ನಮ್ಮ ಅಡುಗೆ ಭಟ್ಟರು, ಹಿರಿಯ ವಿದ್ಯಾರ್ಥಿಗಳು ಆಗಿಂದಾಗ್ಗೆ ಈ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದೆವಾದರೂ ಹುಡುಗು ಬುದ್ಧಿಯ ನಮಗೆ ಇದೇನು ಮುಖ್ಯ ಎನಿಸಿರಲಿಲ್ಲ. ಅದುವರೆಗೆ ನಾವ್ಯಾರು ಅದನ್ನು ನೋಡಿರಲಿಲ್ಲ. ನೋಡಿರದ ನಮ್ಮಗಳ ಕಲ್ಪನೆಯಲ್ಲಿ ಹೊಸ ಹಾಸ್ಟೆಲ್ ‘ಹತ್ತಾರು ರೂಮುಗಳಿವೆಯಂತೆ! ತರಗತಿಗೊಂದೊಂದು ರೂಮು ಕೊಡುತ್ತಾರಂತೆ! ಸ್ನಾನಕ್ಕೆ ಕಕ್ಕಸ್ಸಿಗೆಲ್ಲ ಸಪರೇಟ್ ರೂಮುಗಳಿವೆಯಂತೆ! ಸದಾ ನೀರು ಬರುತ್ತಲೇ ಇರುತ್ತದಂತೆ! ದಿನಾ ಸ್ನಾನ ಮಾಡಬೇಕಂತೆ! ಡೈನಿಂಗ್ ಹಾಲ್ ದೊಡ್ಡದಿದ್ದು ಅದರೊಳಗೆ ಟಿವಿಯೂ ಇದಿಯಂತೆ! ಆಡಲು ಬಾಲು ಬ್ಯಾಟು ಎಲ್ಲಾ ಕೊಡ್ತಾರಂತೆ!’ ಎಂಬಿತ್ಯಾದಿಯಾಗಿ ಉಲ್ಲಸಿತಗೊಳಿಸಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಆರನೆಯ ಕಂತು

ನಾಟಕದ ಹೊಟ್ಟೆ ನೋವು

ಊರಿನಲ್ಲಿ ಯಾವುದಾದರೂ ಹಬ್ಬ ಜಾತ್ರೆಗಳಾದರೆ ಸಂಬಂಧಿಕರಾದ ನಾವೆಲ್ಲರೂ (ಭಗತ್, ಕಿರಣ್, ಮುರಳಿ, ರೋಹಿತ್, ಜೇಪಿ)ಒಟ್ಟಿಗೆ ಹೊರಟು ಬರುತ್ತಿದ್ದೆವು. ಹಾಸ್ಟೆಲ್‌ನಲ್ಲಿದ್ದಾಗ ಸಣ್ಣ ಪುಟ್ಟ ವಿಷಯಗಳಿಗೆ ಕಿತ್ತಾಡಿಕೊಂಡಿರುತ್ತಿದ್ದ ನಾವು ಊರಿಗೆ ಬರುವಾಗ ಮಾರ್ಗಮಧ್ಯದಲ್ಲೆ ಎಲ್ಲವನ್ನೂ ಸರಿಪಡಿಸಿಕೊಂಡು ನಮ್ಮ ಸಂತೋಷವನ್ನು ಹಿಗ್ಗಿಸಿಕೊಂಡು ಬರುತ್ತಿದ್ದೆವು. ಊರಲ್ಲಿದ್ದಷ್ಟು ಕಾಲ ಹಾಯಾಗಿರುತ್ತಿದ್ದ ನಾವು ಅಪ್ಪಿ ತಪ್ಪಿಯೂ ಸ್ಕೂಲು, ಹಾಸ್ಟೆಲ್ಲನ್ನು ನೆನಪಿಸಿಕೊಳ್ಳುತ್ತಿರಲಿಲ್ಲ.

