದ ಆಫ್ರಿಕಾ ಮೂಲದ ಮಗು ಅದರ ಅಪ್ಪನ ತೋಳಲ್ಲಿತ್ತು. ಅದರ ಗುಂಗುರು ಕೂದಲಿನುದ್ದಕ್ಕೂ ಸಿಂಗರಿಸಿ ಪೋಣಿಸಿದ್ದ ಅದರ ಹೂವಿನ ಕ್ಲಿಪ್ಪಿನ ಸಿಂಗಾರವನ್ನು ನಾ ನೋಡೇ ನೋಡಿದೆ. ಮುದ್ದಿಸಿದಾಗ ಮಗು ನಕ್ಕಿತು. ಅಪ್ಪನೂ.. ಅವರೂ ಅಮೇರಿಕನ್ ಪ್ರಜೆಗಳೇ ಇರಬಹುದು.

ಡಾಲ್ಫಿನ್ ಮೂತಿ ಹೊರ ಹಾಕಿ ಗಾಳಿ ಹೀರುವುದು, ಅಂಗಾತ ಮಲಗುವುದು. ಕೆಲ ಕಾಲ ನಿಂತು ಹೊರಳಿ ವೇಗ ತೆಗೆದುಕೊಳ್ಳುವುದು ನಡೆದಿತ್ತು. ದಪ್ಪ ಹೊಟ್ಟೆಯ ಅಜ್ಜ ನಿಧಾನ ಈಜಿದರೆ ಅದರ ಮೊಮ್ಮಗ smart ಆಗಿ ಲಾಗ ಹಾಕುತಿತ್ತು. ಇವು ಅತ್ಯಂತ ವೇಗವಾಗಿ ನೀರಲ್ಲಿ ಚಲಿಸುತ್ತವೆ. ಥಂಡಿಯಲ್ಲಿ ನೆನೆಯುತ್ತವೆ, ಅವುಗಳ ಮೈಯ್ಯಿನ ನಯವನ್ನು ನೋಡೇ ನೋಡಿದೆವು

ಕಾಶ್ಮೀರದ ಒಂದು ನೆನಪು

ಆಗ ಪ್ರಾಣಿಸಹಜ ಗುಣದ ಈ ಪಥ ಸಂಚಲನದ ಪಲ್ಲಟದದಂತೆ ಮನುಷ್ಯರ ಒಂದು ಕಥೆ ಕೇಳಿದ್ದು ಅಮೇರಿಕಾ ನೆಲದಲ್ಲಿ ನೆನಪಿಗೆ ಬಂತು. ಕಾಶ್ಮೀರದ ಪ್ರವಾಸ. ಹಿಮ ಪರ್ವತದಂಚಲ್ಲಿ ನಮ್ಮ ಕುದುರೆ ಸವಾರಿ ನಡೆದಿತ್ತು. ಪಕ್ಕದಲ್ಲಿ ಕುದುರೆಯ ಒಡೆಯ ಕೇವಲ ಹದಿಮೂರು ವರುಷದ ಹುಡುಗ ಆರಾಮಾಗಿ ನಡೆದು ಬರುತ್ತಿದ್ದ.

ಪ್ರಕೃತಿಯ ಬದಲಾವಣೆಯಲ್ಲೂ ಒಮ್ಮೊಮ್ಮೆ ಈ ವಿಕಾಸವಾದ ಹಾಗೂ ಅಳಿವಿನ ಹಾದಿಗಳು ತೆರೆದುಕೊಳ್ಳುತ್ತವೆ. ಭೂಕಂಪ, ಹಿಮಪಾತ, ಜ್ವಾಲಾಮುಖಿ, ಅಳತೆ ಮೀರಿದ ಜೀವಿಗಳ ಆಹಾರದ ಕೊರತೆಯಲ್ಲಾಗುವ ಬಡಿದಾಟಗಳು, ಹೀಗೆ ಹತ್ತು ಹಲವು ಕಾರಣವೂ ಇರುತ್ತವೆ ಎಂಬುದೂ ದಿಟವೇ ಆಗಿದೆ.

ಜೋರಾಗಿ ಓಡು ಗತಿಯ ತೊರೆಗಳನ್ನು ಹಾಯುವ ಕುದುರೆಯನ್ನು, ಜೀವ ಭಯದಲ್ಲಿ ಹಿಡಿದು ಕೂತ ನನಗೆ, ಏರುವಾಗ ಇಳಿಯುವಾಗ ಹಿಂದಕ್ಕೆ, ಮುಂದಕ್ಕೆ ಹೇಗೆ ದೇಹವನ್ನು ಸಮದೂಗಿಸಬೇಕು ಅಂತ ಹೇಳಿಕೊಟ್ಟ ಅವನ ಕಿವಿ ಮಾತು ಮರೆತು ಹೋಗುತಿತ್ತು. ಜೀವ ಹಿಡಿಯಾಗಿ ಅದರ ಮೇಲೆ ಕೂತವಳಿಗೆ ಸುತ್ತಲ ಸುಂದರ ಪ್ರಕೃತಿಯ ಆಸ್ವಾದನೆಯೂ ಮರೆತುಹೋಗಿ, ಅಪಾಯದ ಕಿಬ್ಬಿಗಳಲ್ಲಿ ಕಾಲಿಡುವ ಕುದುರೆಯ ಹೆಜ್ಜೆಯನ್ನೇ ಕಣ್ಣು ಅನುಸರಿಸುತಿತ್ತು.

