ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ, ಅಭಿವ್ಯಕ್ತಿಯ ಸಾಧ್ಯತೆಗಳ ಹುಡುಕಾಟದ ಫಲಶೃತಿಯ ಪ್ರತೀಕವಾಗಿ ಈ ಅಪ್ಪನ ಗಿಲಾಸು ಸಂಕಲನ ಒಡಮೂಡಿದೆ ಎನ್ನಬಹುದು.
ನಾಗರಾಜ್ ಪೂಜಾರ ಕವಿತಾ ಸಂಕಲನಕ್ಕೆ ಪ್ರಕಾಶ್ ಮಂಟೇದ ಬರೆದ ಮುನ್ನುಡಿ.

 

ಅಪ್ಪನ ಗಿಲಾಸು ನಾಗರಾಜ್ ಪೂಜಾರ ರವರ ಮೊದಲ ಕವನ ಸಂಕಲನ. ಈಗ ಅನೇಕರು ಬೇರೆ ಬೇರೆ ಸಮುದಾಯಗಳ ಸಾಮಾಜಿಕ ಹಿನ್ನಲೆಯಿಂದ ಕಾವ್ಯಲೋಕಕ್ಕೆ ಕಾಲಿಡುತ್ತಿದ್ದಾರೆ. ಕೇವಲ ತಮ್ಮ ಸಮುದಾಯದ ಇಂಗಿತಗಳನ್ನು, ನಿವೇದನೆಗೊಳಿಸುವ ಉಮೇದಿನಲ್ಲಿ ಕಾವ್ಯ ಬರೆವವರಂತೆ ಕಾಣದ ಪೂಜಾರರವರು, ತನ್ನ ಪಾಡು ಹಾಗೂ ಜೀವಂತವಾಗಿ ಬದುಕುವ ಇಂಗಿತಗಳು ಮತ್ತು ಕಾವ್ಯದ ಬಗೆಗಿನ ಆಸಕ್ತಿಯ ಓದಿನ ಪ್ರಭಾವ ಹಾಗೂ ಈ ಆಕರ್ಷಣೆಗಳು ನೀಡಿರುವ ಸಂವೇದನೆಯ ತೀವ್ರತೆಯಿಂದಾಗಿ ತಮ್ಮ ಕಾವ್ಯಯಾನವನ್ನು ಆರಂಭಿಸಿದ್ದಾರೆ. ಈ ಬೆಳವಣಿಗೆಯೇ ಹೇಳುತ್ತದೆ ಕವಿ ತಾನು ರೂಪುಗೊಳ್ಳುವ ಹಾದಿಯಲ್ಲಿದ್ದಾರೆಂಬುದನ್ನು. ಇಂತಹ ಸಕಾರಣಕ್ಕಾಗಿಯೇ ಇವರ ಕಾವ್ಯ, ಜೀವನದ ಹಲವು ಆಯಾಮಗಳ ಅರ್ಥವಂತಿಕೆಯ ಚಡಪಡಿಕೆಗಳ ಒಟ್ಟು ಮೊತ್ತವಾಗಿ ನಮ್ಮನ್ನು ಸೆಳೆಯುತ್ತದೆ.

ಕಾವ್ಯ ಪ್ರವೇಶಿಕೆಯ ನಂಟು, ಕೇವಲ ಸಮುದಾಯದ ವಕ್ತಾರಿಕೆಯ ಮುಖವಾಣಿಗೆ ಸೀಮಿತವಾಗದೆ, ಕಾವ್ಯವು ವ್ಯಕ್ತಿಗತವಾದ ಜರೂರು, ಮನೋಹಂಬಲಗಳ ತುಡಿತವನ್ನೂ ಸಹ ಒಳಗೊಂಡಿರಬೇಕು. ಇಂತಹ ಅಯಾಮಗಳಲ್ಲಿ ಕವಿತೆ ಬರೆಯುತ್ತಿರುವ ಪೂಜಾರರು ನಮ್ಮನ್ನು ಆಕರ್ಷಿಸುತ್ತಲೇ, ಅವರ ಕಾವ್ಯ ಹೊಸ ಕಾವ್ಯಾಸಕ್ತಿಯ ಕಾಳಜಿಗಳನ್ನು ಪೋಷಿಸುತ್ತಿದೆನ್ನಬಹುದು.

ಅಪ್ಪನ ಗಿಲಾಸು ಎಂಬುದು ಕವಿಗೆ ಹೊಸಲೋಕವೂ, ನೆನಪು ಹಾಗೂ ಜೀವನದಿಯ ರೂಪಕವೂ ಆಗಿರುತ್ತದೆ. ಗಿಲಾಸು ಎಂಬ ಪದವು ಕೇವಲ ರೂಢಿಗತವಾದ ಅಪಭ್ರಂಶಾತ್ಮಕ ಹಳಸು ಪದ ಪಧಾರ್ಥವೆಂಬ ನಿರ್ಲಕ್ಷ್ಯ ಸಲ್ಲದು. ಈ ಗಿಲಾಸು ಜೀವನದ ಪುನರ್ ಸೃಷ್ಟಿಯ ಹೊಸ ನೆಲೆಯಾಗಿದ್ದು, ಇದು ತತ್ವವೂ, ಲೋಕದೃಷ್ಟಿಯೂ ಹಾಗೂ ಕವಿಗೆ ಬೇಕಾದ ಸ್ಮೃತಿಪರಂಪರೆಯ ಸಾಂಸ್ಕೃತಿಕ ತಾವು ಸಹ ಆಗಿರುತ್ತದೆ. ಈ ಗ್ಲಾಸ್ ಎಂಬ ತತ್ಸಮವೂ ತದ್ಭವಗೊಳ್ಳುವ ರೂಪಾಂತರಗಳ ಹಿಂದೆ ಈ ದೇಶದ ಹಿತ್ತಲ ನೈಜ ಜೀವನಸೆಲೆಗಳಿವೆ. ಯಾವುದನ್ನು ವರ್ನಾಕುಲರ್ ಎಂದು ದುಂಡೀಕರಿಸುತ್ತೇವೆಯೋ ಇಂಥ ಸರಳೀಕೃತ ಶಿಷ್ಠ ಪರಿಶಿಷ್ಠದ ರೂಢಿಗತ ಅಲೋಚನೆಗಳು ಈ ಗಿಲಾಸು ಎಂಬುದರ ಸೃಜನಶೀಲತೆಯ ಸ್ವಾಯತ್ತತೆಯನ್ನು ನಿರಾಕರಿಸುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗಿಲಾಸು ಎಂಬುದು ಕವಿಯ ಮಾತಲ್ಲಿ ಹೇಳುವುದಾದರೆ, ಮುಟ್ಟಿನಿತಿಹಾಸದ ಗುರುತಾಗಿದ್ದು, ಈ ದೇಶದ ಸಾಮಾಜಿಕ ಚರಿತ್ರೆಯ ಸ್ಪೃಶ್ಯ ಮತ್ತು ಅಸ್ಪೃಶ್ಯತೆಯ ಇತಿಹಾಸದ ಕಥನಲೋಕವೇ ಆಗಿದೆ.

