ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ ದೂರ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೇಲೂರು ರಘುನಂದನ್‌ ಬರೆದ ಕತೆ ‘ಏಡಿ ಅಮ್ಮಯ್ಯ’

ಗೆಂಡೇಹಳ್ಳಿಯಿಂದ ಮೂಡಿಗೆರೆಗೆ ಹೋಗುವ ದಾರಿಯಲ್ಲಿ ನಡುವೆ ಸಿಕ್ಕೊ ಪುಟ್ಟ ಗ್ರಾಮ ಬಸ್ಕಲ್ಲು. ಬಸ್ಕಲ್ಲಿನಿಂದ ಕೆಳಗಣೆಗೆ ಕಾಲು ದಾರಿ ಸುಮಾರು ಐದು ಮೈಲಿನಡೀಬೇಕು. ಭಾರತಕ್ಕೆ ಮೆಟ್ರೊಯುಗ ಬಂದಿದ್ರು, ಕೆಳಗಣೆಗೆ ಬೆಳಗ್ಗೆ ಒಂದು, ರಾತ್ರಿ ಒಂದು ಬಸ್ಸು ಕಂಡಿಲ್ಲ. ಮಲೆನಾಡ ತೋಟದ ರಸ್ತೆಗಳ ಇಕ್ಕೆಲಗಳಲ್ಲಿ ಕಣ್ಣಿಗೆ ಹಬ್ಬತರಿಸುವಂಥ ಹಸಿರೋ ಹಸಿರು. ಕಿತ್ತಲಿ, ಮೆಣಸು, ಯಾಲಕ್ಕಿ, ಕಾಫಿ ಎಲ್ಲ ಕಣ್ತುಂಬಿ ಕಿತ್ತಲಿಯ ಘಮಲು ಬಾಯಲ್ಲಿ ನೀರೂರಿಸುತ್ತೆ. ಇನ್ನೂ ರಸ್ತೆಗಳ ಸ್ಥಿತಿಯಂತೂ ಹೇಳತೀರದು.

ಮಕ್ಕಳು ಏತಾಪತ ಆಡೋವಾಗ ಆಗುವ ಅನುಭವ ಬಸ್ಸಿನಲ್ಲಿ ಕುಳಿತಾಗ ಆಗುತ್ತೆ. ಮಳೆಗಾಲ ಬಂತೆಂದ್ರೆ ಪುರುಸೊತ್ತಿಲ್ಲದಂಗೆ ಮಳೆ. ಯಾವುದಕ್ಕೂ, ಏನೂ ಕೆಲಸ ಮಾಡೋಕು ಬಿಡಲ್ಲ ಈ ಮಳೆ. ಹೀಗಿರುವ ಬಸ್ಕಲ್ ಗ್ರಾಮದಲ್ಲಿ ಹೇಳಕೆ ಮಾತ್ರ ಅಂತ ಒಂದು ಬಸ್‌ಸ್ಟ್ಯಾಂಡ್ ಇದೆ. ಇದೂವರೆಗೂ ಅಲ್ಲಿ ಯಾರೂ ಬಸ್ಸಿಗೆ ಅಂತ ನಿಂತಿರೋ ಉದಾಹರಣೆಗಳೇ ಇಲ್ಲ. ಬಸ್ಕಲ್‌ನಿಂದ ಕೆಳಗಣೆ ಕಡೆಗೆ ನಡಕೊಂಡು ಹೊರಟ್ರೆ, ಅದರಲ್ಲೂ ಮಳೆಗಾಲದಲ್ಲಿ ನಡೆಯೋ ಕೆಲ್ಸಕ್ಕೆ ಕೈ ಹಾಕಿದ್ರೇ ದೇವರೇ ಗತಿ. ಸರಿಯಾದ ಗೋಣಿ ಗೊಪ್ಪೇನೋ, ಇಲ್ಲ ಜೀಪೋ, ಕಡೇ ಪಕ್ಷ ತಲೆ ನೆನೀದಂಗೆ ಕಾಪಾಡ್ಕಳಕೆ ಒಂದು ಜಿರೀ ಕವರಾದ್ರು ದಾರಿ ಸಾಗ್ಸೋಕೆ ಇರಬೇಕು. ಇಲ್ದಿದ್ರೆ ಮುಗೀತು, ಮಳೇಲಿ ನೆಂದು ಜ್ವರ ಬಂದು ಮಲಗಿ ಒಂದೈದು ಕಂಚು ಏಡಿರಸ ಕುಡಿದು ತಾಕತ್ತು ತಗೋಬೇಕು, ಹಾಗಾಗುತ್ತೆ. ಹಿಂಗೆಲ್ಲಾ ಇರೋ ದಾರಿ ದಾಟುದ್ರೆ ಕೆಳಗಣೆ, ಮತ್ತೆ ಅಲ್ಲಿಂದ ಇನ್ನೂ ಎರಡುಕಿಲೋಮೀಟರ್ ಹೊಲಗೇರಿ. ಕಾಲುದಾರಿನೂ ಮಳೆಗೆ ಮುಚ್ಚಿಕೊಂಡು ಹುಲ್ಲು ಮುಳ್ಳು ಬೆಳ್ಕಂಡು ದಿನಕ್ಕೊಂದು ದಾರಿ ಪಡಕೊಂಡು ಊರಿನ ಜನಾನ ಕೇರಿ ಸೇರಿಸ್ಕೋತಿತ್ತು ಆ ಹೊಲಗೇರಿ. ಆ ಕೇರಿ ತುಂಬೆಲ್ಲಾ ಅಲ್ಲೇ ಹುಟ್ಟಿ ಬೆಳೆದ ಹೊಲೇರು, ಮಾದಿಗರು, ಹಸಲರು ಮತ್ತು ಒಡ್ರು ಇದ್ರು. ಈಗೀಗ ಘಟ್ಟದ ಮೇಲಿಂದ, ಆಂದ್ರದ ಕಡೆಯಿಂದ ತೋಟದ ಕೆಲಸಕ್ಕೆ ಅಂತ ಜನ ಬಂದು ಸೇರ್ಕಂಡು, ಮಲೆನಾಡಿನವರ ಜೀವನಶೈಲೀನ ಅನುಸರಿಸೋಕೆ ಶುರುಮಾಡಿದ್ದಾರೆ.

ಒಂದಿಪ್ಪತ್ತು ಗುಡಿಸ್ಲು ಇರೋ ಕೇರಿ ಹೊಲ್ಗೇರಿ. ಅಲ್ಲಿ ಮನೆ, ಗುಡ್ಲು, ನಾಡಂಚಿನ ಚಿಕ್ಕ ಚಿಕ್ಕ ಮನೆ ನಿರ್ಮಾಣವಾಗಿವೆ. ಅಲ್ಲಿ ಮನೆಗಳನ್ನು ಮಲೆನಾಡಿನ ಮಳೆಗೆ ಅನುಕೂಲ ಆಗೋ ಹಂಗೆ ಜನ ಕಟ್ಕೊಂಡಿದ್ದಾರೆ. ಮಳೆಗಾಲನ ತಡೆಯುವಂತ ದಪ್ಪ ದಪ್ಪ ಮಣ್ಣಿನ ಗೋಡೆಗಳು, ಆ ಗೋಡೆಗಳು ನೆನೀಬಾರ್ದು, ಬೂಸ್ಟು ಹಿಡಿದು ಮುಗ್ಗು ಬಂದು ಗೋಡೆಮೇಲೆ ಹಸಿರು ಪಾಚಿ, ಕಪ್ಪು ಚುಕ್ಕೆ ಪಾಚಿ ಕಟ್ಟಬಾರ್ದು ಅಂತ ಅಲ್ಲಿ ಜನ ಕಪ್ಪು ಟಾರಿನಂತ ಬಣ್ಣ ಬಳ್ದಿರ್ತಾರೆ. ಇನ್ನೂ ಒಂಚೂರು ಮನೇನ ಜೋಪಾನ ಮಾಡ್ಕೋಳವ್ರು ಈ ಟಾರಿನಂತ ಕಪ್ಪು ಬಣ್ಣದ ಜಿರೀ ತರದ ಹಾಳೆಯನ್ನು ಹೆಂಚಿನ ಮೇಲೂ ಹಾಕ್ಕಂಡಿರ್ತಾರೆ. ಆಮೇಲೆ ಗೋಡೆಗೆ ಕಪ್ಪು ಬಣ್ಣ ಬಳ್ದಿದ್ರು, ಅಡ್ಡ ತೆಂಗಿನಗರೀನೋ ಅಥವಾ ಉದ್ದುದ್ದ ಇರೋ ಜಿರೀನೋ ತಂದು ಗೋಡೆಗೆ ಆನಿಸಿ ಸ್ವಲ್ಪ ವಾಲ್ಸಿ ನೀರು ಜಾರೋತರ ಇಟ್ಟಿರ್ತಾರೆ. ಆ ನೀರು ಸುಲಭವಾಗಿ ಹರಿದು ಹೋಗ್ಲಿ ಅಂತ ಸಣ್ಣದಾಗಿ ಮಣ್ಣಲ್ಲಿ ನಾಲೆ ಮಾಡಿರ್ತಾರೆ. ಹಂಗೆ ಮನೆ ಮುಂದೆ ಎಲ್ಲ ಸಗಣಿ ಸಾರ್ಸಿ, ಮನೆ ಒಳಗೂ ಎಲ್ಲ ಸಗಣಿಬಳ್ದು, ಮನೆ ಒಳಗೆ, ಹೊರಗೆ, ಅರಗಿಗೆ, ಅಂಗಳಕ್ಕೆ ರಂಗೋಲೆ ಬಿಟ್ಟು ಬಾಕ್ಲಿಗೆ ಚಂಡುವ್ವಾನೋ, ಚೀಟೀ ಹೂವಾನೋ ಮುಡ್ಸಿರ್ತಾರೆ. ಇನ್ನು ಕೋಳಿಗಳು ತನ್ನ ಪಿಳ್ಳೆಗಳನೆಲ್ಲಾ ಸೇರಿಸ್ಕೊಂಡು ಊರು ಸುತ್ತುತ್ತ ಹಿತ್ಲ ಕಟ್ಟೆ ಹತ್ರ ಹೋಗಿ ತೊಳೆದ ನೀರಲಿದ್ದ ಅನ್ನಾನೋ, ಮನುಷ್ಯರ ತ್ಯಾಜ್ಯದಲ್ಲಿದ್ದ ಕಾಳನ್ನೋ ಆಯ್ಕಂಡು ತಿನ್ನುತಿದ್ವು. ಕೆಲವು ಕೋಳಿಗಳು ಬೆಳಿಗ್ಗೇನೇ ಕೂಗಿ ಜನಾನ ಎಬ್ಬಿಸುದ್ರೆ ಇನ್ನೂ ಕೆಲವು ಸೋಮಾರಿ ಕೋಳಿಗಳು ಮಧ್ಯಾಹ್ನ ಆದ್ರೂ ಕೂಗ್ತಾನೇ ಇದ್ವು ಹೊಲಗೇರಿಯಲ್ಲಿ. ಎಲ್ರೂ ಮನೇಲೂಸೌದೆ ಒಲೆ ಉರಿ ಹಾಕಿರ್ತಿದ್ದರಿಂದ, ಎಲ್ರೂ ಮನೇ ಒಲೆ ಕೋವೇಲಿ, ಗವಾಕ್ಷಿಲಿ ಘಮ್ ಅಂತ ಬರೋ ಹೊಗೆವಾಸನೆ ತಂಡಿ ಮಧ್ಯೆ, ಗಾಳಿ ಒಳಗೆ ಹಿತವಾಗಿರ್ತಿತ್ತು. ಮಳೆಗಾಲಕ್ಕೆಂದೇ ಈ ಕೇರಿ ಜನ ಸೌದೆ, ಪುಳ್ಳೆ, ಚೆಕ್ಕೆ ಎಲ್ಲ ಸಂಗ್ರಹಿಸಿ ನೆನೀದಂಗೆ ಜೋಪಾನ ಮಾಡಿಕೊಳ್ಳುತಿದ್ರು. ಇವರು ದುಡ್ಡಿಲ್ಲದೆ ಕೂಡ್ಸಿ, ಸಂಗ್ರಹಿಸಿ ಇಟ್ಟುಕೊಳ್ಳಬಹುದಾದ ವಸ್ತುಗಳೆಂದರೆ ಆಲವಾಣ, ಸೀಮೇ ಸೀಗೆಪುಳ್ಳೆ, ಬೇಡದ ಕಾಪಿಬಡ್ಡೆ, ಮರದಲ್ಲಿ ಎದ್ದಿರೋ ಚಕ್ಕೆ, ಬೇಡದೇ ಬಿದ್ದಿರೋ ಸಣ್ಣ ಸಣ್ಣ ಮರದ ದಿಮ್ಮಿಗಳು, ಕಡ್ಡಿ, ಕೋಲುಸೌದೆ, ಇವೇ… ಒಲೆ ಉರಿ ಒಂದಿದ್ರೆ, ಮೈಬಿಸಿ ಮಾಡ್ಕೊಬಹುದು, ಬಿಸಿನೀರು ಕಾಯ್ಸಿಕೊಂಡು ಕುಡೀಬಹುದು, ಬಿಸಿನೀರು ಹುಯ್ಕಬಹುದು ಅಷ್ಟೇ. ಅಷ್ಟಕ್ಕೆ ಜೀವನ ತೃಪ್ತಿಯಾಗಿ ನಡೆಯೋದಿದ್ರೆ ಆ ಹೊಲಗೇರಿಯ ಅಮ್ಮಯ್ಯನಂಥವರ ಬದುಕು ಅದೆಷ್ಟು ಚೆನ್ನಾಗಿರ್ತಿತ್ತಿತ್ತೋ ಏನೋ…!!