ನಮ್ಮ ತೋಟದಲ್ಲಿದ್ದ ಮಾವಿನ ಮರದ ಕೊಂಬೆಯ ಮೇಲೆ ಕೂತು ಜಗ್ಗು ಬಗ್ಗು ಆಟ ಆಡುತ್ತಿದ್ದೆವು. ಬಟ್ಟೆ ಶೆಣೆಯಲೆಂದು ಅಪ್ಪ ಮೊಣಕಾಲುದ್ದವಿದ್ದ ಗುಂಡಿಗೆ ನೀರು ತುಂಬಿಸಿರುತ್ತಿತ್ತು. ನಾವು ಈಜಾಡಿ ಡೈ ಹೊಡೆಯುತ್ತೇವೆಂದು ಹೋಗಿ ಒಬ್ಬರಮೇಲೊಬ್ಬರು ಬಿದ್ದು ವದ್ದಾಡುತ್ತಿದ್ದೆವು. ಹೀಗೆ ಸ್ವಚ್ಛಂದವಾಗಿ ರಜೆ ಕಳೆಯುತ್ತಿದ್ದ ನಮಗೆ ಸ್ಕೂಲಿಗೆ ಹೋಗುವ ಸೋಮುವಾರ ಬಂದೇ ಬಿಡುತ್ತಿತ್ತು. ಭಾನುವಾರ ಸಾಯಂಕಾಲವೇ ಅಮ್ಮ ನಮ್ಮಗಳ ಮೈತೊಳೆದು ಸಿದ್ಧಗೊಳಿಸಿರುತ್ತಿತ್ತು. ಸೋಮುವಾರ ಬೆಳಗ್ಗೆ ಎಂಟುಗಂಟೆಗೆಲ್ಲ ಯೂನಿಫಾರ್ಮ್ ಹಾಕಿ, ರಾತ್ರಿ ಮಿಕ್ಕಿದ್ದ ಹಬ್ಬದೂಟವನ್ನೊ ಅಥವಾ ಕೆಲವೊಮ್ಮೆ ಬೆಳಗ್ಗೆಯೆ ಮಾಡಿದ್ದ ಇಡ್ಲಿಯನ್ನೊ ಮಧ್ಯಾಹ್ನಕ್ಕೆ ತಿನ್ನಲೆಂದು ಬಾಕ್ಸಿಗೆ ಹಾಕಿ ಕಳುಹಿಸುತ್ತಿತ್ತು. ನಮ್ಮೂರಿನಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಬ್ಯಾಡರಹಳ್ಳಿ ಗೇಟ್‌ಗೆ ನಡೆದುಕೊಂಡು ಹೋಗಿ ಬಸ್ ಹತ್ತಬೇಕಿತ್ತು. ನಾನು ಮತ್ತು ಜೇಪಿ ಮಾತ್ರವಿದ್ದಾಗ ಅಪ್ಪ ಸೈಕಲ್‌ನಲ್ಲಿ ಹಿಂದೆ ಮುಂದೆ ಕೂರಿಸಿಕೊಂಡು ಬಂದು ಬಸ್ ಹತ್ತಿಸುತ್ತಿತ್ತು. ಆದರೆ ಹಬ್ಬಕ್ಕೆಂದು ಬಂದಾಗ ನಮ್ಮ ಸಂಬಂಧಿಕ ಹುಡುಗರ ಸಂಖ್ಯೆ ಹೆಚ್ಚಿಗೆ ಇರುತ್ತಿದ್ದುದರಿಂದ ಒಟ್ಟಿಗೆ ನಡೆದುಕೊಂಡು ಹೋಗಿ ಎಂದು ಮನೆಯಿಂದಲೇ ಬೀಳ್ಕೊಡುತ್ತಿದ್ದರು.

ಹೀಗೆ ಒಂದು ಹಬ್ಬಕ್ಕೆಂದು ಊರಿಗೆ ಬಂದಿದ್ದ ನಮಗೆ ಮತ್ತೆ ಹಾಸ್ಟೆಲ್‌ಗೆ ಹೊರಡಲು ನಿರಾಸಕ್ತಿ. ಸ್ಕೂಲಿಗೆ ಹೋಗುವ ಮನಸ್ಸು ಯಾರಿಗೂ ಇರಲಿಲ್ಲ. ಹೋಗಲೊ ಬೇಡವೊ ಎಂಬಂತೆ ಭಾರದ ಪಾದಗಳನ್ನು ಕಿತ್ತಿಡುತ್ತಿದ್ದೆವು. ನಮ್ಮ ಕಾಲುದಾರಿಯ ಮಧ್ಯದಲ್ಲಿ ಸಿಗುವ ಹೊಂಗೆ ಸೊಂಪಲು ನಿರ್ಜನವಾದ ಪ್ರದೇಶ. ಹೊಂಗೆ ಮತ್ತು ಮಾವಿನಮರಗಳಿಗೆ ಸೀಗೆಮೆಣೆ ಹಬ್ಬಿಕೊಂಡು ಕಗ್ಗತ್ತಲು ಕವಿದಂತಿರುತ್ತಿತ್ತು. ಅಲ್ಲಿಗೆ ಸಮೀಪಿಸುತ್ತಿದ್ದತಂಲೇ ನಮ್ಮ ಹುಡುಗರಲ್ಲಿ ಅತ್ಯಂತ ಕಿರಿಯನಾದ ಚಿಕ್ಕಮ್ಮನ ಮಗ ರೋಹಿತ್ ನಿಧಾನಕ್ಕೆ ‘ಅಣ್ಣ ಎಲ್ಡಕ್ಕೆ ಹೋಗಂಗಾಗೈತೆ’ ಎಂದ. ಸರಿ ಹೋಗಪ್ಪ ಎಂದು ಎಲ್ಲರೂ ಅವನಿಗೆ ಸಮ್ಮತಿಸಿ ನಡಿಗೆಯನ್ನು ನಿಲ್ಲಿಸಿದೆವು. ಅವನು ಹೋಗಿ ಐದರಿಂದ ಹತ್ತು ನಿಮಿಷ ಕಳೆದರೂ ಯಾರೂ ಅವನನ್ನು ‘ಆಯ್ತ’ ಎಂದು ಕೇಳಲೂ ಇಲ್ಲ ‘ಬಾ’ ಎಂದು ಕೂಗಲೂ ಇಲ್ಲ. ಬದಲಿಗೆ ನಮ್ಮ ತಂಡದ ಇನ್ನೊಬ್ಬ ಸದಸ್ಯ ಜೇಪಿ ನನಗೂ ಎಲ್ಡಕ್ಕೆ ‘ಹೋಗಂಗಾಯ್ತು’ ಎಂದು ಅವನೂ ಚಡ್ಡಿ ಲೂಸ್ ಮಾಡಿಕೊಂಡು ಕುಳಿತ. ಇತ್ತ ಅವರಿಬ್ಬರೂ ಎಷ್ಟೊತ್ತಾದರೂ ಮೇಲೇಳದೆ ಇದ್ದಾಗ ಮುರುಳಿಯೂ ಹಾಗೇ ಮಾಡಿದ. ಇನ್ನ ಉಳಿದ ನಾನು ಮತ್ತು ಭಗತ್ ಕೂಡ ಚಡ್ಡಿ ಉದುರಿಸಿಕೊಂಡು ಕೂತೆವು. ಎಷ್ಟೊ ಹೊತ್ತಿಗೆ ಮೊದಲು ಕೂತಿದ್ದ ರೋಹಿತ್ ಮೇಲೆದ್ದು ನೀರು ಮುಟ್ಟಲೆಂದು ಪಕ್ಕದಲ್ಲೇ ಇದ್ದ ಕೆರೆಗೆ ಹೋದ. ಉಳಿದವರೂ ಒಬ್ಬೊಬ್ಬರೆ ಎದ್ದು ಅವನ ದಾರಿಯನ್ನೇ ಹಿಡಿದು ನೀರು ಮುಟ್ಟಿ ಬಂದೆವು.