ಇತಿಹಾಸ ಅಲ್ಲಗಳೆದ ಜನಮಾನಸದ ಸ್ಮೃತಿಲೋಕದ ಪ್ರತೀಕವಾಗಿ ಈ ‘ಅಪ್ಪನ ಗಿಲಾಸು’ ಕಾಣುತ್ತದೆ. ಬದುಕಿನೊಡಲಿಂದ ಎದ್ದ ಸಾಂಸ್ಕೃತಿಕ ಪ್ರತಿರೋಧದ ಪ್ರತಿಮಾಲೋಕವೂ ಸಹ ಆಗಿರುತ್ತದೆ. ಜನ ಸಾಮಾನ್ಯರ ನಡುವಿನಿಂದಲೇ ಪ್ರಕಟಗೊಳ್ಳಬೇಕಾದ ಸೃಜನಶೀಲತೆಯ ಆಯಾಮಗಳು ಮಾತ್ರವೇ ನಮಗೆ ತಣ್ಣಗಿನ ಜೀವನಾನ್ವೇಷಣೆಯ ಹಾದಿಗಳ ರೂಟನ್ನು ತೋರಬಲ್ಲವು. ಈ ಕಾರಣದಿಂದಲೇ ಗಿಲಾಸು ಎಂಬುದು ಇತಿಹಾಸದ ಗುರುತಾಗಿಯೂ ಕವಿಗೆ ಕಾಡುತ್ತಲೇ ಇರುತ್ತದೆ.

ಜೀವನದ ಸೃಜನಶೀಲತೆಗಾಗಿ ಹಂಬಲಿಸುವ ಕವಿಗಳು ತಮ್ಮ ಬದುಕಿನ ನಾನಾ ಸೂಕ್ಷ್ಮತೆ ಹಾಗೂ ಅರಿವು ಹಾಗೂ ಮರೆವುಗಳ ಭಾಗದ ಮೊತ್ತವಾಗಿ ಕವಿತೆಯನ್ನು ಹೆಣೆಯುತ್ತಾರೆ. ಹಾಗೆಯೇ ಮಾನವತನಕ್ಕೆ ಧಕ್ಕೆಯಾಗದಂತೆ ಜೀವಿಸಲು ಹಾತೊರೆವ ಹಂಬಲಗಳು ಮತ್ತು ತಮ್ಮ ಸುತ್ತಣವನ್ನು ಕಲ್ಪಿಸಿಕೊಳ್ಳುವ ಆದರ್ಶಗಳ ಲೋಕ ವಿಸ್ತರಣೆಯಾಗಿಯೇ ಕವಿತೆ ಕವಿಗಳಿಗೆ ಹೊಸ ಏಕಾಂತದ ತಾವು ಹಾಗೂ ಜೀವನದ ಹೊಸ ಅಯಾಮವು ಸಹ ಆಗಿರುತ್ತದೆ. ಇಂತಹ ಆಕಾಂಕ್ಷೆಗಳ ಜೀವಿಯಾದ ಕವಿಗೆ ಕವಿತೆಯು ಶೋಧನೆ ಹಾಗೂ ಹೊಸದರ ಕ್ರಿಯಾಶೀಲ ಗೀಳಾಗಿ ಜೀವಂತಿಕೆಯಂತೆ ಕಾಣಿಸುತ್ತದೆ. ಎಲ್ಲರ ಬಳಿಗೆ ಹೋಗುವ ಗೀತೆಯಾಗಿ ಈ ಕವಿತೆ ಅಲೆಮಾರಿ ಆತ್ಮವೆಂಬ ರೂಪಾಂತರಗಳ ಅರ್ಥ ಧರಿಸುತ್ತದೆ. ಹೀಗೆ ಸಾಧಾರಣೀಕರಣಗೊಳ್ಳುವ ಅರ್ಥವು, ಇಡೀ ಮಾನವ ಜನಾಂಗಕ್ಕೆ ಬೇಕಾದ “ಕತ್ತಲು ಹಗಲೆನ್ನದೆ ದೀಪ ಉರಿಯಲಿ” ಎಂಬ ಆಶಯಗಳ ಅಸ್ಮಿತೆಯ ಛಾಪನ್ನು ಮೂಡಿಸುತ್ತದೆ.

ಇಲ್ಲಿನ ಬಹುಪಾಲು ಕವಿತೆಗಳು ಕವಿಯ ಮನೋಧರ್ಮದ ಆಚೆಗೂ ಜಿಗಿದು ಮನುಷ್ಯ ಜೀವನದ ಆಂತರ್ಯಗಳ ಕಥನವಾಗಿ ಬದಲಾಗುತ್ತವೆ. ಭಾಷೆ ಕ್ಲಿಷ್ಟಗೊಂಡರೂ ಅರ್ಥದ ಶೋಧನೆಯಲ್ಲಿ ನಿಯತ್ತಿನ ಕಾಣ್ಕೆಗಳಿವೆ. ಕವಿಯ ಅನುಭವದ ಅಸಲಿ ಆಯಾಮಗಳ ಸಾಂಧ್ರತೆ ಕವಿತೆಯಲ್ಲಿ ಹರಳುಗಟ್ಟಿದೆ ಎನ್ನಬಹುದು. ಸ್ಥೂಲಾರ್ಥದ ಬೆನ್ನತ್ತದ ಕವಿಯು ಸೂಕ್ಷ್ಮ ಮತ್ತು ಗಾಢವಾದ ಅಮೂರ್ತತೆಯ ಜಾಡು ಹಿಡಿದರೂ, ಈ ಕವಿತೆಗಳು ಅರ್ಥ ನಿಶ್ಚಿತತೆಗೆ ಗಂಟುಬೀಳದೆ ಹೊಸದಾಗಿ ಏನನ್ನೋ ಧ್ವನಿಸುತ್ತವೆ. ಹಾಗೂ ಜೀವನದ ಅನೂಹ್ಯ ಸಂಗತಿಗಳ ಪರಸ್ಪರ ಘರ್ಷಣೆ ಹಾಗೂ ವೈರುದ್ಧ್ಯಗಳ ಒಟ್ಟುಮೊತ್ತವಾಗಿ ಈ ಸಂಕಲನದ ಕವಿತೆಗಳು ಹೊಸ ಹ್ಯೂಮನ್ ಕಂಟೆಂಟನ್ನು ಧ್ವನಿಸುತ್ತವೆ.