ಅಮ್ಮಯ್ಯ ಹೊಲ್ಗೇರಿಯ ಹೆಂಗ್ಸು. ಅವಳ ಜೊತೆಗಿದ್ದವನು ಅವಳ ಮಗ ನಾಕನೇ ಕ್ಲಾಸ್ ಓದುತ್ತಿರೋ ಗಿಡ್ಡ. ಬಸ್ಕಲ್ಲಿನಲ್ಲಿರೋ ಉಪ್ಪಿಟ್ಟಿನ ಶಾಲೆಗೆ ದಿನಾಗ್ಲು ನಡಕೊಂಡು ಹೋಗ್ತಿದ್ದ. ಕೇರೀಲಿ ಮೂರ್ನಾಲ್ಕು ಹುಡುಗರು ಕಲಿಯಕೆ ಹೋಗ್ತಿದ್ರು, ಅವರ ಜೊತೆ ಗಿಡ್ಡನೂ ಶಾಲೆಗೆ ಹೋಗ್ತಿದ್ದ, ಬರ್ತಿದ್ದ. ಅಮ್ಮಯ್ಯನಿಗೆ ಗಿಡ್ಡ, ಗಿಡ್ಡನಿಗೆ ಅಮ್ಮಯ್ಯನೇ ಎಲ್ಲ. ಇನ್ನೂ… ಅಮ್ಮಯ್ಯನ ಗಂಡ ಈರ ಘಟ್ಟದ ಮೇಲಿಂದ ವಲ್ಸೆ ಬಂದಿದ್ದ ರತ್ನಿ ಮಗಳು ಸುಂದರಿ ಜೊತೆ ಓಡಿ ಹೋಗಿ ಆರು ವರ್ಷ ಆಯ್ತು. ಚಿಕ್ಕಮಗ್ಳೂರಿನ ಹತ್ರ ಇರೋ ರತ್ನಗಿರಿ ಎಸ್ಟೇಟ್‍ನಲ್ಲಿ ಇಬ್ರೂ ಕೆಲ್ಸ ಮಾಡ್ತಾವ್ರೆ ಅಂತ ವರ್ತಮಾನ ಬಂದ್ರೂ ಅಮ್ಮಯ್ಯ ಹುಡುಕಿಕೊಂಡು ಹೋಗಿರಲಿಲ್ಲ. ಅಮ್ಮಯ್ಯ ಅಪ್ಪಟ ಮಲೆನಾಡ ಹೆಣ್ಣು, ಸೌಂದರ್ಯದಲ್ಲಿ ಸುಂದ್ರಿಗಿಂತ ನಾಲ್ಕೈದು ಪಟ್ಟು ಚೆನ್ನಾಗೆ ಇದ್ಲು. ಆದ್ರೆ ಈರಂಗೆ ಅದೇನು ಮೋಡಿ ಮಾಡಿದ್ಲೋ ಸುಂದ್ರಿ, ಅವಳ ಜೊತೆ ಹೋದ. ಗಂಡ ವಾಪಸ್ ಬರ್ಲಿ ಅಂತ ಕೆಳಗಣೆ ಜಾತ್ರೆಲಿ ದೇವರಿಗೆ ಹರಕೆ ಹೊತ್ಲು, ಭೂತಕ್ಕೆ ಬೇಡ್ಕಂಡ್ಲು ಅಮ್ಮಯ್ಯ. ಏನ್ಮಾಡುದ್ರು ಅವನು ಬರ್ಲೇ ಇಲ್ಲ. ಕೊನೆಗೆ ಈರ, ಸುಂದ್ರಿ ಇಬ್ರೂ ನಿರ್ನಾಮ ಆಗ್ಲಿ ಅಂತ ಲೋಕ್ದಮ್ಮನ ಹತ್ರ ಹರ್ಕೆ ಹೊತ್ತು ಸುಮ್ಮನಾದ್ಲು. ಬಿಟ್ಟು ಹೋಗಿದ್ದ ಎಳೆಕೂಸು, ಒಂದು ಈಗ್ಲೋ ಆಗ್ಲೋ ಅನ್ನೋ ಗುಡಿಸ್ಲು, ಈರನ ಕಾಣ್ಕೆ ಅಮ್ಮಯ್ಯಂಗೆ. ಹೇಳಕೆ, ಕೇಳಕೆ ಅವನಿಗೆ ಮನೇಲಿ ಒಂದು ಹಿರೀಹುಳಾನು ಇರ್ಲಿಲ್ಲ. ಇನ್ನೂ ಆ ಮುರುಕ್ಲು ಗುಡಿಸ್ಲಲ್ಲಿ ಗಿಡ್ಡ, ಅಮ್ಮಯ್ಯ ಇಬ್ರೆ ಆದ್ರು. ಹೊಟ್ಟೆಗೆ ಕೂಲಿನಾಲಿ ಮಾಡ್ತಿದ್ಲು. ರಾತ್ರಿ ಕಳಿಯಕೆ ಪಾಕೀಟು ಶರಾಬು ಕುಡೀತಿದ್ಲು. ಈಚಲೆಂಡ ಅಂದ್ರೆ ಪ್ರಾಣ ಅವಳಿಗೆ. ಆದ್ರೆ ಅದು ಆರು ತಿಂಗ್ಳಿಗೋ ವರ್ಷಕ್ಕೋ ಸಿಕ್ತಿತ್ತು ಈಕೆಗೆ.

ಮಗ ಅಂದ್ರೆ ಪ್ರಾಣ ಅಮ್ಮಯ್ಯನಿಗೆ. ಶೆಟ್ರು ಮಗ ಮೂರ್ತಿನ ನೋಡಿ ತನ್ನ ಮಗ ತೋಟದ ಕೆಲ್ಸ ಮಾಡ್ಬಾರ್ದು ಅಂತ ಕಲಿಯಕೆ ಕಳ್ಸಿದ್ಲು. ಇನ್ನು ಅಮ್ಮಯ್ಯನ ಗುಡಿಸ್ಲು ಚಿಕ್ಕದೇ. ದಪ್ಪ ಗೋಡೆ ಇತ್ತು. ಅದಕ್ಕೆ ಹೊರಗಡೆಯಿಂದ ಕಪ್ಪು ಟಾರು ಬಳಿದಿದ್ಲು. ಆದ್ರೆ ಅದು ಚಕ್ಕೆ ಎದ್ದು ಕುಷ್ಠ ಹಿಡಿದಂಗಾಗಿತ್ತು. ಮಾಡಿಗೆಲ್ಲ ಸ್ವಲ್ಪ ನಾಡಂಚು, ಸ್ವಲ್ಪ ಗರಿ ಹಾಕಿ ಮುಚ್ಚಿದ್ಲು. ತಾಟಿಗೆ ಹಾಕಿದ್ದ ತೀರುಗಳು, ದಬ್ಬೆಗಳು ಅಷ್ಟಕ್ಕಷ್ಟೆ ಇದ್ವು. ಇವಳ ಮನೆ ಬೇರೆ ತಗ್ಗಿನಲ್ಲಿತ್ತು. ಹಂಗಾಗಿ ಮಳೆಗಾಲದಲ್ಲಿ ಊರು ತೊಳ್ದ ನೀರೆಲ್ಲ ಇವ್ಳ ಮನೆ ಹತ್ರನೇ ಬಂದು ನಿಲ್ತಿತ್ತು. ಒಟ್ರಾಸಿ ಮೂರ್ನಾಕು ತಿಂಗ್ಳು ಇವ್ಳ ಮನೆ ಒಂದು ಕೋಡಿಹಳ್ಳದ ತರ ಆಗಿಬಿಡ್ತಿತ್ತು. ಇದ್ದಿದ್ದರಲ್ಲೆ ಅಟ್ಟ ಮಾಡಿಕೊಂಡು ಸೌದೆ, ಬಟ್ಟೆ ಬರೆ, ಗೋಣಿಗೀಣಿ, ಮಗನ ಪುಸ್ತಕ, ಸೀಸದ ಕಡ್ಡಿ ಎಲ್ಲ ಗುಡಿಸಲ ಒಳಗೆ ಇಟ್ಕೊಂಡು ಜೀವನ ಮಾಡ್ತಿದ್ಲು ಅಮ್ಮಯ್ಯ.

“ಆಷಾಡದ ಹಬ್ಬ ಆಗಿ ಮೂರು ದಿನ ಆಯ್ತು. ಈ ಹಾಳು ಮಳೆ ಇನ್ನೂ ಬಿಟ್ಟಿಲ್ಲ, ಹುಯ್ಯೋ!! ಅಂತ ಸುರಿತಾ ಉಂಟು, ದೈಯ್ಯ ಮಳೆ. ಹೊತ್ತಿಲ್ಲ-ಗೊತ್ತಿಲ್ಲ, ಒಂದೇಸಮನೆ ಬಾಣ್ತಿಗೆ ಸನ್ನಿ ಮೆಟ್ಟಗಂಡಂಗೆ ಮೆಟ್ಟಗಂಡು ಸುರೀತಿದೆ. ಕೊಚ್ಚಗತೆಗೆ ಕೂಗಿದ್ರೂ ಶೆಟ್ರು. ಹೋಗನ ಅಂದ್ರೆ ತೋಟದಲ್ಲಿ ಬರೀ ಹುಸುಗು, ಜಾರ್ಕೆ, ಮಳೆ ಕಾಟ ಬೇರೆ. ಛತ್ರಿ ಮಖ ಕಂಡು ವರ್ಷಗ್ಳೇ ಆಯ್ತು. ಅದೂ ಶೆಟ್ರ ಹೆಂಡ್ತಿ ಒಂದು ಹಳೇ ಛತ್ರಿ ಕೊಟ್ಟಿದ್ಲು. ಅದು ಹತ್ತು ವರ್ಷಗಳು ಹಳೇದಿರಬಹುದೇನೋಪ್ಪ!! ತುದಿ ಕಿತ್ತು ಕರಿಬಟ್ಟೇನ ಎಳಕೊಂಡು ಗೊಬ್ಬರದ ಬಿಳೀ ಗೋಣಿದಾರದಲ್ಲಿ ದಬ್ಳ ಹಾಕಿ ಹೊಲಕಂಡಿದ್ದೆ. ಅದ್ರ ಮರದಿಡಿಕೊಟ್ಟಾಗ್ಲೆ ಮಂಗಮಾಯಾ ಆಗಿತ್ತು. ಈಗ ಅದೂ ಮೂಲೆಗೆ ಕುಂತಿದೆ. ಗೊಪ್ಪೇನೂ ಇಲ್ಲ ಅದಕ್ಕೂ ಬರ ಈಗ. ಜಿಟಿ ಜಿಟಿ ಸುರಿಯೋ ಮಳೆಗೇ ಎಷ್ಟು ಅಂತ ಗೋಣಿಗೊಪ್ಪೆ ಹೊಂದಿಸಿಕೊಳ್ಳೋದು. ಮೊನ್ನೆ ಇನ್ನೂ ಶೆಟ್ರು ತೋಟದ ರೊಬಸ್ಟಾ ತುಂಬೋ ಕಾಪಿಚೀಲನ ಕದ್ದು ತಂದು ಗೊಪ್ಪೆ ಮಾಡಿದ್ದೆ. ಅದೂ ಈಗ ನನ್ನ ಸುಪರ್ತಿನಿಂದ ಶಾಲೆಗೆ ಹೋಗೋ ನನ್ಮಗನಿಗೆ ಹೋಗಿದೆ. ತೋಟಕ್ಕೆ ಹೋಗೋ ಸಮಯ ಬೇರೆ ಆಗ್ತಾ ಇದೆ. ಸಗಣಿ ಬಳಿದಿದ್ದ ಅಟ್ಟಿ ಮಳೆ ಬಂದು ಜಾರಕೆ ಆಗಿದೆ. ಅದು ವಣಗದೇ ವಣಗದೇ ಪಾಚಿ ಕಟ್ಟಿ ಕಾಲಿಡಕ್ಕೂ ಆಗ್ತಾ ಇಲ್ಲ. ಅಂಗಳ ದಾಟಕೆ ಅಂತ ಮಾಡ್ಕೊಂಡಿದ್ದ ಕಲ್ಲಿನ ದಾಟುಸೇತ್ವೆ ಬೇರೆ ನೀರಲ್ಲಿ ಮುಚ್ಚಿಹೋಗಿದೆ. ಗುಡಿಸ್ಲು ಒಂಚೂರು ಎತ್ರದಲ್ಲಿದ್ದಿದ್ರಿಂದ ನಾನು ನನ್ಮಗಾನೂ ಬಚಾವಾಗಿದ್ದೀವಿ. ಏನ್ಮಾಡುದ್ರು ಮನೆ ಮಾಡಿನ ಮೇಲೆ ಸುರಿಯೋ ಮಳೆನೀರಿಂದ ಮಾತ್ರ ತಪ್ಪಿಸಿಕೊಳ್ಳೋಕೆ ಆಗಲಿಲ್ಲ” ಅಂತ ಯೋಚಿಸ್ತಾ ಅಮ್ಮಯ್ಯ ಗುಡಿಸ್ಲು ಬಾಕ್ಲಲ್ಲಿ ನಿಂತ್ಕಂಡಿದ್ಲು.

ನೋಡ್ತಾ ನಿಂತ್ರೆ ಈ ವಾರನೂ ಶನಿವಾರ ಸಂತೆಗೆ ಹೋಗಿ ಮೀನು ತರಕೆ, ಅಕ್ಕಿ ತರಕೆ, ಉಪ್ಪು ಹುಳಿ ತರಕೆ ಕಡೇ ಪಕ್ಷ ಒಂದು ಪಾಕೀಟಾದ್ರು ಕುಡಿಯಕೆ ಆಗಲ್ಲ ಅಂತ ತೀರ್ಮಾನಿಸಿ ಏನಾದ್ರು ಮಾಡಿ ಶೆಟ್ರ ತೋಟಕ್ಕೆ ಕೊಚ್ಚಗತೆಗೆ ಹೋಗೇ ಬಿಡಣ ಅಂತ ತಯಾರಾದ್ಲು ಅಮ್ಮಯ್ಯ.
ಹಳೇ ತೂತು ಹಿಡಿದಿರೋ ಹರಕಲು ಗೊಪ್ಪೆ ಹಾಕ್ಕೊಂಡು ಅಮ್ಮಯ್ಯ ಕೆಳಗಣೆ ಶೆಟ್ರ ತೋಟದ ಕಡೆ ದೊಡ್ಡ ಹೆಜ್ಜೆ ಹಾಕ್ತಾ ನಡಿಯಕೆ ಶುರುಮಾಡಿದ್ಲು. ಗೊಪ್ಪೆ ತೂತಿನಿಂದ ನೀರಿಳಿದು ಅರ್ಧ ನೆಂದೇ ಹೋಗಿದ್ಲು. `ಹೋದವಾರ ಸಂತೇಲಿ ಗೊಪ್ಪೆ ಒಳಕ್ಕೆ ಹಾಕ್ಕೊಳ್ಳೋ ಒಂದು ನೀಲಿ ಬಣ್ಣದ ಜೀರೀ ಕವರ್ ತಗೋಳಕು ಆಗ್ಲಿಲ್ಲ’ ಅಂತಮನಸಲ್ಲೇ ಅದುಕೊಂಡು ಬಿರಬಿರ ಅಂತ ನಡದ್ಲು. ಕೂಲೀನೂ ಇಲ್ದೆ, ಕೆಲ್ಸಾನೂ ಇಲ್ದೆ ಇದ್ದಬದ್ದ ದುಡ್ಡನೆಲ್ಲ ಪಾಕೀಟಿಗೆ ಸುರ್ದು ಉಳಿದ ಹತ್ತು ರೂಪಾಯಿ ಚಿಲ್ಲರೆ ದುಡ್ಡಲ್ಲಿ ಬಸ್ಕಲ್‌ಮ ಬಾಯಮ್ಮನ ಹೋಟ್ಲಲ್ಲಿ ಹುರಿದ ಮೀನು ತಗಂಡು ತಿಂದಿದ್ಲು. ಇನ್ನೂ ವಾರ ಇಡೀ ಮಗ ಶಾಲೆಯಿಂದ ತರೋ ಉಪ್ಪಿಟ್ಟಿನಲ್ಲೇ ಕಾಲ ಹಾಕಿದ್ಲು.