ಅಲ್ಲಿಂದ ಮುಂದಕ್ಕೆ ಇನ್ನ ನೂರು ಮೀಟರ್ ಕೂಡ ನಡೆದಿರಲಿಲ್ಲ ಮತ್ತೆ ರೋಹಿತ್ ‘ಯಾಕೋ ತಿರ್ಗ ಎಲ್ಡಕ್ಕೆ ಹೋಗಂಗಾಗೈತೆ’ ಎಂದು ಕುಳಿತುಕೊಂಡ. ಅಲ್ಲಿಂದ ಮೇಲೇಳುವಾಗ ಆತ ಹೊಟ್ಟೆಯನ್ನು ಹಿಡಿದುಕೊಂಡು ಹೊಟ್ಟೆನೋವು ಎಂದು ಕಿವುಚುತ್ತಿದ್ದುದು ಕಾಣಿಸಿತು. ಜೇಪಿ ಮತ್ತು ಮುರುಳಿಯೂ ಅವನನ್ನೇ ಅನುಕರಿಸಿದರು. ಅವರಿಗಿಂತ ಕೊಂಚ ಹಿರಿಯರಾದ ನಾನು ಮತ್ತು ಭಗತ್ ಅವರಿಗೆ ಸಹಕರಿಸುತ್ತ ನಮ್ಮ ನಡಿಗೆಯನ್ನು ಮೊದಲಿಗಿಂತಲೂ ನಿಧಾನವಾಗಿಸಿ ಹೋಗಲೊ ಬೇಡವೊ ಎಂಬಂತೆ ಹೆಜ್ಜೆ ಹಾಕುತ್ತ, ಅಂತೂ ಇಂತು ಗೇಟ್ ತಲುಪಿದೆವು. ಅಪ್ಪಿತಪ್ಪಿಯೂ ಯಾರೂ ಮನೆಗೆ ವಾಪಾಸ್ ಹೋಗುವ ಆಲೋಚನೆಯನ್ನು ಮಾಡಲಿಲ್ಲ. ನಮ್ಮ ಈ ಸಾಮೂಹಿಕ ಹೊಟ್ಟೆನೋವನ್ನು ಮನೆಯವರು ನಂಬುವುದರ ಬಗ್ಗೆ ಅನುಮಾನವಿತ್ತು.