ಇಂತಿರುವಾಗ ಜೀವ ಭಯವನ್ನು ಮರೆಯಲೆಂದೇ ನಾನು ಆ ಹುಡುಗನನ್ನು ಕೇಳಿದೆ ‘ಕುದುರೆ ಜಾರಿದರೇನು ಗತಿಯಪ್ಪಾ?’ ಅವನು ಕೊಂಚವೂ ಅಲ್ಲಾಡದೆ ಗೋಲಿ ಆಡುವ ಹುಡುಗನಂತೆ ಹೇಳಿದ.”ಆ ಮಾತೋಜಿ ಎಂದೂ ಅಪಾಯ ಮಾಡುವುದಿಲ್ಲ.” ಅವನ ಕಣ್ಣು ಅವರ ಜೊತೆಗಾರರ ಕುದುರೆಯ ಕಡೆಗಿತ್ತು. ಮಾತಾಡುವಾಗ ಕುದುರೆ ಸಾಹುಕಾರನದ್ದು… ಎಂದು ಹೇಳಿದ.

ಇವನು ದಿನಗೂಲಿಯವನು. ಹಿಮ ಬೀಳುವ ಕಾಲದಲ್ಲಿ ಇವರ ಕಣಿವೆಗಳ ವಸತಿಯಲ್ಲಿ ಯುವಜನಾಂಗ ಅಲ್ಲಿ ಉಳಿಯುವುದಿಲ್ಲ. ಯಾಕೆಂದರೆ ಹಿಮಭರಿತ ಆ ಪರ್ವತಗಳು ಕೆಲವು ಕಾಲ ಕಾಲವನ್ನೇ ಹಿಡಿದುಕೊಂಡು ಹಿಮದಲ್ಲಿ ಮುಳುಗಿ ತಟಸ್ಥವಾಗುತ್ತವೆ. ಸೂರ್ಯನೂ ಹಿಮಹೊದ್ದು ಮಲಗಿರುತ್ತಾನೆ.

ಶಿವ ಒಳಗೆ ಪರ್ವತರಾಜನ ಮಗಳೊಡಗೂಡಿ ಅಲ್ಲುಳಿದ ಬೀಜಗಳ ಬೇರೂರಿಸಲು ಕೋಶ ಕಟ್ಟುವ ಕಾಲವದು. ಸೂರ್ಯನೆದ್ದು ಮೈ ವದರಿ ಹೊದ್ದ ಹಿಮವನ್ನು ಕಣ್ಣಲ್ಲೇ ಕರಗಿಸಿ ಬೆಟ್ಟಗಳು ಬಯಲಾಗುವ ಕೆಲವು ದಿನದಲ್ಲೇ ಶಿವ ಶಿವೆಯರ ಪ್ರೇಮದ ಹೂವುಗಳು ಬೆಟ್ಟದ ತುಂಬ ಅರಳಿ ನಿಲ್ಲುತ್ತವೆ. ಕಣ್ಣಿಗೆ ದೇವ ಮಾಡುವ ಹಬ್ಬವದು.

ಹಿಮ ಬಿದ್ದ ಹತ್ತಾರು ದಿನದಲ್ಲಿ ಒಳಗಿರುವ ಗೆಡ್ಡೆ ಹಾಗೂ ಬೀಜಗಳಿಗೆ ತಂಪು ಒದಗಿ ವರುಷಕಾಲ ಅಜ್ಞಾತದಲ್ಲಿದ್ದ ಬೇರು ಚಿಗುರುಗಳು ಮೊಳೆತು ಹಿಮ ಕರಗಿದಾಗ ಒಡೆದು ಹೊರಬಂದು ಬೆಟ್ಟಕ್ಕೆ ಬೆಟ್ಟವೇ ಹೂವಾಗುವ ವಿಸ್ಮಯದ ಪರಿ ಅಲ್ಲಿನ ಜನರಿಗೆ ಗೊತ್ತು. ಇದನ್ನು ಒಮ್ಮೆ ನೋಡಿದ್ದ ನಾನು ಅಂದು ಮನ ತುಂಬಿಕೊಂಡ ಸಾರ್ಥಕತೆಯನ್ನು ಹೊಂದಿ ಬಂದಿದ್ದೆ.