ಕೆಲ್ಸಕ್ಕೆ ತೋಟದ ಕಡೆ ಹೋಗೋವಾಗ ದಾರೀಲಿ ಸಿಗೋ ಲೋಕದಮ್ಮನ ದೇವಸ್ಥಾನದ ಹತ್ರ ಬಂದಾಗ ಅಮ್ಮಯ್ಯ ಏನಾಯ್ತೋ ಏನೋ ದೇವರಿಗೆ ಬಯ್ಯಕೆ ಶುರುಮಾಡುದ್ಲು. “ನೀನು ತೋಟ ಕಾಯ್ತಿಯಂತೆ…! ತೋಟದಲ್ಲಿರೋ ಕಿತ್ತಲೀ, ಯಾಲಕ್ಕಿ, ಕಾಫಿ, ಮೆಣ್ಸು, ಮರಗಿರ, ಸೌದೆಗಿವದೆ ಎಲ್ಲನೂ ಯಾರೂ ಕದೀದಂಗೆ ಕಾಪಾಡ್ತಿಯಂತೆ…! ಯಾಕೆ…? ಶೆಟ್ರು ವರ್ಷಕೊಂದ್ಸಲ ಕುರಿ ಹೊಡ್ದು ಹಬ್ಬ ಮಾಡ್ತಾರೆ ಅಂತಾನ…? ತೋಟಕಾಯ್ತಿಯ…! ತೋಟ ಇರೋವರನ್ನೂ ಕಾಯ್ತಿಯಾ, ಕಾಪಾಡ್ತೀಯ…!! ತೋಟದ ಕೆಲ್ಸ ಮಾಡೋರನ್ನ ಯಾಕೆ ಕಾಯಲ್ಲ ನೀನು…???” ಅಂತ ಗೊಣಗ್ತಾ ಐದು ನಿಮಿಷ ಅಲ್ಲೇ ನಿಂತು ಮರದ ಕೆಳಗೆ ಇದ್ದ ರೂಪವಿಲ್ಲದ ಕಲ್ಲಿನ ಲೋಕದಮ್ಮನ ಹತ್ರ ಕೇಳಿದ್ಲು. ದಿನನಿತ್ಯ ಪೂಜೆಗೊಂಡಿರುತ್ತಿದ್ದ ಲೋಕದಮ್ಮನ ಬಾಹ್ಯ ರೂಪ ಸ್ವಲ್ಪ ಬದಲಾಗಿತ್ತು. ಮುಡಿಸಿದ್ದ ಕಾಡು ಹೂಗಳೆಲ್ಲಾ ಹಾರಿ ಗದ್ದುಗೆ ಮುಂದೆ ಬಿದ್ದಿದ್ವು. ಅವು ಮಳೆ ನೀರಿಗೆ ಕೊಳೆಯೋಕೆ ಶುರುವಾಗಿದ್ವು. ಹಚ್ಚಿದ್ದ ಅರಿಶಿನ ಕುಂಕುಮ ಎಲ್ಲ ಮಳೆ ನೀರಲ್ಲಿ ತೊಯ್ದು ನೆಲ ಸೇರಿ ಬಣ್ಣದ ಚಿತ್ತಾರ ಬಿಡಿಸಿತ್ತು. ಲೋಕದಮ್ಮ ಎಂದಿಗಿಂತ ಯಾವ ಅಲಂಕಾರವೂ ಇಲ್ದೆ ಮಳೇಲಿ ನೆನೀತಾ ಸುಮ್ಮನೆ ಕೂತಿದ್ಲು. ದೀಪ ಹಚ್ಚಕೆ ಅಂತ ಇಟ್ಟಿದ್ದ ಮಣ್ಣ ಹಣತೆ ಒಳಗೆ ನೀರು ತುಂಬಿಕೊಂಡಿತ್ತು. ಇನ್ನೂ ಅದರಲ್ಲಿದ್ದ ಬತ್ತಿ, ದೀಪ ಮೇಲ್ಮೈ ಎಲ್ಲ ಜಿಡ್ಡು ಜಿಡ್ಡಾಗಿತ್ತು. ಲೋಕದಮ್ಮನ ಆಯುಧ ಜಿಂಕೆಕೋಡು, ಬಾರಕೋಲು ಎಲ್ಲ ಗಾಳಿಗೆ ವಾಲಿಕೊಂಡಿತ್ತು. ಮಳೆಯಿಂದ ಯಾರು ಪೂಜಿಸಿರಲಿಲ್ಲ ಅಂತ ಲೋಕದಮ್ಮನ ಗದ್ಗೆ ನೋಡಿದ್ರೆ ಗೊತ್ತಾಗ್ತಿತ್ತು. ಇದನೆಲ್ಲಾ ದಿಟ್ಟಿಸಿ ನೋಡಿದ ಅಮ್ಮಯ್ಯ ದೇವರನ್ನು ನೋಡುತ್ತಾ ಮತ್ತೆ ಮಾತಾಡೋಕೆ ಶುರು ಹಚ್ಕೊಂಡ್ಳು.

“ಲೋಕನೇ ಕಾಪಾಡೋ ಲೋಕದಮ್ಮ ನೀನು…! ಶಕ್ತಿಶಾಲಿ ತಾಯಿ ನೀನು. ಈ ಮಳೇನ… ಈ ಗಾಳೀನ ತಡಕೊಳ್ಳೋಕೆ ನಿನ್ನ ಕೈಯಲ್ಲೇ ಆಗ್ತಿಲ್ಲ. ಹಸ್ರು ಉಸ್ರು ಎಲ್ಲಾನು ಕೊಟ್ಟೋಳೆ ನೀನು… ನಿಂಗೇ ಹಿಂಗಾದ್ರೆ, ನಾನು ಹೊಲ್ಗೇರಿ ಅಮ್ಮಯ್ಯ… ನನ್ನ ಬಿಡುತ್ತ ಈ ಮಳೆ, ಈ ಗಾಳಿ, ಈ ಕಷ್ಟ ನಷ್ಟ ಎಲ್ಲ” ಅಂತ ದೇವರಿಗೆ ಕೈಮುಗದು ಅಂದ ಮಾತುಗಳನ್ನೆಲ್ಲಾ ವಾಪಸ್ ತಗಂಡು ಕೆಳಗಣೆ ಕಡೆ ಹೊರಟ್ಳು. ಸೀರೆ ಎರಡೆಳೆ ಮಾಡಿ ಮೇಲಕ್ಕೆತ್ತಿ ಕಟ್ಟಿಕೊಂಡಿದ್ಲು. ಮೇಲಿನ ಪದರ ನೆಂದು ತೊಟ್ಟಿಕ್ಕೋಕೆ ಶುರು ಆಗಿತ್ತು. ನಡೀಬೇಕಾದ್ರೆ ಬಿಳುಪಾಗಿದ್ದ ಕಾಲು ಕೆಸರಿನಿಂದ ಕೆಂಪಾಗಿ ಹೆಜ್ಜೆ ಇಡಬೇಕಾದ್ರೆ ಪಿಚಕ ಪಿಚಕ ಅಂತ ಶಬ್ದ ಮಾಡ್ತಿತ್ತು. ದಾರೀಲಿ ಹೋಗ್ತಾ ಸಾಗವಾನಿ ಮರದ ಕೆಳಗೆ ಕಾಡು ಕೋಳಿ ಬಂದು ಗೂಡುಸ್ಕೊಂಡು ಕೂತಿತ್ತು. ಅಮ್ಮಯ್ಯನಿಗೆ ತಡಕಳಕೆ ಆಗದಷ್ಟು ಖುಷಿ ಆಯ್ತು. ಕೋಳಿ ಹಿಡಿದ್ರೆ ಎರಡು ದಿನ ನಾನು, ಗಿಡ್ಡ ಹಬ್ಬ ಮಾಡಬಹುದು ಅಂತ ಲೆಖ್ಖಾಚಾರ ಹಾಕೋ ಹೊತ್ಗೆ ಶೆಟ್ರ ತೋಟದ ಕೆಲಸದಗ್ಯಾನ ಬಂದು ಆ ಖುಷಿ ಆಗ್ಲೆ ಇಲ್ಲದಂಗಾಯ್ತು.

ಲೋಕದಮ್ಮನಿಗೆ ಕೈ ಮುಗಿದಿದಕ್ಕೇ ಈ ಫಲ ಅಂತ ಮನಸಲ್ಲಿ ಅಂದಕಂಡ್ಳು. ಮತ್ತೆ ತೋಟದ ಕಡೆ ನಡೀತಾ ನಡೀತಾ…
“ದೇವರು ಕೊಟ್ಟು ನೋಡ್ತಾನೆ, ಕಿತ್ಗಂಡು ನೋಡ್ತಾನೆ. ಕೊಟ್ಟಾಗ ಬಿಟ್ರೆ ಮತ್ತೆ ಅದು ಸಿಕ್ಕಲ್ಲ. ಮಳೇನೋ… ಗಾಳೀನೋ… ಕೊಟ್ಟಿದ್ದನ್ನ ಪಡ್ಕಬೇಕು. ಎಷ್ಟೆ ಕಷ್ಟ ಬಂದ್ರೂ ಅವಕಾಶ ಬಂದಾಗ ಬಿಡಲೇಬಾರ್ದು. ಹಂಗೆ ಬಿಟ್ಟು ಬಿಟ್ಟೂ ನಾವು ನರಮನುಸ್ರು ಹಿಂಗಾಗಿರೋದು.” ಅಂತ ತನ್ನ ಹಣೇಬರಹವನ್ನು ತಾನೇ ಬಯ್ಯಕಂಡು ಹುಯ್ತಾ ಇರೋ ಮಳೇಲಿ ಅಮ್ಮಯ್ಯ ಶೆಟ್ರ ತೋಟಕ್ಕೆ ಬಂದ್ಲು. ಕೊಳೆ, ಎಣ್ಣೆಯಿಂದ ಜಿಡ್ಡಾಗಿದ್ದ ಅವಳ ತಲೆಕೂದ್ಲು ನೆಂದು ನೀರು ಜಾರದೆ, ಬಾಚದೇ ಇರೋ ತಲೇಲಿ ಹೇನು ಸಾಲುಗಟ್ಟಿರೋ ತರ ಅಲ್ಲೆ ಮುತ್ತಿನಂಗೆ ನೀರ ಹನಿ ಸಾಲುಗಟ್ಟಿತ್ತು. ಅವ್ಳು ತೋಟಕ್ಕೆ ಕೆಲ್ಸಕ್ಕೆ ಬರೋ ಹೊತ್ಗೆ ರಂಗಿ, ಲಲ್ತಿ, ಪ್ರೇಮಿ ಘಟ್ಟದ ಮೇಲಿಂದ ಬಂದಿದ್ದ ಭದ್ರ, ಮುನಿಸಾಮಿ, ಎಂಕಟಯ್ಯ ಎಲ್ಲ ಕೊಚ್ಚಗತೆ ಶುರುಮಾಡ್ಕಂಡಿದ್ರು. ಶೆಟ್ರು ಕರೀಕೋಟು ಹಾಕ್ಕಂಡು ಅದರ ಮೇಲೊಂದು ಜೀರೀ ಇರೋ ಗೋಣಿಗೊಪ್ಪೆ ಹಾಕ್ಕಂಡು, ಒಳಗೆ ತಲೆಗೆ ಹುಲ್ಲನ್ನಿನ ಟೋಪಿ ಹಾಕ್ಕಂಡು ಕೈಲೊಂದು ದೊಡ್ಡ ಕೊಡೆ ಹಿಡ್ಕಂಡು, ಕಾಲಿಗೆ ಮಂಡಿ ತನಕ ಬರೋ ಉದ್ದದ ರಬ್ಬರ್‌ಬೂಡ್ಸು ಹಾಕ್ಕೊಂಡು ಸುರಿಯೋ ಮಳೇಲೆ ಕೆಲ್ಸ ಮಾಡಿಸ್ತಿದ್ರು. ಯಾರೋ ಬರೋ ಸದ್ದು ಕೇಳ್ಸಿಕೊಂಡು ಕಾಲ್ದಾರಿ ಕಡೆ ನೋಡಿ ಅಮ್ಮಯ್ಯ ಅಂತ ಖಾತ್ರಿ ಆದ್ಮೇಲೆ,

“ಹೊಯ್… ಅಮ್ಮಯ್ಯ, ಯಾಕೊ ನಿಧಾನ… ಈಗ ತೋಟ ಕಾಣ್ತೇನೋ… ಎಲ್ರೂ ಅರ್ಧ ಕೆಲ್ಸ ಮಾಡವರೆ, ನಿಂಗೆ ಈಗ ಕೊಡೋ ಕೂಲಿನೂ ದಂಡ” ಅಂದ್ರು.

ಎಲ್ರೂ ಮನೇಲೂಸೌದೆ ಒಲೆ ಉರಿ ಹಾಕಿರ್ತಿದ್ದರಿಂದ, ಎಲ್ರೂ ಮನೇ ಒಲೆ ಕೋವೇಲಿ, ಗವಾಕ್ಷಿಲಿ ಘಮ್ ಅಂತ ಬರೋ ಹೊಗೆವಾಸನೆ ತಂಡಿ ಮಧ್ಯೆ, ಗಾಳಿ ಒಳಗೆ ಹಿತವಾಗಿರ್ತಿತ್ತು. ಮಳೆಗಾಲಕ್ಕೆಂದೇ ಈ ಕೇರಿ ಜನ ಸೌದೆ, ಪುಳ್ಳೆ, ಚೆಕ್ಕೆ ಎಲ್ಲ ಸಂಗ್ರಹಿಸಿ ನೆನೀದಂಗೆ ಜೋಪಾನ ಮಾಡಿಕೊಳ್ಳುತಿದ್ರು.

ಅದಕ್ಕೆ ಅಮ್ಮಯ್ಯ “ಮಳೇ ಸಾಕರ್ರೇ… ಏರಿ ಮೇಲೆ ಜೋರಾಗಿ ಅಂಬೋ! ಅಂತ ಸುರೀತಿತ್ತು. ಅದ್ಕೆ ಅಲ್ಲೆ ನಿಂತಿದ್ದೆ.”
“ಸರ್ಸರಿ ಹತಾರ ತಂದಿದಿಯೇನೋ?”

“ಇಲ್ಲ ಶೆಟ್ರೆ, ಗೊಪ್ಪೆ ಗಲಾಟೇಲಿ, ಮಳೆ ಗೋಳಲ್ಲಿ ನನ್ನ ಬುದ್ಧಿಗೆ ಹೊಳೀಲೇ ಇಲ್ಲ.”

“ಮತ್ತೆ ಹತಾರ ಇಲ್ದೆ ಕೊಚ್ಚಗತೆ ಹೆಂಗೆ ಮಾಡ್ತೀಯಾ ದೈಯಿಡಕಿ…”

ಕೊಚ್ಚಗತೆಗೆ ಬಾಗಿದ ಕುಡ್ಲಿನ ತರದ ಕಡಗತ್ತಿ ಬೇಕಾಗಿತ್ತು. ಅಮ್ಮಯ್ಯನ ಬಳಿ ಅಂದು ಹತಾರವಿರಲಿಲ್ಲ. ತೆಪ್ಪಗೆ ನಿಂತಿದ್ದ ಅಮ್ಮಯ್ಯನ್ನ ನೋಡಿ ಶೆಟ್ರು
“ನೋಡೋ ಅಮ್ಮಯ್ಯ, ಹತಾರ ಇಲ್ದೆ ಕೆಲ್ಸ ನಡಿಯಲ್ಲ. ಈ ಮಳೇಲಿ ನಾನು ಜೀಪು ತಗಂಡು ಮನೇಗೆ ಹೋಗಿ ಹತಾರ ತರೋಕು ಆಗಲ್ಲ. ಇವತ್ತು ಕೆಲ್ಸ ಬೇಡಹೊಲಗೇರಿ ಕಡೆ ನಡಿ” ಅಂದ್ರು.