ಕೇವಲ ಇಪ್ಪತ್ತು ನಿಮಿಷದಲ್ಲಿ ತಲುಪಬಹುದಾಗಿದ್ದ ಬಸ್ ನಿಲ್ದಾಣವನ್ನು ಒಂದರಿಂದ ಎರೆಡು ಗಂಟೆ ತೆಗೆದುಕೊಂಡು ತಲುಪಿದ್ದೆವು. ಕೆ.ಬಿ. ಕ್ರಾಸ್ ತಲುಪುವಷ್ಟರಲ್ಲೇ ಸಮಯ ಹತ್ತನ್ನು ದಾಟಿದ್ದಿರಬೇಕು. ಮೊದಲು ಬಂದ ಒಂದೆರೆಡು ಬಸ್‌ಗಳನ್ನು ತಪ್ಪಿಸಿ ಕೊನೆಗೆ ಇನ್ನೊಂದನ್ನ ಏರಿ ಹನ್ನೊಂದರ ಸುಮಾರಿಗೆ ತಿಪಟೂರು ತಲುಪಿದೆವು. ಬ್ಯಾಗ್ ನೇತಾಕಿಕೊಂಡಿರುವ, ಯೂನಿಫಾರ್ಮ್ ಹಾಕಿಕೊಂಡಿರುವ ಯಾವ ಹುಡುಗರೂ ನಮ್ಮ ಕಣ್ಣಿಗೆ ಬೀಳದಿದ್ದುದು, ಅದಾಗಲೇ ಬೆಲ್ ಹೊಡೆದು ಮಕ್ಕಳೆಲ್ಲ ಕೊಠಡಿಗಳೊಳಗೆ ಬಂಧಿಯಾಗಿರುವುದನ್ನ ಖಾತ್ರಿಪಡಿಸಿತು. ಮನಸ್ಸು ಮಾಡಿದ್ದರೆ ಆಗಲೂ ಸ್ಕೂಲಿಗೆ ಹೋಗಬಹುದಿತ್ತು. ಆದರೆ ಅದು ಯಾರಿಗೂ ಬೇಕಿರಲಿಲ್ಲ. ಇತ್ತ ಹಾಸ್ಟೆಲ್‌ಗೆ ಹೋದರೆ ವಾರ್ಡನ್ ಸ್ಕೂಲಿಗೆ ಹೋಗದಿರುವುದಕ್ಕೆ ತಗಾದೆ ತೆಗೆದು ರುಬ್ಬುತ್ತಾರೆಂದು ಆ ದಾರಿಯನ್ನು ಬಿಟ್ಟೆವು. ತ್ರಿಮೂರ್ತಿ ಟಾಕೀಸ್‌ನಲ್ಲಿ ಹೊಸ ಪಿಚ್ಚರ್‍ನ ವಾಲ್‌ ಪೋಸ್ಟರ್ ಹಾಕಿದ್ದರು. ಎಲ್ಲರ ಹತ್ತಿರವೂ ಮನೆಯಿಂದ ತಂದಿದ್ದ ಬಿಡಿಗಾಸುಗಳಿದ್ದವು. ಸಮಯವೂ ಕೂಡಿಬಂದಿತ್ತು. ಮಧ್ಯಾಹ್ನ ಸ್ಕೂಲಿಗೋದರಾಯಿತೆಂದು ಮಾತಾಡಿಕೊಂಡು ಸಿನಿಮಾಕ್ಕೆ ಹೋದೆವು.

ಪೊದೆ ಸಂದಿಯಲ್ಲಿ ಗುಸು ಗುಸು

ಪಿಚ್ಚರ್ ಬಿಟ್ಟ ನಂತರ ಅಲ್ಲೆ ಪಕ್ಕದಲ್ಲಿದ್ದ ಪಾರ್ಕಿಗೆ ಹೋಗಿ ಮನೆಯಿಂದ ತಂದಿದ್ದ ತಿಂಡಿ ತಿಂದೆವು. ಆಗಲೂ ಯಾರೂ ಅಪ್ಪಿತಪ್ಪಿಯೂ ಸ್ಕೂಲನ್ನು ನೆನಪಿಸಿಕೊಳ್ಳಲಿಲ್ಲ. ಮಧ್ಯಾಹ್ನದ ಬೆಲ್ ಕೂಡ ಆಗಿಹೋಗಿತ್ತು. ಪಾರ್ಕ್‌ನಲ್ಲಿದ್ದ ಜಾರಬಂಡಿ, ಜೋಕಾಲಿ ಎಲ್ಲವನ್ನೂ ಮನಸೋಇಚ್ಚೆ ಆಡಿ ಸಾಕಾದೆವು. ನಮ್ಮ ಮಾವ ಕುಂದೂರು ತಿಮ್ಮಯ್ಯ ದಲಿತ ಸಂಘದಲ್ಲಿದ್ದುದರಿಂದ ಪ್ರತಿದಿನ ಏನಾದರೂ ಕೆಲಸದ ಮೇಲೆ ತಿಪಟೂರಿಗೆ ಬಂದೇ ಬರುತ್ತಿತ್ತು. ಹೇಗಾದರೂ ಸರಿಯೇ ನಾವು ಶಾಲೆಗೆ ತಪ್ಪಿಸಿರುವ ಸುದ್ದಿ ಅವರಿಗೆ ತಿಳಿದೇ ತಿಳಿಯುತ್ತದೆಂದು ಭಾವಿಸಿದೆವು. ನಮ್ಮ ತಂಡದ ಭಗತ್‌ಸಿಂಗ್ ಯಾರಿಗೂ ತಿಳಿಯದ ಒಂದು ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ ಬನ್ನಿ ಎಂದು ಮುಂದೆ ಮುಂದೆ ಹೊರಟ. ನಾವು ಅವನನ್ನು ಹಿಂಬಾಲಿಸಿದೆವು.