“ಘೋಷಿಸುತ್ತವೆ ಯುದ್ಧ ವಿರಾಮವನ್ನು
ಎಡಬಿಡಂಗಿ ಎರಡಾತ್ಮಗಳು
ನೇರ ಲಗ್ಗೆಯಿಟ್ಟ ನರಗಳ ಒಳಗಿನ ದೇಹಕೊಳುವೆ
ಹೊರಚೆಲ್ಲುತ್ತದೆ ವಿರಸ ಸರಸಗಳ ಪ್ರವಾಹದಂತೆ”.

(ನಾಗರಾಜ್ ಪೂಜಾರ)

ಈ ಕವಿತೆಯಲ್ಲಿ ಅಪ್ಪನ ರೂಪಕವೇ ನಿರಾಯುಧವಾಗಿ ಮನುಷ್ಯ ತನ್ನನ್ನು ತಾನೇ ಗೆಲ್ಲುವ ಆತ್ಮಸಂಯಮದ ಫಿಲಾಸಫಿಯಾಗಿ ಪ್ರಕಟವಾಗುತ್ತದೆ. ಅಲ್ಲಲ್ಲಿ ಸುಳಿವ ಅನುಭಾವದ ಭಾಷೆ ಹಾಗೂ ಹೋಲಿಕೆಗಳು ಕವಿ ತಾನು ಯಾವ ಪರಂಪರೆಯ ವಾರಸುದಾರನಾಗಬೇಕೆಂಬ ರಾಜಕೀಯ ಎಚ್ಚರವೂ ಸಹ ಈ ಕಾಲದ ಕ್ರೌರ್ಯದ ದಿಗಿಲನು ದಾಟಲು ಕವಿತೆ ಹೊಸ ಒಡಪಾಗುತ್ತದೆ. ತನ್ನ ಸೀಳಿಕೊಳ್ಳುವ ದ್ವಂದ್ವವತೆ ಹಾಗೂ ಸೂಕ್ಷ್ಮವಾಗುತ್ತಲೇ ತನ್ನ ಇರುವಿಕೆಗೆ, ರೆಕ್ಕೆ ಕಟ್ಟಿಕೊಳ್ಳುವಿಕೆಗೆ ಶಕ್ತಿ ಕೇಂದ್ರವಾಗುವ ಅಪ್ಪನ ಗಿಲಾಸು ಒಟ್ಟು ಭಗ್ನವಾಗುತ್ತಿರುವ ಮನುಷ್ಯರ ಅನ್ ಆರ್ಗ್ಯಾನಿಕ್ ತನಕ್ಕೆ ಹೊಸ ಬೆಸುಗೆಯ ಇಂಗಿತಗಳನ್ನು ಧ್ಯಾನಿಸುವ ಧಾವಂತತೆಯನ್ನು ತಣ್ಣಗೆ ಆಸ್ಪೋಟಿಸಿಕೊಳ್ಳುತ್ತಲೇ ಸೃಜನಶೀಲತೆಯನ್ನು ಹರಸುವ ವರ್ತಮಾನದ ತಾಜಾ ಇಂಗಿತಗಳನ್ನು ಪ್ರಕಟಿಸುತ್ತದೆ.

ಮಾಸಿ ಹೋಗಲು ಹಿಂಜರಿವ ಮನುಷ್ಯರ ಕರ್ಷಣಗಳ ತಿಕ್ಕಾಟದ ವಿಷಾದ, ಆಕ್ರೋಶ, ಮಾತಿಗೂ ನಿಲುಕದ ಮನುಷ್ಯರ ನೋವಿನ ಮೌನದ ನಿಟ್ಟುಸಿರು ‘ಅಪ್ಪನ ಗಿಲಾಸು’ ಸಂಕಲನದೊಳಗೆ ಹೆಪ್ಪುಗಟ್ಟಿದೆ. ಸದಾ ಕಾಡುವ ಅಪ್ಪ, ದೈನಂದಿನ ಬದುಕಿನ ಹಲ ಲಕೋಟೆಗಳ ಭಾವ ಅನುಭಾವಗಳ ಸಂಲಗ್ನತೆ, ಕವಿಯ ಖಾಸಗೀತನದ ಮುಕ್ತ ಹಂಬಲಗಳು, ಪ್ರೇಮ, ಕಾಮ ಹಾಗೂ ರಾಜಕೀಯ ದ್ವೇಷದಾಚೆಗೂ ಮನುಷ್ಯರಾಗಿ ಉಳಿಯಬೇಕನ್ನುವ ತೀವ್ರ ಸೆಳವುಗಳ ಕಾರಣಕ್ಕೆ ಈ ಸಂಕಲನ ವಿಶೇಷವಾಗುತ್ತದೆ.

ಪ್ರೇಮ, ಕಾಮದ ವೈಯಕ್ತಿಕ ತುಮುಲಗಳನ್ನು ಬಚ್ಚಿಡುತ್ತಲೇ ಸಾಮಾಜಿಕ ಬದ್ಧತೆಗಾಗಿ ಕವಿತೆ ಬರೆಯುತ್ತೇವೆಂಬುದು ಶುದ್ಧ ಕಾಡು ಹರಟೆಯೇ. ಜೀವನಸಾಂಗತ್ಯದ ಒಡನಾಟವಿರದೆ ಲೋಕವನ್ನು ಪ್ರವಾಸಿಗನ ಎಚ್ಚರದಲ್ಲಿ ನೋಡುವ ನಮ್ಮ ರಾಜಕೀಯ ಚಾಳಿಗಳು ಕವಿತೆಯನ್ನು ಕಟ್ಟಲಾರವು. ಹಾಗೇ ನೋಡಿದರೆ ಹೊಸ ಕಾಲದ ಸಾಮಾಜಿಕ ಬಂಡುಕೋರತನ ಹಾಗೂ ಆಕ್ರೋಶದ ನುಡಿಗಟ್ಟುಗಳನ್ನು ತನ್ನದೇ ಜೀವಂತ ಅನುಭವದ ನೆಲೆಯಲ್ಲಿ ಸಂಘಟಿಸಿಕೊಳ್ಳದ ತಲೆಮಾರು ಜೀವನಸೌಂದರ್ಯಕ್ಕೆ ಬೇಕಾದ ಸೃಜನಶೀಲತೆಯನ್ನು ಕಂಡುಕೊಳ್ಳಲಾರದು. ಈಗ ಬರೆಯುತ್ತಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಪ್ರಜ್ಞಾಪೂರ್ವಕವಾದ ಅರ್ಥನಿರ್ಮಾಣವು ಕೃತಕ ನೈತಿಕ ಎಚ್ಚರದ ನಂಟಿನ ಅಲ್ಪಕಾಲೀನ ಶಬ್ಧಬಿಂಬಗಳನ್ನು ತರಬಲ್ಲದೇ ಹೊರತು ಬದುಕಿನ ಸೂಕ್ಷ್ಮತೆ ಹಾಗೂ ಎಚ್ಚರಗಳನ್ನು ದ್ವನಿಸಲಾರದು. ಈ ವಿಚಾರದಲ್ಲಿ ನಾಗರಾಜ್ ಪೂಜಾರರಿಗೆ ಇರುವ ಸೂಕ್ಷ್ಮತೆ ಮತ್ತು ಎಚ್ಚರ ಕಂಡು ಖುಷಿಯಾಗುತ್ತದೆ.