ಶನಿವಾರ ಸಂತೆಯ ಲೆಕ್ಕಾಚಾರ ಅಮ್ಮಯ್ಯನ ತಲೆಗೆ ಬಂದು “ಬೇರೆ ಏನಾರ ಮಾಡ್ತೀನಿ ಶೆಟ್ರೆ, ಸುಮ್ಕಿರು ಅಂತ ಮಾತ್ರ ಹೇಳ್ಬೇಡಿ” ಅಂತ ಗೋಗರೆದ್ಲು. ಅದಕ್ಕೆ ಶೆಟ್ರು

“ಎಂಥ ಮಾಡ್ತೀಯೇ…? ಸುಮ್‌ಸುಮ್ನೆ ಗೆಯ್ಯಕೆ ಇಲ್ಲಿ ಕ್ಯಾಮಿಲ್ಲ” ನಡೀ ಅಂದ್ರು.

ನಿರಾಸೆಯಿಂದ ಮತ್ತೆ ಮನೆ ಕಡೆ ಮುಖ ಮಾಡಿದ್ಲು ಅಮ್ಮಯ್ಯ. ಕೂಗಳತೆ ದೂರಕ್ಕೆ ಹೋಗೋ ಹೊತ್ಗೆ ಶೆಟ್ರು ಏನೋ ಗ್ಯಾನ ಬಂದವರ ತರ ನೆನಕಂಡು “ಹೋಯ್ ಅಮ್ಮಯ್ಯ, ಅಮ್ಮಯ್ಯ… ಬಾರೋ ಇಲ್ಲಿ” ಅಂತ ಕೂಗುದ್ರು. ಮಳೆ ಸದ್ದಿನ ನಡುವೆ ಅಮ್ಮಯ್ಯಂಗೆ ಶೆಟ್ರ ಕೂಗು ಕೇಳಿಸಲಿಲ್ಲ. ಸಾಗವಾನಿ ಮರದ ಕೆಳಗೆ ಕೋಳಿ ಇನ್ನೂಕೂತೇ ಇರುತ್ತೇನೋ ಅಂತ ಕೋಳಿ ಕನಸು ಕಾಣ್ತಾ ನಡೀತಿದ್ಲು. ಮತ್ತೆ ಜೋರಾಗಿ “ಅಮ್ಮಯ್ಯ, ಅಮ್ಮಯ್ಯ” ಅಂತ ಶೆಟ್ರು ಕೂಗುದ್ರೂ ಕೇಳ್ದೆ ಅಮ್ಮಯ್ಯ ಬರಲಿಲ್ಲ. ಆಗ ಘಟ್ಟದ ಮೇಲಿನ ಮುನಿಸಾಮಿ ಹತ್ರ ಅಮ್ಮಯ್ಯನ್ನ ಕರೀ ಅಂತ ಹೇಳಿಕಳಿಸಿದ್ರು ಶೆಟ್ರು.

ತೊಳೆದ ಕೆಂಡದ ತರ ಇದ್ದ ಮುನಿಸಾಮಿ ಏದುಸಿರು ಬಿಡ್ತಾ, ಓಡಿ ಬಂದು ಅಮ್ಮಯ್ಯಂಗೆ,
“ಶೆಟ್ರು ಕರೀತಾವ್ರೆ” ಅಂದ. ಅಷ್ಟು ಮಾತ್ರ ಹೇಳ್ದೆ, “ಮಳೇಲಿ ನೆಂದ್ರೂ ಚೆನ್ನಾಗೆ ಕಾಣ್ತೀಯಾ…!!” ಅಂತ ಮಲೆನಾಡ ಅಮ್ಮಯ್ಯಂಗೆ ಯಾವ ನಾಚಿಕೆ ಇಲ್ದೆ ಉದ್ದೇಶಿತ ಅಭಿಪ್ರಾಯವನ್ನು ಅಂಗಾಂಗ ಅಭಿನಯ ಸಮೇತ ಹೇಳಿದ. ಅದಕ್ಕೆ ಅಮ್ಮಯ್ಯ “ಘಟ್ಟದ ಮೇಲಿನ ಕೊಬ್ಬು ಘಟ್ಟದ ಕೆಳಗೆ ತೋರಿಸಬೇಡ… ನಾನು ಕೆಲ್ಸಕ್ಕೆ ಬಂದಿರೋದು, ನಲ್ಸೋಕೆ ಅಲ್ಲ” ಅಂತ ಪೈಡನೇ ಹೇಳಿ ಶೆಟ್ರ ಕಡೆ ಹೊರಟ್ಳು. ಮತ್ತೆ ಬಂದ ಅಮ್ಮಯ್ಯನ ನೋಡಿದ ಶೆಟ್ರು “ನೋಡೋ ಅಮ್ಮಯ್ಯ, ಹೆಂಗೂ ಹತಾರ ಇಲ್ಲ, ಮಳೆ ಬೇರೆ ಜೋರಾಗಿದೆ. ಗಾಳಿ ಯಾಕೋ ತಣ್ಣಗೆ ಹೊಡೀತಿದೆ. ಬಾಯಿ ಬೇರೆ ಸಪ್ಪೆ ಒಡೀತಿದೆ. ಮನೆಗೆ ಹೋಗಿ ಚರುಕ್ಲು ಇಸ್ಕಂಡು ಒಂದೈವತ್ತೋ ನೂರೋ ಏಡಿ ಹಿಡ್ಕೊಂಡು ಬಾ. ಇವತ್ತಿನ ಕೂಲಿ ತಗಳ್ಳೋವಂತೆ” ಅಂತ ಅಂದ್ರು. ಏಡಿ ಹಿಡಿಯೋದ್ರಲ್ಲಿ ಪ್ರವೀಣೆ ಆಗಿದ್ರಿಂದ ಕೆಲ್ಸ ಮಾಡೋದ್ಕಿಂತ ಖುಷಿಯಾಗಿ ಏಡಿ ಹಿಡಿಯೋಕೆ ಒಪ್ಗಂಡ್ಳು. ಕೆಳಗಣೆ, ಗೆಂಡಳ್ಳಿ, ಬಸ್ಕಲ್ಲು, ಮತ್ತಾವರ, ಐರವಳ್ಳಿ, ಬಿಗನಳ್ಳಿ, ಕಸ್ಕೆಬೈಲು, ಜನ್ನಾವರ ಸುತ್ತಮುತ್ತ ತೋಟದವರಿಗೆಲ್ಲಾ `ಏಡಿ ಅಮ್ಮಯ್ಯ’ ಅಂತನೇ ಇವಳು ಹೆಸರು ಮಾಡಿದ್ಲು. ಯಾರ್ಗಾದ್ರು ಜ್ವರ ಬಂದು ವಾರಕ್ಕಿಂತ ಹೆಚ್ಚು ದಿನ ಬಳಲಿದ್ರೆ ಏಡಿ ಹಿಡ್ಸೋಕೆ ಇವಳನ್ನ ಕರಕೊಂಡು ಹೋಗ್ತಿದ್ರು. ಏಡಿ ಹಿಡಿಯೋಕೆ ಮುಂಚೆ ಎರಡು ಪ್ಯಾಕೆಟ್ ಕುಡಿಸಿದ್ರೆ ಸಾಕು, ಸಾಕು ಸಾಕು ಅನ್ನೋವಷ್ಟು ಏಡಿ ಹಿಡ್ದು, ಅದ್ರ ಕೈಕಾಲ್ ಮುರ್ದು, ಒಳಗಿನ ಕಸ ತೆಗ್ದು, ಹಳ್ಳದಲ್ಲಿ ತೊಳ್ದು ಕೊಡ್ತಿದ್ಲು. ಆಮೇಲೆ ಅದಕ್ಕೆ ಮೆಣಸು, ಉಪ್ಪು ಖಾರ ಹಾಕಿ ಮಸಾಲೆ ಸೇರ್ಸಿ ತೆಳ್ಳಗೆ ಅದರ ರಸ ಮಾಡಿ, ಜ್ವರಬಂದವನಿಗೆ ಕುಡ್ಸಿ ಜ್ವರ ಓಡಿಸುತ್ತಿದ್ರು ಮಲೆನಾಡ ಜನ.

ಕೊಚ್ಚಗತೆಯಿಂದ ತಪ್ಪಿಸಿಕೊಂಡ ಅಮ್ಮಯ್ಯ ಏಡಿ ಹಿಡಿಯಲು ಮುಂದಾಗಿ ಶೆಟ್ರ ತೋಟದ ಮನೆ ದಾರಿ ಹಿಡಿದ್ಲು. ಚರುಕ್ಲು ಇಸ್ಕೊಳಕ್ಕೆ ಶೆಟ್ರ ತೋಟದ ಮನೆ ಸೇರಿದ ಅಮ್ಮಯ್ಯ ಶೆಟ್ರ ಹೆಂಡ್ತಿಯನ್ನು ಹಿತ್ಲ ಬಾಗ್ಲ ಹತ್ರ ಹೋಗಿ ಬಗ್ಗಿ ಬಗ್ಗಿ “ಅವ್ವಾರೆssss” ಅಂತ ಕೂಗಿದ್ಲು. ಅಡುಗೆ ಮನೇಲಿ ಇದ್ದ ಶೆಟ್ರ ಹೆಂಡ್ತಿ ಒಲೆ ಉರಿ ಹಾಕ್ಕೊಂಡು ಕರಿಮೀನನ್ನು ಹುರಿತಿದ್ಲು. ಅಮ್ಮಯ್ಯನ ದನಿ ಕೇಳಿಸಿಕೊಂಡು ಹೊರ ಬಂದು “ಹೋ… ಏನೋ ಅಮ್ಮಯ್ಯ, ಮನೆ ಕಡೆ…!! ಶೆಟ್ರು ತೋಟದಲ್ಲಿ ಕೆಲ್ಸ ಮಾಡಿಸ್ತಾ ಇದ್ದಾರೆ.” ಅದಕ್ಕೆ ಅಮ್ಮಯ್ಯ “ಹೂ ಅವ್ವಾರೆ. ನಾನು ಅಲ್ಲಿಂದನೇ ಬಂದೆ. ಏಡಿ ಹಿಡ್ಕೊಂಡು ಮನೇಗೆ ಕೊಡು ಅಂದವರೆ ಶೆಟ್ರು. ಅದ್ಕೆ ಚರುಕ್ಲಿಸಕೊಂಡು, ವಸಿ ಬಾಯ್ನ ಮೈನಾ ಬಿಸಿಮಾಡ್ಕೊಂಡು ಹೋಗನ ಅಂತ ಬಂದೆ.” “ಬಾಯ್ ಚಪಲ ಯಾರನ್ನ ತಾನೇ ಬಿಟ್ಟೀತು” ಅಂತ ಶೆಟ್ರ ಹೆಂಡ್ತಿ ಗೊಣಗಿಕೊಂಡು ಒಳಗೆ ಹೋದಳು. ಯಾವಾಗ್ಲು ಒಲೆ ಮೇಲೆ ಕುದೀತಿರೋ ಚರುಕ್ಲಿಂದ ಕಾಫಿ ಬಗ್ಗಿಸಿಕೊಂಡು ಮತ್ತೆ ಅಮ್ಮಯ್ಯನ ಹತ್ರ ಬಂದ್ಲು. ಅಮ್ಮಯ್ಯನಿಗೆ ಹಿತ್ಲ ಕಿಟಕಿ ಮೇಲೆ ಇರೋ ಸಜ್ಜದ ಮೇಲಿರೋ ಚಿಪ್ಪನ್ನ ತೊಳ್ಕೊಳಕೆ ಹೇಳಿದ್ಲು. ಕಾಫಿ ನೋಡಿದ ಅಮ್ಮಯ್ಯ “ಕಾಪಿssss! ಈ ಹೊತ್ನಾಗೆ…!! ಅದೂ ಈಗ!! ಏಡಿ ಕೆಲ್ಸ ಹಿಡ್ಕೊಂಡು ಕಾಪಿ ಕುಡಿಯಕೆ ಆಗ್ತದ ಅವ್ವಾರೆ” ಅಂದ್ಲು. “ಓ… ಅಮ್ಮಯ್ಯssss ಸರಿಆಯ್ತು…!! ಅವರಿಗೆ ಏಡಿ ಚಪಲ ನಿಂಗೆ ಶರಾಬಿನ ಚಪಲ, ನಾನೆಲ್ಲಿ ತರ್ಲೆ… ಪಾಕೀಟು” ಅಂತ ಶೆಟ್ರ ಹೆಂಡತಿ ಹೇಳಿದ್ದನ್ನ ಕೇಳಿ “ಶೆಟ್ರು ಐವತ್ತೋ ನೂರೋ ಏಡಿ ಹಿಡಕ್ಕೊಂಡು ಬರೋಕೆ ಹೇಳವರೆ, ಬೇಕಾದ್ರೆ ಇನ್ನೂ ಹತ್ತೊ ಇಪ್ಪತ್ತೋssss… ಹೆಚ್ಚಗೆ ನೋಡಣ ಅವ್ವಾರೆ…” ಅಂದ್ಲು.

ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು. ದಿನಾ ಪಾಕೀಟು ಕುಡೀತ್ತಿದ್ದ ಅಮ್ಮಯ್ಯಂಗೆ ಶೆಟ್ರ ಹೆಂಡ್ತಿ ಕೈಯಲ್ಲಿ ಬಾಟ್ಲಿ ನೋಡಿದ ತಕ್ಷಣ ಸ್ವರ್ಗವೇ ಸಿಕ್ಕಿದಂತಾಗಿ, ಶನಿವಾರ ಸಂತೆ, ಕಾಡುಕೋಳಿ, ಬಾಯಮ್ಮನ ಹೋಟ್ಳು, ಗಿಡ್ಡ, ಹೊಲಗೇರಿ ಎಲ್ಲ ಮರ್ತೆ ಹೋಯ್ತು. ಬಾಟ್ಲಿ ಪಡೆದ ನಂತರ ಅಡುಗೆಮನೆ ವಾಸನೆ ಹಿಡಿದು `ಅವ್ವಾರೆ ಕರಿಮೀನೋ… ಸೀಗಡೀನೋ… ಹುರ್ದ ವಾಸನೆ ಬರ್ತಿತ್ತು…!!! ಸ್ವಲ್ಪ ಉಪ್ಪು ಖಾರ, ನಾಕು ಹುರಿದ ಮೀನು ಕೊಟ್ರೆsss…’ ಅಂತ ಬಾಯ್ಬಿಟ್ಟು ಹಲ್ಲುಹಲ್ಲುಗಿರಿದು, ನುಲುದು ನುಲುದು ನಾಗರಾವಾದ್ಲು. ಸರಿಹೋಯ್ತು ಅಂತ ಶೆಟ್ರ ಹೆಂಡ್ತಿ ಹುರಿಮೀನನ್ನು ಜೊತೆಗೆ ಕರಿದ ಮೊಸಋರು ಮೆಣಸಿನಕಾಯಿನೂ ಕೊಟ್ಳು. ಬಾಟ್ಲಿ ಮತ್ತು ಮೀನು ಪಡೆದ ಅಮ್ಮಯ್ಯ ಹಿತ್ಲ ಮೂಲೇಲಿದ್ದ ಮಾವಿನ ಮರದ ಕೆಳಗೆ ಕುಕ್ಕುರ್ಗಾಲು ಹಾಕ್ಕಂಡು ಮುತ್ತುಗದ ಎಲೆ ಮೇಲೆ ಮೀನಿನ ಚೂರುಗಳನ್ನು ಇಟ್ಗಂಡು ಪ್ರಪಂಚನೇ ನಂದೂ ಅನ್ನೋ ತರ ಕುಡೀತ ತಿನ್ನೋಕೆ ಶುರು ಮಾಡಿದ್ಲು.