ತ್ರಿಮೂರ್ತಿ ಟಾಕೀಸ್ ಹಿಂಬದಿಯಲ್ಲಿ ಸಿಗುವ ರೈಲ್ವೆಟ್ರಾಕ್ ಮೇಲೆ ನಡೆಯತೊಡಗಿದೆವು. ಕೆಲವರು ಜಲ್ಲಿ ಮಧ್ಯದಲ್ಲಿ ಇನ್ನ ಕೆಲವರು ಕಂಬಿ ಮೇಲೆ ಬ್ಯಾಲೆನ್ಸ್ ಮಾಡುತ್ತ ನಡೆದೆವು. ಹತ್ತತ್ತಿರ ಎರೆಡು ಕಿಲೋಮೀಟರ್‌ನಷ್ಟು ನಡೆದ ನಂತರ ಟೌನ್ ಮನೆಗಳು ಕಾಣದಾದವು. ಅಲ್ಲಿ ಪೊದೆಗಳು ಬೆಳೆದಿದ್ದವು. ಯಾವುದೋ ಒಂದು ಪೊದೆಯೊಳಗಿನಿಂದ ಸಣ್ಣಗೆ ದನಿ ಕೇಳಿಸುತ್ತಿತ್ತು. ಭಗತ್ ನಮ್ಮನ್ನು ಅದರ ಹತ್ತಿರವೇ ಕರೆದುಕೊಂಡು ಹೋದ. ನಾವು ಹೋದದ್ದೇ ತಡ ಅಲ್ಲಿದ್ದವರು ಹೆದರಿ ಅಲರ್ಟ್ ಆದಂತೆ ಕಂಡರು. ಅಲ್ಲಿ ನಮ್ಮ ಹಾಸ್ಟೆಲ್‌ನಿಂದ ಬೇರೆ ಬೇರೆ ಸ್ಕೂಲುಗಳಿಗೆ ಹೋಗುತ್ತಿದ್ದ ಲಕ್ಷ್ಮಿನರಸಿಂಹ, ಬಸವರಾಜ, ಸೋಮ, ಹುಚ್ಚುಚ್ಚ ಮುಂತಾದವರು ಕೂತು ದುಡ್ಡು ಕಟ್ಟಿಕೊಂಡು ಸರಿ ಬೆಸ ಆಡುತ್ತಿದ್ದರು. ನಮ್ಮನ್ನು ಆಶ್ಚರ್ಯದಿಂದ ಕಂಡ ಅವರು ‘ನೀವೂ ಸ್ಕೂಲಿಗೆ ಹೋಗಿಲ್ವ, ಬರ್ರಿ ಆಡನ’ ಎಂದು ಮುಕ್ತ ಕಂಠದಿಂದ ಸ್ವಾಗತಿಸಿದರು. ಭಗತ್‌ಗೆ ಇದು ಸಾಮಾನ್ಯ ಅಡ್ಡವಾಗಿತ್ತು. ಆತ ಪ್ರತಿ ಸೋಮುವಾರ ಶಾಲೆಗೆ ಹೋಗುತ್ತಿರಲಿಲ್ಲ.

ಭಾನುವಾರ ಸಾಯಂಕಾಲವೇ ಅಮ್ಮ ನಮ್ಮಗಳ ಮೈತೊಳೆದು ಸಿದ್ಧಗೊಳಿಸಿರುತ್ತಿತ್ತು. ಸೋಮುವಾರ ಬೆಳಗ್ಗೆ ಎಂಟುಗಂಟೆಗೆಲ್ಲ ಯೂನಿಫಾರ್ಮ್ ಹಾಕಿ, ರಾತ್ರಿ ಮಿಕ್ಕಿದ್ದ ಹಬ್ಬದೂಟವನ್ನೊ ಅಥವಾ ಕೆಲವೊಮ್ಮೆ ಬೆಳಗ್ಗೆಯೆ ಮಾಡಿದ್ದ ಇಡ್ಲಿಯನ್ನೊ ಮಧ್ಯಾಹ್ನಕ್ಕೆ ತಿನ್ನಲೆಂದು ಬಾಕ್ಸಿಗೆ ಹಾಕಿ ಕಳುಹಿಸುತ್ತಿತ್ತು.

ನಮ್ಮೆಲ್ಲರಿಗೂ ಹಿರಿಯನಾದ ಅವನ ಹತ್ತಿರ ಸ್ವಲ್ಪ ದುಡ್ಡು ಚೆನ್ನಾಗೆ ಆಡುತ್ತಿತ್ತು. ಖಾಯಿಲೆ ಕಸಾಲೆ ಎಂದು ಬಸ್ ಪಾಸ್ ಮಾಡಿಸಿಕೊಂಡು ವಾರ ಮಧ್ಯದಲ್ಲೂ ಊರಿಗೆ ಹೋಗಿ ಬರುವುದ ರೂಢಿಸಿಕೊಂಡಿದ್ದ. ಅವನು ಶಾಲೆಗೆ ಚಕ್ಕರ್ ಹಾಕಿದಾಗಲೆಲ್ಲ ಬಂದು ಸೇರುವ ಖಾಯಂ ಅಡ್ಡವಾಗಿತ್ತು. ಬಹಳ ದಿನಗಳ ನಂತರ ಅನಿವಾರ್ಯವಾಗಿ ನಮಗೂ ಅದನ್ನ ಪರಿಚಯಿಸಿದ್ದ.