“ಛೇ ಛೆ !
ಮನುಷ್ಯನನ್ನಾಗಿಸುವ ಅನಿವಾರ್ಯಕೋ
ಹೃದಯದ ಮೌನ ಕೇಳಿಸುವ ಹುಂಬತನಕೋ
ಕೇಳಿಸಿಕೋ ತುಸು ಹೆಚ್ಚೆ ಇಲ್ಲಿ”

ಹೀಗೆ ಕವಿಗೆ ನಿರ್ಧಾರಗಳ ಭಾರವಿಲ್ಲ. ಆಸ್ಫೋಟದ ಧಾವಂತವೂ ಇಲ್ಲದೆ ತಣ್ಣಗೆ ತನ್ನ ಹಿನ್ನಡೆ ಹಾಗೂ ಮುನ್ನಡೆಗಳನ್ನು ಪ್ರಕಟಿಸುವ ಗುಣದಿಂದಲೇನೋ ಇಲ್ಲಿನ ಕವಿತೆಗಳು ಕವಿಯ ಗೊಂದಲಗಳ ನಡುವೆಯೂ ಹೊಸದಾಗಿ ಏನನ್ನೋ ಅಮೂರ್ತವಾಗಿ ಸೂಚಿಸುತ್ತವೆ. ಈ ನಿವೇದನೆಗಳ ಭಾರ ಕಳಚುತ್ತಲೇ ಹಗುರಾಗಿ ಹೇಳುವ ಅನುದ್ವಿಗ್ನತೆಯ ಕವಿ ಮಾತ್ರವೇ ಎಲ್ಲ ಜನಗಳ ಬಳಿಗೆ ಸಾಗುವ ಗೀತೆಯನ್ನು ನುಡಿಸಬಲ್ಲರೇನೊ. ಇಂತಹ ಭರವಸೆಗಳ ಜೊತೆಗೆ ನಾವು ನಮ್ಮ ಸಂಬಂಧಗಳು, ಅವುಗಳ ಸಾಮಾಜಿಕ ಚೌಕಟ್ಟುಗಳು ಇವೆಲ್ಲವನ್ನು ಒಂದು ಸದೂರಲ್ಲಿ ನೋಡಬಲ್ಲವೇನೋ. ಬಹುಶಃ ಇಂತಹ ಸಾಧ್ಯತೆಗಳನ್ನು ಆಗುಮಾಡಿಸುವ ಕವಿಗಳು ಮಾತ್ರವೆ ಮನುಷ್ಯ ಜನಾಂಗದ ಸಂಕಷ್ಟಗಳ ಕತೆ ಹೇಳಬಲ್ಲರೇನೋ.

ಕಾವ್ಯಸೌಂದರ್ಯ ಎಂಬುದರ ಏಕರೂಪಿ ನಿರೂಪಣೆಯ ವಿಮರ್ಶೆಯ ಕ್ರಮ ವಿನ್ಯಾಸಗಳು ಕಾವ್ಯ ಎಂಬುದರ ಅಸಂಖ್ಯಾತ ಧ್ವನಿ ಸಂಕೇತಗಳನ್ನು ಬಚ್ಚಿಡುವ ರಾಜಕಾರಣವನ್ನು ನಿರ್ವಹಿಸುತ್ತವೆ. ಕನ್ನಡ ಕಾವ್ಯದ ನವ್ಯೋತ್ತರವೆಂಬ ವಿಮರ್ಶಾ ಮತ್ತು ಸಾಹಿತ್ಯಕ ದೃಷ್ಟಿಕೋನವೇ ಇಂತಹ ಅಪಾಯಕಾರಿ ವಿನ್ಯಾಸದಿಂದಾಗಿದೆ. ಮೇಲಾಗಿ ಈಗ ಕನ್ನಡ ಕಾವ್ಯ ಸಂಕೀರ್ಣವಾದ ಭಿನ್ನ ದ್ವನಿ ಸಾಮರ್ಥ್ಯದ ಸಮುಚ್ಛಯಗಳ ಪ್ರತಿಮಾಲೋಕವಾಗಿ ರೂಪುಗೊಳ್ಳುತ್ತಿದ್ದು, ಅಪ್ಪನ ಗಿಲಾಸು ಕಾವ್ಯವನ್ನು ನಾವು ಹೀಗೆ ಪರಿಭಾವಿಸುವ ಜರೂರಿದೆ.

ಜೀವನದ ಸೃಜನಶೀಲತೆಗಾಗಿ ಹಂಬಲಿಸುವ ಕವಿಗಳು ತಮ್ಮ ಬದುಕಿನ ನಾನಾ ಸೂಕ್ಷ್ಮತೆ ಹಾಗೂ ಅರಿವು ಹಾಗೂ ಮರೆವುಗಳ ಭಾಗದ ಮೊತ್ತವಾಗಿ ಕವಿತೆಯನ್ನು ಹೆಣೆಯುತ್ತಾರೆ. ಹಾಗೆಯೇ ಮಾನವತನಕ್ಕೆ ಧಕ್ಕೆಯಾಗದಂತೆ ಜೀವಿಸಲು ಹಾತೊರೆವ ಹಂಬಲಗಳು ಮತ್ತು ತಮ್ಮ ಸುತ್ತಣವನ್ನು ಕಲ್ಪಿಸಿಕೊಳ್ಳುವ ಆದರ್ಶಗಳ ಲೋಕ ವಿಸ್ತರಣೆಯಾಗಿಯೇ ಕವಿತೆ ಕವಿಗಳಿಗೆ ಹೊಸ ಏಕಾಂತದ ತಾವು ಹಾಗೂ ಜೀವನದ ಹೊಸ ಅಯಾಮವು ಸಹ ಆಗಿರುತ್ತದೆ.