ಒಂಚೂರು ಕುಡಿದು ಮೀನು ತಿಂದು ಐದು ನಿಮಿಷ ಅದರ ಸುಖವನ್ನು ಅನುಭವಿಸುತಿದ್ಲು. ಕೊನೆಗೆ ಗಟಗಟಗಟ ಅಂತ ಕುಡ್ದು ಖಾಲಿ ಬಾಟ್ಲನ್ನು ನೋಡಿ ನೋಡಿ ಪಟಾರನೇ ಎಸ್ದು ಮುಗಿದು ಹೋಯ್ತಲ್ಲ ಅಂತ ನಿರಾಸೆ ವ್ಯಕ್ತಪಡಿಸಿದ್ಲು. ಒಟ್ಟಾರೆಯಾಗಿ ಬಾಟ್ಲಿ ಹೆಂಡನ ಕುಡಿದು ಅಮ್ಮಯ್ಯ ಭೂಮಿ ಮೇಲೆ ಇರ್ಲಿಲ್ಲ. ಕುಡ್ದು ತಿಂದಾದ್ಮೇಲೆ ಶನಿವಾರದ ಸಂತೆನ ನೆನಕಂಡು ವಿಧಿಯಿಲ್ದೆ ಅಮ್ಮಯ್ಯ ಏಡಿ ಹಿಡಿಯಕೆ ಹಳ್ಳದ ಕಡೆ, ಗದ್ದೆ ಬದದ ಕಡೆಹೊರಟ್ಳು. ಮೈ ಮನಸು ಹಗುರ ಮಾಡಿಕೊಂಡ ಅಮ್ಮಯ್ಯಂಗೆ ಈಗ ಮಳೇನಾಗ್ಲಿ, ಗಾಳಿಯಾಗ್ಲಿ ಏನು ಮಾಡುತ್ತಿರಲಿಲ್ಲ, ಅನ್ನೋ ಹಾಗೆ ಅಮ್ಮಯ್ಯ ಕಣ್ಣಲೆಲ್ಲಾ ಏಡಿಯದರಗಳನ್ನೆಲ್ಲಾ ಚಿತ್ರಿಸಿಕೊಂಡು ಹಳ್ಳದ ಕಡೆ ಹೊರಡೋಕೆ ಮುಂದಾದ್ಲು.

ಅಮ್ಮಯ್ಯ ಏಡಿ ಹಿಡಿಯೋಕೆ ಹೋಗೋ ವಿಚಾರ ಶೆಟ್ರು ಮಗನಿಗೆ ಗೊತ್ತಾಗಿ ಹಳ್ಳದ ಕಡೆ ನಾನು ಬರ್ತೀನಿ ಅಂತ ಅವಳ ಬೆನ್ನಿಗೆ ಬಿದ್ದ. ಶೆಟ್ರ ಹೆಂಡ್ತಿ ಎಷ್ಟು ಬೇಡ ಅಂದ್ರು, ಸಣ್ಣ ಹಳ್ಳಕ್ಕೆ ಕಡ್ಡಿಗಳ ಜಾಲರಿ ಕಟ್ಟಿ ಒಂದೇ ಎರಡೋ ಬಾಳೆ ಮೀನನ್ನೋ, ಎಳೇಮೀನನ್ನೋ ಹಿಡಿಯೋದು ಅಂದ್ರೆ ಬಹಳ ಖುಷಿ ಅವನಿಗೆ ಇದ್ದಿದ್ದಕ್ಕೆ ಅಮ್ಮನ ಮಾತನ್ನು ಧಿಕ್ಕರಿಸಿ ಅಮ್ಮಯ್ಯನ ಜೊತೆ ಹೊರಟೇ ಬಿಟ್ಟ. ಶೆಟ್ರ ಮಗ ಮೂರ್ತಿ ಅಂದ್ರೆ ಅಮ್ಮಯ್ಯಂಗೆ ತುಂಬಾ ಇಷ್ಟ. ಯಾವಾಗ್ಲು ಚಿಕ್ಕ ಸಾವಕಾರ್ರೆ, ಚಿಕ್ಕ ಸಾವಕಾರ್ರೆ ಅಂತ ಪ್ರೀತಿಯಿಂದ ಮೂರ್ತಿನಾ ಮಾತಾಡಿಸುತಿದ್ಲು. ಮೂರ್ತಿಗೂ ಅಮ್ಮಯ್ಯ ಅಂದ್ರೆ ಇಷ್ಟಾನೇ. ಅವನಿಗೆ ಯಾವಾಗ್ಲು ಬಿಡುವು ಸಿಕ್ಕಾಗ್ಲೆಲ್ಲಾ ಕಿತ್ತಲೀ, ನೇರಳೆ, ನಲ್ಲಿ, ಚೊಟ್ಟೆ, ಮತ್ತು ಈಚಲು ಯಾವುದೇ ಹಣ್ಣು ಕೇಳಿದ್ರು ಕಲ್ಲಿನಲ್ಲಿ ಬಡಿದೋ, ಹೊಡೆದೋ ಗಳದಲ್ಲಿ ಕೆಡವೋ ಕೊಡ್ತಿದ್ಲು. ಹಾಗಾಗಿ ಅಮ್ಮಯ್ಯ ಮತ್ತು ಮೂರ್ತಿ ಸಂಬಂಧ ಪರಸ್ಪರ ತುಂಬಾ ಪ್ರೀತಿಯಿಂದ, ಚೆನ್ನಾಗಿ ಇತ್ತು.

ಅಮ್ಮಯ್ಯ ಮತ್ತು ಮೂರ್ತಿ ಇಬ್ರೂ ಹಳ್ಳದ ಹತ್ರ ಬಂದ್ರು. ಅಮ್ಮಯ್ಯ ಒಂದ್ಸಲ ಹಳ್ಳನ ದಿಟ್ಟಿಸಿ ನೋಡುದ್ಲು. ಎಲ್ಲಿ ಹಳ್ಳ ಕಡಿಮೆ ಇದೆ ಅಂತ ಲೆಕ್ಕ ಹಾಕೋಕೆ ಶುರುಮಾಡುದ್ಲು. ಹಲ್ಲು ಗಿಂಜಿಕೊಂಡು ಏಡಿ ದರದ ಬಗ್ಗೆ ಮೂರ್ತಿ ಹತ್ರ ಮಾತಾಡಬೇಕಾದ್ರೆ, ಹಲ್ಲುಜ್ಜದೇ ಬಿಳೀ ಗೊಣ್ಣೆಯಂತ ಕಸ ಮತ್ತು ಬಾಟ್ಲಿ ಶರಾಬಿನ ವಾಸನೆ ಸೇರಿ ಹೊಸದೊಂದು ವಾಸನೆ ಸೃಷ್ಟಿ ಆಗಿ ಘಮ್ ಅಂತ ಗಬ್ಬು ದುರ್ನಾತ ಬರ್ತಿತ್ತು. ಅದಕ್ಕೆ ಮೂರ್ತಿ `ಏ ಅಮ್ಮಯ್ಯ ಹಲ್ಲುಜ್ಜಲ್ವೇನೆ?’ ಎಂದು ಕೇಳಿದಕ್ಕೆ ಕೇಳಿಸಿಕೊಂಡೂ ಕೇಳಿಸಿಕೊಳ್ಳದವಳಂತೆ ಏಡಿ ದರಾನ ಹುಡುಕುತ್ತಿರುವ ನಟನೆ ಮಾಡಿದ್ಲು ಅಮ್ಮಯ್ಯ. ಮೇಲಿಂದ ಕೆಳಕ್ಕೆ, ಹಿಂದ್ಲಿಂದ ಮುಂದಕ್ಕೆ ಒಂದು ಸಲ ಎಲ್ಲ ದರಗಳನ್ನು ದುರುಗುಟ್ಟಿಕೊಂಡು ನೋಡಿಕೊಂಡು ಬಂದ್ಲು. ಮಳೆ ಜಾಸ್ತಿ ಇದ್ದಿದ್ದರಿಂದ ಹಳ್ಳ ಸ್ವಲ್ಪ ಜೋರಾಗೆ ಇತ್ತು. ಗಾಳಿ ಬಂದಂಗೆಲ್ಲಾ ಹಳ್ಳ ಸ್ವಲ್ಪ ಜಾಸ್ತಿ, ಕಡಮೆ ಆಗ್ತಾ ಇತ್ತು. ದರಗಳನ್ನೆಲ್ಲಾ ಗಮನಿಸಿದ ನಂತರ ಅವಳ ತಲೆಯಲ್ಲಿ ಲೆಕ್ಕಾಚಾರ ಹಾಕಲು ಶುರು ಮಾಡಿದಳು. ಹಳ್ಳದ ಬದಿಯಲ್ಲಿ ಮತ್ತು ಗದ್ದೆ ಬದದಲ್ಲಿರೋ ದರಗಳಲ್ಲಿ ಒಂದು ಮೂರ್ನಾಲ್ಕು ಗಂಟೆ ಹುಡುಕಿದ್ರೆ ಒಂದೈವತ್ತೋ ನೂರೋ ಏಡಿ ಸಿಕ್ಕುತ್ತೆ ಎಂಬುದು ಅವಳ ಅಭಿಪ್ರಾಯ. ಮಳೆ ಜಾಸ್ತಿ ಇದ್ರೆ ಬದದ ಮೇಲೆ ಏಡಿಗಳು ಬರಲ್ಲ. ಎಲ್ಲ ದರದ ಒಳಗೆ ಹೋಗಿ ತೂರಿಕೊಂಡು ಬಿಡ್ತವೆ ಅಂತ ಗೊತ್ತಿತ್ತು, ಹಾಗಾಗಿ, ಮಳೆ ಒಳವಾಗದ ಕಾರಣ ದರಕ್ಕೆ ಕೈಹಾಕಿ ಏಡಿ ಹಿಡೀಬೇಕೆಂದು ಅಮ್ಮಯ್ಯ ತೀರ್ಮಾನಿಸಿದಳು. ಏಡಿ ಹಿಡಿಯಲು ತಯಾರಾದ ಅಮ್ಮಯ್ಯ ಸೀರೆಯನ್ನು ಎತ್ತಿ ಕಚ್ಚೆಕಟ್ಟಿ ಹರಕ್ಲು ಗೊಪ್ಪೆಯನ್ನು ತೆಗೆದಿಟ್ಟು, ರವಿಕೆಯನ್ನು ಭುಜದವರೆಗೂ ಮಡಿಸಿಕೊಂಡು ತಯಾರಾಗಿ ಹಳ್ಳಕ್ಕೆ ಇಳಿದಳು.

ಏಡಿಗಳಲ್ಲಿ ಹುಲ್ಲೇಡಿ, ಕಲ್ಲೇಡಿ ಅಂತ ಅಮ್ಮಯ್ಯನಿಗೆ ಗೊತ್ತಿತ್ತು. ಆಮೇಲೆ ಸಮುದ್ರದ ಏಡಿ ಸಿಕ್ಕುತ್ತೆ. ಆದ್ರೆ ಅದು ಅಮ್ಮಯ್ಯನಿಗೆ ಗೊತ್ತಿಲ್ಲ. ಹುಲ್ಲೇಡಿಗಿಂತ ಕಲ್ಲೇಡಿಗೆ ಮಲೆನಾಡಿನಲ್ಲಿ ಹೆಚ್ಚು ಬೇಡಿಕೆ. ಹುಲ್ಲೇಡಿಗಳು ಹೆಸರೇ ಹೇಳೋಹಾಗೆ ಹುಲ್ಲಿನ ತರ ಮೆತ್ತನೆಯ ಸ್ವಭಾವ. ರುಚಿಯಲ್ಲೂ ಕಡಿಮೆಯೇ. ಅದರ ಮೈಮಾಟವೂ ಮೃದು, ಬಣ್ಣದಲ್ಲಿ ತಿಳಿ. ಇನ್ನು ಕಲ್ಲೇಡಿಯನ್ನು ವರ್ಣಿಸ ಹೊರಟರೆ ಅದು ದಪ್ಪವಾದ ಚಿಪ್ಪಿನಂತಹ ಕವಚವನ್ನು ಹೊಂದಿರುತ್ತೆ. ದೊಡ್ಡ ದೊಡ್ಡ ಕೈಕಾಲ್ಗಳು. ಚೂಪು ಚೂಪಾದ ಗರಗಸದ ತರ ಇರೋ ಮಾರ್ಪಾಟು. ಕಡು ಕಂದು ಮತ್ತು ಕಪ್ಪು ಬಣ್ಣ. ಅದರ ಕಣ್ಣುಗಳು ಸ್ಪ್ರಿಂಗಿನತರ ಆಚೆ ಬಂದು ಮತ್ತೆ ಒಳಕ್ಕೆ ಹೋಗೋ ತರ ಇರುತ್ತೆ. ಐವತ್ತರಿಂದ ಹಿಡಿದು ಕಾಲು ಕೇಜಿಯವರೆಗೆ ಒಂದೊಂದು ಕಲ್ಲೇಡಿ ತೂಗುತ್ತೆ. ಗುಣದಲ್ಲಿ ದೂರ್ವಾಸಮುನಿ. ಎರೆಹುಳ, ಪಾಚಿ, ಶೈವಲಗಳು ನೀರಲ್ಲಿರೋ ಮಣ್ಣಿಲ್ಲಿರೋ ಪದಾರ್ಥಗಳು ಇದರ ಆಹಾರ. ಕಲ್ಲೇಡಿಯನ್ನು ಹಿಡಿಯುವುದೆಂದರೆ ಅದೊಂದು ರಾಕ್ಷಸ ಸಂಹಾರ ಮಾಡಿದಂತೆ ಕಷ್ಟದ ಕೆಲಸ. ಅದನ್ನ ಹಿಡಿಯುವಾಗ ಅದರ ಕಾಲ್ಗೆ, ಕೈಗೆ ಮನುಷ್ಯನ ಕೈಬೆರಳುಗಳು ಸಿಕ್ಕಿಕೊಂಡ್ರೆ ಮುಗೀತು, ಬೆರಳುಗಳೇ ಕತ್ತರಿಸಿ ಹೋಗುವಷ್ಟು ಗಟ್ಟಿಯಾಗಿ ಇಕ್ಕಳದಂತೆ ಹಿಡಿದುಕೊಳ್ಳುತ್ತೆ. ಎಷ್ಟೋ ಜನ ಏಡಿ ಹಿಡಿಯೋಕೆ ಅಂತ ಹೋಗಿ ಕೈ ಬೆರಳುಗಳನ್ನು ಕತ್ತರಿಸಿಕೊಂಡ ಉದಾಹರಣೆಗಳೂ ಉಂಟು.