ಒಂದು ದಿನ ಹೀಗಾಯಿತು. ನಾನು ಎಂಟರಲ್ಲಿದ್ದಾಗ ಭಗತ್ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ. ತರಗತಿಯಲ್ಲಿದ್ದ ನನಗೆ ಆಫೀಸ್ ರೂಮಿನಿಂದ ಕರೆ ಬಂತು. ಏನಿರಬಹುದೆಂದು ಹೆದರುತ್ತಲೆ ಹೋದ ನನಗೆ ಆಫೀಸ್ ರೂಮ್‌ನಲ್ಲಿ ಭಗತ್ ನಿಂತಿರುವುದು ಕಂಡಿತು. ಹೆಡ್ ಮಾಸ್ಟರ್ ಕುರ್ಚಿಯ ಮುಂದೆ ಪಾರ್ಥಣ್ಣ ಕೂತಿದ್ದನು. ನಮ್ಮ ಗೌರತ್ತೆ (ಅಪ್ಪನ ಅಕ್ಕ) ಮಗನಾದ ಪಾರ್ಥಣ್ಣ ಆಗಲೆ ಬೆಂಗಳೂರು ಯುನಿವರ್ಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದಾತ. ಭಗತ್‌ನ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಿತ್ತು. ನನ್ನ ಹಿಂದೆಯೇ ನನ್ನ ತರಗತಿ ಅಟೆಂಡೆನ್ಸ್ ಕೂಡ ಬಂತು. ಅದರಲ್ಲಿ ಈ ತಿಂಗಳು ನಾನು ಎಷ್ಟು ದಿನ ಶಾಲೆಗೆ ಹಾಜರಾಗಿದ್ದೇನೆಂಬುದನ್ನು ಮುಖ್ಯಶಿಕ್ಷಕರು ಎಣಿಸತೊಡಗಿದರು. ಕೆಲ ಸೋಮುವಾರ ಬಿಟ್ಟರೆ ಉಳಿದಂತೆ ಹಾಜರಾತಿ ಇತ್ತು. ಆದರೆ ಭಗತ್‌ನ ಅಟೆಂಡೆನ್ಸ್ ರಿಜಿಸ್ಟರ್‌ನಲ್ಲಿ ಪ್ರತಿ ಸೋಮುವಾರ ಆಬ್ಸೆಂಟ್ ಆಗಿದ್ದು ಮಾತ್ರವಲ್ಲದೆ ಉಳಿಕೆ ದಿನಗಳಲ್ಲೂ ತಪ್ಪಿಸಿಕೊಂಡಿರುವುದು ಕಂಡುಬಂದಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಪಾರ್ಥಣ್ಣ ಬಂದಿದ್ದ ಆ ದಿನವೂ ಬೆಳಗಿನ ಅವಧಿಗೆ ಚೆಕ್ಕರ್ ಹೊಡೆದು ಮಧ್ಯಾಹ್ನದ ಅವಧಿಗೆ ಶಾಲೆಗೆ ಬಂದಿದ್ದ.

ತರಗತಿ ಶಿಕ್ಷಕರಾದ ಸೆಣಕಲು ದೇಹದ ಲಂಬಾಣಿ ಜಾತಿಯ ಬಿ.ವಿ. ಯಾಕೆ ಬೆಳಗ್ಗೆ ಶಾಲೆಗೆ ಬಂದಿಲ್ಲ ಎಂದು ತನಿಕೆಗಿಕ್ಕಿಕೊಂಡಿದ್ದರು. ‘ಕೋಣನ ಕಾವಲು ಹತ್ತಿರ ಬಸ್ ಪಂಚರ್ ಆಗಿತ್ತು, ಅದು ರಿಪೇರಿ ಆಗಿ ಬರುವಷ್ಟರಲ್ಲಿ ಲೇಟಾಯ್ತು, ಅದಕ್ಕೆ ಮಧ್ಯಾಹ್ನ ಬಂದೆ’ ಎಂದು ಉತ್ತರ ಕೊಟ್ಟಿದ್ದ. ನೀನು ಹೇಳುತ್ತಿರುವುದು ನಿಜವೇನೊ? ಸತ್ಯವೇನೊ? ಎಂದು ಹತ್ತಾರು ಸರ್ತಿ ಕೇಳಿದಾಗಲೂ ಭಗತ್ ಮೇಲಿನ ಉತ್ತರವನ್ನೆ ಅತ್ಯಂತ ಖಚಿತವಾಗಿ ಹೇಳಿದ್ದ. ಈ ಉತ್ತರಗಳಿಂದ ಕುಪಿತಗೊಂಡ ಕ್ಲಾಸ್ ಟೀಚರ್, ತನ್ನಂತೆಯೇ ಉದ್ದಕ್ಕಿರುವ ಎರೆಡು ಕೋಲು ಮುರಿಯುವವರೆಗೂ ಕೆಚ್ಚಿದ ಮಕ್ಕೆ ಕೆಚ್ಚಿದ್ದರು. ಕ್ಲಾಸ್ ಟೀಚರ್ ಬಿ.ವಿ. ಇಷ್ಟು ಬೀಪಿ ರೈಜ್ ಮಾಡಿಕೊಳ್ಳಲು ಕಾರಣವಿತ್ತು. ಬೆಳಗ್ಗೆ ಬಿ.ವಿ. ಮೇಷ್ಟ್ರು ಕೆ.ಬಿಕ್ರಾಸ್‌ನಿಂದ ತಿಪಟೂರಿಗೆ ಬಂದಿದ್ದ ಗೌರ್ಮೆಂಟ್ ಬಸ್‌ನಲ್ಲೇ ಭಗತ್ ಕೂಡ ಇದ್ದನಂತೆ! ಇವನನ್ನು ಕಣ್ಣಾರೆ ಕಂಡು, ಆತನ ಸುಳ್ಳುಗಳನ್ನು ಕಿವಿಯಾರೆ ಕೇಳಿದ ನಂತರ ಕ್ಲಾಸ್ ಟೀಚರ್‌ನ ಪಿತ್ತ ನೆತ್ತಿಗೇರಿತ್ತು. ಗ್ರಹಚಾರಕ್ಕೆ ಅವತ್ತೆ ಹುಡುಗರ ಓದು ಬರಹ ಹೇಗಿದೆ ಎಂದು ವಿಚಾರಿಸಿಕೊಳ್ಳಲು ಪಾರ್ಥಣ್ಣನೂ ಬಂದಿದ್ದ. ಅವನ ಕೈಗೂ ಸಿಕ್ಕಾಕಿಕೊಂಡಿದ್ದೆವು.