ಅಂಥ ಹಿಮ ಮುಚ್ಚಿದ ಸಮಯದಲ್ಲಿ ಜನರೂ ಹೀಗೆ ಬೆಟ್ಟ ಇಳಿದು ಬಯಲಲ್ಲಿ ನಿಂತು ಪ್ರವಾಸೋದ್ಯಮದಲ್ಲಿ ತೊಡಗಿಕೊಂಡು ನಾಕು ಕಾಸು ಸಂಪಾದನೆ ಮಾಡಿಕೊಳ್ಳುತ್ತಾರೆ. ಮನೆಗಳಲ್ಲಿ ಮುದುಕರು, ಕೈಲಾಗದವರು ಮಾತ್ರ ಉಳಿದಿರುತ್ತಾರೆ. ಅವರಿಗೆ ಬೇಕಾದ ಉರುವಲು, ದಿನಸಿ ಧಾನ್ಯದ ಜೊತೆಗೆ ಒಂದೋ ಎರಡೋ ಕುರಿಗಳನ್ನು ಸಿಗಿದು ತಮ್ಮ ಗೂಡಲ್ಲಿ ಸಿಕ್ಕಿಸಿ ಬರುತ್ತಾರೆ. ಇಡೀ ಪರ್ವತವೇ ಫ್ರಿಡ್ಜಿನಂತಾಗಿರುವಾಗ ಅದು ಹಾಳಾಗುವ ಆತಂಕವಿರುವುದಿಲ್ಲ.

ತಿಂಗಳುಗಟ್ಟಳೆ ಈ ಹಿಮವಾಸ ಮುಗಿಯುವ ವೇಳೆಗೆ ಇವರೂ ಕಾಸು ಮಾಡಿಕೊಂಡು ಹೋಗುತ್ತಾರೆ. ಹೊರ ಬರುವ ಬಾಗಿಲೊಂದನ್ನು ಬಿಟ್ಟು ಎಲ್ಲೆಲ್ಲೂ ಹಿಮ ಮುಚ್ಚಿರುತ್ತದೆ. ಇವರೊಡನೆ ಇಂಥ ನಾಕಾರು ಮನೆಯ ಇಂಥ ಜನರೇ ಇರುತ್ತಾರೆ. ಅಲ್ಲಿನ ಗುಜ್ಜರ್ ಜನರೂ ಕೂಡ ತಮ್ಮ ಕುರಿಗಳನ್ನು ಅಟ್ಟಿಕೊಂಡು ಕೆಳಗಿಳಿದಿರುತ್ತಾರೆ.

ಆ ಸಮಯದಲ್ಲಿ ಜಗತ್ತಿನ ಸಂಪರ್ಕ ಕಳೆದುಕೊಂಡು ತಮ್ಮವರನ್ನು ಕಾಯುತ್ತ ಕೂರುವ ಆತಂಕ ಆ ಮುದುಕರದು. ಏನೂ ಆಗುವುದಿಲ್ಲ. ಆ ತಾಯಿ ಕಾಯ್ತಾಳೆ ಎಂದು ಆ ಹುಡುಗ ಹೇಳಿದ. ಆದರೆ ಒಮ್ಮೊಮ್ಮೆ ಮುಪ್ಪು ಹಾಗೂ ಹಸಿವಿನಿಂದ ಮುದುಕರ ಸಾವಾಗುವುದೂ ಆಶ್ಚರ್ಯವೇನಲ್ಲ ಎಂದೂ ಸೇರಿಸಿದ.

ಕುದುರೆ ಇರುವನೇ ಶ್ರೀಮಂತ ಎಂದ ಆ ಹುಡುಗನ ಮಾತಿಗೆ ಮುಂದೆ ನೋಡಿದೆ. ಮುಂದೆ ಹೋಗುತ್ತಿದ್ದುದು ಕತ್ತೆ ಕುದುರೆಯಾಗಿತ್ತು. ಹೊರೆಹೊರುವ ಇದು ಎಡಬಿಡಂಗಿ ತಳಿ. ಅತ್ತ ಕುದುರೆಯೂ ಅಲ್ಲದ ಇತ್ತ ಕತ್ತೆಯೂ ಅಲ್ಲದ ಇವು ಗಿರಿಶಿಖರಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತವೆ. ನಮ್ಮ ಜೊತೆಯಲ್ಲಿ ಪ್ರವಾಸ ಬಂದಿದ್ದ ವೈದ್ಯರು ಅದರ ಮೇಲೆ ನನ್ನಂತೆ ಜೀವ ಭಯದಲ್ಲಿ ಕುಸಿದು ಕುಳಿತಿದ್ದಂತೆ ಕಂಡರು. ನನಗೆ ಅವರ ಆ ಭಂಗಿ ನೋಡಿ ನಗು ಉಕ್ಕೇರಿ ಕೊಂಚ ಭಯ ಕಡಿಮೆಯಾಯಿತು.

ಹಿಂದಿನ ಆ ನೆನಪಿನಿಂದ ಈಗ ಎಚ್ಚೆತ್ತುಕೊಂಡು ನಯಾಗರದ ಜಲಪಾತಕ್ಕೆ ಹೋಗುವೆಡೆಯ ದಾರಿಗೆ ತಿರುಗಿಕೊಂಡೆ.