ಇಷ್ಟೆಲ್ಲಾ ಪ್ರಲಾಪ ಇರೋ ಕಲ್ಲೇಡಿಯ ವಾಸ ಹಳ್ಳಗಳ, ಗದ್ದೆಗಳ ಬದಗಳಲ್ಲಿರೋ ದರಗಳಲ್ಲಿ. ರುಚಿಯಲ್ಲಿ ಮಾತ್ರ ಕಲ್ಲೇಡಿಯನ್ನು ಮೀರಿಸುವುದಕ್ಕೆ ಬೇರೆ ಯಾವ ಏಡಿಗಳಿಗೂ ಸಾಧ್ಯವಿಲ್ಲ. ಮಲೆನಾಡಿನ ಜನ ಏಡಿ ತಿನ್ನೋದು ನೋಡೋಕೆ ಚಂದ. ಒಬ್ಬೊಬ್ಬರು ಕಡೇ ಪಕ್ಷ ಹದಿನೈದರಿಂದ ಇಪ್ಪತ್ತು ಸೌಟು ತೋಡ್ಕೊಂಡು ತೋಡ್ಕೊಂಡು ತಿಂತಾರೆ. ಇದನ್ನು ತಿನ್ನೋದು ಹೇಗಂದ್ರೆ ಕಾಲುಗಳು ಸಿಕ್ರೆ ತುದೀನ ಕಟುಮ್ ಅಂತ ದವಡೆಗೆ ಹಾಕಿ ಕಡುದು ಬಿಸಾಡಿ ಅದ್ರಲ್ಲಿರೋ ರಸಾನ ಚೀಪಿ ಎಳಕೋಬೇಕು. ಆಮೇಲೆ ಅದರ ಚಿಕ್ಕ ಚಿಕ್ಕ ಕೈಗಳನ್ನು ತಿನ್ನೋವಾಗ್ಲು ಹಿಂಗೇ ಮಾಡಬೇಕು. ಅದರ ಹೊಟ್ಟೆ ಚಿಪ್ಪಲ್ಲಿ ಮಾತ್ರ ಒಂಚೂರು ಬಿಳಿಮಾಂಸ ಇರುತ್ತೆ. ಅದುಬಿಟ್ರೆ ಇನ್ನೆಲ್ಲೂ ಮಾಂಸದ ಸುಳಿವು ಇರಲ್ಲ. ಕೈಯಲ್ಲಿ, ಕಾಲಲ್ಲಿ ಚೂರು ಚೂರು ಮಾಂಸ ಇದ್ರೂ ಅದನ್ನ ತಿನ್ನೋದು ಕಷ್ಟವೇ, ಯಾಕಂದ್ರೆ ಅಗುದ್ರೆ ಮೊಟ್ಟೆ ಕವಚದ ತರ ಇರೋ ಏಡಿ ಹೊರಮೈ ಕಟುರು ಕಟುರು ಅಂತ ಮಾಂಸದ ಮಧ್ಯೆ ಸಿಕ್ಕಿಬಿಡುತ್ತೆ. ಎಷ್ಟು ತಿಂದ್ರೂ, ಅಗುದ್ರು, ನುರಿಯದೆ ನರಿನರಿ ಅನ್ನುತ್ತೆ. ಯಾರು ಅದಕ್ಕೆ ಅದನ್ನ ತಿನ್ನಲ್ಲ. ತನ್ನ ಸತ್ವ ಎಲ್ಲ ಬಿಟ್ಟಿರೋ ತಿಳೀ ರಸ ಮಸಾಲೆ ಸೇರ್ಸಿ ಮಾಡಿರ್ತಾರೆ ಅದನ್ನೇ ಜನ ಜಾಸ್ತಿ ಇಷ್ಟಪಡ್ತಾರೆ. ಒಬ್ಬೊಬ್ರು ಏಡಿ ಊಟ ತಿಂದಾದ ಮೇಲೆ ಎಂಜಲ ತಟ್ಟೆ ಪಕ್ಕ ಅರ್ಧ ಕೆ.ಜಿ.ಯಿಂದ ಮುಕ್ಕಾಲು ಕೆ.ಜಿ.ಯವರೆಗೆ ಏಡಿಗಳ ಮೂಳೆ ಗುಡ್ಡೆ ಬಿದ್ದಿರುತ್ತೆ. ಮಲೆನಾಡು ಸದಾ ಶೀತದಿಂದ ಇರೋದ್ರಿಂದ ಏಡಿಗಳಿಗೆ ಮಲೆನಾಡಿನಲ್ಲಿ, ಅರೆಮಲೆನಾಡಿನಲ್ಲಿ ಬೇಡಿಕೆ ಜಾಸ್ತಿನೇ. ಯಾಕಂದ್ರೆ ಏಡಿ ಉಷ್ಣದ ಪದಾರ್ಥ. ಮಳೆಗೆ ಚಳಿಗೆ, ಜ್ವರಕ್ಕೆ, ಮೈಕೈ ನೋವಿಗೆ ಎಲ್ಲದ್ದಕ್ಕೂ ಸಿದ್ಧೌಷಧ ಈ ಕಲ್ಲೇಡಿ. ಇಷ್ಟೆಲ್ಲಾ ಮಹಿಮೆ ಇರೋ ಕಲ್ಲೇಡಿಯನ್ನು ಹಿಡಿಯೋದ್ರಲ್ಲಿ ಅಮ್ಮಯ್ಯ ನಿಸ್ಸೀಮಳು.

ಏಡಿ ಹಿಡಿಯೋ ವಿದ್ಯೆಯನ್ನು ಕರಗತಮಾಡಿಕೊಳ್ಳಲು ಹೋದವರು ಎಲ್ರೂ ಒಂದಲ್ಲ ಒಂದು ರೀತಿಯಲ್ಲಿ ಕೈ ಊನ ಮಾಡಿಕೊಂಡವರೆ ಜಾಸ್ತಿ…! ಆದ್ರೆ ಅಮ್ಮಯ್ಯ ಏಡಿ ಹಿಡಿಯಲು ಆರಂಭಿಸಿದ ದಿನದಿಂದ ಒಂದು ದಿನವೂ ಅವಳು ಕೈಗೆ ಒಂದು ಸಣ್ಣಗಾಯವನ್ನು ಮಾಡಿಕೊಂಡಿರಲಿಲ್ಲ. ಈ ವಿದ್ಯೆ ಹೇಗೆ ಕಲಿತೆ? ಅಂತ ಯಾರಾದ್ರೂ ಕೇಳುದ್ರೆ ಶಿಲಾಯುಗದ ಇತಿಹಾಸದ ಕತೆಯನ್ನ ಹೇಳೋಕೆ ಶುರು ಮಾಡಿಬಿಡ್ತಿದ್ಲು ಅಮ್ಮಯ್ಯ. ಮೂರ್ತಿ ಏಡಿಯ ದರಗಳನ್ನು ದಡದಲ್ಲೇ ನಿಂತಕೊಂಡು ಕೈಸನ್ನೆ ಮಾಡಿ ತೋರಿಸುತ್ತಿದ್ದ. ಆಗ ಅವಳು ಮೆತ್ತಗೆ ಸದ್ದಾಗದ ತರ ಹೋಗಿ ದಪಾರನೆ ಅಂಗಾತಮಲಗಿ ಭುಜ ಕಾಣದಂತೆ ಪೂರ್ತಾ ಬಲಗೈಯನ್ನು ದರದ ಒಳಗೆ ತೂರಿಸಿಬಿಡ್ತಿದ್ಲು. ದರದ ಒಳಗೆ ಏಡಿ ಹೇಗೆ ಕುಳಿತಿರುತ್ತೆ ಅಥವಾ ಈ ದರದಲ್ಲಿ ಏಡಿ ಇದೆಯೋ ಇಲ್ವೋ, ಅನ್ನೋದನ್ನ ತಿಳ್ಕಂಡು ಕೈ ಪಳಗಿಸಿಕೊಂಡಿದ್ಲು. ನೀರು, ಮಣ್ಣು, ಕೊಚ್ಚೆ ರಚ್ಚೆ ಏನೂ ಲೆಕ್ಕಿಸದೆ ಕೆಸರಲ್ಲಿ ಬಿದ್ದು ಏಡಿ ಹಿಡೀತಿದ್ಲು. ದರದ ಒಳಗೆ ಕೈ ಹಾಕಿದ ತಕ್ಷಣ ಅವಳ ಮುಖಭಾವಗಳೇ ಬದಲಾಗುತ್ತಿದ್ವು. ಒಂದೊಂದು ಸಲ ಕಚಗುಳಿ ಇಟ್ಟಾಗ ಆಗುವ ರೀತಿ ಇದ್ರೆ, ಇನ್ನೊಂದು ಸಲ ತುಂಬಾ ತಲೆಕೆಡಿಸಿಕೊಂಡು ಗಣಿತದ ಲೆಖ್ಖ ಮಾಡೋವಾಗ ಆಗೋತರ, ಕೆಲವು ಸಲ ಖುಷಿ, ಇನ್ನೂ ಕೆಲವು ಸಲ ಸಿಟ್ಟು, ನಿರಾಸೆ ಅವಳ ಮುಖದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಏಡಿ ಸಿಕ್ಕಿದಾಗ ಸಂತೋಷದಿಂದ ಜಗತ್ತೇ ಗೆದ್ದೆ ಎಂಬ ಭಾವದಿಂದ ದರದಿಂದ ಕೈ ಹೊರಗೆ ತೆಗೆದು ತಕ್ಷಣ ಎರಡೂ ಕೈಗಳಿಂದ ಲಟಲಟ ಅಂತ ಅದರ ಕೈಕಾಲುಗಳನ್ನು ಕ್ಷಣದೊಳಗೆ ಮುರ್ದು ದಡದಲ್ಲಿ ಮೂರ್ತಿ ಹತ್ರ ಬಿಸಾಡುತಿದ್ಲು. ಆಮೇಲೆ ಮೂರ್ತಿ ಅದನೆಲ್ಲ ಚರುಕ್ಲಿಗೆ ತುಂಬಿಕೋತಿದ್ದ. ಏಡಿ ಏನಾದ್ರು ಸಿಕ್ಕದೆ ಹೋದ್ರೆ ಏಡಿ ವಂಶಕ್ಕೆ ಬೈಗುಳದ ಮಹಾಪೂರವನ್ನೇ ಹರಿಸಿಬಿಡ್ತಿದ್ಲು. ಹಿಂಗೆ ಏಡಿ ಹಿಡೀಬೇಕಾದ್ರೆ ಕೆಲವುಸಲ ಏಡಿ ಸಿಕ್ರೆ ಇನ್ನೂ ಕೆಲವು ಸಲ ಹಾವು ಮೀನು ಸಿಕ್ತಿದ್ವು.

ಅಂದು ಸಂಜೆಯಾದ್ರು ಅರವತ್ತರಿಂದ ಎಪ್ಪತ್ತು ಏಡಿಗಳು ಹಿಡಿಯುವಷ್ಟರಲ್ಲಿ ಸಾಕುಬೇಕಾಯ್ತು. ಮಳೆಯ ಕಾರಣ ಎಲ್ಲ ಏಡಿಗಳು ದರ ಹೊಕ್ಕಿದ್ದವು. ಮತ್ತೆ ಹಳ್ಳವೂ ಜಾಸ್ತಿ ತುಂಬಿತ್ತು. ಮಳೆ ಒಳವಾದರೆ ಏಡಿಗಳು ಮೇಲೆ ಬಂದಿರುತ್ತಿದ್ವು. ಆದ್ರೆ ಮಳೆ ಜಾಸ್ತಿ ಇದ್ದಿದ್ದರಿಂದ ಏಡಿ ಪ್ರಮಾಣ ಕೂಡ ಕಡಿಮೆ ಇತ್ತು. ಏಡಿ ಹಿಡೀತಾ ಹಿಡೀತಾ ಬಲಿತಿರದ ಎಳೆ ಏಡಿ ಸಿಕ್ಕಿದ್ರೆ ಅಲ್ಲೇ ಬಿಸಾಡಿಬಿಡ್ತಿದ್ಲು. ಎಲ್ಲ ಏಡಿ ಹಿಡಿದ ಕಾರ್ಯ ಮುಗಿದ ಮೇಲೆ ದಡಕ್ಕೆ ಬಂದು ಚಿಪ್ಪನ್ನು ತೆಗೆದು ಅದರೊಳಗಿರೋ ಹಸಿರು ಪಾಚಿಯಂತ ಕಸವನ್ನು ತೆಗ್ದು ಅಲ್ಲೇಹಳ್ಳದಲ್ಲಿ ತೊಳ್ದು ಮೂರ್ತಿ ಕೈಲಿದ್ದ ಚರುಕ್ಲಿಗೆ ಹಾಕ್ತಿದ್ಲು. ಇದನ್ನೆಲ್ಲಾ ಮೂರ್ತಿ ಅವಳ ಏಡಿ ಹಿಡಿಯೋ ಕಲೆಯನ್ನು ಪ್ರಯೋಗಾಲಯದಲ್ಲಿ ಪ್ರಾಣಿಗಳ ದೇಹ ಕತ್ತರಿಸುವಾಗ ವಿದ್ಯಾರ್ಥಿಗಳು ನೋಡುವಂತೆ, ಒಬ್ಬ ಸಂಶೋಧಕನ ರೀತಿಯಲ್ಲಿ ನೋಡ್ತಾ, ಹಲವು ಪ್ರಶ್ನೆಗಳ ಮಳೆಯನ್ನು ಅಮ್ಮಯ್ಯನ ಮೇಲೆ ಸುರಿಸುತ್ತಿದ್ದ. ಗೊತ್ತಾದ ಪ್ರಶ್ನೆಗೆ ಅಮ್ಮಯ್ಯ ಉತ್ತರಿಸಿ ಸುಮ್ಮನಾಗ್ತಿದ್ಲು.