ಹೊಸ ಹಾಸ್ಟೆಲ್ ಕಟ್ಟಡಕ್ಕೆ ಗುಳೆ

ಒಂದು ದಿನ ಸಂಜೆ ಇದ್ದಕ್ಕಿದ್ದಂತೆ ವಾರ್ಡನ್‌ರಿಂದ ಹೊಸ ಹೇಳಿಕೆಯೊಂದು ಹೊರಬಿತ್ತು. ಅದನ್ನ ಕೇಳಿ ನಾವು ಸಂತೋಷದಿಂದ ಕುಣಿದಾಡಿದೆವು. ಕಳೆದೆರೆಡು ವರ್ಷಗಳಿಂದ ಆಗಿಂದಾಗ್ಗೆ ಸುಳಿದಾಡುತ್ತಿದ್ದ ಅಂತೆ ಕಂತೆಗೆ ಅಂದು ಅಧಿಕೃತ ಮುದ್ರೆ ಬಿದ್ದಿತ್ತು. ನಮಗಾಗಿ ಸರ್ಕಾರದವರು ಹೊಸ ಕಟ್ಟಡ ನಿರ್ಮಿಸಿದ್ದು, ಈದಿನ ಸಾಯಂಕಾಲವೇ ಊಟವೆಲ್ಲ ಮುಗಿದ ನಂತರ ನಮ್ಮ ಟ್ರಂಕು ತಟ್ಟೆ, ಗಂಟು ಮೂಟೆಗಳ ಸಮೇತ ಹಾಲ್ಕುರ್ಕೆ ರಸ್ತೆಯಲ್ಲಿರುವ ಹೊಸ ಹಾಸ್ಟೆಲ್‌ಗೆ ತೆರಳಬೇಕು ಎಂದಾಗಿತ್ತು. ನಮ್ಮ ಅಡುಗೆ ಭಟ್ಟರು, ಹಿರಿಯ ವಿದ್ಯಾರ್ಥಿಗಳು ಆಗಿಂದಾಗ್ಗೆ ಈ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದೆವಾದರೂ ಹುಡುಗು ಬುದ್ಧಿಯ ನಮಗೆ ಇದೇನು ಮುಖ್ಯ ಎನಿಸಿರಲಿಲ್ಲ. ಆದರೆ ಆ ಕನಸು ಈಗ ನನಸಾಗುತ್ತಿದೆ ಎಂದಾಗ ನಮ್ಮಗಳ ಕಲ್ಪನೆಗಳು ಗರಿಗೆದರಿದವು. ಅದುವರೆಗೆ ನಾವ್ಯಾರು ಅದನ್ನು ನೋಡಿರಲಿಲ್ಲ. ನೋಡಿರದ ನಮ್ಮಗಳ ಕಲ್ಪನೆಯಲ್ಲಿ ಹೊಸ ಹಾಸ್ಟೆಲ್ ‘ಹತ್ತಾರು ರೂಮುಗಳಿವೆಯಂತೆ! ತರಗತಿಗೊಂದೊಂದು ರೂಮು ಕೊಡುತ್ತಾರಂತೆ! ಸ್ನಾನಕ್ಕೆ ಕಕ್ಕಸ್ಸಿಗೆಲ್ಲ ಸಪರೇಟ್ ರೂಮುಗಳಿವೆಯಂತೆ! ಸದಾ ನೀರು ಬರುತ್ತಲೇ ಇರುತ್ತದಂತೆ! ದಿನಾ ಸ್ನಾನ ಮಾಡಬೇಕಂತೆ! ಡೈನಿಂಗ್ ಹಾಲ್ ದೊಡ್ಡದಿದ್ದು ಅದರೊಳಗೆ ಟಿವಿಯೂ ಇದಿಯಂತೆ! ಆಡಲು ಬಾಲು ಬ್ಯಾಟು ಎಲ್ಲಾ ಕೊಡ್ತಾರಂತೆ!’ ಎಂಬಿತ್ಯಾದಿಯಾಗಿ ಉಲ್ಲಸಿತಗೊಳಿಸಿತ್ತು.