ಕವಿ ತನ್ನ ಆತ್ಮಜಿಜ್ಞಾಸೆಯ ಸಾಧ್ಯತೆಗಳ ಜೊತೆಗೆ ವಿಶಿಷ್ಠವಾಗಿ ಜೀವಿಸುವ ಹಂಬಲಗಳ ಜೊತೆ ತನ್ನ ಸುತ್ತಣವನ್ನು ಪುನರ್ಸೃಜಿಸಿಕೊಳ್ಳಲು ಹಾತೊರೆವ ಕ್ರಮದಲ್ಲಿಯೇ ಹೊಸ ಲೌಕಿಕತೆಯ ವಾಸನಾಭಿತ್ತಿಗಳಿರುತ್ತವೆ. ಇಂತಹ ವಾಸನೆಗಳು ಕೇವಲ ವ್ಯಕ್ತಿ ವಿಶಿಷ್ಠತೆಯ ವರಾತಗಳು ಮಾತ್ರವಾಗಿರದೆ ತನ್ನದೆ ಸಮುದಾಯಿಕ ಸೃಜನಶೀಲತೆಯ ಕಥನಾತ್ಮಕ ಚರಿತ್ರೆಯ ಮಂಡನೆಯೂ ಆಗಿ ಕವಿತೆಗಳು ಕಂಡುಬರುತ್ತವೆ. ಬದುಕಿನ ಸೃಜನತೆಯು ತನ್ನ ಕಾಲವನ್ನು ತೀವ್ರವಾಗಿ ಜೀವಿಸುವ ನಂಬಿಕೆ ಹಾಗೂ ವಿಶ್ವಾಸಗಳ ಶೋಧನೆಯೇ ಆಗಿರುತ್ತದೆ. ಜೊತೆಗೆ ಕವಿಯ ಕವಿತೆ ಕೂಡ ಹೊಸ ಕಾಲಮಾನದ ಜೀವಂತಿಕೆಗಳನ್ನು ಹರಸುವ ಸಾಹಸಶೀಲತೆಯ ಪ್ರವೃತ್ತಿಗಳಿಗಾಗಿ ಅಲೆದಾಡುವುದೇ ಆಗಿರುತ್ತದೆ. ಈ ಮೂಲಕ ಕವಿಗೆ ಕವಿತೆ ಹೊಸ ಹುಟ್ಟಿನ ಅವಕಾಶ ನಿರ್ಮಾಣ ಮಾಡುತ್ತದೆ.
ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ, ಅಭಿವ್ಯಕ್ತಿಯ ಸಾಧ್ಯತೆಗಳ ಹುಡುಕಾಟದ ಫಲಶೃತಿಯ ಪ್ರತೀಕವಾಗಿ ಈ ಅಪ್ಪನ ಗಿಲಾಸು ಸಂಕಲನ ಒಡಮೂಡಿದೆ ಎನ್ನಬಹುದು. ಜೀವನದ ಯುಕ್ತಾಯುಕ್ತತೆಗಳೇ ಸಂಚಾರಿ ಭಾವಗಳನ್ನು ಅವಲಂಭಿಸಿವೆ. ಇಂತಹ ಸಂಚಾರದ ಒಡನಾಟವೇ ಭಾವ ಅನುಭಾವದ ಪ್ರತಿಮೆಗಳಾಗಿ ಜೀವನದ ಅನಂತ ಸಾಧ್ಯತೆಗಳ ಪುನರ್ ಸೃಷ್ಟಿಗೆ ಕಾರಣವಾಗುತ್ತದೆ. ಕುವೆಂಪು ಹೇಳಿದಂತೆ, ಕಡಲಿನಾಳಕೂ ಹಿರಿದು ಮನಸಿನಾಳ. ಇದರ ತಳಬುಡದ ತಳ ಅತಳಗಳ ಶೋಧನಾ ಪ್ರವೃತ್ತಿಗಳೇ ಕವಿತೆ ಹಾಗೂ ಕಲೆಯ ಸ್ವರೂಪ ಪಡೆಯುತ್ತವೆ. ಕವಿತೆ ತಿರುಗುವ, ತಿರುಗುತ್ತಲೇ ಇರಬೇಕಾದ ಜಂಗಮಶೀಲತೆಯೇ ಆಗಿರುತ್ತದೆ. ಇಂತಹ ತಿರುಗುವಿಕೆಗಳು ಬೇಂದ್ರೆ ಹೇಳುವಂತೆ, ತಿರುಗಿ ತಿರುಗಿ ಮತ್ತೆ ಹೊಸದಾಗುವ ನಾವೀನ್ಯತೆಯ ಹಂಬಲ ಹಾಗೂ ತೀವ್ರವಾಸನೆಗಳೇ ಕವಿತ್ವಕ್ಕೆ ಹುಟ್ಟಿನ ಅವಕಾಶ ನೀಡುತ್ತವೆ. ಅಪ್ಪನ ಗಿಲಾಸು ಇಂತಹ ಹಂಬಲ ಮತ್ತು ತೀವ್ರತೆಗಳ ಶೋಧನೆಯೇ ಆಗಿದೆ.
ಮನುಷ್ಯರು ಪುಟಿದೇಳುವ ತಮ್ಮ ಚೈತನ್ಯಶೀಲತೆಯಿಂದಲೇ ಸೃಜನಾತ್ಮಕ ಅಸ್ಮಿತೆ ಚರಿತ್ರೆಯನ್ನು ನಿರ್ಮಿಸಿದ್ದಾರೆ. ಕವಿತೆ ಇಂತಹ ಮನುಷ್ಯರ ಪ್ರಾಗ್ರೂಪತ್ವದ ಆದಿಮ ನೆಲೆಗಳ ಅನುಸಂಧಾನದ ಯಾನವೇ ಆಗಿರುತ್ತದೆ. ಅದಮ್ಯ ವಿಶ್ವಾಸದ ಹಸಿವು ಹಾಗೂ ತಾನೇ ನಿರ್ಮಿಸಿಕೊಂಡ ಅದೃಶ್ಯ ಗೋಡೆಗಳ ಆಚೆಗೆ ಸಾಗುವ ಈ ಉಲ್ಲಂಘನೆಯ ಸಾಧ್ಯತೆಗಳಿಂದಾಗಿಯೇ ಒಂದು ಅಖಂಡ ವಿಸ್ತ್ಋತ ದಿಟ್ಟಿಯ ಬೆನ್ನುತ್ತವುದೇ ಹೊಸ ಸಂಚಲನೆ ಹಾಗೂ ಜೀವನ್ಮುಖಿಯಾಗುವ ಕೌತುಕ ಹಾಗೂ ಮುಗ್ಧತೆಯನ್ನು ನಮ್ಮೊಳಗೆ ಅನಂತವಾಗಿರಿಸಬಲ್ಲದು. ಇಂತಹ ನಿರೀಕ್ಷೆಗಳ ಭಾರದ ಕವಿ ಮನವು ತನ್ನ ಪಾಡುಗಳನ್ನು ಮನುಜಗತವಾಗಿ ಕಾವ್ಯದ ರೂಪದಲ್ಲಿ ವ್ಯಕ್ತವಾಗಬಲ್ಲದು.

