೧.
ನನ್ನ ಎಲ್ಲಾ ವಸಂತಗಳು ಮರಳಿ ಧುಮುಕುತಿವೆ
ಹೂಂಕರಿಸುತಿದೆ ಎನ್ನ ಕರುಳಿಂದ ತುಂಬಾ ಹಳೆಯದೊಂದು
ಬರುವುದಿದೇ ಇನ್ನೂ ಸುರುಳಿ ಸುರುಳಿ ಸೆಳೆವಿನಂತೆ,

ಇರು
ಹೊರಡಬೇಡ, ಹೆದರಿದವನೇ, ಬಾ
ಈ ಚಡಾವಲ್ಲಿ ಕುಳಿತುಕೋ

ಇನ್ನು ನನ್ನದಿದು ಈ ಕಡು ಬಿಸಿಲು
ಮರಳಿಸಲಾರೆ ಈ ಲೋಕದ ತಿರುವಿಗೆ,
ತಿಳಿದಿದೆ ಇವಕ್ಕೂ ಎಲ್ಲಾ ಕಾಲದ ನನ್ನ
ಪೇಯಗಳು ಬರಿಯ ನನಗೆಂದು ಅರಿವಿದೆ ನಿನಗೂ…
ಕಂದಿಹೋಗದಿರು, ನನ್ನ ಕಣ್ಣುಗಳು ದೀವಟಿಗೆ
ಪ್ರಪಾತದಿಂದ ಉಕ್ಕಿ ಬಳುಕುವ ಹಾಲುನೊರೆಯ ಕನ್ನಿಕೆ
ಅಯ್ಯೋ ನಿನ್ನ ಗಿಣಿ ಕುಕ್ಕಿದ ಒಣ ತುಟಿಗಳು
ನಗುವು ಬರುತಿದೆ ನೋಡು ನನಗೆ ನಿನ್ನ ಹುಚ್ಚಿಗೆ

ಒಂದು ವಸಂತ
ಪೇರಳೆ ಮರ ನುಣುಪು ಕಾಂಡ, ಮೇಲೆ ನಾನು ಅಳಿಲಂತೆ
ಕಾಯಿ ಪೇರಳೆ ಚೊಗರು ಹಣ್ಣು ಬಾಯಲ್ಲಿ ಸುಮ್ಮನೆ ನೆವಕ್ಕೆ.. ಧೀರ್ಘ ಕಾಲಕ್ಕೆ
ಎಂತಹದದು ಬಿರು ಬೇಸಗೆ ಸೆಖೆ ಬೆವರು, ನುಣುಪುಕಾಂಡ ದೀರ್ಘ ಬದುಕು!!
ಅಲ್ಲೇ ತಂಪು ಬಾವಿ ಕೇರೆ ಮರಿ
‘ಹೇ ಪುಟ್ಟಮ್ಮ’
ಎಂದು ಬಿಸಿಲು ಕರೆದಂತೆ

ಈಗ ನನ್ನ ಭಾರದ ಭುಜಗಳು ನವಿರು ಮರದ ಕೊಂಬೆ
ಗಿಣಿ ಕಚ್ಚಿದ ನಿನ್ನ ಕಾಯಿ ಪೇರಳೆ ತುಟಿಗಳು
ಈ ದೀರ್ಘ ಬದುಕು!!
ನಗುತಿರುವೆ ತೀರ ಒಳಗಿಂದ
ನಿಜಕ್ಕೂ ಸಾಯುತ್ತಿರುವುದು ಯಾರೆಂದು
ಈ ಲೋಕ ಗಹಗಹಿಸುತಿದೆ

ಇರು
ಹೊರಡಬೇಡ, ಹೆದರಿದವನೇ, ಬಾ
ಈ ಚಡಾವಲ್ಲಿ ಕುಳಿತುಕೋ

 

 

 

 

 

೨.

ನಿರುಮ್ಮಳ ಬೆಳಕು
ಶಿರದ ಮೇಲೆ ನನಗೇ ಎಂಬಂತೆ
ಸುರಿವ ಎಲೆಗಳು
ಹೀಗೇ ಇರಬೇಕಿತ್ತು,
ಎಲ್ಲೋ ಬೆಟ್ಟದ ಚಿಗುರ ಕೆಳಗೆ
ನಾನೇ ಚಾಮರ ಈ ಗಾಳಿ
ಸಂಜೆ ಕೆಂಪು ಮಣ್ಣು ಉರಿವ ಸೂರ್ಯ
ಏನಾದರೂ ಮಾತುಗಳಿರಬೇಕಿತ್ತು
ನನ್ನ ಹೊಟ್ಟೆಯ ಹಸಿವು ತಲೆಯ ಬುದ್ದಿ
ಕಿತ್ತು ಕೊಳ್ಳುವವರು ಬೇಕಿತ್ತು
ಗತಕಾಲದ ಯಾವುದೋ ಪೂರ್ವಜನ
ಕಮಂಡಲದ
ನಿಂತ ನೀರಾಗಬೇಕಿತ್ತು

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)