ಆದಿನದ ಸಂಜೆಯ ಊಟ ಕ್ಷಣಾರ್ಧದಲ್ಲಿ ಮುಗಿದು, ಎಲ್ಲರು ಸದ್ದು ಗದ್ದಲ ಮಾಡಿಕೊಂಡು ತಮ್ಮ ಲಗೇಜುಗಳ ಗಂಟುಕಟ್ಟಿಕೊಳ್ಳತೊಡಗಿದೆವು. ಲಗೇಜೆಂದರೆ ಮುರುಕು ಟ್ರಂಕು ಮತ್ತು ತಟ್ಟೆ. ಅದರ ಒಂದು ಮೂಲೆಯಲ್ಲಿ ಜೋಡಿಸಿಟ್ಟ ಪುಸ್ತಕಗಳು, ಅದರ ಪಕ್ಕದಲ್ಲಿ ಒಂದೆರೆಡು ಜೊತೆ ಸರ್ಕಾರದವರೇ ಕೊಟ್ಟ ಬಟ್ಟೆಗಳು, ಅರಳೆಣ್ಣೆ ಸೀಸ, ಸೋಪಿನ ಬಾಕ್ಸು. ಇವುಗಳಿಗೆ ಮಾಸಲು ರಗ್ಗುಗಳನ್ನು ಹೊದಿಸಿಕೊಂಡೆವು. ಅದರ ಮೇಲೆ ತುಬಟಸುರಿಯುವ ತಲೆದಿಂಬು, ಅಂತಿಮವಾಗಿ ಸ್ಕೂಲು ಬ್ಯಾಗನ್ನು ಸೇರಿಸಿ ಅದುಮಿ ಟ್ರಂಕಿನ ಬಾಯಿ ಹಾಕಿ ಇನ್ನೊಬ್ಬರ ಸಹಕಾರ ಪಡೆದು ತಲೆಮೇಲಿಟ್ಟುಕೊಂಡು ನಡೆಯತೊಡಗಿದೆವು. ಸುಮಾರು ಒಂದುವರೆ ಮೈಲಿ ಇದ್ದ ಹೊಸ ಹಾಸ್ಟೆಲ್‌ಗೆ ಹುಡುಗರು ತಮ್ಮ ಆಪ್ತರ ಗುಂಪು ಕಟ್ಟಿಕೊಂಡು ತಲೆ ಮೇಲೆ ಟ್ರಂಕು, ಹೆಗಲಲ್ಲಿ ಬ್ಯಾಗ್ ನೇತಾಕಿಕೊಂಡು ನಡೆಯತೊಡಗಿದೆವು. ಆ ಭಾರದ ಸೆಳೆತದ ನೋವನ್ನ ನುಂಗಿದ್ದು ಬಾಯಿಂದ ಬರುತ್ತಿದ್ದ ಹೊಸ ಹಾಸ್ಟೆಲ್ ಬಗೆಗಿನ ನಿರೀಕ್ಷೆಯ ಮಾತುಗಳೆ!

ಅಂತೂ ಗುಳೆ ಹೊರಟವರಂತೆ ಈ ದಿಕ್ಕಿನಿಂದ ಆ ದಿಕ್ಕಿಗೆ ಹೊರೆಟೆವು. ಹಾಸ್ಟೆಲ್ ಇನ್ನೇನು ಸಮೀಪಿಸಿತು ಎನ್ನುತ್ತಿದ್ದಂತೆ ಹುಡುಗರ ನಡಿಗೆ ಜೋರಾಯಿತು. ಇನ್ನೂ ಮೀರಿ ಕುತೂಹಲ ತಾಳಲಾರದೆ ಓಡಲಾರಂಭಿಸಿದೆವು. ಅಲ್ಲಲ್ಲೆ ಟ್ಯೂಬ್ ಲೈಟ್ ಹಾಕಿದ್ದರಿಂದ ಕತ್ತಲಲ್ಲೂ ಕೊಠಡಿಗಳ ಬಾಗಿಲುಗಳು ಅದರ ಮುಂದಿದ್ದ ಮರಗಳು ಕಾಣಿಸುತ್ತಿದ್ದವು. ಹೊಸ ಬಿಲ್ಡಿಂಗ್ ಇಂಗ್ಲಿಷ್‌ನ ಎಲ್ ಆಕಾರದಲ್ಲಿದ್ದು, ದೀರ್ಘವೂ ಎತ್ತರವೂ ಆದ ಜಗತಿ ಮತ್ತು ಕಾಂಪೌಂಡ್ ಹೊಂದಿತ್ತು. ಮೊದಲು ತಲುಪಿದವರು ತಮ್ಮ ಲಗೇಜುಗಳನ್ನು ಬಿಸಾಕಿ ಜಗತಿಯ ತುಂಬಾ ಮನಸಾ ಇಚ್ಚೆ ಕುಣಿದಾಡುತ್ತಿದ್ದರು. ನಮ್ಮ ಉಲ್ಲಾಸಕ್ಕೆ ಪಾರವೇ ಇಲ್ಲದಂತಾಗಿತ್ತು. ನಮ್ಮ ಸ್ವಚ್ಚಂದದ ಕುಣಿತಕ್ಕೆ ಕಡಿವಾಣ ಹಾಕಲು ಅಲ್ಲಿದ್ದ ಭಟ್ಟರಾಗಲಿ, ಸ್ವತಃ ವಾರ್ಡನ್ ಆಗಲಿ ಪ್ರಯತ್ನಿಸಲಿಲ್ಲ. ಆ ಸ್ಲಂನಿಂದ ಬಿಡುಗಡೆಗೊಂಡದ್ದು ಅವರಿಗೂ ಸಮಾಧಾನ ತಂದಿರಬೇಕು.