“ತಲೆ ಎತ್ತಿ ಶಾಂತವಾಗಿ ನಿರ್ಭಯದಿ
ಆಡುವ ಕಡಲ ತಡಿಯ ಮಕ್ಕಳ
ತೆಕ್ಕೆಗವಚಿ ಕಬಳಿಸುವ ಮುನ್ನ
ಓ ಅಲೆಯೇ! ನೋಡು ಮೇಲೊಂದು ಸಲ
ಗುಯ್ ಗುಡುತ್ತಿದೆ ಅಸ್ತಿತ್ವದ ಹಾಡು”.

ನಾಗರಾಜ್ ಬಹಳ ಪ್ರಬುದ್ಧ ಕವಿಯಂತೆಯೇ ಬದುಕಿನ ಗೂಢಾರ್ಥಗಳನ್ನು ಕಾವ್ಯಾತ್ಮಕಗೊಳಿಸುವ ಕೌಶಲ್ಯವನ್ನು ಹೊಂದಿದ್ದಾರೆಂಬ ಮಾತುಗಳನ್ನು ಮೇಲಿನ ರೂಪಕವೇ ಹೇಳುತ್ತದೆ. ಕವಿತೆ ಮನುಕುಲದ ಗೀತೆ ಎಂಬ ಕನ್ನಡ ಕಾವ್ಯ ಪರಂಪರೆಯ ಪುನರಾವರ್ತನೆಯಾಗಬೇಕಾದ ಹಲವು ದನಿ ಸಾಂಧ್ರತೆಗಳನ್ನು ಇವರ ಕವನ ಸಂಕಲನ ಒಳಗೊಂಡಿದೆ.

ಈ ಕವಿತೆಗಳ ಒಟ್ಟು ಸ್ಥಾಯೀಯೇ ಬಾಳುವೆ ಇಂಗಿತಗಳತ್ತ ಹೊರಳುವುದೇ ಆಗಿದೆ. ಕವಿತೆ ಆಂತರ್ಯವು ವ್ಯಕ್ತಿಯ ಮನೋಪಾತಾಳಿಯಿಂದ ಹೊಮ್ಮಿದ್ದರೂ, ಈ ಆಂತರ್ಯವು ಲಂಕೇಶರು ಹೇಳಿದಂತೆ, ಒಟ್ಟು ಜನಾಂಗದ್ದಾಗಿ ಬದಲಾಗುತ್ತದೆ. ಮನುಷ್ಯ ಜೀವಿತಕಾಲದ ಸಂಘರ್ಷ, ಏದುಸಿರು ಹಾಗೂ ಸಮನ್ವಯದ ಧಾವಂತತೆ, ಮನುಷ್ಯಜೀವನದ ವ್ಯಾಮೋಹ, ಹಪಹಪಿಕೆಗಳು, ಪ್ರೇಮ ಕಾಮದ ಉನ್ಮಾದದ, ಈರ್ಷೆ ಹಾಗೂ ನೈತಿಕ ಅಧಃಪತನ ಹಾಗೂ ನೈತಿಕಪ್ರಜ್ಞೆಯತ್ತ ದಿಟ್ಟತೆ ಹೀಗೆ ಎಲ್ಲವೂ ಕಾವ್ಯದ ಕ್ಯಾನ್ವಾಸ್ ಮೇಲೆ ಬಿಂಬಿತವಾಗಬೇಕು. ಇಂತಹ ಬಿಂಬಗಳು ಶಬ್ಧದ ಅಂತಃಸತ್ವವಾದ ಅರ್ಥದ ದಿಕ್ತಟಗಳನ್ನು ಬಹುವಾಗಿ ವಿಸ್ತರಿಸುವ ಮಹಾಹಂಬಲಗಳ ಒಟ್ಟು ಮೊತ್ತವು ಕವಿತೆಯಾಗಿ ಹೊರ ಹೊಮ್ಮಬೇಕು.

“ಅನತಿ ದೂರದ ಮೇಲಕೆ
ನಕ್ಷತ್ರ, ಹೊಳಪು, ಸೂರ್ಯ
ಪಾತಾಳ ತಳದ ಕೆಳಗೆ
ವಜ್ರ ವಯ್ಯಾರ, ವೈಡೂರ್ಯ…ಹೀಗೆ
ಎಲ್ಲದರ ಗರ್ಭಕಿರಣಗಳ..”

ಆಚೆಗೆ ನೋಡುತ್ತಲೇ ಖಾಲಿಯಾಗಿ ನಡೆವ ಜೀವನ ಯಾನದ ಪ್ರತಿಮೆಗಳ ಹಾಗೆ ಕವಿತೆ ಕಾವ್ಯ ನಮಗೆ ಅಲ್ಲಲ್ಲಿ ಭಾಸವಾಗುತ್ತದೆ. ಬಹುಶಃ ಸದ್ದಿಲ್ಲದೆ ಪ್ರವಾದಿಯೋಪಾದಿಯ ಹಾಗೆ ಮಾತಾಡುವ ಇವರ ಕವಿತೆಗಳು ತಣ್ಣಗೆ ಮನತಾಕುತ್ತವೆ. ಕಾವ್ಯ ಶಬ್ಧಾಡಂಬರದ ಕಿಕ್ಕಿರುವಿಕೆ ಹಾಗೂ ರಾಜಕೀಯ ಕ್ಲೀಶೆಗಳಿಗೆ ಸಿಲುಕುವ ಅಪಾಯಗಳಿಂದ ಮುಕ್ತವಾಗಬೇಕು. ಈ ವಿಚಾರದಲ್ಲಿ ನಾಗರಾಜ್ ಕಾವ್ಯಕ್ಕಿರಬೇಕಾದ ಸೂಕ್ಷ್ಮತೆ ಹಾಗೂ ಗ್ರಹಿಕೆಗಳ ಬಗ್ಗೆ ಬಹಳ ಎಚ್ಚರದಲ್ಲಿದ್ದೇನೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆನ್ನಬಹುದು.

