ಕೌಲಂಪುರದ ವೇಶ್ಯೆಯರು

ಕೌಲಂಪುರದ ವೇಶ್ಯೆಯರು
ಅಂದರೆ
ಅವರು ವೇಶ್ಯೆಯರೇ ಅಲ್ಲ.

ಅವರು
ದೂರದ ಕಾಂಬೋಡಿಯಾದ
ಮೊಂಡು ಮೂಗಿನ, ತುಂಡು ಮೊಲೆಯ
ತುಡು ತುಂಟ ಕಣ್ಣಲ್ಲೇ
ನಿಮ್ಮನ್ನು ಪೂರ್ತಿ ಸೆಳೆಯುವ
ಚಂಪಾ ದೇಶದ ಅಪ್ಸರ ಇರಬಹುದು.

ಅವರು
ಸಣ್ಣ ಹಳ್ಳಿಯೂರ ಬಳ್ಳಿ ಹೊಳೆಯಲ್ಲಿ ಮಿಂದು,
ಒಂಟಿ ಕಿವಿಯಲ್ಲಿ
ಚಂಪಕ ಹೂವ ಮುಡಿದು
ಆ ಗಮಲಿನಲ್ಲಿ ನಿಮ್ಮ ಉಸಿರ ಕಡಿವ
ಜಾವ ದೇಶದ ಸುಮೇರು ಸುಂದರಿ ಇರಬಹುದು.

ಇಲ್ಲ
ಯುದ್ಧದಾಹ ದೇಶ ಸುರಿಸಿದ
ಬಾಂಬುಗಳ ನುಂಗಿ, ಎಲ್ಲ ಕಳೆದು
ಅಲ್ಲಿ ಮಿಕ್ಕವರಿಗೆ, ಇಲ್ಲಿ ದುಡಿವ
ವಿಯೆಟ್ನಾಮಿನ ಬೆಳದಿಂಗಳ ಬಾಲೆ
ಇರಬಹುದು.

ಇಲ್ಲ
ಪ್ರಪಂಚದ
ಈ ಅಖಂಡ ಕಡಲಿನ
ತುತ್ತ ತುದಿಯ
ಆಳ ನೀರಿನಲ್ಲಿ ಒಬ್ಬಳೇ ಈಸುವ ಧೈರ್ಯದ
ಮನಾದೋದ
ಮೀನು ಸುಂದರಿ
ಇರಬಹುದು.

ಕೌಲಂಪುರದ ವೇಶ್ಯೆಯರು
ಅಂದರೆ
ಅವರು ವೇಶ್ಯೆಯರೇ ಅಲ್ಲ.

ಕಡಲು

ಕಡಲು ಅಂದರೆ
ನನಗೆ
ಬರಿ ಕಡಲಲ್ಲ!
ಅದೊಂದು
ನಿರಂತರ ನೆನಪುಗಳ ಕಡೆಗೋಲು.
ಒಮೊಮ್ಮೆ ವಿಷವೂ ಉಕ್ಕಬಹುದು,
ಅಮೃತವೂ!

ಬೆಳ್ಳಂಬೆಳಗಿನ ಕಡಲು!
ಈಗ ತಾನೇ ಎದ್ದು, ಮೊಲೆಕಟ್ಟಿ
ಹೊರಬಂದ ಮೀನುಗಾರಿ
ಸುಂದರಿ.
ಅನಂತ ಆಕಾಶ, ಅಲ್ಲಲ್ಲಿ ಮೋಡ
ತೆಪ್ಪಗೆ ಬಂದು ಅಲೆ ಸಾಯುತ್ತಾ
ದಡ.

ಬಿರುಬಿಸಿಲ ಕಡಲು!
ಹಾಯಿದೋಣಿಗಳಿಲ್ಲಿ ಚೆಲ್ಲಾಪಿಲ್ಲಿ
ಕಡಲು ಕುದಿಯುತ್ತ
ಮತ್ತೆ,
ಬಿಸಿಲ ಮಳೆಯಲ್ಲಿ ತೇಗುತ್ತ
ಮಧ್ಯಾನ್ನ ಮಿಥುನದ ಮೀನು ಸುಂದರಿ.

ಕಡುಗಪ್ಪು ಕಡಲು!
ಅಲೆಗಳ ಮೊರೆತ
ಚಂದ್ರ ತಾರೆಯರ ಮೈಮೇಲೆ ಚಾದರ ಹೊದ್ದು
ಗಂಡನ ಹೊಕ್ಕಿ ಬಸವಳಿದ
ಮೀನು ಸುಂದರಿ.

ನರೇಂದ್ರ ಶಿವನಗೆರೆ ವೃತ್ತಿಯಲ್ಲಿ ವಿಜ್ಞಾನದ ಶಿಕ್ಷಕರು.
ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ.
ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)