ಏಡಿನೆಲ್ಲ ತೊಳ್ದು ಸ್ವಚ್ಛ ಮಾಡಿದ ಮೇಲೆ ಸಿಕ್ಕಿದ ಮೂರ್ನಾಲ್ಕು ಹಾವುಮೀನನ್ನು ಯಾಕೆ ಬಿಡೋದು ಅಂತ ಅಮ್ಮಯ್ಯ ಅದನ್ನು ಅಡುಗೆಗೆ ಉಪಯೋಗಿಸೋಕೆ ಆಗೋತರ ಅದರ ಮೇಲಿನ ಚರ್ಮ ತೆಗೆಯೋಕೆ ಶುರು ಮಾಡಿದ್ಲು. ಕೆಂಪು ಮೆಣಸಿನಕಾಯಿ, ಉಪ್ಪು, ಹುಣಸೇಹಣ್ಣು, ಬೆಳ್ಳುಳ್ಳಿ, ಸಂಬಾರ ಸೊಪ್ಪು ಹಾಕಿ ತರತರಕ್ಲಾಗಿ ಅರೆದು ಹಾವುಮೀನಿನ ತುಂಡಿಗೆ ಹಚ್ಚಿ ಹೆಂಚಿನ ಮೇಲೆ ಹುರದ್ರೆ ಅದರ ರುಚಿ ನಾಲ್ಕು ದಿನ ನಾಲ್ಗೆ ಮೇಲೆ ಇರೋವಂಥದ್ದು! ಆದ್ರೆ ಅದನ್ನ ಹಿಡಿಯೋದು, ಸ್ವಚ್ಛ ಮಾಡೋದು ತುಂಬಾ ಪ್ರಯಾಸದ ಕೆಲಸ. ಮೈಮಾಂಸಕ್ಕೆ ಹೊಂದಿಕೊಂಡಿರೋ ಮೇಲಿನ ಪೊರೆಯಂಥ ತೆಳ್ಳನೆ ಚರ್ಮವನ್ನು ಮೊದ್ಲು ತೆಗೀಬೇಕು. ಅದನ್ನು ತೆಗೆಯೋದು ಅಂದ್ರೆ ಸುಲಭವೇನಲ್ಲ. ಅದಕ್ಕೆ ಅಮ್ಮಯ್ಯ ಅಲ್ಲೆ ಬಾರೆ ಮೇಲಿದ್ದ ಒಂದು ಚೂಪಾದ ಕೊಂಬೆಗೆ ಅದರ ಬಾಯನ್ನು ಕೊಕ್ಕೆಗೆ ಸಿಕ್ಕಿಸೋ ತರ ಸಿಗಾಕುದ್ಲು. ಕಲ್ಲಲ್ಲಿ ಅದರ ತಲೆಮೇಲೆ ಒಡೆದು ಒಂಚೂರು ಕೈ ಬೆರಳಿಗೆ ಸಿಕ್ಕೋ ತರ ಚರ್ಮಾನ ಎಬ್ಬಿಸಿಕೊಂಡ್ಲು. ಎದ್ದ ಚರ್ಮವನ್ನು ಎರಡೂ ಕೈಯಲ್ಲಿ ಹಿಡ್ಕೊಂಡು ಎಲ್ಲ ಶಕ್ತಿ ಬಿಟ್ಟು ಉಸಿರು ತಗೊಂಡು ಸರಕ್ಕನೆ ಎಳದ್ಲು. ಹೀಗೆ ಎಳೆದ್ರೆ ಮೀನಿನ ಮೇಲಿನ ಇಡೀ ಚರ್ಮ ಬರುತ್ತೆ. ಅದನ್ನ ಹತಾರದಿಂದ ತೆಗೆಯೋಕೆ ಆಗಲ್ಲ. ಹಾಗಾಗಿ ಅಮ್ಮಯ್ಯ ಕೌಶಲ್ಯದಿಂದ ಮೇಲಿನ ಚರ್ಮ ತೆಗ್ದು, ಹೊಟ್ಟೆ ಹೊಡೆದು ಒಳಗಿದ್ದ ಕಸಪಸ ಎಲ್ಲ ತೆಗ್ದು, ನೀರಲ್ಲಿ ತೊಳ್ದು, ಶೆಟ್ರು ತೋಟದ ಮನೆ ಕಡೆ ಮೂರ್ತಿ ಕರಕೊಂಡು ಬೀಸುಗಾಲು ಹಾಕಿದ್ಲು.

ಮನೆ ಕಡೆ ಹೋಗೋವಾಗ ಮೂರ್ತಿ ಅಮ್ಮಯ್ಯನ್ನ ಮಾತಾಡಿಸ್ತ “ಯಾಕೆ ಅಮ್ಮಯ್ಯ ನೀನು ಕುಡೀತಿಯಾ…? ಕುಡಿಯೋದು ಗಂಡಸರಲ್ವೇನೆ…? ಕುಡುದ್ರೆ ಕಳ್ಳುಸುಟ್ಟೋಗಿ ಬೇಗ ಸತ್ತೋಗ್ತಾರಂತೆ…! ಮನೇಲಿ ಎಲ್ರಿಗೂ ಹೊಡೀತರಂತೆ, ಬೈಯತರಂತೆ… ನೀನು ಹಂಗೆ ಮಾಡ್ತಿಯೇನೆ…? ಪಾಪ… ಗಿಡ್ಡಂಗೆ… ನೀನೂ ರಾತ್ರಿ ಹೊತ್ತು ಹೊಡಿತಿಯೇನೆ? ಯಾಕೋ ಅಮ್ಮಯ್ಯ ನೀನು ಕುಡಿಯೋದು ಕಲ್ತೆ…?”

ಮೂರ್ತಿಯ ಮಾತುಗಳನ್ನು ಕೇಳೋ ಹೊತ್ತಿಗೆ ಬೆಳಗಿಂದ ಏಡಿ ಹಿಡಿದು ಎಲ್ಲ ನಶೆ ಇಳಿದು ಮೈ ಮೇಲೆ ಬಂದಿದ್ದ ದೆವ್ವ, ಭೂತ ಯಾವ್ದು ಅವಳ ಜೊತೆ ಇರಲಿಲ್ಲ. ಶೆಟ್ರು ಮಗನ ಮಾತುಗಳನ್ನು ಕೇಳಿದ ಅಮ್ಮಯ್ಯನಿಗೆ ಮಲೆನಾಡಿಗೆ ರಾತ್ರಿ ಕವಿದ ಕತ್ತಲಂತೆ ಅವಳ ಮನಸ್ಸಿಗೂ ಕತ್ತಲೆ ಕವಿದು, ಮೂರ್ತಿಯ ಮಾತುಗಳು ಗುಟುರು ಗುಟುರು ಎಂದು ರಾತ್ರಿ ಹೊತ್ತು ಒಂದೇ ಸಮನೆ ಶಬ್ದ ಮಾಡೋ ಹುಳದ ಶಬ್ದದಂತೆ, ಸದಾ ಕತ್ತಲಲ್ಲಿ ಮಿಂಚುತಾ ಇರೋ ಮಿಂಚುಳದ ಬೆಳಕಿನ ತರ, ಹೊಳೆದು ಪಳಕ ಪಳಕ ಅಂತ ಮನಸಲ್ಲಿ ಬೆಳಕು ಮೂಡಿಸುತಿತ್ತು.
ಅಮ್ಮಯ್ಯ ಸುಮ್ಮನಿದ್ದುದನ್ನು, ಅವಳ ಬಾಡಿದ ಮುಖ ನೋಡಿ ಮತ್ತೆ, ಮೂರ್ತಿ ಕೇಳಿದ
“ನೊಂದಕಂಡೇನೆ ಅಮ್ಮಯ್ಯ…?”

“ಇಲ್ಲ ಚಿಕ್ಕ ಸಾವಕಾರ್ರೆ… ಯಾರೂ ಇವತ್ತಿನ ತನಕ ಯಾಕೆ ಕುಡಿತಿಯಾ ಅಂತ ಕೇಳಿರಲಿಲ್ಲ. ಏಡಿ ಹಿಡ್ಕೊಡು ಪಾಕೀಟ್ ಶರಾಬು ಕೊಡುಸ್ತೀನಿ ಅಂತಿದ್ದರು… ಗಿಡ್ಡ ಎಳೇಮಗ ಇದ್ದಾಗ ಬಾಣಂತನದಲ್ಲಿ ಔಷಧಿಗೆ ಅಂತ ಕುಡೀತಿದ್ದೆ, ಆಮೇಲೆ ಅವನಪ್ಪನ ಗ್ಯಾನ ಜಾಸ್ತಿ ಆಗಿ ಕುಡೀತಿದ್ದೆ ಅಷ್ಟೆ. ಈಗ ದಿನಾ ಕುಡೀಬೇಕು ಅನ್ಸುತ್ತೆ. ಕೂಲಿ ದುಡ್ಡು ಅಂತಾನೂ ನೋಡ್ದೆ ಎಲ್ಲ ಕುಡ್ದುಬಿಡ್ತೀನಿ ಚಿಕ್ಕ ಸಾವ್ಕಾರ್ರೆ” ಅಂದ್ಲು ಅಮ್ಮಯ್ಯ.

ಅದ್ಕೆ ಮೂರ್ತಿ “ಏಡಿ ಹಿಡ್ಕೊಡೆ ಅಮ್ಮಯ್ಯ… ಆದ್ರೆ ಪಾಕೀಟಿನಾಸೆಗೆ ಏಡಿ ಹಿಡ್ಕೊಡಬೇಡ್ವೆ… ದುಡ್ಡಿಗೆ ಹಿಡ್ಕೊಡು… ಪ್ರೀತಿಗೆ ಹಿಡ್ಕೊಡು. ಅದ್ರಲ್ಲಿ ಗಿಡ್ಡಂಗೆ ನೀನು ಪುಸ್ತಕ, ಪೆನ್ನು, ಬ್ಯಾಗು, ಪೆಪ್ಪರುಮೆಂಟು ಎಲ್ಲ ಕೊಡಿಸಬಹುದು. ಮೊನ್ನೆ ಗಿಡ್ಡ ನಮ್ಮಪ್ಪ ಇಲ್ದಿದ್ದಾಗ ನಮ್ಮನೆ ಹತ್ರ ಬಂದು ಸೀಸದಕಡ್ಡಿ ಇಸ್ಕಂಡು ಹೋಗಿದ್ದ. ನೀನು ದಿನಾ ಕುಡ್ದು ಬೇಗ ಮಲ್ಕಂಬಿಡ್ತಿಯಾ ಅಂತಾನೂ ಹೇಳಿದ್ದ. ನೀನು ಅವನನ್ನ ಬೈಯಲ್ವಂತೆ, ಹೊಡೆಯಲ್ವಂತೆ ಸುಮ್ಕೆ ಮಲ್ಕಂಬಿಡ್ತಿಯಂತೆ…! ನೀನು ಒಳ್ಳೆವಳೇ ಕಣೆ ಅಮ್ಮಯ್ಯ. ಶರಾಬು ಕುಡಿಯೋದ ಬಿಟ್ಟುಬಿಟ್ರೆ ನೀನು ತುಂಬಾ ಒಳ್ಳೆವಳೆ ಕಣೆ. ಪಾಪ. ಗಿಡ್ಡನ ಪೆನ್ನು, ಪುಸ್ತಕ, ಬಣ್ಣದ ಪೆನ್ಸಿಲ್ಲಿಗಾದ್ರು ಕುಡಿಯೋದು ಬಿಟ್‌ಬಿಡೆ” ಅಂದ ಮೂರ್ತಿ.

ಶೆಟ್ರು ದಿನಾ ರಾತ್ರಿ ಕುಡಿದು ಮೂರ್ತಿ ಅಮ್ಮನ್ನ ಹೊಡೆಯೋದು, ಬೈಯೋದು ಎಲ್ಲ ನೆನಕೊಂಡು, ಮಲೆನಾಡ ನೀರವ ರಾತ್ರಿಯಲ್ಲಿ ಶೆಟ್ರು ತೋಟದ ಮನೆ ಅಟ್ಟದ ಮೇಲೆ ಎದ್ದೇಳುತ್ತಿದ್ದ ಜ್ವಾಲಾಮುಖಿಗಳನ್ನು ಮತ್ತೆ ಮತ್ತೆ ನೆನಸಿಕೊಂಡು ಇಡೀ ರಾತ್ರಿ ಮಲಗಿದವನ ತರ ನಟಿಸಿ, ನಿದ್ದೆ ಮಾಡೋದನ್ನ ಜ್ಞಾಪಿಸಿಕೊಂಡು ಮೂರ್ತಿ ಕಣ್ಣಲ್ಲಿ ನೀರು ಹನಿಯಾಡ್ತಿತ್ತು.

ಮೂರ್ತಿ ಮುಖ ನೋಡಿದ ಅಮ್ಮಯ್ಯ ಕಣ್ಣಲ್ಲಿ ಅಳದೇ ಎದೆಯೊಳಗೆ ಅಳ್ತಾ ಅಳ್ತಾ ಭಾವೋತ್ಕರ್ಷವಾಗಿ ಜೋರಾಗಿ ತೋಟದ ಮನೆ ಕಡೆ ದಪದಪಾ ಕಾಲು ಹಾಕಿದ್ಲು. ಗಿಡ್ಡನ್ನ ನೆನಕಂಡು ಮೂರ್ತಿ ಕೈ ಹಿಡ್ಕೊಂಡು ದಾರಿ ಸಾಗಿಸಿದ್ಲು. ತೋಟದ ಮನೆ ತಲುಪಿ ಹಿಡ್ದ ಏಡಿಕಾಯಿನೆಲ್ಲ ಕೊಟ್ಟು, ಮೂರ್ತಿನ ಮನೆಗೆ ಬಿಟ್ಟು ಶೆಟ್ರ ಹತ್ರ ಅವತ್ತಿನ ಬಟವಾಡೆ ಎಪ್ಪತ್ತು ರೂಪಾಯಿ ಇಸಗಂಡು, ಹೊಲಗೇರಿ ಕಡೆ ಗಿಡ್ಡನ್ನೇ ಕಣ್ತುಂಬಿಕೊಂಡು ಹೊರಟ್ಳು. ಗಿಡ್ಡನ್ನ ಬೆಳಗ್ಗಿಂದ ನೋಡದೇ ಅವನನ್ನ ನೋಡೋ ತವಕ ಜಾಸ್ತಿ ಆಗಿ ದರಬರ ಒಂದೇ ಸಮನೇ ಏದುಸಿರು ಬಿಡ್ತಾ ಹೆಜ್ಜೆ ಹಾಕಿದ್ಲು. ಮೂರ್ತಿ ಮಾತುಗಳನ್ನು ಮನಸಲ್ಲೇ ನೆನಪಿಸಿಕೊಂಡು ಭಾವುಕಳಾಗಿದ್ಲು ಅಮ್ಮಯ್ಯ. ಅವಳ ಭಾವನೆಗಳು ಅವಳ ನಡಿಗೆಗೆ ಹೊಂದಕೆ ಆಗೋ ತರ ಏರಿಳಿತ ಆಗ್ತಿತ್ತು. ಉಸಿರಾಟಕ್ಕೆ ತಕ್ಕಂತೆ ಎದೆ ಒಳಗೆ ದುಃಖ, ಸಂಕಟ ತಾಳ ಹಾಕಿತ್ತು. ಜೋರಾಗಿ ನಡೀತಿದ್ಲು. ಇದ್ದಕ್ಕಿದ್ದ ಹಾಗೆ ನಿಧಾನಕ್ಕೆ ನಡೀತಿದ್ಲು, ಮತ್ತೆ ದೈಯ್ಯ ಮೆಟ್ಟಗಂಡವಳ ತರ ಓಡೋಗ್ತಿದ್ಲು. ಮಾಸು ಹಸಿರಿನ ಚೌಕಲಿಒಡ್ಲು, ಕೆಂಪರಗಿನ ಸೀರೆ ಬೆಳಗ್ಗಿಂದ ನೆಂದು ನೆಂದೂ ತೊಪ್ಪೆಯಾಗಿತ್ತು. ಸಂಜೆ ಮಳೆ ಬೇರೆ ಜೋರಾಗಿತ್ತು. ಸೀರೆ ಮೈಗಂಟಿಕೊಂಡು ಜೋರಾಗಿ ನಡೆಯಕೆ ಅವಳಿಗೆ ತೊಂದ್ರೆ ಕೊಡ್ತಿತ್ತು. ಗಾಳಿ ಬಂದು ನಿಂತ ಮೇಲೆ ಮಳೆ ಜೋರಾಗಿಹೋಯ್ತು. ಬೆಳಕು ಕಡಿಮೆ ಆಗ್ತಾ ಬಂತು. ಮಬ್ಬು, ಮಳೆ ಹೊಲಗೇರಿ ಸುತ್ತ ಕವಿದಿತ್ತು. ಕೇರಿ ಕಡೆ ಅಮ್ಮಯ್ಯ ಬರೋಹೊತ್ಗೆ ಸಂಜೆ ಏಳಾಗಿತ್ತು. ಏಡಿನ ಇನ್ಮೇಲೆ ಮೂರ್ತಿ ಪ್ರೀತಿಗೆ, ಸಾವಕಾರ್ರ ಮೇಲಿನ ಅಭಿಮಾನಕ್ಕೆ, ಗಿಡ್ಡನ ಓದಿಗೆ ಸಹಾಯ ಆಗೋ ದುಡ್ಡಿಗೆ ಹಿಡ್ಕೊಡಬೇಕು ಅಂತ ಮನದಲ್ಲೇ ಅಂದುಕಂಡು, ಏನೋ ಬದಲಾವಣೆ ತನ್ನಲ್ಲಿ ಆಗಿ ಅದರಿಂದ ಖುಷಿ ದುಃಖ ಎರಡೂ ಆದವಳಂತೆ, ಗಿಡ್ಡನ್ನ ನೋಡಿದ ತಕ್ಷಣ ಅಪ್ಪಿ ಮುದ್ದಾಡಬೇಕು ಅಂತ ಮನೆ ಅಂಗಳಕ್ಕೆ ಬಂದ್ಲು.