“ನಾನಿಲ್ಲಿ ಹೊಳಪಿನ ಕಿರಣಗಳ ಜೊತೆ
ನಿನ್ನ ಹೊಂದಾಣಿಸುವ ಮಾತಿಗಿಳಿದಿಲ್ಲ
ಮರು ಮಾತು ನಿನ್ನದೇ ಎನ್ನುವ ಒಳಹರಿವು ಅಷ್ಟೆ!”

(ಪ್ರಕಾಶ್ ಮಂಟೇದ)

ಅಸಲಿಯಾಗಿ ಇದು ಪ್ರೇಮ ನಿವೇದನೆಯೇ ಆದರೂ ಪರೋಕ್ಷವಾಗಿ ಇದು ಬೇರೆಯದೆ ಅರ್ಥದ ಹೊಳಹನ್ನು ತೋರುತ್ತಿದೆ. ಸಾಮಾಜಿಕ ಕ್ರೌರ್ಯಗಳ ಹೊಸ ಕಾಲದ ಕಾವ್ಯ ಪ್ರತಿರೋಧ ಪ್ರತಿಮೆಗಳನ್ನು ಸೃಷ್ಟಿಸುವ ಪ್ರಯತ್ನವನ್ನು ನಿರ್ವಹಿಸುವ ಪ್ರಾಮಾಣಿಕತೆ ತೋರಿರುವುದು ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ. ತನ್ನ ಕಾಲವನ್ನು ಪ್ರಾಮಾಣಿಕವಾಗಿ ಜೀವಿಸಿ, ಮುಖಾಮುಖಿಯಾಗುವ ಎದೆಗಾರಿಕೆಯೂ ಸಹ ಸಾಂಸ್ಕೃತಿಕ ಕವಿ ತಾನು ಒಳಗೊಳ್ಳಬೇಕಾದ ಸಾಮಾಜಿಕ ಕಾಳಜಿ ಹಾಗು ಬದ್ಧತೆಗಳ ಉತ್ತರದಾಯಿತ್ವವೇ ಆಗಿರುತ್ತದೆ.

ಕವಿತೆ ಆಂತರ್ಯವು ವ್ಯಕ್ತಿಯ ಮನೋಪಾತಾಳಿಯಿಂದ ಹೊಮ್ಮಿದ್ದರೂ, ಈ ಆಂತರ್ಯವು ಲಂಕೇಶರು ಹೇಳಿದಂತೆ, ಒಟ್ಟು ಜನಾಂಗದ್ದಾಗಿ ಬದಲಾಗುತ್ತದೆ. ಮನುಷ್ಯ ಜೀವಿತಕಾಲದ ಸಂಘರ್ಷ, ಏದುಸಿರು ಹಾಗೂ ಸಮನ್ವಯದ ಧಾವಂತತೆ, ಮನುಷ್ಯಜೀವನದ ವ್ಯಾಮೋಹ, ಹಪಹಪಿಕೆಗಳು, ಪ್ರೇಮ ಕಾಮದ ಉನ್ಮಾದದ, ಈರ್ಷೆ ಹಾಗೂ ನೈತಿಕ ಅಧಃಪತನ ಹಾಗೂ ನೈತಿಕಪ್ರಜ್ಞೆಯತ್ತ ದಿಟ್ಟತೆ ಹೀಗೆ ಎಲ್ಲವೂ ಕಾವ್ಯದ ಕ್ಯಾನ್ವಾಸ್ ಮೇಲೆ ಬಿಂಬಿತವಾಗಬೇಕು.

ಇತಿಹಾಸ ಒಳಗುಟ್ಟುಗಳ ಜನವಿರೋಧಿ ಪರಂಪರೆಗೆ ವಿರುದ್ಧವಾಗಿ ಹೊಸ ಸೌಹಾರ್ಧತೆಯ ಸಾಧ್ಯತೆಗಳ ಒಟ್ಟು ಮುನ್ನೋಟದ ವಿರಾಟರೂಪಿತನವು ಮಾತ್ರವೇ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವೀಯ ಗುಣದ ರಾಜಕೀಯ ವಿವೇಕದ ಪ್ರತಿಮೆಗಳನ್ನು ಸೃಷ್ಟಿಸಲು ಸಾಧ್ಯ. ಅಪ್ಪನ ಗಿಲಾಸು ಎಂಬುದರ ರೂಪಕವೇ ಇಂತಹ ಸಾಂಸ್ಕೃತಿಕ ಹೊಣೆಗಾರಿಕೆಯ ಜನಲೋಕದ ಪ್ರತಿಮೆಯಾಗಿ ಚರಿತ್ರೆಯ ಹಿಂಸೆ ಮತ್ತು ದಮನಗಳನ್ನು ಪ್ರತಿರೋಧಿಸುತ್ತದೆ. ಇಂತಹ ಸಾಧ್ಯತೆಗಳ ಒಟ್ಟುಮೊತ್ತದ ಧ್ವನ್ಯಾರ್ಥಗಳ ರೂಪವಾಗಿ ಲೋಕಲ್ ಬಸ್ ಕವಿತೆ ಬಹಳ ಮುಖ್ಯವಾಗಿ ಕಾಣುತ್ತದೆ. ತನ್ನ ಜೀವನ ಪರಿಸರದ ಜೊತೆಗಿನ ನಂಟು ಅದು ಸಾವಯವಗೊಳ್ಳುವ ಆಂತರ್ಯದ ಯಾನವೇ ಹೊರತು ಕವಿಗೆ ಅದು ಪ್ರಜ್ಞಾಪೂರ್ವಕವಾಗಿ ಮುಖ್ಯವಾಗುವುದೇ ಇಲ್ಲ. ಸಹಜ ಲಯಗತಿಯ ಭಾಷೆ ಹಾಗೂ ತುಡಿತಗಳ ನಂಟಸ್ಥಿಕೆಯಲ್ಲಿಯೇ ಜೀವನ ಒಂದು ಯಾನ ಎಂಬ ಕವಿತೆಯ ಒಟ್ಟಾರ್ಥವು ಭಾರತೀಯರು ಜೀವನವನ್ನು ಲೀಲೆ ಹಾಗೂ ಚಲನಾತ್ಮಕವಾದ ದರ್ಶನದಲ್ಲಿ ನೋಡಿರುವ ಪರಂಪರೆಯ ಮುನ್ನೋಟಗಳಂತೆ ಈ ಕವಿತೆ ಭಾಸವಾಗುತ್ತದೆ.

“ಮೂಗಿಲ್ಲದ ಕರಿಗಳ ಮದದ ದಾರಿಗೆ
ಮಸುಕಲಿ ನೇಯ್ದ ನಶೆಯ ಮೂರುಬಟ್ಟೆ ಮೈಗೆ
ವಿಕಾರ ಕಾಳ ನೆರಳು ತೇಯ್ದ ತಿಲಕ ಹಣೆಗೆ..”

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)

ಇಂತಹ ಶಕ್ತಿಶಾಲಿಯಾದ ರೂಪಕಗಳನ್ನು ಸೃಷ್ಟಿಸುವ ಕವಿ ತಣ್ಣಗೆ ಈ ಗಂಡು ಪ್ರಪಂಚದ ಮನೋವಿಕೃತಗಳನ್ನು ಬಯಲು ಮಾಡುತ್ತಾರೆ. ಬದುಕು ಹೀಗೇಕೆ ಎಂಬ ಪ್ರಶ್ನೆಗಳ ಹಿಂದೆ ಅನಾಥವಾಗುವ ಹೆಣ್ಣು ಸಮುದಾಯದ ಭಿನ್ನ ದನಿಯ ರೂಪಕಗಳು ಅಡಗಿವೆ ಎನ್ನಬಹುದು. ಟಿಕಳಿ ಮಾರುವ ಹುಡುಗಿ, ರೂಮ್ ನಂ-21, ತಿರಸ್ಕೃತ, ಮಡಿಲು ಕವಿತೆಗಳು ಸಾಮಾಜಿಕ ಕ್ರೌರ್ಯದ ವಿರುದ್ಧ ಅಸಂಖ್ಯ ದ್ವನಿಗಳನ್ನೆಬ್ಬಿಸುತ್ತವೆ.

ತೀರಾ ಒಂದು ಕಾಮನ್ ಕಾವ್ಯಾತ್ಮಕವಾದ ಎಲಿಮೆಂಟಿನಿಂದ ಕಾವ್ಯದ ಬಗ್ಗೆ ಮಾತಾಡುವ ಚಾಳಿಗಳನ್ನು ಬಿಡದೆ ಹೋದರೆ, ಕನ್ನಡ ಕಾವ್ಯವು ಕೇವಲ ಒಂದು ಮೊನಾಟನಿಕ್ಕಾದ ಎಸ್ಥೆಟಿಕ್ಸ್ ನ ವೃದ್ಧ್ಯಾಪ್ಯತನದಲ್ಲಿಯೇ ಸ್ಥಗಿತಗೊಳ್ಳಬೇಕಾಗುತ್ತದೆ. ಇದೊಂತರ ಕೃತಕವಾದ ಈ ವಿಮರ್ಶಕರೆಂಬುವವರಿಂದ ಸೃಷ್ಟಿಯಾಗಿರುವ ಕೃತಕವಾದ ಫಾಗ್ ಎನ್ನಬಹುದು. ಇಂತಹ ಕೃತಕ ಕಾವಳವ ಸರಿಸಿನೋಡಿದರೆ ಮಾತ್ರ ಕನ್ನಡ ಕಾವ್ಯ ಹೊಸ ನಂಟಸ್ಥಿಕೆಯ ಮಗ್ಗಲುಗಳ ಪರಿಚಯವಾಗುತ್ತದೆನ್ನಬಹುದು.

ಅಭಿವ್ಯಕ್ತಿ ಎಂಬುದು ಕವಿಗೆ ಕೇವಲ ವಿಶಿಷ್ಠತೆಯ ಹಂಬಲ ಮಾತ್ರವಾಗಿರದೆ, ತನ್ನ ಹಾಗೂ ತನ್ನನ್ನಾವರಿಸಿರುವ ಲೋಕ ನಂಟಸ್ಥಿಕೆಯ ಸಂಬಂದ ನಿರೂಪಣೆಗಳ ಮೊತ್ತವಾಗಿರುತ್ತದೆ. ಇಲ್ಲಿನ ಬಹುಪಾಲು ಕವಿತೆಗಳು ಕವಿಯ ವಿಶಿಷ್ಠತೆಯ ಹಂಬಲ ಹಾಗೂ ಲೋಕ ನಂಟಸ್ಥಿಕೆಯ ಸಾಂಧ್ರಗೊಂಡ ರೂಪಕಗಳ ಜಗತ್ತನ್ನು ಅನಾವರಣಗೊಳಿಸುತ್ತವೆ. ತಲೆಮಾರಿನ ಹಳಹಳಿಕೆಗಳ ಜೊತೆಗೆ ಕವಿ ತಾನು ಜೀವಂತ ವ್ಯಕ್ತಿತ್ವದ ಶೋದನೆ, ತಾನಂದುಕೊಂಡ ಲೋಕವನ್ನು ತಾನಿರುವ ವಾಸ್ತವದ ಕರಾಳತೆಗಳ ನಡುವೆಯೇ ಗಟ್ಟಿಯಾಗಿ ನೆಲೆ ನಿಲ್ಲುವ ಕಸುವು ಹಾಗೂ ತನ್ನನ್ನಾವರಿಸುವ ಜಡತೆ ಹಾಗು ಸ್ಥಗಿತತೆಗಳನ್ನು ಮೀರಲು ಕಾವ್ಯಾಭಿವ್ಯಕ್ತಿಯತ್ತ ಚಿತ್ತಸ್ಥರಾಗುವುದು ಸಹಜವಾಗಿಯೇ ಎಲ್ಲ ಕವಿಗಳಿಗೂ ಅನ್ವಯಿಸಬಹುದಾದರೂ ಅಪ್ಪನ ಗಿಲಾಸು ಸಂಕಲನವು ಈ ಸಾಧಾರಣವಾದ ಅನ್ವಯಿಕ ಅಂಶಗಳ ಆಚೆಗೂ ಗಮನ ಸೆಳೆಯುತ್ತದೆಂಬುದೇ ವಿಶೇಷ. ಇವರ ಕವಿತೆ ಓದುವ ನೆಪದಲ್ಲಿ ನಾನೇ ಹೆಚ್ಚು ನನ್ನನ್ನು ಲಂಬಿಸಿಕೊಂಡಿದ್ದರೂ, ಅಪ್ಪನ ಗಿಲಾಸು ಹೀಗೆ ನನ್ನನ್ನು ನುಡಿಸಿದೆ ಎಂಬುದು ಸಹ ಸತ್ಯ..