ರಾತ್ರೀನೆ ಅಲ್ಲಾಡುತ್ತಿದ್ದ ಅವಳ ಗುಡಿಸ್ಲ ದೊಡ್ಡ ದೊಡ್ಡ ತೀರುಗಳು, ತೊಲೆಗಳು ಓದ್ಕಳೋಕೆ ಕೂತಿದ್ದ ಗಿಡ್ಡನ ಮೇಲೆ ಬಿದ್ದು, ಕೂತಿದ್ದಂಗೆ ಗಿಡ್ಡ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಗಿಡ್ಡನ ಕೈಯಲ್ಲಿದ್ದ ಬಣ್ಣದ ಸೀಸದ ಕಡ್ಡಿ ಮುಷ್ಟಿ ಒಳಗೆ ಬಂಧಿಯಾಗಿತ್ತು. ಪುಸ್ತಕ, ಅದರಲ್ಲಿ ಬರೆದಿದ್ದ ಅಕ್ಷರ, ಚಿತ್ರ ಎಲ್ಲ ಮಳೇಲಿ ನೆಂದು ಗಿಡ್ಡನ ರಕ್ತದ ಬಣ್ಣಾನೂ ಸೇರ್ಕಂಡು ರಕ್ತಸಿಕ್ತವಾಗಿತ್ತು. ಗಿಡ್ಡ ಬಿಟ್ಟ ಕಣ್ಣು ಬಿಟ್ಟುಕಂಡು ತೀರಿನ ಕೆಳಗೆ ಸಿಕ್ಕಹಾಕ್ಕೊಂಡಿದ್ದ. ಗುಡಿಸ್ಲೆಲ್ಲಾ ರಕ್ತ, ನೀರು ಕದಲಿದ ಕದಲಾರತಿಯ ಕೆಂಪು ರಚ್ಚಾಗಿ ಹೋಗಿತ್ತು. ಶಾಲೆ ಬ್ಯಾಗಿನಲ್ಲಿದ್ದ ಪುಸ್ತಕ, ಪೆನ್ನುಗಳು ನೀರಲ್ಲಿ ತೇಲ್ತಿದ್ವು. ಮಳೆ ಹುಯ್ಯೋ ಅಂತಾನೆ ಹುಯ್ತಾಇತ್ತು. ಜೋರಾಗಿ ಮಳೆ ಬರ್ತಿದ್ದರಿಂದ ಹೊಲ್ಗೇರಿ ಜನ ಹೊರಗೆ ತಲೆಹಾಕಿ ಕೂಡಾ ನೋಡಿರಲಿಲ್ಲ. ಮಳೆ ಗಾಳಿ ಸದ್ದಿಗೆ ಹೊರಗಿನ ಪ್ರಪಂಚದಲ್ಲಿ ಏನಾಗ್ತಿದೆ ಅನ್ನೋ ಯಾವ ಪರಿವೆ ಅವರಿಗಿರಲಿಲ್ಲ. ಎಲ್ರೂ ಅವರವರ ಮನೇಲಿ ಬೆಚ್ಚಗೆ ಬೆಂಕಿ ಮುಂದೆ ಕೂತು ಬಿಸಿ ಕಾಯಿಸಿಕೊಳ್ತಿದ್ರು.

ಅಟ್ಟಿ ದಾಟಿ, ಬಿದ್ದ ಗುಡಿಸಲ ನೋಡಿ ತುಸು ಖಿನ್ನಳಾಗಿ ಒಳಗೆ ಹೋದ್ಲು ಅಮ್ಮಯ್ಯ. ರಕ್ತದ ಓಕುಳಿಯಲ್ಲಿ ಬಿದ್ದ ಗಿಡ್ಡನ್ನ ನೋಡಿ ಗುಡ್ಡದಂತೆ ನಿಂತುಬಿಟ್ಳು. ಕಟ್ಟಿದ ಕನಸೆಲ್ಲಾ ಆಗ್ಲೇ ಕರಗೋದ್ವು ಅಂತ ಕಿರುಚುದ್ಲು, ಅರುಚುದ್ಲು. ಇದೆಲ್ಲಾ ಹೊಲ್ಗೇರಿ ಜನಕ್ಕೆ ಕೇಳದೆ ಯಾರೂ ಜಪ್ಪಯ್ಯ ಅನ್ನಲಿಲ್ಲ. ಅರ್ಚಿ, ಕಿರ್ಚಿ ಎಲ್ಲ ಆದ್ಮೇಲೆ ಗಿಡ್ಡನ ಕಳೇಬರದ ಮುಂದೆ, ರಕ್ತ; ನೀರು ಪುಸ್ತಕದ ಕಾಗದದ ಮೇಲೆ ಗರಬಡ್ದವಳಂಗೆ ಕುಕ್ಕರ್ಗಾಲಲ್ಲಿ ಕುಂತುಬಿಟ್ಳು. ರಾತ್ರಿ ಇಡೀ ಮಳೆ ಗಿಡ್ಡನ ಮೇಲೆ, ಅಮ್ಮಯ್ಯನ ಮೇಲೆ ತಟಪಟ ತಟಪಟ ಹುಯ್ತಾನೇ ಇತ್ತು. ಮಾರನೇ ದಿನ ಬೆಳಗ್ಗೆ ಮಳೆ ಸ್ವಲ್ಪ ಒಳವಾಗಿತ್ತು. ಒಬ್ಳೆ ಗಿಡ್ಡನ ಮೆಲೆ ಬಿದ್ದಿದ್ದ ಗಳ, ತೀರನ್ನು ಎತ್ತಿ ಪಕ್ಕಕ್ಕೆ ಬಿಸಾಡಿ, ನಜ್ಜುಗುಜ್ಜಾಗಿದ್ದ ಗಿಡ್ಡನ ಕಳೇಬರ, ಒಂದು ಸಬ್ಬಲ್ಲು, ಬ್ಯಾಗು, ನೆಂದಿದ್ದ ಪುಸ್ತಕ, ಪೆನ್ನು, ಸೀಸದ ಕಡ್ಡಿ ಎಲ್ಲ ಎತ್ತಿಕೊಂಡು ಭಾವಾವೇಶಕ್ಕೆ ಒಳಗಾದವಳತರ ಕಾಡಿನ ಕಡೆ ನಡುದ್ಲು. ಕಣ್ಣಲ್ಲಿದ್ದ ನೀರು ಖಾಲಿ ಆಗಿದ್ವು ಅವಳಿಗೆ.

ಕಾಡಿಗೆ ಬಂದು ಒಬ್ಳೆ ಗುಂಡಿ ತೆಗೆದು ಕೈಯಲ್ಲೆ ಮಣ್ಣನೆಲ್ಲಾ ಗೆಬರಿ, ಬಾಚಿ ತೋಡಿ ಆಚೆ ಹಾಕಿದ್ಲು. ಗುಂಡಿಗೆ ಗಿಡ್ಡನ ಕಳೇಬರ, ಅವನ ಶಾಲೆಬ್ಯಾಗು, ಪುಸ್ತಕ, ಪೆನ್ನು, ಸೀಸದ ಕಡ್ಡಿ ಎಲ್ಲವನ್ನು ಒಂದು ಹನಿ ಕಣ್ಣೀರೂ ಹಾಕದೆ ನಿರ್ಭಾವುಕಳಾಗಿ ಮಣ್ಣಿಗಿತ್ತು, ಒಂದ್ಸಲ ದಿಟ್ಟಿಸಿ ನೋಡಿ, ನಕ್ಕು ಸುಮ್ಮನಾಗಿ ಮಣ್ಣು ಮುಚ್ಚಿದ್ಲು. ಗುಂಡಿ ತೋಡಿ ಗಿಡ್ಡನ ಮಣ್ಣು ಮಾಡೋ ಹೊತ್ಗೆ ಸುಮ್ಮನಿದ್ದ ಮಳೆ ಮತ್ತೆ ಸುರಿಯಕೆ ಶುರುಮಾಡ್ತು. ಅಮ್ಮಯ್ಯ ಹಿಂದಿನ ದಿನ ಏಡಿ ಹಿಡಿದ ಕೂಲಿ ದುಡ್ಡನ್ನ ಸೆರಗಿನಗಂಟಿಂದ ತೆಗೆದಿರಲಿಲ್ಲ. ಮಳೆಗೆ ನೆಂದು, ಅಮ್ಮಯ್ಯನ ಮೈ ಬಿಸಿಗೆ ಅರ್ಧಂಬರ್ಧ ಒಣಗಿತ್ತು ಬಟವಾಡೆ ದುಡ್ಡು. ತಡಕಾಡಿ ಗಂಟನ್ನು ಹುಡುಕಿ ಸೀರೆ ಸೆರಗ ತುದೀಲಿದ್ದ ಗಂಟನ್ನು ಮುಷ್ಠಿ ಗಟ್ಟಿ ಹಿಡ್ಕೊಂಡು, ಬಸ್ಕಲ್ಲಿನ ಕಡೆ ಹೆಜ್ಜೆ ಹಾಕಿದ್ಲು. ಬಸ್ಕಲ್ಲಿನ ಸೇಂದಿ ಸೀನನ ಅಂಗಡಿ ಬಿಟ್ಟು, ಜಗತ್ತೇ ಕಾಣದಂತೆ ಅಮ್ಮಯ್ಯನ ಮನಸ್ಸಿಗೆ, ಮೆದುಳಿಗೆ ಶೂನ್ಯ ಆವರಿಸಿತ್ತು. ಮಧ್ಯಾಹ್ನದ ಹೊತ್ಗೆ ಶುರುವಾಗಿದ್ದ ಮಳೇಲಿ ಗೊಪ್ಪೆ ಇಲ್ದೆ ಏದುಸಿರು ಬಿಡ್ತಾ ಬರಬರಬರ ಹೆಜ್ಜೆ ಹಾಕಿದ್ಲು. ನೆಂದು ನೆಂದು ಮೈಬಿಸಿಗೆ ಸ್ವಲ್ಪ ಸ್ವಲ್ಪ ಒಣಗಿ ಮುಗ್ಗವಾಸನೆ ಹೊಡೀತಿದ್ದ ಅಮ್ಮಯ್ಯನ ಸೀರೆ ಮತ್ತೆ ನೆಂದು ನೆಂದೂ ತೊಪ್ಪೆಯಾಯ್ತು…

ಬೇಲೂರು ರಘುನಂದನ್

‘ಏಡಿ ಅಮ್ಮಯ್ಯ’ ನಾನು ಬರೆದ ಮೊದಲ ಕಥೆ. ಈ ಕಥೆ ಬರೆದು ಸುಮಾರು ಹದಿನೈದು ವರ್ಷಗಳು ಆಗಿರಬಹುದು, ಕಲ್ಲೇಡಿ ಹಿಡಿಯುವ ಅಮ್ಮಯ್ಯನ ಕುಶಲತೆ ಮತ್ತು ಅವಳನ್ನು ಪ್ರೀತಿಸುವ ಹುಡುಗನೊಬ್ಬನ ಕಥೆಯಿದು. ಅಮ್ಮಯ್ಯನ ಬದುಕು ಮತ್ತು ಜೀವನ ಪ್ರೇಮ ಈ ಕಥೆಯ ಮುಖ್ಯ ವಸ್ತು. ಸ್ವತಃ ಅಮ್ಮಯ್ಯನೊಡನೆ ಏಡಿ ಹಿಡಿಯಲು ಹೋದ ಅನುಭವಗಳು ನನ್ನ ಭಾವಕೋಶದಲ್ಲಿ ಸೇರಿ ಹೋಗಿದೆ. ಅವಳು ತೋರುತ್ತಿದ್ದ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧ ಕಥೆ ಕಟ್ಟುವಂತೆ ಮಾಡಿದೆ. ಇದೆನ್ನೆಲ್ಲಾ; ಇದೆಲ್ಲಕ್ಕೂ ಮಿಗಿಲಾಗಿ ಮನುಷ್ಯ ತೋರಬಹುದಾದ ನಿಷ್ಕಲ್ಮಶ ಪ್ರೀತಿ ಕಥೆಯ ಮೂಲಕ ಅಭಿವ್ಯಕ್ತಿಗೊಂಡಿದೆ. ನನ್ನ ಬದುಕಿನಲ್ಲಿ ಜೀವ ಪ್ರೇಮವನ್ನು ಕೊಟ್ಟ ಬಹುದೊಡ್ಡ ಪಾತ್ರ ಅಮ್ಮಯ್ಯ. ಈ ಕಾರಣಕ್ಕೆ ಈ ಕಥೆಯ ಮೇಲೆ ಬಹು ಪ್ರೀತಿ ಮತ್ತು ವ್ಯಾಮೋಹ. ನಾನು ಬರೆದ ಮೊದಲ ಕಥೆ ಕೂಡ ಏಡಿ ಅಮ್ಮಯ್ಯ ಅದಕ್ಕಾಗಿ ಈ ಕೃತಿ ಅಚ್ಚುಮೆಚ್ಚು. ಎಲ್ಲೂ ಈ ಕಥೆ ಪ್ರಕಟಣೆ ಆಗಿಲ್ಲ. ಇದಲ್ಲದೇ ಇದುವರೆಗೂ ಒಟ್ಟು ಮೂರು ಕಥೆಗಳನ್ನು ಮಾತ್ರ ಬರೆದಿರುವೆ. ಸುಮಾರು ಮೂವತ್ತು ಮಕ್ಕಳ ಕಥೆಗಳನ್ನು ಬರೆದಿದ್ದೇನೆ. ಈ ಕಥೆಯನ್ನು ಹೊರತು ಪಡಿಸಿದರೆ ಅಪ್ಪ ಕಾಣೆಯಾಗಿದ್ದಾನೆ ಎನ್ನುವ ಕಥೆ ಬರೆದಿದ್ದೆ, ಅದು ಮಯೂರದಲ್ಲಿ ಪ್ರಕಟವಾಗಿತ್ತು.